ವಿಷಯಕ್ಕೆ ಹೋಗು

ಪುರುಷೋತ್ತಮದಾಸ್ ಠಾಕೂರದಾಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುರುಷೋತ್ತಮದಾಸ್ ಠಾಕೂರದಾಸ್ (1879-1961) ಭಾರತದ ಒಬ್ಬ ವಾಣಿಜ್ಯೋದ್ಯಮಿ, ಸಾರ್ವಜನಿಕ ಧುರೀಣ, ಸಮಾಜ ಸುಧಾರಕ.

ಬದುಕು[ಬದಲಾಯಿಸಿ]

ಗುಜರಾತಿ ಮನೆತನವೊಂದರಲ್ಲಿ 1879ರ ಮೇ 30ರಂದು ಮುಂಬಯಿಯಲ್ಲಿ ಜನಿಸಿದರು. ತಂದೆ ಠಾಕೂರ್‍ದಾಸ್ ಆತ್ಮಾರಾಮ್ ಮೆಹ್ತಾ, ತಾಯಿ ದಿವಾಲಿಬಾಯಿ. ಚಿಕ್ಕಂದಿನಲ್ಲೇ ತಂದೆತಾಯಿಯರನ್ನು ಕಳೆದುಕೊಂಡ ಇವರು ತಂದೆಯ ಸೋದರ ಸಂಬಂಧಿಗಳ ಆಶ್ರಯದಲ್ಲಿ ಬೆಳೆದರು. 1900ರಲ್ಲಿ ಎಲ್ಫಿನ್‍ಸ್ಟನ್ ಕಾಲೇಜಿನಲ್ಲಿ ಓದಿ ಪದವೀಧರರಾದ ಠಾಕೂರ್‍ದಾಸ್ ಮರುವರ್ಷ ವಿವಾಹವಾದರು. ಠಾಕೂರ್‍ದಾಸರ ತಂದೆ ವಕೀಲರಾಗಿದ್ದರು. ತಾವೂ ವಕೀಲಿ ಮಾಡಬೇಕೆಂಬುದು ಇವರ ಇಚ್ಛೆಯಾಗಿತ್ತು. ಆದರೆ ಮನೆತನದ ಕಸಬಾದ ವ್ಯಾಪಾರ ಇವರನ್ನು ಆಕರ್ಷಿಸಿತು. ಹತ್ತಿ ಮತ್ತು ಎಣ್ಣೆಬೀಜದ ವ್ಯಾಪಾರಕ್ಷೇತ್ರವನ್ನು 1901ರಲ್ಲಿ ಪ್ರವೇಶಿಸಿದರು. ಅಭ್ಯಾಸಿಯಾಗಿ ಜೀವನವನ್ನು ಆರಂಭಿಸಿದ ಇವರು 1907ರ ವೇಳೆಗೆ ತಾವಿದ್ದ ಸಂಸ್ಥೆಯ ಹಿರಿಯ ಪಾಲುದಾರರಾದರು. ಇವರು ವ್ಯಾಪಾರದಲ್ಲಿ ಪರಿಣತಿ ಪಡೆದರು. ಪುರುಷೋತ್ತಮದಾಸ್ ಠಾಕೂರ್‍ದಾಸರು 1961ರಲ್ಲಿ ತೀರಿಕೊಂಡರು.

ವ್ಯಾಪಾರರಂಗದಲ್ಲಿನ ಸಾಧನೆಗಳು[ಬದಲಾಯಿಸಿ]

ಸರಕಿಗೆ ನೀರು ಹಾಕುವುದು, ಕಲಬೆರಕೆ ಮಾಡುವುದು ಮುಂತಾದ ಅನೈತಿಕ ಪದ್ಧತಿಗಳನ್ನು ತೊಡೆದುಹಾಕಲು ಠಾಕೂರ್‍ದಾಸರು ವಿಶೇಷವಾಗಿ ಶ್ರಮಿಸಿದರು. ಇವರ ಪ್ರಯತ್ನದಿಂದಾಗಿ ಹತ್ತಿ ವ್ಯಾಪಾರದ ದುಷ್ಟಪದ್ಧತಿಗಳು ತೊಲಗಿದುವು. 1921ರಲ್ಲಿ ಭಾರತೀಯ ಕೇಂದ್ರ ಸಮಿತಿ ಸ್ಥಾಪಿತವಾಗಲು ಇವರು ಬಹುಮಟ್ಟಿಗೆ ಕಾರಣ. ಇವರು ಪೂರ್ವ ಭಾರತ ಹತ್ತಿ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇಂದೂರಿನ ಸಸ್ಯಸಂಶೋಧನ ಸಂಸ್ಥೆಯ ಆಡಳಿತ ಸಮಿತಿಯಲ್ಲೂ ಇದ್ದರು. ಠಾಕೂರ್‍ದಾಸರ ಆಸಕ್ತಿ ಇತರ ಕ್ಷೇತ್ರಗಳಿಗೂ ಹಬ್ಬಿತು. ಕೇವಲ ಇಪ್ಪತ್ತೆಂಟು ವರ್ಷ ಆಗಿದ್ದಾಗ ಠಾಕೂರ್‍ದಾಸರು ಬಾಂಬೇ ಇಂಡಿಯನ್ ಮರ್ಚೆಂಟ್ಸ್ ಚೇಂಬರ್ ಅಂಡ್ ಬ್ಯೂರೋದ (ಇಂದಿನ ಇಂಡಿಯನ್ ಮರ್ಚೆಂಟ್ಸ್ ಚೇಂಬರ್) ಉಪಾಧ್ಯಕ್ಷರಾದರು. 1926ರಲ್ಲಿ ಅಖಿಲ ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳ ಮಹಾಸಂಘದ (ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ) ಸ್ಥಾಪನೆಗೆ ಇವರು ಬಹುಮಟ್ಟಿಗೆ ಕಾರಣ.

ರಾಷ್ಟ್ರೀಯ ಮತ್ತು ರಾಜಕೀಯ ರಂಗದಲ್ಲಿನ ಸಾಧನೆಗಳು[ಬದಲಾಯಿಸಿ]

ಭಾರತದ ಸ್ವಾತಂತ್ರ್ಯ ಚಳವಳಿಗೂ ಭಾರತೀಯ ಕೈಗಾರಿಕೆ ವಾಣಿಜ್ಯಗಳಿಗೂ ಇದ್ದ ಸಂಬಂಧವನ್ನು ಇವರು ಅರಿತುಕೊಂಡಿದ್ದರು. ಇವರು ಭಾಗವಹಿಸಿದ ಸಮಿತಿ, ಸಮ್ಮೇಳನ, ಆಯೋಗ ಮುಂತಾದವುಗಳಲ್ಲಿ ರಾಷ್ಟ್ರೀಯ ದೃಷ್ಟಿಯಿಂದಲೇ ಇವರು ತಮ್ಮ ಅಭಿಪ್ರಾಯಗಳನ್ನೂ ಸಲಹೆಗಳನ್ನೂ ಮಂಡಿಸುತ್ತಿದ್ದರು. ಭಾರತೀಯ ರೈಲ್ವೆಗಳನ್ನು ಕುರಿತು 1920ರಲ್ಲಿ ವರದಿ ಸಲ್ಲಿಸಿದ ಆಕ್‍ವರ್ತ್ ಸಮಿತಿಯ ಸದಸ್ಯರಲ್ಲಿ ಒಬ್ಬರಾಗಿದ್ದ ಠಾಕೂರ್‍ದಾಸರು ಆಗಲೇ ಭಾರತದ ರೈಲ್ವೆಗಳು ಸರ್ಕಾರದ ಆಡಳಿತಕ್ಕೆ ಒಳಪಡಿಸಬೇಕೆಂದು ಹೇಳಿದ್ದರು. ಅವು ಕಂಪನಿಯ ಆಡಳಿತಕ್ಕೆ ಒಳಪಡಬೇಕೆಂಬುದು ಆ ಸಮಿತಿಯ ಇತರ ಭಾರತೀಯ ಸದಸ್ಯರ ಅಭಿಪ್ರಾಯವಾಗಿತ್ತು. 1922ರಲ್ಲಿ ನೇಮಕವಾದ ಸರ್ಕಾರಿ ವೆಚ್ಚ ಖೋತಾ ಸಮಿತಿಯ ಸದಸ್ಯರಾಗಿ ಇವರು ಆಗಿನ ಬ್ರಿಟಿಷ್ ಸರ್ಕಾರದ ಇಂಡಿಯ ಕಛೇರಿ, ರಕ್ಷಣಾಸಿಬ್ಬಂದಿ ಭಾರತೀಯ ಮತ್ತು ಬ್ರಿಟಿಷ್ ಸೈನಿಕರ ನಡುವೆ ಪಡಿತರ ನೀಡುವಿಕೆಯಲ್ಲಿ ಮಾಡಲಾಗುತ್ತಿದ್ದ ಪಕ್ಷಪಾತ ಮುಂತಾದ ವಿಚಾರಗಳನ್ನು ಕುರಿತು ಅಭ್ಯಾಸಪೂರ್ಣವಾದ ಮತ್ತು ಸತ್ಯನಿಷ್ಠವಾದ ಟೀಕೆಗಳನ್ನು ಮಾಡಿದರು. ಎಲ್ಲಕ್ಕಿಂತ ಉಗ್ರವಾಗಿ ಇವರು ಹೋರಾಟ ನಡೆಸಿದ್ದೆಂದರೆ ಭಾರತದ ರೂಪಾಯಿಗೂ ಬ್ರಿಟನ್ನಿನ ಸ್ಟರ್ಲಿಂಗಿಗೂ ನಡುವಣ ವಿನಿಮಯ ದರ ಯಾವುದಿರಬೇಕೆಂಬ ಪ್ರಶ್ನೆಯನ್ನು ಕುರಿತದ್ದು. ರೂಪಾಯಿ-ಸ್ಟರ್ಲಿಂಗ್ ಅನುಪಾತವನ್ನು ಆಗಿನ ಬ್ರಿಟಿಷ್ ಸರ್ಕಾರ ಭಾರತದ ಹಿತವನ್ನು ಕಡೆಗಣಿಸಿ ಬ್ರಿಟನ್ನಿನ ಹಿತಗಳಿಗೆ ಅನುಗುಣವಾಗಿಯೇ ನಿರ್ಧರಿಸುತ್ತಿತ್ತು. 1 ರೂಪಾಯಿಗೆ 1 ಷಿ. 6 ಪೆ. ಸಮನೆಂಬುದು ಅಸಮಂಜಸವೂ ಅನ್ಯಾಯವೂ ಆದ್ದೆಂದು ಠಾಕೂರ್‍ದಾಸರು ವಾದಿಸಿದರು. ಭಾರತದ ಹಣಕಾಸು ಮತ್ತು ಕರೆನ್ಸಿಯನ್ನು ಕುರಿತ ವಿಚಾರಣೆ ನಡೆಸಿ ವರದಿ ಸಲ್ಲಿಸಲು ನೇಮಕವಾಗಿದ್ದ ಆಯೋಗದ (1925) ಸದಸ್ಯರಾಗಿ ಇವರು 1 ಷಿ. 4 ಪೆ. ದರಕ್ಕಾಗಿ ಹೋರಾಡಿದರು. ಇಂಡಿಯನ್ ಮರ್ಚೆಂಟ್ಸ್ ಚೇಂಬರಿನಿಂದ ಭಾರತದ ವಿಧಾನ ಸಭೆಗೆ ಆಯ್ಕೆಯಾಗಿದ್ದ ಠಾಕೂರ್‍ದಾಸರು ಅಲ್ಲೂ ಈ ಹೋರಾಟವನ್ನು ಮುಂದುವರಿಸಿದರು. ಆದರೆ ಇವರ ವಾದಕ್ಕೆ ಅಲ್ಲಿ ಬಹುಮತ ದೊರಕದೆ ಹೋಯಿತು. ಕೆಲವೇ ಮತಗಳಿಂದ ಬಿದ್ದುಹೋಯಿತು. ಇವರು ರಾಜ್ಯ ಪರಿಷತ್ತಿನಲ್ಲೂ (ಕೌನ್ಸಿಲ್ ಆಫ್ ಸ್ಟೇಟ್) ಮುಂಬಯಿಯ ವಿಧಾನ ಪರಿಷತ್ತಿನಲ್ಲೂ ಸದಸ್ಯರಾಗಿದ್ದರು.

ಸಮಾಜಸೇವಾಕ್ಷೇತ್ರದಲ್ಲಿ[ಬದಲಾಯಿಸಿ]

ಠಾಕೂರ್‍ದಾಸರಿಗೆ ಸಮಾಜಸೇವೆಯಲ್ಲೂ ವಿಶೇಷವಾದ ಆಸಕ್ತಿಯಿತ್ತು. 1911ರಲ್ಲಿ ಗುಜರಾತಿನಲ್ಲಿ ಕ್ಷಾಮ ಸಂಭವಿಸಿದಾಗ ಇವರು ಸಂತ್ರಸ್ತರಿಗೆ ನೆರವು ನೀಡಲು ಶ್ರಮಿಸಿದರು. ಜನರು ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಸಹಾಯ ಮಾಡುವುದು ಇವರ ವಿಧಾನ. ಗುಜರಾತಿನ ಗ್ರಾಮಪ್ರದೇಶದಲ್ಲಿ ಇವರು ಶಿಕ್ಷಣ ಸೌಲಭ್ಯ ವಿಸ್ತರಿಸಲು ಕ್ರಮ ಕೈಗೊಂಡರು. ತಾವು ಆರಾಧಿಸುತ್ತಿದ್ದ ದೇಗುಲಕ್ಕೆ ಹರಿಜನರ ಪ್ರವೇಶ ದೊರಕಿಸಿಕೊಟ್ಟದ್ದು ಇವರ ಒಂದು ದೊಡ್ಡ ಸಾಧನೆ. ಆಫ್ರಿಕ ಮತ್ತು ಫೀಜಿಯ ಬ್ರಿಟಿಷ್ ವಸಾಹತುಗಳಲ್ಲಿದ್ದ ಭಾರತೀಯರ ದುಃಸ್ಥಿತಿಯನ್ನು ನಿವಾರಿಸಲು ಇವರು ವಿಶೇಷವಾಗಿ ಶ್ರಮಿಸಿದರು. ಅನ್ಯದೇಶಗಳಲ್ಲಿ ಭಾರತೀಯ ಕೂಲಿಗಾರರನ್ನು ಕರಾರಿನ ಮೇಲೆ ನೇಮಿಸಿಕೊಂಡು ದುಡಿಸುವ ಕ್ರಮವನ್ನು ರದ್ದುಗೊಳಿಸುವ 1916ರ ಅಧಿನಿಯಮ ಜಾರಿಗೆ ಬಂದದ್ದು ಇವರ ಪ್ರಯತ್ನದಿಂದಾಗಿ ಮಾನವನ ಆತ್ಮಗೌರವಕ್ಕೆ ಕುಂದು ತರುವ ಎಲ್ಲ ಕ್ರಮಗಳನ್ನೂ ಇವರು ವಿರೋಧಿಸುತ್ತಿದ್ದರು. ಕೈಗಾರಿಕೆ ವಾಣಿಜ್ಯ ವಲಯಗಳಲ್ಲಿ ವಿಶೇಷ ಗೌರವಾನ್ವಿತರಾಗಿದ್ದ ಠಾಕೂರ್‍ದಾಸರು ಅನೇಕ ಸಂಸ್ಥೆಗಳ ಆಡಳಿತ ಮಂಡಲಿಗಳಲ್ಲಿದ್ದರು.

ಸಂದ ಗೌರವಗಳು[ಬದಲಾಯಿಸಿ]

ಇವರು ಗಳಿಸಿದ ಕೆಲವು ಗೌರವಗಳು ಇವು; ಕೈಸರ್-ಇ-ಹಿಂದ್ ಪದಕ (1907), ಸಿ.ಐ.ಇ. (1919), ಮುಂಬಯಿಯ ಷೆರಿಫ್ ಪದವಿ (1920), ನೈಟ್ ಪದವಿ (1923), ಕೆ.ಬಿ.ಇ. (1944).