ನಟ್ವರ್ ಸಾರಂಗಿ

ವಿಕಿಪೀಡಿಯ ಇಂದ
Jump to navigation Jump to search
ಚಿತ್ರ:09-SM-P 3-Ashis 09 1292863e.jpg
'ಪ್ರಗತಿಪರ ರೈತ, ನಟ್ವರ್ ಸಾರಂಗಿ'

[೧] 'ನಟ್ವರ್ ಸಾರಂಗಿ' ಒಡಿಸ್ಸಾ(ಒಡಿಶಾ) ರಾಜ್ಯ'ದ 'ಕುರ್ದಾ ಜಿಲ್ಲೆ'ಯ 'ನರಿಷೋ ಗ್ರಾಮ' ದ ಕೃಷಿಕ. ಸರಕಾರಿ ಲೆಕ್ಕಾಚಾರದ ಪ್ರಕಾರ ಒಡಿಶಾದಲ್ಲಿ ೪ ಮಿಲಿಯನ್ ಹೆಕ್ಟೇರ್ ಜಮೀನಿನಲ್ಲಿ ಭತ್ತದ ಕೃಷಿಯಿದೆ. ಅದರಲ್ಲಿ ಸುಮಾರು ೧೧ ಲಕ್ಷ ಹೆಕ್ತೇರ್ ನಲ್ಲಿ ದೇಸಿ ಈ ಭತ್ತದ ತಳಿಗಳು ಉಪಯೋಗದಲ್ಲಿವೆ. ೭೦ ರ ದಶಕದಲ್ಲಿ ೨೦ ಸಾವಿರಕ್ಕೂ ಮಿಕ್ಕಿದ ಭತ್ತದ ತಳಿಗಳನ್ನು ಇಲ್ಲಿನ ಭತ್ತದ ಸಂಶೋಧಕರೊಬ್ಬರು ಗುರುತಿಸಿ ದಾಖಲಿಸಿದ್ದರಂತೆ. ಪುರಿ ದೇವಾಲಯದ ಜಗನ್ನಾಥ ದೇವಾಲಯಕ್ಕೂ, ದೇಸಿ ಭತ್ತದಿಂದ ತಯಾರಾದ ಅನ್ನಕ್ಕೂ, ಬಹಳ ಸಂಬಂಧವಿದೆ. ದೇವರ ನೈವೇದ್ಯಕ್ಕೆ ದೇಸಿ ಭತ್ತದ ತಳಿಯ ಅಕ್ಕಿಯ ನೈವೇದ್ಯ ಅತಿ ಶ್ರೇಷ್ಟ. ಪ್ರತಿ ದಿನವೂ ನೈವೇದ್ಯಕ್ಕೆ ಹೊಸದಾಗಿ ಆಗ ತಾನೇ ಕೊಯ್ಲು ಮಾಡಿ ತಂದ ಭತ್ತದ ಅಕ್ಕಿಯಿಂದ ನೈವೇದ್ಯ ತಯಾರಾಗಬೇಕು. ಆ ಅನ್ನವನ್ನು ಭಕ್ತಾದಿಗಳಿಗೆ ಮಣ್ಣಿನ ಕುಡಿಕೆಗಳಲ್ಲಿ ಸಂಗ್ರಹಿಸಿ ವಿತರಣೆ ಮಾಡುವ ಸಂಪ್ರದಾಯ ನಡೆದು ಬಂದಿದೆ.' 'ನಟ್ವರ್ ಸಾರಂಗಿ' [೨] ಯವರಿಗೆ ದೇವಾಲಯದ ಸಂಪರ್ಕದಿಂದ ನೂರಾರು ಭತ್ತದ ತಳಿಗಳು ದೊರೆತವು. ಭತ್ತ ಬೆಳೆಯುವ ಮೊದಲು ಐದಾರು ತಳಿಗಳನ್ನು ಬಿತ್ತಿ ಆರೈಕೆ ಮಾಡಿದರು. ಕಾಳುಗಳನ್ನು ಜತನದಿಂದ ಕಾಪಿಟ್ಟು ಮರುವರ್ಷದಲ್ಲಿ ಬಿತ್ತುವಾಗ ಬಳಸುತ್ತಿದ್ದರು. ಈ ತಳಿಗಳ ಬೀಜಗಳು ಸಂಗ್ರಹಣೆಯಾದಾಗ, ಪುನಃ ೩೦ ಹೊಸತಳಿಗಳ ಸೇರಿಸುವಿಕೆ, ಅದರಲ್ಲಿ ಆಯ್ಕೆ ಮತ್ತು ಉತ್ತಮ ಬೀಜಗಳ ಸಂಗ್ರಹ ಸತತವಾಗಿ ನಡೆಯುತ್ತಿದೆ. ಅಲಿಖಿತವಾದ ಜ್ಞಾನ, ಕೆಲಸ ಮಾಡುತ್ತಾ ಕಲಿಯುವ, ಕಲಿಸುವ ಉಪಾಧಿಗಳು ಉದಾಹರಿಸಲು ಯೋಗ್ಯವಾಗಿವೆ. ಹೀಗೆ ಸತತವಾಗಿ ಹಲವು ವರ್ಷಗಳ ಎಚ್ಚರಿಕೆಯ ಭತ್ತದ ಬೀಜಸಂಗ್ರಹ, ಹತ್ತು ವರ್ಷದೊಳಗೆ, ನೂರು ಸಂಖ್ಯೆಯನ್ನು ದಾಟಿತು. ಸನ್ ೨೦೦೮ ರಲ್ಲಿ ಅದು ೩ ಶತಕವನ್ನು ದಾಟಿತು.

ವೃತ್ತಿಜೀವನ[ಬದಲಾಯಿಸಿ]

ಭಾರತದ ನಾಗರಿಕರ ಬದುಕಿಗೆ ಪೂರಕವಾದ 'ಭತ್ತದ ಕೃಷಿ ಸಂಸ್ಕೃತಿ,' ಸನಾತನವಾದದ್ದು. ಸ್ಥಳೀಯ ತಳಿಗಳ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ನಟ್ವರ್ ಸಾರಂಗಿಯವರಿಗೆ,[೩] ಉತ್ತಮ ತಳಿಯ ಬೀಜಗಳ ಪತ್ತೆ ಮಾಡಿ ಸಂಗ್ರಹಿಸಿ ತಮ್ಮ ಹೊಲದಲ್ಲಿ ಅವನ್ನು ಬೆಳೆದು ಗುಣದಲ್ಲಿ ಅಭಿವೃದ್ಧಿಯನ್ನು ಮಾಡುವುದು ಅತಿ ಪ್ರಿಯವಾದ ಕೆಲಸಗಳಲ್ಲೊಂದು. ಇವರ 'ಮಣ್ಣು ಮುಟ್ಟಿ ಕಲಿತ ಅನುಭವ', ಹಾಗೂ 'ಬೆಳೆದು ಬಾಳುವ ಬದುಕಿನ ಶಿಸ್ತುಗಳು', ವಿಶ್ವವಿದ್ಯಾಲಯದ ಕಲಿಕೆಗಿಂತ ಮಿಗಿಲಾಗಿವೆ. ಇಂದಿನ ಹೈಬ್ರಿಡ್ ಬೀಜಗಳ ಧಾಂಗುಡಿಯಲ್ಲಿ ಕಣ್ಮರೆಯಾಗುತ್ತಿರುವ ದೇಸಿ ತಳಿಗಳಿಗೆ ಮರು ಜೀವನ ಕಲ್ಪಿಸುವ ದಿಕ್ಕಿನಲ್ಲಿ ಅವರ ಪ್ರಯತ್ನ ಸತತವಾಗಿ ಸಾಗಿದೆ. ಬೇಸಿಗೆಯಲ್ಲಿ ಅವರ ಕೆಲಸ ಶುರುವಾಗುತ್ತದೆ. ಹಳ್ಳಿ ಹಳ್ಳಿಗಳನ್ನು ಸುತ್ತಿ ರೈತರನ್ನು, ರೈತ ಸಂಘಟನೆಗಳನ್ನೂ ಸಂಪರ್ಕಿಸಿ ತಮ್ಮ ತತ್ವಗಳನ್ನು ಅವರಿಗೆ ವಿವರಿಸಿ ಅವರ ಸಹಕಾರದಿಂದ ಭತ್ತದ ತಳಿಗಳನ್ನು ಸಂಗ್ರಹಿಸುತ್ತಾರೆ. ಒಡಿಶಾ ನೆಲದ ಸುಮಾರು ೨೫೦ ತಳಿಗಳ ಖಜಾನೆಯಿದೆ. ತಳಿ ಅಭಿವೃದ್ಧಿಗಾಗಿಯೇ ಮೀಸಲಾಗಿಟ್ಟ ೫ ಎಕರೆಯ ಜಮೀನನ್ನು ಕೇವಲ ಈ ತರಹದ ಸಂಶೋಧನೆಗಾಗಿಯೇ ಮೀಸಲಾಗಿಟ್ಟಿದ್ದಾರೆ. ಮೊದಲ ಆದ್ಯತೆ, ಹುಡುಕಿದ ಬೀಜಗಳಿಗೆ. ಗದ್ದೆಗಳ ಗಾತ್ರ, ಬೀಜ ದೊರಕಿದಂತೆ ನಿರ್ಧರಿಸಬೇಕಾಗುತ್ತದೆ. ಮಡಿಮಾವುದು, ಮೊಳಕೆ ಒಡೆದ ಕೂಡಲೇ ಅವನ್ನು ಎರೆಯ ಮಣ್ಣಿನಲ್ಲಿ ನಾಟಿ ಮಾಡುವ ತನಕ, ಬೇರೆ ಸಸಿಗಳ ಜೊತೆ ಬೆರಕೆಯಾಗದಂತೆ ನಿಗಾವಹಿಸುವುದು ಅತಿ ಮುಖ್ಯ. ಇದರ ಬೇಸಾಯ ಸಾವಯವ ಕೃಷಿಯನ್ನು ಆಧರಿಸಿದ್ದು. ಹಟ್ಟಿಗೊಬ್ಬರದ ಬಳಕೆ ಮಾತ್ರ. ರೋಗ ಸೋಂಕಿದಾಗ ಮಾತ್ರ ಬೇವಿನ ಸೊಪ್ಪಿನ ರಸ ದ್ರಾವಣ ಮತ್ತು ಗೋ ಮೂತ್ರದ ಸಿಂಪಡಣೆಯಾಗುತ್ತದೆ. ಸದೃಢವಾದ ತೆನೆಗಳನ್ನು ಆಯ್ದು, ಅವುಗಳನ್ನು ಪ್ರತ್ಯೇಕವಾಗಿ ಕೊಯ್ದು, ಕಾಳುಗಳನ್ನು ಆಯ್ದು ಬಿಸಿಲಿನಲ್ಲಿ ಪ್ರತ್ಯೇಕವಾಗಿ ಒಣಗಿಸಬೇಕು.

ರೈತವಿಜ್ಞಾನಿ[ಬದಲಾಯಿಸಿ]

ಒಂದೇ ಮಟ್ಟದಲ್ಲಿ ಬೆಳೆದ ಏಕ ಕಾಲದಲ್ಲಿ ಬಲಿತ ತೆನೆಗಳಾಗಿರಬೇಕು. ರೋಗ ಮತ್ತು ಕೀಟಾಣುಗಳಿಂದ ಮುಕ್ತವಾಗಿರಬೇಕು. ತಳಿಯ ಎತ್ತರ, ಎಲೆಗಳ ಅಗಲ, ಉದ್ದ ಪೈರುಗಳ ಸಂಖ್ಯೆ, ಕಾಳಿನ ತೂಕ, ಅವಧಿ, ಇಳುವರಿ ಮೊದಲಾದ ದಾಖಲಾತಿಗಳು ಅನಿವಾರ್ಯ. ಬೀಜ ಸಂಗ್ರಹದ ಮೂಲ, ಪಡೆದ ದಿನಾಂಕ, ಗುಣಮಟ್ಟ ಸಂರಕ್ಷಣಾ ಕ್ರಮ, ರೋಗಬಾಧೆಯ ವಿವರಗಳು, ಡಾಟಾಗಳ ಸಮಗ್ರ ದಾಖಲಾತಿ ಅತ್ಯವಶ್ಯಕ. ಹೀಗೆ ಭತ್ತದ ಬೀಜದ ಆಲ್ಬಂ ಒಂದು ರೂಪುಗೊಳ್ಳುತ್ತದೆ. ಬೀಜಗಳ ಆಯ್ಕೆಯ ಮಾನದಂಡವನ್ನೊಳಗೊಂಡ ಒಂದು ಆಲ್ಬಂನಲ್ಲಿ ಸುಮಾರು ೧೦೦ ತಳಿಯ ಬೀಜಗಳ ಮಾದರಿ ಮತ್ತು ಸಮಗ್ರ ಮಾಹಿತಿಗಳ ದಾಖಲೆಯಿರುತ್ತದೆ. ಬಿತ್ತನೆಯ ಮೊದಲು ಪ್ರತಿವರ್ಷವೂ ಎರಡು ಬಾರಿ ಬೀಜ ಪ್ರದರ್ಶನವನ್ನು ಏರ್ಪಡಿಸಲಾಗುತ್ತದೆ. ಬೀಜಗಳ ಮಾರಾಟದ ಜೊತೆಗೆ ಕೃಷಿಕರ ಜೊತೆ ಸಂಪರ್ಕ ಸಾಧ್ಯವಾಗುತ್ತದೆ. ಪುನಃ ಬೀಜ ಸಂಗ್ರಹಕಾರ್ಯಕ್ಕೆ ತಾಕೀತು ದೊರೆಯುತ್ತದೆ. ಏಕಾಂಗಿಯಾಗಿ, ಸನ್ ೧೯೯೭ ರಿಂದ ಸಾರಂಗಿಯವರು, ತಮ್ಮ ಭತ್ತದ ಬಗೆಗಿನ ಒಲವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಹೀಗೆ ಭತ್ತದ ಬೀಜದ ಬಗ್ಗೆ ಮತ್ತು ಕೃಷಿಯಬಗ್ಗೆ ಎಲ್ಲ ಕಾರ್ಯಗಳನ್ನೂಸಾರಂಗಿ ನಿರ್ವಹಿಸುತ್ತಿದ್ದಾರೆ. ಎಲ್ಲಾ ಮಾಧ್ಯಮಗಳೂ ಧನಾತ್ಮಕವಾಗಿ ಅವರ ಜೊತೆಗೂಡಿವೆ. ರೈತ ವಿಜ್ಞಾನಿ ನಟ್ವರ್ ಸಾರಂಗಿಯವರು,[೪] ಒಂದು ಕೃಷಿ ವಿಶ್ವ ವಿದ್ಯಾಲಯ ಮಾಡುವ ಕೆಲಸವನ್ನು ಒಂಟಿಯಾಗಿ ನಿರ್ವಹಿಸುತ್ತಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. A new rice every day? hindu news paper
  2. NATWAR SARANGI OF ODISHA, THE INDIVIDUAL REVOLUTIONARY
  3. the crop sie 09 December 2013 One Man’s Paddy Gene Pool Collection
  4. A new rice every day? December 8, 2012 indian agrarian crisis