ಫಿರ್ಯಾದು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅನ್ಯಾಯ ಅಥವಾ ಅಪರಾಧದಿಂದ ನೊಂದ ನಾಗರಿಕ ತನಗಾದ ಅನ್ಯಾಯದ ಪರಿಹಾರದ ಕ್ರಮವಾಗಿ ಕೈಗೊಳ್ಳುವ ನ್ಯಾಯಾಂಗ ವಿಚಾರಣೆಯ ಕ್ರಮದ ಪ್ರಾರಂಭದಲ್ಲಿ ನೀಡುವ ಹೇಳಿಕೆಯನ್ನು ನ್ಯಾಯಶಾಸ್ತ್ರದಲ್ಲಿ ಫಿರ್ಯಾದು (ಕಂಪ್ಲೇಂಟ್) ಎಂದು ಕರೆಯಲಾಗುತ್ತದೆ. ಎಂದರೆ ದಂಡಪ್ರಕ್ರಿಯಾ ಸಂಹಿತೆಯ ಪ್ರಕಾರ ಕ್ರಮ ಕೈಗೊಳ್ಳುವ ಬಗ್ಗೆ (ಪೋಲೀಸ್ ವರದಿಯನ್ನು ಹೊರತುಪಡಿಸಿ) ಯಾವುದೇ ಪರಿಚಿತ ಅಥವಾ ಅಪರಿಚಿತ ವ್ಯಕ್ತಿಯೊಬ್ಬ ಶಿಕ್ಷಾರ್ಹ ಅಪರಾಧವೆಸಗಿದ್ದಾನೆಂಬ ಬಗ್ಗೆ ಅರೋಪವನ್ನೊಳಗೊಂಡ ಮೌಖಿಕ್ ಅಥವಾ ಲಿಖಿತ ಹೇಳಿಕೆ ಇದು.[೧] ಹೇಳಿಕೆ, ದೂರು, ಪ್ರಾರ್ಥನೆ, ವಿನಂತಿ ಎಂಬ ಅರ್ಥದ ಮೂಲ ಪಾರಸಿಯ ಫರಿಯಾದ್ ಎಂಬುದರಿಂದ ಉರ್ದುವಿನ ಮೂಲಕ ಬಂದಿರುವ ಪದವಿದು.

ಫಿರ್ಯಾದು ನೀಡುವವನು ಫಿರ್ಯಾದಿ. ಇದನ್ನು ನೀಡಲು ಅವನಿಗೆ ಅಪರಾಧದ ಬಗ್ಗೆ ನೇರವಾದ, ವ್ಯಕ್ತಿಗತ ಮಾಹಿತಿಯೇ ಇರಬೇಕೆಂದೇನೂ ಇಲ್ಲ. ಆದರೆ ಅಂಥ ಸಂದರ್ಭದಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡು ಕ್ರಮ ಮುಂದುವರಿಸುವ ಇಲ್ಲವೇ ಬಿಡುವ ವಿವೇಚನಾತ್ಮಕ ಜವಾಬ್ದಾರಿ ದಂಡಾಧಿಕಾರಿಯದಾಗಿರುತ್ತದೆ.

ವ್ಯಕ್ತಿಯೊಬ್ಬ ನ್ಯಾಯಾಲಯದೆದುರು ನೀಡುವ ಹೇಳಿಕೆಯ ಒಟ್ಟು ಪರಿಣಾಮ ಯಾವುದೇ ಅಪರಾಧದ ಎಸಕದ ಬಗ್ಗೆ ಇರತಕ್ಕದ್ದು. ದಂಡಶಾಸನದ ಚಾಲನೆ ಇಂಥ ಆರೋಪವನ್ನೊಳಗೊಂಡ ಹೇಳಿಕೆಯಿಂದಲೇ ಪ್ರಾರಂಭವಾಗುತ್ತದೆ. ಈ ಕಾರಣಕ್ಕಾಗಿ ಅಪರಾಧದ ಅನ್ಯಾಯಕ್ಕೆ ಗುರಿಯಾದ ವ್ಯಕ್ತಿಯೇ ಫಿರ್ಯಾದಿಯಾಗಿರಬೇಕೆಂಬ ನಿಯಮವಿಲ್ಲ.

ದಂಡಾಧಿಕಾರಿ ಫಿರ್ಯಾದನ್ನು ಸ್ವೀಕರಿಸುವ ಕಾಲಕ್ಕೆ ಹಾಗೂ ಅಪರಾಧವನ್ನು ಅವಗಾಹನೆಗೆ ಪಡೆಯುವ ಕಾಲಕ್ಕೆ ಫಿರ್ಯಾದಿಯ ಹಾಗೂ ಆ ಕಾಲಕ್ಕೆ ಹಾಜರಿದ್ದ ಸಾಕ್ಷಿದಾರರ ಹೇಳಿಕೆಯನ್ನು ಪ್ರಮಾಣ ವಚನದ ಮೇಲೆ ಪಡೆದುಕೊಳ್ಳ ಬೇಕಾಗುತ್ತದೆ. ಫಿರ್ಯಾದಿನ ಸತ್ಯಾಸತ್ಯತೆಯನ್ನು ಪರೀಕ್ಷಿಸಿ ಮೇಲ್ನೋಟಕ್ಕಾದರೂ ವಿಚಾರಣೆಗೆ ಗುರಿ ಮಾಡುವ ಅಪರಾಧವಿದೆಯೇ ಎಂಬುದನ್ನು ದೃಡಪಡಿಸಿಕೊಳ್ಳುವುದೇ ಇದರ ಉದ್ದೇಶ.

ವಿಚಾರಣೆಗೆ ಒಳಪಡಿಸತಕ್ಕ ಅಪರಾಧದ ವಿವರ ಪಡೆಯುವ ಬಗ್ಗೆ ದಂಡಾಧಿಕಾರಿ ತನ್ನ ಕಡೆಗೆ ಬಂದ ಫಿರ್ಯಾದನ್ನು ಪೋಲಿಸರ ಕಡೆಗೆ ತನಿಖೆಗಾಗಿ ಕಳಿಸಬಹುದಾಗಿದೆ. ಅಥವಾ ತಾವೇ ಸ್ವತಃ ಕೋರ್ಟಿನಲ್ಲಿ ವಿಚಾರಣೆ ಮುಂದುವರಿಸುವ ಬಗ್ಗೆ ಫಿಯಾದಿಗೆ ಅನುಮತಿ ನೀಡಲೂಬಹುದಾಗಿದೆ. ಒಂದು ವೇಳೆ ಫಿರ್ಯಾದಿನಲ್ಲಿ ಹೇಳಿವ ಅಪರಾಧದ ಸ್ವರೂಪ ಅದರ ಅಧಿಕಾರ ಕಕ್ಷಿಯ ಹೊರಗಿನದಾಗಿದ್ದರೆ ಸೂಕ್ತ ನ್ಯಾಯಾಲಯದಲ್ಲಿ ಹಾಜರುಪಡಿಸುವಂತೆ ಫಿರ್ಯಾದಿಗೆ ಆದೇಶ ನೀಡಿ ಅಂಥ ಫಿರ್ಯಾದನ್ನು ಹಿಂದಿರುಗಿಸಬಹುದು. ಫಿರ್ಯಾದಿಯ ಹಾಗೂ ಅವನ ಸಾಕ್ಷಿದಾರರ ಜವಾಬನನ್ನು ಪಡೆದುಕೊಂಡ ತರುವಾಯ ಅಥವಾ ಪೋಲಿಸರಿಂದ ತನಿಖೆಯ ವರದಿ ಬಂದ ಅನಂತರ, ಒಂದು ವೇಳೆ ಯಾವುದೇ ಅಪರಾಧ ನಡೆದ ಬಗ್ಗೆ ಅಥವಾ ಪ್ರಕರಣ ಮುಂದುವರಿಸುವ ಬಗ್ಗೆ ಸಾಕಷ್ಟು ಸಾಕ್ಷಾಧಾರಗಳಿಲ್ಲವೆಂಬ ಅಭಿಪ್ರಾಯಕ್ಕೆ ದಂಡಾಧಿಕಾರಿ ಬಂದಿದ್ದಾರೆ, ಅಂಥ ಸಂದರ್ಭದಲ್ಲಿ ದಂಡಾಧಿಕಾರಿ ಈ ಬಗ್ಗೆ ತನ್ನ ಅಭಿಪ್ರಾಯ ಅಥವಾ ಕಾರಣಗಳನ್ನು ಸಾರಂಶದಲ್ಲಿ ಬರೆದಿಡತಕ್ಕದ್ದು.

ಒಮ್ಮೆ ಒಂದು ಫಿರ್ಯಾದನ್ನು ವಜಾಮಾಡಿದ ತರುವಾಯ ಅದೇ ವಿಷಯದ ಬಗ್ಗೆ ಎರಡನೆ ಅಥವಾ ಇನ್ನೊಂದು ಫಿರ್ಯಾದನ್ನು ದಾಖಲು ಮಾಡಲು ಅವಕಾಶವಿದೆ. ಆದರೆ ಮೊದಲನೆಯ ಫಿರ್ಯಾದನ್ನು ಜಾಗರೂಕತೆಯಿಂದ ಪರಿಶೀಲಿಸಿ, ಯೋಗ್ಯ ಕಾರಣಗಳಿಗಾಗಿ ವಜಾ ಮಾಡದಿದ್ದರೆ ಎರಡನೆಯ ಫಿರ್ಯಾದು ಇಂಥ ಸಂದರ್ಭಗಳಲ್ಲಿ ನಡೆಯಲಾರದು. ತೀರ ಅಪವಾದಾತ್ಮಕವಾದ ಪ್ರಸಂಗಗಳಲ್ಲಿ ಮಾತ್ರ ವಜಾ ಮಾಡಿದ ಒಂದನೆಯ ಫಿರ್ಯಾದಿನ ಬಗ್ಗೆ ಎರಡನೆಯದನ್ನು ನೀಡಿ ನಡೆಯಿಸಬಹುದಾದಿದೆ. ನ್ಯಾಯಾಲಯ ನಿರ್ಣಯ ಹಾಗೂ ನ್ಯಾಯ ಆಯೋಗದ ಅಭಿಪ್ರಾಯಗಳು ಈ ಬಗ್ಗೆ ಒಮ್ಮತವಾಗಿಲ್ಲವಾದರೂ, ವಜಾ ಆದ ಒಂದು ಫಿರ್ಯಾದಿನ ಬಗ್ಗೆ ಎರಡನೆ ಫಿರ್ಯಾದು ನೀಡುವ ಅವಕಾಶವಂತೂ ಇದೆ.

ಹಿಂದೂ ಧರ್ಮಶಾಸ್ತ್ರದಲ್ಲಿ ಫಿರ್ಯಾದನ್ನು ವ್ಯವಹಾರಪಾದವೆಂದು ಕರೆಯಲಾಗಿದೆ. ಇವುಗಳ ಹದಿನೆಂಟು ಸ್ಥೂಲ ವಿಧಾನಗಳನ್ನು ಮನು, ಕೌಟಿಲ್ಯ, ಯಾಜ್ಞವಲ್ಕ್ಯ, ನಾರದ, ಬೃಹಸ್ಪತಿ ಇವರು ತಮ್ಮ ಸ್ಮøತಿಗಳಲ್ಲಿ ವರ್ಣಿಸಿದ್ದಾರೆ. ರಾಜ್ಯದ ಶಾಂತಿ ವ್ಯವಸ್ಥೆಗಾಗಿ ರಾಜ ತೆಗೆದುಕೊಳ್ಳಬಹುದಾದ ಕ್ರಮದ ಹೊರತಾಗಿ ಪ್ರಜೆಗಳು ತಮ್ಮತಮ್ಮೊಳಗಿನ ವಿವಾದಗಳ ನಿರ್ಣಯಕ್ಕೆ ಪ್ರಾರಂಭಿಸುವ ಕ್ರಮ ಇದಾಗಿತ್ತು. ಅಪರಾಧಿಕ ವ್ಯಾಜ್ಯಗಳನ್ನೂ ಅದು ಒಳಗೊಂಡಿತ್ತು.

ಉಲ್ಲೇಖಗಳು[ಬದಲಾಯಿಸಿ]

  1. "Legal Complaint - Very Simple Definitions - Lawyer Terms". isaacsandisaacs.com. Retrieved 21 March 2018.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: