ಪೂಮಲೆ ಬೆಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೂಮಲೆ ಬೆಟ್ಟಉಬರಡ್ಕ ಮಿತ್ತೂರು ಗ್ರಾಮಕ್ಕೆ ಸೇರಿದೆ. ಸುಳ್ಯ ನಗರದಿಂದ ಪೂರ್ವಾಭಿಮುಖವಾಗಿ ನೋಡಿದರೆ ಈ ಬೆಟ್ಟ ನಮ್ಮನ್ನು ಆಕರ್ಷಿಸುತ್ತದೆ.

ಲಕ್ಷಣಗಳು[ಬದಲಾಯಿಸಿ]

ದಟ್ಟಾರಣ್ಯದಿಂದ ಕೂಡಿದ ಮಲೆ ಹಲವು ಕಾರಣದಿಂದ ಗಮನೀಯವಾಗಿದೆ. ಈ ಮಿತ್ತೂರು ಗ್ರಾಮ ಪುೂಮಲೆ ಬೆಟ್ಟದಿಂದ ಆವೃತವಾಗಿದೆ, ಈ ಬೆಟ್ಟ ಸದಾ ಪೂ/ಹೂವುಗಳಿಂದ ಕೂಡಿರುತ್ತದೆ. ಆದ್ದರಿಂದ ಅದನ್ನು ಪೂಮಲೆ ಎಂದು ಕರೆಯಲಾಗುತ್ತದೆ. ಉಬರಡ್ಕದ ಪ್ರಧಾನ ಆರಾಧನಾ ದೈವಗಳಾಗಿ ಪೂಮಾಣಿ-ಕಿನ್ನಿಮಾಣಿ ದೈವಗಳು ಗುರುತಿಸಿಕೊಂಡಿವೆ. ಈ ದೈವಗಳಲ್ಲಿ ಹಿರಿಯ ದೈವ ಪೂಮಾಣಿಯಿಂದಾಗಿ ಈ ಬೆಟ್ಟಕ್ಕೆ ಪೂಮಾಲೆ ಎಂದು ಹೆಸರಿಸಲಾಗಿದೆಯಂತೆ.

ಇತಿಹಾಸ[ಬದಲಾಯಿಸಿ]

ಕುಕ್ಕೆಯಿಂದ ಹೊರಟು ಬಂದ ಉಲ್ಲಾಕುಳು ಬೇರೆ ಬೇರೆ ಕಡೆ ನೆಲೆನಿಂತು ಈ ಪೂಮಾಲೆ ಬೆಟ್ಟಕ್ಕೆ ಬರುತ್ತಾರೆ. ಇವರು ಬರುವಾಗ ಮಲೆಕುಡಿಯ ಮುದಿ ದಂಪತಿಗಳನ್ನು ಕಾಣುತ್ತಾರೆ. ನಮ್ಮನ್ನು ಇವರು ನೋಡಿದ್ದು ತಿಳಿಯಬಾರದೆಂದು ಅವರನ್ನು ಅಲ್ಲಿಯೇ ಮಾಯಕ ಮಾಡುತ್ತಾರೆ. ಹಾಗೆ ಮಾಯಕವಾದ ಮಲೆಕುಡಿಯರು ಸುಬ್ಬ-ಸುಬ್ಬಿ ಕಲ್ಲುಗಳಾಗಿ ರೂಪುಗೊಂಡರು. ಈಗಲೂ ಎರಡು ಕಲ್ಲುಗಳು ಪೂಮಲೆಯಲ್ಲಿ ಈ ಹೆಸರಿನಿಂದ ಕರೆದುಕಳ್ಳುತ್ತವೆ. ಉಲ್ಲಾಕುಳು [೧]ಪೂಮಲೆಗೆ ಬಂದು ಚುಬ್ಬಕಲ್ಲು-ಕರಂಡೆಕಲ್ಲು ಎಂಬಲ್ಲಿ ಪ್ರಥತಃ ನೆಲೆಯಾಗುತ್ತಾರೆ. ಪೂಮಲೆಯ ತುದಿಭಾಗ ಸಮತಟ್ಟಾಗಿದ್ದು ಎರಡು ತುದಿಗಳು ಎತ್ತರವಾಗಿದೆ. ಈ ಎರಡು ಎತ್ತರದ ಭಾಗಗಳು ಉಲ್ಲಾಕುಳು[೨] ಕಾಲುಕೊಟ್ಟು ನಿಂತು ದೃಷ್ಟಿ ಹಾಯಿಸಿದಾಗ ಕೆಳಗಿನ ಊರು ಗೋಚರಿಸಿತು. ಪೂಮಲೆಯ ತುದಿಯಲ್ಲಿರುವ ಸ್ಥಳವೂ ಸುಳ್ಯಸೀಮೆಯ ಎಲ್ಲಾ ದೈವಗಳು ನೆಲೆಯಾಗಿರುವ ಸ್ಥಳವೆಂದು ಗುರುತಿಸಿಕೊಳ್ಳುತ್ತದೆ. ಹಾಗಾಗಿಯೇ ಈ ಸ್ಥಳವನ್ನು ದೈವಜಾಲ್ ಎಂದು ಕರೆಯಲಾಗುತ್ತದೆ.

ವಿಶೇಷತೆ[ಬದಲಾಯಿಸಿ]

ಈ ಪೂಮಲೆ ಬೆಟ್ಟದ ತುದಿಯ ಬಂಡೆಕಲ್ಲಿನ ಮೇಲೆ ಶಂಕಾಕಾರದಲ್ಲಿ ಎರಡು ಬಾವಿಗಳಿದ್ದು, ಇವು ಸದಾ ನೀರಿನಿಂದ ಕೂಡಿವೆ. ಇದನ್ನು ಅಗಸ್ತ್ಯರು ತಮ್ಮ ತಪಸ್ಸಿನ ಅಗತ್ಯಕ್ಕಾಗಿ ನಿರ್ಮಿಸಿದ್ದಾರಂತೆ. ಉಬರಡ್ಕದ ದೈವಗಳಿಗೆ ಇಲ್ಲಿಂದ ಪುರಾಣ ಹಿನ್ನೆಲೆಯಲ್ಲಿ ನೀರನ್ನು ತರುವುದು ಸಂಪ್ರದಾಯವಾಗಿದೆ. ಉಲ್ಲಾಕುಳು ಬೆಟ್ಟದಿಂದ ಊರಕಡೆ ಕಣ್ಣಾಯಿಸಿ ತಮಗೆ ನೆಲೆಯೂರಲು ಯೋಗ್ಯ ಸ್ಥಾನಗಳಾಗುವುದೆಂದು ಯೋಚಿಸುತ್ತಾರೆ, ಏಳು ಬಾಣಗಳನ್ನು ಬಿಡುತ್ತಾರೆ. ಅವು ಕ್ರಮವಾಗಿ ಇಂದಿನ ಮಿತ್ತೂರು ಉಲ್ಲಾಕುಳುಗಳ ನೆಲೆಗಳೆಂದು ಕರೆದುಕೊಳ್ಳುವ ಕೊಟ್ಟಾರದ ಧರ್ಮ ಚಾವಡಿ/ಸುಳ್ಯಕೋಡಿ, ದೀಟಿಕೆ/ಮಿತ್ತೂರು ಚಾವಡಿ, ಅಡಿಗಾರ ಮಾಳ್ಯ, ಅಡ್ತಲೆ ಕೊಟ್ಯ/ ಮಡಿಯಾರ್ ಚಾವಡಿ, ಚಾಕಟೆಡಿ, ಒಲಸಿರಿ ಮಂಟಮೆ, ಪಡಂಪಾಡಿ ಮಾಡರಮನೆ ಸ್ಥಳಗಳೆಂದು ಗುರುತಿಸಿಕೊಂಡಿವೆ. ಮಿತ್ತೂರು ಇರ್ವೆರ್ ಉಲ್ಲಾಕುಳು ಮತ್ತು ನಾಯರ್ ದೈವವನ್ನು ಇಂದು 'ಮೂವತ್ತೊಕ್ಲು'ನವರು ಆಚರಿಸಿಕೊಂಡು ಬರುತ್ತಾರೆ.[೩]

ಉಲ್ಲೇಖಗಳು[ಬದಲಾಯಿಸಿ]

  1. http://shodhganga.inflibnet.ac.in/handle/10603/131824
  2. http://shodhganga.inflibnet.ac.in/handle/10603/131921
  3. ಪುಸ್ತಕದ ಹೆಸರು-ಸ್ಥಳ ನಾಮಗಳು ಮತ್ತು ಐತಿಹ್ಯಗಳು,ಪುಟ ಸಂ.೨೪-೨೫, ಲೇಖಕರು-ಪೂವಪ್ಪ ಕಣಿಯೂರು; ಕನ್ನಡ ಸಂಘ ನೆಹರೂ ಮೆಮೋರಿಯಲ್ ಕಾಲೇಜು, ಸುಳ‍್ಯ