ಪಂಚಮಹಾಯಜ್ಞಗಳು
ಪಂಚಮಹಾಯಜ್ಞಗಳು ಗೃಹಸ್ಥರು ನಿತ್ಯವೂ ಮಾಡಲೇಬೇಕಾದ ಕರ್ಮಗಳು. ಅವನಿಂದ ದೈನಂದಿನ ಕ್ರಿಯೆಗಳಲ್ಲಿ ತಿಳಿದು ತಿಳಿಯದೆಯೂ ಉಂಟಾಗತಕ್ಕ ಹಿಂಸೆಯೇ ಮೊದಲಾದ ದೋಷಗಳನ್ನು ಅವು ಹೋಗಲಾಡಿಸುತ್ತವೆ. ಈ ದೋಷಗಳನ್ನು ಪಂಚಸೂನಾದೋಷಗಳು ಎನ್ನುತ್ತಾರೆ. ಸೂನಾ ಅಂದರೆ ಯಜ್ಞ ಯಾಗದಿಗಳಲ್ಲಿ ಪಶುಗಳನ್ನು ವಧಿಸುವ ಸ್ಥಳ. ಅಲ್ಲಿ ಮತ್ತು ಮಿಕ್ಕಂತೆ ಆಹಾರಾದಿಗಳಿಗೆ ಉಪಯೋಗಿಸತಕ್ಕ ಧಾನ್ಯಗಳನ್ನು ಬೀಸುವ ಕಲ್ಲಿನಿಂದ ಅರೆಯುವುದು, ಕುಟ್ಟಿ ಪುಡಿಮಾಡುವುದು, ಕಸಬರಿಗೆಯಿಂದ ಕಸ ತೆಗೆಯುವುದು-ಮುಂತಾದ ಕ್ರಿಯೆಗಳಲ್ಲಿ ಸೂಕ್ಷ್ಮಪ್ರಾಣಿಗಳು ನಾಶವಾಗುತ್ತವೆ. ನೀರಿನ ಉಪಯೋಗದಿಂದ ಜಲಚರವಾದ ಅಗೋಚರ ಸೂಕ್ಷ್ಮ ಪ್ರಾಣಿಗಳ ನಾಶವಾಗುತ್ತದೆ. ಹೀಗೆ ದೃಷ್ಟಾದೃಷ್ಟ ರೀತಿಯಲ್ಲಿ ಪ್ರಾಣಿಗಳಿಗೆ ಉಂಟಾಗುವ ಹಿಂಸಾದೋಷಗಳಿಗೆ ಪ್ರತಿನಿತ್ಯವೂ ಮಾಡತಕ್ಕ ನಿತ್ಯಕರ್ಮರೂಪವಾದ ಪ್ರಾಯಶ್ಚಿತ್ತ ಉಂಟು. ಇದನ್ನು ತ್ರೈವರ್ಣಿಕರಲ್ಲಿ ಬ್ರಾಹ್ಮಣರೇ ಮಾಡತಕ್ಕದ್ದು. ಮಾಡದೇ ಇದ್ದರೆ ದೋಷ ಮನುಸ್ಮೃತಿಯಲ್ಲಿ ಹೇಳಿರುವ ಐದು ಯಜ್ಞಗಳು ಹೀಗಿವೆ:
ಅಧ್ಯಯನ ಅಧ್ಯಾಪನ ಮಾಡುವುದು ಬ್ರಹ್ಮಯಜ್ಞ, ನಿತ್ಯಶ್ರಾದ್ಧ, ಅಥವಾ ತರ್ಪಣ ಮಾಡುವುದು ಪಿತೃಯಜ್ಞ, ದೇವತೆಗಳ ಪ್ರೀತ್ಯರ್ಥವಾಗಿ ಹವನ ಮಾಡುವುದು ವೈಶ್ವದೇವ ದೇವಯಜ್ಞ, ಭೂತಗಳಿಗೆ ಬಲಿ ಕೊಡುವುದು ಭೂತಯಜ್ಞ, ಅತಿಥಿಗಳಿಗೆ ಯೋಗ್ಯತೆಗೆ ಸರಿಯಾಗಿ ಸತ್ಕಾರ ಮಾಡುವುದು ನೃಯಜ್ಞ. ಅರಣ್ಯಕ, ಪದ್ಮಪುರಾಣ, ಮಹಾಭಾರತ, ಕರ್ಮಪ್ರದೀಪಗಳಲ್ಲೂ ಇವುಗಳ ಉಲ್ಲೇಖವಿದೆ. ಪದ್ಮಪುರಾಣದಲ್ಲಿನ ಸೃಷ್ಟಿ ಖಂಡದಲ್ಲಿ ಮಾತ್ರ ಪತಿಭಕ್ತಿ, ಸರ್ವಸಮತ್ವ, ಮಿತ್ರಾದ್ರೋಹ, ವಿಷ್ಣುಭಕ್ತಿಗಳನ್ನು ಪಂಚಮಹಾಯಜ್ಞಗಳೆನ್ನಲಾಗಿದೆ. ಯಾರಿಂದ ಈ ನಿತ್ಯ ಕರ್ಮಗಳು ಆಚರಿಸಿಲ್ಪಡುವುದಿಲ್ಲವೋ ಅವರು ಬದುಕಿದ್ದರೂ ಸತ್ತಂತೆ ಎಂದು ಮನ್ವಾದಿಮಹರ್ಷಿಗಳಿಂದ ತಿಳಿಸಲ್ಪಟ್ಟಿರುತ್ತದೆ. ಧಾರ್ಮಿಕವಾದ ಈ ಕರ್ಮಗಳು ಅತ್ಯಂತ ಧರ್ಮಸೂಕ್ಷ್ಮಗಳಿಂದ ಕೂಡಿವೆ.