ಫೋನ್ ಪೇ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೀಠಿಕೆ[ಬದಲಾಯಿಸಿ]

ಫೋನ್ ಪೇ ಭಾರತದ ಡಿಜಿಟಲ್ ವಾಲೆಟ್ ಮತ್ತು ಇ-ಕಾಮರ್ಸ್ ಪೇಮೆಂಟ್ ಸೇವೆಗಳನ್ನು ಒದಗಿಸುವ ಸಂಸ್ಥೆ, ಪ್ರಸ್ತುತ ಇದರ ಪ್ರಧಾನ ಕಚೇರಿ ಬೆಂಗಳೂರಿನಲ್ಲಿದೆ. ಸಮೀರ್ ನಿಜಾಮ್ ಮತ್ತು ರಾಹುಲ್ ಚರಿ. ಎಂವವರು ಡಿಸೆಂಬರ್ ೨೦೧೫ ರಲ್ಲಿ ಫೋನ್ ಪೇ ಅಪ್ಲಿಕೇಶನ್ನನ್ನು ಅನ್ವೇಷಣೆಗೊಳಿಸಿದರು, ಆಗಸ್ಟ್ ೨೦೧೬ ಮಾರುಕಟ್ಟೆಯನ್ನು ಪ್ರವೇಶಿಸಿದ ಯುಪಿಐ ಪೇಮೆಂಟ್ಸ್ ಆಧಾರಿತ ಮೊದಲ ಅಪ್ಲಿಕೇಶನ್ ಫೋನ್ ಪೇ ಎಂಬುದು ಇದರ ವಿಶೆಷ. ಫೋನ್ ಪೇ ಅಪ್ಲಿಕೇಶನ್ ಮೂಲಕ ಡಿಟಿಎಚ್ ರಿಚಾರ್ಜ್, ಮೊಬೈಲ್ ರೀಚಾರ್ಜ್, ಡೇಟಾ ಕಾರ್ಡ್ ರಿಚಾರ್ಜ್, ಹಾಗೂ ಬ್ಯಾಂಕ್ ಖಾತೆಗಳಿಗೆ ಹಣ ಕಳುಹಿಸುವ ಅಥವಾ ಪಡೆದುಕೊಳ್ಳುವಂತಹ ಕಾರ್ಯಗಳನ್ನು ಮಾಡಬಹುದಾಗಿದೆ. ಇದರ ಜೊತೆಗೆ ಫೋನ್ ಪೇ ಅಪ್ಲಿಕೇಶನ್ನಲ್ಲಿ ಓಲಾ, ರೆಡ್ ಬಸ್ ಟಿಕೆಟ್‌ಗಳು, ಆಹಾರ ಪದಾರ್ಥಗಳು, ಗೊಯಿಐಬೋ ವಿಮಾನ ಟಿಕೆಟ್‌ಗಳು ಮತ್ತು ಹೋಟೆಲ್ ರೂಂಗಳನ್ನು ಮೊಬ್ಯೆಲ್ ಮೂಲಕವೇ ಬುಕ್ ಮಾಡಬಹುದಾಗಿದೆ. ಪ್ರಸ್ತುತ ಈ ಅಪ್ಲಿಕೇಶನ್ ೧೧ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ ಮತ್ತು ಐವತ್ತು ಲಕ್ಷಕ್ಕೂ ಹೆಚ್ಚು ಆನ್ಲೈನ್ ಮತ್ತು ಆಫ್ಲೈನ್ ವ್ಯಾಪಾರಿಗಳು ಈ ಅಪ್ಲಿಕೇಶನ್ನಿನ ಬಳಕೆದಾರರಾಗಿದ್ದಾರೆ. ಜೂನ್ ೨೦೧೮ ರ ಪ್ರಕಾರ ಒಂದು ಕೋಟಿಗೂ ಹೆಚ್ಚು ಮಂದಿ ಈ ಅಪ್ಲಿಕೇಶನ್ನನ್ನು ಬಳಸಿದ್ದಾರೆ ಹಾಗೂ ಏಪ್ರಿಲ್ ೨೦೧೯ ರಲ್ಲಿ ಎರಡು ಬಿಲಿಯನ್‌ಗೂ ಹೆಚ್ಚು ಹಣದ ವಹಿವಾಟು ನಡೆದಿರುವುದು ಇದರ ಸಾಧನೆ. ‘ಇನ್ಸೂರೆನ್ಸ್ ಅಂಡ್ ಆಪರೇಷನ್ ಆಫ್ ಸೇಮಿ ಕ್ಲೋಸ್ ಪ್ರಿಪೇಯ್ಡ್ ಪೇಮೆಂಟ್ ಸಿಸ್ಟಮ್’ ಅನ್ನು ಬಳಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಸಂಸ್ಥೆಗೆ ಪರವಾನಗಿ ಸಹಾ ನೀಡಿದೆ.

ಇತಿಹಾಸ[ಬದಲಾಯಿಸಿ]

ಫೋನ್ ಪೇ ಅಪ್ಲಿಕೇಶನ್ ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಎಫ್ ಎಕ್ಸ್ ಮಾರ್ಟ್ ಮೊದಲಿಗೆ ಪರವಾನಗಿ ಪಡೆದುಕೊಂಡು, ನಂತರ ೨೦೧೫ರಲ್ಲಿ ಫೋನ್ ಪೇ ಅಪ್ಲಿಕೇಶನ್ ಬಿಡುಗಡೆಯಾಗಿತ್ತು. ಅದಾದ ಒಂದೆ ವರ್ಷದಲ್ಲಿ ಅಂದರೆ ೨೦೧೬ರಲ್ಲಿ ಫ್ಲಿಪ್ಕಾರ್ಟ್ ಕಂಪನಿಯ ಜೊತೆ ಸೇರಿಕೊಂಡು, ಎಫ್ ಎಕ್ಸ್ ಮಾರ್ಟ್ ಪರವಾನಗಿ ಫೋನ್ ಪೇ ಸಂಸ್ಥೆಗೆ ವರ್ಗಾವಣೆಗೊಂಡಿತು. ಮತ್ತು ಅದರ ಹೆಸರನ್ನು ಕೂಡ ಮರುನಾಮಕರಣಗೊಳಿಸಿಕೊಂಡು 'ಫೋನ್ ಪೇ ವಾಲೆಟ್’ ಎಂದು ಬದಲಾಯಿತು ಹಾಗೂ ಸ್ಥಾಪಕರಾದಂತಹ ಸಮೀರ್ ನಿಜಾಂರವರನ್ನೇ ಸಂಸ್ಥೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಆಗಸ್ಟ್ ೨೦೧೬ ರಂದು ಸಂಸ್ಥೆಯು, ಎಸ್ ಬ್ಯಾಂಕ್ ಜೊತೆಗೂಡಿ ಯು.ಪಿ.ಐ ಆಧಾರಿತ ಮೊಬೈಲ್ ಪೇಮೆಂಟ್ ಆಪ್‌ನ್ನು ಬಿಡುಗಡೆ ಮಾಡಿತು. ಬಿಡುಗಡೆಯಾದ ಮೂರೇ ತಿಂಗಳುಗಳಲ್ಲಿ ಈ ಅಪ್ಲಿಕೇಶನ್ ಒಂದು ಕೋಟಿ ಬಳಕೆದಾರರು ಪಡೆದುಕೊಳ್ಳುವ ಮೂಲಕ ಹೊಸ ಸಾಧನೆ ಬರೆಯಿತು. ೨೦೧೮ರಲ್ಲಿ ಬೀಮ್ ಅಪ್ಲಿಕೇಶನನ್ನು ಹಿಮ್ಮೆಟ್ಟಿ, ೫ ಕೋಟಿ ಬಳಕೆದಾರನು ಹೊಂದುವ ಮೂಲಕ ಯು.ಪಿ.ಐ ತಂತ್ರಜ್ಙಾನ ಕ್ಷೇತ್ರದಲ್ಲಿ ಹೊಸ ದಾಖಲೆ ಮೂಡಿಸಿತು.

ಪಾಲುದಾರಿಕೆಗಳು ಮತ್ತು ಆವಿಷ್ಕಾರಗಳು[ಬದಲಾಯಿಸಿ]

ಅಕ್ಟೋಬರ್ ೨೦೧೭ರಲ್ಲಿ ಫೋನ್ ಪೇ ಸಂಸ್ಥೆಯು ಯು.ಪಿ.ಐ ತಂತ್ರಜ್ಙಾನಾಧಾರಿತ ಬ್ಲೂಟೂತ್ ಸಾಧನವನ್ನು ಬಿಡುಗಡೆ ಮಾಡಿತು, ನೋಡುವುದಕ್ಕೆ ಸಣ್ಣ ಕ್ಯಾಲುಕುಲೇಟರ್ ತರಹವೇ ಕಾಣುವ ಈ ಸಾಧನವು ‘ಎ ಎ’ ಬ್ಯಾಟರಿಗಳನ್ನು ಹೊಂದಿದ್ದು ಬ್ಲೂಟೂತ್‌ನ ಮೂಲಕ ಫೋನ್ ಪೇ ಅಪ್ಲಿಕೇಶನ್‌ನಲ್ಲಿ ಹಣದ ವ್ಯವಹಾರವನ್ನು ಮಾಡಲು ಸಹಕರಿಸುತ್ತದೆ. ಜನವರಿ ೨೦೧೮ರಲ್ಲಿ ಫೋನ್ ಪೇ ಸಂಸ್ಥೆಯು ಫ್ರೀ ಚಾರ್ಜ್ ಸಂಸ್ಥೆಯ ಜೊತೆಗೂಡಿ ತನ್ನ ಗ್ರಾಹಕರಿಗೆ ಫ್ರೀ ಚಾರ್ಜ್ ಖಾತೆಯೊಂದಿಗೆ ಫೋನ್ ಪೇ ಕತೆಯನ್ನು ಜೋಡಣೆ ಮಾಡಿಕೊಳ್ಳುವ ಸೌಲಭ್ಯವನ್ನು ಒದಗಿಸಿತು. ಜೊತೆಗೆ ಇದೇ ರೀತಿಯ ಅಪ್ಲಿಕೇಶನ್‌ಗಳಾದ ಜಿಯೋ ಮನಿ ಮತ್ತು ಏರ್ಟೆಲ್‌ಮನಿಗಳು ಇದನ್ನು ಅನುಸರಿಸಿದ್ದವು. ಫೋನ್ ಪೇ ಸಂಸ್ಥೆಯು ಓಲಾ, ರೆಡ್ ಬಸ್, ಗೊಐಬಿಬೋ, ಸಂಸ್ಥೆಗಳ ಜೊತೆಗೆ ಜೋಡಣೆಗೊಂಡು ತನ್ನ ಗ್ರಾಹಕರಿಗೆ ಮತ್ತಷ್ಟು ಉಪಯೋಗವಾಗುವಂತೆ ಕಾರ್ಯ ನಿರ್ವಹಿಸುತ್ತಿದೆ.

ಪ್ರಶಸ್ತಿಗಳು[ಬದಲಾಯಿಸಿ]

  1. ೨೦೧೫ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯಿಂದ ‘ಹೆಚ್ಚು ವ್ಯಾಪಾರಿಗಳು ಬಳಸುತ್ತಿರುವಂತಹ ಯು.ಪಿ.ಐ ಆಪ್’ ಎಂದು ಗುರುತಿಲ್ಪಟ್ಟಿತು.
  2. ೨೦೧೮ರಲ್ಲಿ ‘ಉತ್ತಮ ಮೊಬೈಲ್ ಪೇಮೆಂಟ್ ಪ್ರಾಡಕ್ಟ್ ಅಥವಾ ಸೇವೆ’ ಎಂಬ ವರ್ಗದಲ್ಲಿ ಆಯ್ಕೆಗೊಂಡು ಯು.ಪಿ.ಐ ಇಂಡಿಯಾ ಡಿಜಿಟಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
  3. ೨೦೧೮ರಲ್ಲಿ ‘ಯುಪಿಐ ಡಿಜಿಟಲ್ ಇನ್ನೋವೇಶನ್’ ಪ್ರಶಸ್ತಿಯನ್ನು ಪಡೆದುಕೊಂಡಿತು.
  4. ೨೦೧೮ರಲ್ಲಿ ‘ದಿ ಸೂಪರ್ ಸ್ಟಾರ್ ಏಷಿಯಾ’ ಪ್ರಶಸ್ತಿಯನ್ನು ಪಡೆದುಕೊಂಡಿತು
  5. ೨೦೧೮ರಲ್ಲಿ ಟೆಲಿಕಾಂ ಅಂಡ್ ಟೆಕ್ನಾಲಜಿ ವರ್ಗದಲ್ಲಿ ಇಂಡಿಯಾ ಅಡ್ವಟೈಸಿಂಗ್ ಪ್ರಶಸ್ತಿಯನ್ನು ಪಡೆದುಕೊಂಡಿತು.
  6. ಐ.ಎ.ಎಂ.ಎ.ಐ ಆಯೋಜಿಸಿದ್ದ ೯ನೇ ಇಂಡಿಯಾ ಡಿಜಿಟಲ್ ಅವಾರ್ಡ್ ಕಾರ್ಯಕ್ರಮದಲ್ಲಿ ‘ಉತ್ತಮ ಮೊಬೈಲ್ ಪೇಮೆಂಟ್ ಪ್ರಾಡಕ್ಟ್ ಅಥವಾ ಸೇವೆ’ ಎಂಬ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
  7. ೨೦೧೯ರಲ್ಲಿ ಎಕನಾಮಿಕ್ ಟೈಮ್ಸ್ ಮತ್ತು ಜೀ ಬಿಸಿನೆಸ್ ಆಯೋಜಿಸಿದ್ದ, ಎಂಟನೇ ವಾರ್ಷಿಕ ಇಂಡಿಯನ್ ರೇಟೇಲ್ ಅಂಡ್ ಇ-ರೀಟೇಲ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ‘ಉತ್ತಮ ಡಿಜಿಟಲ್ ವಾಲೆಟ್’ ಎಂಬ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
  8. ೨೦೧೯ರಲ್ಲಿ ‘ಬೆಸ್ಟ್ ಡಿಜಿಟಲ್ ವಾಲೆಟ್’ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿತು.

ಕಾನೂನಾತ್ಮಕ ಸವಾಲುಗಳು[ಬದಲಾಯಿಸಿ]

ಜನವರಿ ೧೪ ೨೦೧೭ ರಂದು ಐಸಿಐಸಿಐ ಬ್ಯಾಂಕ್ ಫೋನ್ ಪೇ ಅಪ್ಲಿಕೇಶನ್ ಎನ್.ಸಿ.ಪಿ.ಐ ಮಾರ್ಗಸೂಚಿಗಳನ್ನು ಒಳಗೊಂಡಿಲ್ಲ ಎಂಬ ಕಾರಣ ನೀಡಿ ಅದರ ವ್ಯವಹಾರಗಳನ್ನು ನಿರ್ಭಂದಿಸಿಕೊಂಡಿತ್ತು. ೨೦ ಜನವರಿ ೨೦೧೭ ರಂದು ಏರ್ಟೆಲ್ ಸಂಸ್ಥೆ ಕೂಡ ಅದೇ ಕಾರಣ ನೀಡಿ, ಫೋನ್ ಪೇ ಅಪ್ಲಿಕೇಶನ್ ಅನ್ನು ನಿರ್ಬಂಧನೆ ಮಾಡಿತ್ತು. ನಂತರ ಎನ್.ಸಿ.ಪಿ.ಐ ಐಸಿಐಸಿಐ ಸಂಸ್ಥೆಗೆ ಫೋನ್ ಪೇ ಅಪ್ಲಿಕೇಶನ್ ಮೇಲಿನ ನಿರ್ಬಂಧನೆಯನ್ನು ತೆಗೆದುಹಾಕಲು ಸೂಚನೆ ನೀಡಿತು. ಎನ್.ಸಿ.ಪಿ.ಐ ಸಂಸ್ಥೆ ಮಾರ್ಗಸೂಚಿಗಳನ್ನು ನವೀಕರಣಗೊಳಿಸಿ ಬಿಡುಗಡೆ ಮಾಡಿದರ ಫಲವಾಗಿ ಪೋನ್ ಪೇ ಸಂಸ್ಥೆಯು ಫ್ಲಿಪ್ಕಾರ್ಟ್ ಸಂಸ್ಥೆಯೊಡನೆ ಹೊಂದಿದ್ದ ಎಲ್ಲಾ ಇ-ಕಾಮರ್ಸ್ ವ್ಯವಹಾರಗಳು ನಿಲ್ಲಿಸಬೇಕಾದ ಸಮಸ್ಯೆ ಎದುರಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. https://download.cnet.com/PhonePe-India-s-Payments-App/3000-2057_4-77655111.html
  2. https://www.phonepe.com/en/contact_us.html
"https://kn.wikipedia.org/w/index.php?title=ಫೋನ್_ಪೇ&oldid=1156717" ಇಂದ ಪಡೆಯಲ್ಪಟ್ಟಿದೆ