ಪಡುಕೋಣೆ ರಮಾನಂದರಾಯರು
(೩೦-೧೨-೧೮೯೬-೧೩-೨-೧೯೮೩)
ಕರಾವಳಿಯ ಹಾಸ್ಯಲೇಖಕರೆಂದು ಪ್ರಸಿದ್ದರಾದ 'ಪಡುಕೋಣೆ ರಮಾನಂದರಾಯರು', ನಾಟಕ ರಚನೆ, ಪಾತ್ರವಹಿಸುವಿಕೆ, ಸಂಗೀತ, ಸಿನಿಮಾಟೊಗ್ರಫಿ ಸಾಹಿತ್ಯಗಳಲ್ಲಿ ವಿಪರೀತವಾದ ಆಸಕ್ತರು. ಶಿವರಾಮಕಾರಂತರ ವೃತ್ತಚಿತ್ರದಲ್ಲೂ ಪಾತ್ರವಹಿಸಿದ್ದರು. ಟಿ. ಪಿ. ಕೈಲಾಸಂರ 'ಹೋಂ ರೂಲ್' ನಾಟಕವನ್ನು ಕರಾವಳಿಯ ರಂಗದಮೇಲೆ ತಂದ ಖ್ಯಾತಿ ಆವರದು. ಆ ನಾಟಕವನ್ನು ಕೊಂಕಣಿ ಭಾಷೆಗೆ ಅನುವಾದಮಾಡಿದರು. ಹಳೆಯ ಮೈಸೂರಿನ ಸಾಹಿತ್ಯ , ನಾಟಕಕಾರರು, ಲೇಖಕರೆಲ್ಲಾ ಒಮ್ಮೆಯಾದರೂ ರಾಯರ ಮನೆಗೆ ಬಂದು ಅವರ ಧಾರಾಳ ಆತಿಥ್ಯದಲ್ಲಿ ಸಂತಸಪಟ್ಟಿದ್ದಾರೆ. ರಾಜರತ್ನಂರವರು ‘ಬೌದ್ಧ ಧರ್ಮದ ಗ್ರಂಥ’ ಬರೆದದ್ದು ಇವರ ಅತಿಥಿಯಾಗಿ.
ಜನನ, ವಿದ್ಯಾಭ್ಯಾಸ, ವೃತ್ತಿಜೀವನ
[ಬದಲಾಯಿಸಿ]ಪಡುಕೋಣೆ ರಮಾನಂದರು ೧೮೯೬ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಡುಕೋಣೆಯಲ್ಲಿ ಜನಿಸಿದರು. ತಂದೆ ನರಸಿಂಗರಾಯರು, ತಾಯಿ ಚಂದ್ರಭಾಗಿ. ಪ್ರಾರಂಭಿಕ ಶಿಕ್ಷಣ ಮಂಗಳೂರಿನ ಶಾಲಾ ಕಾಲೇಜುಗಳಲ್ಲಿ. ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಸಾಹಿತ್ಯದತ್ತ ಒಲವು. ಪಿ.ಜಿ. ವುಡ್‌ಹೌಸ್, ಸ್ಟೀಫನ್ ಲೀಕಾಕ್ ಬರಹಗಳೆಂದರೆ ಅಚ್ಚುಮೆಚ್ಚು. ಇಂಟರ್ ಮೀಡಿಯೆಟ್ ಓದಿದ್ದು ಮಂಗಳೂರು, ಹಾಗೂ ಮದರಾಸಿನ ಪ್ರೆಸಿಡೆನ್ಸಿ ಕಾಲೇಜುಗಳಲ್ಲಿ ಪಡೆದ ಎಂ.ಎ. ಮತ್ತು ಎಲ್.ಟಿ. ಪದವಿಗಳು. ಇಂಟರ್ ಮೀಡೀಯೇಟ್ ಓದುವ ಸಮಯದಲ್ಲಿ 'ಸೀತ' ಎಂಬ ಪ್ರತಿಭಾನ್ವಿತ, ಬೆಡಗಿಯನ್ನು ವಿವಾಹವಾದರು. ಬ್ರಿಟಿಷ್ ಆಡಳಿತದ ಸರಕಾರಿ ಕಾಲೇಜುಗಳಲ್ಲಿ ,ಕೆಮಿಸ್ಟ್ರಿ ಅಧ್ಯಾಪಕರಾಗಿ ರಾಜಮಹೇಂದ್ರಿ, ತಲಚೇರಿ, ಮಂಗಳೂರು, ಪಾಲ್ಘಾಟ್ ಮತ್ತು ಮದ್ರಾಸ್ (ಈಗಿನ ಚೆನ್ನೈ)ಗಳಲ್ಲಿ ಸೇವೆ ಸಲ್ಲಿಸಿದರು. ನಂತರ ಮಂಗಳೂರಿನ ತರಬೇತಿ ಕಾಲೇಜಿನ ಪ್ರಾಂಶುಪಾಲರ ಹುದ್ದೆ ನಿರ್ವಹಿಸಿ, ನಿವೃತ್ತರಾದರು. ನಿವೃತ್ತಿಯ ನಂತರ ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕೆಲಕಾಲ, ಅದಾದ ಬಳಿಕ, ಬಳ್ಳಾರಿ ಮತ್ತು ಮಂಗಳೂರುಗಳಲ್ಲಿ ಪ್ರಿನ್ಸಿಪಾಲ್ ಎಂದು ಸೇವೆ ಸಲ್ಲಿಸಿದರು. ಹಾಸ್ಯ ಕವಿತೆ, ಪ್ರಸಂಗಗಳನ್ನು ರಚಿಸಿ ಪ್ರಕಟಿಸಿದರು. 'ಕೊರಂಜಿ' ಹಾಸ್ಯ ಪತ್ರಿಕೆಯಲ್ಲಿ ತಮ್ಮ ಲೇಖನಗಳನ್ನು ಕೊಡುತ್ತಿದ್ದರು. ಪ.ರಮಾನಂದರು ಕೊಂಕಣಿ ಹಾಗು ಇಂಗ್ಲೀಷ್ ಭಾಷೆಗಳಲ್ಲಿ ನಾಟಕಗಳನ್ನು ಬರೆದಿದ್ದಾರೆ.
ಕೃತಿಗಳು, ರಚಿಸಿದ ನಾಟಕಗಳು
[ಬದಲಾಯಿಸಿ]- ೧೯೩೮ ರಲ್ಲಿ ಪ್ರಕಟವಾದ " ಹುಚ್ಚು ಬೆಳದಿಂಗಳಿನ ಹೂಬಾಣಗಳು" ಪ. ರಮಾನಂದರ ಪ್ರಸಿದ್ಧ ಹಾಸ್ಯ ಸಂಕಲನ.
- ಚೆಕಾವ್ ನ ಚೆರಿ ಹಣ್ಣಿನ ತೋಟ, ಹಾಗೂ ರೆಮಾರ್ಕನ ಪಶ್ಚಿಮ ರಣರಂಗದಲ್ಲಿ ಎಲ್ಲವೂ ಶಾಂತ, ಎಂಬ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
- ಸಿ.ಕೆ. ವೆಂಕಟರಾಮಯ್ಯನವರ ಮಂಡೋದರಿ,
- ವಿ.ಸೀ.ಯವರ ಸೊಹ್ರಾಬ್-ರುಸ್ತುಂ ರಂಗಕ್ಕೆ ತಂದ ಖ್ಯಾತಿ.
ಪಡುಕೋಣೆ ದಂಪತಿಗಳು ಮತ್ತು ಅವರ ಪರಿವಾರದ ಕೊಡುಗೆಗಳು
[ಬದಲಾಯಿಸಿ]ಮಂಗಳೂರು ಹಾಗು ಪುತ್ತೂರುಗಳಲ್ಲಿ ರಂಗಭೂಮಿಯ ಬೆಳವಣಿಗೆಗೆ ರಮಾನಂದ ಹಾಗು ಸೀತಾದೇವಿ ಪಡುಕೋಣೆ ದಂಪತಿಗಳು, ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ.
ರಮಾನಂದ ನಮನ
[ಬದಲಾಯಿಸಿ]ರಮಾನಂದರ ಜನ್ಮಶತಾಬ್ದಿ ವರ್ಷದಲ್ಲಿ ಅವರ ಗೆಳೆಯರು, ಹಿತಚಿಂತಕರು, ಹೊರತಂದ ಕೃತಿ ‘ರಮಾನಂದ ನಮನ.’ ಪ್ರತಿ ವರ್ಷ ಹಾಸ್ಯ ಸಾಹಿತಿಗಳಿಗೆ ಕೊಡುತ್ತಿದ್ದ ಪರಮಾನಂದ ಪ್ರಶಸ್ತಿ ಸ್ಥಗಿತವಾಗಿ, 'ಕೊರವಂಜಿ ಅಪರಂಜಿ ಟ್ರಸ್ಟ್,' ಇವರ ಹೆಸರಿನಲ್ಲಿ ಹಾಸ್ಯ ಲೇಖಕರಿಗೆ ವಾರ್ಷಿಕ ಬಹುಮಾನ ನೀಡಲು ನಿರ್ಧರಿಸಿದರು..
ನಿಧನ
[ಬದಲಾಯಿಸಿ]ಪಡುಕೋಣೆ ರಮಾನಂದರಾಯರು, ೧೯೮೩ ರಲ್ಲಿ ನಿಧನರಾದರು.