ತೀರ್ಪು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತೀರ್ಪು ಎಂದರೆ ಸಿವಿಲ್ ವ್ಯಾಜ್ಯ ಅಥವಾ ಕ್ರಿಮಿನಲ್ ಮೊಕದ್ದಮೆಯೊಂದರ ವಿಚಾರಣೆಯ ಅಂತ್ಯದಲ್ಲಿ, ನ್ಯಾಯಾಲಯ ತನ್ನ ಮುಂದಿನ ವಿವಾದವನ್ನು ತೀರ್ಮಾನಿಸಿ ನೀಡುವ ಆದೇಶ (ವರ್ಡಿಕ್ಟ್).[೧] ಸಿವಿಲ್ ವ್ಯಾಜ್ಯದ ತೀರ್ಪು ಪಕ್ಷಗಾರರ ಹಕ್ಕು ಬಾಧ್ಯತೆಗಳನ್ನು ಪೂರ್ಣವಾಗಿ ನಿರ್ಣಯಿಸುತ್ತದೆ; ಮತ್ತು ತೀರ್ಪನ್ನಿತ್ತ ನ್ಯಾಯಾಲಯದ ಮಟ್ಟಿಗೆ ಅದು ಅಂತಿಮವಾಗಿರುತ್ತದೆ. ತೀರ್ಪನ್ನು ತೆರೆದ ನ್ಯಾಯಾಲಯದಲ್ಲಿ ಕೊಡುವ ವೇಳೆ ನ್ಯಾಯಾದೀಶ ಅದಕ್ಕೆ ತನ್ನ ಸಹಿ ಹಾಗೂ ತಾರೀಖನ್ನು ಹಾಕುವ ಅಗತ್ಯವಿದೆ. ಹಾಗೆ ಬರೆಯಲಾದ ತೀರ್ಪಿಗೆ ಒಮ್ಮೆ ಸಹಿಯಾದ ನಂತರ ಅದನ್ನು, ಕೆಲವೊಂದು ನಿರ್ದಿಷ್ಟ ಕಾರಣ ಹೊರತಾಗಿ, ಎಷ್ಟು ಮಾತ್ರಕ್ಕೂ ವ್ಯತ್ಯಾಸಪಡಿಸಲು ಬಾರದು. ತೀರ್ಪಿನಲ್ಲಿ ವ್ಯಾಜ್ಯದ ವಿವರಗಳು, ಅವುಗಳಿಂದ ಉದ್ಬೂತವಾಗುವ ವಿವಾದಾತ್ಮಕ ಅಂಶಗಳು, ಅಂಥ ವಿವಾದಗಳ ಬಗ್ಗೆ ತೀರ್ಮಾನಗಳು ಮತ್ತು ಹಾಗೆಂದು ತೀರ್ಮಾನಕ್ಕೆ ಬರಲು ಪ್ರೇರೇಪಿಸಿದ ಕಾರಣಗಳು ಇರಬೇಕು.

ಕ್ರಿಮಿನಲ್ ಮೊಕದ್ದಮೆಯಲ್ಲಿ ವಿಚಾರಣೆ ಮುಗಿದ ಮೇಲೆ ಸಾಕ್ಷಿಗಳ ಪುರಾವೆ ಮತ್ತು ಅದರ ಆದಾರದ ಮೇಲೆ ಹೂಡಿದ ವಾದ ಇವನ್ನು ಕೂಲಂಕುಷವಾಗಿ ವಿಚಾರಿಸಿ ಆರೋಪಿಯ ಬಿಡುಗಡೆ ಅಥವಾ ಅವನಿಗೆ ಶಿಕ್ಷೆ ಆಗಬೇಕೆಂದು ನಿರ್ಣಯಿಸಿ ಕ್ರಿಮಿನಲ್ ನ್ಯಾಯಾಲಯ ತೀರ್ಪು ಕೊಡುತ್ತದೆ.

ಕ್ರಿಮಿನಲ್ ನ್ಯಾಯಾಲಯದ ತೀರ್ಪಿನಲ್ಲಿಯೂ ನಿರ್ಣಯಿಸಬೇಕಾದ ಅಂಶಗಳು, ಅವುಗಳ ನಿರ್ಣಯಗಳು, ಹಾಗೆಂದು ನಿರ್ಣಯಿಸಲು ಕಂಡುಬರುವ ಸಾಕಷ್ಟು ಕಾರಣಗಳು ನಮೂದಾಗಿರಬೇಕು. ತೀರ್ಪನ್ನು ಬಹಿರಂಗವಾಗಿ ಕೋರ್ಟಿನಲ್ಲಿ ಉಚ್ಚರಿಸುವಾಗ ಅದಕ್ಕೆ ದಂಡಾಧಿಕಾರಿ ತನ್ನ ಸಹಿ ಮತ್ತು ತಾರೀಕನ್ನು ಹಾಕಬೇಕು. ತೀರ್ಪಿನಲ್ಲಿನ ಆರೋಪಿ ಶಿಕ್ಷೆಗೆ ಬದ್ಧನೆನಿಸಿದ ಅಪರಾಧದ ವಿವರ, ಅವನು ಉಲ್ಲಂಘಿಸಿದನೆನ್ನುವ ಭಾರತ ಅಪರಾಧ ಸಂಹಿತೆಯ ಅಥವಾ ಇತರ ಅಧಿನಿಯಮಗಳ ಪ್ರಕರಣಗಳನ್ನು ತೋರಿಸಿರಬೇಕು. ಆರೋಪಿಯನ್ನು ಮುಕ್ತಗೊಳಿಸಿ ಬರೆದ ತೀರ್ಪಿನಲ್ಲಿ ಅವನು ಯಾವ ಅಪರಾಧದಿಂದ ಮೂಕ್ತನಾಗಿರುತ್ತಾನೆಂಬ ಸೂಚನೆಯಿರಬೇಕು, ಮತ್ತು ಅವನನ್ನು ಅಂಥ ಅಪರಾಧದಿಂದ ಅನಿರ್ಬಂಧಗೊಳಿಸಲಾಗಿದೆಯೆಂದೂ ಸ್ಪಷ್ಟಪಡಿಸಬೇಕು.

ಸಿವಿಲ್ ವ್ಯಾಜ್ಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶನೇ ತೀರ್ಪನ್ನು ಬರೆಯಬೇಕೆಂಬ ನಿಯಮವಿಲ್ಲ. ಆದರೆ ಕ್ರಿಮಿನಲ್ ಮೊಕದ್ದಮೆಯಲ್ಲಿ ವಿಚಾರಣೆ ನಡೆಸಿದ ದಂಡಾಧಿಕಾರಿಯೇ ತೀರ್ಪನ್ನು ಕೊಡಬೇಕೆಂಬ ಸ್ಪಷ್ಟ ನಿಯಮವಿದೆ.

ನ್ಯಾಯಾಲಯ ಕೊಡುವ ತೀರ್ಪುಗಳ ಮೇಲೆ ಅನೇಕ ವೇಳೆ ಪುನರ್ವಿಚಾರಣೆ, ಪುನರ್ವಿಮರ್ಶೆಗಳಿಗೆ ಎಡೆಯಿರುತ್ತದೆ. ಇವಕ್ಕೆ ಅನುಕೂಲವಿಲ್ಲದ ತೀರ್ಪುಗಳು ಅಥವಾ ಪುನರ್ವಿಚಾರಣೆಗಳಲ್ಲಿ ಊರ್ಜಿತವಾದ ತೀರ್ಪುಗಳು ಆಯಾ ಪಕ್ಷಗಾರರ ಮಟ್ಟಿಗೆ ಸಿಂಧುವಾಗಿರುತ್ತವೆ. ಸಂಬಂಧಪಟ್ಟ ಪಕ್ಷಗಾರರು ಅಂಥ ಅಂತಿಮ ತೀರ್ಪುಗಳ ಕಟ್ಟುಪಾಡುಗಳಿಗೆ ಸದಾ ಬದ್ಧರಾಗಿರುತ್ತಾರೆ. ಈಗ ಭಾರತದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಅಡಿಯಲ್ಲಿ ಲೋಕ ಅದಾಲತ್ ಎಂಬ ನ್ಯಾಯಾಧೀಕರಣ ಆರಂಭಿಸಿದ್ದು ಇದರಲ್ಲಿ ರಾಜಿ ಸೂತ್ರದ ಮೂಲಕ ವ್ಯಾಜ್ಯ, ದಾವೆ ಮೊಕದ್ದಮೆಗಳನ್ನು ಇತ್ಯರ್ಥಪಡಿಸಲು ಅಧಿಕಾರವಿರುತ್ತದೆ. ಅದರಂತೆ ಯಾವುದೇ ದಾವೆ, ವ್ಯಾಜ್ಯ, ಮೊಕದ್ದಮೆಗಳು ಲೋಕ ಅದಾಲತ್ ಎಲ್ಲ ನಿರ್ಣಯಗೊಂಡಾಗ ಅದು ಅಂತಿಮ ತೀರ್ಪಾಗಿ ಅಯಾ ಪಕ್ಷಗಾರರು ಅಂತಹ ಅಂತಿಮ ತೀರ್ಪುಗಳ ಕಟ್ಟುಪಾಡಿಗಳಿಗೆ ಬದ್ಧರಾಗಿರುತ್ತದೆ. ಇದರಲ್ಲ ಇನ್ನೊಂದು ವಿಶೇಷವೆಂದರೆ ಪಕ್ಷಗಾರರು ಆ ತೀರ್ಪಿನ ಮೇಲೆ ಯಾವುದೇ ರೀತಿಯ ಮೇಲ್ಮನವಿ ಸಲ್ಲಿಸುವಂತಿರುವುದಿಲ್ಲ. ಈ ನ್ಯಾಯಾಧೀಕರಣದಲ್ಲಿ ಭಾ.ದಂ.ಪ್ರ. ಸಂಹಿತೆಯಲ್ಲಿ ರಾಜಿಯಾಗಬಹುದಾದಂತಹ ಮೊಕದ್ದಮೆಗಳನ್ನು ಮತ್ತು ದಿವಾನಿ ದಾವೆ ಹಾಗೂ ಇನ್ನಿತರ ಅರ್ಜಿ/ವ್ಯಾಜ್ಯಗಳನ್ನು ಇತ್ಯರ್ಥ ಮಾಡುವ ಅಧಿಕಾರ ವ್ಯಾಪ್ತಿಯನ್ನೊಳಗೊಂಡಿರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Black’s Law Dictionary 970 (10th ed. 2014).
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ತೀರ್ಪು&oldid=956222" ಇಂದ ಪಡೆಯಲ್ಪಟ್ಟಿದೆ