ನಾರ್ಕೊಲೆಪ್ಸಿ ಎಂಬ ಒಂದು ನಿದ್ರಾರೋಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೈದ್ಯರುಗಳ ಅಧ್ಯಯನದ ಪ್ರಕಾರ ಒಟ್ಟು ೮೪ ಬಗೆಯ ನಿದ್ರಾ ರೋಗಗಳಿವೆ.ಇವುಗಳಲ್ಲಿ ನಾರ್ಕೊಲೆಪ್ಸಿ ಮತ್ತು ನಿದ್ರಾಹೀನತೆ ಬಲು ಮುಖ್ಯವಾದವುಗಳು.ನಾರ್ಕೊ ಎಂದರೆ ಮಂಪರು ಅಥವಾ ನಿದ್ರೆ ಎಂದರ್ಥ. ಮಂಪರು ಪರೀಕ್ಷೆಗೆ ನಾರ್ಕೊ ಅನಾಲಿಸಿಸ್ ಎನ್ನುತ್ತಾರೆ.ನಾರ್ಕೊಲೆಪ್ಸಿ ರೋಗಗಳಿಗೆ ನಿದ್ರೆಯ ಮೇಲೆ ಹತೋಟಿಯೇ ಇರುವುದಿಲ್ಲ.ಇವರು ಬೆಳ್ಳಂಬೆಳಗು ಎಲ್ಲೆಂದರಲ್ಲಿ ತೂಕಡಿಸುವುದರಲ್ಲಿ ನಿಷ್ಣಾತರು.ಕೆಲಸದ ಮಧ್ಯೆಯೂ ತಟಕ್ಕನೆ ಕಣ್ಣು ಮುಚ್ಚಿ ನಿದ್ರೆ ಮಾಡಲಾರಂಭಿಸುವರು.ಅಮೆರಿಕೆಯಲ್ಲಿಯೇ ಸುಮಾರು ೧೩೫೦೦೦ ನಾರ್ಕೊಲೆಪ್ಸಿ ರೋಗಿಗಳು ಇದ್ದಾರೆಂದು ಅಂದಾಜು ಮಾಡಲಾಗಿದೆ. ನಿದ್ರೆಯಿಂದೇನು ಬಾಧಕ ಎಂದಿರಾ? ಅಮೆರಿಕೆಯ ಸ್ಪೀಡ್ವೆಗಳಲ್ಲಿ ಗಂಟೆಗೆ ನೂರು ಕಿ.ಮೀ. ವೇಗದಲ್ಲಿ ವಾಹನ ಚಲಾಯಿಸುವಾಗ ಸ್ಟೇರಿಂಗ್ ಹಿಡಿದುಕೊಂಡೇ ತೂಕಡಿಸಿ ಅವಗಡಗಳಿಗೆ ಕಾರಣರಾದವರಿದ್ದಾರೆ. ವಿಚಿತ್ರವೆಂದರೆ ಇವರು ರಾತ್ರಿಯಲ್ಲೂ ಸೊಗಸಾಗಿ ನಿದ್ರೆ ಮಾಡುತ್ತಾರೆ.ಆದರೆ ಬೆಳಗ್ಗೆಯೂ ನಿದ್ರಾವಶರಾಗಿರುವುದರಂದ ಕುಂಭಕರ್ಣ ಎಂದು ಒಡನಾಡಿಗಳ ಲೇವಡಿಗೆ ಆಹಾರವಾಗುತ್ತಾರೆ.ಕೆಲವರಲ್ಲಿ ಅತಿನಿದ್ರೆಯ ಲಕ್ಷಣಗಳು ಇನ್ನೂ ಗಂಭೀರವಾಗುವುದುಂಟು.ಇದ್ದಕ್ಕಿದ್ದ ಹಾಗೆ ವ್ಯಕ್ತಿಯ ಎಲ್ಲಾ ಸ್ನಾಯುಗಳೂ ಗಾಢ ನಿದ್ರೆಯಲ್ಲಿದ್ದಂತೆ ಬಿರುಸು ಕಳೆದುಕೊಮಡು ವ್ಯಕ್ತಿ ಕುಸಿಯುವುದುಂಟು.ನಾರ್ಕೊಲೆಪ್ಸಿಗೆ ತಳಿಗುಣಗಳು ಕಾರಣವೆನ್ನುವ ನಂಬಿಕೆ ಇದೆಯಾದರೂ, ಮುಪ್ಪು ಹಾಗು ಪರಿಸರದಲ್ಲಿನ ಕೆಲವು ಘಟಕಗಳು ಈ ರೋಗವನ್ನು ಉಂಟುಮಾಡಬಲ್ಲುವು.ಉದಾಹರಣೆಗೆ, ಭರ್ಜರಿ ಬೋಜನದ ಅನಂತರ ಬರುವ ತೂಕಡಿಕೆಯನ್ನೂ ತಾತ್ಕಾಲಿಕ ನಾರ್ಕೊಲೆಪ್ಸಿ ಎಂದು ಕೆಲವು ವೈದ್ಯರುಗಳು ವರ್ಗೀಕರಿಸಿದ್ದಾರೆ. ಇದಲ್ಲದೆ ಪಾರ್ಶ್ವವಾಯು,ಪಾರ್ಕಿನ್ಸೋನಿಸಂ ಇತ್ಯಾದಿ ಹಲವು ನರಮಂಡಲದ ಕಾಯಿಲೆಗಳು ಇರುವವರಲ್ಲೂ ನಾರ್ಕೊಲೆಪ್ಸಿ ಲಕ್ಷಣಗಳು ಕಾಣಿಸಿಕೊಳ್ಳುವುದುಂಟು.