ಪಿಎಸ್‌ಎಲ್‌ವಿ– ಸಿ37

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಉಡಾವಣಾ ವೇದಿಕೆಯಲ್ಲಿ ಪಿಎಸ್‌ಎಲ್‌ವಿ ವಾಹನ
ಪಿಎಸ್‌ಎಲ್‌ವಿ: ಸಿ–37
 • ಒಟ್ಟು ತೂಕ :3200ಕೆಜಿ
 • ರಾಕೆಟ್ ಎತ್ತರ : 44.4 ಮೀಟರ್
 • ಸುತ್ತಳತೆ :2.8 ಮೀಟರ್
 • ಹಂತ : 4
 • ಮೊದಲ ಉಡಾವಣೆ :ಸೆಪ್ಟಂಬರ್ 20, 1993
 • ಕಕ್ಷೆಗೆ ಸೇರಿದ ುಪಗ್ರಹಗಳು : 104
 • ಭಾರತದ ಉಪಗ್ರಹಗಳು :3
 • ವಿದೇಶೀ ಉಪಗ್ರಹಗಳು 101
 • ಸೂರ್ಯಸ್ಥಾಯೀ ಕಕ್ಷೆ 5ತ್ತರ :505 ಕಿಮೀ.
 • ಉಪಗ್ರಹಗಳ ಒಟ್ಟು ತೂಕ : 1378 ಕೆ.ಜಿ.
 • ಕಾರ್ಯಾಚರಣೆಯ ಅವಧಿ: 28.40ನಿಮಿಷ

ಏಕಕಾಲಕ್ಕೆ 104 ಉಪಗ್ರಹಗಳು ಕಕ್ಷೆಗೆ[ಬದಲಾಯಿಸಿ]

 • ಶ್ರೀಹರಿಕೋಟಾದಿಂದ ಒಂದೇ ರಾಕೆಟ್‌ನಲ್ಲಿ ಏಕಕಾಲಕ್ಕೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಸೂರ್ಯಸ್ಥಾಯಿ ಕಕ್ಷೆಗೆ ಸೇರಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ/ಇಸ್ರೊ) ಬುಧವಾರ ವಿಶ್ವ ದಾಖಲೆ ಬರೆದಿದೆ.
 • ಈವರೆಗೆ, 2014ರಲ್ಲಿ ಒಂದೇ ರಾಕೆಟ್‌ನಲ್ಲಿ 37 ಉಪಗ್ರಹಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ್ದ ರಷ್ಯಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹೆಸರಿನಲ್ಲಿ ಈ ದಾಖಲೆ ಇತ್ತು. 2016ರ ಜೂನ್‌ 22ರಂದು ಒಂದೇ ರಾಕೆಟ್‌ನಲ್ಲಿ 20 ಉಪಗ್ರಹಗಳನ್ನು ಇಸ್ರೊ ಕಕ್ಷೆಗೆ ಸೇರಿಸಿತ್ತು. ಅಷ್ಟು ಉಪಗ್ರಹಗಳನ್ನು ಇಸ್ರೊ ಒಮ್ಮೆಲೇ ಕಕ್ಷೆಗೆ ಸೇರಿಸಿದ್ದು ಅದೇ ಮೊದಲು.
 • ಇಸ್ರೊದ ಧ್ರುವಗಾಮಿ ಉಪಗ್ರಹ ಉಡಾವಣಾ ವಾಹನ (ಪಿಎಸ್‌ಎಲ್‌ವಿ) ಸಿ–37 ಇಲ್ಲಿನ ಸತೀಶ್‌ ಧವನ್ ಬಾಹ್ಯಕಾಶ ಕೇಂದ್ರದಿಂದ ಬುಧವಾರ ಬೆಳಿಗ್ಗೆ 9.28ಕ್ಕೆ ಪಯಣ ಆರಂಭಿಸಿತು.[೧]

28 ನಿಮಿಷಗಳ ಕಾರ್ಯಾಚರಣೆ[ಬದಲಾಯಿಸಿ]

 • ಸೂರ್ಯಸ್ಥಾಯಿ ಕಕ್ಷೆಯಲ್ಲಿ 505 ಕಿ.ಮೀ ಎತ್ತರಕ್ಕೆ ತಲುಪಿದ ತಕ್ಷಣ ಪಿಎಸ್‌ಎಲ್‌ವಿ ಮೊದಲು ಭಾರತದ ಕಾಸ್ಟ್ರೊಸ್ಯಾಟ್‌–2 ಉಪಗ್ರಹವನ್ನು ಕಕ್ಷೆಗೆ ಸೇರಿಸಿತು.  714 ಕೆ.ಜಿ ತೂಕವಿದ್ದ ಈ ಉಪಗ್ರಹ ಈ ಕಾರ್ಯಾಚರಣೆಯ ಪ್ರಮುಖ ಪಯಣಿಗ. ನಂತರ ಭಾರತದ ಐಎನ್‌ಎಸ್–1ಎ ಮತ್ತು ಐಎನ್‌ಎಸ್ –1ಬಿ ನ್ಯಾನೊ ಉಪಗ್ರಹಗಳನ್ನು ಅದೇ ಕಕ್ಷೆಗೆ ಸೇರಿಸಿತು. ನಂತರ ಉಳಿದ 101 ಉಪಗ್ರಹಗಳನ್ನು ಒಂದರ ನಂತರ ಒಂದರಂತೆ ಕಕ್ಷೆಗೆ ಸೇರಿಸಿತು.
 • ಉಡಾವಣೆ ಆದ ನಂತರದ 17ನೇ ನಿಮಿಷ 29 ಸೆಕೆಂಡ್‌ನಲ್ಲಿ ಕಾಸ್ಟ್ರೊಸ್ಯಾಟ್‌ –2 ಕಕ್ಷೆ ಸೇರಿತು. ಐಎನ್‌ಎಸ್‌–1ಎ ಮತ್ತು 1ಬಿಗಳು ಕ್ರಮವಾಗಿ 17ನೇ ನಿಮಿಷ 39 ಸೆಕೆಂಡ್‌ ಮತ್ತು 40ನೇ ಸೆಕೆಂಡ್‌ನಲ್ಲಿ ಕಕ್ಷೆಗೆ ಸೇರಿದವು. 18ನೇ ನಿಮಿಷ 32 ಸೆಕೆಂಡ್‌ನಲ್ಲಿ ಆರಂಭವಾಗಿ 28ನೇ ನಿಮಿಷ 42 ಸೆಕೆಂಡ್‌ನ ಅವಧಿಯಲ್ಲಿ (ಒಟ್ಟು 590 ಸೆಕೆಂಡ್‌) ಉಳಿದ 101 ನ್ಯಾನೊ ಉಪಗ್ರಹಗಳು ಕಕ್ಷೆಗೆ ಸೇರಿದವು. ಉಡಾವಣೆ ಆದಾಗಿನಿಂದ ಕೊನೆಯ ಉಪಗ್ರಹ ಕಕ್ಷೆಗೆ ಸೇರಿದವರೆಗಿನ ಕಾರ್ಯಾಚರಣೆಯ ಒಟ್ಟು ಅವಧಿ 28 ನಿಮಿಷ 42 ಸೆಕೆಂಡ್‌.

3200 ಕೆ.ಜಿ.ತೂಕದ ಭಾರಿ ರಾಕೆಟ್‌[ಬದಲಾಯಿಸಿ]

 • ಸಿ–37, ಪಿಎಸ್‌ಎಲ್‌ವಿ ಸರಣಿಯಲ್ಲೇ ಅತ್ಯಂತ ದೊಡ್ಡ ರಾಕೆಟ್‌. ಒಟ್ಟು 44.4 ಮೀಟರ್ ಎತ್ತರವಿದ್ದ ಈ ರಾಕೆಟ್‌ 320 ಟನ್‌ ತೂಕವಿತ್ತು. ಭಾರಿ ತೂಕವನ್ನು ಹೊತ್ತು ನೆಲದಿಂದ ಜಿಗಿಯಲು ಹೆಚ್ಚು ಶಕ್ತಿ ಬೇಕಾಗುತ್ತದೆ. ಇದಕ್ಕಾಗಿ ರಾಕೆಟ್‌ಗೆ ಹೆಚ್ಚುವರಿಯಾಗಿ ನಾಲ್ಕು/ಆರು/ಎಂಟು ಸಣ್ಣ ರಾಕೆಟ್‌ಗಳನ್ನು ಜೋಡಿಸಿರಲಾಗುತ್ತದೆ. ಇವನ್ನು ಸ್ಟ್ರಾಪ್‌ ಆನ್‌ಗಳು ಎಂದು ಕರೆಯಲಾಗುತ್ತದೆ. ಇಂತಹ ಎಂಜಿನ್‌ಗಳ ಸಂಯೋಜನೆಗೆ ‘ಎಕ್ಸ್‌ಎಲ್‌’ ಎಂದು ಕರೆಯಲಾಗುತ್ತದೆ. ಇಸ್ರೊ ಈವರೆಗೆ ಎಕ್ಸ್‌ಎಲ್‌ ವ್ಯವಸ್ಥೆ ಇದ್ದ 15 ಪಿಎಸ್‌ಎಲ್‌ವಿಗಳನ್ನು ಬಳಸಿತ್ತು. ಸಿ–37 ಅಂತಹ 16ನೇ ರಾಕೆಟ್‌.

ಇಸ್ರೊ ಸಾಮರ್ಥ್ಯ[ಬದಲಾಯಿಸಿ]

 • 3–4 ಕೆ.ಜಿ ತೂಕದ 400 ನ್ಯಾನೊ ಉಪಗ್ರಹಗಳನ್ನು ಒಂದೇ ರಾಕೆಟ್‌ನಲ್ಲಿ ಕಕ್ಷೆಗೆ ಸೇರಿಸುವ ಸಾಮರ್ಥ್ಯ ಇಸ್ರೊಗೆ ಇದೆ. ಇಸ್ರೊ ಹೊಸ ತಂತ್ರಜ್ಞಾನವನ್ನೇನೂ ಬಳಸಿಕೊಂಡಿಲ್ಲ. ಆದರೆ ಈಗಿರುವ ತಂತ್ರಜ್ಞಾನದಲ್ಲೇ ಎಂತಹ ಅದ್ಭುತವನ್ನು ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದೆ’ ಎಂದು ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಜಿ.ಮಾಧವನ್ ನಾಯರ್‌ ಹೇಳಿದ್ದಾರೆ.[೨][೩][೪]

ಪ್ಲಾನೆಟ್‌ ಲ್ಯಾಬ್ಸ್ ಇಂಕ್‍ನ ಉಪಗ್ರಹಗಳು[ಬದಲಾಯಿಸಿ]

 • ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಬುಧವಾರ ನಭಕ್ಕೆ ಸೇರಿಸಿದ 104 ಉಪಗ್ರಹಗಳಲ್ಲಿ 96 ನ್ಯಾನೊ ಉಪಗ್ರಹಗಳು ಅಮೆರಿಕದ ಖಾಸಗಿ ಕಂಪೆನಿಗಳದ್ದು. ಅವುಗಳಲ್ಲಿ 88 ಉಪಗ್ರಹಗಳು ಅಮೆರಿಕದ ‘ಪ್ಲಾನೆಟ್‌ ಲ್ಯಾಬ್ಸ್ ಇಂಕ್’ ಎಂಬ ಖಾಸಗಿ ಕಂಪೆನಿಯದ್ದು. 2010ರಲ್ಲಿ ಆರಂಭವಾದ ಈ ಸಂಸ್ಥೆ, ಉಪಗ್ರಹಗಳಿಂದ ಭೂಮಿಯ ಚಿತ್ರಗಳನ್ನು ತೆಗೆದುಕೊಡುವ ಸೇವೆ ನೀಡುತ್ತದೆ. ಹೆಚ್ಚು ಸ್ಪಷ್ಟವಾದ ಚಿತ್ರಗಳಿಗೆ ಈ ಕಂಪೆನಿ ಹೆಸರುವಾಸಿಯಾಗಿದೆ. ಬುಧವಾರ ಕಕ್ಷೆಗೆ ಸೇರಿದ 88 ಉಪಗ್ರಹಗಳೂ ಸೇರಿ, ಪ್ಲಾನೆಟ್‌ ಲ್ಯಾಬ್ಸ್‌ನ ಒಟ್ಟು 143 ಉಪಗ್ರಹಗಳು ಈಗ ಕಕ್ಷೆಯಲ್ಲಿವೆ. ‘ಕಾರ್ಖಾನೆಗಳು, ಗಣಿ ಕಂಪೆನಿಗಳು, ಬೃಹತ್‌ ಜಮೀನು ಇರುವ ಕೃಷಿಕರು ನಮ್ಮಿಂದ ಚಿತ್ರಗಳನ್ನು ಖರೀದಿಸುತ್ತಾರೆ. ವಿಸ್ತಾರವಾದ ತಮ್ಮ ಸ್ವತ್ತಿನ ಮೇಲೆ ನಿಗಾ ಇಡುವ ಸಲುವಾಗಿ ಇಂತಹ ಚಿತ್ರಗಳ ಮೊರೆ ಹೋಗುತ್ತಾರೆ. ಬೇಹುಗಾರಿಕೆಗೆ ನಮ್ಮ ಚಿತ್ರಗಳನ್ನು ಬಳಸಿಕೊಳ್ಳುವವರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ’ ಎಂದು ಪ್ಲಾನೆಟ್‌ ಲ್ಯಾಬ್ಸ್‌ ಹೇಳಿದೆ.

ಡವ್‌ಗಳು[ಬದಲಾಯಿಸಿ]

 • ಪ್ಲಾನೆಟ್ ಲ್ಯಾಬ್ಸ್‌ ಈ ಕ್ಯಾಮೆರಾ ಉಪಗ್ರಹಗಳನ್ನು ಡವ್‌ಗಳೆಂದು ಕರೆದಿದೆ. ಕೇವಲ 4.7 ಕೆ.ಜಿ ತೂಕ ಇರುವ ಈ ಉಪಗ್ರಹಗಳು ಪಕ್ಷಿಯನ್ನು ಹೋಲುತ್ತವೆ. ಬುಧವಾರ ಕಕ್ಷೆಗೆ ಸೇರಿಸಿದ 88 ಡವ್‌ ಉಪಗ್ರಹಗಳು ಮೂಲತಃ ಹೆಚ್ಚು ಸ್ಪಷ್ಟವಾದ (ರೆಸಲ್ಯೂಶನ್) ಚಿತ್ರಗಳನ್ನು ಕಳುಹಿಸುವ ಕ್ಯಾಮೆರಾಗಳಾಗಿವೆ. ಅದರ ಜತೆಯಲ್ಲೇ ಕ್ಯಾಮೆರಾ ದಿಕ್ಕನ್ನು ಬದಲಿಸುವ ಮತ್ತು ಚಿತ್ರಗಳನ್ನು ಭೂಮಿಗೆ ಕಳುಹಿಸುವ ಉಪಕರಣಗಳು ಇದರಲ್ಲಿವೆ. ಕೆಲಸ ನಿರ್ವಹಿಸಲು ಅಗತ್ಯವಾದ ಶಕ್ತಿಯನ್ನು ಸೂರ್ಯನ ಬೆಳಕಿನ ಮೂಲಕ ಪಡೆಯಲು ಸೌರಫಲಕಗಳನ್ನು ಇವುಗಳಿಗೆ ಅಳವಡಿಸಲಾಗಿದೆ

ಸೂರ್ಯಸ್ಥಾಯಿ ಕಕ್ಷೆ[ಬದಲಾಯಿಸಿ]

 • ಇದು ಉಪಗ್ರಹಗಳು ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸುತ್ತಿಕೊಂಡು ಬರುವ ಕಕ್ಷೆ. ಇವು ನಿಗದಿತ ಪಥದಲ್ಲಿ ಸುತ್ತುತಲೇ ಇರುತ್ತವೆ. ಭೂಸ್ಥಿರ ಉಪಗ್ರಹಗಳು ಪ್ರತಿ ಕ್ಷಣವೂ ಒಂದೇ ಸ್ಥಳವನ್ನು ಕೇಂದ್ರೀಕರಿಸಿರುತ್ತವೆ. ಆದರೆ ಸೂರ್ಯಸ್ಥಾಯಿ ಕಕ್ಷೆಯಲ್ಲಿರುವ ಉಪಗ್ರಹಗಳು ದಿನವೊಂದರ ಒಂದು ಸಮಯದಲ್ಲಿ ಹಾದುಹೋಗುವ ಜಾಗವನ್ನು ಮರುದಿನವೂ ಅದೇ ಸಮಯದಲ್ಲಿ ಹಾದು ಹೋಗುತ್ತದೆ.
 • ಪ್ಲಾನೆಟ್‌ ಲ್ಯಾಬ್ಸ್‌ ಇಂಕ್‌ನ 88 ಡವ್ ಕ್ಯಾಮೆರಾ ಉಪಗ್ರಹಗಳೂ ಭೂಮಿಯಿಂದ 505 ಕಿ.ಮೀ ಎತ್ತರದ ಸೂರ್ಯ ಸ್ಥಾಯಿ ಕಕ್ಷೆಯಲ್ಲಿ ಇರಲಿವೆ. ಕಂಪೆನಿಯ ಉಳಿದ ಉಪಗ್ರಹಗಳು ಬೇರೆ ಬೇರೆ ಎತ್ತರದ ಸೂರ್ಯಸ್ಥಾಯಿ ಕಕ್ಷೆಯಲ್ಲಿ ಇರಲಿವೆ. ಕಡಿಮೆ ಎತ್ತರದಲ್ಲಿರುವ ಉಪಗ್ರಹಗಳು ನೀಡುವ ಚಿತ್ರಗಳ ಸ್ಪಷ್ಟತೆ ಹೆಚ್ಚಿರಲಿದೆ.
 • ಹೀಗೆ ಒಂದರ ಪಕ್ಕದಲ್ಲಿ ಒಂದರಂತೆ 88 ಡವ್‌ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಕಕ್ಷೆಗೆ ಸೇರಿಸಿದೆ. ಇವು ಈಗ ಸೂರ್ಯ ಸ್ಥಾಯಿ ಕಕ್ಷೆಯಲ್ಲಿ ಸಂಚರಿಸಲಿವೆ
 • 143- ಕಕ್ಷೆಯಲ್ಲಿರುವ ಸಂಸ್ಥೆಯ ಉಪಗ್ರಹಗಳ ಸಂಖ್ಯೆ
 • 88- ಬುಧವಾರ ಕಕ್ಷೆಗೆ ಸೇರಿದ ಪ್ಲಾನೆಟ್ ಸಂಸ್ಥೆಯ ಉಪಗ್ರಹಗಳ ಸಂಖ್ಯೆ

ಉಪಗ್ರಹಗಳ ವಿವರ[ಬದಲಾಯಿಸಿ]

 • ಭಾರತ :3,
 • ಅಮೆರಿಕ: 96,
 • ಇಸ್ರೇಲ್ : 1,
 • ಪಕಿಸ್ತಾನ : 1,
 • ನೆದರ್ಲೆಂಡ್ :1,
 • ಸ್ವಿಟ್‍ಜರ್‍ಲೆಂಡ್ :1,

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. "POLAR SATELLITE LAUNCH VEHICLE". Archived from the original on 2016-12-22. Retrieved 2017-02-16.
 2. ISRO sets space record: Feb 15, 2017
 3. ISRO PSLV-37 rocket launch:
 4. ಇಸ್ರೊ ವಿಶ್ವ ವಿಕ್ರಮ;16 Feb, 2017
 5. ಆಧಾರ: ಇಸ್ರೊ, ಪ್ಲಾನೆಟ್‌ ಲ್ಯಾಬ್ಸ್‌ ಇಂಕ್
 6. "ಭೂಮಿ ಮೇಲೆ ದೃಷ್ಟಿ ನೆಟ್ಟ ಪ್ಲಾನೆಟ್‌ ಲ್ಯಾಬ್ಸ್;16 Feb, 2017". Archived from the original on 2017-02-15. Retrieved 2017-02-17.