ವಿಷಯಕ್ಕೆ ಹೋಗು

ನರಕಾಸುರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನರಕಾಸುರನು ಭಾಗವತ ಪುರಾಣದಲ್ಲಿ ಬರುವ ಒಬ್ಬ ರಾಕ್ಷಸ. ವಿಷ್ಣು ವರಾಹವತಾರ ತಳೆದಿದ್ದಾಗ ಆತನ ದೇಹದಿಂದ ಒಂದು ತೊಟ್ಟು ಬೆವರು ನೆಲದ ಮೇಲೆ ಬೀಳಲಾಗಿ ಭೂದೇವಿಯಲ್ಲಿ ಹುಟ್ಟಿದವ. ಈತನಿಗೆ ಭೌಮಾಸುರ ಎಂಬ ಹೆಸರೂ ಉಂಟು. ಭೂದೇವಿ ವಿಷ್ಣುವನ್ನು ಬೇಡಿ ತನ್ನ ಮಗನಿಗೆ ವೈಷ್ಣವಾಸ್ತ್ರವನ್ನು ಸಂಪಾದಿಸಿಕೊಟ್ಟಳು. ಇದರ ಮಹಿಮೆಯಿಂದ ದುರ್ಜಯನಾದ ಈತ ಪ್ರಾಗ್ಜೋತಿಷಪುರದಲ್ಲಿ ವಾಸ ಮಾಡುತ್ತಿದ್ದು ಲೋಕಕಂಟಕನಾಗಿದ್ದ. ಈತನೂ ಈತನ ಸ್ನೇಹಿತನಾದ ಮುರಾಸುರನೂ ಇಂದ್ರನಿಗೆ ಪ್ರತಿನಿತ್ಯ ತೊಂದರೆ ಕೊಡುತ್ತಿದ್ದರು. ಇವರು ಶ್ವೇತಚ್ಛತ್ರವನ್ನೂ ಸ್ವರ್ಗಲೋಕದ ಮಣಿಪರ್ವತವನ್ನೂ ಅಪಹರಿಸಿದರು. ಇಂದ್ರನ ತಾಯಿ ಅದಿತಿಯ ಕರ್ಣಕುಂಡಲಗಳನ್ನು ಈತ ಅಪಹರಿಸಿದ. ಈತನ ಹಿಂಸೆಯನ್ನು ತಾಳಲಾರದ ಇಂದ್ರ ದ್ವಾರಕೆಗೆ ಬಂದು ಶ್ರೀಕೃಷ್ಣನಲ್ಲಿ ಮೊರೆಯಿಟ್ಟ. ಇಂದ್ರನಿಗೆ ಅಭಯವಿತ್ತ ಕೃಷ್ಣ ಸತ್ಯಭಾಮೆಯೊಡನೆ ಗರುಡಾರೂಢನಾಗಿ ಪ್ರಾಗ್ಜೋತಿಷಪುರದತ್ತ ನಡೆದ. ಆ ಪುರದ ಸುತ್ತಲೂ ಮುರ ನಿರ್ಮಿಸಿದ್ದ ಬೆಟ್ಟ, ನೀರು, ಬೆಂಕಿ ಹಾಗೂ ಶಸ್ತ್ರಗಳ ಕೋಟೆ ಮತ್ತು ಮುರಪಾಶವನ್ನು ಚಕ್ರಾಯುಧದಿಂದ ನಾಶ ಮಾಡಿ ಪುರಪ್ರವೇಶ ಮಾಡಿ ಪಾಂಚಜನ್ಯವನ್ನು ಊದಿದ. ಇದನ್ನು ಕೇಳಿ ನೀರಿನಲ್ಲಿ ಮಲಗಿದ್ದ ಪಂಚಶಿರನಾದ ಮುರ ನಿದ್ದೆಯಿಂದೆದ್ದು ಭಯಂಕರವಾಗಿ ಆರ್ಭಟಿಸುತ್ತ ಕೃಷ್ಣನ ಮೇಲೆರಗಿದ. ಒಂದೇ ಸಲಕ್ಕೆ ಕೃಷ್ಣ ಪಂಚಬಾಣಗಳನ್ನು ಬಿಟ್ಟು ಮುರನ ತಲೆಯನ್ನು ಕತ್ತರಿಸಿದ.

ಮುರನ ಮರಣವಾರ್ತೆಯನ್ನು ಕೇಳಿದ ಆತನ ಏಳು ಜನ ಮಕ್ಕಳು ಪೀಠಾಸುರನೆಂಬ ಸೇನಾಪತಿಯೊಡನೆ ನರಕಾಸುರನ ಅಪ್ಪಣೆಯನ್ನು ಕೇಳಿ ಕೃಷ್ಣನ ಮೇಲೆರಗಿದರು. ಕೃಷ್ಣ ಅವರನ್ನೂ ತನ್ನ ಚಕ್ರಾಯುಧಕ್ಕೆ ಆಹುತಿ ಕೊಟ್ಟ. ಇವರೆಲ್ಲ ಹತರಾದ ಬಳಿಕ ನರಕಾಸುರ ಸೈನ್ಯಸಮೇತನಾಗಿ ಕೃಷ್ಣನ ಮೇಲೆ ಎರಗಿ, ಬಹಳವಾಗಿ ಹೋರಾಡಿ ಸತ್ತ.

ನರಕಾಸುರ ಮರಣಹೊಂದುತ್ತಲೇ ಭೂದೇವಿ, ಅದಿತಿಯ ಕುಂಡಲಗಳನ್ನೂ ಇಂದ್ರನ ಛತ್ರವನ್ನೂ ಮಣಿಪರ್ವತವನ್ನೂ ತೆಗೆದುಕೊಂಡು, ನರಕಾಸುರನ ಮಗನಾದ ಭಗದತ್ತನನ್ನು ಕರೆತಂದು ಕೃಷ್ಣನಿಗೆ ಅಡ್ಡ ಬೀಳಿಸಿ, ಆ ವಸ್ತುಗಳನ್ನೆಲ್ಲ ಅರ್ಪಿಸಿ ಕೃಷ್ಣನಿಂದ ಭಗದತ್ತನಿಗೆ ಅಭಯ ಕೊಡಿಸಿದಳು. ಶ್ರೀಕೃಷ್ಣ ನರಕಾಸುರನ ಸೆರೆಯಲ್ಲಿರಿಸಿದ್ದ ಹದಿನಾರು ಸಾವಿರ ರಾಜಪುತ್ರಿಯರನ್ನು ಬಿಡಿಸಿ, ಅವರ ಇಚ್ಛೆಯಂತೆ ತಾನೇ ವರಿಸಿದ.

ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ನೆನಪಿಗಾಗಿ ಭಾರತೀಯರು ಪ್ರತಿವರ್ಷವೂ ದೀಪಾವಳಿಯ ಮೊದಲ ದಿನವನ್ನು ನರಕಚತುರ್ದಶಿ ಎಂದು ಕರೆದು ಹಬ್ಬವನ್ನು ಆಚರಿಸುತ್ತಾರೆ.

ಗ್ರಂಥಸೂಚಿ

[ಬದಲಾಯಿಸಿ]
  • Boruah, Nirode (2005). "'Early State' Formation in the Brahmaputra Valley of Assam". Proceedings of the Indian Historical Congress. 66: 1464–1465. JSTOR 44145968.
  • Smith, William L (2007). "Assam: Shankaradeva's Parijata Harana Nata". In Bryant, Edwin (ed.). Krishna: A Source Book. Oxford University Press. pp. 163–186. {{cite book}}: Cite has empty unknown parameter: |1= (help)
  • Sharma, Mukunda Madhava (1978). Inscriptions of Ancient Assam. Gauhati University, Assam.
  • Sircar, D C (1990), "Epico-Puranic Myths and Allied Legends", in Barpujari, H K (ed.), The Comprehensive History of Assam, vol. I, Guwahati: Publication Board, Assam, pp. 79–93 {{citation}}: Invalid |ref=harv (help)
  • Sircar, D C (1971), Studies in the Religious Life of Ancient and Medieval India, Delhi: Motilal Banarasi Das {{citation}}: Invalid |ref=harv (help)
  • Vettam Mani (1976), Puranic Encyclopedia: Comprehensive Dictionary with Special Reference to the Epics and the Puranas, South Asia Books.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ನರಕಾಸುರ&oldid=934998" ಇಂದ ಪಡೆಯಲ್ಪಟ್ಟಿದೆ