ವಿಷಯಕ್ಕೆ ಹೋಗು

ಥಪ್ಪಡ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಥಪ್ಪಡ್
ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ
ನಿರ್ದೇಶನಅನುಭವ್ ಸಿನ್ಹಾ
ನಿರ್ಮಾಪಕಭೂಷಣ್ ಕುಮಾರ್
ಕ್ರಿಶನ್ ಕುಮಾರ್
ಅನುಭವ್ ಸಿನ್ಹಾ
ಲೇಖಕಅನುಭವ್ ಸಿನ್ಹಾ
ಮೃಣ್ಮಯಿ ಲಾಗೂ ವಾಯ್ಕುಲ್
ಪಾತ್ರವರ್ಗತಾಪ್ಸಿ ಪನ್ನು
ಸಂಗೀತಹಿನ್ನೆಲೆ ಸಂಗೀತ:
ಮಂಗೇಶ್ ಧಾಕ್ಡೆ
ಸಂಗೀತ:
ಅನುರಾಗ್ ಸೈಕಿಯಾ
ಛಾಯಾಗ್ರಹಣಸೌಮಿಕ್ ಮುಖರ್ಜಿ
ಸಂಕಲನಯಶಾ ರಾಮ್‍ಚಂದಾನಿ
ಸ್ಟುಡಿಯೋಬನಾರಸ್ ಮೀಡಿಯಾ ವರ್ಕ್ಸ್
ಟಿ-ಸೀರೀಸ್
ವಿತರಕರುಎಎ ಫ಼ಿಲ್ಮ್ಸ್
ಬಿಡುಗಡೆಯಾಗಿದ್ದು
 • 28 ಫೆಬ್ರವರಿ 2020 (2020-02-28)[೧]
ಅವಧಿ142 ನಿಮಿಷಗಳು[೨]
ದೇಶಭಾರತ
ಭಾಷೆಹಿಂದಿ
ಬಂಡವಾಳ21–24 ಕೋಟಿ[೩]
ಬಾಕ್ಸ್ ಆಫೀಸ್43.77 ಕೋಟಿ[೪]

ಥಪ್ಪಡ್ (ಅನುವಾದ - ಕರ ಪ್ರಹಾರ) ಅನುಭವ್ ಸಿನ್ಹಾ ನಿರ್ದೇಶಿಸಿದ 2020 ರ ಒಂದು ಹಿಂದಿ ನಾಟಕೀಯ ಚಲನಚಿತ್ರ. ಇದನ್ನು ಅವರು ಟಿ-ಸಿರೀಸ್‌ನ ಭೂಷಣ್ ಕುಮಾರ್‌ರೊಂದಿಗೆ ಸಹ-ನಿರ್ಮಾಣ ಮಾಡಿದ್ದಾರೆ. ಚಿತ್ರವು ಫೆಬ್ರವರಿ ೨೮ 2020 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಜನಪ್ರಿಯ ಆಸ್ಟ್ರೇಲಿಯನ್ ದೂರದರ್ಶನ ಸರಣಿ ದ ಸ್ಲ್ಯಾಪ್ ಮತ್ತು ಈ ಚಿತ್ರದ ನಡುವೆ ಗಮನಾರ್ಹ ಹೋಲಿಕೆಗಳಿವೆ.[೫]

ಕಥಾವಸ್ತು[ಬದಲಾಯಿಸಿ]

ಅಮೃತಾ ಸಂಧು ಮತ್ತು ವಿಕ್ರಮ್ ಸಭರ್ವಾಲ್ ದಾಂಪತ್ಯ ಜೀವನದಲ್ಲಿ ಸುಖವಾಗಿರುತ್ತಾರೆ. ಅಮೃತಾ ಗೆಲುವಾದ ಮಹಿಳೆ ಮತ್ತು ಗೃಹಿಣಿಯಾಗಿದ್ದು ವಿಕ್ರಮ್ ಮತ್ತು ಮನೆಯನ್ನು ನೋಡಿಕೊಳ್ಳುತ್ತಾ ತನ್ನ ದಿನಗಳನ್ನು ಕಳೆಯುತ್ತಿರುತ್ತಾಳೆ. ವಿಕ್ರಮ್‍ನ ಬಡ್ತಿಯನ್ನು ಆಚರಿಸಲು ಅವರು ಮನೆಯಲ್ಲಿ ಪಾರ್ಟಿ ಆಯೋಜಿಸುತ್ತಾರೆ. ಬಡ್ತಿಯಿಂದ ಅವರು ಲಂಡನ್‌ಗೆ ಹೋಗುವವರಿರುತ್ತಾರೆ. ಪಾರ್ಟಿಯಲ್ಲಿ, ವಿಕ್ರಮ್‍ನ ಬಾಸ್‌ನ ಸಂಬಂಧಿಯಾಗಿರುವ ತನ್ನ ಅನನುಭವಿ ಜೂನಿಯರ್‌ಗಾಗಿ ತನ್ನ ಬಡ್ತಿ ಒಪ್ಪಂದವನ್ನು ರಾಜಿ ಮಾಡಲಾಗಿದೆ ಎಂದು ಅವನಿಗೆ ತಿಳಿಸಲಾಗುತ್ತದೆ. ಕೋಪಗೊಂಡ ಅವನು ತನ್ನ ಮೇಲಧಿಕಾರಿ ರಾಜಹನ್ಸ್‌ನೊಂದಿಗೆ ವಾಗ್ವಾದಕ್ಕೆ ಇಳಿಯುತ್ತಾನೆ. ಅವನು ತನಗೆ ಹೀಗೆ ಎರಡು ಸಲ ಮಾಡಿದ್ದಾನೆಂದು ಆರೋಪಿಸುತ್ತಾನೆ. ಅಮೃತಾ ವಾದವನ್ನು ಮುರಿಯಲು ಪ್ರಯತ್ನಿಸಿದಾಗ, ವಿಕ್ರಮ್ ಅವಳಿಗೆ ಎಲ್ಲರ ಮುಂದೆ ಕಪಾಳಮೋಕ್ಷ ಮಾಡುತ್ತಾನೆ. ಘಟನೆಯು ಅವಳನ್ನು ನಡುಗಿಸುತ್ತದೆ; ಅವಳು ಈ ಹಿಂದೆ ನಿರ್ಲಕ್ಷಿಸಿದ ಎಲ್ಲಾ ಸಣ್ಣ ನ್ಯಾಯವಲ್ಲದ ಸಂಗತಿಗಳನ್ನು ಅರಿತುಕೊಳ್ಳಲು ಪ್ರಾರಂಭಿಸುತ್ತಾಳೆ ಮತ್ತು ವಿಕ್ರಮ್ ತನಗೆ ಕಪಾಳಮೋಕ್ಷ ಮಾಡಿದ್ದು ತನ್ನನ್ನು ಗೌರವಿಸುವ ಪತಿ ಮಾಡುವಂಥದ್ದಲ್ಲ ಎಂದು ತನಗೆ ತಾನು ಒಪ್ಪಿಸಿಕೊಳ್ಳುತ್ತಾಳೆ. ಇದಲ್ಲದೆ, ವಿಕ್ರಮ್ ತನ್ನ ಕಾರ್ಯಗಳಿಗೆ ಜವಾಬ್ದಾರನಾಗಿರಲು ನಿರಾಕರಿಸುತ್ತಾನೆ ಮತ್ತು ತಾನು ಅಸಮಾಧಾನಗೊಂಡಿದ್ದಾಗ ಅವಳು ದಾರಿಯಲ್ಲಿ ಬಂದಳು ಮತ್ತು ಅಂತಹ ಘಟನೆಗಳು ಕೆಲವೊಮ್ಮೆ ಸಂಭವಿಸುತ್ತವೆ ಮತ್ತು ಇದು ಸಹಜ ಎಂದು ಹೇಳುತ್ತಾನೆ.

ಎಲ್ಲರೂ ಅವಳಿಗೆ ಸಲಹೆ ನೀಡಿದಂತೆ "ಅದನ್ನು ಮರೆತು ಮುಂದುವರಿಯಲು" ಸಾಧ್ಯವಾಗದೆ ಅಮೃತಾ ತನ್ನ ಹೆತ್ತವರ ಮನೆಗೆ ಹೊರಟುಹೋಗುತ್ತಾಳೆ. ಇದು ಅವಳ ಮತ್ತು ವಿಕ್ರಂ ನಡುವೆ ವಾದಕ್ಕೆ ಕಾರಣವಾಗುತ್ತದೆ. ಅವಳನ್ನು ಮನೆಗೆ ಹಿಂದಿರುಗುವಂತೆ ಒತ್ತಾಯಿಸಲು ಅವನು ಕಾನೂನು ದಸ್ತಾವೇಜನ್ನು ಕಳುಹಿಸುತ್ತಾನೆ. ಅವಳು ನಿರಾಕರಿಸಿದಾಗ, ಅವಳ ವಕೀಲೆ, ಹೆಸರಾಂತ ವಕೀಲೆ ನೇತ್ರಾ ಜೈಸಿಂಗ್ ಅವಳಿಗೆ ಅವಳ ಆಯ್ಕೆಗಳೆಂದರೆ ರಾಜಿ ಮಾಡಿಕೊಳ್ಳುವುದು, ಕಾನೂನುಬದ್ಧವಾಗಿ ಬೇರ್ಪಡಲು ಅರ್ಜಿ ಹಾಕುವುದು ಅಥವಾ ವಿಚ್ಛೇದನವನ್ನು ಪಡೆಯುವುದು ಎಂದು ವಿವರಿಸುತ್ತಾಳೆ. ಅವಳು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಾಳೆ ಮತ್ತು ತನ್ನ ಕುಟುಂಬ ಹಾಗೂ ಸಂಬಂಧಿಕರನ್ನು ಆಘಾತಗೊಳಿಸುತ್ತಾಳೆ. ಅಮೃತಾ ಜೀವನಾಂಶಕ್ಕಾಗಿ ಯಾವುದೇ ಹಕ್ಕುಗಳನ್ನು ಸಾಧಿಸುವುದಿಲ್ಲ ಅಥವಾ ಅವಳು ಕೌಟುಂಬಿಕ ದೌರ್ಜನ್ಯದ ಆರೋಪವನ್ನು ಮಾಡುವುದಿಲ್ಲ; ವಿಕ್ರಮ್‌ಗೆ ತನ್ನನ್ನು ಹೊಡೆಯುವ ಹಕ್ಕು ಇಲ್ಲ ಎಂಬುದು ಆಕೆಯ ನಿಲುವು ಆಗಿರುತ್ತದೆ. ತಾನು ಗೌರವ ಮತ್ತು ಸಂತೋಷವನ್ನು ಮಾತ್ರ ಕೇಳುತ್ತಿದ್ದೇನೆ ಮತ್ತು ಕರ ಪ್ರಹಾರವು ಇವೆರಡೂ ತನಗೆ ಸಿಗುತ್ತಿರಲಿಲ್ಲ ಎಂಬ ವಾಸ್ತವಾಂಶಕ್ಕೆ ಅವಳ ಕಣ್ಣನ್ನು ತೆರೆಸಿತು ಎಂದು ಅವಳು ವಿವರಿಸುತ್ತಾಳೆ.

ಅಮೃತಾ ತಾನು ಗರ್ಭಿಣಿ ಎಂದು ತಿಳಿದಾಗ ವಿಷಯಗಳು ಜಟಿಲವಾಗುತ್ತವೆ. ವಿಕ್ರಮ್ ಮತ್ತು ಅವರ ವಕೀಲ ಪ್ರಮೋದ್ ಗುಜ್ರಾಲ್ ಅವಳ ಗರ್ಭಧಾರಣೆಯ ಬಗ್ಗೆ ತಿಳಿದಾಗ ಮೋಸದಿಂದ ನಡೆದುಕೊಳ್ಳುತ್ತಾರೆ. ಅವರು ಆಕೆಯ ಮಾನಸಿಕ ಸ್ಥಿರತೆ ಮತ್ತು ಪ್ರಾಮಾಣಿಕತೆಯ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಾರೆ ಮತ್ತು ಅಮೃತಾಳನ್ನು ಬೆದರಿಸಲು ಪ್ರಯತ್ನಿಸಿ ಅವಳಿಗೆ ಹುಟ್ಟಲಿರುವ ಮಗುವಿನ ಏಕೈಕ ಪಾಲನೆಯನ್ನು ಪಡೆಯಲು ಅವಳ ವಿರುದ್ಧ ಕ್ಷುಲ್ಲಕ ಆರೋಪಗಳನ್ನು ಮಾಡುತ್ತಾರೆ. ನೋವುಪಟ್ಟ ಅಮೃತಾ ವಿಕ್ರಂ ಪರಸ್ಪರ ಒಪ್ಪಿಗೆಯ ವಿಚ್ಛೇದನ ಮತ್ತು ತಮ್ಮ ನಿರೀಕ್ಷಿತ ಮಗುವಿನ ಜಂಟಿ ಪಾಲನೆಗೆ ಒಪ್ಪದ ಹೊರತು ಅವನ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪವನ್ನು ಸಲ್ಲಿಸಲು ನಿರ್ಧರಿಸುತ್ತಾಳೆ.

ವಿಕ್ರಮ್ ಮತ್ತು ಗುಜ್ರಾಲ್ ಅವರು ಅಮೃತಾ ಮತ್ತು ನೇತ್ರಾ ಅವರು ಪ್ರಸ್ತುತಪಡಿಸಿದ ಷರತ್ತುಗಳಿಗೆ ಒಪ್ಪುತ್ತಾರೆ ಮತ್ತು ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕೆ ರಾಜಿಯಾಗುತ್ತಾರೆ. ಏತನ್ಮಧ್ಯೆ, ವಿಕ್ರಮ್ ಅವರ ಬಾಸ್ ಅಹುಜಾ ಅವನು ಬಡ್ತಿ ಪಡೆಯುತ್ತಿದ್ದಾನೆಂದು ತಿಳಿಸುತ್ತಾರೆ. ಅವನನ್ನು ವೈಯಕ್ತಿಕವಾಗಿ ಅಭಿನಂದಿಸುತ್ತಿರುವಾಗ, ಪಾರ್ಟಿಯ ರಾತ್ರಿ ನಡೆದದ್ದು ವಿಕ್ರಮ್‌ನ ತಪ್ಪು ಎಂದು ರಾಜಹಂಸ್ ವಿಕ್ರಮ್‌ಗೆ ಹೇಳುತ್ತಾನೆ.

ಅಮೃತಾ ತನ್ನ ಅತ್ತೆ ಸುಲಕ್ಷಣಾಳೊಂದಿಗೆ ಅವರ ಎರಡೂ ಕುಟುಂಬದವರ ಸಮ್ಮುಖದಲ್ಲಿ ಮಾತನಾಡುತ್ತಾಳೆ. ಅವನು ತನಗೆ ಕಪಾಳಮೋಕ್ಷ ಮಾಡಿದ ರಾತ್ರಿ, ಕುಟುಂಬದಲ್ಲಿ ಯಾರೂ ಅವಳನ್ನು ನೋಡಲು ಬರಲಿಲ್ಲ ಅಥವಾ ಅವಳನ್ನು ಚೆನ್ನಾಗಿದ್ದೀಯಾ ಎಂದು ಒಮ್ಮೆಯೂ ಯಾರೂ ಕೇಳಲಿಲ್ಲವಾದ್ದರಿಂದ ತನಗೆ ನೋವಾಯಿತು; ಅವರು ವಿಕ್ರಮ್‌ನನ್ನು ಹೊಣೆಗಾರರನ್ನಾಗಿ ಮಾಡಲಿಲ್ಲ, ಅವನು ತಪ್ಪುಮಾಡಿದನೆಂದು ಅವನಿಗೆ ಹೇಳಲಿಲ್ಲ, ಅಥವಾ ಕ್ಷಮೆಯಾಚಿಸುವಂತೆ ಸಲಹೆ ನೀಡಲಿಲ್ಲ, ಅದೇ ಸಮಯದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಕೇವಲ ಅದನ್ನು ಸಹಿಸಿಕೊಳ್ಳುವಂತೆ ತನಗೆ ಹೇಳಿದರು ಎಂದು ವಿವರಿಸುತ್ತಾಳೆ. ವಿಕ್ರಮ್ ಮತ್ತು ಎಲ್ಲರನ್ನೂ ಸಂತೋಷವಾಗಿಡಲು ಕಳೆದು ಕೆಲವು ವರ್ಷಗಳಿಂದ ಕಷ್ಟಪಟ್ಟು ಪ್ರಯತ್ನಿಸುತ್ತಿರುವಾಗ ತನ್ನ ಗುರುತಿನ ಭಾವವನ್ನು ಕಳೆದುಕೊಂಡಿದ್ದೇನೆ ಎಂದು ಅವಳು ಹೇಳುತ್ತಾಳೆ. ಸುಲಕ್ಷಣಾ ತನ್ನ ಕುಟುಂಬದ ತಪ್ಪಿಗೆ ಕ್ಷಮೆಯಾಚಿಸುತ್ತಾಳೆ, ತಮ್ಮ ಬೇರೂರಿರುವ ಸ್ತ್ರೀದ್ವೇಷವನ್ನು ಒಪ್ಪಿಕೊಳ್ಳುತ್ತಾಳೆ ಮತ್ತು ಅಮೃತಾ ತನಗಾಗಿ ಒಂದು ನಿಲುವನ್ನು ತೆಗೆದುಕೊಳ್ಳುವ ಮೂಲಕ ಅವಳು ಸರಿಯಾದ ಕೆಲಸವನ್ನು ಮಾಡುತ್ತಿದ್ದಾಳೆ ಎಂದು ಹೇಳುತ್ತಾಳೆ.

ಚಿತ್ರದುದ್ದಕ್ಕೂ ಅಮೃತಾಳ ಪಯಣ ನೇತ್ರಾ ಮತ್ತು ಸಭರ್‌ವಾಲ್‌ಗಳ ಸೇವಕಿ ಸುನೀತಾ ಅವರ ಪ್ರಯಾಣದೊಂದಿಗೆ ಹೆಣೆದುಕೊಂಡಿದೆ. ತಾವು ತಮ್ಮ ಗಂಡಂದಿರರಿಂದಲೂ ಅನ್ಯಾಯಕ್ಕೊಳಗಾಗಿದ್ದಾರೆ ಎಂದು ಅವರು ಅರಿತುಕೊಳ್ಳುತ್ತಾರೆ. ಆಕೆಯ ಕಾರ್ಯಗಳು ಆ ಸಮಸ್ಯೆಗಳನ್ನು ಎದುರಿಸಲು ಮತ್ತು ಪರಿಹಾರಗಳನ್ನು ಕಂಡುಕೊಳ್ಳಲು ಶಕ್ತಿಯನ್ನು ಕಂಡುಹಿಡಿಯಲು ಅವರಿಗೆ ಸಹಾಯ ಮಾಡುತ್ತದೆ. ಒಬ್ಬ ಚಿಕ್ಕ ಹುಡುಗಿಯ ಕೆಲಸಮಾಡುವ ಒಂಟಿ ತಾಯಿಯಾದ ಅಮೃತಾಳ ನೆರೆಹೊರೆಯವಳಾದ ಶಿವಾನಿ ಫೋನ್ಸೆಕಾ ಮತ್ತು ಅಮೃತಾಳ ನೃತ್ಯ ವಿದ್ಯಾರ್ಥಿ ಸಾನಿಯಾ ಅವರ ಜೀವನದ ತುಣುಕುಗಳನ್ನು ಸಹ ಚಲನಚಿತ್ರವು ತೋರಿಸುತ್ತದೆ.

ತಮ್ಮ ವಿಚ್ಛೇದನವನ್ನು ಅಂತಿಮಗೊಳಿಸಲು ಅಮೃತಾ ಮತ್ತು ವಿಕ್ರಮ್ ಭೇಟಿಯಾದಾಗ, ವಿಕ್ರಮ್‍ಗೆ ತನ್ನ ತಪ್ಪಿನ ಅರಿವಾಗಿ ಅವಳಲ್ಲಿ ಸರಿಯಾಗಿ ಕ್ಷಮೆಯಾಚಿಸುತ್ತಾನೆ ಮತ್ತು ತಾನು ಬಡ್ತಿಯನ್ನು ತಿರಸ್ಕರಿಸಿದ್ದೇನೆ ಮತ್ತು ತನ್ನ ಕೆಲಸವನ್ನು ತೊರೆದಿದ್ದೇನೆ ಎಂದು ಹೇಳುತ್ತಾನೆ. ಅವಳನ್ನು ಹೊಡೆಯಲು ಅಥವಾ ಅವಳನ್ನು ಯಾವುದೇ ರೀತಿಯಲ್ಲಿ ಅಗೌರವಿಸಲು ತನಗೆ ಹಕ್ಕಿದೆ ಎಂದು ಅವನು ಏಕೆ ಯೋಚಿಸಿದನು ಎಂದು ಅವನು ಜೋರಾಗಿ ಹೇಳಿ ಆಶ್ಚರ್ಯ ಪಡುತ್ತಾನೆ. ತಾನು ಮೊದಲಿಂದ ಮತ್ತೆ ಆರಂಭಿಸಿ ಅವಳು ತನಗೆ ಅರ್ಹಳಾಗಿರುವಂತೆ ಪ್ರಯತ್ನಿಸುವುದಾಗಿ ಅವನು ವಿವರಿಸುತ್ತಾನೆ. ಅವರು ಔಪಚಾರಿಕತೆಗಳನ್ನು ಪೂರ್ಣಗೊಳಿಸಿ ಮತ್ತು ಹೊಸ ಭರವಸೆಯ ಭಾವದೊಂದಿಗೆ ಬೇರ್ಪಡುತ್ತಾರೆ.

ಪಾತ್ರವರ್ಗ[ಬದಲಾಯಿಸಿ]

 • ಅಮೃತಾ ಸಭರ್ವಾಲ್ ಪಾತ್ರದಲ್ಲಿ ತಾಪ್ಸಿ ಪನ್ನು
 • ವಿಕ್ರಮ್ ಸಭರ್ವಾಲ್ ಪಾತ್ರದಲ್ಲಿ ಪವೈಲ್ ಗುಲಾಟಿ
 • ಶಿವಾನಿ ಫೋನ್ಸೆಕಾ ಪಾತ್ರದಲ್ಲಿ ದಿಯಾ ಮಿರ್ಜ಼ಾ
 • ವಕೀಲೆ ನೇತ್ರಾ ಜೈಸಿಂಗ್ ಪಾತ್ರದಲ್ಲಿ ಮಾಯಾ ಸರಾವ್
 • ಸುನೀತಾ ಪಾತ್ರದಲ್ಲಿ ಗೀತಿಕಾ ವಿದ್ಯಾ ಓಹ್ಲ್ಯಾನ್
 • ಸಚಿನ್ ಸಂಧು ಪಾತ್ರದಲ್ಲಿ ಕುಮುದ್ ಮಿಶ್ರಾ
 • ಸಂಧ್ಯಾ ಸಂಧು ಪಾತ್ರದಲ್ಲಿ ರತ್ನಾ ಪಾಠಕ್ ಶಾ
 • ಸುಲಕ್ಷಣಾ ಸಭರ್ವಾಲ್ ಪಾತ್ರದಲ್ಲಿ ತನ್ವಿ ಆಜ಼್ಮಿ
 • ವಕೀಲ ಪ್ರಮೋದ್ ಗುಜ್ರಾಲ್ ಪಾತ್ರದಲ್ಲಿ ರಾಮ್ ಕಪೂರ್
 • ಸ್ವಾತಿ ಸಂಧು ಪಾತ್ರದಲ್ಲಿ ನೈಲಾ ಗ್ರೇವಾಲ್
 • ಕರಣ್ ಸಂಧು ಪಾತ್ರದಲ್ಲಿ ಅಂಕುರ್ ರಾಠಿ
 • ರೋಮೇಶ್ ಸಭರ್ವಾಲ್ ಪಾತ್ರದಲ್ಲಿ ಸುಶೀಲ್ ದಹಿಯಾ
 • ಕವಿತಾ ಸಭರ್ವಾಲ್ ಪಾತ್ರದಲ್ಲಿ ನಿಧಿ ಉತ್ತಮ್
 • ವಿರಾಜ್ ಸಭರ್ವಾಲ್ ಪಾತ್ರದಲ್ಲಿ ಸಿದ್ಧಾಂತ್ ಕಾರ್ನಿಕ್
 • ರೋಹಿತ್ ಜೈಸಿಂಗ್ ಪಾತ್ರದಲ್ಲಿ ಮಾನವ್ ಕೌಲ್
 • ಸಾನಿಯಾ ಫೋನ್ಸೆಕಾ ಪಾತ್ರದಲ್ಲಿ ಗ್ರೇಸಿ ಗೋಸ್ವಾಮಿ
 • ಪ್ರಿಯನ್ ಪಾತ್ರದಲ್ಲಿ ರೋಹನ್ ಖುರಾನಾ
 • ಸುಬೋಧ್ ಪಾತ್ರದಲ್ಲಿ ಶಾಂತನು ಘಟಕ್
 • ರಾಜಹಂಸ್ ಪಾತ್ರದಲ್ಲಿ ಹರ್ಷ್ ಎ.ಸಿಂಗ್
 • ಥಾಪರ್ ಪಾತ್ರದಲ್ಲಿ ಪೂರ್ಣೇಂದು ಭಟ್ಟಾಚಾರ್ಯ
 • ನ್ಯಾಯಮೂರ್ತಿ ಜೈಸಿಂಗ್ ಪಾತ್ರದಲ್ಲಿ ಅನಿಲ್ ರಸ್ತೋಗಿ
 • ನಟನಾಗಿ ಮೃತ್ಯುಂಜಯ್ ದೇವ್ ನಾಥ್

ತಯಾರಿಕೆ[ಬದಲಾಯಿಸಿ]

ಪ್ರಧಾನ ಛಾಯಾಗ್ರಹಣವು 6 ಸೆಪ್ಟೆಂಬರ್ 2019 ರಂದು ಪ್ರಾರಂಭವಾಯಿತು ಮತ್ತು ಅಕ್ಟೋಬರ್ 16 ರಂದು ಕೊನೆಗೊಂಡಿತು.[೬] ಚಿತ್ರವನ್ನು ಉತ್ತರ ಪ್ರದೇಶದ ವಿವಿಧ ಸ್ಥಳಗಳಲ್ಲಿ ಮುಖ್ಯವಾಗಿ ಶಾಲಿಮಾರ್ ಪ್ಯಾರಡೈಸ್, ಬಾರಾಬಂಕಿ ಮತ್ತು ಲಕ್ನೋದ ಇತರ ಸ್ಥಳಗಳಲ್ಲಿ ಚಿತ್ರೀಕರಿಸಲಾಯಿತು.

ಪ್ರಚಾರ ಮತ್ತು ಬಿಡುಗಡೆ[ಬದಲಾಯಿಸಿ]

ಚಿತ್ರವು 28 ಫೆಬ್ರವರಿ 2020ರಂದು ಬಿಡುಗಡೆಯಾಯಿತು.[೭]

ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ[ಬದಲಾಯಿಸಿ]

ವಿಮರ್ಶಾತ್ಮಕ ಪ್ರತಿಕ್ರಿಯೆ[ಬದಲಾಯಿಸಿ]

ಚಿತ್ರದ ಬಗ್ಗೆ ಪ್ರಶಂಸೆಯು ಅದರ ಸಾಮಾಜಿಕ ಸಂದೇಶ, ಚಿತ್ರಕಥೆ, ನಿರ್ದೇಶನ ಮತ್ತು ಅಭಿನಯಗಳ ಮೇಲೆ ಕೇಂದ್ರೀಕೃತವಾಗಿತ್ತು, ಆದರೆ ಚಿತ್ರದ ವೇಗದ ಬಗ್ಗೆ ಟೀಕೆಗಳು ಬಂದವು.[೮][೯]

ಬಾಕ್ಸ್ ಆಫೀಸ್[ಬದಲಾಯಿಸಿ]

ಭಾರತದಲ್ಲಿ ಚಿತ್ರದ ಒಟ್ಟು ಆದಾಯ 35.13 ಕೋಟಿಯಷ್ಟಿತ್ತು. ವಿದೇಶದಲ್ಲಿ ಒಟ್ಟು ಆದಾಯ 8.64 ಕೋಟಿಯಷ್ಟಿತ್ತು. ವಿಶ್ವಾದ್ಯಂತ ಚಿತ್ರದ ಒಟ್ಟು ಸಂಗ್ರಹ 43.77 ಕೋಟಿಯಷ್ಟಾಯಿತು.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಫ಼ಿಲ್ಮ್‌ಫ಼ೇರ್ ಪ್ರಶಸ್ತಿಗಳು

 • ಅತ್ಯುತ್ತಮ ಚಲನಚಿತ್ರ - ಅನುಭವ್ ಕುಮಾರ್, ಭೂಷಣ್ ಕುಮಾರ್, ಕೃಷನ್ ಕುಮಾರ್ - ಗೆಲುವು
 • ಅತ್ಯುತ್ತಮ ಕಥೆ - ಅನುಭವ್ ಸಿನ್ಹಾ ಮತ್ತು ಮೃಣ್ಮಯಿ ಲಾಗೂ ವಾಯ್ಕುಲ್ - ಗೆಲುವು
 • ಅತ್ಯುತ್ತಮ ನಟಿ - ತಾಪ್ಸಿ ಪನ್ನು - ಗೆಲುವು
 • ಅತ್ಯುತ್ತಮ ಹಿನ್ನೆಲೆ ಗಾಯಕ - ರಾಘವ್ ಚೈತನ್ಯ (ಏಕ್ ತುಕ್ಡಾ ಧೂಪ್ ಹಾಡಿಗಾಗಿ) - ಗೆಲುವು
 • ಅತ್ಯುತ್ತಮ ಸಂಕಲನ - ಯಶಾ ರಾಮ್‍ಚಂದಾನಿ - ಗೆಲುವು
 • ಅತ್ಯುತ್ತಮ ಹಿನ್ನೆಲೆ ಸಂಗೀತ - ಮಂಗೇಶ್ ಧಾಕ್ಡೆ - ಗೆಲುವು
 • ಅತ್ಯುತ್ತಮ ಧ್ವನಿ ವಿನ್ಯಾಸ - ಕಾಮೋದ್ ಖರಾಡೆ - ಗೆಲುವು
 • ವಿಮರ್ಶಕರ ಅತ್ಯುತ್ತಮ ಚಲನಚಿತ್ರ - ನಾಮನಿರ್ದೇಶಿತ
 • ಅತ್ಯುತ್ತಮ ನಿರ್ದೇಶಕ - ಅನುಭವ್ ಸಿನ್ಹಾ - ನಾಮನಿರ್ದೇಶಿತ
 • ಅತ್ಯುತ್ತಮ ಚಿತ್ರಕಥೆ - ಅನುಭವ್ ಸಿನ್ಹಾ ಮತ್ತು ಮೃಣ್ಮಯಿ ಲಾಗೂ ವಾಯ್ಕುಲ್ - ನಾಮನಿರ್ದೇಶಿತ
 • ವಿಮರ್ಶಕರ ಅತ್ಯುತ್ತಮ ನಟಿ - ತಾಪ್ಸಿ ಪನ್ನು - ನಾಮನಿರ್ದೇಶಿತ
 • ಅತ್ಯುತ್ತಮ ಪೋಷಕ ನಟ - ಕುಮುದ್ ಮಿಶ್ರಾ - ನಾಮನಿರ್ದೇಶಿತ
 • ಅತ್ಯುತ್ತಮ ಪೋಷಕ ನಟಿ - ತನ್ವಿ ಆಜ಼್ಮಿ - ನಾಮನಿರ್ದೇಶಿತ
 • ಅತ್ಯುತ್ತಮ ಗೀತಸಾಹಿತಿ - ಶಕೀಲ್ ಆಜ಼್ಮಿ (ಏಕ್ ತುಕ್ಡಾ ಧೂಪ್ ಹಾಡಿಗಾಗಿ) - ನಾಮನಿರ್ದೇಶಿತ
 • ಅತ್ಯುತ್ತಮ ಛಾಯಾಗ್ರಹಣ - ಸೌಮಿಕ್ ಮುಖರ್ಜಿ - ನಾಮನಿರ್ದೇಶಿತ

ಧ್ವನಿವಾಹಿನಿ[ಬದಲಾಯಿಸಿ]

ಚಿತ್ರದ ಹಾಡುಗಳನ್ನು ಅನುರಾಗ್ ಸೈಕಿಯಾ ಸಂಯೋಜಿಸಿದ್ದಾರೆ ಮತ್ತು ಗೀತಸಾಹಿತ್ಯವನ್ನು ಶಕೀಲ್ ಆಜ಼್ಮಿ ಹಾಗೂ ಸನಾ ಮೋಯ್ದೂಡಿ ಬರೆದಿದ್ದಾರೆ.

ಹಾಯೋ ರಬ್ಬಾ ಹಾಡು ಪಾಕಿಸ್ತಾನಿ ಜಾನಪದ ಗಾಯಕಿ ರೇಷ್ಮಾರ ಹಳೆಯ ಹಾಡು ಹಾಯ್ ಓ ರಬ್ಬಾ ನಹಿಯೋನ್ ಲಗ್ದಾ ದಿಲ್ ಮೇರಾ ದ ಮರುಸೃಷ್ಟಿಯಾಗಿದೆ.

ಹಾಡುಗಳ ಪಟ್ಟಿ
ಸಂ.ಹಾಡುಗಾಯಕ(ರು)ಸಮಯ
1."ಏಕ್ ತುಕ್ಡಾ ಧೂಪ್"ರಾಘವ್ ಚೈತನ್ಯ5:25
2."ಡಾನ್ಸಿಂಗ್ ಇನ್ ದ ಸನ್"ಶರ್ವಿ ಯಾದವ್3:49
3."ಹಾಯೋ ರಬ್ಬಾ"ಸುವರ್ಣಾ ತಿವಾರಿ5:02
ಒಟ್ಟು ಸಮಯ:14:14

ಗೃಹ ಮಾಧ್ಯಮ[ಬದಲಾಯಿಸಿ]

ಚಲನಚಿತ್ರವನ್ನು 1 ಮೇ 2020ರಂದು ಒಟಿಟಿ ವೇದಿಕೆ ಆ್ಯಮಜ಼ಾನ್ ಪ್ರೈಮ್ ವೀಡಿಯೊದಲ್ಲಿ ಪ್ರವಹಿಸಲು ಲಭ್ಯವಾಗಿಸಲಾಯಿತು. 

ಪ್ರಭಾವ[ಬದಲಾಯಿಸಿ]

ಚಿತ್ರದ ಬಿಡುಗಡೆಯ ನಂತರ, ರಾಜಸ್ಥಾನ ಪೊಲೀಸರು ಕೌಟುಂಬಿಕ ದೌರ್ಜನ್ಯವನ್ನು ವರದಿ ಮಾಡಲು ಸಹಾಯವಾಣಿ ಸಂಖ್ಯೆಯೊಂದಿಗೆ ಚಿತ್ರದ ಪೋಸ್ಟರ್ ಅನ್ನು ಹಂಚಿಕೊಂಡರು.[೧೦]

ಉಲ್ಲೇಖಗಳು[ಬದಲಾಯಿಸಿ]

 1. "Taapsee Pannu's Thappad gets new release date. Anubhav Sinha says, no one told me". India Today. 16 December 2019. Retrieved 2 February 2020.
 2. "Thappad (2020)". British Board of Film Classification. Retrieved 24 February 2020.
 3. "Thappad Box Office Collection Day 5". Amar Ujala. Retrieved 19 May 2020.
 4. "Thappad Box Office". Bollywood Hungama. Retrieved 20 March 2020.
 5. "Thappad Is A Gorgeous Remake". Bollywood Over Hollywood. Archived from the original on 2021-05-03. Retrieved ಟೆಂಪ್ಲೇಟು:RT data. {{cite web}}: Check date values in: |access-date= (help)
 6. "Taapsee Pannu Tweets New Film Thappad's Release Date; Director Anubhav Sinha Says 'No One Told Me'". NDTV. 16 December 2019. Retrieved 16 December 2019.
 7. "Taapsee Pannu's Thappad to release on Feb, director Anubhav Sinha complains 'no one told me'". Hindustan Times. 16 December 2019. Retrieved 16 December 2019.
 8. "Thappad Movie Review". Bollywood Hungama. 27 February 2020. Retrieved 2 March 2020.
 9. Dua, Deepak (27 February 2020). "रिव्यू-मर्दानगी पर पड़ा 'थप्पड़'". Cine-yatra. Retrieved 2 March 2020.[ಶಾಶ್ವತವಾಗಿ ಮಡಿದ ಕೊಂಡಿ]
 10. "घरेलू हिंसा पर राजस्थान पुलिस का ट्वीट- एक थप्पड़, पर नहीं मार सकता". Aaj Tak. 5 March 2020. Retrieved 5 March 2020.

ಹೊರಗಿನ ಕೊಂಡಿಗಳು[ಬದಲಾಯಿಸಿ]