ವಿಷಯಕ್ಕೆ ಹೋಗು

ಡಾಸೋ ಡಾಸೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾಸೋ, ಡಾಸೀ 1479-1542. ಹದಿನಾರನೆಯ ಶತಮಾನದ ಇಟಲಿಯ ಚಿತ್ರಕಾರ. ಈತನ ನಿಜನಾಮ ಜೋವಾನೀ ಡ ಲುಟೇರ.

ಇವನು ಫೆರ್ರಾರಾಪಂಥ ಎಂದು ಕರೆಯಲಾದ ಕಲಾಸಂಪ್ರದಾಯದ ಕಟ್ಟಕಡೆಯ ಪ್ರತಿನಿಧಿ. ಇವನ ಬಾಲ್ಯ ಮತ್ತು ಶಿಕ್ಷಣಗಳ ಬಗೆಗೆ ಹೆಚ್ಚಿನ ಮಾಹಿತಿಗಳು ದೊರೆತಿಲ್ಲ. ಈತನ ಶೈಲಿಯನ್ನು ಗಮನಿಸಿ ಕೆಲವು ಕಲಾಭಿಜ್ಞರು ಈತ ಜೋರ್ಜೋನೇ ಮತ್ತು ಟಿಷನ್‍ರ ಕಾಲದ ವೆನಿಸ್ ನಗರದವನಿರಬೇಕು ಎಂದು ನಿರ್ಧರಿಸಿದ್ದಾರೆ. ಪ್ರಸಿದ್ಧ ಪುರಾತನ ಕಲಾವಿರ್ಮಶಕ ವಸಾರಿಯ ಅಭಿಪ್ರಾಯದಂತೆ ಇವನು ಕಾಸ್ಟಾ ಎಂಬುವನ ಬಳಿ ಶಿಕ್ಷಣವನ್ನು ಪಡೆದ. ರೋಮ್ ನಗರಕ್ಕೆ ಭೇಟಿ ಇತ್ತನೆಂದು ಸಹ ಊಹಿಸಲಾಗಿದೆ. ಇವನ ಪ್ರಪ್ರಥಮ ಕೃತಿಯಾದ ನಿಂಫ್ ಅಂಡ್ ಫಾನ್ ಎಂಬ ಚಿತ್ರದಲ್ಲಿ ಪ್ರಶಾಂತವೂ ಕಾವ್ಯಾತ್ಮವೂ ಆದ ವರ್ಣವಿನ್ಯಾಸವಿದೆ. ಆದರೆ ಇದರ ನಕ್ಷಾರೇಖನ ದೋಷಪೂರಿತವಾಗಿದೆ. ಕ್ರಿ.ಶ.ಸುಮಾರು 1512ರಲ್ಲಿ ಇವನು ವೆನಿಸ್ಸನ್ನು ಬಿಟ್ಟು ತನ್ನ ಅಣ್ಣನಾದ ಪ್ರಸಿದ್ಧ ಕಲಾವಿದ ಬ್ಯಾಟಿಸ್ಟಾನ ಬಳಿ ಕೆಲಸಕ್ಕೆ ಸೇರಿದನಲ್ಲದೆ ಡ್ಯೂಕ್ ಆಫ್ ಮಾಂಟುವ ಎಂಬ ಶ್ರೀಮಂತನಿಗಾಗಿ ಬ್ಯಾಟಿಸ್ಟಾ ಕೈಗೊಂಡಿದ್ದ ವರ್ಣಾಲಂಕಾರ ಉದ್ಯೋಗದಲ್ಲಿ ಸಹಭಾಗಿಯಾದ. ಬಹುಶಃ ಈ ಸುಮಾರಿನಲ್ಲಿ ಈತ ಪ್ರಸಿದ್ಧ ಚಿತ್ರಕಾರ ಕರೆಜೋವಿನ ಪ್ರಭಾವಕ್ಕೆ ಒಳಗಾಗಿರಬೇಕು. 1517ರಿಂದಾಚೆಗೆ ಡಾಸೋ-ಬ್ಯಾಟಿಸ್ಟಾ ಸೋದರರಿಬ್ಬರೂ ಫೆರ್ರಾರಾ ಡ್ಯೂಕನ ಆಶ್ರಯವನ್ನು ಪಡೆದು ಜೀವಮಾನವನ್ನೆಲ್ಲ ಅವನ ಸೇವೆಯಲ್ಲೇ ಕಳೆದರು. ಡ್ಯೂಕನ ಆಸ್ಥಾನದಲ್ಲಿ ಅವರಿಬ್ಬರೂ ಆರ್ಯೋಸ್ಟೋವಿನ ಜೊತೆ ಸೇರಿ ರಾಜನ ಮಾಂಡಲಿಕರ ಸಲುವಾಗಿ ವಿವಿಧ ರೀತಿಯ ಮನೋರಂಜನೆಗಳನ್ನು ಏರ್ಪಡಿಸಿದರು. ಅವನ ಸರ್ಸೀ ಎನ್ನುವ ಚಿತ್ರದ ವಸ್ತು ಆರ್ಯೋಸ್ಟೋವಿನ ಆರ್ಲಾಂಡೋ ಫ್ಯೂರಿಯಾಸೋ ಕಾವ್ಯದಿಂದ ಎತ್ತಿಕೊಂಡದ್ದು ಎನ್ನುವುದುಂಟು. ಆ ಕಾಲದಲ್ಲಿ ಬರೆದ ಡಾಸೋನ ಚಿತ್ರಗಳಲ್ಲಿ ಜೋರ್ಜೋನೇಯ ಪ್ರಭಾವ ಅಚ್ಚಳಿಯದೆ ಮೂಡಿದೆ. ಅರಳಿದ ತುಟಿಗಳ್ಳುಳ್ಳ ಕಾವ್ಯದೇವತೆಯ (ಮ್ಯೂಸ್) ಆಕೃತಿ ಮತ್ತು ವಿಚಿತ್ರ ಭೂದೃಶ್ಯಗಳು- ಇವನ ಚಿತ್ರಗಳಲ್ಲಿ ಮತ್ತೆ ಮತ್ತೆ ಬರುತ್ತವೆ. ಝಗಝಗಿಸುವ ಬೆಳಕನ್ನು ಚೆಲ್ಲಿ ಕಾವ್ಯಮಯವೂ ನಿಗೂಢವೂ ಆದ ವಾತಾವರಣದ ಪರಿಣಾಮಗಳನ್ನು ಸೃಷ್ಟಿಸುವುದರಲ್ಲಿ ಇವನನ್ನು ಮೀರಿಸಿದವರಿಲ್ಲ. ಫೆರ್ರಾರಾ ಪಂಥದವರ ಸಮೃದ್ಧ ರಮ್ಯ ಶೈಲಿಗೆ ಈತನ ಚಿತ್ರಗಳು ಉತ್ತಮ ಉದಾಹರಣೆಗಳಾಗಿವೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: