ವಿಷಯಕ್ಕೆ ಹೋಗು

ನೋಹ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೋಹ್ (ಇಂಗ್ಲಿಷ್ Noah, ಅರೇಬಿಕ್ نوح) ಯಹೂದಿ, ಕ್ರಿಶ್ಚಿಯನ್, ಇಸ್ಲಾಂ, ಬಹಾಯಿ ಮುಂತಾದ ಅಬ್ರಹಾಮಿಕ್ ಧರ್ಮಗಳು ಅತ್ಯಂತ ಗೌರವದಿಂದ ಕಾಣುವ ವ್ಯಕ್ತಿ. ಇಸ್ಲಾಂ ಧರ್ಮದ ಪ್ರಕಾರ ದೇವರ ಪ್ರವಾದಿಗಳಲ್ಲಿ ಒಬ್ಬರು.

ವಂಶಾವಳಿ

[ಬದಲಾಯಿಸಿ]
  • ಆದಮ್
  • ಸೇತ್
  • ಎನೋಷ್
  • ಕೇನಾನ್
  • ಮಹಲೇಲ್
  • ಯರೆದ್
  • ಹನೋಕ್
  • ಮೆತೋಷೆಲಹ್
  • ಲಮೆಕ್
  • ನೋಹ್

ನೋಹ್ ಆದಮರ ಹತ್ತನೇ ವಂಶದವರು. ಬೈಬಲ್ ಹಳೆಯ ಒಡಂಬಡಿಕೆಯಲ್ಲಿ ಅವರ ವಂಶಾವಳಿಯ ಬಗ್ಗೆ ಉಲ್ಲೇಖವಿದೆ.[]

ಚರಿತ್ರೆ

[ಬದಲಾಯಿಸಿ]

ಬೈಬಲ್ ಹಳೆಯ ಒಡಂಬಡಿಕೆಯಲ್ಲಿರುವ ನೋಹರ ಚರಿತ್ರೆ ಹೀಗಿದೆ:

ಆತ ಸತ್ಪುರುಷ, ಅವನಂಥ ನಿರ್ದೋಷಿ ಆ ಕಾಲದಲ್ಲಿ ಯಾರೂ ಇರಲಿಲ್ಲ. ದೇವರೊಡನೆ ಆತ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಿದ್ದ. ಆತನಿಗೆ ಶೇಮ್, ಹಾಮ್ ಮತ್ತು ಯೆಫೆತ್ ಎಂಬ ಮೂರು ಮಂದಿ ಮಕ್ಕಳು. ಜಗತ್ತು ದೇವರ ದೃಷ್ಟಿಯಲ್ಲಿ ಕೆಟ್ಟುಹೋಗಿತ್ತು. ಹಿಂಸಾಚಾರದಿಂದ ತುಂಬಿತುಳುಕುತ್ತಿತ್ತು. ಭೂನಿವಾಸಿಗಳೆಲ್ಲರು ತಮ್ಮ ನಡತೆಯನ್ನು ಕೆಡಿಸಿಕೊಂಡಿದ್ದರು. ಜಗವಿಡೀ ಕೆಟ್ಟುಹೋಗಿರುವುದನ್ನು ಕಂಡ ದೇವರು, ನೋಹನಿಗೆ, “ನರಮಾನವರೆಲ್ಲರಿಗೆ ಸರ್ವನಾಶವನ್ನು ತೀರ್ಮಾನಿಸಿದ್ದೇನೆ. ಜಗವೆಲ್ಲವು ಹಿಂಸಾಚಾರದಿಂದ ತುಂಬಿಹೋಗಿದೆ. ನಾನು ಅವರನ್ನೂ ಜಗದಲ್ಲಿರುವುದೆಲ್ಲವನ್ನೂ ಅಳಿಸಿಬಿಡುತ್ತೇನೆ. ನೀನು ತುರಾಯಿಮರದಿಂದ ನಾವೆಯೊಂದನ್ನು ಮಾಡಿಕೊ; ಅದರ ತುಂಬ ಕೊಠಡಿಗಳಿರಲಿ; ಅದರ ಒಳಕ್ಕೂ ಹೊರಕ್ಕೂ ರಾಳಪದಾರ್ಥವನ್ನು ಹಚ್ಚು. ಅದನ್ನು ಹೀಗೆ ಮಾಡು: ಅದರ ಉದ್ದ ಮುನ್ನೂರು ಮೊಳ, ಅಗಲ ಐವತ್ತು ಮೊಳ, ಎತ್ತರ ಮೂವತ್ತು ಮೊಳ ಇರಲಿ. ಅದರ ಚಾವಣಿಯ ಕೆಳಗೆ ಸುತ್ತಲೂ ಒಂದು ಮೊಳ ಎತ್ತರದ ಕಿಟಕಿ ಇಡು, ಪಕ್ಕದಲ್ಲಿ ಬಾಗಿಲಿರಲಿ; ಒಂದರ ಮೇಲೆ ಒಂದರಂತೆ ನಾವೆಯಲ್ಲಿ ಮೂರು ಅಂತಸ್ತುಗಳನ್ನು ಮಾಡು. ನಾನು ಭೂಮಿಯ ಮೇಲೆ ಜಲಪ್ರಳಯವನ್ನು ಬರಮಾಡಲಿದ್ದೇನೆ. ಅದು ಆಕಾಶದ ಕೆಳಗಿರುವ ಸಕಲ ಪ್ರಾಣಿಗಳನ್ನೂ ಅಳಿಸಿಬಿಡುವುದು. ಭೂಮಿಯಲ್ಲಿರುವ ಸಮಸ್ತವೂ ನಾಶವಾಗುವುದು. ಆದರೆ ನಿನ್ನೊಡನೆ ಒಂದು ಒಡಂಬಡಿಕೆ ಮಾಡಿಕೊಳ್ಳುತ್ತೇನೆ. ನೀನು ಹೆಂಡತಿ, ಮಕ್ಕಳು ಹಾಗೂ ಸೊಸೆಯರ ಸಮೇತ ನಾವೆಯನ್ನು ಹತ್ತಬೇಕು. ಅಲ್ಲದೆ, ನಿನ್ನೊಡನೆ ಬದುಕಿಸಲು ಜೀವಿಗಳ ಪ್ರತಿಯೊಂದು ಜಾತಿಯಲ್ಲೂ ಒಂದು ಗಂಡು, ಒಂದು ಹೆಣ್ಣು ಹೀಗೆ ಒಂದೊಂದು ಜೊತೆಯನ್ನು ನಾವೆಯಲ್ಲಿ ಸೇರಿಸಿಕೊ. ಪ್ರಾಣಿಪಕ್ಷಿ, ಕ್ರಿಮಿಕೀಟ ಇವುಗಳ ಸಕಲ ಜಾತಿಗಳಲ್ಲಿ ಎರಡೆರಡು ಬದುಕಿಬಾಳಲು ನಿನ್ನೊಡನೆ ಬರಲಿ. ಎಲ್ಲ ತರಹದ ಭೋಜನಪದಾರ್ಥಗಳನ್ನು ಶೇಖರಿಸಿಟ್ಟುಕೊ. ಅದು ನಿನಗೂ ಪ್ರಾಣಿಗಳಿಗೂ ಆಹಾರವಾಗುವುದು,” ಎಂದು ಹೇಳಿದರು. ನೋಹನು ಹಾಗೆಯೇ ಮಾಡಿದನು. ದೇವರ ಆಜ್ಞಾನುಸಾರ ನಡೆದುಕೊಂಡನು.[]

ಜಲಪ್ರಳಯ

[ಬದಲಾಯಿಸಿ]

ನೋಹರ ಕಾಲದಲ್ಲಿ ಸಂಭವಿಸಿದ ಜಲಪ್ರಳಯದ ಬಗ್ಗೆ ಬೈಬಲ್ ಹಳೆಯ ಒಡಂಬಡಿಕೆಯಲ್ಲಿ ಹೀಗೆ ವಿವರಿಸಲಾಗಿದೆ:

ಸರ್ವೇಶ್ವರ ಸ್ವಾಮಿ ನೋಹನಿಗೆ, "ನೀನೂ ನಿನ್ನ ಮನೆಯವರೆಲ್ಲರೂ ನಾವೆಯನ್ನು ಸೇರಿಕೊಳ್ಳಿರಿ; ಈಗಿನ ಪೀಳಿಗೆಯಲ್ಲಿ ನೀನೊಬ್ಬನೇ ನನ್ನ ದೃಷ್ಟಿಗೆ ಸತ್ಪುರುಷ. ಎಲ್ಲ ಶುದ್ಧ ಪ್ರಾಣಿಗಳಲ್ಲಿ ಏಳೇಳು ಗಂಡುಹೆಣ್ಣುಗಳನ್ನು ಶುದ್ಧವಲ್ಲದ ಪ್ರಾಣಿಗಳಲ್ಲಿ ಎರಡೆರಡು ಗಂಡುಹೆಣ್ಣುಗಳನ್ನೂ ನಿನ್ನೊಂದಿಗೆ ಕರೆದುಕೊ. ಪಕ್ಷಿಗಳಲ್ಲಿಯೂ ಏಳೇಳು ಗಂಡುಹೆಣ್ಣುಗಳನ್ನು ತೆಗೆದುಕೊ. ಹೀಗೆ ಆಯಾ ಜಾತಿಯನ್ನು ಭೂಮಿಯಲ್ಲಿ ಉಳಿಸಿ ಕಾಪಾಡಬೇಕು. ಏಳು ದಿನಗಳಾನಂತರ ಭೂಮಿಯ ಮೇಲೆ ನಲವತ್ತು ದಿನ ಹಗಲಿರುಳೆನ್ನದೆ ಮಳೆ ಸುರಿಸುವೆನು; ನಾನು ಸೃಷ್ಟಿಮಾಡಿದ ಜೀವರಾಶಿಗಳನ್ನೆಲ್ಲ ಭೂಮಿಯಿಂದ ಅಳಿಸಿಹಾಕುವೆನು,” ಎಂದು ಹೇಳಿದರು. ಸರ್ವೇಶ್ವರ ಆಜ್ಞಾಪಿಸಿದಂತೆಯೇ ನೋಹನು ಎಲ್ಲವನ್ನು ಮಾಡಿದನು. ಭೂಮಿಯ ಮೇಲೆ ಜಲಪ್ರಳಯ ಬಂದಾಗ ನೋಹನಿಗೆ ಆರುನೂರು ವರ್ಷ. ಆ ಜಲಪ್ರಳಯದಿಂದ ತಪ್ಪಿಸಿಕೊಳ್ಳಲು ನೋಹನು ತನ್ನ ಮಡದಿ, ಮಕ್ಕಳು, ಸೊಸೆಯರ ಸಮೇತ ನಾವೆಯನ್ನು ಹತ್ತಿದನು. ದೇವರ ಆಜ್ಞಾನುಸಾರ ಶುದ್ಧಾಶುದ್ಧ ಪ್ರಾಣಿಗಳಲ್ಲಿಯೂ ಪಕ್ಷಿಗಳಲ್ಲಿಯೂ ಕ್ರಿಮಿಕೀಟಗಳಲ್ಲಿಯೂ ಗಂಡುಹೆಣ್ಣುಗಳು ಜೋಡಿಜೋಡಿಯಾಗಿ ಬಂದು ನೋಹನೊಂದಿಗೆ ನಾವೆಯಲ್ಲಿ ಸೇರಿಕೊಂಡವು. ಏಳು ದಿನಗಳಾದ ಬಳಿಕ ಜಲಪ್ರಳಯವಾಗತೊಡಗಿತು.

ನೋಹನ ಜೀವಮಾನದ ಆರುನೂರನೆಯ ವರ್ಷದ ಎರಡನೆಯ ತಿಂಗಳಿನ ಹದಿನೇಳನೆಯ ದಿನ ಭೂಮಿಯ ಅಡಿಸಾಗರದ ಸೆಲೆಗಳು ಒಡೆದವು. ಆಕಾಶದ ತೂಬುಗಳು ತೆರೆದವು. ನಲವತ್ತು ದಿನವೂ ಹಗಲಿರುಳೆನ್ನದೆ ಭೂಮಿಯ ಮೇಲೆ ಬಿರುಮಳೆ ಸುರಿಯಿತು. ಅದೇ ದಿನ ನೋಹನೂ ಅವನ ಹೆಂಡತಿಯೂ ಮತ್ತು ಶೇಮ್, ಹಾಮ್, ಯೆಫೆತ್ ಎಂಬ ಅವನ ಮಕ್ಕಳೂ ಅವರ ಮಡದಿಯರೂ ನಾವೆಯನ್ನು ಹೊಕ್ಕರು. ಅವರೊಂದಿಗೆ ಸಕಲ ವಿಧವಾದ ಕಾಡುಮೃಗಗಳೂ ಸಾಕು ಪ್ರಾಣಿಗಳೂ ಕ್ರಿಮಿಕೀಟಗಳೂ ರೆಕ್ಕೆಬಡಿಯುವ ಹಕ್ಕಿಪಕ್ಷಿಗಳೂ ತಮ್ಮತಮ್ಮ ಜಾತಿಗನುಸಾರ ಎಲ್ಲ ಜೀವಿಗಳು ಎರಡೆರಡಾಗಿ ಬಂದು ನಾವೆಯನ್ನು ಸೇರಿದವು. ದೇವರು ನೋಹನಿಗೆ ಅಪ್ಪಣೆಕೊಟ್ಟ ಮೇರೆಗೆ, ಗಂಡು ಹೆಣ್ಣಂತೆ ಎಲ್ಲ ಪ್ರಾಣಿಗಳು ಬಂದು ಸೇರಿದವು. ಬಳಿಕ ಸರ್ವೇಶ್ವರ, ನೋಹನನ್ನು ಒಳಗೆ ಬಿಟ್ಟು ಬಾಗಿಲನ್ನು ಮುಚ್ಚಿದರು.

ಜಲಪ್ರಳಯಡ ಮಳೆ ನಲವತ್ತು ದಿನ ಭೂಮಿಯ ಮೇಲೆ ಒಂದೇ ಸಮನೆ ಸುರಿಯಿತು. ನೀರು ಹೆಚ್ಚುತ್ತಾ ನಾವೆಯನ್ನು ಮೇಲೆತ್ತಲು ಅದು ನೀರಿನ ಮೇಲೆ ತೇಲತೊಡಗಿತು. ನೀರು ಪ್ರಬಲವಾಗಿ ಹೆಚ್ಚಲು ನಾವೆಯು ಅದರ ಮೇಲೆ ಚಲಿಸಿತು. ಅದು ಇನ್ನೂ ಎಷ್ಟು ಅಧಿಕವಾಯಿತು ಎಂದರೆ, ಆಕಾಶದ ಕೆಳಗಿರುವ ಗುಡ್ಡಬೆಟ್ಟಗಳೆಲ್ಲ ಮುಚ್ಚಿಹೋದವು. ಹೀಗೆ ಮುಚ್ಚಿಹೋದ ಬೆಟ್ಟಗಳ ಮೇಲೆ ಹದಿನೈದು ಮೊಳ ನೀರು ನಿಂತಿತು. ಈ ಕಾರಣ ಭೂಮಿಯ ಮೇಲೆ ಸಂಚರಿಸುತ್ತಿದ್ದ ಎಲ್ಲ ಪ್ರಾಣಿಗಳು, ಕಾಡುಮೃಗಗಳು, ಸಾಕುಪ್ರಾಣಿಗಳು, ಕ್ರಿಮಿಕೀಟಗಳು, ಮನುಷ್ಯರು ಸಹಿತವಾಗಿ ನಾಶವಾದುವು. ಉಸಿರಾಡುವ ಭೂಮಿಯ ಜಂತುಗಳೆಲ್ಲ ಸತ್ತುಹೋದವು. ಮನುಷ್ಯರು ಮೊದಲ್ಗೊಂಡು ಪ್ರಾಣಿಪಕ್ಷಿ, ಕ್ರಿಮಿಕೀಟದವರೆಗೆ ಭೂಮಿಯ ಮೇಲಿನದೆಲ್ಲವೂ ನಾಶವಾಯಿತು. ಭೂಮಿಯಿಂದ ಎಲ್ಲವೂ ನಿರ್ಮೂಲವಾಯಿತು. ನೋಹನು ಹಾಗೂ ಅವನೊಂದಿಗೆ ನಾವೆಯಲ್ಲಿದ್ದ ಜೀವಿಗಳು ಮಾತ್ರ ಉಳಿದುಕೊಂಡವು. ಪ್ರಳಯದ ನೀರು ಭೂಮಿಯ ಮೇಲೆ ನೂರೈವತ್ತು ದಿನಗಳವರೆಗೂ ಪ್ರಬಲವಾಗಿಯೇ ಇತ್ತು.[]

ಉಲ್ಲೇಖಗಳು

[ಬದಲಾಯಿಸಿ]
  1. ಆದಿಕಾಂಡ 5:1-30
  2. ಆದಿಕಾಂಡ 6:9-22
  3. ಆದಿಕಾಂಡ 7:1-24
"https://kn.wikipedia.org/w/index.php?title=ನೋಹ್&oldid=1156664" ಇಂದ ಪಡೆಯಲ್ಪಟ್ಟಿದೆ