ವಿಷಯಕ್ಕೆ ಹೋಗು

ಪೌಲ್ ಆರ್ಲಿಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೌಲ್ ಆರ್ಲಿಕ್
Paul Ehrlich c. 1908
ಜನನDid not recognize date. Try slightly modifying the date in the first parameter.
Strehlen, Lower Silesia, German Kingdom of Prussia
ಮರಣDid not recognize date. Try slightly modifying the date in the first parameter. (aged 61)
Bad Homburg, Hesse, Germany
ಪೌರತ್ವಜರ್ಮನ್
ಕಾರ್ಯಕ್ಷೇತ್ರImmunology
ಪ್ರಸಿದ್ಧಿಗೆ ಕಾರಣAutoimmunity
ಗಮನಾರ್ಹ ಪ್ರಶಸ್ತಿಗಳುNobel Prize in Physiology or Medicine (1908)
ಸಂಗಾತಿHedwig Pinkus (1864-1948) (m. 1883; 2 children)
ಮಕ್ಕಳುStephanie and Marianne
ಹಸ್ತಾಕ್ಷರ

ಪೌಲ್ ಆರ್ಲಿಕ್ (14 ಮಾರ್ಚ್ 1854 – 20 ಆಗಸ್ಟ್ 1915) . ಜೀವ ಮತ್ತು ವೈದ್ಯಕ ವಿಜ್ಞಾನಗಳಲ್ಲಿ ಮೊತ್ತಮೊದಲು ರಸಾಯನವಿಜ್ಞಾನವನ್ನು ಬಹಳವಾಗಿ ಬಳಸಿದ ಪ್ರಯೋಗಶೀಲ ಮೇಧಾವಿ, ಜರ್ಮನಿಯ ವೈದ್ಯಕ ಸಂಶೋಧಕ. ಕೋಶರಕ್ಷಣೆಯ (ಇಮ್ಯೂನಿಟಿ) ಮೇಲಿನ ಸಂಶೋಧನೆಗಾಗಿ ಯಲ್ಯಾ ಮೆಷ್ನಿಕಾವ್ನೊಂದಿಗೆ ನೊಬೆಲ್ ಪಾರಿತೋಷಕ (೧೯೦೮) ಪಡೆದವ. ೧೪, ಮಾರ್ಚ್ ೧೮೫೪ರಲ್ಲಿ ಯೆಹೂದಿ ಮನೆತನದಲ್ಲಿ ಜನಿಸಿದ ಇವನಿಗೆ ಚಿಕ್ಕಂದಿನಲ್ಲಿ ಗಣಿತ, ಲ್ಯಾಟಿನ್ನುಗಳನ್ನು ಬಿಟ್ಟರೆ, ಇನ್ನಾವುದರಲ್ಲೂ ಆಸಕ್ತಿ ಇರಲಿಲ್ಲ. ಇವನಿಗೆ ಪರೀಕ್ಷೆಗಳೇ ಹಿಡಿಸುತ್ತಿರಲಿಲ್ಲ. ವೈದ್ಯ ಪದವೀಧರನಾಗಿ (೧೮೭೮).

ರಸಾಯನವಿಜ್ಞಾನ ಇವನಿಗೆ ಬಹುವಾಗಿ ರುಚಿಸಿತು. ತನ್ನವೇ ಯತ್ನಗಳಿಂದ ಆಳವಾದ ಅಭ್ಯಾಸಕ್ಕಿಳಿದ. ಕೆಲವು ವರ್ಷಗಳು ವೈದ್ಯ ಸಂಶೋಧನೆಗಾಗಿ ಚಿಕ್ಕ ಪ್ರಯೋಗಾಲಯವನ್ನು ತೆರೆದು, ಅಲ್ಲಿ ನಡೆಸಿದ ರಕ್ತಕಣಗಳ ಮೇಲಿನ ಶೋಧನೆಯಿಂದ ಬೇಗನೆ ಬೆಳಕಿಗೆ ಬಂದ. ಆಮೇಲೆ ರಾಬರ್ಟ್ ಕಾಕನ ಸೋಂಕು ರೋಗಗಳ ಸಂಸ್ಥೆ ಸೇರಿದ್ದು, ಬರ್ಲಿನ್ನಿನ ಲಸಿಕೆ ಸಂಶೋಧನಾ ಸಂಸ್ಥೆಯ ನಿರ್ದೇಶಕನಾಗಿದ್ದು (೧೮೦೬) ಕೊನೆಗೆ ಇವನಿಗಾಗಿ ಹುಟ್ಟಿಕೊಂಡ ರೋಗ ಚಿಕಿತ್ಸಾ ಪ್ರಯೋಗದ ಸಂಸ್ಥೆಯ ಹಿರಿಯನಾದ. ಜೊತೆಗೆ, ಇದರ ಪಕ್ಕದಲ್ಲಿದ್ದ ಜಾರ್ಜ್ ಸ್ಪೇಯರ್ ಸಂಸ್ಥೆಯಲ್ಲೂ ರಸಾಯನ ರೋಗ ಚಿಕಿತ್ಸೆಯ ನಿರ್ದೇಶಕನಾಗಿದ್ದ. ಮೊದಮೊದಲು ಅನೇಕರಿಗೆ ಇವನು ಹಿಡಿಸದಿದ್ದರೂ ಲಂಡನ್ನಿನ ರಾಯಲ್ ಸೊಸೈಟಿಯ ಹೊರನಾಡಿನ ಸದಸ್ಯತ್ತ್ವವೂ, ಜರ್ಮನ್ ಬಿರುದಾದ ಎಕ್ಸೆಲೆನ್ಸಿಯೂ ದಕ್ಕಿದುವು. ಬ್ಯಾಡ್ ಹೊಂಬರ್ಗಿನಲ್ಲಿ ೨೦ ಆಗಸ್ಟ್ ೧೯೧೫ರಂದು ಈತ ನಿಧನ ಹೊಂದಿದ.


ಮುಖ್ಯವಾಗಿ ಒಂದಾದ ಮೇಲೆ ಒಂದರಂತೆ, ೧೦-೧೫ ವರ್ಷಗಳ ಕಾಲ, ಊತಕಶಾಸ್ತ್ರದೊಂದಿಗೆ ರಕ್ತ ಜೀವಕಣಶಾಸ್ತ್ರ, ಮರೆವಣೆಯೊಂದಿಗೆ ರಾಸಾಯನ ರೋಗ ಚಿಕಿತ್ಸೆಗಳಲ್ಲಿ ಆರ್ಲಿಕನ ಸಂಶೋಧನೆಗಳು ನಡೆದುವು. ಇದರೊಂದಿಗೇ ರಸಾಯನಿಕ ಶೋಧನೆಗಳನ್ನಂತೂ ಬಿಟ್ಟಿದ್ದೇ ಇಲ್ಲ. ಏಕಾಣುಜೀವಿಶಾಸ್ತ್ರ, ಔಷಧಶಾಸ್ತ್ರ, ಏಡಿಗಂತಿ ಸಂಶೋಧನೆಗಳಲ್ಲೂ ಹೆಚ್ಚಿನ ಮುನ್ನಡೆಗಳಿಗೂ ಕಾರಣನಾದ. ಹೊಸ ತಿಳಿವೇ ಆರ್ಲಿಕ್ಕನ ಮೂಲ ಗುರಿಯಾಗಿದ್ದರೂ, ಅವುಗಳಿಂದ ಬಂದ ಫಲಗಳಂತೂ ಒಂದು ನವಯಗವನ್ನೇ ಹುಟ್ಟಿಸಿದಂತಿದ್ದುವು. ಇವುಗಳಲ್ಲಿ ಮುಖ್ಯವಾದ ಕೆಲವನ್ನು ಸೂಚಿಸಬಹುದು. ಊತಕಗಳು ಎತ್ತಿಕೊಳ್ಳುವ ಬಣ್ಣಗಳ ಬಿಡಿಪರೀಕ್ಷೆಗಾಗಿ, ಆಗ ಜರ್ಮನಿಯ ವಿಜ್ಞಾನವೂ ರಾಸಾಯನಿಕ ಕೈಗಾರಿಕೆಗಳೂ ದಂಡಿಯಾಗಿ ತಯಾರಿಸುತ್ತಿದ್ದ, ಕೃತಕ ಬಣ್ಣವಸ್ತುಗಳ ಜೀವಜ್ಞಾನದ ಗುಣಗಳನ್ನು ಕಂಡುಕೊಳ್ಳುತ್ತ ಮೊದಲುಮಾಡಿದ. ಊತಕದ ಜೀವಕಣಗಳು, ರಕ್ತದ ಬಿಳಿಯ ಜೀವಕಣಗಳಲ್ಲಿನ ಬೇರೆ ಬೇರೆ ಕಣಗಳ ವಿಶಿಷ್ಟ ಬಣ್ಣತಳೆವ ಗುಣಗಳನ್ನು ತೋರಿಸಿಕೊಟ್ಟು, ಇಂದಿನ ರಕ್ತಶಾಸ್ತ್ರವನ್ನು (ಹೆಮಟಾಲಜಿ) ಸ್ಥಾಪಿಸಿದ. ನರದ ತಂತುಗಳು ಮೆತಿಲೀನ್ ನೀಲಿಯಿಂದ ಬಣ್ಣವೇರುವ ಹಾಗೆ, ಯಾವ ಅಡ್ಡ ವಿಷ ಪರಿಣಾಮಗಳೂ ಆಗದೆಯೇ, ಬದುಕಿರುವ ಪ್ರಾಣಿಗಳಲ್ಲಿ ಊತಕಗಳಿಗೆ ಬಣ್ಣ ಕೊಡುವ ಜೀವಾಳದ ವರ್ಣಕಗಳನ್ನು (ವೈಟಲ್ ಸ್ಟೇನ್ಸ್) ಕಂಡುಹಿಡಿದ. ಹೊಸ ವಿಧಾನಗಳಲ್ಲಿ ಇದೊಂದು ಮಹಾ ಸಾಧನೆ. ಬೇಕಾದಾಗ ಆಕ್ಸಿಜನ್ ಕೂಡಿಸುವ ಇಲ್ಲವೇ ಕಳೆವ ವರ್ಣವಸ್ತುಗಳನ್ನು ಬಳಸಿ, ಜೀವಿಗಳ ಬೇರೆ ಬೇರೆ ಊತಕಗಳಲ್ಲಿನ ಆಕ್ಸಿಜನ್ ಪುರೈಕೆಯ ಮಟ್ಟಗಳು ಬೇರೆ ಬೇರೆ ಆಗಿರುವುವೆಂದು ತೋರಿಸಿದ. ಆಮ್ಲಕ್ಕೆ ಜಗ್ಗದ ಬಣ್ಣವೇರಿಕೆಯಿಂದ ಕಾಕ್ನ (ಕ್ಷಯದ) ದಂಡಾಣು ಜೀವಿಯನ್ನು ಅವನು ತೋರಿಸಿದ್ದರಿಂದ, ಕ್ಷಯರೋಗ ನಿದಾನದಲ್ಲಿ ಅಗತ್ಯವಾದ ವಿಧಾನವೊಂದು ದೊರಕಿತು.


ಕಾರ್ಖಾನೆ ತಯಾರಕರ ಮದ್ದುಗಳ ಬಲ ಹೆಚ್ಚು ಕಡಿಮೆ ಆಗಿರುತ್ತಿದ್ದುದರಿಂದ ಗಂಟಲ ಮಾರಿಯ (ಡಿಫ್ತೀರಿಯ) ಚಿಕಿತ್ಸೆಯಲ್ಲಿ ವಿಷಹಾರಿಯ (ಆ್ಯಂಟಿಟಾಕ್ಸಿನ್) ಬಳಕೆ ಚೆನ್ನಾಗಿರಲಿಲ್ಲ. ಈ ತೆರನ ರಸಿಕೆರೋಧಕಗಳ (ಆ್ಯಂಟಿಸೀರಂ) ಗುಣಮಟ್ಟವನ್ನು ನಿಗದಿಸುವ, ಈಗಲೂ ಎಲ್ಲೆಲ್ಲೂ ಬಳಕೆಯಲ್ಲಿರುವ ವಿಧಾನವನ್ನು ಆರ್ಲಿಕ್ ಜಾರಿಗೆ ತಂದ. ಪ್ರತಿಜನಕ (ಆ್ಯಂಟಿಜನ್) ಮೆರವಣೆ ಆದ ಮೇಲೆ ಜೀವಿಗಳ ರಸಿಕೆಯಲ್ಲಿ ಹುಟ್ಟಿಕೊಳ್ಳುವ, ರೋಧ ವಸ್ತುಗಳ (ಆ್ಯಂಟಿಬಾಡೀಸ್), ಏಕಾಣುಜೀವಿ ವಿಷಗಳು ಮತ್ತು ಅದೇ ತೆರನ ವಿಷಗಳ ವರ್ತನೆಯ ರೀತಿಯ ಮೇಲೆ ಅವನ ಶೋಧನೆಗಳು ಕೋಶರಕ್ಷಾಶಾಸ್ತ್ರದ (ಇಮ್ಯುನಾಲಜಿ) ಮುಖ್ಯ ಅಡಿಗಲ್ಲಾಗಿದೆ. ಈ ಶೋಧನೆಗಳಿಂದ, ಅದರಲ್ಲೂ ಅವನ ಅಡ್ಡ ಸರಪಣಿ ಸಿದ್ಧಾಂತ ಹುಟ್ಟಿಕೊಂಡಿತು.


ಆರ್ಲಿಕ್ಕನಿಂದ ಜನಿಸಿದ, ಔಷಧಶಾಸ್ತ್ರದ ಶಾಖೆಯಾದ ರಸಾಯನರೋಗಚಿಕಿತ್ಸೆಯ ಕೇಮೋತೆರಪಿ ದೆಸೆಯಿಂದ ಈಗ ಮಹಾರಾಸಾಯನಿಕ ಕೈಗಾರಿಕೆಯೇ ನಳನಳಿಸುತ್ತಿದೆ. ರೋಗಕಾರಣಗಳಾದ ಪರಪಿಂಡಿಗಳನ್ನು ಹಾಳುಗೆಡವಿ, ಅವುಗಳ ಹುಟ್ಟಡಗಿಸುವ ಮದ್ದಿನಿಂದ, ಸೊಂಕು ಹತ್ತಿರುವ ಪ್ರಾಣಿಯ ರೋಗವನ್ನು ವಾಸಿಮಾಡುವುದು ಮೊತ್ತಮೊದಲು ಗೊತ್ತಾದುದು ೧೯೦೪ರಲ್ಲಿ. ಬೈರೊಡಲಿ (ಟ್ರಿಪನೊಸೋಮ್) ರೋಗಾಣುವನ್ನು ಚುಚ್ಚಿ ಹೊಗಿಸಿ ರೋಗ ಹತ್ತಿಸಿದ ಚಿಟ್ಟಿಲಿಗಳಿಗೆ, ಹಾಗೆ ಮದ್ದು ಚುಚ್ಚಿರದವು ರಕ್ತದ ತುಂಬ ರೋಗಾಣುಗಳು ಹೆಚ್ಚಿಕೊಂಡು ಸಾಯುವುದಕ್ಕೆ ೨೪ ತಾಸುಗಳ ಮುಂಚೆ, ಟ್ರಿಪಾನ್ ಕೆಂಪು ಬಣ್ಣವಸ್ತುವನ್ನು ಚರ್ಮದಡಿ ಒಂದೇ ಬಾರಿಗೆ ಚುಚ್ಚಿ ಚಿಕಿತ್ಸೆ ಮಾಡಿದಾಗ ಬದುಕುಳಿದವು. ತನ್ನ ಸಹೋದ್ಯೋಗಿಗಳೊಂದಿಗೆ ಸೇರಿಕೊಂಡು, ಆರ್ಲಿಕ್ ರಾಸಾಯನಿಕಗಳಿಂದ ರೋಗಚಿಕಿತ್ಸೆ ಮಾಡುವ ವಿಧಾನದ ಸೂತ್ರಗಳ ಮೂಲ ವಿಜ್ಞಾನಿಯಾದ. ಸಾಲ್ಪರ್ಸಾನ್ ಇಲ್ಲವೇ 606 ಮದ್ದಾಗಿ ಹಿಂದೆ ಮಾರುತ್ತಿದ್ದ ಸೋಮಲದ ಸಂಯುಕ್ತವಾದ ಆರ್ಸ್ಫಿ ನಮೀನಿನ ನೆಲೆಗಾಣಕ್ಕೆ, ರಾಸಾಯನಿಕ ರೋಗಚಿಕಿತ್ಸೆಯಲ್ಲಿ ಇವನ ಒಂದು ಮಹಾಸಾಧನೆ. ಉಪದಂಶದ (ಸಿಫಿಲಿಸ್) ರೋಗಾಣುಗಳನ್ನು ಪ್ರಯೋಗದಲ್ಲಿ ಚುಚ್ಚಿ ರೋಗ ಹತ್ತಿಸಿದ ಮೊಲಗಳು ಕೋತಿಗಳಲ್ಲಿ ಇದು ವಾಸಿಮಾಡಿತು. ಆಮೇಲೆ ಇನ್ನೂ ಒಳ್ಳೆಯ ಮದ್ದುಗಳು ಬಂದು ಇದನ್ನು ಕೈ ಬಿಟ್ಟರೂ ಆಗಿನ ಕಾಲದಲ್ಲಿ ಉಪದಂಶದ ರೋಗಿಯ ಚಿಕಿತ್ಸೆಗೆ ಇದರ ಹೊರತಾಗಿ ಬೇರೆ ಯಾವ ಮದ್ದೂ ಗೊತ್ತಿರಲಿಲ್ಲವಾದ್ದರಿಂದ ಇದು ಕ್ರಾಂತಿ ಎಬ್ಬಿಸಿತು. ಈ ತೆರನ ರಸಾಯನ ರೋಗ ಚಿಕಿತ್ಸಕ ಮದ್ದುಗಳು ಸಾಮಾನ್ಯವಾಗಿ ರೋಗಿಯ ರೋಗ ತಡೆವ ಯಾಂತ್ರಿಕತೆಗಳೊಂದಿಗೆ ಸಹಕರಿಸುವುದರಿಂದ ಮಾತ್ರ ವಾಸಿಮಾಡುತ್ತವೆ. ಈ ಮದ್ದುಗಳಿಂದ ಚಿಕಿತ್ಸೆ ಕೈಗೂಡದಿದ್ದರೆ, ರೋಗಿಯ ಇಲ್ಲವೇ ಪರಪಿಂಡಿಗಳ ವಿವಿಧ ರೀತಿಯ ಜೀವಿ ವರ್ತನೆಗಳೇ ಕಾರಣ ಇರಬೇಕು.


ಪ್ರಯೋಗಗಳಲ್ಲಿ ಎದ್ದು ಕಂಡುಬಂದ ಕಣ್ಣರಿಕೆಗಳನ್ನು ಬಿಡಿಸಿ ನೋಡುವುದರಿಂದ ಸೂತ್ರಗಳನ್ನು ರೂಪಿಸಬಹುದು ಎನ್ನುತ್ತಾನೆ ಆರ್ಲಿಕ್. ಊತಕಗಳ ಆಮ್ಲಜನಕದ ಬೇಡಿಕೆಯ ಮೇಲಿನ ಪ್ರಯೋಗಗಳಿಂದ (೧೮೮೫) ಜೀವಕಣಗಳಲ್ಲಿ ಬದುಕಿರುವ ಜೀವಿರಸದಲ್ಲಿ (ಪ್ರೊಟೋಪ್ಲಾಸ್ಮ್), ಅವುಗಳ ವಿಶಿಷ್ಟ ಚಟುವಟಿಕೆಗಳನ್ನು ನಿರ್ಧರಿಸುವ, ನಡುವಣ ಒಂದು ವಿಶೇಷ ರಾಸಿತಂಡವೂ, ಇದಕ್ಕೆ ಅಡ್ಡ ಸರಪಣಿಗಳಾಗಿ (ಪಡೆಕಗಳು) ಪರಮಾಣು - ಸಂಮಿಶ್ರಗಳೂ ಇರುವುವೆಂದೂ ಊಹಿಸಿದ. ಈ ಪಡೆಕಗಳು ವಿಶಿಷ್ಟ ನಿಜಗೆಲಸಗಳಲ್ಲಿ ಅಧೀನವಾಗಿದ್ದರೂ ಒಂದೊಂದೂ ಜೀವಕಣದ ಇಡೀ ಬಾಳುವೆಗೆ ಬಲು ಮುಖ್ಯ. ಈ ಕಲ್ಪನೆಗೆ ಆಧಾರ ಕೊಟ್ಟು, ಜೀವವಿಷಗಳೂ ಮದ್ದುಗಳೂ ವರ್ತಿಸುವುದನ್ನು ತರ್ಕಬದ್ಧವಾಗಿ ವಿವರಿಸಿದುವು. ಅವುಗಳೊಂದಿಗೆ ಅಡ್ಡ ಸರಪಣಿಗಳು ಕೂಡಲು ಅವಕಾಶ ಕೊಡುವ ಜೀವಕಣಗಳ ಮೇಲೆ ಮಾತ್ರ ಜೀವವಿಷಗಳು ವರ್ತಿಸುತ್ತವೆ. ಬಿಡಿಯಾಗಿರುವ ಪಡೆಕಗಳಾಗಿ ರೋಧವಸ್ತುಗಳು ಮೈಯಲ್ಲಿ ಹುಟ್ಟಿಕೊಳ್ಳುವುದನ್ನೂ ಇದು ವಿವರಿಸಿತು. ಈಗಲೂ ಈ ಅಡ್ಡ ಸರಪಣಿ ಸೂತ್ರ ನಿಜವೆನಿಸಿದೆ.

ಜರ್ಮನ್, ಇಂಗ್ಲಿಷ್, ಫ್ರೆಂಚ್ ನುಡಿಗಳಲ್ಲಿ, ಆರ್ಲಿಕ್ಕನ ಇಡೀ ಬರೆಹಗಳೂ ಲೇಖನಪಟ್ಟಿಯೂ ನಾಲ್ಕು ಸಂಪುಟಗಳಲ್ಲಿ (೧೯೫೬) ಪ್ರಕಟವಾಗಿವೆ.