ವಿಷಯಕ್ಕೆ ಹೋಗು

ಪಾರ್ಶ್ವನಾಥ ಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಾರ್ಶ್ವನಾಥ ತೀರ್ಥಂಕರ
ಜನನ : ಪುಷ್ಯ-ಬಹುಳ-ಏಕಾದಶೀ ವಿಶಾಖಾ ನಕ್ಷತ್ರ
ಜನ್ಮ ಸ್ಥಳ : ವಾರಣಾಸಿ
ತಂದೆ: ವಿಶ್ವಸೇನ
ತಾಯಿ : ಬ್ರಾಹ್ಮಿಲಾ
ವಂಶ : ಉಗ್ರ ವಂಶ
ದೇಹದ ಬಣ್ಣ : ಹಸಿರು
ಗಣಧರರು: ಸ್ವಯಂಭೂ
ದೇಹದ ಎತ್ತರ: ೯ ಬಿಲ್ಲುಗಳು
ಯಕ್ಷ: ಧರಣೇಂದ್ರ
ಯಕ್ಷಿ: ಪದ್ಮಾವತೀದೇವಿ
ಲಾಂಚನ: ಸರ್ಪ
ತಪೋವನ : ಅಶ್ವವನ
ತಪೋವೃಕ್ಷ: ದೇವದಾರು ವೃಕ್ಷ
ಮೋಕ್ಷಸ್ಥಾನ : ಸಮ್ಮೇದ ಶಿಖರಜೀ
ಮೋಕ್ಷ ಪ್ರಾಪ್ತಿ : ಶ್ರಾವಣ ಶುದ್ಧ-ದಶಮಿ (ಸಂಜೆ) ವಿಶಾಕಾ ನಕ್ಷತ್ರ

ನೇಮಿ ತೀರ್ಥಂಕರನ ನಿರ್ವಾಣಾನಂತರ ಎಂಬತ್ತು ಮೂರು ಸಾವಿರದ ಏಳು ನೂರ ಐವತ್ತು ವರ್ಷಗಳು ಕಳೆದ ಮೇಲೆ ಪಾರ್ಶ್ವನಾಥನ ಜನನವಾಯಿತು.ಈತನ ಆಯಸ್ಸು ಒಂದು ನೂರು ವರ್ಷಗಳು.

ಇತಿಹಾಸ

[ಬದಲಾಯಿಸಿ]

ಜಂಬೂದ್ವೀಪದ ದಕ್ಷಿಣ ಭಾರತ ಕ್ಷೇತ್ರದಲ್ಲಿ ಸುರಮ್ಯ ದೇಶವಿದೆ. ಪೌದನಪುರ ಅದರ ರಾಜಧಾನಿ. ಅರವಿಂದ ಅದರ ರಾಜ. ಕಮಠ,ಮರುಭೂತಿಗಳು ಅವನ ಮಂತ್ರಿಗಳು. ಅವರಿಬ್ಬರೂ ಸೋದರರು. ನೀಚನಾದ ಕಮಠನು ಸೋದರನ ಮಡದಿಯಾದ ವಸುಂಧರೆಯ ಮೇಲಿನ ಮೋಹದಿಂದ ತಮ್ಮನನ್ನು ಕೊಂದನು. ಸತ್ತ ಮರುಭೂತಿ ಮಲಯದೇಶದ ಕುಬ್ಜಕವನದಲ್ಲಿ ಆನೆಯಾಗಿ ಹುಟ್ಟಿದನು. ರಾಜನಾದ ಅರವಿಂದನು ವೈರಾಗ್ಯದಿಂದ ದೀಕ್ಷೆಯನ್ನು ಪಡೆದು ಸಮ್ಮೇದ ಪರ್ವತದಲ್ಲಿ ತಪಸ್ಸು ಮಾಡುತ್ತಿದ್ದನು . ಆನೆಯಾಗಿದ್ದ ಮರುಭೂತಿ ಆತನನ್ನು ಕಂಡು ಪೂರ್ವಜನ್ಮಸ್ಮರಣೆಯಿಂದ ಆತನಲ್ಲಿ ಧರ್ಮಸ್ವರೂಪವನ್ನು ತಿಳಿದು ಶ್ರಾವಕವ್ರತವನ್ನು ಗ್ರಹಣ ಮಾಡಿತು.ಒಂದು ದಿನ ಅದು ನೀರು ಕುಡಿಯಲೆಂದು ವೇಗವತೀ ನದಿಗೆ ಹೋಯಿತು. ಅಲ್ಲಿ ಅದರ ಕಾಲು ಕೆಸರಿನಲ್ಲಿ ಸಿಕ್ಕಿಕೊಂಡಿತು. ಆ ವೇಳೆಗೆ ಅದರ ಪೂರ್ವಜನ್ಮದ ಅಣ್ಣನಾದ ಕಮಠನು ಸತ್ತು ಅದೇ ನದಿಯಲ್ಲಿ ಕುಕ್ಕುಟ ಸರ್ಪವಾಗಿ ಹುಟ್ಟಿದ್ದ . ಪೂರ್ವಭವ ವೈರದಿಂದ ಅದು ಆನೆಯನ್ನು ಕಚ್ಚಿತು. ಸತ್ತ ಆನೆ ಸ್ವರ್ಗದಲ್ಲಿ ದೇವತೆಯಾಗಿ ಹುಟ್ಟಿತು. ಅಲ್ಲಿನ ಆಯುಷ್ಯ ತೀರಿದ ಮೇಲೆ ಆ ದೇವತೆ ಪುಷ್ಕಲಾವತೀ ದೇಶದ ತ್ರಿಲೋಕೋತ್ತಮ ನಗರದಲ್ಲಿ ವಿದ್ಯುದ್ಗತಿ ಎಂಬ ವಿದ್ಯಾಧರ ರಾಜನಿಗೂ,ಆತನ ಮಡದಿ ವಿದ್ಯುನ್ಮಾಲೆಗೂ ರಶ್ಮಿವೇಗನೆಂಬ ಮಗನಾಗಿ ಹುಟ್ಟಿದನು. ಅವನು ಬೆಳೆದು ಪ್ರಾಜ್ಞನಾಗಿ,ಸಮಾಧಿ ಗುಪ್ತಮುನಿಯಿಂದ ದೀಕ್ಷೆಯನ್ನು ಪಡೆದು ಹಿಮಗಿರಿಯೆಂಬ ಪರ್ವತದ ಗುಹೆಯಲ್ಲಿ ಯೋಗಧಾರಣ ಮಾಡಿದನು,ವೇಗವತೀ ನದಿಯಲ್ಲಿದ್ದ ಕುಕ್ಕುಟ ಸರ್ಪವು ಸತ್ತು ನರಕಕ್ಕೆ ಬಿದ್ದು ಮರುಜನ್ಮದಲ್ಲಿ ಹೆಬ್ಬಾವಾಗಿ ಹುಟ್ಟಿತು. ಅದು ಯೋಗ ದಲ್ಲಿದ್ದ ರಶ್ಮಿವೇಗನನ್ನು ನುಂಗಿತು.ಸತ್ತ ರಶ್ಮಿವೇಗ ಸ್ವರ್ಗದಲ್ಲಿ ಅಚ್ಯುತೇಂದ್ರನಾಗಿ ಹುಟ್ಟಿದನು. ಆಯುಷ್ಯಾವಸಾನದಲ್ಲಿ ಆತನು ಅಪರವಿದೇಹದ ಪದ್ಮದೇಶದಲ್ಲಿ ರಾಜನಾಗಿದ್ದ ವಜ್ರವರ‍್ಯನ ಪತ್ನಿ ವಿಜಯಾದೇವಿಯ ಹೊಟ್ಟೆಯಲ್ಲಿ ವಜ್ರನಾಭಿಯೆಂಬ ಮಗನಾಗಿ ಹುಟ್ಟಿದನು.ರಾಜಧಾನಿಯಾದ ಅಶ್ವಪುರಿಯಲ್ಲಿ ಆತನು ಹಲವು ಕಾಲ ರಾಜ್ಯಭಾರ ಮಾಡುತ್ತಿದ್ದು,ವೈರಾಗ್ಯದಿಂದ ದೀಕ್ಷೆ ವಹಿಸಿದನು. ಆ ವೇಳೆಗೆ ಹಿಮಗಿರಿ ಗುಹೆಯಲ್ಲಿದ್ದ ಹೆಬ್ಬಾವು ಸತ್ತು,ನರಕವಾಸವನ್ನು ಅನುಭವಿಸಿ,ಕುರಂಗನೆಂಬ ಬೇಡನಾಗಿ ಹುಟ್ಟಿತ್ತು.ಆ ಬೇಡ ಮುನಿಯಾಗಿದ್ದ ವಜ್ರನಾಭನಿಗೆ ಬಗೆಬಗೆಯಾದ ಉಪಸರ್ಗಗಳನ್ನು ಮಾಡಿದನು.ಮುನಿಯು ಅವುಗಳನ್ನು ತಾಳ್ಮೆಯಿಂದ ಸಹಿಸಿ,ಸತ್ತ ಮೇಲೆ ಸುಭದ್ರನೆಂಬ ದೇವತೆಯಾಗಿ ಹುಟ್ಟಿದನು.ಆಯುಷ್ಯಾವಸಾನದಲ್ಲಿ ಅಲ್ಲಿಂದ ಚ್ಯುತನಾಗಿ ಕೋಸಲದೇಶದ ಅಯೋಧ್ಯಾನಗರದಲ್ಲಿ ಇಕ್ಷಾಕು ವಂಶಜನಾದ ಭದ್ರಬಾಹುರಾಜ ಮತ್ತು ಆತನ ಮಡದಿ ಪ್ರಭಂಕರೀದೇವಿಯರಿಗೆ ಆನಂದ ಎಂಬ ಮಗನಾಗಿ ಹುಟ್ಟಿ,ದೊಡ್ಡವನಾದ ಮೇಲೆ ಮಹಾಮಾಂಡಲಿಕನೆಂದು ಕೀರ್ತಿವೆತ್ತನು.ವಿಪುಲಮತಿಯೆಂಬ ಗಣಧರರ ಉಪದೇಶದಂತೆ ಸೂರ್ಯಬಿಂಬದಲ್ಲಿ ಜಿನನನ್ನು ಪರಿಭಾವಿಸುತ್ತಾ ಸೂರ್ಯೋಪಾಸನೆಯ ಸಂಪ್ರದಾಯಕ್ಕೆ ಆದ್ಯನಾದನು.ಒಂದು ದಿನ ಆತನು ತನ್ನ ತಲೆಯಲ್ಲಿ ನೆರೆಗೂದಲನ್ನು ಕಂಡು ವೈರಾಗ್ಯದಿಂದ ತಪಸ್ಸನ್ನು ಕೈಗೊಂಡನು.ಅವಸಾನ ಕಾಲದಲ್ಲಿ ಆತನು ಪ್ರತಿಮಾಯೋಗದಲ್ಲಿ ನಿಂತಿರಲು,ಪೂರ್ವಜನ್ಮದ ವೈರಿಯಾದ ಕುರಂಗಬೇಡನು ಸಿಂಹವಾಗಿ ಹುಟ್ಟಿದ್ದು,ಆತನ ಮೇಲೆ ಬಿದ್ದು ಕೊಂದು ಹಾಕಿತು.ಸತ್ತ ಆನಂದ ಸ್ವಾಮಿಯು ಸ್ವರ್ಗದಲ್ಲಿ ದೇವೇಂದ್ರನಾಗಿ ಹುಟ್ಟಿ,ಸಮಸ್ತ ಸುಖಭೋಗಗಳನ್ನು ಯಥೇಚ್ಛವಾಗಿ ಅನುಭವಿಸಿದನು.ಜೀವಿತಾಂತ್ಯದಲ್ಲಿ ಅಲ್ಲಿಂದ ಚ್ಯುತನಾಗಿ ವಾರಣಾಸಿಯ ರಾಜ ವಿಶ್ವಸೇನನ ಪತ್ನಿ ಬ್ರಾಹ್ಮಿಯ ಗರ್ಭವನ್ನು ವೈಶಾಖ ಕೃಷ್ಣ ದ್ವಿತೀಯೆಯ ವಿಶಾಖಾ ನಕ್ಷತ್ರದಲ್ಲಿ ಪ್ರವೇಶಿಸಿ,ಪುಷ್ಯ ಕೃಷ್ಣ ಏಕಾದಶಿಯ ಅನಿಲ ಯೋಗದಲ್ಲಿ ಜನಿಸಿದನು. ದೇವೇಂದ್ರನು ಈ ಜಿನಶಿಶುವಿಗೆ ಜನ್ಮಾಭಿಷೇಕ ಮಾಡಿ,ಪಾರ್ಶ್ವನಾಥನೆಂದು ನಾಮಕರಣ ಮಾಡಿದನು.[]

ಹರಿತವರ್ಣನಾದ ಈತನು ಒಂಬತ್ತು ಮೊಳಗಳಷ್ಟು ಎತ್ತರವಾಗಿ ಬೆಳೆದನು.ಈತನು ಹದಿನಾರು ವರ್ಷದವನಾಗಿದ್ದಾಗ.ಈತನ ಮಾತಾ ಮಹನಾದ ಮಹಿಪಾಲನು ಪಂಚಾಗ್ನಿ ಮಧ್ಯದಲ್ಲಿ ತಪಸ್ಸು ಮಾಡುತ್ತಿರುವುದನ್ನು ಕಂಡು. ಅದರ ಟೊಳ್ಳನ್ನು ಪ್ರತ್ಯಕ್ಷ ಪ್ರಮಾಣವಾಗಿ ತೋರಿಸಿದನು.ಪಾರ್ಶ್ವನಾಥನ ಜೊತೆಯಲ್ಲಿದ್ದ ಸುಭೌಮನೆಂಬ ರಾಜಕುಮಾರನು ಆತನಿಗೆ ಬುದ್ಧಿ ಹೇಳಿದನು. ಆದರೆ ಮಹೀಪಾಲ ವ್ರತಿಯು ಅವನನ್ನು ತಿರಸ್ಕರಿಸಿ ಸತ್ತು ಶಂಬರನೆಂಬ ಜ್ಯೋತಿಷದೇವನಾದನು. ಅನಂತರ ಪಾರ್ಶ್ವನಾಥಕುಮಾರನು ಅಯೋಧ್ಯಾನಗರದ ರಾಜನಿಂದ ಬಂದ ಕುದುರೆಗಳೇ ಮೊದಲಾದ ಕೈಗಾಣಿಕೆ ಗಳನ್ನು ಸ್ವೀಕರಿಸಿ, ಪೂರ್ವಭವಗಳ ಜ್ಞಾನದಿಂದ ವೈರಾಗ್ಯವನ್ನು ಹೊಂದಿದನು.ದೇವತೆಗಳು ತಂದ ವಿಮಲಾ ಎಂಬ ಪಲ್ಲಕ್ಕಿಯನ್ನೇರಿ ಅಶ್ವವನಕ್ಕೆ ಪರಿನಿಷ್ಕçಮಣ ಯಾತ್ರೆಯನ್ನು ಕೈಗೊಂಡನು . ಪುಷ್ಯ ಕೃಷ್ಣ ಏಕಾದಶಿಯಂದು ದೀಕ್ಷೆಯನ್ನು ವಹಿಸಿ , ತಪಸ್ಸಿನಿಂದ ಮನಃಪರ್ಯಯಜ್ಞಾನವನ್ನು ಪಡೆದ ಮೇಲೆ ಗುಲ್ಮಖೇಟ ಪುರದ ಧಾನ್ಯ ರಾಜನಿಂದ ಅನ್ನ ಭಿಕ್ಷೆಯನ್ನು ಪಡೆದು ಛದ್ಮಾವಸ್ಥೆಯಲ್ಲಿ ನಾಲ್ಕು ತಿಂಗಳುಗಳನ್ನು ಕಳೆದನು. ಅನಂತರ ದೀಕ್ಷಾವನದಲ್ಲಿ ದೇವದಾರುವೃಕ್ಷದ ಕೆಳಗೆ ಏಳು ದಿನಗಳು ಧರ್ಮಾಸಕ್ತನಾಗಿದ್ದನು. ಆ ಕಾಲದಲ್ಲಿ ಜ್ಯೋತಿಷ ದೇವನಾಗಿದ್ದ ಶಂಬರನು ಆಕಾಶದಲ್ಲಿ ಹೋಗುತ್ತಾ ಸ್ತಂಭಿತನಾಗಿ ಮಹಾನಾದ ಮಾಡುತ್ತಾ ದೊಡ್ಡ ಮಳೆಯನ್ನು ಆತನ ಮೇಲೆ ಕರೆದನು. ಪರ್ವತವೊಂದನ್ನು ಆತನ ಮೇಲೆ ತಳ್ಳಿದನು. ಆಗ ಧರಣೇಂದ್ರನು ತನ್ನ ಹೆಡೆಯಿಂದ ಸ್ವಾಮಿಯನ್ನು ಮರೆಮಾಡಿ ನಿಂತನು. ಪದ್ಮಾವತಿ ವಜ್ರದ ಕೊಡೆಯನ್ನು ಹಿಡಿದಳು. ಸ್ವಾಮಿಗೆ ಚೈತ್ರಕೃಷ್ಣ ಚತುದರ್ಶಿ ಬೆಳಿಗ್ಗೆ ವಿಶಾಖ ನಕ್ಷತ್ರದಲ್ಲಿ ಕೇವಲ ಜ್ಞಾನವಾಯಿತು. ಹತ್ತು ಜನ ಗಣಧರರೊಡನೆ ಸಮವಸರಣದಲ್ಲಿ ಕುಳಿತು ಜ್ಞಾನವರ್ಷವನ್ನು ಲೋಕಕ್ಕೆಲ್ಲ ಕರೆದು, ಕಡೆಗೆ ಶ್ರಾವಣ ಶುಕ್ಲ ಸಪ್ತಮಿಯ ಪ್ರಾತಃಕಾಲ ಮುಕ್ತಿಯನ್ನು ಪಡೆದನು.

ಲಾಂಛನ

[ಬದಲಾಯಿಸಿ]

ಲಾಂಛನ ಸರ್ಪ. ಯಕ್ಷ - ಯಕ್ಷಿಯರು ಧರಣೇಂದ್ರ ಪದ್ಮಾವತಿ.

ಉಲ್ಲೇಖಗಳು

[ಬದಲಾಯಿಸಿ]
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರೆ: ಮಂಜೂಶ್ರೀ ಪ್ರಿಂಟರ್ಸ್. p. ೪೪೧-೪೪೨.