ಪುರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪುರುಗಳು ಋಗ್ವೇದದಲ್ಲಿ ಅನೇಕ ಬಾರಿ ಉಲ್ಲೇಖಿಸಲ್ಪಟ್ಟ ಕುಲ ಅಥವಾ ಕುಲಗಳ ಒಕ್ಕೂಟವಾಗಿದ್ದರು. ಋವೇ ೭.೯೬.೨ ಅವರನ್ನು ಸರಸ್ವತಿ ನದಿಯ ತಟದಲ್ಲಿ ಗುರುತಿಸುತ್ತದೆ.  ಪುರುಗಳ ಹಲವಾರು ಬಣಗಳಿದ್ದವು, ಭಾರತರು ಅದರಲ್ಲಿ ಒಬ್ಬರಾಗಿದ್ದರು.

ಪುರುಗಳು ಅನೇಕ ಇತರ ಗುಂಪುಗಳನ್ನು ಭಾರತರ ರಾಜ ಸುದಾಸನ ವಿರುದ್ಧ ಒಟ್ಟುಗೂಡಿಸಿದರು, ಆದರೆ ದಾಶರಾಜ್ಞ ಯುದ್ಧದಲ್ಲಿ ಪರಾಜಿತಗೊಂಡರು (ಋವೇ 7.18, ಇತ್ಯಾದಿ,). ಭಾರತಕ್ಕೆ ಅದರ ಹೆಸರು ಭಾರತ ಅಥವಾ ಭಾರತವರ್ಷವೆಂದು ಬರಲು ಪುರು ರಾಜವಂಶದ ಒಬ್ಬ ವಂಶಸ್ಥ ರಾಜ ಭರತನ ಹೆಸರು ಕಾರಣವಾಗಿದೆ.

ಪ್ರಾಚೀನ ಭಾರತದಲ್ಲಿ ಎರಡು ಮುಖ್ಯ ವೈದಿಕ ಸಂಸ್ಕೃತಿಗಳಿದ್ದವು. ಮೊದಲನೆಯದು ಸರಸ್ವತಿ-ದೃಶದ್ವತಿ ನದಿ ಪ್ರದೇಶದಲ್ಲಿ ಕೇಂದ್ರಿತವಾಗಿತ್ತು. ಇದು ಪುರುಗಳು ಮತ್ತು ಇಕ್ಷ್ವಾಕುಗಳ ಪ್ರಾಬಲ್ಯದಲ್ಲಿತ್ತು. ಎರಡನೆಯದು ಅರಬ್ಬೀ ಸಮುದ್ರದ ಕರಾವಳಿಯ ಉದ್ದಕ್ಕೆ ಮತ್ತು ವಿಂಧ್ಯ ಪರ್ವತಗಳಲ್ಲಿದ್ದ ದಕ್ಷಿಣ ಸಂಸ್ಕೃತಿಯಾಗಿತ್ತು. ಇದರಲ್ಲಿ ತುರ್ವಷರು ಮತ್ತು ಯದುಗಳು ಮತ್ತು ಇನ್ನಷ್ಟು ದಕ್ಷಿಣಕ್ಕೆ ವಿಸ್ತರಿಸಿದ್ದ ಗುಂಪುಗಳು ಪ್ರಬಲವಾಗಿದ್ದವು. ಈ ಉತ್ತರದ ಮತ್ತು ದಕ್ಷಿಣದ ಗುಂಪುಗಳು ಪ್ರಾಬಲ್ಯಕ್ಕಾಗಿ ಪೈಪೋಟಿ ನಡೆಸಿದರು ಮತ್ತು ವೇದಗಳು ಹಾಗೂ ಪುರಾಣಗಳು ಸೂಚಿಸಿದಂತೆ ವಿವಿಧ ರೀತಿಗಳಲ್ಲಿ ಪರಸ್ಪರ ಪ್ರಭಾವ ಬೀರಿದರು. ಉತ್ತರದ ಅಥವಾ ಭರತ ಸಂಸ್ಕೃತಿಯು ಅಂತಿಮವಾಗಿ ಮೇಲುಗೈ ಸಾಧಿಸಿತು, ಮತ್ತು ನಮ್ಮ ದೇಶವನ್ನು ಭರತನ ನಾಡು ಅಥವಾ ಭಾರತವರ್ಷವಾಗಿ ಮತ್ತು ಅದರ ಮುಖ್ಯ ಪ್ರಾಚೀನ ಸಾಹಿತ್ಯಿಕ ದಾಖಲೆಯಾದ ವೇದಗಳ ನಾಡಾಗಿ ಮಾಡಿತು. ಆದರೆ ಸೇನಾ ದೃಷ್ಟಿಯಿಂದ ಯದುಗಳು ಇತಿಹಾಸದಾದ್ಯಂತ ಪ್ರಬಲವಾಗಿ ಉಳಿದರು.[೧]

ಕುರು ಪುರು ರಾಜವಂಶದ ೨೫ ಪೀಳಿಗೆಗಳ ನಂತರ ಜನಿಸಿದನು, ಮತ್ತು ಕುರುವಿನ ೧೫ ಪೀಳಿಗೆಗಳ ನಂತರ ಕೌರವರು ಮತ್ತು ಪಾಂಡವರು ಜನಿಸಿದರು. ಪೌರಾಣಿಕ ಸಂಪ್ರದಾಯದ ಪ್ರಕಾರ, ಕುರುಕ್ಷೇತ್ರ ಯುದ್ಧವು ಮನು ವೈವಸ್ವತನ ೯೫ ಪೀಳಿಗೆಗಳ ನಂತರ ನಡೆಯಿತು.[೨] ಕುರುಗಳ ಪರೀಕ್ಷಿತ ರಾಜ ಮತ್ತು ಮಹಾಪದ್ಮ ನಂದನ ಸಮಯದಲ್ಲಿನ ಕೊನೆಯ ಕುರು ರಾಜನ ನಡುವೆ ೧೦೫೦ ವರ್ಷಗಳಿವೆ ಎಂದು ಪುರಾಣಗಳು ಹೇಳುತ್ತವೆ.[೩]

ಪುರು ರಾಜವಂಶಗಳಲ್ಲಿ ಕೊನೆಯವು

  • ಕೋರವ್ಯ (ಸು. ಕ್ರಿ.ಪೂ. 600-550), ಗೌತಮ ಬುದ್ಧನ ಕಾಲದಲ್ಲಿ.
  • ಧನಂಜಯನು (ಸು. ಕ್ರಿ.ಪೂ. 550-500) ಯುಧಿಷ್ಠಿರ ಪಾಂಡವನ ವಂಶಸ್ಥ ಎಂದು ಹೇಳಲಾಗಿದೆ.
  • ರತ್ಥಪಾಲನು (ಸು. ಕ್ರಿ.ಪೂ. 500-460) ಬೌದ್ಧಧರ್ಮವನ್ನು ಒಪ್ಪಿಕೊಂಡನು.
  • ಪಾಂಡವ ರಾಜವಂಶದ ವಂಶಸ್ಥನಾದ ಪೋರ್ (ರಾಜ ಪೋರಸ್) (ಸು. ಕ್ರಿ.ಪೂ. 320ರ ವರೆಗೆ) ಝೇಲಮ್ ಹಾಗೂ ಚೆನಾಬ್ ನದಿಗಳ ನಡುವಿನ ಪ್ರದೇಶದಲ್ಲಿ ಆಳ್ವಿಕೆ ನಡೆಸಿದನು, ಅಲೆಕ್ಸಾಂಡರ್‍ನ ವಿರುದ್ಧ ಹೋರಾಡಿದನು.
  • ಪೋರಸ್‍ನ ಮಗನಾದ ಮಲಯಕೇತು (ಸು. ಕ್ರಿ.ಪೂ. 320-316) ಗ್ಯಾಬಿಯೆನ್ ಯುದ್ಧದಲ್ಲಿ ಸತ್ತನು.

ಉಲ್ಲೇಖಗಳು[ಬದಲಾಯಿಸಿ]

  1. The Rig Veda and the History of India (Rig Veda Bharata Itihasa) - David Frawley (Vamadeva Shastri), Aditya Prakashan, 2001, xxvii, 364 p, ISBN 8177420399
  2. Time Table Of Yoga, By Georg Feuerstein, Ph.D.
  3. Gods, Sages and Kings: Vedic Secrets of Ancient Civilization, By David Frawley, pp 142
"https://kn.wikipedia.org/w/index.php?title=ಪುರು&oldid=1082899" ಇಂದ ಪಡೆಯಲ್ಪಟ್ಟಿದೆ