ವಿಷಯಕ್ಕೆ ಹೋಗು

ನಿಷೇಧ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಷೇಧ ಎಂದರೆ ಇಂತಿಂಥದು ಮಾಡಬಾರದ್ದು, ನಿಷಿದ್ಧ, ಇಂತಿಂಥದು ಪವಿತ್ರ ಎಂದು ತಿಳಿಸುವ ಅಲಿಖಿತ ಕಾನೂನು. ಒಳಿತು ಕೆಡಕುಗಳ ದೃಷ್ಟಿಯಿಂದ ಸಮಾಜದಲ್ಲಿ ತಲೆಮಾರಿನಿಂದ ತಲೆಮಾರಿಗೆ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬಂದಿರುವ ಈ ಕಟ್ಟಳೆ ಪಾಲಿನೇಷನ್ ಶಬ್ದ ಟಾಬೂ ಎಂಬುದರಿಂದ ಬಂದಿದೆ.[] ಟಾಂಗಾವಾಲನೊಬ್ಬನ ಬಾಯಿಯಿಂದ ಕೇಳಿದ ಟಾಬೂ ಶಬ್ದವನ್ನು ಕ್ಯಾಪ್ಟನ್ ಕುಕ್ 1777ರಲ್ಲಿ ಬಳಕೆಗೆ ತಂದ. ಆಂಗ್ಲಭಾಷೆಯಲ್ಲಿ ಜಗತ್ತಿನಾದ್ಯಂತ ಈಗ ಇದೇ ಪದ ಬಳಕೆಯಲ್ಲಿದೆ. ಸಮಾಜದಲ್ಲಿ ಅಂಗೀಕೃತವಾಗಿರುವ, ಕೆಲಮಟ್ಟಿಗೆ ದೈವಿಕ ಆಧ್ಯಾತ್ಮಿಕ ನೈತಿಕ ಹಿನ್ನೆಲೆಗಳನ್ನುಳ್ಳ, ಮಾನಸಿಕ ಮಾಧ್ಯಮದಲ್ಲೇ ಕಾನೂನಿನ ಕಟ್ಟಳೆಗಳನ್ನೂ ಮೀರಿಸುವಂಥ ಸಶಕ್ತ ನಿಬಂಧನೆಯಾಗಿರುವಂಥದನ್ನು ನಿಷೇಧ ಅಥವಾ ಟಾಬೂ ಎಂದು ಕರೆಯಲಾಗುತ್ತದೆ. ನಿಷೇಧ ಶಬ್ದಕ್ಕೆ ಟಾಬೂಗಿರುವ ಅರ್ಥವ್ಯಾಪ್ತಿಯನ್ನು ನಾವೀಗ ತುಂಬಬೇಕಾಗಿದೆ. ಇದು ಸರಿಗಾಣದಲ್ಲಿ ಟಾಬೂ ಪದವನ್ನೇ ಬಳಸಿಕೊಳ್ಳಬಹುದು.

ಟಾಬೂ ಎಂಬುದು ಎರಡು ಭಿನ್ನ ಅರ್ಥಗಳನ್ನು ಹೊಂದಿದೆ. ಅದರ ಒಂದು ಮುಖ ಪವಿತ್ರ ಅಥವಾ ಪವಿತ್ರಕಾರ್ಯಕ್ಕೆ ಪ್ರತ್ಯೇಕವಾಗಿಟ್ಟದ್ದು ಎಂಬ ಅರ್ಥವನ್ನೂ ಇನ್ನೊಂದು ಮುಖ ಗೂಢ, ಅಪಾಯಕಾರಿ, ನಿಷೇಧಿಸಲ್ಪಟ್ಟದ್ದು, ಅಶುದ್ಧ ಎಂಬ ಅರ್ಥಗಳನ್ನೂ ಹೊಂದಿದೆ. ಮುಟ್ಟಲಾಗದ, ಸಮೀಪಿಸಲಾಗದ, ಅರ್ಥೈಸಲಾಗದ ಸಾವಿನ ಅಥವಾ ಸಾವಿಗೆ ಹತ್ತಿರವಾದ ವಿಷಯಗಳಿಗೂ ನಿಷೇಧಕ್ಕೂ ಹತ್ತಿರದ ಸಂಬಂಧ ಉಂಟು. ಅಜ್ಞತೆಯಿಂದ ಅನುಕರಣೆಯಿಂದ ತಲೆದೋರುವ ಭಯಭೀತಿಗಳೇ ಕೆಲ ವಸ್ತುಗಳನ್ನು ನಿಷೇಧಿಸುವ ಮಾನವ ಮನೋಧರ್ಮಕ್ಕೆ ಹಿನ್ನೆಲೆಯಾಗಿವೆ.

ಜೆ. ಜಿ. ಫ್ರೇಸರ್ ಹಾಗೂ ದೇ. ಜವರೇಗೌಡ- ಈ ವಿದ್ವಾಂಸರ ಪ್ರಕಾರ ನಿಷೇಧದ ಮೂಲ ಮಾಟದಲ್ಲಿದೆ. ಮಾಟಮಂತ್ರಗಳೂ ಸಾವಿನೊಂದಿಗೋ ಅಮಾನುಷ ಶಕ್ತಿಗಳೊಂದಿಗೋ ಸಂಬಂಧ ಹೊಂದಿರುವುದರಿಂದ ಇಲ್ಲಿಯೂ ಭಯವೇ ಅದರ ಮೂಲ. ಮಾಟದಲ್ಲಿ ಸಕಾರಾತ್ಮಕವಾದ ಆಚರಣೆಗಳಿರುವಂತೆ ನಕಾರಾತ್ಮಕವಾಗಿರುವಂಥವೂ ಉಂಟು. ಸಕಾರಾತ್ಮಕವಾದುವನ್ನು ಮಂತ್ರವಿಧಿಗಳೆಂದೂ ನಕಾರಾತ್ಮಕವಾದುವನ್ನು ನಿಷೇಧಗಳೆಂದೂ ಕರೆಯಬಹುದು. ಮಂತ್ರವಿಧಿಗಳು ಮಾಡಬಹುದಾದ್ದನ್ನು ತಿಳಿಸಿದರೆ ನಿಷೇಧಗಳು ಮಾಡಬಾರದ್ದನ್ನು ಉಲ್ಲೇಖಿಸುತ್ತವೆ. ಮಾಟದ ಸ್ವರೂಪ ಮತ್ತು ವಿವಿಧ ಕ್ರಿಯೆಗಳ ಆಧಾರದ ಮೇಲೆ ಕೆಲವು ಕವಲುಗಳನ್ನು ಜವರೇಗೌಡರೂ ಫ್ರೇಸರ್ ಅವರೂ ಹೀಗೆ ಗುರುತಿಸುತ್ತಾರೆ :

ತಪ್ಪು ಒಪ್ಪುಗಳ ಪ್ರಜ್ಞೆ ಎಂದು ಹೇಳಬಹುದಾದ ಆತ್ಮಸಾಕ್ಷಿಯ ಮೂಲಕ ಮತ್ತು ಗುಣಗಳ ಮೇಲೆಯೂ ನಿಷೇಧ ಬೆಳಕು ಚೆಲ್ಲುತ್ತದೆ. ನಿಷೇಧ ತನ್ನ ಸಹಜ ಅರ್ಥದಲ್ಲಿ ಆತ್ಮಸಾಕ್ಷಿಯಾಗಿ ಬಳಸಲ್ಪಟ್ಟಾಗ ಅದನ್ನು ನಿಷೇಧತಾಪ್ರಜ್ಞೆ ಎಂದೂ ತನ್ನ ಸಹಜ ಅರ್ಥಕ್ಕೆ ಧಕ್ಕೆಯೊದಗಿದಾಗ ಅಪರಾಧಪ್ರಜ್ಞೆ ಎಂದೂ ಕರೆಸಿಕೊಳ್ಳುತ್ತದೆ. ಆತ್ಮಸಾಕ್ಷಿಗೆ ಸಂಬಂಧಿಸಿದ ಯಾವುದೇ ಘಟನೆ ನಡೆದರೂ ಅದರ ಪರಿಣಾಮದಿಂದಾಗಿ ಅನೇಕ ಭಾವನೆಗಳು ಉದ್ಭವಿಸುತ್ತವೆ. ಹಾಗೆ ಉದ್ಭವಿಸುವ ಭಾವನೆಗಳಲ್ಲಿ ಬಹುಶಃ ಮೊಟ್ಟಮೊದಲನೆಯದೆಂದರೆ ನಿಷೇಧತಾಪ್ರಜ್ಞೆಯೇ.

ನಿಷೇಧ ಆತ್ಮಸಾಕ್ಷಿಯಿಂದ ಉದ್ಭವಿಸುವ ಆಜ್ಞೆ. ಈ ಆಜ್ಞೆಯ ಉಲ್ಲಂಘನೆಯಿಂದ ಭಾವನೆಗಳು ಭಯಭರಿತವಾಗುತ್ತವೆ, ಅಪರಾಧಪ್ರಜ್ಞೆಗೆ ಈಡಾಗುತ್ತವೆ. ಅದು ಸಹಜವಾದ ಮಾರ್ಗವೆಂಬಂತೆ ಭಾಸವಾದರೂ ಮೂಲ ಮಾತ್ರ ಅರ್ಥವಾಗದೆಯೇ ನಿಂತು ಬಿಡುತ್ತದೆ.

ನಿಷೇಧದ ಬಗ್ಗೆ ಇದೇ ಬಗೆಯ ಅಭಿಪ್ರಾಯ ಪ್ರಾಚೀನ ಕಾಲದ ಮನೋಭಾವಗಳಲ್ಲಿಯೂ ಕಂಡುಬರುತ್ತದೆ. ಮೂಲದ ಬಗ್ಗೆ ಪ್ರಾಚೀನ ಅನಾಗರಿಕರಿಂದಲೂ ಸಮರ್ಪಕ ಉತ್ತರ ದೊರೆತಿಲ್ಲ. ಸುಪ್ತಮನಸ್ಸೇ ಅದರ ನಿಜವಾದ ಕಾರಣವಿರಬೇಕು ಎಂಬ ಬಗ್ಗೆಯೂ ಅವರಿಂದ ಪರಿಹಾರ ಕಂಡುಬಂದಿಲ್ಲ. ಇತಿಹಾಸ ಪೂರ್ವದ ಕಾಲದಿಂದ ಇದು ಬಳಕೆಗೆ ಬಂದಿರುವಂತೆ ಕಾಣುತ್ತದೆ. ತಲೆಮಾರಿನಿಂದ ತಲೆಮಾರಿಗೆ ಕೇವಲ ಹೇರಿಕೊಳ್ಳುತ್ತ ಇದು ತನ್ನ ಅಸ್ತಿತ್ವವನ್ನು ಉಳಿಸಿಕೊಂಡೇ ಬಂದಿದೆ. ಪಿತ್ರಾರ್ಜಿತ ಮಾನಸಿಕ ಉಂಬಳಿಯೆಂಬಂತೆ ಇದು ಅನಂತರದ ತಲೆಮಾರುಗಳಲ್ಲಿ ವ್ಯವಸ್ಥಿತ ರೂಪವನ್ನು ಪಡೆದುಕೊಂಡಿರಬಹುದಾದ ಸಾಧ್ಯತೆಗಳಿವೆ. ಇದರ ಶಾಶ್ವತ ಉಳಿವಿಗೆ ಒಂದು ಅಂಶವಂತೂ ಖಚಿತ ಕಾರಣವೆನಿಸುತ್ತದೆ. ಅದೆಂದರೆ, ಸಂಬಂಧಪಟ್ಟ ಬುಡಕಟ್ಟಿನ ಜನರಲ್ಲಿ ದೃಢವಾಗಿ ನೆಲೆನಿಂತಿರುವ, ಎಲ್ಲಿಯೂ ಸಹಜ ಎನ್ನಿಸುವಂಥ, ನಿಷೇಧಿಸಿದ್ದನ್ನು ಮಾಡಲೇಬೇಕೆಂಬ ಮಾನವನ ಮೂಲ ಆಕಾಂಕ್ಷೆ. ಆದ್ದರಿಂದ ಅವರು ತಮ್ಮ ನಿಷೇಧಗಳ ಬಗ್ಗೆ ಅನಿಶ್ಚಿತ ಮನೋಭಾವ ಉಳ್ಳವರಾಗಿರುತ್ತಾರೆ. ಅವರ ಸುಪ್ತಮನಸ್ಸಿನಲ್ಲಿ ನಿಷಿದ್ಧವಾದ್ದನ್ನು ಉಲ್ಲಂಘಿಸುವುದಲ್ಲದೆ ಮತ್ತೇನೂ ಇರುವುದಿಲ್ಲ. ಆದರೆ ಹಾಗೆ ಮಾಡಲು ಅವರು ಹೆದರುತ್ತಾರೆ. ಏಕೆಂದರೆ ಇದನ್ನು ಅವರು ಇಷ್ಟಪಡುತ್ತಾರೆ. ಇಂಥ ಮಾನಸಿಕ ತೊಳಲಾಟದಲ್ಲಿ ಅಪೇಕ್ಷೆಗಿಂತ ಭಯವೇ ಹೆಚ್ಚು ಶಕ್ತಿಯುತವಾಗುತ್ತದೆ. ಬುಡಕಟ್ಟಿನ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಅಪೇಕ್ಷೆ ಎಂಬುದು ಸುಪ್ತ ಮನಸ್ಸಿನ ವ್ಯಾಪಾರವೇ ಆಗಿರುತ್ತದೆ.

ವರ್ಗಗಳು

[ಬದಲಾಯಿಸಿ]

ಇದರಲ್ಲಿ ಅನೇಕ ವರ್ಗಗಳನ್ನು ಗುರುತಿಸಬಹುದು. 1. ಸಹಜ ಅಥವಾ ನೇರ. ಇದು ವಸ್ತುವಿಗೆ ಅಥವಾ ವ್ಯಕ್ತಿಗೆ ಪಿತ್ರಾರ್ಜಿತವೆಂಬಂತೆ ನಿಗೂಢ ಶಕ್ತಿಗಳ ಪರಿಣಾಮದಿಂದ ಉಂಟಾದುದು. 2. ಸಂವಹನದಿಂದ ಅಥವಾ ನೇರವಲ್ಲದ ರೀತಿಯಿಂದ ಬಂದಂಥದು, ನಿಗೂಢ ಶಕ್ತಿಯ ಪರಿಣಾಮವೂ ಆಗಿರಬಹುದಾದಂಥದು. ಆದರೆ (ಅ) ಆಕ್ರಮಿಸಿ ಕೊಂಡಂಥದು ಅಥವಾ (ಆ) ಪೂಜಾರಿಯಿಂದಲೋ ಮುಖ್ಯ ವ್ಯಕ್ತಿಯಿಂದಲೋ ಹೊರಿಸಲ್ಪಟ್ಟಂಥದು. (3) ಮೇಲಿನ ಅಂಶಗಳನ್ನೆಲ್ಲ ಒಳಗೊಂಡಂಥ ಒಂದು ಮಧ್ಯವರ್ತಿವರ್ಗ.

ಉದ್ದೇಶಗಳು

[ಬದಲಾಯಿಸಿ]

ಇದರ ಉದ್ದೇಶಗಳು ಹಲವಾರು : 1. ನೇರ ನಿಷೇಧ ಈ ಮುಂದಿನ ಗುರಿಗಳನ್ನು ಹೊಂದಿರುತ್ತದೆ : (ಅ) ಮುಖಂಡರು ಪೂಜಾರಿಗಳು ಮೊದಲಾದ ಮುಖ್ಯ ವ್ಯಕ್ತಿಗಳ ರಕ್ಷಣೆ ಮತ್ತು ಹಾನಿಗೆ ವಿರುದ್ಧವಾದ ಅಂಶಗಳೂ. (ಆ) ಮುಖಂಡರು ಮತ್ತು ಪೂಜಾರಿಗಳ ಮಾಯಾಶಕ್ತಿಯ ಅಥವಾ ನಿಗೂಢ ಶಕ್ತಿಗಳ ಸಶಕ್ತಪ್ರಭಾವದಿಂದ ಹೆಂಗಸರು ಮಕ್ಕಳು ಇತ್ಯಾದಿ ಅಲ್ಪಶಕ್ತಿ ಉಳ್ಳವರನ್ನು ರಕ್ಷಿಸುವುದು. (ಇ) ಕೆಲವು ಬಗೆಯ ಆಹಾರಗಳನ್ನು ಸೇವಿಸುವುದರ ಮೂಲಕ ಹೆಣವನ್ನು ಹೊರುವುದರಿಂದಲೋ ಹೆಣದೊಂದಿಗೆ ಯಾವುದಾದರೊಂದು ಬಗೆಯ ಸಂಪರ್ಕ ಇಟ್ಟುಕೊಳ್ಳುವುದರಿಂದಲೋ ಉದ್ಭವಿಸಬಹುದಾದ ಅಪಾಯಕಾರಿ ತೊಂದರೆಗಳನ್ನು ನಿವಾರಿಸಿಕೊಳ್ಳುವುದಕ್ಕಾಗಿ, ಇತ್ಯಾದಿ. (ಈ) ದೇವರುಗಳ ಅಥವಾ ದೆವ್ವಗಳ ಶಕ್ತಿಯಿಂದಲೋ ಕೋಪದಿಂದಲೋ ಮಾನವನಿಗೊದಗಬಹುದಾದ ಪೀಡೆಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ. (ಉ) ತಮ್ಮದಲ್ಲದ ಮಗುವೊಂದನ್ನು ಪಡೆಯುವಾಗ, ನಂಬಿಕೆಗಳಿಗನುಸಾರವಾಗಿ ಆಗಬಹುದಾದ ಏರುಪೇರುಗಳನ್ನು ನಿವಾರಿಸಿಕೊಳ್ಳುವುದಕ್ಕಾಗಿ, ಇತ್ಯಾದಿ. 2. ಕಳ್ಳರಿಂದ ವಸ್ತುಗಳನ್ನೋ ಭೂಮಿಯನ್ನೋ ಇನ್ನಾವುದೇ ಆ ಬಗೆಯ ಆಸ್ತಿಗಳನ್ನೋ ರಕ್ಷಿಸಿಕೊಳ್ಳುವುದಕ್ಕಾಗಿಯೂ ಕೆಲವು ಬಗೆಯ ನಿಷೇಧಗಳು ಹುಟ್ಟಿಕೊಳ್ಳುವುದುಂಟು.

ನಿಷೇಧದ ಉಲ್ಲಂಘನೆಗಾಗಿ ಒದಗುವ ಶಿಕ್ಷೆ ಮಾತ್ರ ತನ್ನಷ್ಟಕ್ಕೆ ತಾನೇ ಕಾರ್ಯಗತವಾಗುವಂಥದು. ಉಲ್ಲಂಘಿಸಿದವನ ಅಂತರ್ಯದಿಂದ ಸ್ವಯಂಚಾಲಿತ ರೀತಿಯಿಂದ ಈ ಶಿಕ್ಷೆ ಕಾರ್ಯಪ್ರವೃತ್ತವಾಗುತ್ತದೆ. ಉಲ್ಲಂಘಿಸಲ್ಪಟ್ಟ ನಿಷೇಧವೇ ಸೇಡನ್ನು ತೀರಿಸಿಕೊಳ್ಳಬಹುದು. ಬಹಳ ಸಲ ದೇವರ ಅಥವಾ ದೆವ್ವಗಳ ಬಗೆಗೆ ಇರುವ ಭಾವನೆಗಳಿಂದಾಗಿ ನಿಷೇಧಗಳಿಗೆ ಒಗ್ಗಿಹೋಗಿರಬಹುದಾದ ಅಂಥ ವ್ಯಕ್ತಿಯಲ್ಲಿ ಸೇಡು ತೀರಿಸಿಕೊಳ್ಳಬಲ್ಲುದಾದ ದಿವ್ಯಶಕ್ತಿಯೊಂದು ನೆರಳಿನಂತೆ ಹಿಂಬಾಲಿಸುತ್ತದೆ ಎಂದು ಹೇಳುವುದುಂಟು. ಬಹುಶಃ ಇದರ ಉಲ್ಲಂಘನೆಯಿಂದ ಹೊಸ ನಂಬಿಕೆಗಳು ಹುಟ್ಟಿಕೊಳ್ಳಬಹುದಾದ ಸಾಧ್ಯತೆಗಳಿರುವುದರಿಂದ, ಕೆಲವು ಪ್ರಕರಣಗಳಲ್ಲಿ, ತಪ್ಪಿತಸ್ಥರ ವಿರುದ್ಧವಾಗಿ ಇಡೀ ಸಮಾಜವೇ ಎದುರುಬಿದ್ದು ಶಿಕ್ಷಿಸುವ ಅಥವಾ ತಿದ್ದುವ ಉದಾಹರಣೆಗಳೂ ಉಂಟು. ಹೀಗೆ ನಿಷೇಧದ ಹಿನ್ನೆಲೆಯಲ್ಲಿ ಪ್ರಾಚೀನ ಮಾನವನ ಶಿಕ್ಷಾಪದ್ಧತಿಗಳನ್ನೂ ಗುರುತಿಸಬಹುದು.

ನಿಷೇಧದ ನಿಯಮಗಳನ್ನು ಉಲ್ಲಂಘಿಸಿದವನೇ ಸಮಾಜದಲ್ಲೊಂದು ನಿಷಿದ್ಧ ವ್ಯಕ್ತಿ ಆಗಿಬಿಡುವ ಸಾಧ್ಯತೆಗಳೂ ಉಂಟು. ಇದರ ಉಲ್ಲಂಘನೆಯಿಂದ ಉಂಟಾದದ್ದೆಂದು ಹೇಳಲಾಗುವ ಅಪಾಯಗಳು ವ್ಯಕ್ತಿಯನ್ನು ಪರಿವರ್ತಿಸಬಹುದು, ಶುದ್ಧಗೊಳಿಸಬಹುದು. ಅಂಥ ಸಂದರ್ಭದಲ್ಲಿ ಮಾತ್ರ ವ್ಯಕ್ತಿ ನಿಷಿದ್ಧ ಆಗಿಬಿಡುವ ಸಾಧ್ಯತೆಗಳು ಕಮ್ಮಿಯಾಗಬಹುದು.

ಮನೋವಿಜ್ಞಾನದ ಕಣ್ಣಿನಿಂದ ಇದುವರೆಗೆ ಯಾರೂ ಗಮನಿಸದ ಒಂದು ಅಂಶವನ್ನು ಜಗತ್ಪ್ರಸಿದ್ಧ ಮನೋವಿಜ್ಞಾನಿಯಾದ ಸಿಗ್ಮಂಡ್ ಫ್ರಾಯ್ಡ್ ಗೋಲ್ಡನ್ ಬೋ ಎಂಬ ಫ್ರೇಜರ್ ಕೃತ ಗ್ರಂಥದಲ್ಲಿ ಉಲ್ಲೇಖವಾಗಿರುವ ಒಂದು ಜರ್ಮನ್ ಅತಿಮಾನುಷ ನಂಬಿಕೆಯನ್ನು ಉದಾಹರಿಸುತ್ತಾನೆ. ಅದು ಹೀಗಿದೆ : ಚೂರಿಯನ್ನು ಅಲಗು ಮೇಲ್ಮುಖವಾಗಿರುವಂತೆ ಇಡಬಾರದು. ಹಾಗೆ ಇಟ್ಟರೆ ದೇವರು ಅಥವಾ ದೇವತೆಗಳು ಗಾಯಗೊಳ್ಳಬಹುದು. ಈ ನಂಬಿಕೆಯನ್ನು ಉದಾಹರಿಸಿ ಫ್ರಾಯ್ಡ್ ಇದು ತನಗೆ ಅಪಾಯವಾದೀತು ಎಂಬ ಸುಪ್ತಮನಸ್ಸಿನ ಪ್ರೇರಣೆಯೇ ಅಲ್ಲವೆ-ಎಂದು ಪ್ರಶ್ನಿಸುತ್ತಾನೆ. ಬಹುಶಃ ಈ ಪ್ರಶ್ನೆ ಅತ್ಯಂತ ಸಹಜ ಎನ್ನಿಸುತ್ತದೆ. ಯಾರೋ ಒಬ್ಬರು ಹೇಳಿದ್ದನ್ನು ಸರಿ ಎಂದು ತಿಳಿದು ಬಹುಪಾಲು ಮಂದಿ ನಿರ್ದಾಕ್ಷಿಣ್ಯವಾಗಿ ಅನುಸರಿಸುವುದು ಮಾನವನ ಸಹಜ ಗುಣ. ಹಾಗೆ ಇಂದು ನಮಗೆ ಮೂಢನಂಬಿಕೆಗಳೆಂದು ಭಾಸವಾಗುವ ಎಷ್ಟೋ ನಂಬಿಕೆಗಳು ವೈಜ್ಞಾನಿಕ ಪರೀಕ್ಷೆಯಲ್ಲೂ ಗೆಲ್ಲಬಹುದು. ಇಂಥ ಒಂದು ನಂಬಿಕೆಯೇ ಅಥವಾ ನಂಬಿಕೆಗಳ ಸಮೂಹವೇ ನಿಷೇಧಗಳಿಗೆ ಮೂಲವಾಗಿರಬಹುದು ಎಂಬ ಅಂಶವನ್ನು ಧಾರಾಳವಾಗಿ ಒಪ್ಪಿಕೊಳ್ಳಬಹುದು. ಮೇಲೆ ಹೇಳಿದ ನಂಬಿಕೆಯನ್ನು ಉದಾಹರಿಸುತ್ತ ಫ್ರಾಯ್ಡ್ ಅದನ್ನು ನಿಷೇಧದ ಪ್ರಾರಂಭಿಕ ಸೂಚನೆ ಎಂದು ಕರೆಯುತ್ತಾನೆ. ಆದ್ದರಿಂದ, ಕೆಡುಕಾಗಬಹುದು ಎಂಬ ಸುಪ್ತ ಮನಸ್ಸಿನ ಮುಂಗಾಣ್ಕೆಯೇ ಟಾಬೂವಿನ ಮೂಲ.

ಇದರ ಅರಿವೇ ಇಲ್ಲದೆ ಅಥವಾ ಇದ್ದೂ ಗಣನೆಗೆ ತೆಗೆದುಕೊಳ್ಳದೆ ನಿಷಿದ್ಧವಾದ್ದನ್ನು ಉಲ್ಲಂಘಿಸಿ, ಅಪಾಯಕಾರಿ ಪರಿಣಾಮಗಳನ್ನು ಅನುಭವಿಸಿ ಸಾವನ್ನು ಕೂಡ ತಲಪುವುದನ್ನು ಕಂಡ ಜನ ಅನೇಕ ಬಗೆಯ ನಿಷೇಧಗಳ ಹುಟ್ಟಿಗೆ ಕಾರಣವಾಗಬಹುದು. ಅಂಥವೂ ಸೇರಿದಂತೆ ಎಲ್ಲ ಬಗೆಯ ನಿಷೇಧಗಳೂ ತಾತ್ತ್ವಿಕ ನೆಲೆಗಟ್ಟನ್ನು ಪಡೆದುಕೊಳ್ಳಬಹುದು. ಆ ಎಲ್ಲವುಗಳ ಹಿನ್ನೆಲೆಯಲ್ಲಿ ಏನೋ ಒಂದು ಬಗೆಯ ತಾತ್ತ್ವಿಕ ಪ್ರಕೃತಿ ಕೆಲಸ ಮಾಡುತ್ತಿರುವಂತೆ ತೋರುತ್ತದೆ. ಕೆಲವು ವ್ಯಕ್ತಿಗಳೋ ವಸ್ತುಗಳೋ ಯಾವುದೋ ಅಪಾಯಕಾರಿ ಶಕ್ತಿಯೊಂದರಿಂದ ಘಾತಿಸಲ್ಪಡುವುದನ್ನೂ ಸೋಂಕು ರೋಗದಂತೆ ಸಂಪರ್ಕ ಹೊಂದಿದವರಲ್ಲೆಲ್ಲ ಆಘಾತ ವ್ಯಾಪಿಸಿಕೊಳ್ಳುತ್ತ ತೀವ್ರಗತಿಯಲ್ಲಿ ಸಾಗುವ ಆ ಪ್ರಕೃತಿ ಪ್ರವೃತ್ತಿ, ಅದನ್ನು ಕುರಿತ ತಾತ್ತ್ವಿಕ ಹೇಳಿಕೆಗಳು, ಮಾನವ ಕುಲಕ್ಕೆ ಅಗತ್ಯವೆಂದು ಹೇಳಲಾಗುತ್ತದೆ. ಈ ಅಪಾಯಕಾರಿ ಲಕ್ಷಣದ ಗಾತ್ರವೂ ಹರಡುವಿಕೆಯಲ್ಲಿ ಪಾತ್ರವಹಿಸುತ್ತದೆ. ಹುಟ್ಟಿನಲ್ಲಿ ಹರಡುವಿಕೆಯಲ್ಲಿ ಮಾನಸಿಕ ವೈಲಕ್ಷಣ್ಯಗಳ ಪಾತ್ರವಿದೆಯಾದರೂ ಪರಂಪರಾಗತ ಅಥವಾ ರೂಢಿಗತ ಸಂಸ್ಕøತಿಯೊಂದರಿಂದ ನಿಯಂತ್ರಿಸಲ್ಪಡುವ ಅಂಥ ಜನಗಳಲ್ಲಿ ದೆವ್ವಗಳ ಬಗ್ಗೆ ಅಥವಾ ಆತ್ಮಗಳ ಬಗ್ಗೆ ನಂಬಿಕೆಯ ಪಾತ್ರವೇನು ಎಂದು ಕೂಡ ಗಮನಿಸಬೇಕಾಗುತ್ತದೆ.

ದೆವ್ವದ ಶಕ್ತಿಯಲ್ಲಿ ಪ್ರಾಚೀನ ಜನಗಳಲ್ಲಿದ್ದ ನಂಬಿಕೆಯ ಅಭಿವ್ಯಕ್ತಿ ಹಾಗೂ ವಿತರಣೆಗಳೇ ನಿಷಿದ್ಧಗಳೆಂದು ಇನ್ನೊಬ್ಬ ಮನೋವಿಜ್ಞಾನಿ ವಿಲ್‍ಹೆಲ್ಮ್ ವೂಂಟ್ ಹೇಳುತ್ತಾನೆ. ಮುಂದುವರಿದು ಆತ, ಅನಂತರ ಅದು ಈ ಬೇರಿನಿಂದ ಸ್ವತಂತ್ರಗೊಂಡು ಶಕ್ತಿಯಾಗಿದ್ದುದರಿಂದ ಶಕ್ತಿಯಾಗಿ ಮಾತ್ರ ಉಳಿದುಕೊಂಡಿತು-ಒಂದು ಬಗೆಯ ಮಾನಸಿಕ ರಕ್ಷಕನಂತೆ, ಎನ್ನುತ್ತಾನೆ. ನಿಷಿದ್ಧದ ಮೂಲ ಲಕ್ಷಣವಾದ ಭಯ ಅನಂತರದ ಬೆಳವಣಿಗೆಯಲ್ಲಿ `ಪೂಜ್ಯ ಭಾವನೆ ಹಾಗೂ `ಹೆಚ್ಚಿನ ಭಯ ಎಂದು ಎರಡು ಬಗೆಯಾಗಿ ವಿಂಗಡಣೆಯಾಯಿತು. ದೆವ್ವಗಳ ವರ್ತುಲದಿಂದ ದೇವರುಗಳ ಬಗೆಗಿನ ನಂಬಿಕೆಯ ವರ್ತುಲಕ್ಕೆ ಇದರ ಕಟ್ಟಳೆಗಳು ಸ್ಥಳಾಂತರಗೊಂಡಿರುವುದರಿಂದ ಈ ವಿಭಜನೆ ಸಾಧ್ಯವಾಯಿತು ಎಂದು ವೂಂಟ್ ಹೇಳುತ್ತಾನೆ. ಪರಿಶುದ್ಧತೆ ಮತ್ತು ತ್ಯಾಗಕ್ಕೆ ಇದರ ಕಲ್ಪನೆ ಸಂಬಂಧಿಸಿದೆ ಎಂಬುದು ವೂಂಟ್‍ನ ಒಟ್ಟಭಿಪ್ರಾಯ.

ವಿಪರೀತ ಸೂಕ್ಷ್ಮವೇದಿಯಾದ ನರರೋಗಿಯ ಮನೋಧರ್ಮಕ್ಕೂ ನಿಷೇಧದ ಹಿಂದಿನ ಮನೋಧರ್ಮಕ್ಕೂ ಎಂಥ ನಿಕಟಸಂಬಂಧ ಇದೆ ಎಂಬುದನ್ನು ಉದಾಹರಣೆ ಸಹಿತ ವಿವರಿಸಿ ಫ್ರಾಯ್ಡ್ ನಾಗರಿಕತೆಯ ಬೆಳವಣಿಗೆಯನ್ನು ಅರ್ಥೈಸುವ ಹಾದಿಯಲ್ಲಿ ನರವ್ಯಾಧಿಗೆ ಸಂಬಂಧಿಸಿದ ಮನೋವಿಜ್ಞಾನದ ಅಧ್ಯಯನ ಹೇಗೆ ಮಹತ್ತರ ಪಾತ್ರ ವಹಿಸಬಲ್ಲದು ಎಂಬುದನ್ನು ತೋರಿಸಿದ್ದಾನೆ.

ದುಃಖಸೂಚನ ಗೌರವಕ್ಕೆ ಸಂಬಂಧಿಸಿದಂತೆ, ಬೋಧಪ್ರದವೆನಿಸಿದರೂ ಅತ್ಯಂತ ನಿಗೂಢವೆನಿಸುವ ಬಳಕೆಗಳಲ್ಲೊಂದೆಂದರೆ ಸತ್ತ ವ್ಯಕ್ತಿಯ ಹೆಸರನ್ನು ಉಚ್ಚರಿಸಕೂಡದೆಂಬ ನಿಷೇಧ. ಈ ಪದ್ಧತಿ ಅತ್ಯಂತ ವ್ಯಾಪಕವಾಗಿ ಹರಡಿದೆ; ಇದು ಅನೇಕ ರೀತಿಗಳಿಂದ ಸಾಕಷ್ಟು ಪರಿಣಾಮಕಾರಿಯಾಗಿ ಅಭಿವ್ಯಕ್ತಿ ಪಡೆಯುತ್ತಿದೆ. ಅತ್ಯಂತ ಹೆಚ್ಚಿನ ನಿಷೇಧಗಳನ್ನು ಅನುಷ್ಠಾನಗಳನ್ನು ಸಂಗ್ರಹಿಸಿ ತೋರಿಸುವ ಆಸ್ಟ್ರೇಲಿಯನರಲ್ಲಿ, ಪಾಲಿನೇಷನ್ನರಲ್ಲಿ ಈ ನಾಮನಿಷೇಧ ಆಚರಣೆಯಲ್ಲಿರುವುದು ಮಾತ್ರವಲ್ಲ, ಚದರಿಹೋಗಿರುವ ಸೈಬೀರಿಯದ ಸಮೋಯದ್ದರಲ್ಲೂ, ದಕ್ಷಿಣ ಇಂಡಿಯದ ತೋಡರಲೂ,್ಲ ಟಾರ್ಟರಿಯ ಮಂಗೋಲರಲ್ಲೂ, ಸಹಾರಾದ ಟುವಾರೆಗ್ಗರಲ್ಲೂ, ಜಪಾನಿನ ಆಯಿನೊಗಳಲ್ಲೂ, ಮಧ್ಯ ಆಪ್ರಿಕದ ಅಕಾಂಬಾ ಮತ್ತು ನಂದಿಗಳಲ್ಲೂ, ಫಿಲಿಪೀನ್ಸಿನ ಟಿಂಗ್ವಿಯೇನ್‍ರಲ್ಲಿಯೂ ಮತ್ತು ನಿಕೋಬಾರ್ ದ್ವೀಪಗಳ, ಬೋರ್ಣಿಯೋದ, ಮಡಗಾಸ್ಕರಿನ, ತಾಸ್ಮೇನಿಯದ ನಿವಾಸಿಗಳಲ್ಲೂ ಈ ನಾಮನಿಷೇಧ ಬಳಕೆಯಲ್ಲಿದೆ. ಈ ಮೇಲಿನ ಉದಾಹರಣೆಗಳಲ್ಲಿ, ಕೆಲವರಲ್ಲಿ ದುಃಖ ಸೂಚಕ ಗೌರವ ಹಾಗೂ ಅದರ ಪರಿಣಾಮಗಳು ಆ ಸಂದರ್ಭದ ಅವಧಿಗೆ ಮಾತ್ರ ಸೀಮಿತವಾಗಿದ್ದರೆ, ಕೆಲವರಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಮಾತ್ರವಲ್ಲ, ಕಾಲ ಕಳೆದಂತೆಲ್ಲ ನಶಿಸಿಹೋಗುವ ಸಹಜಕ್ರಿಯೆಗೆ ಪಕ್ಕಾಗದೆ ಸ್ಥಿರವಾಗಿ ನಿಂತುಬಿಡುತ್ತದೆ.

ಸತ್ತವರ ಹೆಸರನ್ನು ಮರೆಮಾಚುವಿಕೆ, ಅತ್ಯಂತ ಕ್ರೂರವಾದ, ಬಹುಶಃ ಬಲವಂತದಿಂದ ಹೇರಲ್ಪಟ್ಟ ನಿಬಂಧನೆಯಂತೆ ತೋರುತ್ತದೆ. ರಕ್ತಸಂಬಂಧಿಯ ಹೆಸರು ಹೇಳುವುದು ಅತ್ಯಂತ ಅವಮಾನಕರ ಅಪರಾಧವೆಂದು ದಕ್ಷಿಣ ಅಮೆರಿಕದ ಬುಡಕಟ್ಟುಗಳವರು ನಂಬುತ್ತಾರೆ. ಹಾಗೇನಾದರೂ ಉಚ್ಚರಿಸಿ ಬಿಟ್ಟರೆ ಸಾವೇ ಅವನಿಗೆ ಸಿಕ್ಕುವ ಸಣ್ಣ ಶಿಕ್ಷೆ. ಹೆಸರು ಹೇಳುವುದರಿಂದ ಅಂಥ ಭಯಭರಿತ ಬಹುಮಾನವೇಕೆ ಎಂಬುದಕ್ಕೆ ವಿವರಣೆ ಸುಲಭವಲ್ಲ. ಅಂಥ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅನೇಕ ಉಪಾಯಗಳೂ ಇವೆ ಎಂಬುದು ಸ್ವಾರಸ್ಯದ ಸಂಗತಿ. ಅವುಗಳಲ್ಲಿ ಕೆಲವಂತೂ ಕುತೂಹಲಕಾರಿಯೂ ಮುಖ್ಯವೂ ಆಗಿದೆ. ಅಂಥವುಗಳಲ್ಲಿ ಒಂದೆಂದರೆ, ಪೂರ್ವ ಆಫ್ರಿಕದ ಮಸಾಯಿ ಬುಡಕಟ್ಟಿನ ಜನ, ಸತ್ತಕೂಡಲೇ ಸತ್ತವನ ಹೆಸರನ್ನು ಬದಲಾಯಿಸುವ ಪದ್ಧತಿ. ಎಲ್ಲ ಕಟ್ಟಳೆಗಳೂ ಹಳೆಯ ಹೆಸರಿಗೇ ಅಂಟಿಕೊಳ್ಳುವುದರಿಂದ ಹೊಸ ಹೆಸರಿನಿಂದ ಕರೆಯುವುದು ಅಪಾಯಕರವಾಗುವುದಿಲ್ಲ ಎಂದು ಅವರು ಭಾವಿಸುತ್ತಾರೆ. ಸತ್ತವನ ದೆವ್ವಕ್ಕೆ ಈ ವಿಷಯ ಅರಿವಾಗುವುದಿಲ್ಲವೆಂದೂ ತಿಳಿದುಕೊಳ್ಳಲು ಅದು ಪ್ರಯತ್ನಿಸುವುದಿಲ್ಲವೆಂದೂ ಅವರು ನಂಬುತ್ತಾರೆ. ಮಧ್ಯ ಆಸ್ಟ್ರೇಲಿಯದ ಕೆಲವು ಬುಡಕಟ್ಟುಗಳ ಜನ, ಸತ್ತವನ ಹೆಸರಿನವರು ಅಥವಾ ಅದಕ್ಕೆ ಹತ್ತಿರದ ಹೆಸರಿನವರು ಯಾರಾದರೂ ಇದ್ದರೆ ಅಂಥವರು ಕೂಡಲೇ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುವಲ್ಲಿ ಜಾಗರೂಕತೆ ವಹಿಸುತ್ತಾರೆ. ವಾಯುವ್ಯ ಅಮೆರಿಕದ ಹಾಗೂ ವಿಕ್ಟೋರಿಯದ ಕೆಲವು ಬುಡಕಟ್ಟುಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಹೆಸರುಗಳೂ ಸತ್ತವನ ಹೆಸರಿಗೆ ಸಂವಾದಿಯಾಗಿರಲಿ ಇಲ್ಲದಿರಲಿ, ಸತ್ತವನ ರಕ್ತಸಂಬಂಧಿಗಳೆಲ್ಲರೂ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ. ಪರಗ್ವೇಯ ಗ್ವೇಕುರಸ್ ಎಂಬ ಬುಡಕಟ್ಟಿನವರು ಇದರಲ್ಲಿ ಇನ್ನೂ ಒಂದು ಹೆಜ್ಜೆ ಮುಂದು ; ಸಾವು ಸಂಭವಿಸಿದ ಕೂಡಲೇ ಅವರ ನಾಯಕ ತನ್ನ ಬುಡಕಟ್ಟಿನ ಎಲ್ಲರ ಹೆಸರನ್ನೂ ಬದಲಾಯಿಸುತ್ತಾನೆ ಮತ್ತು ಅವರು ತಮ್ಮ ತಮ್ಮ ಹೊಸ ಹೆಸರುಗಳನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಬೇಕೆಂದು ಸೂಚಿಸುತ್ತಾನೆ.

ಸತ್ತವರ ಹೆಸರು ಮತ್ತೆ ನೆನಪಿಗೆ ಬರಲಾರದು ಎಂಬ ನಂಬಿಕೆ ಬಹಳಷ್ಟು ಬುಡಕಟ್ಟುಗಳಲ್ಲಿ ಕಂಡುಬರುತ್ತದೆ. ಈ ಬಗ್ಗೆ ಭಾಷಾಸಂಪತ್ತಿನ ನಿರಂತರ ಬದಲಾವಣೆಗೆ ಕಾರಣವಾಗುತ್ತದೆ. ಪ್ರಾಣಿಗಳೂ ವೃಕ್ಷಗಳೂ ಸೇರಿದಂತೆ ಎಲ್ಲಕ್ಕೂ ಹೀಗೆ ಹೆಸರನ್ನು ಬದಲಾಯಿಸುತ್ತ ಹೋಗುವುದರಿಂದ ಭಾಷಾಗೊಂದಲಕ್ಕೂ ಕಾರಣವಾಗುತ್ತದೆ ಎಂದು ಒಬ್ಬ ಕ್ರೈಸ್ತಪಾದ್ರಿ ಹೇಳುತ್ತಾನೆ. (ಬಹಳಷ್ಟು ಬುಡಕಟ್ಟುಗಳಲ್ಲಿ, ಹೊಸದಾಗಿ ಒಂದು ಮಗು ಹುಟ್ಟಿದರೆ, `ಇಂಥವನೊಬ್ಬ ಮತ್ತೆ ಜನ್ಮವೆತ್ತಿದ್ದಾನೆ ಎಂಬ ನಂಬಿಕೆಯಿಂದ ಸತ್ತವನ ಹೆಸರನ್ನು ಮತ್ತೆ ಬಳಕೆಗೆ ತರುವ ರೂಢಿಯಿದೆ). ಹೀಗೆ ಅವರು ಹೆಸರುಗಳನ್ನು ಬದಲಾಯಿಸಿಕೊಳ್ಳುತ್ತ ನಡೆಯುವುದರಿಂದ ಅವರಿಗೆ ತಮ್ಮ ಪರಂಪರೆ ಅಥವಾ ಚಾರಿತ್ರಿಕ ಪ್ರಜ್ಞೆ ಬಹಳ ಕಮ್ಮಿ ಪ್ರಮಾಣಕ್ಕೆ ಇಳಿಯುತ್ತದೆ ; ಪ್ರಾಚೀನ ಇತಿಹಾಸದ ಸಂಶೋಧನೆಗೆ ತೊಡಕಾಗಿ ಪರಿಣಮಿಸುತ್ತದೆ.

ಸತ್ತವರು ಶಕ್ತ ಅಧಿಪತಿಗಳೆಂಬ ಬುಡಕಟ್ಟು ಜನರ ನಂಬಿಕೆ ನಮಗೆ ಗೊತ್ತಿರುವಂಥದೆ. ಆದರೆ ಅಂಥವರನ್ನು ವೈರಿಗಳಂತೆಯೂ ನಡೆಸಿಕೊಳ್ಳಲ್ಪಡುವರಲ್ಲಿ ಆಶ್ಚರ್ಯಗೊಳ್ಳುತ್ತೇವೆ. ಸತ್ತವರ ಮೇಲಿನ ನಿಷೇಧ ಪ್ರಾಚೀನ ಜನಗಳಲ್ಲಿ ಸಾಂಕ್ರಾಮಿಕವಾಗಿದ್ದಂತೆ ತೋರುತ್ತದೆ. ಮಾವೋರಿ ಬುಡಕಟ್ಟಿನಲ್ಲಿ, ಹೆಣವನ್ನು ಹೊತ್ತವನು ಅಥವಾ ಶವಸಂಸ್ಕಾರದಲ್ಲಿ ಭಾಗವಹಿಸಿದವನು ಎಷ್ಟರಮಟ್ಟಿಗೆ ಅಶುದ್ಧವೆಂದು ಪರಿಗಣಿಸಲ್ಪಡುತ್ತಾನೆಂದರೆ, ಸಂಗಾತಿಗಳೊಂದಿಗೆ ಆತ ಸಂಭೋಗಿಸಕೂಡದು, ಯಾರ ಮನೆಯನ್ನೂ ಪ್ರವೇಶಿಸಕೂಡದು, ಯಾವ ವ್ಯಕ್ತಿಯ ಅಥವಾ ವಸ್ತುವಿನ ಜೊತೆಯಲ್ಲೂ ಸಂಪರ್ಕ ಹೊಂದಕೂಡದು. ಅವನು ಅಶುದ್ಧವಾಗಿರುವುದರಿಂದ ತನ್ನ ಆಹಾರವನ್ನೂ ಕೈಯಿಂದ ಮುಟ್ಟಕೂಡದು. ನೆಲದ ಮೇಲೆ ಇಟ್ಟ ಆಹಾರವನ್ನು ಮಂಡಿಯೂರಿ ಕುಳಿತು ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ನಡು ಬಗ್ಗಿಸಿ ನೇರವಾಗಿ ಬಾಯಿಂದಲೇ ಕಬಳಿಸಬೇಕಾಗುತ್ತದೆ. ಕೆಲವು ಸಲ ಅವನು ಇತರರ ಸಹಾಯಪಡೆದು ಆಹಾರ ಸೇವಿಸಬಹುದು ; ಆದರೆ ತಿನ್ನಿಸುವವನು ಈ ನಿಷೇಧಿತ ಮನುಷ್ಯನನ್ನು ಮುಟ್ಟಕೂಡದು ಮತ್ತು ಅನೇಕ ಕ್ರೂರ ನಿಯಂತ್ರಣಗಳಿಗೆ ಒಳಗಾಗಿರಬೇಕಾಗುತ್ತದೆ. ಹೀಗೆ ಆಹಾರ ತೆಗೆದುಕೊಳ್ಳುವ ರೀತಿ-ಪಾಲಿನೇಷಾ, ಮಲನೇಷಾ ಮತ್ತು ಆಫ್ರಿಕದ ಒಂದು ಭಾಗದಲ್ಲಿ ಒಂದೇ ಬಗೆಯದಾಗಿದೆ.

ತಮ್ಮ ಬುಡಕಟ್ಟಿನ ಮುಖ್ಯಸ್ಥರು ರಾಜರು ಪೂಜಾರಿಗಳೂ ಏನು ಮಾಡಿದರೂ ವಿರೋಧಿಸುವುದಕ್ಕಿಂತ ಹೆಚ್ಚಾಗಿ ಗೌರವಿಸುವ ಮನೋಭಾವವೇ ಪ್ರಾಚೀನ ಜನರನ್ನು ಆಳುತ್ತಿತ್ತು. ಏಕೆಂದರೆ, ಈಗಾಗಲೇ ನಾವು ತಿಳಿದುಕೊಂಡಿರುವಂತೆ ಆ ಮೂರು ಬಗೆಯ ನಾಯಕರೂ ಅಪಾಯಕಾರೀ ಮಾಯಾಶಕ್ತಿಯ ವಾಹಕರೆಂದೂ ಅವರನ್ನು ಗೌರವಿಸುವುದರಿಂದ ಆ ದುಷ್ಟ ಶಕ್ತಿಗಳ ಅಪಾಯಗಳಿಗೆ ಸಿಕ್ಕದೆ ಪಾರಾಗಬಹುದೆಂದೂ ಪ್ರಾಚೀನ ಜನ ನಂಬುತ್ತಿದ್ದರು. ಅವರನ್ನು ವಿರೋಧಿಸಿದರೆ ಕೆಡಕು ಕಟ್ಟಿಟ್ಟ ಬುತ್ತಿ ಎಂಬ ವರ್ತನೆ ಅವರ ಅನುಭವಕ್ಕೆ ವೇದ್ಯವಾಗಿರುವ ಹಿನ್ನೆಲೆಯಲ್ಲಿ ಸಹಜಕ್ರಿಯೆ ಎನ್ನಿಸುತ್ತದೆ.

ಹೀಗೆಯೇ ವಿಧವೆಯರ ಹಾಗೂ ವಿಧುರರ ಮೇಲೆಯೂ ಅನೇಕ ನಿಷೇಧಗಳಿವೆ. ಇವೆಲ್ಲ ಪೂರ್ವನಂಬಿಕೆಗಳ ಪ್ರಚೋದನೆಗಳೇ ಆಗಿವೆ. ಅಂಥವರ ದರ್ಶನ ಅಥವಾ ಸಂಪರ್ಕದಿಂದ ಅಪಾಯವಿದೆಯೆಂಬ ನಂಬಿಕೆಯಿದೆ. ಅವರ ನೆರಳು ಬಿದ್ದರೂ ಸಾಕು ಅನಾರೋಗ್ಯ ಪೀಡಿತರಾಗುತ್ತರೆಂಬ ನಂಬಿಕೆಯೂ ಇದೆ. ಇಂಥ ನಂಬಿಕೆಗಳು ಅವರ ದರ್ಶನವೋ ಸಂಪರ್ಕವೋ ಉಂಟಾಗದಂತೆ ನಿಷೇಧಗಳನ್ನೊಡ್ಡುತ್ತವೆ. ಈ ಬಗೆಯ ನಂಬಿಕೆಗಳ ಪರಮೋದ್ದೇಶವೆಂದರೆ ಸತ್ತವರ ದೆವ್ವಗಳನ್ನು ದೂರ ಇಡುವುದೇ ಆಗಿದೆ.

ರುದ್ರಭೂಮಿಯಲ್ಲಿ ತಿನ್ನಕೂಡದು. ಕುಡಿಯಕೂಡದು. ಹಾಗೆ ಯಾವ ಆಹಾರವನ್ನಾದರೂ ತೆಗೆದುಕೊಂಡದ್ದೇ ಆದರೆ ಅಂಥವನು ಮತ್ತೆ ಮನೆಗೆ ಮರಳಲಾರ. ಹೀಗೆ ಆಹಾರಗಳ ಬಗ್ಗೆಯೂ ಅನೇಕ ಆಶಯಗಳು ಸಿಕ್ಕುತ್ತವೆ. ಇಂಥವು ಪ್ರಾಚೀನ ಪಳೆಯುಳಿಕೆಗಳಾಗಿರದೇ ಪ್ರಸ್ತುತ ಕಾಲದಲ್ಲೂ ಅನೇಕ ಬುಡಕಟ್ಟುಗಳಲ್ಲಿ ಉಳಿದುಕೊಂಡಿವೆ ಎಂದು ಹೇಳಲಾಗಿದೆ.

ಬೇಟೆಗಾರರನ್ನು ಪ್ರಾಣಿಯು ಸುತ್ತಿಸಿ ಸುತ್ತಿಸಿ ಸುಸ್ತುಮಾಡಿ ಪರಾರಿಯಾಗುತ್ತದೆಂಬ ನಂಬಿಕೆಯ ಹಿನ್ನೆಲೆಯಲ್ಲಿ ಗಂಡ ಬೇಟೆಗೆ ಹೋದಾಗ ಹೆಂಡತಿ ನೂಲಕೂಡದು ಎಂಬ ನಿಷೇಧವಿದೆ. ಇಂಥ ನಂಬಿಕೆ ಕಾರ್ಪೇತಿಯನ್ ಗುಡ್ಡಗಾಡಿನ ಜನರಲ್ಲಿ ಪ್ರಚಲಿತವಾಗಿದೆ. ನ್ಯಾಯ ಕೊನೆಮುಟ್ಟುವುದಿಲ್ಲ ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಊರಿನ ಮುಖಂಡರು ಪಂಚಾಯಿತಿಗೆ ಕುಳಿತಾಗ, ಹಾಜರಿದ್ದವರಲ್ಲಿ ಯಾರೂ ಕದಿರು ತಿರುಗಿಸಬಾರದೆಂಬ ನಿಷೇಧ. ಬಿಲಾಸ್‍ಪುರ ಜಿಲ್ಲೆಯ ಜನರಲ್ಲಿದೆ.

ನಂಬಿಕೆಯ ಹಿನ್ನೆಲೆಯಲ್ಲಿನ ಈ ನಿಷೇಧಗಳನ್ನೂ ಪ್ರಾಚೀನ ಕಾಲದಿಂದ-ರೀತಿ ಕುರುಡುತನದ್ದೆನಿಸಿದರೂ-ನಡೆದುಕೊಂಡು ಬಂದಿರುವ ಇನ್ನಾವುದೇ ಬಗೆಯ ಪದ್ದತಿಯನ್ನೂ ಎಲ್ಲ ಕೋನಗಳಿಂದಲೂ ವಿಶ್ಲೇಷಿಸಿದಾಗ ಒಂದೊಂದು ಕೋನದಲ್ಲೂ ಒಂದೊಂದು ಬಗೆಯ ಸಾಧ್ಯಾಸಾಧ್ಯತೆಗಳನ್ನೂ ರೀತಿರಿವಾಜುಗಳನ್ನೂ ಕಾಣಲವಕಾಶವುಂಟು. ಮಾನವನ ಪ್ರತಿಯೊಂದು ಬಾಹ್ಯ ಚಟುವಟಿಕೆಯಲ್ಲೂ ಮನಸ್ಸಿನ ವ್ಯಾಪಾರವನ್ನೇ ಕಾಣುವ ಮನೋವಿಜ್ಞಾನಿಗಳಿಗೂ ಮಾನವ ಇತಿಹಾಸವನ್ನು ವಿಶ್ಲೇಷಿಸುವ ಮಾನವಶಾಸ್ತ್ರಜ್ಞರಿಗೂ ಸಮೃದ್ಧ ಆಹಾರವಾಗಬಲ್ಲ ಈ ಟಾಬೂ ಅಗತ್ಯವೂ ಅನುಕರಣೀಯವೂ ಆಗಿರುವಂತೆ ಅನಗತ್ಯವೂ ತ್ಯಾಜ್ಯವೂ ಆಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Encyclopædia Britannica Online. "Taboo." Encyclopædia Britannica Inc., 2012. Retrieved 21 Mar. 2012

ಗ್ರಂಥಸೂಚಿ

[ಬದಲಾಯಿಸಿ]
  • Cook, James; King, James (1821). A voyage to the Pacific Ocean: undertaken by command of His Majesty, for making discoveries in the Northern Hemisphere : performed under the direction of Captains Cook, Clerke, and Gore : in the years 1776, 1777, 1778, 1779, and 1780 : being a copious, comprehensive, and satisfactory abridgement of the voyage. {{cite book}}: Invalid |ref=harv (help) Printed for Champante and Whitrow ... and M. Watson; 1793.
  • Cook, James (1728–1779). "The Three Voyages of Captain James Cook Round the World". 5. London: A&E Spottiswoode. {{cite journal}}: Cite journal requires |journal= (help); Invalid |ref=harv (help)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ನಿಷೇಧ&oldid=972671" ಇಂದ ಪಡೆಯಲ್ಪಟ್ಟಿದೆ