ವಿಷಯಕ್ಕೆ ಹೋಗು

ದಾದಾಸಾಹೇಬ್ ಫಾಲ್ಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(ಜನನ: ೩೦ ಏಪ್ರಿಲ್ ೧೮೯೦-ಮರಣ: ೧೬ ಫೆಬ್ರುವರಿ ೧೯೪೪)

Dadasaheb Phalke
दादासाहेब फाळके
Phalke seated on a chair with a small roll of film in his hands
Born
ದಂಡಿರಾಜ್ ಗೋವಿಂದ ಫಾಲ್ಕೆ

30 April 1870
ಟ್ರಿಂಬಕ್, ಬಾಂಬೆ ಪ್ರೆಸಿಡೆನ್ಸಿ, ಬ್ರಿಟಿಷ್ ಇಂಡಿಯಾ
Died16 February 1944(1944-02-16) (aged 73)
ನಾಶಿಕ್, ಬಾಂಬೆ ಪ್ರೆಸಿಡೆನ್ಸಿ, ಬ್ರಿಟಿಷ್ ಇಂಡಿಯಾ
Alma materಸರ್ ಜೆ.ಜೆ. ಸ್ಕೂಲ್ ಆಫ್ ಆರ್ಟ್
Occupation(s)ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ
Years active1913–1937

ದಾದಾ ಸಾಹೇಬ್ ಫಾಲ್ಕೆ ಯೆಂದು ಪ್ರಸಿದ್ಧರಾದ, 'ದುಂಡಿರಾಜ್ ಗೋವಿಂದ ಫಾಲ್ಕೆ'ಯವರು, ಭಾರತೀಯ ಚಿತ್ರರಂಗದ ಪಿತಾಮಹರೆಂದೇ ಹೆಸರಾದವರು. ಅವರು ಗತಿಸಿ ೧೨ ದಶಕಗಳಾದರೂ, ಮಹಾರಾಷ್ಟ್ರದ ಹಾಗೂ ಭಾರತದ ಬೆಳ್ಳಿ-ತೆರೆಯ ಇತಿಹಾಸದಲ್ಲಿ, ಎಂದೆಂದಿಗೂ ಮರೆಯಲಾರದ ವ್ಯಕ್ತಿಯಾಗಿ, ವಿಜೃಂಭಿಸುತ್ತಿದ್ದಾರೆ. ಭಾರತದಲ್ಲಿ ಚಲನಚಿತ್ರ ಲೋಕವನ್ನು ಸೃಷ್ಟಿಸಿದ ಅವರ ಮನೆಯಲ್ಲಿ ಇಟ್ಟ ಹೆಸರು, 'ಧುಂಡಿರಾಜ್ ಗೋವಿಂದ ಫಾಲ್ಕೆ'ಯೆಂದು. ಧುಂಡಿರಾಜರು, ಬರೋಡದ, 'ಕಲಾಭವನ'ದ ಶಿಕ್ಷಣ ಮುಗಿಸಿ, 'ಸರಕಾರಿ ಪ್ರಾಚ್ಯವಸ್ತು ಇಲಾಖೆ'ಯಲ್ಲಿ 'ಚಿತ್ರಕಾರ'ರಾಗಿ, 'ಛಾಯಾಚಿತ್ರಗಾರ'ರಾಗಿ ೧೯೦೩ ರಲ್ಲಿ 'ಖಾಯಂ ನೌಕರಿ'ಯಲ್ಲಿ ಭರ್ತಿಯಾದರು. ಧುಂಡಿರಾಜರು 'ಫೋಟೋ-ಕೆಮಿಕಲ್ ರಂಗ'ದಲ್ಲಿ ಹಲವಾರು ಸಾಧನೆಗಳನ್ನು ಮಾಡಿದರು. ಚಲನಚಿತ್ರರಂಗದ ಮಾಯಾಲೋಕವನ್ನು ಈ 'ಹರಿಶ್ಚಂದ್ರ ಚಿತ್ರ'ದ ಮುಖಾಂತರ, ಭಾರತೀಯ ಜನತೆಗೆ ಇತ್ತವರು, 'ದಾದಾಸಾಹೇಬ್ ಫಾಲ್ಕೆ'ಯವರು. ಚಲನಚಿತ್ರರಂಗದ ಆವಿಷ್ಕಾರಕ್ಕಾಗಿ ತಮ್ಮ ಜೀವನವನ್ನೇ ತೇಯ್ದ ಮಹಾತ್ಯಾಗಿ, 'ದಾದಾ ಸಾಹೇಬ್ ಫಾಲ್ಕೆ'.

ಜನನ ಹಾಗೂ ಬಾಲ್ಯ

[ಬದಲಾಯಿಸಿ]

'ಧುಂಡಿರಾಜ್', ಜನಿಸಿದ್ದು ಮಹಾರಾಷ್ಟ್ರದ 'ನಾಸಿಕ್' ಜಿಲ್ಲೆಯ ಗೋದಾವರಿ ನದಿಯ ಉಗಮಸ್ಥಾನವಾದ 'ತ್ರ್ಯಂಬಕೇಶ್ವರ'ದ ವೈದಿಕ ಮನೆತನದಲ್ಲಿ. ಜನನ ೧೮೭೦ , ಏಪ್ರಿಲ್ ೩೦. ತಂದೆ '"ಜಿಶಾಸ್ತ್ರಿ ಫಾಲ್ಕೆ" ಸಂಸ್ಕೃತ ಶಿಕ್ಷಕರಾಗಿದ್ದರು.ಚಿಕ್ಕಂದಿನಿಂದಲೂ ಧುಂಡಿರಾಜ ತಂದೆಯವರು ಹೇಳಿಕೊಡುತ್ತಿದ್ದ ಪಾಠಗಳಲ್ಲಿ ಕಾವ್ಯ, ಪುರಾಣ, ಕಥೆ, ಅತಿಮಾನುಷ ವಿಚಾರಗಳಲ್ಲಿ ಬಹಳ ಆಸಕ್ತಿ ತೋರುತ್ತಿದ್ದರು. ತ್ರ್ಯಂಬಕೇಶ್ವರ ದೇಗುಲದಲ್ಲಿ ನಡೆಯುತ್ತಿದ್ದ ನೃತ್ಯ, ನಾಟಕಗಳು, ರಂಗಸಜ್ಜಿಕೆಗಳು, ವೇಷಭೂಷಣಗಳು ಚಿಕ್ಕ ಬಾಲಕನಮೇಲೆ ಅಪಾರ ಪರಿಣಾಮವನ್ನು ಬೀರಿತ್ತು. ನಟನೆ, ಹಾವ-ಭಾವಗಳ ಕಂಡಾಗ ಅವರ ಮೈ ರೋಮಾಂಚನಗೊಳ್ಳುತ್ತಿತ್ತು. ತಂದೆಯವರು ಹೇಳಿಕೊಡುತ್ತಿದ್ದ ವೈದಿಕ, ಸಂಸ್ಕೃತ ಪಾಠಗಳಲ್ಲಿ ಮುಂದಿದ್ದರೂ ನಾಟಕ, ನೃತ್ಯ, ಚಿತ್ರಕಲೆ ಇವುಗಳಲ್ಲಿ ಧುಂಡಿರಾಜನ ಆಸಕ್ತಿ ಗಮನಿಸಿದ ಅವರ ತಂದೆಯವರು ಸ್ವಲ್ಪ ಚಿಂತಿತರಾದರು. ಲಲಿತ ಕಲೆಯ ಈ ಆಸಕ್ತಿಯಲ್ಲಿ ಪ್ರಬುದ್ಧಮಾನಕ್ಕೆ ಬರಲು, ತ್ಯ್ರಂಬಕೇಶ್ವರದಂತಹ ಚಿಕ್ಕ ಜಾಗ ಉತ್ತಮವಾದದ್ದಲ್ಲವೆಂದು, ಅರಿತರೂ, ದೂರವೆನಿಸಿದ್ದ ಮುಂಬಯಿಗೆ ಒಬ್ಬನೇ ಮಗನನ್ನು ಕಳಿಸಲು ಅವರಿಗೆ ಮನಸ್ಸು ಬರಲಿಲ್ಲ.

ವಿವಾಹ

[ಬದಲಾಯಿಸಿ]

'ಸರಸ್ವತೀಬಾಯಿ' ಎಂಬ ಕನ್ಯೆಯೊಡನೆ ವಿವಾಹವಾಯಿತು. ಸರಸ್ವತಿಬಾಯಿಯವರು ಕೊಟ್ಟ ಸಹಕಾರ, ಮಾಡಿದ ತ್ಯಾಗ ಮೆಚ್ಚುವಂತಹದು. ಅವರ ಪ್ರೋತ್ಸಾಹವೇ ಧುಂಡಿರಾಜರು ಮುಂದೆ ತಮ್ಮ ಜೀವನದ ಪರಮೋದ್ದೇಶದ ಸಾಧನೆಯನ್ನು ಮಾಡಲು ಸಾಧ್ಯವಾದದ್ದು.

ಬೊಂಬಾಯಿನಗರಕ್ಕೆ

[ಬದಲಾಯಿಸಿ]

ಹದಿನೈದು ವರುಷಗಳ ನಂತರ, ೧೮೮೫ ರಲ್ಲಿ ದಾಜಿಶಾಸ್ತ್ರಿ ಅವರಿಗೆ, ಮುಂಬಯಿಯ ವಿಲ್ಸನ್ ಕಾಲೇಜಿನಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ನೌಕರಿ ದೊರಕಿತು. ಅವರ ಕುಟುಂಬ ಮುಂಬಯಿಗೆ ವಲಸೆ ಬಂದಿತು. ಧುಂಡಿರಾಜ್ ರವರಿಗೆ ಮುಂಬಯಿಯನ, ಪ್ರಸಿದ್ಧ 'ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಚಿತ್ರಕಲಾ ತರಗತಿ'ಗೆ ಪ್ರವೇಶ ದೊರಕಿತು. ಇದು ಅವರ ಚಿತ್ರಾಸಕ್ತಿಗೆ ಭದ್ರ ಬುನಾದಿ ಹಾಕಿತು. ಅಲ್ಲಿನ ಕಾಲಾವಧಿ ಮುಗಿದ ನಂತರ ಮುಂದಿನ ಕಲಿಕೆಗಾಗಿ 'ಬರೋಡದ ಕಲಾಭವನ' ಸೇರಿದರು. ಅಲ್ಲಿ ಧುಂಡಿರಾಜರ ಪ್ರಾವಿಣ್ಯ, ಪಾಂಡಿತ್ಯವನ್ನು ಗುರುತಿಸಿದ 'ಪ್ರೊ.ಗುಜ್ಜರ್' ಎಂಬುವರು ಈ ಯುವಕನ ಪಾಂಡಿತ್ಯಕ್ಕೆ ಕೇವಲ ಚಿತ್ರಕಲೆ ಸಾಲದೆಂದು, ಛಾಯಾಚಿತ್ರ ವಿಭಾಗದ ಮೇಲ್ವಿಚಾರಕನಾಗಿ ನೇಮಿಸಿ ಸಹಕರಿಸಿದರು. ಭಾರತದಲ್ಲಿ ಆಗ, ಸ್ವಾತಂತ್ರ್ಯ ಸಂಗ್ರಾಮದ ಸ್ವದೇಶಿ ಚಳವಳಿ ಭರದಿಂದ ಸಾಗಿತ್ತು. ಬ್ರಿಟಿಷ್ ಸರಕಾರ ಆಯೋಜಿಸುತ್ತಿದ್ದ, ಪ್ರಾಚ್ಯವಸ್ತು ಇಲಾಖೆಯ ವೃತ್ತಿಗೆ ರಾಜೀನಾಮೆ ಕೊಟ್ಟು, ಗೆಳೆಯರೊಡಗೂಡಿ ಕೆತ್ತನೆ ಹಾಗೂ ಮುದ್ರಣದ ವ್ಯಾಪಾರವನ್ನು ಪ್ರಾರಂಭಿಸಿದರು. ಆಗಿನ ಬೊಂಬಾಯಿಯಲ್ಲಿ ಕಲಾರಂಗದ ವಲಯದಲ್ಲಿ ಅತಿ-ಮೇಧಾವಿಯೆಂದು ಹೆಸರು ಗಳಿಸಿದರು. ಸನ್, ೧೯೦೯ ರಲ್ಲಿ, ಹೊಸಯಂತ್ರವೊಂದನ್ನು ತರಲು, ಹೊಸ ಯಂತ್ರಗಳ ಮಾಹಿತಿ ಪಡೆಯಲು, ಜರ್ಮನಿಗೆ ತೆರಳಿದರು. ೧೯೧೧ ರಲ್ಲಿ ಉದ್ಯಮಿಗಳ ಜೊತೆ ಆದ ಭಿನ್ನಾಭಿಪ್ರಾಯಗಳಿಂದಾಗಿ, ವ್ಯಾಪಾರದಲ್ಲಿ ಹೆಚ್ಚು ಪ್ರಗತಿಯಾಗಲಿಲ್ಲ. ಮಡದಿ ಸರಸ್ವತೀಬಾಯಿಯವರು, ಪತಿಯ ಕಷ್ಟದದಿನಗಳಲ್ಲಿ ಅವರ ಮನಸ್ಸಿಗೆ ಬೇಸರಪಡಿಸದೆ, ಸಹಕಾರನೀಡಿ ಇದ್ದ ಹಣದಲ್ಲೇ ಮನೆಯ ಕೆಲಸಗಳನ್ನು ಹೇಗೋ ನಿಭಾಯಿಸಿಕೊಂಡು ಹೋಗುತ್ತಿದ್ದರು.

"ಲೈಫ್ ಆಫ್ ಕ್ರೈಸ್ಟ್" ಯೆಂಬ ಚಲನಚಿತ್ರ, ಫಾಲ್ಕೆಯವರ ಕನಸನ್ನು ಸಾಕಾರಗೊಳಿಸಿತು

[ಬದಲಾಯಿಸಿ]

ಒಂದು ದಿನ ಬೇಸರ ಕಳೆಯಲೆಂದು "ಲೈಫ್ ಆಫ್ ಕ್ರೈಸ್ಟ್" ಎಂಬ ಇಂಗ್ಲೀಷ್ ಚಿತ್ರ ವೀಕ್ಷಿಸಿದ ಧುಂಡಿರಾಜ, ಚಿತ್ರಮಂದಿರದ ಬಳಿ ಎಸೆದಿದ್ದ ರೀಲಿನ ಸಣ್ಣ ಸಣ್ಣ ತುಣುಕುಗಳನ್ನು ಸಂಗ್ರಹಿಸಿ ಅದನ್ನು ಮಸೂರದ ಸಹಾಯದಿಂದ ನೋಡಿದರು. ಕಂಪನಿಯೊಂದರಿಂದ ಆಟಿಕೆಯ ಸಿನಿಮಾ ಪ್ರದರ್ಶಿಸುವ ಯಂತ್ರವೊಂದನ್ನು, ಸಣ್ಣ ಪ್ರಮಾಣದ ರೀಲನ್ನು ತಂದು ಮನೆ ಗೋಡೆ ಮೇಲೆ ಚಿತ್ರ ಪ್ರದರ್ಶಿಸಿದರು. ಇದು ಅವರ ಮೊದಲ ಚಿತ್ರವಾಗಿತ್ತು. ಕುಟುಂಬದ ಸದಸ್ಯರು ಮೊದಲ ಪ್ರೇಕ್ಷಕರಾಗಿದ್ದರು. ಧುಂಡಿರಾಜರಿಗೆ, ತಮ್ಮ ೪೦ ನೆಯ ವಯಸ್ಸಿನಲ್ಲಿ, ಕಣ್ಣಿನ ದೃಷ್ಟಿ ಇದ್ದಕ್ಕಿದ್ದಂತೆ ಕಣ್ಣು ಸರಿಯಾಗಿ ಕಾಣದಾಯಿತು. ಅವರ ಆಸೆಗಳು ನುಚ್ಚುನೂರಾಗಿತ್ತು. ಅವರ ಪಾಲಿಗೆ ಪ್ರಪಂಚವೇ ತಲೆಕೆಳಗಾಗಿತ್ತು. ವೈದ್ಯ ಮಿತ್ರ ಡಾ.ಪ್ರಭಾಕರ್ ಅವರ ನಿರಂತರ ಚಿಕಿತ್ಸೆ ಹಾಗೂ ಆರೈಕೆಯಿಂದ ಕಣ್ಣುಗಳು ಮತ್ತೆ ಕಾಣುವಂತಾಯಿತು. ಧುಂಡಿರಾಜರ ಆಸೆ ಮತ್ತೆ ತಲೆ ಎತ್ತಿತು. ಧುಂಡಿರಾಜರ ಅಪ್ಪಟ ಭಾರತೀಯ ಚಿತ್ರ ಮಾಡಬೇಕೆಂಬ ಹಂಬಲ ಅತಿಯಾಯ್ತು. ತಮ್ಮಲ್ಲಿದ್ದ ಸಮಸ್ತವನ್ನೂ ಅಡವಿಟ್ಟು, ಚಿತ್ರ ನಿರ್ಮಾಣಕ್ಕೆ ಬೇಕಾಗುವ ಯಂತ್ರೋಪಕರಣಗಳನ್ನು ಖರೀದಿಸಲು ಲಂಡನ್ನಿಗೆ ತೆರಳಿದರು. ೪೨ ವರುಷ ವಯಸ್ಸಿನ ಧುಂಡೀರಾಜರಿಗೆ ಸ್ನೇಹಿತರಿಂದಾಗಲೀ ನೆಂಟರಿಷ್ಟರಿಂದಲಾಗಲೀ ಹೆಚ್ಚಿನ ನೆರವು ದೊರೆಯಲಿಲ್ಲ. . ಅಲ್ಲಿನ 'ಬಯಾಸ್ಕೋಪ್' ಎಂಬ 'ಚಲನಚಿತ್ರ ವಾರಪತ್ರಿಕೆಯ ಸಂಪಾದಕ'ರಾಗಿದ್ದ 'ಕಾರ್ಬೋನ್' ಮೊದಲು ಹಿಂಜರಿದರೂ, ಧುಂಡಿರಾಜರ ಅಚಲ ನಿರ್ಧಾರ ಕಂಡು ಮೆಚ್ಚಿ, 'ಚಿತ್ರ ನಿರ್ಮಾಪಕ ಸಿಸಿಲ್ ' ರವರನ್ನು 'ಧುಂಡಿರಾಜ'ರಿಗೆ ಪರಿಚಯಿಸಿದರು. ಇವರ ಗರಡಿಯಲ್ಲಿ ಚಲನಚಿತ್ರ ನಿರ್ಮಾಣದ ಎಲ್ಲಾ ಭಾಗಗಳನ್ನು ಅಧ್ಯಯನ ಮಾಡಿ, ಚಿತ್ರ ನಿರ್ಮಾಣದ ಅಚಲ ನಿರ್ಧಾರದೊಂದಿಗೆ ಮತ್ತೆ ತವರಿಗೆ ಮರಳಿದರು 'ಫಾಲ್ಕೆ ಸಾಹೇಬರು'.

ರಾಜಾ ಹರಿಶ್ಚಂದ್ರನ ಕಥೆ

[ಬದಲಾಯಿಸಿ]

ಫಾಲ್ಕೆಯವರ ಚಿತ್ರನಿರ್ಮಾಣದ ಪ್ರಯತ್ನದಲ್ಲಿ, ಮತ್ತೆ ಹಣ ಸಾಲದಾಯಿತು. ಪತ್ನಿ ಸರಸ್ವತೀಬಾಯಿ, ತಮ್ಮ ಒಡವೆಗಳನ್ನು ಅಡವಿಟ್ಟರು. ರಾಮ, ಕೃಷ್ಣರ ಕಥೆ ಬೇಡವೆಂದು ಕಡೆಗೆ, 'ರಾಜಾ ಹರಿಶ್ಚಂದ್ರನ ಕಥೆ'ಯನ್ನು ಚಿತ್ರ ಮಾಡುವುದೆಂದು 'ದಾದಾ' ನಿರ್ಧಾರ ಮಾಡಿದರು. ಆ ಕಾಲದಲ್ಲಿ ಚಿತ್ರನಿರ್ಮಾಣದ ಕಲೆ ಯಾರಿಗೂ ತಿಳಿದಿರಲಿಲ್ಲ. ಇದರಿಂದಾಗಿ ರಾಜಾ ಹರಿಶ್ಚಂದ್ರ ಚಿತ್ರದ ಲೇಖನ, ನಿರ್ಮಾಣ ಕಾರ್ಯ, ನಿರ್ದೇಶನ, ಹಾಗೂ ನಟನೆ ಮತ್ತು, ಛಾಯಾಗ್ರಹಣವನ್ನೂ ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದ ಶ್ರೇಯ, ಧುಂಡೀರಾಜರದು. ಅವರ ಮನೆಯೇ ಫಾಲ್ಕೆ ಫಿಲ್ಮ್ ಸಂಸ್ಥೆ. ಇಡೀ ಚಿತ್ರರಂಗದ ಊಟ, ಉಪಚಾರ ಸರಸ್ವತೀಬಾಯಿಯವರದ್ದು. ಕಾಳಗದ ದೃಶ್ಯ ಚಿತ್ರೀಕರಣಗೊಂಡಿದ್ದು ಸಹಾ, ಧುಂಡಿರಾಜರ ಮನೆಯಲ್ಲಿಯೇ.

ಬೊಂಬಾಯಿನ ಒಲಂಪಿಯಾ ಚಿತ್ರಮಂದಿರದಲ್ಲಿ

[ಬದಲಾಯಿಸಿ]

ಕಟ್ಟಕಡೆಗೆ ಏಪ್ರಿಲ್ ೨೧, ೧೯೧೩ ರಂದು ಮುಂಬಯಿಯ 'ಒಲಂಪಿಯಾ ಚಿತ್ರಮಂದಿರ'ದಲ್ಲಿ ಮುಂಬಯಿಯ ಶ್ರಿಮಂತರು, ಪತ್ರಿಕಾ ರಂಗದವರು, ಹಲವು ಮಹನೀಯರ ಮುಂದೆ ಪೂರ್ವಭಾವಿ ಪ್ರದರ್ಶನ ಏರ್ಪಟ್ಟಿತ್ತು. ಈ ಚಿತ್ರವನ್ನು ವೀಕ್ಷಿಸಿದ ಆ ಗುಂಪು ದಂಗಾದರು. ಕಡೆಯೂ ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ, ಕನಸು ನನಸಾಯಿತೆಂದು ಧುಂಡಿರಾಜರು ಸಂತಸಪಟ್ಟರು. ಆದರೆ ಪ್ರೇಕ್ಷಕರ ಮುಂದೆ, ಚಿತ್ರ ಗೆಲ್ಲಬೇಕಾಗಿತ್ತು.

ಕಾರೋನೇಷನ್ ಚಿತ್ರಮಂದಿರದಲ್ಲಿ

[ಬದಲಾಯಿಸಿ]

೧೯೧೩, ೧೩ ಮೇ, ಭಾರತೀಯ ಚಲನ-ಚಿತ್ರರಂಗವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನ. ಅಂದು ಮುಂಬೈನ ಜನಸಾಗರದ ದೃಷ್ಟಿಯೆಲ್ಲಾ ಒಂದೆಡೆ ಕೇಂದ್ರೀಕೃತವಾಗಿತ್ತು. ಹಣವಿದ್ದವರು 'ಮುಂಬೈನ ಕಾರೋನೇಷನ್ ಚಿತ್ರಮಂದಿರ' ದಲ್ಲಿದ್ದರು. ಹಣವಿಲ್ಲದವರು ಥಿಯೇಟರ್ ಹೊರಗೆ ಕುತೂಹಲದಿಂದ ಜಮಾಯಿಸಿದ್ದರು. ಥಿಯೇಟರ್ ಒಳಗೆ ಕುಳಿತ ಜನರ ಕಣ್ಣುಗಳು ಚಿತ್ರರಂಗ ಪರದೆಯ ಮೇಲೆ ಕೇಂದ್ರೀಕೃತವಾಗಿತ್ತು. ಎಲ್ಲರ ಕಣ್ಣಿನಲ್ಲೂ ಅದೇನೋ ಕುತೂಹಲ, ತವಕ, ಹಾಗೂ ವಿಸ್ಮಯಲೋಕವೊಂದನ್ನು ತಮ್ಮ ಎರಡೂ ಕಣ್ಣುಗಳಲ್ಲಿ ತುಂಬಿಕೊಳ್ಳುವ ಆಸೆ ಆವರಿಸಿತ್ತು. ಮೊದಲಿಗೆ ಪಾಶ್ಚಾತ್ಯ ತರುಣಿಯರಿಂದ ಚೆಂದದ ನೃತ್ಯ ಮುಗಿದಂತೆ ತೆರೆಯ ಮೇಲೆ, ಅವರು ಕಂಡಿದ್ದೇನು. ಭಾರತದ ನಾಯಕ, ನಾಯಕಿಯರನ್ನು. ಅವರೇ ಸಾಕ್ಷಾತ್ ಹರಿಶಂದ್ರ, ಮತ್ತು ಚಂದ್ರಮತಿಯರನ್ನು. ಥಿಯೇಟರ್ ನಲ್ಲಿ ಎಲ್ಲವೂ ನಿಶ್ಯಬ್ಧ. ಮಾತಿಗೆ ಎಡೆಯಿರಲಿಲ್ಲ. ನಟನೆಯೇ ಮಾತಿನ ಜಾಗವನ್ನು ಆವರಿಸಿತ್ತು. ಬೆಳ್ಳಿಯ ತೆರೆಯ ಮೇಲೆ ಮಹಾರಾಜ ಹರಿಶ್ಚಂದ್ರ, ಹಾಗೂ ರಾಣೀ ಚಂದ್ರಮತಿಯರ 'ಸತ್ಯಾನ್ವೇಷಣೆಯ ಪರಿ'ಯನ್ನು ಕಂಡು ಪ್ರೇಕ್ಷಕರು ಕಣ್ಣೀರಿಟ್ಟರು. 'ರಾಜಶ್ರೀ ವಿಶ್ವಾಮಿತ್ರ' ಮತ್ತು 'ವಶಿಷ್ಠ'ರ ನಡುವೆಯ ಆದ ವಾಗ್ಯುದ್ಧದಲ್ಲಿ ಏನೂ ಪಾಪವರಿಯದ ರಾಜ ದಂಪತಿಗಳು ಪಡುತ್ತಿರುವ ಬವಣೆಯನ್ನು ಕಂಡು ಚಿತ್ರರಸಿಕರು, ಹಲುಬಿದರು. ನಿಟ್ಟುಸಿರೆರೆದರು. ಕಾಲದ ಪರಿವೆಯನ್ನು ಮರೆತು ಹರಿಶ್ಚಂದ್ರ-ಚಂದ್ರಮತಿಯರ ಕಷ್ಟ-ಸುಖಗಳಲ್ಲಿ ಒಂದಾದರು. ಈ ಚಿತ್ರ ನಮ್ಮ ಭಾರತೀಯ ಚಿತ್ರರಂಗದ ಬೆಳವಣಿಗೆಯ, ನಾಂದಿಗೆ ದಾರಿಯಾಯಿತು. ನಂತರ, ಮರಾಠಿ, ತಮಿಳು, ಕನ್ನಡ, ಮುಂತಾದ ಭಾಷೆಗಳ ಚಲನಚಿತ್ರಗಳು ದಕ್ಷಿಣ ಭಾರತದಲ್ಲಿ ಪಾದಾರ್ಪಣೆಗೊಂಡು ಚರಿತ್ರೆಯನ್ನೇ ಸೃಷ್ಟಿಸಿದವು.

'ಕಲಾವಿದರೆಲ್ಲರ ಜೀವನದ ಪರಮೋಚ್ಚ ಕನಸು'

[ಬದಲಾಯಿಸಿ]

ಹೀಗೆ, '೨೦ ನೆಯ ಶತಮಾನದ ಭಾರತೀಯ ಚಿತ್ರರಂಗದ ಪಿತಾಮಹರಾದ ದಾದಾ ಸಾಹೇಬ್ ಫಾಲ್ಕೆ' ಯವರ ಹೆಸರು, ದೇಶದಾದ್ಯಂತ ದುಂಧುಬಿಯಂತೆ ಧ್ವನಿ ಏರಿಸಿತು. ಚಿತ್ರರಂಗದಲ್ಲಿ ಅನುಪಮ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಪುರಸ್ಕಾರಗಳನ್ನು ಘೋಶಿಸಿದರು. ಹೀಗೆ, ಪ್ರಶಸ್ತಿ ಪಡೆಯುವುದು, ಚಲನಚಿತ್ರ ರಂಗದ ಉತ್ತಮ ಕಲಾವಿದನೊಬ್ಬನ ಜೀವನದ ಗುರಿ. ಆ ಪ್ರಶಸ್ತಿ ಪಡೆದ ಕಲಾವಿದ ಎಲ್ಲಾ ಘಟ್ಟಗಳನ್ನೂ ದಾಟಿ, 'ಎವರೆಸ್ಟ್ ಶಿಖರದ ತುಟ್ಟ ತುದಿ ಮುಟ್ಟಿದಂತೆ'. ಇಂತಹ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಮೊದಲಿಗರು 'ದೇವಿಕಾರಾಣಿ ರೋರಿಚ್' (೧೯೬೯). ೧೯೯೫ ರಲ್ಲಿ ನಮ್ಮ ವರನಟ,'ಡಾ.ರಾಜ್‌ಕುಮಾರ್' ಫಾಲ್ಕೆ ಪ್ರಶಸ್ತಿ ಪಡೆದರು. ಇತ್ತೀಚೆಗೆ, ಕನ್ನಡದವರೇ ಅಗಿರುವ, ಕ್ಯಾಮರಾ ತಂತ್ರಜ್~ಜ, 'ವಿ.ಕೆ.ಮೂರ್ತಿ'ಯವರು 'ದಾದಾ ಸಾಹೇಬ್ ಫಾಲ್ಕೆಪ್ರಶಸ್ತಿ' ಯನ್ನು ಗಳಿಸಿರುತ್ತಾರೆ. ಬಾಬಾ ಸಾಹೇಬ್ ಫಾಲ್ಕೆಯವರ ಸ್ಮರಣಾರ್ಥವಾಗಿ ಭಾರತ ಸರ್ಕಾರವು ಪ್ರತಿವರ್ಷವೂ ಚಲನ-ಚಿತ್ರರಂಗದ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ಭಾರತೀಯರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರದಾನಮಾಡುತ್ತಾಬಂದಿದೆ. ಭಾರತೀಯ ಚಲನಚಿತ್ರರಂಗದ ಪಿತಾಮಹ ದಾದಾ ಸಾಹೇಬ್ ಫಾಲ್ಕೆಯವರ 148ನೇ ವರ್ಷದ ಜನ್ಮದಿನದ ಅಂಗವಾಗಿ ಗೂಗಲ್‌ ಡೂಡಲ್ ಮೂಲಕ ಗೌರವ ಸಲ್ಲಿಸಿತು[].

ಉಲ್ಲೇಖಗಳು

[ಬದಲಾಯಿಸಿ]
  1. "ದಾದಾ ಸಾಹೇಬ್ ಫಾಲ್ಕೆಗೆ ಗೂಗಲ್‌ ಡೂಡಲ್ ಗೌರವ". www.prajavani.net. Archived from the original on 1 ಮೇ 2018. Retrieved 30 ಏಪ್ರಿಲ್ 2018.


ಬಾಹ್ಯ ಕೊಂಡಿಗಳು

[ಬದಲಾಯಿಸಿ]
  1. ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ, Filmy beat, ಜುಲೈ,೧೨, ೨೦೧೩, ವಾಣಿ ರಾಮದಾಸ್, ಸಿಂಗಪುರ