ನರಬಲಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ನರಬಲಿ ಎಂದರೆ ಬದುಕಿರುವ ಮನುಷ್ಯನನ್ನು ದೈವದ ನೆಪ ಹೇಳಿ, ಯಾವುದಾದರೊಂದು ಕಾರಣದಿಂದ ಸಾಯಿಸುವ ಪ್ರಕ್ರಿಯೆಯಾಗಿದೆ. ಜನಪದರ ಬದುಕಿನಲ್ಲಿ 'ಬಲಿ'ಗೆ ಒಂದು ವಿಶಿಷ್ಟ ಸ್ಥಾನವಿದೆ. ಅದು ಅಮಾನುಷ ಎಂಬುದು ಎಷ್ಟು ಸತ್ಯವೂ, ಅಷ್ಟೇ ಸತ್ಯ ಗ್ರಾಮೀಣ ಮುಗ್ಧ ನೊಬ್ಬ ತನ್ನ ಆಸೆ-ಆಕಾಂಕ್ಷೆ, ಭಕ್ತಿ-ಗೌರವಗಳಿಗೆ ಸಂಪ್ರದಾಯ, ಆಚರಣೆಗಳನ್ನು ಬಲಿರೂಪದಲ್ಲಿ ಕೊಡುವುದು. ಬಲಿಯ ಸಂದರ್ಭಗಳು ಅನೇಕ, ವೈವಿಧ್ಯಮಯ. ಒಂದೊಂದು ಉದ್ದೇಶಕ್ಕಾಗಿ, ಒಂದೊಂದು ಸಂದರ್ಭಗಳಿಂದಾಗಿ ಬಲಿಕಾರ್ಯ ಅವ್ಯಾಹತವಾಗಿ ನಡೆಯುತ್ತಲೇ ಬಂದಿದೆ.

ಕರ್ನಾಟಕದಲ್ಲಿ ಬಲಿಪದ್ಧತಿ[ಬದಲಾಯಿಸಿ]

 • ಬಲಿಪದ್ಧತಿ ಆದಿಯಿಂದಲೂ ರೂಢಿಯಲ್ಲಿ ಇರುವಂತಹುದು. ಅತಿರೇಕದ ನಂಬಿಕೆ ಮತ್ತು 'ಭಯ'ದಿಂದ ಬಲಿಪದ್ದತಿಯು ಆಚರಣೆಯಲ್ಲಿದೆ. ದುಷ್ಟಶಕ್ತಿ/ದುಷ್ಟದೇವತೆಗಳಿಂದ ವ್ಯಕ್ತಿಗೆ, ಕುಟುಂಬಕ್ಕೆ, ಸಮಾಜಕ್ಕೆ, ಊರಿಗೆ ಅಪಾಯವಾಗದಿರಲಿ ಎಂಬ ನಂಬಿಕೆಯೆ ಬಲಿಗೆ ಹಿನ್ನೆಲೆ. ತ್ಯಾಗ ಮನೋಭಾವದ ಮನುಷ್ಯರು ತಮ್ಮನ್ನು ತಾವೇ ಬಲಿಯಾಗಿ ಅರ್ಪಿಸಿಕೊಳ್ಳುವುದು ಒಂದು ಬಗೆಯ ನರಬಲಿಯಾದರೆ, ಕುರಿ, ಕೋಳಿ, ಕೋಣ, ಹಂದಿಗಳ ಬಲಿ 'ತಾಮಸ ಬಲಿ'ಯಾಗುತ್ತದೆ.
 • ಹಣ್ಣು, ತೆಂಗಿನಕಾಯಿ, ಬೂದುಗುಂಬಳಕಾಯಿಗಳ ಬಲಿ 'ಸಾತ್ವ್ತಿಕಬಲಿ' ಎನಿಸಿಕೊಳ್ಳುತ್ತವೆ. ಮಾಂತ್ರಿಕರು ಕ್ಷುದ್ರದೇವತೆಗೆ ನರಬಲಿ ಅರ್ಪಿಸುತ್ತಿದ್ದುದುಂಟು. ಬಲಿಗಳಲ್ಲಿ ಅನೇಕ ವಿಚಿತ್ರ ವಿಧಾನಗಳೂ ಇವೆ ಎನ್ನಲಾಗಿದೆ.ಭೂಮಿತಾಯಿಗೆ ಅಥವಾ ಬೆಳೆಗಳಿಗೆ ಮನುಷ್ಯರನ್ನೇ ಬಲಿಕೊಡುವ ಅನೇಕ ಸಂದರ್ಭ, ಸನ್ನಿವೇಶಗಳು ಸರ್.ಜೇಮ್ಸ್ ಜಾರ್ಜ್ ಅವರ "ದಿ ಗೋಲ್ಡನ್ ಬೋ" ಕೃತಿಯಲ್ಲಿ ಪ್ರಸ್ತಾಪಿಸಲ್ಪಟ್ಟಿವೆ.

ಬಲಿಪದ್ಧತಿಯ ಕೆಲವು ಬಗೆಗಳು[ಬದಲಾಯಿಸಿ]

 1. ಮಾರಿಹಬ್ಬದ ಸಮಯದಲ್ಲಿ ಹಬ್ಬ ಪ್ರಾರಂಭವಾದುದರ ಸಂಕೇತವೆಂಬಂತೆ ಒಂದು ವಿಚಿತ್ರವಾದ ಬಲಿಯ ಕಾರ್ಯ ನಡೆಯುತ್ತದೆ. ಅದನ್ನು "ಕರಕು ಹಾಕುವುದು" ಎನ್ನುತ್ತಾರೆ. ಹಾಗೆಂದರೆ-ದೊಡ್ಡದಾಗಿ ಬೆಂಕಿಯ ರಾಶಿ ಮಾಡಿ, ಹಂದಿಯ ಕಾಲುಗಳನ್ನು ಕಟ್ಟಿ, ಜೀವಂತವಾಗಿ ಅದರೊಳಕ್ಕೆ ಎಸೆಯುತ್ತಾರೆ. ಹೀಗೆ ಸುಟ್ಟ ಹಂದಿಯ ಮಾಂಸವನ್ನು ಊರಿನ ಎಲ್ಲರ ಮನೆಯ ಸೂರುಗಳಿಗೂ ಸಿಕ್ಕಿಸಿ ಬರುತ್ತಾನೆ ಪೂಜಾರಿ.
 2. ಹೊಸದಾಗಿ ಮನೆ ಕಟ್ಟಿದಾಗ ಸಾಮಾನ್ಯವಾಗಿ ಬಲಿಯಾಗುವ ಪ್ರಾಣಿ ಆಡು ಅಥವಾ ಕುರಿಯಾಗಿರುತ್ತದೆ. ಇದಲ್ಲದೆ ಮನೆಯ ನಾಲ್ಕು ದಿಕ್ಕಿಗೂ ನಾಲ್ಕು ಕೋಳಿಗಳನ್ನು ಬಲಿಕೊಡುತ್ತಾರೆ. ಇದನ್ನು "ರಾವು ತೆಗೆಯುವುದು" ಎನ್ನುತ್ತಾರೆ.
 3. ಮದುವೆ ನಡೆದ ಮೇಲೆ ನವವಿವಾಹಿತರನ್ನು ಹಸೆಯ ಮೇಲೆ ಕೂರಿಸಿ ಕೋಳಿಯನ್ನು ಬಲಿ ಕೊಡುವ ಸಂಪ್ರದಾಯವಿದೆ. ಅದನ್ನು "ಹಸೆಮಾರಿ" ಎಂದು ಗುರ್ತಿಸುತ್ತಾರೆ.
 4. ಸಂಕ್ರಾಂತಿ ಅಥವಾ ಎಳ್ಳಮಾಸಿಯ ಸಮಯದಲ್ಲಿ ೨ಬಗೆಯಲ್ಲಿ ಬಲಿಕಾರ್ಯಗಳು ನಡೆಯುತ್ತವೆ. ೧.ಸಸ್ಯಹಾರಿಗಳು - ತೆಂಗಿನ ಕಾಯಿ, ಕುಂಬಳಕಾಯಿ ಒಡೆಯುವುದರೆ ಮೂಲಕ "ಸರಗ ಹೊಡೆಯುತ್ತಾರೆ". ಮಾಂಸಹಾರಿಗಳು-ಟಗರನ್ನು ಕೊಲ್ಲುವುದರ ಮೂಲಕ "ಪಲಿಹರಿಯುತ್ತಾರೆ".
 5. ದಲಿತರು ತಮ್ಮ ದೈವಕ್ಕೆ ಮೂರು ವರ್ಷಕ್ಕೊಮ್ಮೆ ಕೋಣವನ್ನು ಬಲಿ ಕೊಡುತ್ತಾರೆ. ಬಲಿ ಕೊಡುವ ಪ್ರಾಣಿಗೆ ವರ್ಷ ಅಥವಾ ಮೂರು ವರ್ಷಕ್ಕೆ ಮೊದಲೇ ಭಂಡಾರ ಹಚ್ಚಿ ದೇವರಿಗೆ ಮೀಸಲು ಬಿಟ್ಟಿರುತ್ತಾರೆ.
 6. ಬಿಜಾಪುರ ಪ್ರದೇಶದ ಗೊಂದಲಿಗರು ತಮ್ಮ ದೇವತೆಯಾದ ಅಂಬಾಭವಾನಿಗೆ ದೀಪಾವಳಿ ಸಮಯದಲ್ಲಿ ಪ್ರಾಣಿಬಲಿ ಕೊಡುತ್ತಾರೆ.
 7. ದುರ್ಗವ್ವನ ಹಬ್ಬದಲ್ಲಿ ತಮ್ಮ ಸಂಪ್ರದಾಯದಂತೆ ಅಲ್ಲಿನ ಜನರು ಹೋತವನ್ನೋ, ಉಣ್ಣೇಗುರಿಯನ್ನೋ ಬಲಿಕೊಡುವ ಆಚರಣೆಯಿದೆ.

ನರಬಲಿಯ ಹಿನ್ನೆಲೆ-ಉದ್ದೇಶ[ಬದಲಾಯಿಸಿ]

 • ನಿರ್ದಿಷ್ಟ ದೈವದ ಪ್ರೀತ್ಯರ್ಥವಾಗಿ ಪ್ರಾಣಿಗಳನ್ನು, ಮನುಷ್ಯರನ್ನು ಕೊಲ್ಲುವುದಕ್ಕೆ ಬಹು ಮುಖ್ಯ ಕಾರಣ ದುಷ್ಟಶಕ್ತಿಗಳಿಂದ ಕುಟುಂಬಕ್ಕೆ ಅಥವಾ ಊರಿಗೆ ಅಪಾಯವಾಗದಿರಲಿ ಎಂದು. ಬಲಿ ಒಮ್ಮೊಮ್ಮೆ ತ್ಯಾಗ ಎಂಬ ಹೆಸರಿನಲ್ಲೂ ಬಳಕೆಗೊಂಡಿರುವುದನ್ನು ಕೆರೆಗೆಹಾರ ಕಥನಗೀತೆಗಳಲ್ಲಿ ಕಾಣಬಹುದು. ವಿರಕ್ತ ಮನೋಭಾವದ ಮನುಷ್ಯರು ತಮ್ಮನ್ನು ತಾವೇ ದೇವರಿಗೆ ಅಥವಾ ಇನ್ನಿತರ ಸಂದರ್ಭಗಳಲ್ಲಿ ಅರ್ಪಿಸಿಕೊಳ್ಳುವ ಪ್ರಕ್ರಿಯೆ ನರಬಲಿಯಾಗುತ್ತದೆ.
 • ಮಾಂತ್ರಿಕರು ವಾಮಾಚಾರದ ವಿದ್ಯೆಯನ್ನು ವಶೀಕರಿಸಿಕೊಳ್ಳುವ ಸಲುವಾಗಿ ಕ್ಷುದ್ರಶಕ್ತಿಗಳಿಗೆ ನರಬಲಿ ಕೊಟ್ಟಿರುವ ಉಲ್ಲೇಖಗಳನ್ನು ಸಾಹಿತ್ಯದಲ್ಲಿ ಕಾಣಬಹುದಾಗಿದೆ. ಹಾಗೇಯೆ ನಿಧಿ ಆಶೆಗಾಗಿ ಪ್ರಾಣತೆತ್ತ ಜೀವಗಳೂ ಕಡಿಮೆಯೆನಲ್ಲ. ಜನರು ತಮ್ಮ ಆತ್ಮತೃಪ್ತಿಗಾಗಿ, ಸುಖಕರ ಸಾವಿಗಾಗಿ ಅಥವಾ ಮಾನವಕುಲದ ಲಾಭಕ್ಕಾಗಿ ಖೋಂಡ್ ಜನರು ತಮ್ಮ ಮಕ್ಕಳನ್ನು ಬಲಿಕೊಡುವ ಉದ್ದೇಶಕ್ಕಾಗಿಯೇ ಮಗುವನ್ನು ಹೆತ್ತು ಮಾರುತ್ತಿದ್ದರು.

ಹಿಂದಿನ ನರಬಲಿ ಆಚರಣೆ/ಬಲಿ ಪ್ರಕ್ರಿಯೆ[ಬದಲಾಯಿಸಿ]

 • ೧೯ನೇ ಶತಮಾನದ ಮಧ್ಯಭಾಗದ ಕಾಲದಲ್ಲಿ ಬ್ರಿಟಿಷ್ ಅಧಿಕಾರಿಗಳಿಂದ ಉಲ್ಲೇಖಿಸಲ್ಪಟ್ಟಿರುವ ನರಬಲಿಯೊಂದು ಮನವನ್ನು ಕಲಕುತ್ತದೆ. ಬಂಗಾಳದ "ಖೋಂಡ್ಸ್"ಎಂಬ ದ್ರಾವಿಡರು ಸಮೃದ್ಧ ಬೆಳೆಗಳನ್ನು ಪಡೆಯುವ ಸಲುವಾಗಿ ಹಾಗೂ ಸರ್ವರೋಗಗಳಿಂದಲೂ ಮುಕ್ತಿ ಪಡೆಯುವ ಸಲುವಾಗಿ, ಭೂಮಿದೇವತೆಗೆ (ಭೂತಾಯಿಗೆ) ಅರ್ಪಿಸುತ್ತಿದ್ದರು.
 • ಬಲಿ ಮತ್ತು ಅದರ ಆಚರಣೆಗಳು ಹೀಗಿರುತ್ತಿದ್ದವು - ನಿರ್ದಿಷ್ಟವಾಗಿ ಅರಿಶಿನದ ಬೆಳೆಗಾಗಿ ಅರ್ಪಿಸುತ್ತಿದ್ದ ಬಲಿ ಇದಾಗಿದೆ. ಭೂಮಿ ಮೇಲೆ ಮನುಷ್ಯನ ರಕ್ತ ಸುರಿಸದೇ ಹೋದರೆ ಅರಿಶಿನದ ಬೆಳೆಗೆ ದಟ್ಟವಾದ ಬಣ್ಣ ಬರುವುದಿಲ್ಲವೆಂಬ ನಂಬಿಕೆಯ ಹಿನ್ನೆಲೆಯಲ್ಲಿ ಅದರ ಸಮರ್ಥನೆಯು ಇರುತ್ತದೆ.
 • ಭೂದೇವಿಗೆ ಅರ್ಪಿಸಲು ಇರಬೇಕಾದ ಅರ್ಹತೆ ಎಂದರೆ ಬಲಿಗೆ ಅರ್ಪಿಸಲ್ಪಡುವ ಮನುಷ್ಯ ದುಡ್ಡುಕೊಟ್ಟು ಕೊಂಡು ತಂದವನಾಗಿರಬೇಕು. ಇಲ್ಲವೇ ಈ ಉದ್ದೇಶಕ್ಕಾಗಿ ಮೀಸಲು ಬಿಟ್ಟವನಾಗಿರಬೇಕು. ಅರ್ಪಿಸಲು ಸಿದ್ದನಾದ ವ್ಯಕ್ತಿಯನ್ನ ಅಲಲ್ಲಿಯ ಜನರು ಪರಮ ಪವಿತ್ರ ವಸ್ತುವೆಂಬಂತೆ ಪರಿಭಾವಿಸಿ ಬಲಿಯಾಗುವ ವ್ಯಕ್ತಿಗೆ ಸಕಲಗೌರವವನ್ನು ಸಲ್ಲಿಸುತ್ತಿದ್ದರು. ಈ ಬಲಿ ಸಕಲ ಮಾನವಕುದ ಉದ್ದಾರಕ್ಕಾಗಿ ಎಂಬ ಭಾವನೆ ಅವರಿಗಿತ್ತು.
 • ಬಲಿದಿನಕ್ಕೆ ಇನ್ನು ಹತ್ತು ಹನ್ನೆರಡು ದಿನಗಳು ಇರುವಾಗಲೇ ಅದುವರೆವಿಗೂ ದಟ್ಟವಾಗಿ ಬೆಳೆದಿರುತ್ತಿದ್ದ ಆ ವ್ಯಕ್ತಿಯ ತಲೆಗೂದಲನ್ನು ತೆಗೆಯಲಾಗುತ್ತದೆ. ಬಲಿಯನ್ನು ನೋಡಲು ಹೆಂಗಸರು, ಗಂಡಸರೆಲ್ಲರೂ ದಟ್ಟವಾಗಿ ಸೇರುತ್ತಾರೆ. ಬಲಿಯ ಹಿಂದಿನ ದಿನ ಬಲಿಪಶುವನ್ನು ಹೊಸ ಉಡುಗೆ ತೊಡುಗೆಗಳಿಂದ ಅಲಂಕರಿಸುತ್ತಾರೆ. ವಾದ್ಯಮೇಳ, ನೃತ್ಯಮೇಳಗಳೊಂದಿಗೆ ಶೋಕಕರ ಮೆರವಣಿಗೆಯಲ್ಲಿ ಅವನನ್ನು ಊರ ಹೊರಗಿನ ಎತ್ತರ ಪ್ರದೇಶದ ಕೊಡಲಿ ಮುಟ್ಟದ ಮರವೂಂದರ ಬಳಿಗೆ ಕರೆತರುತ್ತಾರೆ.
 • ಅಲ್ಲಿ ಎರಡು ಪೊದೆಗಳ ನಡುವೆ ಒಂದು ಕಂಬಕ್ಕೆ ಬಿಗಿದು ನಿಲ್ಲಿಸುತ್ತಾರೆ. ಆಮೇಲೆ ಬಲಿಯಾಗುವ ವ್ಯಕ್ತಿಗೆ ಎಣ್ಣೆ, ತುಪ್ಪ, ಅರಿಶಿನಗಳನ್ನು ಪೂಸುತ್ತಾರೆ. ಹೂಗಳಿಂದ ಅವನನ್ನು ಅಲಂಕರಿಸುವರು. ಅದನ್ನೊಂದು ಪೂಜ್ಯ ವಸ್ತುವೆಂದು ಪರಿಗಣಿಸಿ ಆ ದಿನವೆಲ್ಲ ಪೂಜೆ, ಭಜನೆಗಳ ನಮನಗಳನ್ನು ಸಲ್ಲಿಸುತ್ತಾರೆ. ಅವನಿಗೆ ಪೂಸಿದ್ಧ ಹೂವು ಅರಿಸಿನ ಪ್ರಸಾದಕ್ಕಾಗಿ, ಅವನಲ್ಲಿ ದೊರೆಯುವ ಒಂದು ತೊಟ್ಟು ಉಗುಳು ಕೂಡ ಪವಿತ್ರವೆಂಬ ಭಾವನೆ ಸಾರ್ವತ್ರಿಕವಾಗಿದೆ.
 • ನಂತರ ಅವರು ಭೂಮಿಯನ್ನು ಕುರಿತು ಹಾಡುತ್ತಾ -"ಓ ದೇವರೆ ಈ ಬಲಿಯನ್ನು ನಿನಗೆ ಅರ್ಪಿಸಿದ್ದೇವೆ. ಒಳ್ಳೆಯ ಬೆಳೆಯನ್ನು ಬದುಕನ್ನೂ ಆರೋಗ್ಯವನ್ನು ನಮಗೆ ದಯಪಾಲಿಸು" ಎನ್ನುತ್ತಾರೆ. ಅದರೊಂದಿಗೆ ಬಲಿಯಾಗುತ್ತಿರುವ ವ್ಯಕ್ತಿಯನ್ನು ಕುರಿತು ಹಾಡುತ್ತಾರೆ- "ನಿನ್ನನ್ನು ಬೆಲೆ ಕೊಟ್ಟು ತಂದಿದ್ದೇವೆ; ಮತ್ತು ನಾವೆಲ್ಲ ನಿನ್ನನ್ನು ಬಂಧನದಲ್ಲಿಡಲಿಲ್ಲ. ಪದ್ದತಿಯ ಪ್ರಕಾರ ನಿನ್ನನ್ನು ಬಲಿಗೊಡುತ್ತಿದ್ದೇವೆ; ಇದರಿಂದ ಯಾವ ಪಾಪವೂ ನಮ್ಮಲ್ಲಿ ಉಳಿಯುವುದಿಲ್ಲ".
 • ಬಲಿಪಶುವಿಗೆ ಮತ್ತೆ ಎಣ್ಣೆ ಪೂಸಲ್ಪಡುತ್ತದೆ. ಅಲ್ಲಿ ನೆರೆದ ಪ್ರತಿಯೊಬ್ಬ ವ್ಯಕ್ತಿಯೂ ಎಣ್ಣೆಯ ಭಾಗವನ್ನು ಮುಟ್ಟಿ ತಮ್ಮ ತಲೆಗಳಿಗೆ ತಿಕ್ಕಿ ಕೊಳ್ಳುತ್ತಾರೆ. ಆ ಘಳಿಗೆಯಲ್ಲಿ ಬಲಿಪಶುವನ್ನು ಮೆರವಣಿಗೆ ಮಾಡುತ್ತಾರೆ. ಮೆರವಣಿಗೆ ಸಂದರ್ಭದಲ್ಲಿ ಕೆಲವರು ಬಲಿಪಶುವಿನ ತಲೆಯಲ್ಲಿ ಉಳಿದಿರಬಹುದಾದ ಕೂದಲನ್ನು ಕಿತ್ತು ಇಟ್ಟುಕೊಳ್ಳುತ್ತಾರೆ. ಇಷ್ಟೂ ಸಾಲದೆಂಬಂತೆ, ಅವನಿಗೆ ಅಫೀಮು ತಿನ್ನಿಸಿ ಮಂಕು ಕವಿಯುವಂತೆ ಮಾಡಲಾಗಿರುತ್ತದೆ.
 • ಬಲಿಪಶುವನ್ನು ಸಾಯಿಸುವ ಪ್ರಕ್ರಿಯೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವ್ಯತ್ಯಸ್ತಗೊಳ್ಳುತ್ತದೆ-
 1. ಅತ್ಯಂತ ಸಾಮಾನ್ಯ ರೀತಿಯೆಂದರೆ ಕುತ್ತಿಗೆ ಹಿಸುಕಿ ಉಸಿರುಗಟ್ಟಿಸಿ, ಆಮೇಲೆ ಹಸುರು ಮರವೂಂದರ ಕೊಂಬೆಯನ್ನು ನಡುಭಾಗದವರೆಗೆ ಸೀಳಿ, ಆ ಸೀಳಿನೊಳಕ್ಕೆ ತಲೆಯನ್ನೋ, ಎದೆಯ ಭಾಗವನನ್ನೋ ತೂರಿಸಿ, ನಂತರ ಕೊಡಲಿಯಿಂದ ದೇಹಕ್ಕೆ ಹೊಡೆದು ಗಾಯಗೊಳಿಸುತ್ತಾರೆ. ಕೂಡಲೆ ಜನ ಆ ನಿರ್ಭಾಗ್ಯನೆಡೆಗೆ ನುಗ್ಗುತ್ತಾರೆ. ಅವನ ಶರೀರದ ಮಾಂಸವನ್ನು ತುಂಡು ತುಂಡು ಮಾಡುತ್ತಾರೆ. ಆ ಸಮಯದಲ್ಲಿ ತಲೆ ಮತ್ತು ಹೊಟ್ಟೆ ಭಾಗವನ್ನು ಮಾತ್ರ ಮುಟ್ಟುವುದಿಲ್ಲ.
 2. ಒಮ್ಮೊಮ್ಮೆ ಬಲಿಪಶು ಜೀವಸಹಿತವಾಗಿದ್ದಾಗಲೂ ಕತ್ತರಿಸಲಾಗುತ್ತದೆ.
 3. "ಚಿನ್ನಾಕಿಮೆಡಿ" ಎಂಬಲ್ಲಿ ಬಲಿಪಶು ಜೀವಂತನಿದ್ದಾಗಲೇ ಬಯಲಿನೊಳಗೆಲ್ಲಾ ಎಳೆದಾಡುತ್ತಾರೆ. ಅಲ್ಲದೆ ಬದುಕಿರುವಾಗಲೇ ತಲೆ ಮತ್ತು ಕರುಳಿನ ಭಾಗವನ್ನು ಬಿಟ್ಟು ಉಳಿದ ಭಾಗಗಳಲ್ಲಿ ಚಾಕು ಹಾಕಿ ಸಾಯುವವರೆಗೂ ಅವನಿಂದ ಮಾಂಸವನ್ನು ಕೀಳುತ್ತಲೆ ಇರುತ್ತಾರೆ.
 4. ಬಂಗಾಳ ಜಿಲ್ಲೆಯಲ್ಲಿ ಪ್ರಚಲಿತವಿರುವ ಅತಿ ಸಾಮಾನ್ಯ ಬಲಿಯ ರೀತಿಯೆಂದರೆ- ಮರದ ಆನೆಯ ಸೊಂಡಲಿಗೆ ಬಲಿಪಶುವನ್ನು ಸಿಕ್ಕಿಸಿ, ಆ ಆನೆಯನ್ನು ಗಿರ ಗಿರನೆ ತಿರುಗಿಸುತ್ತಾರೆ. ಹಾಗೆ ಆನೆ ತಿರುಗುತ್ತಿರುವಾಗಲೇ ಆ ಜೀವಂತ ಮನುಷ್ಯನ ದೇಹದಿಂದ ಮಾಂಸದ ತುಂಡುಗಳನ್ನು ಕತ್ತರಿಸಿ ಕಿತ್ತುಕೊಳ್ಳುತ್ತಾರೆ. ಹಾಗೆ ಪಡೆದ ಮಾಂಸದ ತುಂಡುಗಳನ್ನು ತಮ್ಮ ತಮ್ಮ ಹಳ್ಳಿಗೆ ಒಯ್ಯುತ್ತಾರೆ.

ಬಲಿಯ ನಂತರದ ಆಚರಣೆ[ಬದಲಾಯಿಸಿ]

 • ಪ್ರತಿಯೊಂದು ಹಳ್ಳಿಯಲ್ಲಿಯೂ ಬಲಿಯ ಆಚರಣೆಯ ಸ್ಥಳಕ್ಕೆ ಹೋಗಲಾರದೆ ಮನೆಯಲ್ಲೇ ಉಳಿದವರು, ಬಲಿಮಾಂಸ ಬರುವವರೆಗೆ ಉಪವಾಸ ಆಚರಿಸುತ್ತಾರೆ. ಮಾಂಸ ತರುವವನು ಊರ ನಡುವಿನ ಚಾವಡಿಯಂತ ಸ್ಥಳದಲ್ಲಿ ಕಾದು ನಿಂತು, ಅದನ್ನು ಅರ್ಚಕ ಮತ್ತು ಇತರ ಕುಟುಂಬ ಮುಖ್ಯಸ್ಥರ ವಶಕ್ಕೆ ಒಪ್ಪಿಸುತ್ತಾನೆ. ಅರ್ಚಕ ಆ ಮಾಂಸದ ತುಂಡನ್ನು ಎರಡು ಭಾಗ ಮಾಡಿ, ಒಂದನ್ನು ಭೂಮಿದೇವತೆಗೆ (ಭೂ ತಾಯಿಗೆ) ಅರ್ಪಿಸುವ ಸಲುವಾಗಿ, ಅಣಿಯಾಗಿರುತ್ತಿದ್ದ ಕುಳಿಯಲ್ಲಿ ತನ್ನ ಬೆನ್ನ ಹಿಂದೆ ಹಾಕುತ್ತಾನೆ.
 • ಉಳಿದವರಲ್ಲಿ ಪ್ರತಿಯೊಬ್ಬರೂ ಆ ಕುಳಿಯೊಳಕ್ಕೆ ಮಣ್ಣು ಹಾಕುತ್ತಾರೆ. ನಂತರ ಅರ್ಚಕ ಸೋರೆ ಬುರುಡೆಯಂಥ ಯಾವುದಾದರೊಂದು ಪ್ರಾಕೃತಿಕ ಬುರುಡೆಯ ಶೀಷೆಯಿಂದ ಆ ಸಮಾಧಿಯ ಮೇಲೆ ನೀರು ಹಾಕುತ್ತಾನೆ. ಆಮೇಲೆ ಉಳಿದ ಮತ್ತಷ್ಟು ಮಾಂಸದ ತುಂಡನ್ನು ಊರಿನ ಜನರಿಗೆಲ್ಲಾ ಹಂಚಿಬಿಡುವರು. ಆ ಮಾಂಸದ ತುಂಡನ್ನು ಎಲೆಯಲ್ಲಿ ಹಾಕಿಕೊಂಡು ಪ್ರತಿಯೊಬ್ಬ ಕುಟುಂಬ ಮುಖಂಡನೂ ತಮ್ಮ ತಮ್ಮ ಮನೆಗಳಿಗೆ ಒಯ್ದು, ತಮಗೆ ಇಷ್ಟ ಬಂದಂತೆ ತಮ್ಮ ಭೂಮಿಯಲ್ಲಿ ಹುಗಿಯುತ್ತಾರೆ.
 • ಬಲಿ ನಡೆದ ಸ್ಥಳದಲ್ಲಿ ಉಳಿದು ಹೋದ ಮಾನವ ಬಲಿಪಶುವಿನ ಇತರ ಭಾಗಗಳನ್ನು ಅಂದರೆ, ತಲೆ,ಕರುಳು ಹಾಗೂ ಮೂಳೆಗಳನ್ನು-ಆ ರಾತ್ರಿ ಕೆಲವು ಬಲಶಾಲಿ ವ್ಯಕ್ತಿಗಳು ಕಾಯುತ್ತಾರೆ. ಮರುದಿನ ಬೆಳಿಗ್ಗೆ ಆ ಭಾಗಗಳೊಂದಿಗೆ ಒಂದು ಜೀವಂತ ಕುರಿಯನ್ನು ಇಟ್ಟು ಚಿತೆ ಹಚ್ಚಿ ಸಂಸ್ಕಾರ ಕಾರ್ಯವನ್ನು ನೆರವೇರಿಸುತ್ತಾರೆ. ಆ ಬೂದಿಯಲ್ಲಿ ಸ್ವಲ್ಪಭಾಗವನ್ನು ವ್ಯವಸಾಯದ ಭೂಮಿಯ ಮೇಲೆ ಚೆಲ್ಲಲಾಗುತ್ತದೆ.
 • ಇಲ್ಲವೆ ಬೂದಿಯನ್ನು ನೀರಿನಲ್ಲಿ ಕಲಸಿ ಮನೆಗಳಿಗೂ, ಕಣಜ ಗಳಿಗೂ ಸುಣ್ಣದಂತೆ ಬಳಿಯಲಾಗುತ್ತದೆ ಅಥವಾ ಹೊಸ ಧಾನ್ಯಗಳೊಂದಿಗೆ ಆ ಬೂದಿಯನ್ನು ಬೆರೆಸಿಡುತ್ತಾರೆ. ಅಲ್ಲಿಂದಾಚೆಗೆ ಮೂರು ದಿನಗಳ ಕಾಲ ಯಾವ ಮನೆಯಲ್ಲೂ ಕಸ ಗುಡಿಸುವುದಿಲ್ಲ. ಬೆಂಕಿಯನ್ನು ಮನೆಯಿಂದ ಹೊರಕ್ಕೆ ಕೊಡುವುದಿಲ್ಲ. ಸೌದೆ ಕಡಿಯುವಂತಿಲ್ಲ. ಅಪರಿಚಿತರನ್ನು ಮನೆಯೊಳಗೆ ಸೇರಿಸುವುದಿಲ್ಲ.

ಆಕರ ನೆರವು[ಬದಲಾಯಿಸಿ]

 • ಜಾನಪದ ವಿಹಾರ - ಕ್ಯಾತನಹಳ್ಳಿ ರಾಮಣ್ಣ
 • "ದಿ ಗೋಲ್ಡನ್ ಬೋ" - ಸರ್.ಜೇಮ್ಸ್ ಜಾರ್ಜ್

ಉಲ್ಲೇಖಗಳು[ಬದಲಾಯಿಸಿ]

[೧] [೨] [೩] [೪] [೫] [೬] [೭]

ಬಾಹ್ಯಕೊಂಡಿಗಳು[ಬದಲಾಯಿಸಿ]

 1. http://kannadajaanapada.blogspot.in/2014/02/blog-post_27.html
 2. http://kanaja.in/archives/30188
 3. http://www.kannadaprabha.com/nation/jharkhand-shocker-man-beheaded-for-better-rains/252069.html
 4. http://www.udayavani.com/tags/%E0%B2%A8%E0%B2%B0%E0%B2%AC%E0%B2%B2%E0%B2%BF
 5. http://sampada.net/%E0%B2%A8%E0%B2%B0%E0%B2%AC%E0%B2%B2%E0%B2%BF
 6. http://www.khandbahale.com/kannadaenglish-q-%E0%B2%A8%E0%B2%B0%E0%B2%AC%E0%B2%B2%E0%B2%BF.htm
 7. http://ka.popularfrontindia.org/?q=content/%E0%B2%9A%E0%B2%BE%E0%B2%AE%E0%B2%B0%E0%B2%BE%E0%B2%9C%E0%B2%A8%E0%B2%97%E0%B2%B0-%E0%B2%A6%E0%B2%B2%E0%B2%BF%E0%B2%A4%E0%B2%B0-%E0%B2%A8%E0%B2%B0%E0%B2%AC%E0%B2%B2%E0%B2%BF-%E0%B2%AA%E0%B3%8D%E0%B2%B0%E0%B2%95%E0%B2%B0%E0%B2%A3-%E0%B2%89%E0%B2%A8%E0%B3%8D%E0%B2%A8%E0%B2%A4-%E0%B2%AE%E0%B2%9F%E0%B3%8D%E0%B2%9F%E0%B2%A6-%E0%B2%A4%E0%B2%A8%E0%B2%BF%E0%B2%96%E0%B3%86%E0%B2%97%E0%B3%86-%E0%B2%8E%E0%B2%B8%E0%B3%8D%E0%B2%A1%E0%B2%BF%E0%B2%AA%E0%B2%BF%E0%B2%90-%E0%B2%86%E0%B2%97%E0%B3%8D%E0%B2%B0%E0%B2%B9
"https://kn.wikipedia.org/w/index.php?title=ನರಬಲಿ&oldid=632154" ಇಂದ ಪಡೆಯಲ್ಪಟ್ಟಿದೆ