ವಿಷಯಕ್ಕೆ ಹೋಗು

ಪಾರ್ಟಿಸಿಪೇಟರಿ ನೋಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಅಥವಾ ಭಾರತೀಯ ಷೇರು ವಿನಿಮಯ ಮಂಡಳಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳದೆ ನೇರವಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವ ಅಂತರರಾಷ್ಟ್ರೀಯ ಹೂಡಿಕೆದಾರರಿಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರ(FII) ಕೊಡುವ ಹಣದ ಮಾಧ್ಯಮವೇ ಪಾರ್ಟಿಸಿಪೇಟರಿ ನೋಟ್.[] ಭಾರತೀಯ ಷೇರು ವಿನಿಮಯ ಮಂಡಳಿ ೧೯೯೨ ರಿಂದ ವಿದೇಶಿ ಸಂಸ್ಥೆಗಳ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ.ಪಾರ್ಟಿಸಿಪೇಟರಿ ನೋಟುಗಳ ಮುಖಾಂತರ ಷೇರು ಮಾರುಕಟ್ಟೆಯಲ್ಲಿ ಹಣ ಹೂಡುವುದು ಬಹಳ ಸುಲಭ ವಿಧಾನವಾಗಿದ್ದು ವಿದೇಶಿ ಸಂಸ್ಥೆಗಳ ಹೂಡಿಕೆದಾರರನ್ನು ಭಾರತೀಯ ಷೇರು ಮಾರುಕಟ್ಟೆ ಸೆಳೆಯಲು ಒಂದು ಪ್ರಮುಖ ಕಾರಣವಾಗಿದೆ.[]

ಪಾರ್ಟಿಸಿಪೇಟರಿ ನೋಟು ಕಾರ್ಯ ನಿರ್ವಹಿಸುವ ವಿಧಾನ

[ಬದಲಾಯಿಸಿ]

ಪಾರ್ಟಿಸಿಪೇಟರಿ ನೋಟು ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಳಸುವ ಒಂದು ಸಾಧನವಾಗಿದೆ. ಭಾರತ ದೇಶದೊಳಗೆ ಪಾರ್ಟಿಸಿಪೇಟರಿ ನೋಟುಗಳನ್ನು ಬಳಸಿ ಹೂಡಿಕೆ ಮಾಡಲು ಅವಕಾಶವಿಲ್ಲದಿದ್ದರೂ ಭಾರತೀಯ ಷೇರು ವಿನಿಮಯ ಮಂಡಳಿಯ ಪಟ್ಟಿಯಲ್ಲಿರುವ ಹಾಗು ಭಾರತದ ಹೊರಗಿರುವ ಸಂಸ್ಥೆಗಳಲ್ಲಿ ಹೂಡಿಕೆ ಮಾಡಬಹುದಾಗಿದೆ.[]

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹಾಗು ಅವರ ಉಪ-ಖಾತೆಗಳು ಪಾರ್ಟಿಸಿಪೇಟರಿ ನೋಟುಗಳನ್ನು ಬಳಸಿ ತಮ್ಮ ಸಾಗರೋತ್ತರ ಗ್ರಾಹಕರಿಗೆ ಭಾರತದ ಷೇರು ಮಾರುಕಟ್ಟೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕೊಡಬಹುದು.

ಉದಾಹರಣೆಗೆ : ಭಾರತದ ಮೂಲದ ದಲ್ಲಾಳಿಯೊಬ್ಬ ಭಾರತ ಮೂಲದ ಭದ್ರತಾ ಪತ್ರಗಳನ್ನು ವಿದೇಶಿ ಹೂಡಿಕೆದಾರನಿಂದ ಕೊಂಡುಕೊಂಡು ಅವನಿಗೆ ಹಣದ ಬದಲು ಪಾರ್ಟಿಸಿಪೇಟರಿ ನೋಟುಗಳನ್ನು ಕೊಡಬಹುದು. ಬ್ಯಾಂಕಿನ ವ್ಯವಹಾರದಲ್ಲಿ ಚೆಕ್ಕು/ಡಿ.ಡಿ ಗಳನ್ನೂ ಹೇಗೆ ಹಣದ ಮತ್ತೊಂದು ರೂಪವೆಂದು ಭಾವಿಸಲಾಗುತ್ತದೋ ಹಾಗೆಯೇ ಅಂತಾರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಭಾರತದ ವಿಚಾರವಾಗಿ ಪಾರ್ಟಿಸಿಪೇಟರಿ ನೋಟುಗಳೂ ಹಣದ ಮತ್ತೊಂದು ರೂಪವೇ ಆಗಿವೆ. ಭದ್ರತಾ ಪತ್ರಗಳಿಂದ(securities) ಉತ್ಪತ್ತಿಯಾದ ಡಿವಿಡೆಂಡ್ ಹಿಂದಿರುಗಿ ಹೂಡಿಕೆದಾರರಿಗೆ ಸೇರುತ್ತದೆ.[]

೨೦೦೭ ರ ಪಾರ್ಟಿಸಿಪೇಟರಿ ನೋಟುಗಳ ಬಿಕ್ಕಟ್ಟು

[ಬದಲಾಯಿಸಿ]

೨೦೦೭ ರ ಅಕ್ಟೋಬರ್ ೧೬ ರಂದು ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ(SEBI) ಪಾರ್ಟಿಸಿಪೇಟರಿ ನೋಟುಗಳ ಮೇಲೆ ನಿರ್ಬಂಧ ವಿಧಿಸಿತು. ೨೦೦೭ ನೇ ವರ್ಷದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಭಾರತದಲ್ಲಿ ಹೂಡಿಕೆಯಾದ ಪೂರ್ಣ ಮೊತ್ತದಲ್ಲಿ ಶೇ.೫೦ ರಷ್ಟು ಪಾರ್ಟಿಸಿಪೇಟರಿ ನೋಟುಗಳ ಮುಖಾಂತರವಾಗಿದ್ದೇ ನಿರ್ಬಂಧಕ್ಕೆ ಕಾರಣ.

ಪಾರ್ಟಿಸಿಪೇಟರಿ ನೋಟಿನ ಇನ್ನೊಂದು ವಿಶೇಷತೆ ಎಂದರೆ ಅದರ ಮೇಲೆ ಹೆಸರು, ಗುರುತು, ವಿಳಾಸ ಇನ್ನಿತರ ಯಾವುದೇ ಮಾಹಿತಿಯಿರುವುದಿಲ್ಲ. ಪಾರ್ಟಿಸಿಪೇಟರಿ ನೋಟಿನ ನೋಂದಣಿ ಸಂಖ್ಯೆ ಹೊರತು ಪಡಿಸಿ ಇನ್ನ್ಯಾವ ಮಾಹಿತಿಯೂ ಅದರಲ್ಲಿರದ ಕಾರಣ ಆ ನೋಟುಗಳನ್ನು ಬಳಸಿ ಷೇರು ಅಥವಾ ಭದ್ರತಾ ಪತ್ರ ಖರೀದಿ ಮಾಡಿದವರ ಮಾಹಿತಿ ಕಲೆಹಾಕಲು ಸಾಧ್ಯವಿಲ್ಲ. ಈ ಕಾರಣದಿಂದಾಗಿ ಭಾರತದ ಯಥೇಚ್ಛ ಕಪ್ಪು ಹಣ ವಾಮ ಮಾರ್ಗದ ಮುಖಾಂತರ ಹೂಡಿಕೆಯಾಗಿ ಅಪಾರ ಲಾಭ ಗಳಿಸುತ್ತಿರುವುದೂ ಬಹು ಚರ್ಚಿತ ವಿಚಾರ.

ಪಾರ್ಟಿಸಿಪೇಟರಿ ನೋಟುಗಳ ಮೇಲೆ ನಿರ್ಬಂಧ ವಿಧಿಸಿದ ಮರು ದಿನವೇ ಅಂದರೆ ೨೦೦೭ ರ ಅಕ್ಟೋಬರ್ ೧೭ ಮಾರುಕಟ್ಟೆ ಆರಂಭವಾದ ಒಂದೇ ನಿಮಿಷದಲ್ಲಿ ಸೆನ್ಸೆಕ್ಸ್ ಸೂಚ್ಯಂಕ ೧೭೪೪ (ಶೇ.೯) ಕುಸಿಯುವ ಮೂಲಕ ಪಾರ್ಟಿಸಿಪೇಟರಿ ನೋಟು ನಿರ್ಬಂಧ ವಿಫಲವಾಗುವ ಸ್ಪಷ್ಟ ಸಂದೇಶ ರವಾನೆಯಾಯಿತು.[]

ಉಲ್ಲೇಖಗಳು

[ಬದಲಾಯಿಸಿ]