ಡಿಮಾಕ್ರಿಟಸ್
ಡಿಮಾಕ್ರಿಟಸ್ (ಕ್ರಿ.ಪೂ. ಸು. 460-370) ಪ್ರಾಚೀನ ಗ್ರೀಸಿನ ಶ್ರೇಷ್ಠ ತತ್ತ್ವಜ್ಞಾನಿಗಳಲ್ಲಿ ಒಬ್ಬ.
ಬೋಧನೆಗಳು, ತತ್ವಗಳು, ಅಭಿಪ್ರಾಯಗಳು
[ಬದಲಾಯಿಸಿ]ಈತ ಅಬ್ಡೆರಾದವ. ಜ್ಞಾನಾರ್ಜನೆಯ ದೃಷ್ಟಿಯಿಂದ ಬ್ಯಾಬಿಲಾನ್, ಪರ್ಷಿಯ, ಈಜಿಪ್ಟ್ ದೇಶಗಳನ್ನು ಸುತ್ತಿ ಭಾರತಕ್ಕೆ ಬಂದಿದ್ದನೆನ್ನಲಾಗಿದೆ. ಆದರೆ ಇವನ ವಿಚಾರವಾಗಿ ನಮಗೆ ತಿಳಿದಿರುವುದೆಲ್ಲವೂ ಜನಜನಿತವಾಗಿ ಬಂದಿರುವ ಹಲವಾರು ದಂತಕತೆಗಳು ಮಾತ್ರ. ತನ್ನ ಗುರುವಾದ ಲ್ಯೂಸಿಪಸನಿಂದ ಮೊದಲ ಬಾರಿಗೆ ಪ್ರಣೀತವಾದ ಪರಮಾಣುವಾದವನ್ನು ಡಿಮಾಕ್ರಿಟಸ್ ಸಾಕಷ್ಟು ಬೆಳೆಸಿ ಅದರಿಂದಲೇ ಪ್ರಸಿದ್ಧನಾದ. ಇದರ ಪ್ರಕಾರ ಜಗತ್ತೆಲ್ಲ ಪರಮಾಣುಗಳಿಂದ ಮತ್ತು ಶೂನ್ಯದಿಂದ ತುಂಬಿದೆ; ಪರಮಾಣುಗಳು ಸಂತತ ಚಲನೆ ಉಳ್ಳವಾಗಿ ಒಂದರೊಡನೆ ಒಂದು ಬೆರತು ಅನೇಕ ಜಡ ಮತ್ತು ಚೇತವಸ್ತುಗಳಾಗಿ ಪರಿಣಮಿಸುತ್ತವೆ; ಜಗತ್ತಿನ ಸಮಸ್ತ ದ್ರವ್ಯವೂ ಪರಮಾಣುಗಳ ಸಂಯೋಗ ಮತ್ತು ವಿಯೋಗದಿಂದ ಉದ್ಭವಿಸಿದೆ; ಎಲ್ಲ ಪದಾರ್ಥಗಳೂ ಒಂದೇ ರೀತಿಯಾದ ಪರಮಾಣುಗಳಿಂದ ಸಂಘಟಿತವಾಗುವುದರಿಂದ ಅವುಗಳಲ್ಲಿನ ಭಿನ್ನತೆಗಳು ನಮ್ಮ ಮನಸ್ಸಿನ ಕಲ್ಪನೆಗಳೇ ವಿನಾ ವಾಸ್ತವಿಕವಲ್ಲ-ಎಂದು ಮುಂತಾಗಿ ಇದೆ. ಎಪಿಕ್ಯೂರಸನಂತೆ ಮನಸ್ಸಿನ ನೆಮ್ಮದಿಯೇ ಜೀವನದ ಗುರಿ ಎಂದು ಈತ ಬೋಧಿಸಿದ. ಬಹುಶಃ ಈ ಕಾರಣದಿಂದಲೇ ಈತನಿಗೆ ನಗುವ ತತ್ತ್ವಜ್ಞಾನಿ (ಲಾಫಿಂಗ್ ಫಿಲಾಸಫರ್) ಎಂದು ಹೆಸರಾಗಿರಬಹುದು. ಅಥವಾ ತೀಕ್ಷ್ಣಮತಿಯಾದ ಇವನು ಲೋಕದ ಮೌಢ್ಯವನ್ನು ಕಂಡು ನಗುತ್ತಿದ್ದಿರಬಹುದು.
ಪಾಶ್ಚಾತ್ಯರ ಪರಮಾಣು ಸಿದ್ಧಾಂತದ ಮೂಲಪುರುಷನಾದ ಡಿಮಾಕ್ರಿಟಸನು ಈಜಿಪ್ಟಿನಲ್ಲಿ ಪುರಾತನ ಗಣಿತ ಪದ್ಧತಿಯನ್ನು ಭೌತಸಿದ್ಧಾಂತಗಳನ್ನೂ ಅಧ್ಯಯನ ಮಾಡಿದ. ಇರಾನಿನ ಮೇಜೈ ವರ್ಗದವರಿಂದ ಹಾಗೂ ಪೂರ್ವ ದೇಶಗಳ ಜ್ಯೋತಿಷಿಗಳಿಂದ ಈತ ಪ್ರಭಾವಿತನಾಗಿದ್ದನೆಂದೂ ಹೇಳುವವರಿದ್ದಾರೆ. ಇವನ ಜೀವನದ ವಿಷಯದಲ್ಲಿ ಹೇಗೋ ಹಾಗೆ ಅಭಿಪ್ರಾಯಗಳ ಹಾಗೂ ತತ್ತ್ವಗಳ ವಿಷಯದಲ್ಲಿಯೂ ನೇರವಾದ ಮಾಹಿತಿ ಸಿಕ್ಕುವಂತಿಲ್ಲ. ಇವನು 72 ಗ್ರಂಥಗಳನ್ನು ರಚಿಸಿದನೆಂದು ತಿಳಿದುಬಂದಿದೆಯಾದರೂ ಇವುಗಳಲ್ಲಿ ಒಂದೂ ನಮಗೆ ಸಿಕ್ಕಿಲ್ಲ. ಇತರರ ಕೃತಿಗಳಲ್ಲಿ ದೊರೆಯುವ ಮಾಹಿತಿಯ ಆಧಾರದ ಮೇಲೆ ಈತನ ತತ್ತ್ವಗಳೇನೆಂಬುದು ಗೊತ್ತಾಗುತ್ತದೆ. ಅಷ್ಟೆ, ಭೌತಪ್ರಪಂಚದ ಬಗ್ಗೆ ಡಿಮಾಕ್ರಿಟಸನ ಭಾವನೆಗಳು ಎಷ್ಟು ನಿಷ್ಕøಷ್ಟವಾಗಿದ್ದವೆಂಬುದನ್ನು ನೋಡಿದಾಗ ಪ್ರಾಚೀನ ಭೌತ ತತ್ತ್ವಜ್ಞಾನಿಗಳಲ್ಲೆಲ್ಲ ಈತನೇ ಅತ್ಯಂತ ಯಶಸ್ವಿಯಾದವನೆಂದು ಹೇಳಬೇಕಾಗುತ್ತದೆ. ಆದರೆ ಸಾಕ್ರೆಟೀಸನ ಸಮಕಾಲನನಾಗಿದ್ದುದೇ ಇವನ ದೌರ್ಭಾಗ್ಯ. ಸಾಕ್ರೆಟೀಸನ ಪ್ರಭಾವಶಾಲೀ ಶಿಷ್ಯವೃಂದದವರು ಡಿಮಾಕ್ರಿಟಸನ ಬೋಧನೆಗಳನ್ನು ತಿರಸ್ಕರಿಸಿದುದರಿಂದ ಇವನ ಹೆಸರು ಅಷ್ಟಾಗಿ ಬೆಳಕಿಗೆ ಬರಲಿಲ್ಲ.
ಇತರ ಪ್ರಾಚೀನ ವೈಚಾರಿಕರ ಅಭಿಪ್ರಾಯಗಳಂತೆಯೇ ಡಿಮಾಕ್ರಿಟಸನ ಅಭಿಪ್ರಾಯಗಳೂ ಅನೇಕ ವೇಳೆ ಬೆರಗುಗೊಳಿಸುವಷ್ಟು ಆಧುನಿಕವಾಗಿ ಕಾಣುತ್ತವೆ. ಇದಕ್ಕೆ ಆತನ ಪರಮಾಣು ಸಿದ್ಧಾಂತ ಒಂದೇ ನಿದರ್ಶನವಲ್ಲ. ಆಕಾಶಗಂಗೆ ಒತ್ತಾಗಿರುವ ನಕ್ಷತ್ರಸಮೂಹ ಎಂದು ಇವನು ಅಭಿಪ್ರಾಯಪಟ್ಟಿದ್ದ. ವಿಶ್ವದ ಉಗಮದ ವಿಷಯದಲ್ಲಿ ತಾನು ಮಂಡಿಸಿದ ಸಿದ್ಧಾಂತ ಕಾಂಟ್-ಲಪ್ಲಾಸ್ ವೈತ್ಸೇಕರ್ ಸಿದ್ಧಾಂತವನ್ನು ನೆನಪಿಗೆ ತರುತ್ತದೆ. ಭೌತ ಪ್ರಪಂಚದ ಸ್ವರೂಪ ಮತ್ತು ವಿಶ್ವದ ಉಗಮಗಳ ಬಗ್ಗೆ ತನ್ನ ಗುರು ಲ್ಯೂಸಿಪಸ್ ವ್ಯಕ್ತಪಡಿಸಿದ್ದ ಅಭಿಪ್ರಾಯಗಳನ್ನು ಡಿಮಾಕ್ರಿಟಿಸ್ ವಿಸ್ತರಿಸಿ ಅವಕ್ಕೆ ಒಂದು ಸುಸಂಬದ್ಧ ರೂಪವನ್ನು ಕೊಟ್ಟ. ಇವನ ಪ್ರಕಾರ ಭೌತಜಗತ್ತು ರಚಿತವಾಗಿರುವುದು ಪರಮಾಣುಗಳಿಂದ. ಪರಮಾಣುಗಳನ್ನು ಬಿಟ್ಟರೆ ಈ ಜಗತ್ತಿನಲ್ಲಿರುವುದು ಶೂನ್ಯಪ್ರದೇಶ, ಅಷ್ಟೆ. ಅನಂತವಾಗಿರುವ ಶೂನ್ಯಪ್ರದೇಶದಲ್ಲಿ ಅನಂತರ ಸಂಖ್ಯೆಯ ಪರಮಾಣುಗಳು ಚಲಿಸುತ್ತಿವೆ. ಪರಮಾಣುಗಳು ಅತ್ಯಂತ ಚಿಕ್ಕವು; ಕಣ್ಣಿಗೆ ಕಾಣಿಸುವುದಿಲ್ಲ. ಇವು ಎಷ್ಟು ಚಿಕ್ಕವೆಂದರೆ, ಇವನ್ನು ಪುನಃ ವಿಭಾಗಿಸಲು ಸಾಧ್ಯವೇ ಇಲ್ಲ. ಅದಕ್ಕೇ ಇವುಗಳಿಗೆ ಆ್ಯಟಮ್ (ಅಭೇದ್ಯ) ಎಂಬ ಹೆಸರು ಕೊಟ್ಟದ್ದು. ಪರಮಾಣುಗಳು ನಿತ್ಯ. ಅಂದರೆ, ಅವನ್ನು ಸೃಷ್ಟಿಸಲು ಸಾಧ್ಯವಿಲ್ಲ; ನಾಶ ಮಾಡಲೂ ಸಾಧ್ಯವಿಲ್ಲ. ಶೂನ್ಯ ಪ್ರದೇಶ ಬರಿದು; ಆದರೆ ಪರಮಾಣು ತಾನಿರುವಷ್ಟು ಪ್ರದೇಶವನ್ನು ಪೂರ್ತಿ ತುಂಬಿರುತ್ತದೆ. ಅಂದರೆ, ಅದರಲ್ಲಿ ರಂಧ್ರಗಳಿಗೆ, ಪೊಟರೆಗಳಿಗೆ ಅವಕಾಶವಿಲ್ಲ. ಅದನ್ನು ಅದುಮಿ ಚಿಕ್ಕದು ಮಾಡುವುದಕ್ಕೂ ಆಗುವುದಿಲ್ಲ. ಎಲ್ಲ ಪರಮಾಣುಗಳೂ ಏಕರೀತಿಯಾದವು. ಆದರೆ ಅವುಗಳ ಆಕೃತಿಗಳೂ ಗಾತ್ರಗಳೂ (ಆದ್ದರಿಂದ ತೂಕಗಳು) ಮತ್ತು ಅವು ಒಂದರೊಡನೊಂದು ಜೋಡಿಸಿಕೊಂಡಿರುವ ಕ್ರಮಗಳು ಬೇರೆ ಬೇರೆಯಾಗಿರುತ್ತವೆ. ಪರಮಾಣುಗಳು ಗಾತ್ರದಲ್ಲಿ ಭಿನ್ನವಾಗಿದ್ದರೂ ಗುಣದಲ್ಲಿ ಭಿನ್ನವಲ್ಲ. ವಿವಿಧ ಪದಾರ್ಥಗಳ ಗುಣಗಳು ಭಿನ್ನವಾಗಿರುವಂತೆ ನಮ್ಮ ಇಂದ್ರಿಯಗಳಿಗೆ ಗೋಚರವಾಗುವುದಷ್ಟೆ ? ಅದು ಕೇವಲ ತೋರ್ಕೆ. ಅದಕ್ಕೆ ಕಾರಣ, ಪರಮಾಣುಗಳ ಬೇರೆ ಬೇರೆ ಆಕೃತಿಗಳು ಮತ್ತು ಅವು ಬೇರೆಬೇರೆ ರೀತಿಯಲ್ಲಿ ಜೋಡಿಕೊಂಡಿರುವುದು ಅಷ್ಟೆ. ಉದಾಹರಣೆಗೆ, ನೀರಿನ ಮತ್ತು ಕಬ್ಬಿಣದ ಪರಮಾಣುಗಳು ಒಂದೇ ಗುಣವುಳ್ಳವು. ಆದರೆ, ನೀರಿನ ಪರಮಾಣುಗಳು ಗುಂಡಗೆ ನುಣುಪಾಗಿರುವುದರಿಂದ ಅವು ಒಂದರ ಮೇಲೊಂದು ಜಾರುವುವು. ಆದ್ದರಿಂದ ನೀರು ಹರಿಯುತ್ತದೆ ಮತ್ತು ಅದಕ್ಕೆ ನಿರ್ದಿಷ್ಟ ಆಕಾರವಿಲ್ಲ. ಕಬ್ಬಿಣದ ಪರಮಾಣುಗಳಾದರೋ ಒರಟು ಮತ್ತು ತರಕಲು. ಆದ್ದರಿಂದ ಅವು ಒಂದರೊಡನೊಂದು ಅಂಟಿಕೊಂಡು ಘನಪದಾರ್ಥ ರೂಪುಗೊಳ್ಳುವುದು. ಅದೇ ರೀತಿ ಬೆಂಕಿಯ ಪರಮಾಣುಗಳು ಮೊನಚಾಗಿರುವುದರಿಂದ ಅವು ನೋವನ್ನು ಉಂಟು ಮಾಡುತ್ತವೆ.
ಪರಮಾಣುಗಳು ಹೇಗೆ ನಿತ್ಯವಾದವೋ ಹಾಗೆಯೇ ಅವುಗಳ ಚಲನೆಯೂ ನಿತ್ಯ. ಡಿಮಾಕ್ರಿಟಸನ ಪ್ರಕಾರ ಪರಮಾಣುಗಳ ಚಲನೆ ಮತ್ತು ವಿವಿಧ ವರ್ತನೆಗಳು ನಿರ್ದಿಷ್ಟ ನಿಯಮಗಳಿಗೆ ಅನುಗುಣವಾಗಿ ನಡೆಯುವುದೇ ವಿನಾ ದೇವತೆಗಳ ಅಥವಾ ಪಿಶಾಚಿಗಳ ಕೈವಾಡದಿಂದಲ್ಲ. ಆದ್ದರಿಂದ ಡಿಮಾಕ್ರಿಟಸ್ ಸಂಪೂರ್ಣವಾಗಿ ವಸ್ತುವಾದಿ ಎನ್ನಬಹುದು. ಇವನ ಪ್ರಕಾರ ವಿಶ್ವ ರೂಪುಗೊಂಡಿರುವುದೇ ಅಸಂಖ್ಯಾತ ಪರಮಾಣುಗಳ ಅಸ್ತವ್ಯಸ್ತ ಚಲನೆಯಿಂದ. ಅವು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತ, ಒಂದರೊಡನೊಂದು ಸೇರಿಕೊಳ್ಳುತ್ತ ಬಿಡಿಸಿಕೊಳ್ಳುತ್ತ ನಡೆದು, ಗ್ರಹನಕ್ಷತ್ರಾದಿಗಳೆಲ್ಲ ರೂಪುಗೊಂಡುವು. ಈ ಸಿದ್ಧಾಂತ, ಆಗಲೇ ಹೇಳಿರುವಂತೆ, ಕಾಂಟ್-ಲಪ್ಲಾಸ್-ವೈತ್ಸೇಕರ್ ಸಿದ್ಧಾಂತವನ್ನು ಹೋಲುತ್ತದೆ. ಹೀಗೆ ಇವನ ಅನೇಕ ಚಿಂತನೆಗಳು ಅತ್ಯಾಧುನಿಕವಾಗಿ ಕಾಣುವುವಾದರೂ ಅವು ಪ್ರಯೋಗ, ವೀಕ್ಷಣೆ, ಮುಂತಾದವನ್ನು ಒಳಗೊಂಡ ಇಂದಿನ ವಿಜ್ಞಾನ ವಿಧಾನದ ಒರೆಗಲ್ಲಿನಿಂದ ಪರೀಕ್ಷಿಸಿದವಾಗಿರಲಿಲ್ಲ; ಕೇವಲ ಅಂತರ್ದೃಷ್ಟಿ ಮತ್ತು ತರ್ಕಗಳ ಆಧಾರದ ಮೇಲೆ ಮಂಡಿಸಿದಂಥವು. ಆದ್ದರಿಂದ ಅಂಥ ಇತರ ಸಿದ್ಧಾಂತಗಳನ್ನು ಯಶಸ್ವಿಯಾಗಿ ಜಯಿಸುವುದು ಅವಕ್ಕೆ ಸಾಧ್ಯವಿರಲಿಲ್ಲ. ಡಿಮಾಕ್ರಿಟಸನ ಅಭಿಪ್ರಾಯಗಳು ಸಾಕ್ರೆಟೀಸನ ಶಿಷ್ಯರ ತಾತ್ಸಾರದಿಂದಾಗಿ ಸಂಪೂರ್ಣವಾಗಿ ಅಳಿದು ಹೋಗದೆ ಇನ್ನೂ ಜೀವಂತವಾಗಿ ಉಳಿದಿರಲು ಕಾರಣ. ಅಲ್ಲಿಂದ ಒಂದು ಶತಮಾನದ ತರುವಾಯ ಎಪಿಕ್ಯೂರಸ್ ಅವಕ್ಕೆ ಪುನಶ್ಚೇತನ ನೀಡಿದುದು.