ಲಾರ್ಡ್ ಬೈರನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಾರ್ಡ್ ಬೈರನ್ (ಜಾರ್ಜ್ ಗೋರ್ಡನ್ ಬೈರನ್ ) (1788-1824). ಇಂಗ್ಲಿಷ್ ಕವಿ. ರೊಮ್ಯಾಂಟಿಕ್ ಕಾವ್ಯಪಂಥದ ಪ್ರವರ್ತಕರಾದ ಕಿರಿಯ ಕವಿಗಳ ಗುಂಪಿನ ಜ್ಯೇಷ್ಠ. ಆರನೆಯ ಬ್ಯಾರನ್.

ಬದುಕು ಮತ್ತು ಕಾವ್ಯ[ಬದಲಾಯಿಸಿ]

ಹುಟ್ಟಿದ್ದು ಲಂಡನ್ನಿನಲ್ಲಿ. ನಾರ್ಮನ್ ಬುಡಕಟ್ಟಿಗೆ ಸೇರಿದ ಈತನ ಮನೆತನದ ಮೂಲಪುರುಷ ಸರ್ ಜಾನ್ ಬೈರನ್ 1540ರಲ್ಲಿ ನಾಟ್ಟಿಂಗ್‍ಹ್ಯಾಮ್ ಕೌಂಟಿಯ ಜಮೀನ್ದಾರನಾಗಿದ್ದ. ಈತನ ಮರಿ ಮೊಮ್ಮಗ ಜಾನ್ ಬೈರನ್ ಅಶ್ವದಳದ ಸೇನಾಪತಿ ಆಗಿದ್ದವ. 1643ರಲ್ಲಿ ಶ್ರೀಮಂತ ಸರದಾರ ಪದವಿ ಪಡೆದು ಬ್ಯಾರನ್ ಆದ.

ತಂದೆ ಕ್ಯಾಪ್ಟನ್ ಜಾನ್ ಬೈರನ್ ದುಂದು ಹಾಗೂ ವಿಲಾಸ ಜೀವನ ನಡೆಸುತ್ತಿದ್ದ. ಸ್ವೇಚ್ಛಾಚಾರಿ. ತಾಯಿ ಕ್ಯಾತರಿನ್ ಗೋರ್ಡನ್ ಅಬರ್ಡೀನ್ ಪೈರಿ ಗೈಟ್‍ನವಳು. ಈಕೆ ರಾಜ ಮನೆತನಕ್ಕೆ ಸೇರಿದಾಕೆ. ಈಕೆಯ ತಾತ ಸರ್ ವಿಲಿಯಮ್ ಗೋರ್ಡನ್ ಒಂದನೆಯ ಜೇಮ್ಸ್ ದೊರೆಯ ಮೊಮ್ಮಗ. ಕ್ಯಾಪ್ಟನ್ ಜಾನ್ ಬೈರನ್‍ನ ಮೊದಲ ಹೆಂಡತಿ ಒಬ್ಬ ಮಗಳನ್ನು ಹೆತ್ತು ತೀರಿಕೊಂಡ ಬಳಿಕ ಕ್ಯಾತರಿನ್ ಗೋರ್ಡನ್‍ಳನ್ನು 1785ರಲ್ಲಿ ಮದುವೆಯಾಗಿ ಫ್ರಾನ್ಸಿನಲ್ಲಿ ಸಂಸಾರ ಹೂಡಿದ. ಮೂರು ವರ್ಷ ಕಳೆಯುವುದರೊಳಗೆ ವಿರಸದಾಂಪತ್ಯದಿಂದ ಬೇಸರಗೊಂಡ ಕ್ಯಾತರಿನ್ ತುಂಬುಗರ್ಭಿಣಿಯ ಅವಸ್ಥೆಯಲ್ಲೇ ಗಂಡನನ್ನು ತೊರೆದು ಸ್ಕಾಟ್ಲೆಂಡಿಗೆ ಹೊರಟಳು. ದಾರಿಯಲ್ಲಿ ಪ್ರಸವವಾಗಿ ಗಂಡು ಮಗು ಹುಟ್ಟಿತು. ಜಾರ್ಜ್ ಎಂದು ಹೆಸರಿಟ್ಟಳು. ತಂದೆಯ ಕಡೆಯ ಬೈರನ್, ತಾಯಿಯ ಕಡೆಯ ಗೋರ್ಡನ್ ಎರಡೂ ಸೇರಿ ಜಾರ್ಜ್‍ಗೋರ್ಡನ್ ಬೈರನ್ ಆದ. ಮಗನೊಂದಿಗೆ ತಾಯಿ ಕ್ಯಾತರಿನ್ ಸ್ಕಾಟ್ಲೆಂಡಿನ ಒಂದು ಊರಲ್ಲಿ ಕೇವಲ 300 ಪೌಂಡ್ ವಾರ್ಷಿಕ ವರಮಾನದಲ್ಲಿ ಕಾರ್ಪಣ್ಯದ ಜೀವನ ನಡೆಸಿದಳು.

ಬೈರನ್‍ನ ಕಾಲುಗಳೆರಡೂ ಬಾಲಪಾಶ್ರ್ವವಾತದ ಪರಿಣಾಮವಾಗಿ ದುರ್ಬಲವಾಗಿದ್ದುವು. ಸರಿಯಾದ ಚಿಕಿತ್ಸೆ ದೊರೆಯದೆ ಜೀವಮಾನ ಪರ್ಯಂತ ಈ ವೈಕಲ್ಯ ಉಳಿದುಕೊಂಡಿತು. ನಡೆಯುವಾಗ ಕೊಂಚ ಕುಂಟುತ್ತಿದ್ದ. ಕಾಲಕ್ರಮದಲ್ಲಿ ಅದು ಅಷ್ಟು ಎದ್ದು ಕಾಣದಿದ್ದರೂ ಬೈರನ್ ಕಾಲು ನಡಿಗೆಯನ್ನು ಬಹಳ ಕಡಿಮೆ ಮಾಡಿದ್ದ. ಸ್ಕಾಟ್ಲೆಂಡಿನ ರಮ್ಯವಾದ ಗುಡ್ಡಗಾಡುಗಳಲ್ಲಿ ಅಲೆದಾಡುವುದರಲ್ಲಿ ಕವಿಯ ಹೃದಯ ಅರಳುತ್ತಿತ್ತು. ಅಬರ್ಡಿನ್‍ನ ಗ್ರಾಮರ್‍ಶಾಲೆ, ಅನಂತರ ಹ್ಯಾರೊ ಮತ್ತು ಕೇಂಬ್ರಿಜ್ ಟ್ರಿನಿಟಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಆಯಿತು. ಚಿಕ್ಕಂದಿನಿಂದಲೂ ಪುಸ್ತಕಗಳನ್ನು ಓದುವುದರಲ್ಲಿ ವಿಶೇಷವಾದ ಆಸಕ್ತಿ. ಬೈಬಲನ್ನು ಓದಿದ್ದನಾದರೂ ಪರಂಪರಾಗತವಾದ ಧರ್ಮದಲ್ಲಿ ಶ್ರದ್ಧೆ ಕಡಿಮೆಯೇ. ಹತ್ತು ಹನ್ನೊಂದು ವರ್ಷದವನಾಗಿದ್ದಾಗಲೇ ಎಲ್ಲ ಇಂಗ್ಲೀಷ್ ಕವಿಗಳ ಕಾವ್ಯದ ಪರಿಚಯ ಮಾಡಿಕೊಂಡಿದ್ದ. ವಾಡಿಕೆಯಂತೆ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳನ್ನೂ ಕಲಿತಿದ್ದ. ಸಾಧಾರಣವಾಗಿ ಸ್ವಪ್ನಜೀವಿಯಾಗಿದ್ದರೂ ಈತ ಗೆಳೆಯರ ಗುಂಪಿನಲ್ಲಿ ತಾನೇ ನಾಯಕನಾಗಿ ಗಲಾಟೆ, ಪ್ರತಿಭಟನೆಗಳಲ್ಲಿ ಯಾವಾಗಲೂ ಮುಂದಿರುತ್ತಿದ್ದ. ಈತನಿಗೆ ಬಲು ಪ್ರಿಯವಾದ ಕ್ರೀಡೆಗಳು ಎಂದರೆ ಈಜು ಮತ್ತು ಕ್ರಿಕೆಟ್.

1798ರಲ್ಲಿ ಈತನ ಚಿಕ್ಕಪ್ಪ ಮಕ್ಕಳಿಲ್ಲದೆ ಸತ್ತುದರಿಂದ, ಈತ ಮನೆತನದ ಏಕೈಕ ವಾರಸುದಾರನಾದ. ಹತ್ತುವರ್ಷದ ಹುಡುಗ ಆರನೆಯ ಬ್ಯಾರನ್ ಆಗಿ ನ್ಯೂಸ್ಟೆಡ್ ಎಸ್ಟೇಟಿನ ದಣಿ ಆದ. 1807ರಲ್ಲಿ ಇನ್ನೂ ಇಪ್ಪತ್ತರ ಹರೆಯದಲ್ಲಿ ಕಾಲಿಡುತ್ತಿದ್ದ ಬೈರನ್‍ನ ಆವರ್ಸ್ ಆಫ್ ಐಡ್ಲೆನೆಸ್ ಎಂಬ ಮೊದಲ ಕವನ ಸಂಕಲನ ಪ್ರಕಟವಾಯಿತು. ಈ ಕವನಗಳು ತೀರಾ ಸಾಧಾರಣವಾಗಿದ್ದು ಎಡಿನ್‍ಬರೋರಿವ್ಯೂನಲ್ಲಿ ಇವನ್ನು ಅಪಹಾಸ್ಯ ಮಾಡಿದ ವಿವರ್ಶೆ ಬಂದಿತು. ಇದರಿಂದ ಕೆರಳಿದ ಬೈರನ್ ರಿವ್ಯೂಯರ್ಸ್ ಎಂಬ ವಿಡಂಬನಾತ್ಮಕ ಕವನ ಬರೆದ.

ಮೆಡಿಟರೇನಿಯನ್ ದೇಶಗಳ ಪ್ರವಾಸ ಮಾಡಿ 1811ರಲ್ಲಿ ಇಂಗ್ಲೆಂಡಿಗೆ ಹಿಂತಿರುಗಿದ. ಬರೆದು ಮುಗಿಸಿದ್ದ ಚೈಲ್ಡ್ ಹ್ಯಾರೋಲ್ಡ್ಸ್ ಪಿಲ್‍ಗ್ರಿಮೇಜ್ ಕಾವ್ಯದ ಮೊದಲ ಎರಡು ಕ್ಯಾಂಟೋಗಳನ್ನು 1812ರಲ್ಲಿ ಪ್ರಕಟಿಸಿದ. 1809ರಲ್ಲಿ ಪಾರ್ಲಿಮೆಂಟಿನ ಮೇಲ್ಮನೆ ಸದಸ್ಯನಾಗಿದ್ದವ 1812ರ ಅಧಿವೇಶನದಲ್ಲಿ ಮೊದಲ ಬಾರಿಗೆ ಮಾತಾಡಿ ಹೆಸರಾದ. ಚೈಲ್ಡ್ ಹ್ಯಾರೋಲ್ಡ್ ಕಾವ್ಯದಿಂದ ಬೈರನ್ ಇಂಗ್ಲಿಷ್ ಕಾವ್ಯದಿಗಂತದಲ್ಲಿ ಉಜ್ಜ್ವಲ ತಾರೆಯಾಗಿ ಉದಯಿಸಿ ಇದ್ದಕ್ಕಿದ್ದಂತೆ ಸುಪ್ರಸಿದ್ಧನಾದ. ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಳೆರಡರಲ್ಲೂ ಜನಪ್ರಿಯ ನಾಯಕನಾಗಿ ಮೆರೆದ. ಅನಂತರದ ನಾಲ್ಕು ವರ್ಷಗಳಲ್ಲಿ ದಿ ಗಿಯೌರ್, ದಿಬ್ರೈಡ್ ಆಫ್ ಅಬಿಡಾಸ್, ದಿ ಕಾರ್ಸೇರ್ ಮತ್ತು ಲಾರಾ (1814), ದಿ ಸೀಜ್ ಆಫ್ ಕಾರಿಂತ್, ಪಾರಸಿನಾ (1815), ದಿ ಪ್ರಿಸ್ನರ್ ಆಫ್ ಷಿಲಾನ್ (1816) ಎಂಬ ಪ್ರತಿಭಾಪೂರ್ಣ ಕಥನ ಕವನಗಳನ್ನು ಬರೆದ. ಹತ್ತೇ ದಿನಗಳಲ್ಲಿ ಕಾರ್ಸೇರ್ ಕವನವನ್ನು ಕೆಲವೇ ಗಂಟೆಗಳಲ್ಲಿ ಲಾರಾ ಕವನವನ್ನೂ ನಾಲ್ಕು ದಿನಗಳಲ್ಲಿ ದಿ ಬ್ರೈಡ್ ಕವನವನ್ನೂ ಬರೆದುದು ಅದ್ಭುತ ವಿಕ್ರಮಗಳು.

1815ರಲ್ಲಿ ಅನ್ನಾ (ಇಸಾ) ಬೆಲ್ಲಾ ಮಿಲ್‍ಬ್ಯಾಂಕ್ ಎಂಬ ಶ್ರೀಮಂತ ಕನ್ಯೆಯನ್ನು ಪ್ರೀತಿಸಿ ಮದುವೆಯಾದ. ಆಕೆ ಸರ್ ರಾಲ್ಫ್‍ಮಿಲ್‍ಬ್ಯಾಂಕ್ ಎಂಬಾತನ ಒಬ್ಬಳೇ ಮಗಳು. ರೂಪವತಿ, ಕವಯಿತ್ರಿ, ಗಣಿತದಲ್ಲಿ ಪರಿಣತೆ. ನ್ಯೂಸ್ಟೆಡ್ ಬಂಗಲೆ ಮತ್ತು ಆಸ್ತಿಪಾಸ್ತಿಯೆಲ್ಲವನ್ನೂ ಬೈರನ್ ಆಗಲೇ ಮಾರಿಬಿಟ್ಟದ್ದರಿಂದ ಇವರ ಸಂಸಾರ ಲಂಡನ್ನಿನಲ್ಲಿ ಆರಂಭವಾಯಿತು. 1816ರಲ್ಲಿ ಒಬ್ಬ ಮಗಳು-ಅಗಸ್ಟ್ ಆಡಾ ಹುಟ್ಟಿದಳು. ಬೈರನ್‍ನ ಸ್ವಭಾವ, ದೌರ್ಬಲ್ಯಗಳನ್ನರಿತಿದ್ದ ಅನ್ನಾ ಮೊದಲು ಮದುವೆಯಾಗಲು ಒಪ್ಪಿರಲಿಲ್ಲ. ಆದರೆ ಆತನ ಪ್ರೇಮ, ಅನುನಯಗಳನ್ನು ನೋಡಿ, ಪ್ರತಿಭೆಯನ್ನು ಮೆಚ್ಚಿ, ಮುಂದೆ ತಿದ್ದುಕೊಂಡು ಸರಿಹೋದಾನೆಂದು ಭಾವಿಸಿ ಮರುಕದಿಂದ ಕಡೆಗೆ ಒಪ್ಪಿ ಮದುವೆ ಆಗಿದ್ದಳು. ಒಂದು ವರ್ಷ ಕಳೆಯುವುದರಲ್ಲಿ ಆತನ ಸುಧಾರಣೆ ಅಸಾಧ್ಯವೆಂದು ಮನಗಂಡು ಅವನ ವಿಚಿತ್ರ ಹಾಗೂ ಕ್ರೂರ ವರ್ತನೆಗಳನ್ನು ಸಹಿಸಲಾರದೆ ಬೇಸತ್ತು ಅವನನ್ನು ತ್ಯಜಿಸಿ ಬೇರೆ ಇರತೊಡಗಿದಳು. ವಿವಾಹ ವಿಚ್ಛೇದನವನ್ನು ಬಯಸಿ ಕಾರಣವನ್ನು ಹೇಳಿದಾಗ ಬೈರನ್‍ನ ಚಾರಿತ್ರ್ಯಕ್ಕೆ ಕಳಂಕ ತರುವಂಥ ಸಂಗತಿಗಳು ಬಯಲಿಗೆ ಬಂದುವು. ಇಂಗ್ಲಿಷ್ ಸಮಾಜದಿಂದ ಬಹಿಷ್ಕøತನಾಗಿ ಬೈರನ್ ದೇಶಾಂತರವಾಸಿಯಾದ. ಆದರೂ ಕಾವ್ಯಪ್ರತಿಭೆಯ ಕಾರಣವಾಗಿ ಪಡೆದ ಜನಪ್ರಿಯತೆ, ಷೆಲ್ಲಿ ಮತ್ತು ಕೀಟ್ಸ್ ಕವಿಗಳ ಸ್ನೇಹ ಕಡಿಮೆಯಾಗಲಿಲ್ಲ. ಸ್ವದೇಶವನ್ನು ಬಿಟ್ಟಮೇಲೆ ಆತ ಬದುಕಿದ ಎಂಟೇ ವರ್ಷಗಳು ಇಟಲಿಯ ವೆನಿಸ್ ಮತ್ತು ಗ್ರೀಸ್ ಪ್ರವಾಸಗಳಲ್ಲಿ ಕಳೆದುವು. ಗ್ರೀಸಿನ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿ, ಪ್ರೇರಕ ಮತ್ತು ಚಾಲಕ ಕೂಡ ಆಗಿ ಸಕ್ರಿಯವಾದ ಹೋರಾಟದಲ್ಲಿ ಭಾಗವಹಿಸಿದ. ಈ ಅವಧಿಯಲ್ಲಿ ಚೈಲ್ಡ್ ಹ್ಯಾರೋಲ್ಡ್ಸ್‍ನ ಉಳಿದ ಕ್ಯಾಂಟೋಗಳನ್ನು ಬರೆದ. 1813ರಲ್ಲಿ ಅದರ ನಾಲ್ಕನೆಯ ಕ್ಯಾಂಟೋ ಪ್ರಕಟವಾಗಿ 1823ರ ವೇಳೆಗೆ ಒಟ್ಟು 16 ಕ್ಯಾಂಟೋಗಳು ಬಂದು ಅಪೂರ್ಣವಾಗಿಯೇ ಉಳಿದುವು. ಇದರಲ್ಲಿ ವರ್ಣನೆ, ಕಥನ ಮತ್ತು ನಾಟಕ ರೂಪಗಳೆಲ್ಲವನ್ನೂ ವಿವಿಧ ಸನ್ನಿವೇಶಗಳಿಗೆ ಬಳಸಿದ್ದ.

ವಿವಾಹ ವಿಚ್ಛೇದದ ಸಮಯದಲ್ಲಿ ಬರೆದ ದಿ ಡ್ರೀಮ್ ಮತ್ತು ಡಾರ್ಕ್‍ನೆಸ್ ಎಂಬ ಕವನಗಳು ಸೊಗಸಾಗಿವೆ. ಸ್ಕಾಟ್ ಕವಿಯ ಶೈಲಿಯಲ್ಲಿ ಬರೆದ ಮ್ಯಾಝೆಪ್ಪಾ ಎಂಬ ಕಥನ ಕವನ ಶಕ್ತಿಯುತವೂ ಭಾವೋತ್ತೇಜಕವೂ ಆದ ಕೃತಿ. ಇದೇ ಕೊನೆಯ ಕಥನ ಕವನ. ಬೆಪ್ಪೊ ಎಂಬ ವಿಡಂಬನ ಕವನ ಬರೆದ ಅನಂತರ ಇವೆಲ್ಲಕ್ಕೂ ಶ್ರೇಷ್ಠವಾದ ಡಾನ್ ಜುಆನ್ ಎಂಬ ಮುಗಿಸದ, ಬಹುಶಃ ಎಂದಿಗೂ ಮುಗಿಸಲಾಗದ ಕಾವ್ಯವನ್ನು ಪ್ರಕಟಿಸಿದ. ನೈತಿಕ ದೃಷ್ಟಿಯಿಂದ ಕಟುನಿಂದೆಗೆ ಗುರಿಯಾದರೂ ಕಾವ್ಯ ಕಲೆಯ ದೃಷ್ಟಿಯಿಂದ ಇದು ಶ್ರೇಷ್ಠವಾದ ಕೃತಿ.

ಪಾಶ್ಚಾತ್ಯ ಸಾಹಿತ್ಯದ ಇತಿಹಾಸದಲ್ಲಿ ಬೈರನ್‍ನಿಗೆ ಮಹತ್ತ್ವವಾದ ಸ್ಥಾನವಿದೆ. ಈತನಷ್ಟು ಜನಪ್ರಿಯಕವಿ ಮತ್ತೊಬ್ಬರಿರಲಿಲ್ಲ. ರಾಜಕೀಯ ಮತ್ತು ನೈತಿಕ ನೆಲೆಗಳಲ್ಲಿ ಈತನನ್ನು ಖಂಡಿಸಿದವರೂ ಈತನ ಕಾವ್ಯಪ್ರತಿಭೆಯನ್ನು ಮೆಚ್ಚುತ್ತಾರೆ. ಸ್ವದೇಶದಲ್ಲಿ ಈತನ ಕೀರ್ತಿ, ಪ್ರಭಾವ ದೊಡ್ಡವು. ಯೂರೋಪಿನಲ್ಲಿ ಬೀರಿದ ಪ್ರಭಾವ ಮತ್ತು ಕೀರ್ತಿ ಅವಕ್ಕಿಂತ ಬಹುಪಾಲು ಹೆಚ್ಚು. ಇಟಲಿ, ಸ್ಪೇನ್, ಫ್ರಾನ್ಸ್, ಜರ್ಮನಿ ಮತ್ತು ರಷ್ಯಾಗಳಲ್ಲಿ ರೊಮ್ಯಾಂಟಿಕ್ ಕಾವ್ಯ ಚಳವಳಿಗೆ ಈತನೇ ಮೂಲಸ್ಫೂರ್ತಿ.

ಇಂಗ್ಲೆಂಡಿನಲ್ಲಿ ಈತ ಎಷ್ಟು ಕ್ಷಿಪ್ರವಾಗಿ ಕೀರ್ತಿಶಿಖರ ಏರಿದನೋ ಅಷ್ಟೇ ಕ್ಷಿಪ್ರವಾಗಿ ಪತನ ಹೊಂದಿ ದೇಶಭ್ರಷ್ಟನೂ ಆದ. ಆದರೂ ಆತನನ್ನು ಮೆಚ್ಚಿದವರು ಆಗಲೂ ಬಹಳ ಜನ. ಈಗಲೂ ಬಹಳ ಜನ. "ಬೈರನ್ ಇಂಗ್ಲಿಷ್ ಕಾವ್ಯಕ್ಕೆ ಹೊಸ ಮೌಲಿಕ ಪ್ರತಿಮೆಗಳನ್ನು ವಿಪುಲವಾಗಿ ಸೃಜಿಸಿ ಕೊಟ್ಟಿದ್ದಾನೆ. ಹೊಸ ಗುಣಗಳನ್ನೂ ಹೊಸ ನೋಟಗಳನ್ನೂ ಅಲಂಕರಣಗಳನ್ನೂ ತಂದಿದ್ದಾನೆ" ಎನ್ನುತ್ತಾನೆ ಪ್ರಸಿದ್ಧ ಸಾಹಿತ್ಯ ಚರಿತ್ರಕಾರ, ವಿಮರ್ಶಕ ಸೇಂಟ್ಸ್‍ಬರಿ. ಬೈರನ್‍ನ ಕಾವ್ಯದಲ್ಲಿ ಕೀಟ್ಸ್ ಮತ್ತು ಷೆಲ್ಲಿ ಕವಿಗಳ ಭಾವಗೀತೆಗಳ ಕೋಮಲತೆ, ಭಾವಸೌಂದರ್ಯಗಳನ್ನು ಕಾಣದಿದ್ದರೂ ಬೇರೆಲ್ಲೂ ಕಾಣದ ಶಕ್ತಿ, ಕಾವು ಮತ್ತು ಉಜ್ಜ್ವಲತೆಗಳನ್ನೂ ಜೊತೆಗೆ ಮಾಧುರ್ಯವನ್ನೂ ಕಾಣಬಹುದು. ಇಂಥ ಕಸುವು, ಅಚ್ಚೊತ್ತುವ ಚಿತ್ರಣ, ಕಥನದ ಓಟಗಳಿಗೆ ಚೈಲ್ಡ್ ಹ್ಯಾರೋಲ್ಡ್ಸ್ ಉತ್ತಮ ನಿದರ್ಶನ. ಡಾನ್ ಜುಆನ್ ಮಹಾಕಾವ್ಯದಲ್ಲಿ ಬೆರಗುಗೊಳಿಸುವ ಸ್ವೋಪಜ್ಞತೆ ಇದೆ. ಜೀವನದ ನಾನಾ ವಿಷಯಗಳ ಬಗ್ಗೆ ಕವಿಯ ಚಿಂತನೋಕ್ತಿಗಳ ಅಭಿವ್ಯಕ್ತಿಯಲ್ಲಿ ಕಾವ್ಯದ ಸುಭಗತೆ, ವ್ಯಂಗ್ಯದ ಚಾತುರ್ಯ ಮತ್ತು ಶ್ರೇಷ್ಠ ಸಾಹಿತ್ಯಗುಣಗಳು ಕಾಣುತ್ತವೆ. ಡಾರ್ಕ್‍ನೆಸ್ ಎಂಬ ಭಾವಗೀತೆಯಲ್ಲಿ ಕವಿ ಭವ್ಯತೆಯ ಅಂಚನ್ನು ಮುಟ್ಟುತ್ತಾನೆ. ದಿ ಡ್ರೀಮ್ ಕವನ ತೋಡಿಕೊಳ್ಳುವ ವ್ಯಥೆಯಂತೂ ಮನವನ್ನು ಮಿಡಿಯುತ್ತದೆ. ಎಲ್ಲ ಕವನಗಳಲ್ಲೂ ಒಂದು ಬೀಸು, ವೈಶಾಲ್ಯ ಕಾಣುತ್ತದೆ. ಕೇವಲ 36ನೆಯ (1824) ವಯಸ್ಸಿನಲ್ಲಿ ಮರಣ ಹೊಂದಿದ ಬೈರನ್‍ನ ಅದಮ್ಯವಾದ ಶಕ್ತಿ, ಉತ್ಸಾಹ, ಜೀವನೋಲ್ಲಾಸಗಳು ಆ ಯುವಪ್ರಾಯದ ಕಾವಿನಲ್ಲೇ ಇವನ ಕಾವ್ಯಕೃತಿಗಳಲ್ಲಿ ಅಮರವಾಗಿ ಉಳಿದಿವೆ.