ತಾಳ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಾಳ್ಯ, ಚಿತ್ರದುರ್ಗ ಜಿಲ್ಲೆಯ ಉಳಿದ ತಾಲ್ಲೂಕುಗಳಂತೆ ಹೊಳಲ್ಕೆರೆ ತಾಲ್ಲೋಕಿನ ಒಂದು ಚಿಕ್ಕ ಪ್ರದೇಶ. ಇದು ಹೋಬಳಿಯ ಮುಖ್ಯ ಕೇಂದ್ರ. ಇದು ಎಲ್ಲರ ಗಮನಸೆಳೆಯುತ್ತಿರುವುದು, ಅಲ್ಲಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ವತಿಯಿಂದ. ಮಳೆಯೇ ಬರದ ಬಂಜರು ಪ್ರದೇಶ ತಾಳ್ಯ. ಬರಗಾಲ ಪ್ರದೇಶವೆಂದು ಇದನ್ನು ಘೋಶಿಸಿದ್ದಾರೆ.

'ಹೊರಕೆರೆದೇವರಪುರ' ದ, ಸುಪ್ರಸಿದ್ಧ 'ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯ'[ಬದಲಾಯಿಸಿ]

ತಾಳ್ಯ ಹೋಬಳಿಗೆ ಸೇರಿದ 'ಹೊರಕೆರೆ ದೇವರಪುರ' , ಅಲ್ಲಿನ 'ಲಕ್ಷ್ಮೀ ರಂಗನಾಥ ಸ್ವಾಮಿ ದೇವಾಲಯ'ದಿಂದ ಪ್ರಸಿದ್ದವಾದುದು. ಇಡೀ ದೇವಾಲಯವನ್ನು ಅಗ್ನಿ ಶಿಲೆಯಿಂದ ಕಟ್ಟಲಾಗಿದೆ .ಇದೊಂದು ಚಿತ್ರದುರ್ಗ ಜಿಲ್ಲೆಯ ಅತ್ಯಂತ ಬೃಹತ್ ಶಿಲಾ ದೇವಾಲಯ , ದೇವಾಲಯದಲ್ಲಿ ಲಕ್ಷ್ಮೀ,ಭೂದೇವಿಯರ ಸೇವೆಯಲ್ಲಿ ಶಯನಿಸಿರುವರಂಗನಾಥನ ಅಪೂರ್ವ ಶಿಲ್ಪವಿದೆ .ಪ್ರತಿ ವರ್ಷ ಫಾಲ್ಗುಣ ಮಾಸದಲ್ಲಿ ಇಲ್ಲಿ ನಡೆಯುವ ಜಾತ್ರೆ ಜಿಲ್ಲೆಯಲ್ಲಿನ ಪ್ರಮುಖ ಜಾತ್ರೆಗಳಲ್ಲೊಂದು . ಹನ್ನೆರಡು ವರ್ಷಗಳಿಗೊಮ್ಮೆ ಇಲ್ಲಿ ನಡೆಯುವ ಗುಂಡಿನ ಸೇವೆಯ ಪವಾಡ ಅತ್ಯಂತ ಪ್ರಸಿದ್ದವಾದುದು . ಇಲ್ಲಿನ ಕಲ್ಯಾಣಿ ಈಗ ಬತ್ತಿದ ಸ್ಥಿತಿಯಲ್ಲಿದ್ದರೂ ಒಂದು ಕಾಲದಲ್ಲಿ ನೀರಿನ ಸೆಲೆಯಿಂದ ತುಂಬಿ ತುಳುಕುತ್ತಿತ್ತು . ನೋಡಲು ಈಗಲೂ ಸುಂದರವಾಗಿದೆ . 'ಹೊರಕೆರೆ ದೇವರಪುರ' ಮತ್ತು ಸುತ್ತಣ ಗ್ರಾಮಗಳು 'ವೀಳ್ಯದ ಎಲೆ' ಗೆ ತುಂಬಾ ಪ್ರಸಿದ್ದಿ . ಹತ್ತಿರದಲ್ಲಿನ 'ಉಪ್ಪರಿಗೇನಹಳ್ಳಿ' ಯ ಬಹುತೇಕ ಜನರ ಬದುಕು ಈ ಎಲೆಯ ತೋಟಗಳನ್ನು ಅವಲಂಬಿಸಿದೆ .ಮತ್ತು ಉಪ್ಪರಿಗೇನಹಳ್ಳಿಯ ಗ್ರಾಮದೇವತೆ, 'ಕೊಲ್ಲಾಪುರದ ಮಹಾಲಕ್ಷ್ಮಿ ದೇವಾಲಯ' ಜನರ ಆಕರ್ಷಣೆಯ ಕೇಂದ್ರ.ಪ್ರತಿ ವರ್ಷ ಫಾಲ್ಗುಣದಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಮತ್ತು ಈ ಪ್ರದೇಶದ ಇನ್ನೊಂದು ಮುಖ್ಹ್ಯ ಬೆಳೆ 'ಬಾಳೆ' . ಆದರೆ ನೀರಿನ ಆಶ್ರಯ ಕೆಲವರಿಗೆ ಮಾತ್ರ ಇರುವುದು, ಈ ಪ್ರದೇಶದ ಹಿಂದುಳಿದಿರುವಿಕೆಗೆ ಮುಖ್ಯ ಕಾರಣ . ಇಲ್ಲಿನ ನೆಲ ಅತ್ಯಂತ ಫಲವತ್ತಾದುದು . ಹಾಗೆಯೇ ಸದಾ ಬರಗಾಲದ ದವಡೆಗೆ ಸಿಲುಕುವ ಈ ಪ್ರದೇಶಕ್ಕೆ ಶಾಶ್ವತ ನೀರಿನ ಆಸರೆ ದೊರಕಿದರೆ ,ಇಲ್ಲಿನ ಜನರ ಬದುಕು ಹಸನಾಗಬಲ್ಲದು .ತಾಳ್ಯ ಹೋಬಳಿಯ ಇನ್ನೊಂದು ಮುಖ್ಯ ಕ್ಷೇತ್ರ , ಕೊಳಹಾಳು . ಚಿತ್ರದುರ್ಗ, ಹಿರಿಯೂರು, ಹೊಳಲ್ಕೆರೆ ಈ ಮೂರೂ ತಾಲ್ಲೋಕುಗಳ ಗಡಿಗಳು ಸೇರುವ ಪ್ರದೇಶದಲ್ಲಿರುವ ಒಂದು ಸಣ್ಣ ಊರು 'ಕೊಳಹಾಳು'.ಇದು ತಾಳ್ಯ ಹೋಬಳಿಯ ಕಟ್ಟ ಕಡೆಯ ಗ್ರಾಮ. ಇಲ್ಲಿ ಹತ್ತೊಂಭತ್ತನೆಯೆ ಶತಮಾನದ ಕೊನೆಯ ಭಾಗದಲ್ಲಿ ಜೀವಿಸಿದ್ದರೆನ್ನಲಾದ 'ಕೆಂಚಾವಧೂತ'ರೆಂಬ ಅವಧೂತರ ಗದ್ದುಗೆ ಇದೆ.ಅವರು ಹಂಪೆಯ 'ರುದ್ರಮುನಿ ಸ್ವಾಮಿ' ಗಳ ಶಿಷ್ಯರಾಗಿದ್ದವರೆಂಬ ಪ್ರತೀತಿ ಇದೆ. ಕೇವಲ ಹಳ್ಳಿಯ ಸಾಮಾನ್ಯ ತುರುಗಾಹಿಯಾಗಿದ್ದ ಕೆಂಚಾವಧೂತರು , ಯೋಗಿಯಾಗಿ ,ಸಾಧಕರಾಗಿ ಅನೇಕ ಪವಾಡಗಳನ್ನು ಮಾಡಿದರೆಂಬ ಐತಿಹ್ಯವಿದೆ. ಈಗಲೂ ಸಹ ಅವರ ಗದ್ದುಗೆಯನ್ನು 'ಜಾಗೃತ ಗದ್ದುಗೆ' ಯೆಂದು ಜನರು ಆರಾಧಿಸುತ್ತಾರೆ. ಪ್ರತಿ ವರ್ಷ ಚೈತ್ರ ಶುದ್ದ ಪೂರ್ಣಿಮೆಯಂದು ಇಲ್ಲಿ 'ಜಾತ್ರೆ,' ನಡೆಯುತ್ತದೆ.

'ಐತಿಹಾಸಿಕ ಊರು', 'ನಂದನ ಹೊಸೂರು',ಪ್ರಾಚೀನ ದೇವಸ್ಥಾನಗಳಿಗೆ ಹೆಸರು ವಾಸಿಯಾಗಿದೆ'[ಬದಲಾಯಿಸಿ]

ಹೊರಕೆರೆದೇವರಪುರದ ಸಮೀಪದ ಇನ್ನೊಂದು ಐತಿಹಾಸಿಕ ಊರು, ನಂದನ ಹೊಸೂರು. ಇಲ್ಲಿ ಪ್ರಾಚೀನ ಕಾಲದ ದೇವಸ್ಥಾನಗಳಿವೆ .ಇಲ್ಲಿನ ಸ್ಥಳ ಮಹಾತ್ಮೆಯ ಬಗ್ಗೆ ತುಂಬಾ ಜಾನಪದೀಯ ಅಂಶಗಳನ್ನೊಳಗೊಂಡ ಕಥಾನಕಗಳು ಚಾಲ್ತಿಯಲ್ಲಿವೆ. ಅದರಲ್ಲಿ ನಂದನಹೊಸೂರು ಒಂದು ಪಾಳೆಯ ಪಟ್ಟಾಗಿತ್ತೆಂದೂ ,ಅದರ ಆಡಳಿತಗಾರನಾದ ನಂದರಾಯನೆಂಬುವನು ಇಲ್ಲಿನ ಹೊರಕೇರಿದೇವರಪುರದ ರಂಗನಾಥಸ್ವಾಮಿಯ ಭಕ್ತನಾದ ದಾಸಯ್ಯನಿಗೆ ಅವಮಾನ ಮಾಡಿದನೆಂದೂ, ಇದರಿಂದ ಕ್ರೋಧಗೊಂಡ ಸ್ವಾಮಿಯು, ನಂದರಾಯನ ಪಟ್ಟಣವನ್ನು ತನ್ನ ಉರಿ ನೇತ್ರದಿಂದ ಭಸ್ಮವಾಗುವಂತೆ ಮಾಡಿದನೆಂದೂ ,ಆಗ ಜನರ ಹಾಹಾಕಾರ ಕಂಡು ಕಡು ನೊಂದ ,ನಂದನಹೊಸೂರಿನ ಬಾಸಿಂಗದವರೆಂಬ ಮನೆಯವರ ಹಸಿ ಬಾಣಂತಿಯೋರ್ವಳು, ತನ್ನ ಹಸುಗೂಸನ್ನು ಸುಟ್ಟು ಊರನ್ನು ಉಳಿಸಲು ರಂಗನಾಥ ಸ್ವಾಮಿಯನ್ನು ಪ್ರಾರ್ಥಿಸಿದಳೆಂದೂ ,ಈ ಹೆಣ್ಣುಮಗಳ ತ್ಯಾಗಕ್ಕೆ ಮನಸೋತ ಸ್ವಾಮಿಯು ,ಆಕೆಯನ್ನೂ ಆಕೆಯ ಕಂದನನ್ನೂ ಹರಸಿ ಶಾಂತನಾದನೆಂದೂ ,ಊರು ಉಳಿಯಿತೆಂದೂ ಸ್ಥಳೀಯವಾಗಿ ತುಂಬಾ ಪ್ರಸಿದ್ದಿಯಲ್ಲಿರುವ ಜಾನಪದ ಕತೆ ಇದೆ .ಈ ಊರಿನ ಗೌಡರ ಮನೆಯಲ್ಲಿ ಇರುವಂತಹ ತಾಮ್ರದ ಪತ್ರದಲ್ಲಿ ಕುಂಚಿಟಿಗ ಜನಾಂಗದ ಬಗ್ಗೆ ತಿಳಿಸಲಾಗಿದೆ


"https://kn.wikipedia.org/w/index.php?title=ತಾಳ್ಯ&oldid=1163990" ಇಂದ ಪಡೆಯಲ್ಪಟ್ಟಿದೆ