ಆಲ್ಫ್ರೆಡ್ ಲಾರ್ಡ್ ಟೆನ್ನಿಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಲ್‍ಫ್ರೆಡ್ ಟೆನಿಸನ್, (1809-1892) ಇಂಗ್ಲಿಷ್ ಕವಿ, ಕೆಲವು ನಾಟಕಗಳನ್ನೂ ಬರೆದಿದ್ದಾನೆ.

ಬದುಕು[ಬದಲಾಯಿಸಿ]

ಇಂಗ್ಲೆಂಡಿನ ಚರ್ಚ್‍ನಲ್ಲಿ ಕೆಲಸದಲ್ಲಿದ್ದ ಜಾರ್ಜ್ ಟೆನಿಸನ್ನನ ಹನ್ನೆರಡು ಮಂದಿ ಮಕ್ಕಳಲ್ಲಿ ಈತ ನಾಲ್ಕನೆಯವ. ಅಣ್ಣಂದಿರೂ ಗಣನೀಯವಾದ ಕಾವ್ಯಗಳನ್ನು ಬರೆದವರೇ. ಮೊದಲು ಲೌತ್‍ಗ್ರಾಮರ್ ಶಾಲೆಯಲ್ಲಿ, ಅನಂತರ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದ. 1829ರಲ್ಲಿ ಸ್ಪೇನಿನ ಅರಸ ಆರನೆಯ ಫರ್ಡಿನೆಂಡನ ವಿರುದ್ಧ ನಡೆದ ದಂಗೆಗೆ ಬೆಂಬಲ ಕೊಡಲು ಸ್ಪೇನಿಗೆ ಹೋಗಿದ್ದ ತಂದೆ ತೀರಿಕೊಂಡುದರಿಂದ (1831) ಡಿಗ್ರಿ ಪಡೆಯದೆ ವಿಶ್ವವಿದ್ಯಾಲಯವನ್ನು ಬಿಟ್ಟ.

ವಿಶ್ವವಿದ್ಯಾಲಯದಲ್ಲಿ ಈತನಿಗಿದ್ದ ಸ್ನೇಹಿತರಲ್ಲಿ ತುಂಬ ಆತ್ಮೀಯನಾದವ ಆರ್ಥರ್ ಹೆನ್ರಿ ಹ್ಯಾಲಂ. ಆತ ಟೆನಿಸನ್ನನ ತಂಗಿಯನ್ನು ಮದುವೆಯಾಗಬೇಕಾಗಿತ್ತು. ಆದರೆ ನೀರಿನಲ್ಲಿ ಮುಳುಗಿ ಆತ ಅಕಾಲಮರಣಕ್ಕೆ ಗುರಿಯಾದ (1833). ಇದೇ ಕೊರಗಿನಲ್ಲಿ ಟೆನಿಸನ್ ಅನೇಕ ವರ್ಷಗಳನ್ನು ಕಳೆದ. ಸೋಫಿ ರಾನ್‍ಸಿ ಎಂಬ ಯುವತಿಯನ್ನು ಪ್ರೀತಿಸಿದ. ಈತನ ಮೂವರು ಸೋದರರು ಮಾನಸಿದ ಕಾಯಿಲೆಗಳಿಂದ ನರಳುತ್ತಿದ್ದರು.

ಈ ವೇಳೆಗೆ ಪ್ರಕಟವಾದ ಇವನ ಕವಿತೆಗಳನ್ನು ಹಲವು ವಿಮರ್ಶಕರು ಕಟುವಾಗಿಯೇ ವಿರ್ಮಶಿಸಿದರಾದರೂ ಈತನ ಹಲವು ಉತ್ತಮ ಕವನಗಳು- ಯೂಲಿಸಿಸ್, ದಿ ಟು ವಾಯ್ಸಸ್ ಮೊದಲಾದುವು-ಈ ಅಸುಖದ ಕಾಲದಲ್ಲೆ ರಚಿತವಾದುವು. ಸರ್ಕಾರ ಮಾಸಾಶನ ಕೊಟ್ಟುದು ಕವಿಗೆ ಸ್ವಲ್ಪ ಸಮಾಧಾನವನ್ನು ತಂದಿತು. 1850ರಿಂದ ಇವನ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭವಾಯಿತು. ಮೊದಲು ಅನಾಮಧೇಯವಾಗಿ ಹೊರ ಬಂದಿತಾದರೂ ಇನ್ ಮೆಮೋರಿಯಂ ಜನಪ್ರಿಯವಾಯಿತು. ಟೆನಿಸನ್ ಆಸ್ಥಾನ ಕವಿಯಾಗಿ ಇನೇಮಿತನಾದನಲ್ಲದೆ ಎಮಿಲ್ ಸೆಲ್‍ವುಡ್‍ಳನ್ನು ಮದುವೆಯಾದ. ಇಲ್ಲಿಂದ ಮುಂದೆ ಒಟ್ಟಿನಲ್ಲಿ ಸುಖದ ಕಾಲ ಬಂತು. ಜನಪ್ರಿಯತೆ ಬೆಳೆಯುತ್ತ ಹೋಯಿತು. 1864ರ ಹೊತ್ತಿಗೆ ಜನಪ್ರಿಯತೆ ಶಿಖರವನ್ನು ಮುಟ್ಟಿತು. 1884ರಲ್ಲಿ ರಾಣಿಯ ಅನುಗ್ರಹದಿಂದ ಟೆನಿಸನ್ ಲಾರ್ಡ್ ಆದ. 1892ರಲ್ಲಿ ತೀರಿಕೊಂಡ ಈತನನ್ನು ವೆಸ್ಟ್‍ಮಿನ್‍ಸ್ಟರ್ ಅಬೆಯಲ್ಲಿ ಸಮಾಧಿ ಮಾಡಲಾಯಿತು.

ಟೆನಿಸನ್ ಸ್ಫೂರದ್ರೂಪಿ. ಜಗತ್ತಿನ ಅತ್ಯಂತ ಸ್ಪುರದ್ರೂಪಿಗಳಲ್ಲಿ ಒಬ್ಬ ಎಂದು ಈತನನ್ನು ಥಾಮಸ್ ಕಾರ್ಲೈಲ್ 1842ರಲ್ಲಿ ವರ್ಣಿಸಿದ. ಧ್ವನಿ ಮಧುರವಾಗಿತ್ತು. ಏಕಾಂತಪ್ರಿಯ, ಮುಖದಲ್ಲಿ ವಿಷಣ್ಣತೆಯ ಛಾಯೆಯಿತ್ತು.

ಕಾವ್ಯರಚನೆ[ಬದಲಾಯಿಸಿ]

ಸುಮಾರು ಎಪ್ಪತ್ತು ವರ್ಷಗಳ ಕಾಲ ಟೆನಿಸನ್ ಕಾವ್ಯರಚನೆಯಲ್ಲಿ ತೊಡಗಿದ. ಹದಿನಾರು ಹದಿನೇಳು ವಯಸ್ಸಿಗೇ ಮಿಲ್ಟನ್, ಪೋಪ್, ಸ್ಕಾಟ್ ಎಲ್ಲರನ್ನೂ ಅನುಕರಿಸಿದ್ದ. ಇವನೂ ಇವನ ಅಣ್ಣ ಚಾಲ್ರ್ಸ್‍ನೂ ಬರೆದ ಕವನಗಳ ಸಂಗ್ರಹ ಪೊಯೆಮ್ಸ್ ಬೈ ಟು ಬ್ರದರ್ಸ್ ಎಂಬ ಹೆಸರಿನಿಂದ 1827ರಲ್ಲಿ ಪ್ರಕಟವಾಯಿತು (ಇನ್ನೊಬ್ಬ ಅಣ್ಣನ ಕೆಲವು ಕವನಗಳೂ ಇದರಲ್ಲಿ ಸೇರಿದ್ದವು). 1829ರಲ್ಲಿ ಇವನ ಟಿಂಬಕ್ಟೂ ಕವನಕ್ಕೆ ಸ್ವರ್ಣಪದಕ ದೊರೆಯಿತು. 1830ರಲ್ಲಿ ಮತ್ತು 1832ರಲ್ಲಿ ಇನ್ನಷ್ಟು ಕವನಗಳು ಪ್ರಕಟವಾದುವು. ಅವುಗಳಲ್ಲಿ ದಿ ಪ್ಯಾಲೆಸ್ ಆರ್ಟ್, ದಿ ಲೇಡಿ ಆಫ್ ಷ್ಯಾಲಟ್ ಮತ್ತು ದಿ ಲೋಟಸ್ ಈಟರ್ಸ್‍ನಂಥ ಉತ್ತಮ ಕವನಗಳಿದ್ದವು. 1842ರಲ್ಲಿ ಪ್ರಕಟವಾದ ಸಂಕಲನದಲ್ಲಿ ಯೂಲಿಸಿಸ್, ಮಾರ್ಟ್ ಡ ಆರ್ಥರ್, ಲಾಕ್ಸ್‍ಲಿ ಹಾಲ್ ಕವನಗಳು ಪ್ರಕಟವಾದುವು. ಹ್ಯಾಲಮ್‍ನ ಮರಣ ಟೆನಿಸನ್ನನ ಮನಸ್ಸನ್ನು ಸಾಕಷ್ಟು ಕಲಕಿತು. ಮರಣದ ಸ್ವರೂಪ, ಬಾಳಿನ-ಅರ್ಥ ಇವು ಬೃಹತ್ ಪ್ರಶ್ನೆಗಳಾಗಿ ಕವಿಯ ಮುಂದೆ ನಿಂತವು. ಹ್ಯಾಲಮ್‍ನ ನೆನಪಿಗಾಗಿ ಬರೆದ ಶೋಕಗೀತೆ ಇನ್ ಮೆಮೋರಿಯಂ 1850ರಲ್ಲಿ ಪ್ರಕಟವಾಯಿತು. 1852ರಲ್ಲಿ ಓಡ್ ಆನ್ ದಿ ಡೆತ್ ಆಫ್ ದಿ ಡ್ಯೂಕ್ ಆಫ್ ವೆಲಿಂಗಟನ್, 1854ರಲ್ಲಿ ದಿ ಚಾರ್ಜ್ ಆಫ್ ದಿ ಲೈಟ್ ಬ್ರಿಗೇಡ್, 1855ರಲ್ಲಿ ಮಾಡ್ ಹೊರಬಿದ್ದವು. ಪ್ರಾಚೀನ ಅರಸ ಆರ್ಥರನ ಸುತ್ತ ನೆಯ್ದ ಕಥನಕವನ ಸಂಕಲನ ದಿ ಇಡಿಲ್ಸ್ ಆಫ್ ದಿ ಕಿಂಗ್ ಪ್ರಕಟವಾಯಿತು. ತನ್ನ ಜೀವಮಾನದ ಕಡೆಯವರೆಗೆ ಟೆನಿಸನ್ ಸಂಕಲನ ಪ್ರಕಟವಾಯಿತು. ತನ್ನ ಜೀವಮಾನದ ಕಡೆಯವರೆಗೆ ಟೆನಿಸನ್ ಕವನಗಳನ್ನು ಬರೆಯುತ್ತಲೇ ಇದ್ದ, ಪ್ರಕಟಿಸುತ್ತಲೇ ಇದ್ದ. ಸಾವನ್ನು ವಸ್ತುವಾಗುಳ್ಳ ಪ್ರಸಿದ್ಧ ಕವನ ಕ್ರಾಸಿಂಗ್ ದಿ ಬಾರ್ ಬರೆದಾಗ (1889)ಕವಿಗೆ ಎಂಬತ್ತು ವರ್ಷ ವಯಸ್ಸು.

ಟೆನಿಸನ್ನನ ಮೇಲೆ ಬಹು ಪ್ರಭಾವ ಬೀರಿದ ಕವಿಗಳಲ್ಲಿ ಪ್ರಾಚೀನರು ವರ್ಜಿಲ್ (ಈ ಕವಿಯನ್ನು ಹೊಗಳಿ ಟೆನಿಸನ್ ಬರೆದ ಕವನದ ಬಹುಭಾಗ ಅವನ ಕಾವ್ಯ ಸೃಷ್ಟಿಗೇ ಅನ್ವಯಿಸುತ್ತದೆ), ಇಂಗ್ಲಿಷ್ ಕವಿಗಳಲ್ಲಿ ಸ್ಪೆನ್ಸರ್ ಕೀಟ್ಸ್ ಮತ್ತು ವರ್ಡ್ಸ್‍ವರ್ತ್-ಇವರು ಮುಖ್ಯರು. ಎಳೆಯ ವಯಸ್ಸಿನಲ್ಲಿ ಟೆನಿಸನ್ ಬೈರನ್ನನ ಆರಾಧಕನಾಗಿದ್ದ. ಆತ ತೀರಿಕೊಂಡಾಗ ಟೆನಿಸನ್‍ಗೆ ಹದಿನೈದು ವರ್ಷ. ಆಗ ಟೆನಿಸನ್ ನೆಲದ ಮೇಲುರುಳಿ ಅತ್ತನಲ್ಲದೆ ಬೈರನ್ ತೀರಿಕೊಂಡ ಎಂದು ದುಃಖದಿಂದ ಮರಳುಗಲ್ಲ ಮೇಲೆ ಬರೆದನಂತೆ.

ಟೆನಿಸನ್ನನ ಗಣನೀಯ ಕವನಗಳ ಸೃಷ್ಟಿ ಪ್ರಾರಂಭವಾದದ್ದು ಇಂಗ್ಲೆಂಡಿನ ಬೌದ್ಧಿಕ ಜೀವನ ಅಲ್ಲೋಲಕಲ್ಲೋಲವಾಗುತ್ತಿದ್ದ ಅವಧಿಯಲ್ಲಿ. ಚಾಲ್ರ್ಸ್ ಲಯೆಲ್‍ನ ಪ್ರಿನ್ಸಿಪಲ್ಸ್ ಆಫ್ ಜಿಯಾಲಜಿಯ (1830-3) ಪ್ರಕಟಣೆಯಿಂದ ಡಾರ್ವಿನ್ನನ ಆರಿಜಿನ್ ಆಫ್ ದಿ ಸ್ಟೀಷೀಸ್‍ನ (1859) ಪ್ರಕಟನೆಯ ವರೆಗಿನ ಕಾಲ ಜೀವನದ ಮೌಲ್ಯಗಳಿಗೆ ಸವಾಲಾಗಿದ್ದ ಕಾಲ. ಡಾರ್ವಿನ್ನನ ಪುಸ್ತಕ ಪ್ರಕಟವಾಗುವ ಮೊದಲೇ ಜೀವವಿಕಾಸವನ್ನು ಕುರಿತ ಅವನ ಯೋಚನಾರೀತಿ ತಕ್ಕಷ್ಟು ಪ್ರಚಾರವಾಗಿತ್ತು. ಜಗತ್ತಿನ ಸೃಷ್ಟಿ, ದೇವರು-ಮನುಷ್ಯನ ಸಂಬಂಧ, ಸೃಷ್ಟಿಯಲ್ಲಿ ಮನುಷ್ಯನ ಸ್ಥಾನ-ಇವನ್ನು ಕುರಿತು ಶತಮಾನಗಳಿಂದ ಬೈಬಲ್ಲಿನ ಆಧಾರದ ಮೇಲೆ ಪಾಶ್ಚಾತ್ಯ ಜಗತ್ತಿನಲ್ಲಿ ಬೇರು ಬಿಟ್ಟಿದ್ದ ಮೌಲ್ಯಗಳು ತೀಕ್ಷ್ಣಪರೀಕ್ಷೆಗೊಳಗಾಗಿ, ಅನೇಕರಿಂದ ತಿರಸ್ಕøತವಾಗಿ, ಮತ್ತೆ ಮನುಷ್ಯ ತನ್ನ ಬಾಳಿನ ಆಧಾರವನ್ನು ಕಟ್ಟಿಕೊಳ್ಳಬೇಕಾಗಿ ಬಂದ ಯುಗ ಇದು. ಟೆನಿಸನ್ನನ ಕಾವ್ಯದಲ್ಲಿ ಆ ಯುಗದ ಅಸ್ವಾಸ್ಥ್ಯ ಮೌಲ್ಯಗಳ ಅನ್ವೇಷಣೆ ಪ್ರತಿಬಿಂಬಿತವಾಗಿವೆ

ಇನ್ ಮೆಮೋರಿಯಂ ಟೆನಿಸನ್ನನಿಗೆ ಚಕ್ರವರ್ತಿನಿಯ ಮೆಚ್ಚುಗೆಯನ್ನೂ ಸಾಮಾನ್ಯ ಓದುಗರ ಮೆಚ್ಚುಗೆಯನ್ನೂ ತಂದಿತ್ತು ಕೃತಿ; ಅವನೇ ಅದನ್ನು ತನ್ನ ಮಹಾಕೃತಿಯನ್ನಾಗಿ ಪರಿಗಣಿಸಿದ. ಅವನ ಪ್ರೀತಿಯ ಗೆಳೆಯ ಹ್ಯಾಲಂ ತೀರಿಕೊಂಡಿದ್ದರಿಂದ ಆದ ದಿಗ್ಭ್ರಮೆ, ಮಾನಸಿಕ ಅಲ್ಲೋಲಕಲ್ಲೋಲಗಳು ಈ ಕೃತಿಯ ರಚನೆಗೆ ಕಾರಣವಾದವು. ಸ್ನೇಹಿತ ತೀರಿಕೊಂಡ ಹದಿನೇಳು ವರ್ಷಗಳ ಅನಂತರ ಟೆನಿಸನ್ ಈ ಕಾವ್ಯವನ್ನು ಪ್ರಕಟಿಸಿದ. ಇದನ್ನು ಭಾವಗೀತೆಗಳ ಸಂಕಲನ ಎಂದು ಕರೆಯಬಹುದು. ದುಃಖದಿಂದ ದಿಕ್ಕುಗೆಟ್ಟ ಕವಿ ಕ್ರಮೇಣ ಸಮಾಧಾನವನ್ನು ಕಂಡುಕೊಳ್ಳುತ್ತಾನೆ. ಸಾವಿನ ಸನ್ನಿಧಿಯಲ್ಲಿ ತತ್ತರಿಸುವ ಜೀವದ ತಳಮಳ, ವಿಶ್ವದಲ್ಲಿ ಮಾನವನ ಸ್ಥಾನ, ಬದುಕು ಸಾವುಗಳ ರಹಸ್ಯ, ವಿಜ್ಞಾನ ತಂದ ಹೊಸ ಜ್ಞಾನದ ಬೆಳಕಿನಲ್ಲಿ ಅದುವರೆಗೆ ಕವಿ ನೆಚ್ಚಿದ್ದ ಮೌಲ್ಯಗಳು_ಇವೆಲ್ಲವನ್ನೂ ಕುರಿತು ಅದು ಚಿಂತಿಸುತ್ತದೆ, ಜಗತ್ತೆಲ್ಲ ದೂರದ ದೈವಿಕ ಘಟನೆಯತ್ತ ಸಾಗುತ್ತಿದೆ ಎಂಬ ಭರವಸೆಯೊಂದಿಗೆ ಮುಕ್ತಾಯವಾಗುತ್ತದೆ. ನಾಲ್ಕು ಐಯಾಂಬಿಕ್ ಪಾದಗಳ ನಾಲ್ಕು ಪಂಕ್ತಿಗಳ ಛಂದಸ್ಸನ್ನು ಕವಿ ಇಲ್ಲಿ ಬಳಸಿದ. (ಮೊದಲನೆಯ ನಾಲ್ಕನೆ ಪಂಕ್ತಿಗಳಲ್ಲಿ ಎರಡನೆಯ ಮೂರನೆಯ ಪಂಕ್ತಿಗಳಲ್ಲಿ ಅಂತ್ಯ ಪ್ರಾಸ) ಟೆನಿಸನ್ನನ ಬಹು ದೊಡ್ಡ ಆಕಾಂಕ್ಷೆಯ ಪ್ರಯತ್ನ ದಿ ಇಡಿಲ್ಸ್ ಆಫ್ ದಿ ಕಿಂಗ್. ಚರಿತ್ರೆಗಿಂತ ಐತಿಹ್ಯಕ್ಕೇ ಹೆಚ್ಚು ಸೇರಿದ ಪ್ರಾಚೀನ ಅರಸ ಆರ್ಥರ್ ಮತ್ತು ಅವನ ದುಂಡುಮೇಜಿನ ಯೋಧರ ಕಥೆಗಳನ್ನು ಸೇರಿಸಿ ರಾಷ್ಟ್ರೀಯ ಮಹಾಕಾವ್ಯವನ್ನು ರಚಿಸುವ ಪ್ರಯತ್ನ ಇದು. ಆದರೆ ಟೆನ್ನಿಸನ್ನನದು ಮಹಾಕಾವ್ಯದ ಪ್ರತಿಭೆಯಲ್ಲ; ಅಂಥ ಕೃತಿ ಬೇಡುವ ಕಾವ್ಯಶಿಲ್ಪ ಅವನಿಗೆ ನಿಲುಕದು. ಕೊನೆಯ ಭಾಗ_ಮಾರ್ಟ್ ಡ ಆರ್ಥರ್ (ಆರ್ಥರನ ಮೃತ್ಯು) ಕವನವನ್ನು ವಿಸ್ತರಿಸಿದ್ದು-ಈ ಕೃತಿಯಲ್ಲಿ ಶ್ರೇಷ್ಠ ಭಾಗ ಕವಿಗೆ ಬಹು ಪ್ರಿಯವಾಗಿದ್ದ ಕವನ ಮಾಡ್. ಇದನ್ನು ಮಾನೊಡ್ರಾಮ ಎಂದು ಕರೆದಿದ್ದಾನೆ. ಪ್ರೇಮಿಯೊಬ್ಬ ಈ ಕವನಗಳಲ್ಲಿ ಭಾವಜಾಡ್ಯತೆಯಿಂದ ಮನೋವಿಕಾರದತ್ತ, ಅಲ್ಲಿಂದ ಹರ್ಷೋನ್ಮಾದದತ್ತ, ಅನಂತರ ರೋಷ, ರೋಷದಿಂದ ಕೊಲೆ, ಕೊಲೆಯಿಂದ ಮತ್ತೆ ಮನಸ್ಸಿನ ಸಮಾಧಾನಕ್ಕೆ ಸಾಗುತ್ತಾನೆ. ಇಂದು ಇದು ಕೃತಕವಾಗಿ ಮೆಲೊಡ್ರ್ಯಾಮಟಿಕ್ ಆಗಿ ಕಾಣುತ್ತದೆ. ಆದರೆ ಕಮ್ ಇನ್ ಟು ದಿ ಗಾರ್ಡನ್ ಹಾಗೂ ಮಾಡ್ ನಂಥ ಭಾವಗೀತೆಗಳು ಇಂದೂ ಮನಸ್ಸನ್ನು ಸೆಳೆಯುತ್ತದೆ. ಟೆನಿಸನ್ನನ ಕಾವ್ಯದಲ್ಲಿ ಭಾವಜಾಡ್ಯತೆಯ ಎಳೆ ಇದೆ ಎಂಬುದು ಗಮನಾರ್ಹ. ಅವನ ಮತ್ತೊಂದು ಮುಖ್ಯ ಕವನ ದಿ ಪ್ಯಾಲೆಸ್ ಆಫ್ ಆರ್ಟ್. ಇದೊಂದು ಅನ್ಯೋಕ್ತಿ. ಒಂದು ಚೇತನ ಗಲಿಬಿಲಿಯ ಕುರೂಪದ ಜಗತ್ತಿನಿಂದ ದೂರವಾಗಿ ವಾಸಿಸಲು ನಿಶ್ಚಯಿಸಿ ಬಹು ಸುಂದರವಾದ, ಕಲಾಕೃತಿಗಳಿಂದ ತುಂಬಿದ ದಿವ್ಯಸೌಧವನ್ನು ನಿರ್ಮಿಸಿ ಮೂರು ವರ್ಷ ಅಲ್ಲಿ ವಾಸಿಸುತ್ತದೆ. ಕ್ರಮೇಣ ನಿರಾಸೆ ಮತ್ತು ಭೀತಿ ಅದನ್ನು ಆವರಿಸುತ್ತದೆ. ಆಗ ಅದು ಆ ಸೌಧವನ್ನು ಬಿಟ್ಟು ಕಣಿವೆಯೊಂದರಲ್ಲಿ ಗುಡಿಸಲಿನಲ್ಲಿ ವಾಸಿಸುತ್ತದೆ. ಸ್ವಾರ್ಥ, ಆಧ್ಯಾತ್ಮಿಕ ಅಹಂಕಾರ ಇವುಗಳಿಂದ ಶಾಂತಿ ದೊರೆಯುವುದಿಲ್ಲ, ದೇವರಿಗೆ, ಸಹ ಮಾನವರಿಗೆ ಸಲ್ಲಿಸಬೇಕಾದ ಕರ್ತವ್ಯದ ಋಣವನ್ನು ಸಲ್ಲಿಸಿ ಮನುಷ್ಯರೊಂದಿಗೆ ಬಾಳುವುದೇ ಸಾರ್ಥಕ್ಯ-ಎಂಬುದು ಈ ಕೃತಿಯ ದೃಷ್ಟಿ. ಇಂಗ್ಲಿಷ್ ಕಾವ್ಯದ ಭಾರತೀಯ ಓದುಗರಿಗೆ ತುಂಬ ಪರಿಚಯವಾಗಿರುವ ಎರಡು ಕವನಗಳು-ದಿ ಲೋಟಸ್ ಈಟರ್ಸ್ (ಇಲ್ಲಿನ ಲೋಟಸ್ ಭಾರತೀಯ ಕಮಲವಲ್ಲ) ಮತ್ತು ಯೂಲಿಸಿಸ್. ಮನುಷ್ಯ ತನ್ನ ನಾಲ್ಕು ದಿನದ ಬಾಳಿನಲ್ಲಿ ಏನನ್ನೂ ಸಾಧಿಸಲಾರ, ಶ್ರಮ ಬಿಟ್ಟು ಇದ್ದುದರಲ್ಲಿ ವಿರಾಮ ಮತ್ತು ಶಾಂತಿ ಕಂಡುಕೊಳ್ಳುವುದು ಉತ್ತಮ ಎಂಬ ಮನೋಭಾವ ಮೊದಲ ಕವನದಲ್ಲಿ ಅಭಿವ್ಯಕ್ತವಾದರೆ, ಮತ್ತೊಂದರಲ್ಲಿ ನಾಲ್ಕು ದಿನದ ಬಾಳಿನಲ್ಲಿ ಅದಷ್ಟು ಸಾಹಸವನ್ನೂ ಜ್ಞಾನವನ್ನೂ ದಕ್ಕಿಸಿಕೊಳ್ಳಬೇಕು ಎಂಬ ಮನೋಭಾವ ಅಭಿವ್ಯಕ್ತವಾಗಿದೆ. (ಆದರೆ ಯೂಲಿಸಿಸ್ ನಲ್ಲಿಯೂ ವಿಷಣ್ಣತೆ ಅಂತರ್ಗತವಾಗಿದೆ ಎಂಬುದು ನೆನಪಿಡಬೇಕಾದ ಅಂಶ). ಛಂದಸ್ಸು ಭಾಷೆಗಳ ಮೇಲಿನ ಪ್ರಭುತ್ವ ದಿ ಚಾರ್ಜ್ ಆಫ್ ದಿ ಲೈಟ್ ಬ್ರಿಗೇಡ್ ಮತ್ತು ದಿ ಬ್ರುಕ್ ಕವನಗಳನ್ನು ಜನಪ್ರಿಯ ಮಾಡಿವೆ. ಬ್ರೇಕ್, ಬ್ರೇಕ್, ಬ್ರೇಕ್ ಮತ್ತು (ಕವಿ ಎಂಬತ್ತನೆಯ ವರ್ಷದಲ್ಲಿ ಬರೆದ) ಕ್ರಾಸಿಂಗ್ ದಿ ಬಾರ್ ಬಹು ಸುಂದರ ಭಾವಗೀತೆಗಳು.

ಟೆನಿಸನ್ ತಮ್ಮ ಜೀವಿತಕಾಲದಲ್ಲಿಯೇ ಜನಪ್ರಿಯತೆಯನ್ನು ಸಾಧಿಸಿದ ಕೆಲವೇ ಕವಿಗಳಲ್ಲಿ ಒಬ್ಬ. ಅವನ ನಿಧನಾನಂತರದ ವರ್ಷಗಳಲ್ಲಿ ಈ ಜನಪ್ರಿಯತೆಯ ವಿರುದ್ಧ ಪ್ರತಿಕ್ರಿಯೆ ಪ್ರಾರಂಭವಾಯಿತು. ಒಂದನೆಯ ಮಹಾಯುದ್ಧ ಮತ್ತು ಅನಂತರದ ವರ್ಷಗಳ ಕಹಿ, ಕ್ರೌರ್ಯ, ದಿಗ್ಭ್ರಮೆ; ರಾಜಕಾರಣಿಗಳು ತಮ್ಮನ್ನು ಆದರ್ಶದ ಸೋಗಿನಿಂದ ಮೋಸಗೊಳಿಸಿದರು ಎಂಬ ಯುವಕರ ರೋಷ_ಇವುಗಳ ವಾತಾವರಣದಲ್ಲಿ ಟೆನಿಸನ್ನನ ಕಾವ್ಯದ ವಿರುದ್ಧದ ಪ್ರತಿಕ್ರಿಯೆ ತೀವ್ರವಾಯಿತು. (ಆದರೆ 1938ರಲ್ಲಿ ಟಿ. ಎಸ್. ಎಲಿಯಟ್ ಒಟ್ಟಿನಲ್ಲಿ ಟೆನಿಸನ್ನನನ್ನು ಮೆಚ್ಚಿಕೊಂಡು ವಿಮರ್ಶೆ ಬರೆದ). ಕಳೆದ ಇಪ್ಪತ್ತು ವರ್ಷಗಳಲ್ಲಿ ಮತ್ತೆ ತಕ್ಕಷ್ಟು ಮೆಚ್ಚಿಕೆಯಿಂದ ಕೂಡಿದ ಅಧ್ಯಯನ ಬೆಳೆದಿದೆ.

ಟೆನಿಸನ್ ತನ್ನ ಯುಗದ ಪ್ರತಿನಿಧಿ ಎನ್ನಿಸಿಕೊಂಡ. ತನ್ನ ಯುಗದ ಆತಂಕಗಳು, ಭಯಗಳು ಮತ್ತು ಭರವಸೆಗಳಿಗೆ ಅಭಿವ್ಯಕ್ತಿ ಕೊಟ್ಟ. ಈ ಕಾರಣದಿಂದ ತನ್ನ ಕಾಲದ ಓದುಗರಿಗೆ ಬಹು ಮೆಚ್ಚಿಗೆಯವನಾದ. ಇದೇ ಅನಂತರ ಬಂದವರಿಂದ ತೀವ್ರಪ್ರತಿಕ್ರಿಯೆಗೂ ಕಾರಣವಾಯಿತು. ವರ್ಣನೆಯಲ್ಲಿ ಟೆನಿಸನ್ನನನ್ನು ಸರಿಗಟ್ಟುವ ಕವಿಗಳು ಬಹು ಮಂದಿ ಇಲ್ಲ. ಇನೋನಿ, ದಿ ಲೇಡಿ ಆಫ್ ಷ್ಯಾಲಟ್-ಇಂಥ ಕವನಗಳಲ್ಲಿ ನಾವು ಕಾಣುವಂತೆ ಟೆನಿಸನ್ ವಿವರಕ್ಕೆ ವಿವರ ಸೇರಿಸಿ, ನೆಳಲು ಬೆಳಕಿನಾಟ, ವರ್ಣವಿನ್ಯಾಸ ಕಣ್ಣಿಗೆ ಕಟ್ಟುವಂತೆ, ಎಲ್ಲ ಇಂದ್ರಿಯಗಳೂ ತಣಿಯುವಂತೆ ವಿಸ್ತಾರವಾದ ವರ್ಣನೆಗಳನ್ನು ನೀಡಬಲ್ಲ; ಯೂಲಿಸಿಸ್ ನಲ್ಲಿ ಕಾಣುವಂತೆ ಕೆಲವೇ ಶಬ್ದಗಳಲ್ಲಿ ಒಂದು ನೋಟವನ್ನು ಅಡಕ ಮಾಡಬಲ್ಲ. ಅವನ ವರ್ಣನೆ ದೃಶ್ಯದ ಹೊರರೂಪವನ್ನಲ್ಲದೆ ಚೇತನವನ್ನೂ ಸೆರೆಹಿಡಿಯ ಬಲ್ಲದು. ಕೆಲವೇ ಮಾತುಗಳಲ್ಲಿ ಒಂದು ಭಾವವನ್ನು ಎರಕ ಹೊಯ್ಯಬಲ್ಲ ಸಾಮರ್ಥ್ಯ ಅವನದು. ಭಾಷೆಯ ಮಾಧುರ್ಯವನ್ನು ಆತ ಅನುಭವಕ್ಕೆ ತಂದು ಕೊಡಬಲ್ಲ. (ಆದರೆ ಕೆಲವೇ ಸ್ವರವ್ಯಂಜನಗಳ ಶಕ್ತಿಯನ್ನು ಆತ ಬಳಸಿಕೊಂಡ ಎಂದು ಈಚೆಗಿನವರ ಆಕ್ಷೇಕಪಣೆ). ಕವನದ ಓಟದ ಮೇಲೆ ಅಸಾಧಾರಣ ಹಿಡಿತ ಆತನದು. ಪಂಕ್ತಿಯ ನಾದ ಪಂಕ್ತಿಯ ಅರ್ಥವನ್ನು ಪ್ರತಿಧ್ವನಿಸುವಂತೆ ಆತ ಮಾಡಬಲ್ಲ.

ಆದರೆ ಒಬ್ಬ ಕವಿಗೆ ಇಷ್ಟೇ ಸಾಮರ್ಥ್ಯ ಸಾಲದು. ಗಟ್ಟಿಯಾದ ಮತ್ತು ವಿಸ್ತಾರವಾದ ಅನುಭವ, ಪ್ರಾಮಾಣಿಕವಾದ ಅಭಿವ್ಯಕ್ತಿ-ಇವು ತಾಂತ್ರಿಕ ಸಾಮಥ್ರ್ಯದೊಂದಿಗೆ ಬೆರೆಯಬೇಕು. ಆಧುನಿಕ ಓದುಗರಿಗೆ ಟೆನಿಸನ್ನನ ಕಾವ್ಯ ಮತ್ತೆ ಅತೃಪ್ತಿಯನ್ನುಂಟುಮಾಡುವುದು ಇಲ್ಲೆ. ತನ್ನ ಕವನದ ಸಂದೇಶಕ್ಕೆ ಕವಿ ಗಮನ ಕೊಡುತ್ತಾನೆ-ಎನ್ನಿಸುತ್ತದೆ. ಅಲ್ಲಲ್ಲಿ ಅತಿಭಾವು ಕತೆಯೂ ಉಂಟು. ಆಧುನಿಕ ವಿಮರ್ಶೆ ಪ್ರಾಮಾಣಿಕವಾಗಿ ಕವಿ ತನ್ನ ಭಾವಗಳಿಗೆ ರೂಪ ಕೊಟ್ಟ ಕವನಗಳನ್ನೆ, ದೀರ್ಘ ಕವನಗಳ ಭಾಗಗಳನ್ನೆ ಮೆಚ್ಚುತ್ತದೆ. ಅಲ್ಲದೆ ಟೆನಿಸನ್ನನದು ಮುಖ್ಯವಾಗಿ ಭಾವಗೀತೆಗಳ ಮನೋಧರ್ಮ. ಬಹು ಸುಂದರವಾದ, ಮರೆಯಲಾಗದ ಭಾವಗೀತೆಗಳನ್ನು ಆತ ರಚಿಸಿದ್ದಾನೆ. ಅವನ ಸದು ಕಾಲೀನರೂ ಅವನ ಅನಂತರ ಬಂದ ಓದುಗರೂ ಗುರುತಿಸದ ಅನುಭವಕ್ಕೆ ಇಂದಿನ ವಿಮರ್ಶಕರು ಸ್ಪಂದಿಸಿದ್ದಾರೆ. ಬಾಳಿನ ರಹಸ್ಯದ ಅನುಭವ ಮತ್ತು ಭಾಳಿನಲ್ಲಿ ವ್ಯಕ್ತಾತೀತವಾದ ಅರ್ಥವೊಂದಿದೆ ಎಂಬ ಆಳವಾದ ಭಾವ ಕ್ರಾಸಿಂಗ್ ದಿ ಬಾರ್ ಎಂಬ ಕವನದಲ್ಲೂ ಇನ್ ಮಮೋರಿಯಂನ ಕೆಲವು ಭಾಗಗಳಲ್ಲೂ ಸಹಜವಾಗಿ, ಅಬ್ಬರವಿಲ್ಲದೆ, ಕೃತಕತೆ ಇಲ್ಲದೆ ಅಭಿವ್ಯಕ್ತಿ ಪಡೆಯುತ್ತವೆ. ಇಂದಿನ ವಿಮರ್ಶೆ ಟೆನಿಸನ್ನನನ್ನು ಮಹಾಕವಿಗಳ ಪಂಕ್ತಿಯಲ್ಲಲ್ಲದಿದ್ದರೂ ಒಳ್ಳೆಯ ಕವಿಗಳ ಪಂಕ್ತಿಯ ಪ್ರಾರಂಭದಲ್ಲಿ ನಿಲ್ಲಿಸಿದೆ.

ಟೆನಿಸನ್ನನ ನಾಟಕಗಳು[ಬದಲಾಯಿಸಿ]

ಟೆನಿಸನ್ ಕ್ವೀನ್ ಮೇರಿ (1875) ಹೆರಾಲ್ಡ್ (1876) ದಿ ಫ್ಯಾಲ್ಕನ್ (1879) ಮೊದಲಾದ ಹಲವು ನಾಟಕಗಳನ್ನು ರಚಿಸಿದ. ಅಸಾಧಾರಣ ಎಚ್ಚರಿಕೆಯಿಂದ ಅವನ್ನು ಬರೆದಿದ್ದಾನೆಂದು ಅವನ ಮಗ ಹೇಳಿದ್ದಾನೆ. ಪಾತ್ರನಿರೂಪಣೆ ಮತ್ತು ಭಾಷೆಗಳಲ್ಲಿ ಈ ಶ್ರದ್ಧೆ ಎದ್ದುಕಾಣುತ್ತದೆ. ಇವನ ನಾಟಕಗಳು ತೀವ್ರದೇಶಾಭಿಮಾನವನ್ನು ವ್ಯಕ್ತಪಡಿಸುತ್ತದೆ. ನಾಟಕಗಳಲ್ಲಿ ಹೆಚ್ಚಿನ ಸತ್ತ್ವವಿಲ್ಲ. ಪಾತ್ರಗಳ ಪರಸ್ಪರ ಪ್ರಭಾವದಿಂದ ಕ್ರಿಯೆ ಬೆಳೆಯುವುದನ್ನು ಈತ ತೋರಿಸಲಾರ. ಕತೆಯ ರಾಜಕೀಯ ಅಂಶ ನಾಟಕದ ಕ್ರಿಯೆಯಲ್ಲಿ ಕರಗಿಹೋಗುವುದಿಲ್ಲ. ನಾಟಕಕಾರನಿಗೆ ಅಗತ್ಯವಾದ ಕಲ್ಪನೆ ಕವಿಗೆ ಇರಲಿಲ್ಲ. ಇವನ ನಾಟಕಗಳಲ್ಲಿ ಅತ್ಯುತ್ತಮವಾದುದು ಬೆಕೆಟ್, ಆತ್ಮೀಯ ಗೆಳೆಯರಾಗಿದ್ದ ಇಂಗ್ಲೆಂಡಿನ ಅರಸ ಎರಡನೆ ಹೆನ್ರಿಗೂ ತಾಮಸ್ ಬೆಕೆಟ್‍ಗೂ ಕಲಹವಾದುದು. ಕಲಹ ಬೆಕೆಟ್‍ನ ಕೊಲೆಯಲ್ಲಿ ಪರ್ಯವಸಾನವಾದುದು ಇದರ ವಸ್ತು. ಹೆನ್ರಿ ಹಾಗೂ ಬೆಕೆಟ್ಟರ ಬಾಂಧವ್ಯದ ಕತೆಯೊಂದಿಗೆ ಹೆನ್ರಿ ಮತ್ತು ರೋಸಮಂಡ್ ಎಂಬಾಕೆಯ ಪ್ರಣಯದ ಕತೆಯನ್ನೂ ಹೆಣೆಯಲಾಗಿದೆ. ಒಂದು ಸತ್ತ್ವಯುವಾದ ಪಾತ್ರದ ಸುತ್ತ ಕತೆಯನ್ನು ಹೆಣೆದು ಐಕ್ಯತೆಯನ್ನು ಸಾಧಿಸುವುದರಲ್ಲಿ ಕವಿ ಈ ಕೃತಿಯಲ್ಲಿ ಯಶಸ್ವಿಯಾಗಿದ್ದಾನೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: