ಪುತ್ರಂಜೀವಿ

ವಿಕಿಪೀಡಿಯ ಇಂದ
Jump to navigation Jump to search
ಪುತ್ರಂಜೀವಿ
Putranjiva roxburghii Bra53.png
ಪುತ್ರಂಜೀವ ರಾಕ್ಸ್ ಬರ್ ಗೈ
Egg fossil classification
Kingdom:
plantae
Division:
Class:
Order:
Family:
Genus:
ಪುತ್ರಂಜೀವ

Species
ಹೆಬ್ಬಾಳದಲ್ಲಿರುವ ಪುತ್ರಂಜೀವಿ ಮರದ ಎಲೆಗೆಳು
ಹೆಬ್ಬಾಳದಲ್ಲಿರುವ ಪುತ್ರಂಜೀವಿ ಮರ

ಪುತ್ರಂಜೀವಿಮದ್ಯಮ ಪ್ರಮಾಣದ ಮರ.ಹಿಮಾಲಯದ ತಪ್ಪಲಲ್ಲಿ,ಶ್ರೀಲಂಕಾ,ಮಯನ್ಮಾರ್,ಥೈಲ್ಯಾಂಡ್ ಹಾಗೂ ಬಾಂಗ್ಲಾದೇಶದಲ್ಲಿ ಬೆಳೆಯುತ್ತದೆ.ಕರ್ನಾಟಕದಲ್ಲಿ ನಿತ್ಯಹರಿದ್ವರ್ಣಕಾಡುಗಳಲ್ಲಿ ಕಂಡುಬರುತ್ತದೆ.ಇದೊಂದು ಅಲಂಕಾರ ಸಸ್ಯ. ಇದಕ್ಕೆ ಅಮಾನಿ, ಮೆಣಸಿನಕಾಳೆ ಎಂಬ ಇತರ ಹೆಸರುಗಳಿವೆ. ಇದು ಇಂಡೋ-ಮಲೇಷಿಯಾ ಪ್ರದೇಶಗಳಲ್ಲಿ ವಿಪುಲವಾಗಿ ಬೆಳೆಯುತ್ತದೆ. ಭಾರತದಲ್ಲೇ ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ನಿತ್ಯ ಹರಿದ್ವರ್ಣದ ಭಿನ್ನಲಿಂಗಿಮರ, 8-18 ಮೀ.ಎತ್ತರಕ್ಕೆ ಬೆಳೆಯುತ್ತದೆ. ಭಾರತದ ಎಲ್ಲೆಡೆ ಇದನ್ನು ಅಲಂಕಾರಕ್ಕಾಗಿ ಬೆಳೆಸುವುದುಂಟು.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಇದು ಯೂಫೋರ್ಬಿಯೇಸಿ(Euphorbiaceae)ಕುಟುಂಬಕ್ಕೆ ಸೇರಿದ್ದು,ಪುತ್ರಂಜೀವ ರಾಕ್ಸ್ ಬರ್ ಗೈ(Putranjiva Roxburghii)ಎಂದು ಹೆಸರು.ಭಾರತೀಯರಿಗೆ ಈ ಮರದ ಪರಿಚಯ ಹಿಂದಿನಿಂದಲೂ ಇದೆ.ಪುತ್ರನಿಗೆ ಜೀವದಾನ ಮಾಡುವ ಗುಣ ಇದಕ್ಕೆ ಇದೆ ಎಂಬ ಪ್ರತೀತಿಯಿಂದ ಇದಕ್ಕೆ ಪುತ್ರಂಜೀವ ಎಂದು ನಾಮಕರಣ ಮಾಡಿದ್ದರು.ರಾಕ್ಸ್ ಬರ್ ಗೈ ಎಂಬ ದ್ವಿನಾಮ ೧೮೩೨ ರಲ್ಲಿ ಕಲ್ಕತ್ತಾದ ಸಸ್ಯೋದ್ಯಾನವನದ ಮುಖ್ಯಾಧಿಕಾರಿಯಾಗಿದ್ದ ವಿಲಿಯಂ ರಾಕ್ಸ್ ಬರ್ಗ್ ರ ಗೌರವಾರ್ಧ ಇಡಲಾಗಿದೆ.ಮಲಯಾಳಮ್ ಭಾಷೆಯಲ್ಲಿ 'ಪೂತಿರ್ ಸೀವಾ' ಎಂದು ಕರೆಯುತ್ತಾರೆ.

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ಅಂದವಾದ ನಿತ್ಯಹರಿದ್ವರ್ಣದ ಮರ.ಜೋತುಬಿದ್ದ ಕೊಂಬೆಗಳು.ತೊಗಟೆ ಬೂದುಬಣ್ಣ.ಇದರ ಬೀಜಗಳಿಂದ ಸರ ಪೋಣಿಸಿ ಮಕ್ಕಳ ಕುತ್ತಿಗೆ ಯಾ ಕೈಗೆ ಕಟ್ಟುವ ಪದ್ಧತಿ ಇದೆ.ದಾರುವು ಒತ್ತು ಕಣ ರಚನೆ ಹೊಂದಿದ್ದು,ಗಡುಸಾಗಿರುತ್ತದೆ.ಇದರ ತೊಗಟೆ ಬೂದು ಬಿಳಿ ಮಿಶ್ರಬಣ್ಣದ್ದು. ಎಲೆಗಳು 5-10 ಸೆಂ.ಮೀ. ಉದ್ದದವು ದೀರ್ಘವೃತ್ತಾಕಾರದವೂ ಆಗಿವೆ. ಕೆಲವೊಮ್ಮೆ ಅಂಡವೃತ್ತಾಕಾರ ಹಾಗೂ ಬಲ್ಲೆಯಾಕಾರದವೂ ಆಗಿರುವುದುಂಟು. ಬಣ್ಣ ಹೊಳೆಯುವ ಕಡು ಹಸುರು ಹೂಗಳು ತುಂಬಾ ಚಿಕ್ಕವು; ಇವುಗಳ ಬಣ್ಣ ಹಳದಿ. ಗಂಡು ಹೂಗಳು ಒತ್ತೊತ್ತಾದ ಗೊಂಚಲುಗಳಲ್ಲಿ ಅರಳುವುವು. ಹೆಣ್ಣು ಹೂಗಳು ಒಂಟಿಯಾಗಿರಬಹುದು ಇಲ್ಲವೇ 2-3 ಹೂಗಳ ಗುಂಪುಗಳಲ್ಲಿರಬಹುದು. ಫಲ ಹಸುರು ಬಣ್ಣದ ಡ್ರೂಪ್ 15-18 ಮಿ. ಮೀ. ಉದ್ದ ಇದೆ. ತುದಿ ಚೂಪಾಗಿದೆ.

ಬೆಳವಣಿಗೆ[ಬದಲಾಯಿಸಿ]

ಪುತ್ರಂಜೀವಿ ಮರಗಳು ಸಾಮಾನ್ಯವಾಗಿ ನದಿಗಳ ಉದ್ದಕ್ಕೂ ಇರುವ ಮೆಕ್ಕಲುಮಣ್ಣಿನಲ್ಲೋ ಜೌಗು ಮಣ್ಣಿನಲ್ಲೇ ನಿತ್ಯ ಹರಿದ್ವರ್ಣದ ಕಾಡುಗಳಲ್ಲೋ ಬೆಳೆಯುತ್ತದೆ. ಶುಷ್ಕ ಪ್ರದೇಶಗಳಲ್ಲಿ ಇವುಗಳ ಬೆಳವಣಿಗೆ ಕುಂಠಿತವಾಗಿರುತ್ತದೆ. ಮಳೆಗಾಲದಲ್ಲಿ ಬೀಜಗಳ ಮೂಲಕ ವರ್ಧಿಸುವುವು. ಜಿಂಕೆ ಮತ್ತು ಬಾವಲಿಗಳ ಮೂಲಕ ಇವುಗಳ ಬೀಜ ಪ್ರಸಾರ ಕ್ರಿಯೆ ನಡೆಯುತ್ತದೆ ಎನ್ನಲಾಗಿದೆ. ನರ್ಸರಿಯಲ್ಲಿ ಬೆಳೆಸಿದ ಒಂದೆರಡು ವರ್ಷಗಳ ಸಸಿಗಳಿಂದ ಅವುಗಳನ್ನು ಬೆಳೆಸುತ್ತಾರೆ. ಮಳೆಗಾಲದಲ್ಲಿ ಇದರ ನಾಟಿ ಕೆಲಸವನ್ನು ಚೆನ್ನಾಗಿ ನಡೆಸಬಹುದು. ಕಠಿಣ ಹಿಮ ಮತ್ತು ನೀರಿನ ಅಭಾವಗಳಿಗೆ ಇದು ಸೂಕ್ಷ್ಮ ಸಂವೇದಿಯಾಗಿದೆ.

ಉಪಯೋಗಗಳು[ಬದಲಾಯಿಸಿ]

ಮುಖ್ಯವಾಗಿ ಅಲಂಕಾರಕ್ಕೆ ನೆಟ್ಟು ಬೆಳೆಸುತ್ತಾರೆ.ಎಲೆಗಳಿಂದ ಶೀತಾಪಹಾರಿ ಕಷಾಯ ತಯಾರಿಸುತ್ತಾರೆ.ಬೀಜಗಳಿಂದ ಎಣ್ಣೆ ತೆಗೆದು ಬೆಳಕು ಉರಿಸಲು ಉಪಯೋಗಿಸುತ್ತಾರೆ.ಇದರ ಕಟ್ಟಿಗೆ ಬೂದು ಬಣ್ಣದ್ದಾಗಿರುತ್ತದೆ. ಅಲ್ಲದೆ, ಇದು ಗಟ್ಟಿಯಾಗಿಯೂ, ತೂಕವಾಗಿಯೂ ಇರುವುದು. ಇದು ಬಹುಕಾಲದವರೆಗೆ ಬಾಳಿಕೆ ಬರುತ್ತದೆ. ಇದರ ಭಾರ 586-785 ಕೆ.ಜಿ. ಕ್ಯೂಬಿಕ್ ಮೀ. ಆದ್ದರಿಂದ ಇದನ್ನು ಮನೆ ಕಟ್ಟುವುದಕ್ಕೆ ವ್ಯವಸಾಯದ ಉಪಕರಣಗಳಿಗೆ ಆಯುಧಗಳ ಹಿಡಿಕೆಗಳಿಗೆ ಮತ್ತು ಕಡೆತದ ಸಾಮಾನುಗಳಿಗೆ ಉಪಯೋಗಿಸುತ್ತಾರೆ. ಇದರ ಎಲೆ ಮತ್ತು ಬೀಜಗಳಿಂದ ನೆಗಡಿ ಮತ್ತು ಜ್ವರದ ಬಾಧೆಯ ಉಪಶಮನಕ್ಕಾಗಿ ಕಷಾಯ ತಯಾರಿಸುವುದುಂಟು. ಸಂಧಿವಾತ ಚಿಕಿತ್ಸೆಗೂ ಉಪಯೋಗಿಸುವುದಿದೆ. ಹಸುಗಳ ಗಂಟಲು ಊದಿಕೊಂಡಾಗ ಇದರ ಎಲೆಗಳ ಲೇಪನವನ್ನು ಹಚ್ಚುವ ಕ್ರಮ ಬಿಹಾರದಲ್ಲು ರೂಢಿಯಲ್ಲಿದೆ. ಇದರ ಎಲೆಗಳನ್ನು ಮೇವಿಗಾಗಿ ಉಪಯೋಗಿಸುತ್ತಾರೆ. ಇದರ ಬೀಜಗಳಿಂದ ಸರಗಳನ್ನು ಜಪಮಾಲೆಗಳನ್ನು ತಯಾರಿಸುವುದಿದೆ

ಅಧಾರ ಗ್ರಂಥಗಳು[ಬದಲಾಯಿಸಿ]

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ ೨.ಹಸಿರು ಹೊನ್ನು.ಬಿ.ಜಿ.ಎಲ್.ಸ್ವಾಮಿ

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಬಾಹ್ಯಸಂಪರ್ಕಗಳು[ಬದಲಾಯಿಸಿ]