ಪಿ. ಕೆ. ರಾಜಶೇಖರ
ಡಾ. ಪಿ. ಕೆ. ರಾಜಶೇಖರ್ , ‛ಪಿ. ಕೆ. ಆರ್.’ ಎಂದೇ ಪರಿಚಿತರಾದ, ಕರ್ನಾಟಕದ ಪ್ರಮುಖ ಜಾನಪದ ವಿದ್ವಾಂಸರಲ್ಲಿ ಒಬ್ಬರು. ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಸುಮಾರು ೪೦ ವರ್ಷಗಳ ಕಾಲ ಅಧ್ಯಾಪನ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದಾರೆ.
ಸಂಕ್ಷಿಪ್ತ ಪರಿಚಯ
[ಬದಲಾಯಿಸಿ]ಪಿ. ಕೆ. ರಾಜಶೇಖರ್ ಅವರು ಕನ್ನಡದ ಜಾನಪದ ವಿದ್ವಾಂಸರಲ್ಲಿ ಪ್ರಮುಖರು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಇವರ ಹುಟ್ಟೂರು. ತಾಯಿ ಪುಟ್ಟಮ್ಮ, ತಂದೆ ಪಿ. ಡಿ. ಕೆಂಪೇಗೌಡ[೧]. ಶ್ರೀಯುತರು ಬಾಲ್ಯದಿಂದಲೂ ಅಧ್ಯಯನ- ಅಧ್ಯಾಪನದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿ ಕೊಂಡು ಸುಮಾರು ೮೫ಕ್ಕೂ ಹೆಚ್ಚು ಕೃತಿಗಳನ್ನು ಸಾಹಿತ್ಯದ ವಿವಿಧ ಪ್ರಕಾರಗಳಾದ-ಕವಿತೆ, ಭಾಷಾಶಾಸ್ತ್ರ, ಜಾನಪದ, ಮಕ್ಕಳ ಸಾಹಿತ್ಯ, ಜೀವನಚರಿತ್ರೆ, ಅನುವಾದ, ಸಂಪಾದಿತ ಕೃತಿ ಮುಂತಾದುವುಗಳನ್ನು ರಚಿಸಿದ್ದಾರೆ. ಜೊತೆಗೆ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಶ್ರೇಷ್ಠ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇತ್ತೀಚೆಗಷ್ಟೇ ನಿವೃತ್ತರಾಗಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಇವರು ತಮ್ಮ ಶಿಷ್ಯವೃಂದದಲ್ಲಿ"ಪಿ.ಕೆ.ಆರ್" ಎಂದೇ ಪರಿಚಿತರು. ಜನಪದ ಸಾಹಿತ್ಯದಲ್ಲಿ ಅಗಾಧ ಸಾಹಿತ್ಯ ಕೃಷಿ ಮಾಡಿದ ಹಿರಿಮೆ ಇವರದು. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧಕರಾಗಿರುವಾಗಲೇ ೧೫೦೦ಪುಟಗಳ ಬೃಹತ್ಗಾತ್ರದ "ಮಲೆಯ ಮಹದೇಶ್ವರ ಜನಪದ ಮಹಾಕಾವ್ಯ"ವನ್ನು ವಕ್ತೃಗಳಿಂದ ಸಂಗ್ರಹಿಸಿ ಪ್ರಕಟಿಸಿ, ಈ ಮೇರುಕೃತಿಯ ಜನಪ್ರಿಯತೆಗೆ ಕಾರಣಕರ್ತೃವಾಗಿದ್ದಾರೆ. ಇತ್ತೀಚೆಗೆ ಪ್ರಕಟಗೊಂಡ ಇವರ ಮತ್ತೊಂದು ಜನಪದ ಮಹಾಕಾವ್ಯವೆಂದರೆ "ಜನಪದ ಮಹಾಭಾರತ". ಈ ಕೃತಿ ಜಾನಪದಲೋಕಕ್ಕೆ ಸಂದ ಅನನ್ಯ ಕೊಡುಗೆಯಾಗಿದೆ. ಇದರೊಂದಿಗೆ"ಜನಪದ ಶರಣ ಕಾವ್ಯಗಳು" ಎಂಬ ಬೃಹತ್ಕೃತಿ ಇವರ ಹೆಮ್ಮೆಯ ಸಾಧನೆಯಾಗಿದೆ. ಕನ್ನಡ ಜಾನಪದ ಕ್ಷೇತ್ರದಲ್ಲಿನ ಇವರ ಮಹಾನ್ ಸಾಧನೆಗಾಗಿ ಇವರ ಆತ್ಮೀಯ ಬಳಗದವರಾದ-ಸಾಹಿತ್ಯ ವಿದ್ವಾಂಸರು, ಸ್ನೇಹಿತರು, ಶಿಷ್ಯರು, ಅಭಿಮಾನಿಗಳೆಲ್ಲಾ ಒಟ್ಟುಗೂಡಿ ಪ್ರೀತಿಯಿಂದ "ಜಾನಪದ ಜೋಗಿ" ಎಂಬ ಅಸಾಧಾರಣ ಅಭಿನಂದನಾ ಗ್ರಂಥವನ್ನು ಇವರಿಗೆ ಸಮರ್ಪಿಸಿ ಇವರನ್ನು ಗೌರವಿಸಿದ್ದಾರೆ. ಜನಪದ ಗೀತೆಗಳ ಸೊನೆ/ಬನಿ ಕೆಡದಂತೆ ಹಾಡುವ ಉದ್ದೇಶದಿಂದ ಪಿಕೆಆರ್ ಅವರು "ಹೊನ್ನಾರು ಜನಪದ ಗಾಯನ ತಂಡ"ವನ್ನು ಕಟ್ಟಿಕೊಂಡು ಕಿನ್ನರ ಜೋಗಿಯಂತೆ ಊರೂರು ಅಲೆದು ಜನಪದ ಗೀತೆಗಳ 'ಮೂಲಮಟ್ಟು' ಉಳಿಸಲು ಶ್ರಮಿಸಿದ್ದಾರೆ. ಅಮೆರಿಕಾದ ಚಿಕಾಗೊ ನಗರದಲ್ಲಿ ಜರುಗಿದ "೫ನೇಅಕ್ಕ ಸಾಹಿತ್ಯ ಸಮ್ಮೇಳನಕ್ಕೆ" ವಿಶೇಷ ಆಹ್ವಾನಿತರಾಗಿ ತಮ್ಮ ಹೊನ್ನಾರು ಜನಪದ ಗಾಯನ ವೃಂದದೊಡನೆ ಭಾಗವಹಿಸಿ ಕನ್ನಡ ಜನಪದ ಗೀತೆಗಳ ವಿಶಿಷ್ಟ ಕಂಪನ್ನು ವಿಶ್ವವೇದಿಕೆಯಲ್ಲಿ ಪಸರಿಸಿ, ಜನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜನಪದ ಗೀತೆಗಳನ್ನು ಮೂಲಧಾಟಿಯಲ್ಲಿ ಉಳಿಸಿಕೊಳ್ಳುವ ದಿಶೆಯಲ್ಲಿ ಅವುಗಳನ್ನೆಲ್ಲ ಕ್ಯಾಸೆಟ್ಟುಗಳನ್ನಾಗಿ, ಸಿಡಿಗಳನ್ನಾಗಿ ಮಾರ್ಪಡಿಸಿದ್ದಾರೆ.[೨]
ಕ್ಯಾಸೆಟ್ಟು-ಸಿಡಿಗಳು
[ಬದಲಾಯಿಸಿ]- ಮಲೆಯ ಮಾದೇಶ್ವರ
- ಹಾಡೋ ಮುತ್ತಿನರಗಿಣಿ
- ಕೋಗಿಲಾಗಿ ಕೂಗುತೀಯಲ್ಲೂ
- ಶರಣು ಶರಣು ಮಾದೇಶ್ವರಗೆ
- ಎದ್ದು ಬಾರೋ ಮುದ್ದು ಭೈರುವ
- ನಕ್ಕರೆ ನಗಲೇಳು
- ಸೋಜುಗಾದ ಸೂಜಿಮಲ್ಲಿಗೆ
- ಸಿರಿ ಚುಂಚನಗಿರಿ
- ಕೋರಣ್ಯ ನೀಡಮ್ಮ ಕೋಡುಗಲ್ಲಯ್ಯಾಗೆ -ಮುಂತಾದುವು.
ಪ್ರಕಟಿತ ಕೃತಿಗಳು
[ಬದಲಾಯಿಸಿ]ಕವಿತಾ ಸಂಕಲನ
[ಬದಲಾಯಿಸಿ]- ಮಾನಸದೀಪ್ತಿ(೧೯೬೬)
- ಪ್ರತಿಬಿಂಬ(೧೯೬೮),
- ಸ್ವಾತಿಮುತ್ತುಗಳು,
- ನಾನಲ್ಲದ ನಾನು(೨೦೦೧).
ಭಾಷಾಶಾಸ್ತ್ರ
[ಬದಲಾಯಿಸಿ]- ಪದವಿವರಣ ಕೋಶ,
- ಪದಸಂಪದ
ಮಕ್ಕಳ ಸಾಹಿತ್ಯ
[ಬದಲಾಯಿಸಿ]- ಚಿನ್ನದ ತುಪ್ಪಳು(೧೯೯೨),
- ಅಭಿನವ ಕಾಳಿದಾಸ(೧೯೯೨),
- ವಿದ್ಯಾವಿಶಾರದ ಕಂತಿ(೧೯೯೩),
- ದಲಿತ ಭಾರತ(೧೯೯೨)
ಜಾನಪದ
[ಬದಲಾಯಿಸಿ]- ಬೆಟ್ಟದ ಚಾಮುಂಡಿ(೧೯೭೨),
- ಜನಪದ ರಾಮಾಯಣ(೧೯೭೩),
- ಜನಪದ ಮಹಾಕಾವ್ಯ ಮಲೆಯಮಾದೇಶ್ವರ-ಭಾಗ-೧/೨,
- ಜನಪದ ಮಹಾಭಾರತ (೨೦೦೪),
- ಜನಪದ ಬಸವ ಪುರಾಣ(೧೯೮೧),
- ಜನಪದ ವೀರಕಾವ್ಯ ಪಿರಿಯಾಪಟ್ಟಣದ ಕಾಳಗ(೧೯೯೦),
- ಜನಪದ ಜೋಕುಗಳು(೨೦೦೭),
- ಜನಪದ ಗಣಿತ ಪ್ರಪಂಚ(೧೯೯೯)
ಮುಂತಾದುವು.
ನಾಟಕ
[ಬದಲಾಯಿಸಿ]ಚಾಮುಂಡಿ ಸಿರಿ ಚಾಮುಂಡಿ
ಕಣಜದಲ್ಲಿ ಡಾ.ಪಿ.ಕೆ.ರಾಜಶೇಖರ್ ಬಗ್ಗೆ ಇದ್ದ ಮಾಹಿತಿ
[ಬದಲಾಯಿಸಿ]- ಜಾನಪದ ಸಂಶೋಧನೆ, ಗ್ರಂಥ ಸಂಪಾದನೆ, ವಿಮರ್ಶೆ – ವಿಶ್ಲೇಷಣೆಗಳ ಜೊತೆಗೆ ಜನಪದ ಗಾಯನದಲ್ಲಿ ತೊಡಗಿಸಿಕೊಂಡಿದ್ದು ಜಾನಪದ ಗಾಯಕ ರತ್ನ, ಜಾನಪದ ಜೋಗಿ ಮುಂತಾದ ಬಿರುದುಗಳಿಗೂ ಪಾತ್ರರಾಗಿರುವ ರಾಜಶೇಖರರವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಪಿರಿಯಾ ಪಟ್ಟಣದಲ್ಲಿ. ತಂದೆ ಕೆಂಪೇಗೌಡರು ಜನಪದ ವೈದ್ಯರಾಗಿದ್ದಲ್ಲದೆ ಲಕ್ಷ್ಮೀಶನ ಜೈಮಿನಿ ಭಾರತ, ದೇವಿಮಹಾತ್ಮೆ ಮುಂತಾದ ಕೃತಿಗಳನ್ನು ಓದಿಕೊಂಡಿದ್ದರು. ತಾಯಿ ಪುಟ್ಟಮ್ಮ ಸಂಪ್ರದಾಯದ ಹಾಡುಗಳ ಹಾಡುಗಾರ್ತಿಯಾಗಿದ್ದರೆ ಅಜ್ಜಿ ಸಣ್ಣಮ್ಮ ಜನಪದ ತ್ರಿಪದಿಗಳನ್ನು ಹಾಡುತ್ತಿದ್ದರು.[೩]
- ಹೀಗೆ ಜನಪದ ಸಾಹಿತ್ಯವು ವಂಶ ಪಾರಂಪರ್ಯವಾಗಿ ರಕ್ತದಲ್ಲಿ ಹರಿದು ಬಂದಿದ್ದು ಎಳೆಯ ವಯಸ್ಸಿನಲ್ಲಿಯೇ ಜಾನಪದದಲ್ಲಿಯೇ ಆಸಕ್ತಿ ಬೆಳೆಯಲು ಕಾರಣವಾಯಿತು. ಪ್ರೌಢಶಾಲೆಯವರೆಗೆ ಪಿರಿಯಾಪಟ್ಟಣದಲ್ಲಿ ಪಿಯುಸಿಗೆ ಸೇರಿದ್ದು ಬೆಂಗಳೂರಿನ ವಿಜಯಾ ಕಾಲೇಜು, ಬಿ.ಎ. ಪದವಿ ಪಡೆದದ್ದು ಮೈಸೂರಿನ ಮಹಾರಾಜಾ ಕಾಲೇಜು. ಬಿ.ಎ. ಪದವಿ ಪಡೆದ ನಂತರ ಹಾಸನ ಸೇಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಉಪಾಧ್ಯಾರಾಗಿ ಕೆಲಕಾಲ. ಓದಿನ ಹಂಬಲದಿಂದ ಪುನ: ಮೈಸೂರಿಗೆ ಬಂದು ಸೇರಿದ್ದು ಎಂ.ಎ. ಪದವಿಗಾಗಿ.
- ನಂತರ ಸಿ.ಪಿ.ಕೆ. ಯವರ ಮಾರ್ಗದರ್ಶನದಲ್ಲಿ ‘ದಕ್ಷಿಣ ಕರ್ನಾಟಕದ ಜನಪದ ಪುರಾಣಗಳು’ ಎಂಬ ವಿಷಯದ ಬಗ್ಗೆ ಪ್ರೌಢ ಪ್ರಬಂಧ ರಚಿಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದ ಡಾಕ್ಟರೇಟ್ ಪದವಿ. ಆನುವಂಶಿಕ ಗುಣದ ಜನಪದ ಸಂಸ್ಕೃತಿ, ಸಾಹಿತ್ಯದ ಪ್ರಭಾವದಿಂದ ಜಾನಪದ ಸಂಶೋಧನೆಯನ್ನು ಪದವಿಗಾಗಿ ಆಯ್ಕೆ ಮಾಡಿಕೊಳ್ಳದೆ ತಮ್ಮ ಜೀವನದ ಒಂದು ವಿಧಾನವಾಗಿ ಸ್ವೀಕರಿಸಿ ಸಾಧನೆ ಮಾಡಿದ್ದು ರಾಜಶೇಖರವರ ವಿಶಿಷ್ಟತೆಗಳಲ್ಲೊಂದು.
- ದಕ್ಷಿಣ ಕರ್ನಾಟಕದ ಜನಪದ ಪುರಾಣಗಳಿಗೆ ಸಂಬಂಧಿಸಿದಂತೆ ಅಧ್ಯಯನ ನಿರತರಾದ ಪಿ.ಕೆ. ಯವರು ಜನಪದ ಕಾವ್ಯದಲ್ಲಿ ಹಾಡುಗಳಂತೆ ಮಹಾಕಾವ್ಯವೂ ಇರುವುದನ್ನು ಸಂಶೋಧಿಸಿ ಜನಪದ ಪ್ರಣಯ ಕಾವ್ಯ ‘ಬೆಟ್ಟದ ಚಾಮುಂಡಿ’ (೧೯೭೨) ಎಂಬ ಮಹಾಕಾವ್ಯವನ್ನು ಮೊದಲ ಬಾರಿಗೆ ಪ್ರಕಟಿಸಿದರು. ಮತ್ತೊಂದು ಇವರ ಮೇರು ಕೃತಿಯೆಂದರೆ ‘ಮಲೆಯ ಮಾದೇಶ್ವರ’ ಮಹಾಕಾವ್ಯ ಫಿನ್ಲೆಂಡಿನ ‘ಕಲೇವಾಲ’.
- ಈ ಕಾವ್ಯಗಳೇ ಅತಿ ದೊಡ್ಡ ಕಾವ್ಯವೆಂದು ಪರಿಗಣಿಸಲ್ಪಟ್ಟಿದ್ದ ಸಂದರ್ಭದಲ್ಲಿ ಅದಕ್ಕಿಂತ ಮೂರು ಪಟ್ಟು ದೊಡ್ಡದಾದ ಮಹಾಕಾವ್ಯ ಮಾದೇಶ್ವರ ಮಹಾಕಾವ್ಯವನ್ನು ಸಂಪಾದಿಸಿ ಪ್ರಕಟಿಸಿ ಜಾನಪದ ಲೋಕದಲ್ಲಿ ದಾಖಲೆಯನ್ನೇ ನಿರ್ಮಿಸಿದರು. ಇದು ಒಂದು ಸಾವಿರದ ಎಪ್ಪತ್ತನಾಲ್ಕು ಪುಟಗಳ ಬೃಹತ್ ಕಾವ್ಯವಾಗಿದ್ದು ಎರಡು ಸಂಪುಟಗಳಲ್ಲಿ ಪ್ರಕಟಗೊಂಡಿದೆ. ಇದುವರೆಗಿನ ಪ್ರಕಟಿತ ಜಾನಪದ ಕೃತಿಗಳಲ್ಲಿ ಆಚಾರ್ಯ ಕೃತಿ ಎನಿಸಿದೆ.
- ೧೯೭೪ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡು ೧೯೯೯ರ ವರೆವಿಗೂ ಮಹಾರಾಜ ಕಾಲೇಜು, ಯುವರಾಜ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ೧೯೯೯ರಿಂದ ೨೦೦೬ರ ವರೆಗೆ ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
- ಮಲೆಯ ಮಾದೇಶ್ವರ ಮಹಾಕಾವ್ಯದ ನಂತರ ಇವರು ಸಂಪಾದಿಸಿದ ಇತರ ಮಹಾಕಾವ್ಯಗಳೆಂದರೆ ಜನಪದ ವೀರಕಾವ್ಯ, ಪಿರಿಯಾಪಟ್ಟಣದ ಕಾಳಗ, ಜನಪದ ರಾಮಾಯಣ, ಮಾಗಡಿ ಕೆಂಪೇಗೌಡ, ಜನಪದ ಬಸವ ಪುರಾಣ, ಕರಪಾಲ ಬಸವ ಪುರಾಣ, ಜನಪದ ಮಹಾಭಾರತ, ಪ್ರಾರ್ಥನ ಜೋಗಿಯ ಹಾಡು ಮುಂತಾದ ಜನಪದ ಮಹಾಕಾವ್ಯಗಳನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.
- ಸಾಂಸ್ಕೃತಿಕ ಮಹತ್ವವನ್ನು ಪಡೆದ ಕೃತಿ ಎಂದರೆ ಮೈಸೂರು ಅರಸರಿಗೂ ಪಿರಿಯಾಪಟ್ಟಣದ ಚಂಗಾಳ್ವದೊರೆ ವೀರರಾಜನಿಗೂ ನಡೆದ ಯುದ್ಧದ ವಿವರಗಳನ್ನೊಳಗೊಂಡ ಕೃತಿ ಪಿರಿಯಾ ಪಟ್ಟಣದ ಕಾಳಗ’ ವಾದರೆ, ವ್ಯಾಸ ಭಾರತಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ರೂಪಗೊಂಡಿರುವ ಮಹಾಕಾವ್ಯ ಜನಪದ ಮಹಾಭಾರತ, ಬೆಟ್ಟದ ಬೀಡು ಸಿದ್ಧಶೆಟ್ಟಿಯವರು ಹಾಡಿರುವ ಮಹತ್ ಕೃತಿ ಇದಾಗಿದ್ದು ೧೬೦ ಪರ್ವಗಳ ೪೩೦೦೦ ಪಾದಗಳ ಸುದೀರ್ಘ ಮಹಾಕಾವ್ಯವಾಗಿದೆ.
- ಜನಪದ ಸಾಹಿತ್ಯದಂತೆ ಜನಪದ ಗಣಿತ ವಿಜ್ಞಾನದಲ್ಲಿಯೂ ಆಸಕ್ತರಾಗಿದ್ದ ಪಿ.ಕೆ. ಯವರು ಪ್ರಕಟಿಸಿರುವ ಗಣಿತ ವಿಜ್ಞಾನ ಕೃತಿಗಳೆಂದರೆ ಆಯ್ದ ಜನಪದ ಲೆಕ್ಕಗಳು. ಜನಪದ ಗಣಿತ ಪ್ರಪಂಚ ಮತ್ತು ಜನಪದ ಚಮತ್ಕಾರ ಗಣಿತ ಪುಸ್ತಕಗಳು. ಜನಪದ ಚಮತ್ಕಾರ ಗಣಿತದಲ್ಲಿ ಅನಕ್ಷರಸ್ಥರಾದರೂ ಅವಿದ್ಯಾವಂತರಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ವಿದ್ಯೆ ಬಾರದ ಹಳ್ಳಿಗರು ಕೊಡುವ ಲೆಕ್ಕಗಳಿಗೆ ವಿದ್ಯಾವಂತರೂ ಉತ್ತರಿಸಲು ಶ್ರಮಪಡಬೇಕಾಗುವಂತಹುದು.
- ಜನಪದ ಗಣಿತ ಪ್ರಪಂಚದಲ್ಲಿ ಉದ್ದ, ಅಗಲ, ಎತ್ತರ, ಗಾತ್ರ ಇವುಗಳನ್ನು ಅಳೆಯಲು ಜನಪದದಲ್ಲಿ ಉಪಯೋಗಿಸುವ ವಿಶೇಷ ಮಾನದಂಡದ ಪ್ರಸ್ತಾಪವಿದೆ.ಜನಪದ ಮಹಾಕಾವ್ಯ, ಜನಪದ ಗಣಿತ ವಿಜ್ಞಾನದಂತೆಯೇ ಇತರ ಆಸಕ್ತ ಜನಪದ ಪ್ರಕಾರಗಳೆಂದರೆ ಕಥೆಗಳು. ಜನಪದ ಗಾದೆಯ ಪುಸ್ತಕಗಳನ್ನು ಸಂಪಾದಿಸಿದ್ದಾರೆ. ‘ಮಾತಿನರಗಿಣಿ’ ಕೃತಿಯಲ್ಲಿ ಹದಿನೈದು ಕಥೆಗಳನ್ನು ಸಂಪಾದಿಸಿದ್ದರೆ ‘ಪುರುಷನ ಪುಣ್ಯ ನಾರಿ ಭಾಗ್ಯ’ ಕಥಾಸಂಕಲನದಲ್ಲಿ ವಿಶಿಷ್ಟ ಜಾನಪದ ಕಥೆಗಳನ್ನು ಸಂಪಾದಿಸಿ ಕೊಟ್ಟಿದ್ದಾರೆ.
- ಜನಪದ ಗಾದೆಗಳಿಗೆ ಸಂಬಂಧಿಸಿದಂತೆ ಎರಡು ಕೃತಿಗಳನ್ನು ಸಂಪಾದಿಸಿ ಕೊಟ್ಟಿದ್ದು ಅವು ‘ಮುತ್ತಿನ ಕಣಜ’ ಹಾಗೂ ‘ಭೂಮಿ ತೂಕದ ಮಾತು’. ಮುತ್ತಿನ ಕಣಜದಲ್ಲಿ ಒಟ್ಟು ಸಾವಿರದ ಇನ್ಣೂರ ಮೂವತ್ತು ಗಾದೆಗಳಿದ್ದರ, ಭೂಮಿ ತೂಕದ ಮಾತು ಪುಸ್ತಕದಲ್ಲಿ ಸಾವಿರದ ಐನೂರು ಗಾದೆಗಳಿವೆ. ಭೂಮಿ ತೂಕದ ಮಾತುವಿನಲ್ಲಿ ಸಾಂಪ್ರದಾಯಿಕ ಮಡಿವಂತಿಕೆಯ ಕಾರಣದಿಂದ ಇದುವರೆವಿಗೂ ಸೇರ್ಪಡೆಯಾಗದ ಹಲವಾರು ಗಾದೆಗಳು ಸೇರ್ಪಡೆಯಾಗಿವೆ.
- ವಿನೋದ ಪ್ರಸಂಗಗಳನ್ನು ಒಳಗೊಂಡಿರುವ ಕೃತಿ ‘ಜಾನಪದ ಜೋಕುಗಳು’. ಇದರಲ್ಲಿ ಪ್ರಾಸ ಪದ್ಯಗಳು, ಗೀತೆಗಳು, ಸಂಭಾಷಣೆಗಳು, ಗಾದೆ, ಒಗಟು, ಬೈಗಳ ಎಲ್ಲ ಹಾಸ್ಯ ಪ್ರಸಂಗಗಳೂ ದಾಖಲೆಗೊಂಡಿವೆ. ಜೊತೊಗೆ ಮಕ್ಕಳಿಗಾಗಿ ಅಪೂರ್ವರತ್ನ, ಒಳ್ಳೆಯ ಮಾತಿಗೆ ಕಣ್ಣೀರ ಬಹುಮಾನ, ಚಿನ್ನದ ತುಪ್ಪಳು, ತಿಳಿದು ಮಾಡಿದ್ದು, ತಿಳಿಯದೆ ಮಾಡಿದ್ದು, ದುಡಿದವನ ದುಡ್ಡಿನ ಬೆಲೆ, ನಾನು ಸುಳ್ಳು ಹೇಳುವುದಿಲ್ಲ ಮುಂತಾದವುಗಳು.[೪]
- ‘ನಾನಲ್ಲ ನಾನು’ (ಕವನ ಸಂಕಲನ), ‘ಪದ ವಿವರಣ ಕೋಶ’, ‘ಪದ ಸಂಪದ’ (ಸಂಕೀರ್ಣ ಕೃತಿಗಳು) ಇತರ ಕೃತಿಗಳು. ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿರುವ ಪಿ.ಕೆ. ಯವರಿಗೆ ಮಲೆಯ ಮಾದೇಶ್ವರ ಮಹಾಕಾವ್ಯಕ್ಕೆ ೧೯೭೩ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಿರಿಯಾ ಪಟ್ಟಣದ ಕಾಳಗ ಕೃತಿಗೆ ೧೯೯೦ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ.
- ೧೯೯೮ರಲ್ಲಿ ಜಾನಪದ ತಜ್ಞ ಪ್ರಶಸ್ತಿ, ೨೦೦೫ರಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ೨೦೦೮ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ರಜತೋತ್ಸವ ಪ್ರಶಸ್ತಿ, ೨೦೧೦ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿ ವಿಶೇಷ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ದೊರೆತಿವೆ. ಲೇಖಕರು: ವೈ.ಎನ್. ಗುಂಡೂರಾವ್[೫]
ಪ್ರಶಸ್ತಿ /ಪುರಸ್ಕಾರಗಳು
[ಬದಲಾಯಿಸಿ]- 'ಮಲೆಯ ಮಾದೇಶ್ವರ ಜನಪದ ಮಹಾಕಾವ್ಯ'ಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೭೩)
- 'ಪಿರಿಯಾಪಟ್ಟಣದ ಕಾಳಗ'- ಜನಪದ ವೀರಕಾವ್ಯ ಕ್ಕೆ - ಕರ್ನಾಟಕ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ (೧೯೯೦)
- ಕರ್ನಾಟಕ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ 'ಜಾನಪದ ತಜ್ಞ' ಪ್ರಶಸ್ತಿ (೧೯೯೮)
- ಕರ್ನಾಟಕ ರಾಜ್ಯ ಸರ್ಕಾರದ 'ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೨೦೦೫)
- 'ಜನಪದ ಮಹಾಭಾರತ' ರೂಪಕಕ್ಕೆ ಪ್ರಸಾರ ಭಾರತಿ ಪ್ರಶಸ್ತಿ(೨೦೦೬)
- ಕರ್ನಾಟಕ ರಾಜ್ಯ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ 'ರಜತ ಮಹೋತ್ಸವ'ಪ್ರಶಸ್ತಿ (೨೦೦೮)
- ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ(೨೦೦೯)
- ಮೈಸೂರು ಆಫೀಸರ್ ಕ್ಲಬ್ನ 'ಕನ್ನಡ ರಾಜ್ಯೋತ್ಸವ ಪ್ರಶಸ್ತಿ(೨೦೦೫)
- ಜಾನಪದ ಲೋಕೋತ್ಸವ ಪ್ರಶಸ್ತಿ-ನಾಡೋಜ ಹೆಚ್.ಎಲ್.ನಾಗೇಗೌಡರ ಜಾನಪದ ಲೋಕ, ಬೆಂಗಳೂರು(೨೦೧೦)
- ಜನಪದ ಶರಣ ಕಾವ್ಯಗಳಿಗೆ 'ಶ್ರೀ ಶಿವರಾತ್ರೀಶ್ವರ'ಪ್ರಶಸ್ತಿ(೨೦೧೧)ಮುಂತಾದುವು.[೬]
ಇವನ್ನೂ ನೋಡಿ
[ಬದಲಾಯಿಸಿ]ಆಕರ ಗ್ರಂಥ
[ಬದಲಾಯಿಸಿ]೧.ಜಾನಪದ ಜೋಗಿ- ಪಿಕೆಆರ್ ಅವರ ಅಭಿನಂದನ ಗ್ರಂಥ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಕಣಜ, ಡಾ.ಪಿ.ಕೆ.ರಾಜಶೇಖರ , ೧೩.೧೦.೧೯೪೬ Archived 2014-02-09 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ html ಕನ್ನಡ ಜನಪದ.ಬ್ಲಾಗ್ ಸ್ಪಾಟ್.ಕಾಂ
- ↑ http://www.newindianexpress.com/states/karnataka/article1315597.ece?service=print
- ↑ "ಆರ್ಕೈವ್ ನಕಲು". Archived from the original on 2015-07-03. Retrieved 2015-05-27.
- ↑ http://www.mangaloretoday.com/main/Alva-rsquo-s-Nudisiri-Award-winners-announced.html
- ↑ https://www.youtube.com/watch?v=Q76wrkZLMq4
- ↑ https://kannada.yahoo.com/%E0%B2%9A-%E0%B2%AE%E0%B2%9A-%E0%B2%B2-%E0%B2%B5-%E0%B2%A8-%E0%B2%9F%E0%B2%95%E0%B2%A6%E0%B2%B2-%E0%B2%B2-%E0%B2%9A-094702466. html 'ಚಾಮುಂಡಿ ಸಿರಿಚಾಮುಂಡಿ'