ಪ್ರಸನ್ನಸಿಂಹರಾವ್
ಸಿ ಬಿ ಪ್ರಸನ್ನಸಿಂಹರಾವ್ (ಚಾಮರಾಜನಗರ ಭೀಮಸೇನರಾವ್ ಪ್ರಸನ್ನಸಿಂಹರಾವ್) ಅವರು ೯ನೇ ಮಾರ್ಚ್ ೧೯೪೭ರಲ್ಲಿ ಜನಿಸಿದರು ಶಾಲಾದಿನಗಳಲ್ಲೇ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಿ ಕರ್ನಾಟಕ ರಾಜ್ಯ ಶಾಲೆಗಳ ಪ್ರಾತಿನಿಧಿಕ ತಂಡದ ಪರವಾಗಿ ಆಡಿ ತಮ್ಮ ಕ್ರೀಡಾಪ್ರತಿಭೆಯನ್ನು ಮೆರೆದರು. ಮುಂದೆ ಬಿಎಂಎಸ್ ಕಾಲೇಜಿನಲ್ಲಿ ಓದುತ್ತಿರುವಾಗ್ಗೆ ಎಲ್ಲಾ ಕ್ರೀಡೆಗಳಲ್ಲಿ ಮುಂಚೂಣಿಯಲ್ಲಿದ್ದ ಇವರು College Blue ಬಿರುದಿಗೆ ಪಾತ್ರರಾಗಿದ್ದರು. ನಂತರ ಬಸವನಗುಡಿ ಕ್ರಿಕೆಟ್ ಕ್ಲಬ್, ಅಲ್ಲಿಂದ ಸಬ್ ಮೆಟ್ರೊದಲ್ಲಿ ಆಡುತ್ತಾ ಸ್ಪ್ಯಾಟ್ರಾನ್ಸ್ (Spatrons) ತಂಡದಲ್ಲಿ ಖ್ಯಾತ ಕ್ರಿಕೆಟ್ ಪಟು ಜಿ ಆರ್ ವಿಶ್ವನಾಥರೊಂದಿಗೆ ಎರಡು ವರ್ಷಗಳ ಕಾಲ ಹೆಗಲೆಣೆಯಾದರು. ೧೯೬೭-೬೯ ರಲ್ಲಿ ಸಿಟಿ ಕ್ರಿಕೆಟರ್ಸ್ ತಂಡಕ್ಕೆ ಪದಾರ್ಪಣ ಮಾಡಿದ ಇವರು ಬಿ. ಎಸ್. ಚಂದ್ರಶೇಖರ್, ಇ ಎ ಎಸ್ ಪ್ರಸನ್ನ, ಜಿ ಆರ್ ವಿಶ್ವನಾಥ್, ವಿಜಯಕುಮಾರ್, ವಿಜಯಕೃಷ್ಣ ಅವರೊಂದಿಗೆ ಮಿಂಚಿದರು. [೧] ಅದರ ಮುಂದಿನ ವರ್ಷದಲ್ಲಿ ಅಂದರೆ ೧೯೭೦ರಲ್ಲಿ ರಾಜ್ಯ ಕ್ರಿಕೆಟರ್ಸ್ ತಂಡಕ್ಕೆ ಆಯ್ಕೆಯಾದ ಇವರು ವಿ ಸುಬ್ರಹ್ಮಣ್ಯಂರವರ ನಾಯಕತ್ವದಲ್ಲಿ ರಣಜಿ ಟ್ರೋಫಿಗೂ ಆಡಿದರು. [೨] ಅದೇ ವರ್ಷ ಸೌತ್ಝೋನ್ ತಂಡದ ಪರವಾಗಿ ಆಸ್ಟ್ರೇಲಿಯಾ ವಿರುದ್ಧ ಸೆಣಸಿದರು. ಇಂಡಿಯಾ ಕ್ರಿಕೆಟ್ ತಂಡದ ಎಲ್ಲ ಘಟಾನುಘಟಿಗಳೂ ಇದ್ದ ಈ ಸೌತ್ ಝೋನ್ ತಂಡದಲ್ಲಿ ಚೆಂಡೆಸೆತದ ಸರಾಸರಿ (Bowling Average)ಯಲ್ಲಿ ಪ್ರಸನ್ನಸಿಂಹರಾವ್ ಅವರು ಮುಂಚೂಣಿಯಲ್ಲಿದ್ದರೆಂಬುದು ಹೆಮ್ಮೆಯ ವಿಷಯ. ಅಲ್ಲಿದ್ದು ಅವರು ಇನ್ನೂ ಮುನ್ನುಗ್ಗುತ್ತಾ ಹೊಸಹೊಸ ದಾಖಲೆಗಳನ್ನು ಬರೆಯುತ್ತಾ ಹೋಗಬಹುದಿತ್ತು. ಆದರೆ ಕ್ರೀಡಾರಂಗದಲ್ಲಿದ್ದ ರಾಜಕೀಯಕ್ಕೆ ಬೇಸತ್ತು ಅವರು ಪೂರ್ಣಾವಧಿಯ ಕ್ರೀಡಾಕ್ಷೇತ್ರವನ್ನು ತೊರೆದು ಎಚ್ಎಎಲ್ ಕಾರ್ಖಾನೆ ಸೇರಿದರು. ಕಾರ್ಖಾನೆಯ ಯಾಂತ್ರಿಕ ಜೀವನದ ನಡುವೆ ಇದ್ದುಕೊಂಡೂ ತಮ್ಮ ಸುಪ್ತ ಪ್ರತಿಭೆಯನ್ನು ಎಲೆಮರೆಯ ಕಾಯಂತೆ ಪೋಷಿಸಿಕೊಂಡು ಬಂದ ಇವರ ಜೀವನ ಅತ್ಯಂತ ರೋಚಕವಾದುದು. ಎಚ್ಎಎಲ್ ಸೇರಿದ ನಂತರ ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋರ್ಟ್ಸ್ ಕ್ಲಬ್ ಪರವಾಗಿ ಆಡಿದ ಇವರು ಮೊದಲ ನಾಲ್ಕು ವರ್ಷಗಳಲ್ಲೇ ೨೦೦ ವಿಕೆಟ್ಟುಗಳನ್ನು ಗಳಿಸಿ ಹೊಸ ದಾಖಲೆ ಬರೆದರು. ಇವರ ದಾಖಲೆಯನ್ನು ಇನ್ನೂ ಯಾರೂ ಸರಿಗಟ್ಟಲಾಗಿಲ್ಲ.
ಉಲ್ಲೇಖ
[ಬದಲಾಯಿಸಿ]