ಪಾಲಘಾಟ್
ಪಾಲಘಾಟ್ ಭಾರತದ ಕೇರಳ ರಾಜ್ಯದ ಒಂದು ಜಿಲ್ಲೆ, ತಾಲ್ಲೂಕು ಹಾಗೂ ಇವುಗಳ ಆಡಳಿತ ಕೇಂದ್ರ. ಪಾಲಕ್ಕಾಡು ಎಂಬುದು ಅಲ್ಲಿಯ ಹೆಸರು. ಪಾಲ್ (ಹಾಲು) ಮತ್ತು ಕಾಟ್ಟು (ಕಾಡು) ಎಂಬ ಮಲೆಯಾಳಿ ಶಬ್ದಗಳಿಂದ ಪಾಲಕ್ಕಾಡು ಎಂಬುದು ಬಂದಿದೆಯೆನ್ನಲಾಗಿದೆ. ಈ ಶಬ್ಧಗಳನ್ನು ಪಾಲವೃಕ್ಷಗಳ (ಪಾಲ್) ಕಾಡು ಎಂದೂ ಅರ್ಥೈಸಲಾಗಿದೆ. ಕೇರಳ ರಾಜ್ಯದ ಮಧ್ಯಭಾಗದ ಜಿಲ್ಲೆಯಿದು. ಉತ್ತರದಲ್ಲಿ ಮಲಪ್ಪುರಂ ಜಿಲ್ಲೆ, ದಕ್ಷಿಣದಲ್ಲಿ ತ್ರಿಚೂರು ಜಿಲ್ಲೆ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ, ಪೂರ್ವದಲ್ಲಿ ತಮಿಳುನಾಡು ಇವೆ. ಜಿಲ್ಲೆಯ ವಿಸ್ತೀರ್ಣ 4,480 ಚ.ಕಿ.ಮೀ. ಜನಸಂಖ್ಯೆ 26,17,072 (2001). ಜನಸಾಂದ್ರತೆ ಚ.ಕಿ.ಮೀ.ಗೆ 819. ಆಡಳಿತ ಕೇಂದ್ರ ಪಾಲಘಾಟ್ ಪಟ್ಟಣ.
ಭೂಗೋಳ, ಕೃಷಿ ಮತ್ತು ಉತ್ಪನ್ನಗಳು
[ಬದಲಾಯಿಸಿ]ಪಶ್ಚಿಮ ಘಟ್ಟಗಳು ಜಿಲ್ಲೆಯ ಆಗ್ನೇಯ ಮೂಲೆಯತ್ತ ಸಾಗಿವೆ. ಪಾಲಘಾಟ್ ಪಟ್ಟಣದ ಪಶ್ಚಿಮಕ್ಕೆ 80 ಕಿ.ಮೀ. ದೂರದಲ್ಲಿ ಪೊನ್ನಾನಿ ರೇವು ಇದೆ. ಜಿಲ್ಲೆಯ ತಾಲ್ಲೂಕಗಳು ಒಟ್ಟಪ್ಪಲಂ, ಮನ್ನಾರ್‍ಘಾಟ್, ಪಾಲಘಾಟ್, ಚಿತ್ತೂರ್ ಮತ್ತು ಆಲತ್ತೂರ್. ಜಿಲ್ಲೆಯ ಮುಖ್ಯ ಉತ್ಪನ್ನಗಳು ತೆಂಗು, ಅಡಿಕೆ, ಕಾಫಿ, ಬಾಳೆ, ಕಬ್ಬು, ತಂಬಾಕು, ಭತ್ತ, ಮೆಣಸು. ಮಲಂಪುಳಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಟ್ಟೆಯಿಂದ ನಿರ್ಮಿತವಾದ ಜಲಾಶಯದಿಂದ 38,527 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಒದಗಿದೆ. ಪಾಲಘಾಟ್ ತಾಲ್ಲೂಕು ಪಾಲಘಾಟ್ ತೆರಪು ಅಥವಾ ಕಣಿವೆಯ ಭಾಗದಲ್ಲಿದೆ. ತಾಲ್ಲೂಕಿನಲ್ಲಿ ಹರಿಯುವ ನದಿಗಳು ನೆಲನದಿ, ಕನ್ನಡಿ ಮತ್ತು ಗಾಯತ್ರಿ. ಇಲ್ಲಿಯ ಸಾರಯುತ ಕರಿಯ ಭೂಮಿಯಲ್ಲಿ ಭತ್ತ, ಕಬ್ಬು, ಹೊಗೆಸೊಪ್ಪು, ಬಾಳೆ, ತೆಂಗು ಬೆಳೆಯುತ್ತಾರೆ. ಪಾಲಘಾಟ್ ಚಾಪೆಗಳು ಪ್ರಸಿದ್ಧವಾಗಿವೆ. ತಾಲ್ಲೂಕಿನ ಮುಖ್ಯ ಸ್ಥಳಗಳು ಆಲತೊರೆ, ಕರಿಮಲ, ಕೊಂಗಾಡು, ಮಾಂಕರ ಮತ್ತು ವೋಲವಕೋಡೆ.
ಪಾಲಘಾಟ್ ಜಿಲ್ಲೆಯ ಮತ್ತು ತಾಲ್ಲೂಕಿನ ಕೇಂದ್ರ ಹಾಗೂ ಪಟ್ಟಣ. ಇದು ಪಶ್ಚಿಮ ಘಟ್ಟಗಳ ತೆರಪಿನ ಬಳಿ ಪೊನ್ನಾನಿ ನದಿಯ ದಂಡೆಯ ಮೇಲಿದೆ. ತಮಿಳುನಾಡು ಮತ್ತು ಕೇರಳ ರಾಜ್ಯಗಳ ನಡುವಣ ಬಹು ಮುಖ್ಯ ವ್ಯಾಪಾರ ಹಾಗೂ ವಾಣಿಜ್ಯ ಕೇಂದ್ರವಿದು. ಇಲ್ಲಿ ತಂಬಾಕು ಚೌಬೀನೆ ಹಾಗೂ ಆಹಾರ ಧಾನ್ಯಗಳು ವ್ಯಾಪಾರವಾಗುತ್ತವೆ. ಇಲ್ಲಿಯ ವಿಕ್ಟೋರಿಯ ಕಾಲೇಜು 1888 ರಲ್ಲಿ ಸ್ಥಾಪಿತವಾಯಿತು. ಇಲ್ಲೊಂದು ಎಂಜಿನಿಯರಿಂಗ್ ಕಾಲೇಜು ಇದೆ. ಉತ್ತರದಲ್ಲಿ ಪೊನ್ನಾನಿ ನದಿಯ ಆಚೆ ಒಲವಕೋಡ್ ರೈಲ್ವೇ ಜಂಕ್ಷನ್ ಇದೆ.
ಇತಿಹಾಸ
[ಬದಲಾಯಿಸಿ]ಪಾಲಘಾಟಿನಲ್ಲಿ ಹಳೆಯ ಕೋಟೆಯೊಂದಿದೆ. 1764 ರಲ್ಲಿ ಪಾಲಘಾಟಿನ ದೊರೆ ತನ್ನ ವೈರಿಗಳ ವಿರುದ್ಧ ಹೈದರನ ಸಹಾಯ ಕೋರಿದಾಗ ಹೈದರ್ ಇಲ್ಲಿ ಕೋಟೆಯನ್ನು ಕಟ್ಟಿ ಸೈನ್ಯವನ್ನಿಟ್ಟ. ಕೊನೆಗೆ ಈ ಕೋಟೆ ಹೈದರನ ವಶವಾಯಿತು. ಹೈದರನನ್ನು ಬ್ರಿಟಿಷರು 1768 ರಲ್ಲಿ ಹಾಗೂ 1783 ರಲ್ಲಿ ಸೋಲಿಸಿ ಎರಡು ಬಾರಿ ಈ ಕೋಟೆಯನ್ನು ವಶಪಡಿಸಿಕೊಂಡು 1784 ರಲ್ಲಿ ಟಿಪ್ಪು ಸುಲ್ತಾನನಿಗೆ ಹಿಂದಿರುಗಿಸಿದರು. ಸೆಪ್ಟಂಬರ್ 21, 1790 ರಲ್ಲಿ ಬ್ರಿಟಿಷರು ಮತ್ತೆ ಕೋಟೆಯನ್ನು ಗೆದ್ದುಕೊಂಡರು. ಟಿಪ್ಪುವಿನೊಡನೆ ನಡೆಸಿದ ಕೊನೆಯ ಯುದ್ಧದಲ್ಲಿ (1799) ಪಾಲಘಾಟ್ ಕೋಟೆ ಬ್ರಿಟಿಷರ ಬಲವಾದ ಸೈನ್ಯದ ನೆಲೆಯಾಗಿತ್ತು.
ಪಾಲಘಾಟ್ ತೆರಪು
[ಬದಲಾಯಿಸಿ]ಭಾರತದ ಈಶಾನ್ಯ ಭಾಗದಲ್ಲಿಯ ಪಶ್ಚಿಮ ಘಟ್ಟಗಳ ಸೀಳು ಅಥವಾ ತೆರಪು. ಈ ಸೀಳು ಉತ್ತರದ ನೀಲಗಿರಿಬೆಟ್ಟಗಳು ಹಾಗೂ ದಕ್ಷಿಣದ ಅನೈಮಲೈ ಬೆಟ್ಟಗಳ ನಡುವೆ ಇದೆ. ಇದಕ್ಕೆ ಪಾಲಘಾಟ್ ಚೇರಿ ಕಣಿವೆ ಎಂಬ ಹೆಸರೂ ಇದೆ. ಪಾಲಘಾಟ್ ತೆರಪಿನ ಉತ್ತರದಲ್ಲಿ ವಡಮಲೈ ಬೆಟ್ಟ, ದಕ್ಷಿಣದಲ್ಲಿ ತೆನ್‍ಮಲೈ ಬೆಟ್ಟಸಾಲುಗಳು ಇವೆ. ಪಾಲಘಾಟ್ ತೆರಪಿನ ಬಳಿಯ ಕಣಿವೆ ಸಮುದ್ರ ಮಟ್ಟದಿಂದ 152 ಮೀ.ಗಿಂತ ಹೆಚ್ಚು ಎತ್ತರವಾಗಿಲ್ಲ. 32 ಕಿ.ಮೀ. ಅಗಲವಿರುವ ಈ ತೆರಪು ಕೇರಳ ಮತ್ತು ತಮಿಳುನಾಡು ಗಡಿಯ ನಡುವಣ ಸೀಳುದಾರಿ. ಈ ತೆರಪಿನ ರೈಲುಮಾರ್ಗ ಹಾಗೂ ಹೆದ್ದಾರಿಗಳಿಂದ ಕೇರಳದ ಪಾಲಘಾಟ್ ಜಿಲ್ಲೆಗೂ ತಮಿಳುನಾಡಿನ ಕೊಯಮತ್ತೂರು ಮತ್ತು ಪೊಲ್ಲಚಿ ಪಟ್ಟಣಗಳಿಗೂ ಸಂಪರ್ಕ ಉಂಟಾಗಿದೆ. ದಕ್ಷಿಣ ಭಾರತದ ವಾಯುಗುಣದ ಮೇಲೂ ಪಾಲಘಾಟ್ ತೆರಪಿನ ಪ್ರಭಾವವಿದೆ. ಪಶ್ಚಿಮ ಘಟ್ಟಗಳ ಕಡೆ ಬೀಸುವ ನೈಋತ್ಯ ಮಾರುತಗಳು ಹಾಗೂ ಬಂಗಾಳ ಕೊಲ್ಲಿಯ ಚಂಡಮಾರುತಗಳು ದಕ್ಷಿಣ ಭಾರತದತ್ತ ಸಾಗುವುದು ಈ ತೆರಪಿನ ಮೂಲಕ.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಟೆಂಪ್ಲೇಟು:Wikivoyage-inline
- http://www.palakkad.gov.in Archived 2021-04-19 ವೇಬ್ಯಾಕ್ ಮೆಷಿನ್ ನಲ್ಲಿ. – Official Website of Palakkad District Administration
- http://www.palakkadtourism.org – Palakkad District Tourism-Information