ವಿಷಯಕ್ಕೆ ಹೋಗು

ಡಾಂಗೋಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಡಾಂಗೋಲ -ಸೂಡಾನ್ ಗಣರಾಜ್ಯದ ಉತ್ತರ ಪ್ರಾಂತ್ಯದಲ್ಲಿರುವ ಒಂದು ಉಪಜಿಲ್ಲೆ; ಅದೇ ಹೆಸರಿನ ಒಂದು ಪಟ್ಟಣ. ನೈಲ್ ನದಿಯ ಎರಡೂ ಬದಿಗಳಲ್ಲಿ ಹಬ್ಬಿರುವ ಈ ಉಪಜಿಲ್ಲೆ ಮರಾವೇ-ಡಾಂಗೋಲ ಜಿಲ್ಲೆಯ ಉತ್ತರ ಭಾಗ. ಇದರ ಹೆಚ್ಚು ಭಾಗ ಮರುಭೂಮಿಯಾಗಿದೆ. ಇದರ ವಿಸ್ತೀರ್ಣ 27,520 ಚ. ಮೈ.

ಡಾಂಗೋಲ ಉಪಜಿಲ್ಲೆ[ಬದಲಾಯಿಸಿ]

ಇತಿಹಾಸ[ಬದಲಾಯಿಸಿ]

ಡಾಂಗೋಲ ಒಂದು ಕಾಲಕ್ಕೆ ಈತಿಯೋಪಿಯದ ಭಾಗವಾಗಿತ್ತು ಸು. 6ನೆಯ ಶತಮಾನದಲ್ಲಿ ಆದಿವಾಸಿಗಳಾದ ನೊಬಾಟ ಜನ ಕ್ರೈಸ್ತಮತಾವಲಂಬಿಗಳಾಗಿ ಪರಿವರ್ತನೆಯಾದ ಅನಂತರ, ಅವರ ನಾಯಕನಾದ ಸಿಲ್ಕೊ ಎಂಬವನು ಡಾಂಗೋ ಅಥವಾ ಮಕುರ ಎಂಬ ರಾಜ್ಯವನ್ನು ಸ್ಥಾಪಿಸಿದ. ಇದು ಅನೇಕ ಆಕ್ರಮಣಕಾರರ ಹಾವಳಿಗೆ ತುತ್ತಾದರೂ, ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಂಡು. 12ನೆಯ ಶತಮಾನದಲ್ಲಿ ಪರಮಾವಧಿ ಉಚ್ಛ್ರಾಯ ಸ್ಥಿತಿ ಮುಟ್ಟಿತ್ತು. ಆಗಿನ ರಾಜಧಾನಿಯಾದ ಹಳೆ ಡಾಂಗೋಲ ಪಟ್ಟಣ ಸಂಪದ್ಭರಿತವಾಗಿ ಬೆಳೆಯಿತು. ಅನೇಕ ಚರ್ಚುಗಳೂ ಸ್ಮಾರಕಗಳೂ ನಿರ್ಮಿಸಲ್ಪಟ್ಟುವು. ಸು. 1366ರಲ್ಲಿ ಇದು ಈಜಿಪ್ಟಿನವರ ವಶವಾಯಿತು. ತದನಂತರ ಮುಸ್ಲಿಂ ಮತ ಹೆಚ್ಚು ಪ್ರಚುರವಾಯಿತು. ಅನಂತರವೂ ಇದು ಪದೇ ಪದೇ ಆಕ್ರಮಣಕ್ಕೆ ಒಳಗಾಗುತ್ತಲೇ ಇತ್ತು. ಆದರೆ 1820ರಲ್ಲಿ ಈಜಿಪ್ಟಿನವರು ಇಲ್ಲಿಯ ಸ್ಥಳೀಯ ಮುಸ್ಲಿಮರ ಆಳ್ವಿಕೆಯನ್ನು ಕೊನೆಗೊಳಿಸಿ ಇದನ್ನು ಈಜಿಪ್ಟಿಗೆ ಸೇರಿಸಿಕೊಂಡರು. ಸೂಡಾನಿನ ಮೇಲೆ ಬ್ರಿಟಿಷರು ಆಕ್ರಮಣ ನಡೆಸಿ, ಡಾಂಗೋಲವೂ ಸೇರಿದ ಸೂಡಾನಿನ ಭಾಗವನ್ನು ವಶಪಡಿಸಿಕೊಂಡರು. 1885ರಲ್ಲಿ ಸೂಡಾನಿನಲ್ಲಿ ಮಹಮದ್ ಅಹಮದ್ ಎಂಬವನು ದಂಗೆ ಎದ್ದಾಗ ಬ್ರಿಟಿಷರು ಡಾಂಗೋಲವನ್ನು ತೆರವು ಮಾಡಿದ್ದು, ಅನಂತರ 1896ರಲ್ಲಿ ಮತ್ತೆ ಆಕ್ರಮಿಸಿಕೊಂಡರು. 1936ರ ವರೆಗೂ ಇದು ಆಂಗ್ಲೊ-ಈಜಿಪ್ಟಿಯನ್ ಸೂಡಾನಿನ ಒಂದು ಪ್ರಾಂತ್ಯವಾಗಿತ್ತು. ಅನಂತರ ಇದು ಉತ್ತರ ಪ್ರಾಂತ್ಯದ ಒಂದು ಜಿಲ್ಲೆಯಾಯಿತು. ಸೂಡಾನ್ ಗಣ್ಯರಾಜ್ಯದಲ್ಲಿ ಈಗ ಇದು ಒಂದು ಉಪಜಿಲ್ಲೆಯಾಗಿದೆ.

ಭೌಗೋಳಿಕ ಮಾಹಿತಿ[ಬದಲಾಯಿಸಿ]

ಡಾಂಗೋಲದ ಪೂರ್ವ ಭಾಗ ವಿನಾ ಉಳಿದೆಲ್ಲ ಭಾಗ ಮರುಭೂಮಿ. ಇಲ್ಲಿಯದು ಖಂಡೀಯ ಉಷ್ಣಮರುಭೂಮಿಯ ಶುಷ್ಕ ವಾಯುಗುಣ. ಇಲ್ಲಿ ಮಳೆ ಕಡಿಮೆ; ಉಷ್ಣತೆ ಅಧಿಕ. ಅಲ್ಲಲ್ಲಿ ಕೆಲವು ಕಡೆ ಹೆಚ್ಚು ಶುಷ್ಕತೆಯನ್ನು ಸಹಿಸುವ ಸಸ್ಯವರ್ಗವಿದೆ. ಅಲೆಮಾರಿ ಆದಿವಾಸಿಗಳು ತಮ್ಮ ಜಾನುವಾರುಗಳನ್ನು ಮೇಯಿಸಲು ಹುಲ್ಲು ಮತ್ತು ಸೌದೆಗಾಗಿ ಇಲ್ಲಿಯ ಮರಗಳನ್ನು ಕಡಿದಿರುವುದರಿಂದ ಇಲ್ಲಿಯ ನೈಸರ್ಗಿಕ ಸಸ್ಯವರ್ಗ ಬಹುವಾಗಿ ಕ್ಷೀಣಿಸಿದೆ. ನೈಲ್ ನದಿಗೆ ಸಮೀಪದಲ್ಲಿ ಸಸ್ಯಗಳು ದಟ್ಟವಾಗಿವೆ. ಖರ್ಜೂರದ ಮರಗಳು ಸಾಮಾನ್ಯ. ಡೂಮ್ ಪಾಮ್ ಮರಗಳೂ (ಒಂದು ಬಗೆಯ ತಾಳೆ) ವಿಶೇಷವಾಗಿ ಬೆಳೆಯುತ್ತವೆ.

ಕೃಷಿ ಮತ್ತು ಮಾರುಕಟ್ಟೆ[ಬದಲಾಯಿಸಿ]

ಡಾಂಗೋಲದ ನದೀಕಣಿವೆ ಮಾತ್ರ ಹೆಚ್ಚು ಫಲವತ್ತಾಗಿದೆ. ಅದು ಕೇವಲ ಕೆಲವೇ ಅಡಿಗಳಿಂದ ಹಿಡಿದು 2-3 ಮೈ. ವರೆಗೆ ಅಗಲವಾಗಿದೆ. ಮೆಕ್ಕಲು ಮಣ್ಣಿನ ಈ ಪ್ರದೇಶ ವಿಶೇಷವಾಗಿ ಕೃಷಿಗೆ ಒಳಪಟ್ಟಿದೆ. ಡಾಂಗೋಲದ ಮುಖ್ಯ ಬೆಳೆಗಳು ಗೋದಿ, ಕಡಲೆ, ಹುರುಳಿ, ತರಕಾರಿ. ಖರ್ಜೂರ ಮತ್ತು ನಿಂಬೆ ಜಾತಿಯ ಹಣ್ಣುಗಳು ಹಣಬೆಳೆಗಳು.

ಡಾಂಗೋಲದ ಪ್ರಮುಖ ಮಾರುಕಟ್ಟೆ ಕೇಂದ್ರಗಳು ಅರ್ಗೋ, ಡಾಂಗಲ ಮತ್ತು ಕೆರ್ಮ.

ಸಾರಿಗೆ ಸಂಪರ್ಕ[ಬದಲಾಯಿಸಿ]

ಮರಾವೇ ಉಪಜಿಲ್ಲೆಗೂ ಡಾಂಗೋಲದ ಕೆರ್ಮಕ್ಕೂ ನಡುವೆ ನೈಲ್ ನದಿಯಲ್ಲಿ ಹಡಗುಗಳು ಓಡಾಡುತ್ತವೆ. ಮೋಟಾರ್ ಸಾರಿಗೆಯೂ ಬೆಳೆದಿದೆ. ಡಾಂಗೋಲದಲ್ಲಿರುವ ಚಿಕ್ಕ ವಿಮಾನ ನಿಲ್ದಾಣ ಅಪರೂಪವಾಗಿ ಉಪಯೋಗಿಸಲ್ಪಡುತ್ತದೆ.

ಡಾಂಗೋಲದ ಜನಸಂಖ್ಯೆ 1,52,000. ಅಲ್ಲಿಯ ಆದಿವಾಸಿಗಳಾದ ಡನಗ್ಲಾಗಳೇ ಹೆಚ್ಚು ಸಂಖ್ಯೆಯಲ್ಲಿದ್ದಾರೆ. ಇವರಿಂದಲೇ ಈ ಉಪಜಿಲ್ಲೆಗೆ ಡಾಂಗೋಲ ಎಂಬ ಹೆಸರು ಬಂದಿದೆ. ಅಲ್ಲಿ ಕೆಲವು ಅರಬರೂ ಈಜಿಪ್ಟಿನವರೂ ಇದ್ದಾರೆ. ನ್ಯೂಬಿಯನ್ ವಂಶಸ್ಥರಿಂದ ಬಂದ ಅನೇಕ ಸಂಸ್ಕøತಿಲಕ್ಷಣಗಳು ಇವರಲ್ಲಿ ಇನ್ನೂ ಉಳಿದು ಬಂದಿವೆ.

ಡಾಂಗೋಲ ಪಟ್ಟಣ[ಬದಲಾಯಿಸಿ]

ಡಾಂಗೋಲ ಉಪಜಿಲ್ಲೆಯಲ್ಲಿ ಡಾಂಗೋಲ ಒಂದು ಪ್ರಮುಖ ಪಟ್ಟಣ; ಹಿಂದಿನ ನ್ಯೂಬಿಯದ ರಾಜಧಾನಿ. ಮಣ್ಣಿನ ಮನೆಗಳಿಂದ ಕೂಡಿದ ಮಾರುಕಟ್ಟೆ ಕೇಂದ್ರವಾದ ಈ ಸಣ್ಣ ಪಟ್ಟಣ ನೈಲ್ ನದಿಯ ಎಡದಡದ ಮೇಲೆ, ಖಾರ್ಟೂಮ್‍ಗೆ ಸು. 836 ಮೈ. ದೂರದಲ್ಲಿದೆ. ಹೊಸ ಡಾಂಗೋಲ ಪಟ್ಟಣವನ್ನು ಸು. 1812ರಲ್ಲಿ ಈಜಿಪ್ಟಿನಿಂದ ನ್ಯೂಬಿಯಕ್ಕೆ ಓಡಿಬಂದ ಮಾಮಲೂಕರು ನಿರ್ಮಿಸಿದರು. ಆಂಗ್ಲೋ-ಈಜಿಪ್ಟಿಯನ್ ಆಡಳಿತದ ಕಾಲದಲ್ಲಿ ಇದು ಪ್ರಾಂತ್ಯದ ಕೇಂದ್ರವಾಗಿತ್ತು. ಅನಂತರ ಜಿಲ್ಲಾ ಕೇಂದ್ರವಾಯಿತು. ಅನಂತರ ಈ ಸ್ಥಾನವನ್ನೂ ಕಳೆದುಕೊಂಡು, ಸ್ಥಳೀಯ ಮಾರುಕಟ್ಟೆ ಕೇಂದ್ರವಾಗಿ ಉಳಿಯಿತು. ಕ್ರೈಸ್ತರ ಅಧಿಪತ್ಯದ ಕಾಲದಲ್ಲಿ ಡಾಂಗೋಲ ಒಂದು ದೊಡ್ಡ ಪಟ್ಟಣವಾಗಿತ್ತು. ಈಗ ಅದು ಸಂಪೂರ್ಣ ನಾಶವಾಗಿದೆ. 14ನೆಯ ಶತಮಾನದಲ್ಲಿ ಕಟ್ಟಿದ ದೊಡ್ಡ ಚರ್ಚ್ ಮಸೀದಿಯಾಗಿ ಮಾರ್ಪಾಟಾಯಿತು. ಡಾಂಗೋಲ ಪಟ್ಟಣದ ಜನಸಂಕೆಯ 4,970. (1975).


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಡಾಂಗೋಲ&oldid=1174895" ಇಂದ ಪಡೆಯಲ್ಪಟ್ಟಿದೆ