ನೊಣವಿನಕೆರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೊಣವಿನಕೆರೆ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯಲ್ಲಿ ತಿಪಟೂರು ತಾಲ್ಲೂಕಿನಲ್ಲಿರುವ ಒಂದು ದೊಡ್ಡ ಗ್ರಾಮ, ಹೋಬಳಿ ಕೇಂದ್ರ. ತಿಪಟೂರಿನ ಆಗ್ನೇಯಕ್ಕೆ ಸುಮಾರು 13 ಕಿಮೀ. ದೂರದಲ್ಲಿದೆ. ಜನಸಂಖ್ಯೆ 3,208 (1971).

ನೊಣವಿನಕೆರೆ ಎಂದು ಹೆಸರು ಬರಲು ಕಾರಣ ಇಲ್ಲಿನ ಕೆರೆಯನ್ನು ನೊಳಂಬ ರಾಜರು ಕಟ್ಟಿಸಿದ್ದು. ನೊಳಂಬಕೆರೆ ಎಂಬುವುದು ನಂತರ ಅಪ್ರಬಾಂಶವಾಗಿ ನೊಣವಿನಕೆರೆ ಎಂದು ಹೆಸರಾಗಿದೆ. ನೊಣವಿನಕೆರೆ ಒಂದು ಕಾಲದಲ್ಲಿ ಪಾಶುಪತ ಕಾಳಾಮುಖ ಶೈವಶಾಖೆಗಳ ಪ್ರಭಲ ಕೇಂದ್ರವಾಗಿತ್ತು , ಇರಿವನೊಳಂಬ ಎಂಬ ರಾಜನು ಅನೇಕ ಪಾಶುಪತ ಮಠಗಳಿಗೆ ದತ್ತಿಗೆ ಕೊಟ್ಟಿದ್ದನು. ನೊಳಂಬ ರಾಜರಿಂದ ಸ್ಥಾಪಿಸಲ್ಪಟ್ಟ ಪಾಶುಪತ ಸಂಪ್ರದಾಯದ ಮಠದಲ್ಲಿ ನೊಣವಿನಕೆರೆಯ ಕಾಡಸಿದ್ಧೇಶ್ವರ ಮಠವೂ ಒಂದಾಗಿದೆ. ಇಲ್ಲಿನ ಕಲ್ಲೇಶ್ವರ ದೇಗುಲದಲ್ಲಿ ನೊಳಂಬ ವಂಶದ ಮೂವರು ರಾಜರಿಗೆ ಪಟ್ಟಕಟ್ಟಿದ್ದರು ಇಲ್ಲಿನ ಸಮೀಪವಿರುವ ತಿಪಟೂರಿಗೆ ಹೆಸರು ಬರಲಿಕ್ಕೂ ಕಾರಣ ನೊಳಂಬರ ಮೂರು ರಾಜರ ಪಟ್ಟದ ತ್ರಿಪಟ್ಟದೂರು ಎಂಬುದೇ ಆಗಿದೆ.

ಈ ಊರಿನ ದೊಡ್ಡ ಕೆರೆಗೆ ನೊಣಬನಕೆರೆ ಎಂಬ ಹೆಸರಿತ್ತು. ಅದರಿಂದ ಈ ಊರಿಗೂ ನೊಣಬನಕೆರೆ ಎಂಬ ಹೆಸರು ಬಂದು ಅನಂತರ ಇದು ನೊಣವಿನಕೆರೆ ಎಂದಾಯಿತು. 1162ರ ಶಾಸನವೊಂದರಲ್ಲಿ ನೊಣಬನಕೆರೆಯ ಉಲ್ಲೇಖವಿದೆ.

ಪ್ರತಿ ಬುಧವಾರ ಇಲ್ಲಿ ಸಂತೆ ಕೂಡುತ್ತದೆ. ಇಲ್ಲಿ ಒಂದು ಸರ್ಕಾರಿ ಪ್ರೌಢಶಾಲೆ. ಪ್ರಾಥಮಿಕ ಆರೋಗ್ಯಕೇಂದ್ರ ಮತ್ತು ಪಶುವೈದ್ಯಶಾಲೆ ಇವೆ.

ನೊಣವಿನಕೆರೆ ಹೋಬಳಿಯ ಜನರ ಮುಖ್ಯ ಕಸುಬು ವ್ಯವಸಾಯ. ಜೊತೆಗೆ ಕುರಿ ಸಾಕುವುದು. ಪಶುಪಾಲನೆ, ನೇಯ್ಗೆ, ನಾರಿನ ಕೈಗಾರಿಕೆ ಇವೆ. ಇಲ್ಲಿಯ ವಾಣಿಜ್ಯ ಬೆಳೆ ತೆಂಗು; ಇತರ ಬೆಳೆಗಳು ರಾಗಿ, ಬತ್ತ, ಜೋಳ, ಅವರೆ ಮತ್ತು ಹುರುಳಿ.

ನೊಣವಿನಕೆರೆ ಹೋಬಳಿಯ ಗ್ರಾಮಗಳ ಪೈಕಿ ವಿಘ್ನಸಂತೆ ಮುಖ್ಯವಾದದ್ದು. ಇಲ್ಲಿ ಹೊಯ್ಸಳರ ಕಾಲದ ಸುಂದರವಾದ ಲಕ್ಷ್ಮೀನರಸಿಂಹ ದೇವಾಲಯವಿದೆ.ನೊಣವಿನಕೆರೆ ಹಿಂದೆ ಹೆಬ್ಬಾರ್ ಶ್ರೀ ವೈಷ್ಣವರ ಪಂಚಗ್ರಾಮಗಳಲ್ಲೊಂದಾಗಿತ್ತು. ಉಳಿದ ನಾಲ್ಕು ಗ್ರಾಮಗಳು ಕಡಬ, ಮಾಯಸಂದ್ರ, ನುಗ್ಗೆಹಳ್ಳಿ ಮತ್ತು ಬಿಂಡಿಗನವಿಲೆ.

ದೇವಾಲಯಗಳು[ಬದಲಾಯಿಸಿ]

ಇಲ್ಲಿಯ ನೊಣಬೇಶ್ವರ, ಶಾಂತೇಶ್ವರ, ಗರಿಗೇಶ್ವರ, ಚೋಳೇಶ್ವರ, ಮತ್ತು ಕಲ್ಲೇಶ್ವರ ದೇವಾಲಯಗಳಲ್ಲಿ ಕೆಲವು ಬಹುಶಃ ಆ ಕಾಲದವೆಂದು ಹೇಳಬಹುದು. ಇಲ್ಲಿಯ ವೇಣುಗೋಪಾಲ, ಬೇಟೆರಾಯ, ಮತ್ತು ಇತರ ದೇವಾಲಯಗಳು ಹೊಯ್ಸಳ ಮತ್ತು ವಿಜಯನಗರ ಕಾಲಗಳಲ್ಲಿ ನಿರ್ಮಿತವಾದವು.

ನೊಣಬೇಶ್ವರ ದೇವಾಲಯ[ಬದಲಾಯಿಸಿ]

ನೊಣಬೇಶ್ವರ ದೇವಾಲಯ ಒಂದು ಸಣ್ಣ ಕಟ್ಟಡ. ಇದನ್ನು ಮೊದಲು ಗ್ರ್ಯಾನೈಟ್ ಕಲ್ಲಿನಿಂದ ಕಟ್ಟಲಾಗಿತ್ತು. ಇದರ ಗೋಡೆಗಳನ್ನು ಈಚೆಗೆ (ಬಹುಶಃ 19ನೆಯ ಶತಮಾನದಲ್ಲಿ) ಇಟ್ಟಿಗೆಗಳಿಂದ ಪುನರ್ನಿರ್ಮಿಲಾಯಿತು. ಮೂಲ ದೇವಸ್ಥಾನದಲ್ಲಿ ಮಧ್ಯಮ ಗಾತ್ರದ ಲಿಂಗವಿರುವ ಗರ್ಭಗೃಹ, ಮತ್ತು ನಾಲ್ಕು ದಪ್ಪಕಂಬಗಳಿರುವ ನವರಂಗ ಇವೆ. ಇದಕ್ಕೆ ಉತ್ತರದಲ್ಲಿ ಗರಿಗೇಶ್ವರ ದೇವಾಲಯವಿದೆ.

ಗರಿಗೇಶ್ವರ ದೇವಾಲಯ[ಬದಲಾಯಿಸಿ]

ಇದೂ ಮೊದಲನೆಯದನ್ನೇ ಹೋಲುತ್ತದೆ. ಈ ಎರಡೂ ದೇವಸ್ಧಾನಗಳು ಒಂದಕ್ಕೊಂದು ಹತ್ತಿರದಲ್ಲಿರುವುದರಿಂದ ಪ್ರಾಯಶ: ಇವು ಜೋಡಿದೇವಸ್ಧಾನಗಳಾಗಿದ್ದುವು. ಇವುಗಳ ನಡುವೆ ಇರುವ ಜಗತಿಗೆ ಸಪ್ತಮಾತೃಕೆಯರ ಗುಂಪಿಗೆ ಸೇರಿದ ಕೆಲವು ವಿಗ್ರಹಗಳಿವೆ. ಗರಿಗೇಶ್ವರ ದೇವಾಲಯದ ಹಿಂದೆ ಸ್ವಲ್ಪ ದೂರದಲ್ಲಿ ಶಾಂತೇಶ್ವರ ದೇವಾಲಯವಿದೆ. ರಚನೆಯಲ್ಲಿ ಇದೂ ಹಿಂದಿನ ಎರಡನ್ನು ಹೋಲುತ್ತದೆ. ನವರಂಗದಲ್ಲಿರುವ ನಂದಿವಿಗ್ರಹ ಹಳೆಯದೆಂದು ಕಾಣುತ್ತದೆ. ಇದರ ಕೊರಳಿನ ಸರ ವಿಶಿಷ್ಟವಾದ್ದು.

ಗೋಪಾಲಸ್ವಾಮಿ ದೇವಸ್ಧಾನ[ಬದಲಾಯಿಸಿ]

ಇಲ್ಲಿಯ ಪ್ರಮುಖ ದೇವಸ್ಧಾನಗಳ ಪೈಕಿ ಮುಖ್ಯವಾದ್ದು ಗೋಪಾಲಸ್ವಾಮಿಯದು. ಇದು ಹೊಯ್ಸಳರ ಕಾಲಕ್ಕೆ ಸೇರಿದ ತ್ರಿಕೂಟಾಚಲ ದೇವಾಲಯ. ಮಹಾದ್ವಾರದ ಮೇಲೆ ಗೋಪುರವಿಲ್ಲ. ಮುಖಮಂಟಪವೂ ಉದ್ದನೆಯ ಕಂಬಗಳಿಂದ ಕೂಡಿದ ನವರಂಗವೂ ಬಹುಶಃ ವಿಜಯನಗರದ ಕಾಲದವು. ಈ ದೇವಸ್ಧಾನದಲ್ಲಿ ಕೇಶವ, ಯೋಗಾನರಸಿಂಹ ಮತ್ತು ವೇಣುಗೋಪಾಲ ವಿಗ್ರಹಗಳಿವೆ. ಬೇಟೆರಾಯಸ್ವಾಮಿ ದೇವಸ್ಧಾನವನ್ನು 16ನೆಯ ಶತಮಾನದಲ್ಲಿ ಕೊನೇರಿ ಅಯ್ಯಂಗಾರ್ಯನೆಂಬವನು ಕಟ್ಟಿಸಿದನೆಂದು ತಿಳಿಯುತ್ತದೆ. ನವರಂಗದ ಕಂಬವೊಂದರ ಮೇಲೆ ಗಡ್ಡ ಬಿಟ್ಟು ಟೋಪಿಯನ್ನು ಹಾಕಿಕೊಂಡು ಕೈಮುಗಿದುಕೊಂಡಿರುವ ಪುರುಷ ವಿಗ್ರಹ ಕೊನೇರಿ ಅಯ್ಯಂಗಾರ್ಯನದು ಎಂದು ಹೇಳುತ್ತಾರೆ. ದೇವಸ್ಧಾನಕ್ಕೆ ಗೋಪುರವಿಲ್ಲದ ಮಹಾದ್ವಾರ. ಗರ್ಭಗೃಹ, ಸುಕನಾಸಿ ಮತ್ತು ವಿಸ್ತಾರವಾದ ನವರಂಗ ಇವೆ. ಗರ್ಭಗೃಹದಲ್ಲಿ ಕಪ್ಪುಕಲ್ಲಿನಿಂದ ಕಡೆದ ಸುಂದರವಾದ ವೆಂಕಟೇಶ್ವರ ವಿಗ್ರಹವಿದೆ. ವಿಜಯನಗರದ ಶಿಲ್ಪದ ಮೇಲೆ ಹೊಯ್ಸಳ ಶೈಲಿಯ ಪ್ರಭಾವದ ನಿದರ್ಶನವಿದು.

ಗೊಲ್ಲಮ್ಮ ದೇವಾಲಯ[ಬದಲಾಯಿಸಿ]

ನೊಣವಿನಕೆರೆಯ ಏರಿಯ ಮೇಲೆ ಗೊಲ್ಲಮ್ಮ ದೇವಿಯ ಚಿಕ್ಕ ದೇವಾಲಯವಿದೆ. ಗೊಲ್ಲಮ್ಮ ನೊಣವಿನಕೆರೆ ಸಮೀಪದಲ್ಲೇ ಇರುವ ಶಕುನಗಿರಿ ಗೊಲ್ಲರಹಟ್ಟಿಗೋಕುಲದವರು. ಅವರು ಗೊಲ್ಲ ಸಮುದಾಯದವರಾದಕಾರಣ ಗೊಲ್ಲಮ್ಮ ಎಂದು ಕರೆಯುತ್ತಾರೆ. ನೊಣವಿನಕೆರೆಯ ಕೆರೆಯನ್ನು ರಕ್ಷಿಸುವ ತಾಯಿ ಎಂದು ಭಕ್ತರು ಪೂಜಿಸುತ್ತಾರೆ. ಈ ದೇವಾಲಯದಲ್ಲಿ ಅರ್ಚಕರು ಇರುವುದಿಲ್ಲ ಬರುವ ಭಕ್ತರೆ ಪೂಜಾಕಾರ್ಯ ಮುಗಿಸಿಕೊಂಡು ಹೋಗುತ್ತಾರೆ. ಪ್ರತಿನಿತ್ಯ ಕೆರೆಯ ಏರಿಯ ಮೇಲೆ ಸಂಚರಿಸುವ ಸಾವಿರಾರು ಪ್ರಯಾಣಿಕರು ಗೊಲ್ಲಮ್ಮನ ಆಶೀರ್ವಾದ ಪಡೆದು ಮುಂದೆ ಸಾಗುತ್ತಾರೆ.

ಇತರ ದೇವಸ್ಥಾನಗಳು[ಬದಲಾಯಿಸಿ]

ಗ್ರಾಮದೇವತೆ ಉಬಸಾಲಮ್ಮನ (ಉಡುಸಲಮ್ಮ) ದೇವಸ್ಧಾನವಿದೆ. ವರ್ಷಕ್ಕೊಮ್ಮೆ ಈ ದೇವತೆಯ ಜಾತ್ರೆ ನಡೆಯುತ್ತದೆ. ಪ್ರತಿವರ್ಷ ಮೇ ತಿಂಗಳಲ್ಲಿ ಬೇಟೆರಾಯಸ್ವಾಮಿ ರಥೋತ್ಸವ ನಡೆಯುತ್ತದೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: