ನೆಕ್ ಚಂದ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೆಕ್ ಚಂದ್ ಸೈನಿ

ನೆಕ್ ಚಂದ್ ಅವರ ರಾಕ್ ಗಾರ್ಡನ್‍ನಲ್ಲಿ ಕೃತಕ ಜಲಪಾತ
ರಾಷ್ಟ್ರೀಯತೆ ಭಾರತೀಯ
ಕ್ಷೇತ್ರ ಶಿಲ್ಪಕಲೆ
ಕೃತಿಗಳು ಚಂಡೀಗಢದ ರಾಕ್ ಗಾರ್ಡನ್
ಪುರಸ್ಕಾರಗಳು ಪದ್ಮಶ್ರೀ (೧೯೮೪)

ನೆಕ್ ಚಂದ್ ಸೈನಿ (नेक चंद सैनी; ೧೫ ಡಿಸೆಂಬರ್ ೧೯೨೪ - ೧೨ ಜೂನ್ ೨೦೧೫) ಒಬ್ಬ ಶಿಲ್ಪಿ. ಅವರು ಸ್ವಂತ ಪರಿಶ್ರಮದಿಂದ ಶಿಲ್ಪಕಲೆಯನ್ನು ಕಲಿತು ಚಂಡೀಗಢದಲ್ಲಿ ರಾಕ್ ಗಾರ್ಡನ್ ಸೃಷ್ಟಿಸಿದರು. ಈ ರಾಕ್ ಗಾರ್ಡನ್ ಸುಮಾರು ೧೮ ಎಲ್ರ ಪ್ರದೇಶದಲ್ಲಿ ವ್ಯಾಪಿಸಿದ್ದು ಚಂಡೀಗಢದಲ್ಲಿದೆ[೧].

ನೆಕ್ ಚಂದ್ ಅವರು ಮೂಲತಃ ಈಗ ಪಾಕಿಸ್ಥಾನದಲ್ಲಿರುವ ಗುರುದಾಸಪುರ ಜಿಲ್ಲೆಯಲ್ಲಿರುವ ಶಂಕರಗಢದವರು. ೧೯೪೭ರ ಭಾರತ ವಿಭಜನೆಯ ಸಮಯದಲ್ಲಿ ಅವರ ಕುಟುಂಬ ಭಾರತಕ್ಕೆ ವಲಸೆ ಬಂತು. ಆಗಷ್ಟೆ ನಿರ್ಮಾಣದ ಹಂತದಲ್ಲಿದ್ದ ಭಾರತದ ಪ್ರಥಮ ಸಂಪೂರ್ಣ ಯೋಜನಾಬದ್ಧ ನಗರ ಚಂಡೀಗಢದಲ್ಲಿ ಅವರಿಗೆ ಕೆಲಸ ದೊರೆಯಿತು. ಅವರು ಅಲ್ಲಿ ರಸ್ತೆಗಳ ಉಸ್ತುವಾರಿಯಲ್ಲಿ ಕೆಲಸ ಮಾಡಿದರು. ಅವರಿಗೆ ಭಾರತ ಸರಕಾರವು ೧೯೮೪ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ನೆಕ್ ಚಂದ್ ಅವರು ಜೂನ್ ೧೨, ೨೦೧೫ರಂದು ನಿಧನರಾದರು[೨],[೩].

ರಾಕ್ ಗಾರ್ಡನ್[ಬದಲಾಯಿಸಿ]

ನೆಕ್ ಚಂದ್ ಅವರು ತಮ್ಮ ಉದ್ಯೋಗವಾದ ರಸ್ತೆ ಕೆಲಸದ ಉಸ್ತುವಾರಿ ನಡೆಸುತ್ತಿದ್ದಾಗ ಸಾಕಷ್ಟು ಕಸ, ತ್ಯಾಜ್ಯಗಳನ್ನು ಸಂಗ್ರಹಿಸುತ್ತಿದ್ದರು. ಅವನ್ನೆಲ್ಲ ಪಕ್ಕದ ಸರಕಾರಿ ಕಾಡಿನಲ್ಲಿ ಸುರಿಯುತ್ತಿದ್ದರು. ತಮ್ಮ ಕೆಲಸದ ಅವಧಿ ಮುಗಿಯುತ್ತಿದ್ದಂತೆ ಈ ಕಾಡಿಗೆ ಹೋಗಿ ಅಲ್ಲಿ ಈ ತ್ಯಾಜ್ಯಗಳಿಂದ ಅದ್ಭುತ ಶಿಲ್ಪಗಳನ್ನು ಸೃಷ್ಟಿಸುತ್ತಿದ್ದರು. ಯಾರಿಗೂ ತಿಳಿಯದಂತೆ ಸುಮಾರು ೧೮ ವರ್ಷಗಳ ಕಾಲ ತಮ್ಮ ಕಾಯಕ ಮುಂದುವರಿಸಿ ಒಂದು ಸುಂದರ ಶಿಲ್ಪೋದ್ಯಾನವನ್ನು ಸೃಷ್ಟಿಸಿದರು. ಆದರೆ ಇದೆಲ್ಲ ಕಾನೂನುಬದ್ಧವಾಗಿರಲಿಲ್ಲ. ಸರಕಾರವು ಅದನ್ನು ಅಳಿಸಿಹಾಕಲು ಮುಂದಾದಾಗ ನೆಕ್ ಚಂದ್ ಅವರು ಜನರ ಸಹಾಯ ಪಡೆದರು. ಅದನ್ನು ಒಡೆದು ಹಾಕದಂತೆ ಜನರು ಸರಕಾಕ್ಕೆ ಒತ್ತಡ ಹೇರಿದರು. ಜನರ ಒತ್ತಡಕ್ಕೆ ಮಣಿದ ಸರಕಾರ ಆ ಉದ್ಯಾನವನವನ್ನೇ ಅಧಿಕೃತ ಮಾಡಿ, ಅದಕ್ಕೆ ನೆಕ್ ಚಂದ್ ಅವರನ್ನೇ ಅಧಿಕಾರಿಯಾಗಿ ನೇಮಿಸಿ ಅವರ ಕೈಕೆಳಗೆ ಕೆಲಸ ಮಾಡಲು ೫೦ ಜನರ ತಂಡವನ್ನೂ ನೇಮಿಸಿತು. ಹೀಗೆ ಹೊಸ ಉತ್ಸಾಹದಿಂದ ಕೆಲಸ ಮಾಡಿದ ನೆಕ್ ಚಂದ್ ಸುಂದರ ರಾಕ್ ಗಾರ್ಡನ್ ನಿರ್ಮಿಸಿದರು. ಈಗ ಅದನ್ನು ರಾಕ್ ಗಾರ್ಡನ್ ಸೊಸೈಟಿ ನೋಡಿಕೊಳ್ಳುತ್ತಿದೆ. ರಾಕ್ ಗಾರ್ಡನ್ ಅನ್ನು ವೀಕ್ಷಿಸಲು ಪ್ರತಿನಿತ್ಯ ಸರಾಸರಿ ಸುಮಾರು ೫೦೦೦ ಜನ ಭೇಟಿ ನೀಡುತ್ತಾರೆ.

ಬಾಹ್ಯ ಸಂಪರ್ಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. https://books.google.co.in/books?id=3CdgUwZBNwIC&pg=PA321&dq=Rock+Garden,+Chandigarh&as_brr=0&redir_esc=y#v=onepage&q=Rock%20Garden%2C%20Chandigarh&f=false
  2. ಪ್ರಜಾವಾಣಿ ವರದಿ https://web.archive.org/web/20150621084247/http://www.prajavani.net/article/%E0%B2%A8%E0%B3%86%E0%B2%95%E0%B3%8D-%E0%B2%9A%E0%B2%BE%E0%B2%82%E0%B2%A6%E0%B3%8D-%E0%B2%AE%E0%B2%A4%E0%B3%8D%E0%B2%A4%E0%B3%81-%E2%80%98%E0%B2%B0%E0%B2%BE%E0%B2%95%E0%B3%8D-%E0%B2%97%E0%B2%BE%E0%B2%B0%E0%B3%8D%E0%B2%A1%E0%B2%A8%E0%B3%8D%E2%80%99
  3. ನ್ಯೂಯಾರ್ಕ್ ಟೈಂಸ್ ವರದಿ https://www.nytimes.com/2015/06/15/arts/nek-chand-creator-of-a-sculpture-kingdom-in-india-dies-at-90.html?ref=obituaries&_r=0