ಟೋರ್ಕ್ವಾಟೊ ಟಾಸ್ಸೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೋರ್ಕ್ವಾಟೊ ಟಾಸ್ಸೊ (1544-1595). ಇಟಲಿಯ, ರೆನಸಾನ್ಸ್ ಉತ್ತರಾರ್ಧಕಾಲದ ಪ್ರಸಿದ್ಧ ಕವಿ.

ಬದುಕು ಮತ್ತು ಕಾವ್ಯಕೃಷಿ[ಬದಲಾಯಿಸಿ]

ಹುಟ್ಟಿದ್ದು ಸೊರೆಂಟೊನಲ್ಲಿ ತಂದೆ ಬರ್ನಾರ್ಡೊ ಸಹ ಪ್ರಸಿದ್ಧ ಕವಿಯಾಗಿದ್ದ. ಟೋರ್‍ಕ್ವಾಟೊ ಚಿಕ್ಕ ವಯಸ್ಸಿನಲ್ಲೆ ಜೀವನದ ಕಹಿಯನ್ನು ಅನುಭವಿಸಿದ. ತನ್ನ ಮಗು ಪಡಬೇಕಾಗಿ ಬಂದ ಬವಣೆಗಳನ್ನೆಲ್ಲ ಬಹು ನೋವಿನಿಂದ ಬರ್ನಾರ್ಡೊ ತನ್ನ ಕೃತಿಯಲ್ಲಿ ಹೇಳಿಕೊಂಡಿದ್ದಾನೆ. 1552ರಲ್ಲಿ ನೇಪಲ್ಸಿನಿಂದ ಗಡೀಪಾರಾದ ಈತನ ತಂದೆ-ತಾಯಿಗಳ ಜೊತೆಯಲ್ಲಿ ಊರೂರು ಅಲೆದು ದೇಶಾಂತರವಾಸದ ಕಷ್ಟಗಳನ್ನು ಅನುಭವಿಸಿದ. ಏತನ್ಮಧ್ಯೆ ರೋಮಿನಲ್ಲಿ ತಾಯಿಯನ್ನು ಕಳೆದುಕೊಂಡ. ಕಡೆಗೊಮ್ಮೆ 1560ರಲ್ಲಿ ಈತನ ತಂದೆ ವೆನಿಸ್‍ನಲ್ಲಿ ನೆಲಸಿದ. ರೋಮ್ ಮತ್ತು ವೆನಿಸ್ ನಗರಗಳಲ್ಲಿ ವಿದ್ಯಾಭ್ಯಾಸ ಮುಗಿಸಿದ ಈತನನ್ನು ಪಾಡೊವಾ ನಗರಕ್ಕೆ ಕಳಿಸಲಾಯಿತು. ಕವಿಯಾಗಿ ಯಾಚಿಸುವ ತನ್ನ ವೃತ್ತಿಯನ್ನು ಮಗ ಅವಲಂಬಿಸದೆ ಕಾನೂನು ಓದಿ ದೊಡ್ಡ ನ್ಯಾಯವಾದಿಯಾಗಲಿ ಎಂಬುದು ತಂದೆಯ ಮಹದಾಸೆ. ಆದರೆ ಕಾನೂನುಶಾಸ್ತ್ರದಲ್ಲಿ ಸ್ವಲ್ಪವೂ ಆಸಕ್ತಿ ಇರದ ಈತ ತನಗೆ ಪ್ರಿಯವಾದ ಸಾಹಿತ್ಯಾಭ್ಯಾಸವನ್ನೇ ಮುಂದುವರಿಸಿದ. ಹದಿನೆಂಟರ ಎಳೆಹರಯದಲ್ಲೇ ಈತನ ಕಾವ್ಯ ಪ್ರತಿಭೆ ಅರಳಿತು. ವಯೋಧರ್ವಕ್ಕೆ ಅನುಗುಣವಾಗಿ ಹಲವಾರು ಪ್ರೇಮಗೀತೆಗಳನ್ನು ರಚಿಸಿದ. ಲೂಕ್ರೀಸಿóಯಾ ಬೆನ್‍ಡಿಡಿಯೊ ಮತ್ತು ಲಾರಾ ಪೆಪೇರಾರಾ ಎಂಬ ಈರ್ವರು ಚೆಲುವೆಯರು ಈತನ ಈ ಪ್ರಣಯಗೀತೆಗಳ ಸ್ಫೂರ್ತಿಯಾಗಿದ್ದರು. 1562ರಲ್ಲಿ ಈತನ ಪ್ರಥಮ ಮಹಾಕಾವ್ಯ ರಿನಾಲ್ಡೊ ಎಂಬ ರಮ್ಯ ಕಥಾನಕ ಪ್ರಕಟವಾಯಿತು. ಕಾರ್ಡಿನಲ್ ಲೂಯಿಗಡಿ ಎಸ್ಟ್ ಎಂಬ ಮಹಾಶಯನಿಗೆ ಕಾವ್ಯವನ್ನು ಅರ್ಪಣೆ ಮಾಡಿದ್ದ. ಈ ಮಹಾಶಯನೇ ಮುಂದೆ ಕವಿಗೆ ನಿರಂತರ ಸಹಾಯ ಪ್ರೋತ್ಸಾಹಗಳನ್ನು ಕೊಡುವ ಪೋಷಕನಾದ. ರಿನಾಲ್ಡೊ ಮಾರ್ಗ ಶೈಲಿಯ ಪ್ರಥಮ ಪ್ರಯತ್ನವಾದರೂ ಕವಿಯ ಅಸಾಧಾರಣ ಶಕ್ತಿಯನ್ನು ಅದರಲ್ಲಿ ಗುರುತಿಸಬಹುದು. ವರ್ಜಿಲ್‍ನ ಮಹಾಕಾವ್ಯದ ಪದ್ಧತಿಯನ್ನೇ ಈತ ಇದರಲ್ಲಿ ಅನುಸರಿಸಿದ್ದ. 1572ರಲ್ಲಿ ಫೆರಾರದ ಡ್ಯೂಕ್ ಎರಡನೆಯ ಆಲ್ಫಾನ್ಸೋನ ಆಸ್ಥಾನದ ಕವಿಯಾಗಿ ನೇಮಕಗೊಂಡ. ಆಸ್ಥಾನದ ರಂಗಮಂದಿರಕ್ಕಾಗಿ ಬರೆದುಕೊಟ್ಟ ಅಮಿಂತಾ (1574) ಎಂಬ ಸೊಗಸಾದ ಕುರಿಗಾಹಿ ರೂಪಕದ ನಾಟಕ ಕವಿಗೆ ಅಪಾರವಾದ ಕೀರ್ತಿಯನ್ನೂ ಜನಪ್ರಿಯತೆಯನ್ನೂ ತಂದುಕೊಟ್ಟಿತು. ಇದೊಂದು ಉತ್ಕøಷ್ಟಕೃತಿ. ಇದರಲ್ಲಿ ನಾಟಕೀಯ ಗುಣಕ್ಕಿಂತ ಭಾವಗೀತೆಯ ಗುಣವೇ ಹೆಚ್ಚು. ಈತನ ಸಾನೆಟ್ಟುಗಳು ಮತ್ತು ಇತರ ಕವನಗಳ ಶ್ರೇಷ್ಠತೆಗೆ ಇದು ಸರಿದೂಗುತ್ತದೆ. ಆ ಕಾಲದ ಸಭ್ಯ ಸಮಾಜದ ಭೋಗಜೀವನ, ಆಸ್ಥಾನದ ವೈಭವಗಳು ಆದರ್ಶವೆಂಬಂತೆ ಈ ನಾಟಕದಲ್ಲಿ ಪ್ರತಿಬಿಂಬಿತವಾಗಿವೆ.

ರಿನಾಲ್ಡೊ, ಅಮಿಂತಾ, ರೈಮ್-ಈ ಕೃತಿಗಳ ರಚನೆಯಲ್ಲಿ ಹಂತಹಂತವಾಗಿ ಬೆಳೆದ ಪ್ರತಿಭೆ, ಪಳಗಿದ ಕೈ ಲಾ ಜೆರೂಸಲೆಮ್ಮೆ ಲಿಬೆರಾಟಾ ಎಂಬ ಮಹಾಕಾವ್ಯವನ್ನು ಸೃಷ್ಟಿಸಿತು. ಇದರ ಕಥಾವಸ್ತು ಕವಿಯ ಮನಸ್ಸಿನಲ್ಲಿ ಬಹು ಹಿಂದೆಯೇ ಅಂದರೆ ವೆನಿಸ್, ಪಾಡೊವಾಗಳಲ್ಲಿದ್ದಾಗಲೇ ಅಂಕುರಗೊಂಡು ರೂಪುಗೊಳ್ಳುತ್ತಿತ್ತು. 1575ರಲ್ಲಿ ಕಾವ್ಯ ಪೂರ್ಣವಾಯಿತು. ರೆನಸಾನ್ಸ್ ಕಾವ್ಯಪರಂಪರೆಯನ್ನು ಉಳಿಸಿ ಬೆಳೆಸುವ ಹಾಗೆ ಕಾವ್ಯ ರೂಪುಗೊಂಡಿತ್ತು. ಮಾರ್ಗಶೈಲಿಗೆ, ಧಾರ್ಮಿಕ ಸುಧಾರಣೆಯನ್ನು ವಿಫಲಗೊಳಿಸುವ ಕ್ಯಾತೊಲಿಕ್ ಧೋರಣೆಯನ್ನು ಹೊಂದಿಸಿ ಇದನ್ನು ರಚಿಸಲಾಗಿತ್ತು. ತುಂಬ ವಿಶ್ವಾಸ, ಭರವಸೆಗಳಿಂದ ಈ ಕೃತಿಯನ್ನು ತನ್ನ ಮಿತ್ರರ ಅವಲೋಕನಕ್ಕಿಟ್ಟಾಗಿ ಅವರಿಂದ ಬಂದ ನಿಷ್ಠುರವಾದ ವಿಮರ್ಶೆ ಕವಿಯ ಮನಸ್ಸಿಗೆ ಆಘಾತವನ್ನುಂಟುಮಾಡಿತು. ಕಾವ್ಯದಲ್ಲಿ ಪ್ರಣಯ ಪ್ರಸಂಗಗಳೂ ಶೃಂಗಾರ ಸನ್ನಿವೇಶಗಳೂ ಅತಿಯಾಗಿ ತುಂಬಿಕೊಂಡು ಅದರ ಧಾರ್ಮಿಕ ಉದ್ದೇಶಕ್ಕೂ ನೈತಿಕ ದೃಷ್ಟಿಗೂ ಭಂಗತಂದಿವೆ ಎಂಬುದೇ ಮಿತ್ರರ ಅಸಮಾಧಾನ. ಆದರೆ ಅವರ ಟೀಕೆಗೆ ಉತ್ತರ ಕೊಡಲಾರದಷ್ಟು ಕವಿ ಪೆಚ್ಚಾಗಿ ಹೋಗಿದ್ದ. ಬಹುಶಃ ಕವಿಗೆ ಮತಿಭ್ರಮಣೆಯಾಗಲು ಇದೂ ಒಂದು ಕಾರಣವಾಗಿರಬಹುದು. ಎಲ್ಲರೂ ತನ್ನ ವಿರುದ್ಧವಾಗಿ ಒಳಸಂಚು ಮಾಡುತ್ತಿದ್ದಾರೆ ಎಂಬ ಭ್ರಾಂತಿ, ಭಯ, ಶಂಕೆ, ಅದಕ್ಕೆ ಪ್ರತಿಯಾಗಿ ಆಗಾಗ ಕಾಣುವ ಅತಿಯಾದ ಅಹಂಭಾವ-ಈ ಮನೋವಿಕಲ್ಪಗಳಿಗೆ ಒಳಗಾದ ಈತ ತನ್ನ ಸೇವಕನನ್ನೇ ಇರಿದು ಕೊಲ್ಲಲು ಹೋದಾಗ, ಅಪಾಯಕಾರಿ ಎಂದು ಹಿಡಿದು ಇವನನ್ನು ಸೆರೆಯಲ್ಲಿಟ್ಟರು. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಓಡಿಹೋದ. ಎಲ್ಲಿಯೂ ನೆಲೆಸದೆ ಊರಿಂದೂರಿಗೆ ಅಲೆಯುತ್ತ ಇಟಲಿಯ ಹಲವಾರು ನಗರಗಳನ್ನು ಸುತ್ತಿಬಂದ. 1579ರಲ್ಲಿ ಮತ್ತೆ ಡ್ಯೂಕ್ ಮತ್ತು ಮಾರ್ಗರಿಟಾ ಗೊಂಜಾಗಾರ ಮದುವೆಗೆ ಸರಿಯಾಗಿ ಫೆರಾರಕ್ಕೆ ಹಿಂತಿರುಗಿದ. ಅಲ್ಲಿ ತನ್ನನ್ನು ಸರಿಯಾಗಿ ಸ್ವಾಗತಿಸಿ ಸತ್ಕರಿಸುವ ಬದಲು ಅನಾದರಣೆ ಮಾಡಿದರೆಂದು ಕೋಪಗೊಂಡು ಬೈಗುಳದ ಸುರಿ ಮಳೆಗರೆದ. ಪರಿಣಾಮವಾಗಿ ಮತ್ತೆ ಏಳು ವರ್ಷ ಸೆರೆಯಲ್ಲಿರಬೇಕಾಯಿತು.

ಟಾಸ್ಸೊ, ಸೆರೆಯಲ್ಲಿದ್ದ ಏಳು ವರ್ಷಗಳ ಅವಧಿಯಲ್ಲಿ ಅನೇಕ ಶ್ರೇಷ್ಠ ಸಾಹಿತ್ಯ ಕೃತಿಗಳನ್ನು ರಚಿಸಿದ. ತತ್ತ್ವಶಾಸ್ತ್ರ ವಿಷಯಗಳನ್ನು ಕುರಿತ ಸಂವಾದಗಳು, ಜೆರೂಸಲೆಮ್ಮೆ ಲಿಬೆರಾಟಾ ಕುರಿತು ಬಂದ ಟೀಕೆಗಳಿಗೆ ಉತ್ತರವಾಗಿ ಅಪಲೊಜಿಯ ಎಂಬ ಹೆಸರಲ್ಲಿ ಕಾವ್ಯಸಮರ್ಥನೆಯನ್ನಲ್ಲದೆ ಇನ್ನೂ ಅನೇಕ ಸೊಗಸಾದ ಕವನಗಳನ್ನೂ ಬರೆದ. ಜನತೆಗೆ ಈತನ ಕಾವ್ಯದಲ್ಲಿ ವಿಶೇಷವಾದ ಆಸಕ್ತಿ ಅಭಿಮಾನಗಳು ಬೆಳೆದುವು. ಈತನಿಗೆ ಬುದ್ಧಿ ವಿಕಲ್ಪವಾಗಿದೆ ಎಂಬುದನ್ನು ನಂಬುವುದೇ ಕಷ್ಟವಾಯಿತು. ಈತ ಸೆರೆಮನೆಯಲ್ಲಿ ಕೂತು ಸತತವಾಗಿ ಬರೆದು ಹಾಕುತ್ತಿದ್ದ ಪುಟಗಳನ್ನೆಲ್ಲ ಸಂಗ್ರಹಿಸಿ ಸೆರೆಯಿಂದಾಚೆಗೆ ತೆಗೆದುಕೊಂಡು ಹೋಗಿ ಈತನಿಗೆ ಗೊತ್ತಿಲ್ಲದೆಯೆ ಅವನ್ನು ಪ್ರಕಟಿಸುತ್ತಿದ್ದರು. ಹೀಗಾಗಿ ತಿದ್ದಲು ಅವಕಾಶವಿಲ್ಲದೆ ಹಲವಾರು ದೋಷಗಳು ಹಾಗೇ ಉಳಿದುಕೊಂಡವು. ಕೆಲವರ ಮಧ್ಯಸ್ಥಿಕೆಯಿಂದಾಗಿ ಸೆರೆಯಿಂದ ಬಿಡುಗಡೆಯಾಯಿತಾಗಿ ಟಾಸ್ಸೊಮೆಂಟುವಾದಲ್ಲಿ ಕೆಲಕಾಲ ಇದ್ದ. ಆಗ, ಅಪೂರ್ಣವಾಗಿದ್ದ ಗ್ಯಾಲಿಯಾಲ್ಟೊ ರಿ ಡೈ ನೊರ್ವೇಜಿಯಾ ಎಂಬ ರುದ್ರನಾಟಕವನ್ನು ಪೂರ್ತಿ ಬರೆದು ಅದಕ್ಕೆ ಟೊರಿಸ್‍ಮಾಂಡೊ ಎಂಬ ಹೊಸ ಹೆಸರನ್ನಿಟ್ಟ. 1587ರಲ್ಲಿ ರೋಮಿಗೆ ಹೋದ. ಅಲ್ಲಿ ಲಾ ಜೆರೂಸಲೆಮ್ಮೆ ಕಾಂಕ್ವೆಸ್ಟಿಟಾ ಎಂಬ ತನ್ನ ಜೆರೂಸಲೆಮ್ಮೆ ಮಹಾಕಾವ್ಯದ ಎರಡನೆಯ ಭಾಗವನ್ನು ರಚಿಸಿದ. ಅಲ್ಲಿಂದ 1549ರವರೆಗೂ ಒಂದೆಡೆ ನಿಲ್ಲದೆ, ಸತತವಾಗಿ ಅಶಾಂತಿ ಅನಾರೋಗ್ಯಗಳಿಂದ ಒದ್ದಾಡುತ್ತ ಫ್ಲಾರೆನ್ಸ್, ನೇಪಲ್ಸ್ , ಮೆಂಟುವಾ ರೋಮ್ ನಗರಗಳಲ್ಲಿ ಕಾಲ ಹಾಕಿದ.

ನೇಪಲ್ಸ್‍ನಲ್ಲಿ ಈತನನ್ನು ತನ್ನ ಮನೆಯಲ್ಲಿರಿಸಿಕೊಂಡು ಸತ್ಕರಿಸಿದ ಜಿ.ಟಿ. ಮಾನ್ಸೊ ಎಂಬಾತನೇ ಮುಂದೆ ಟಾಸ್ಸೊನ ಜೀವನ ಚರಿತ್ರೆಯನ್ನು ಬರೆದವರಲ್ಲಿ ಮೊದಲಿಗ. ನೇಪಲ್ಸಿನಲ್ಲಿದ್ದಾಗ ಟಾಸ್ಸೊ ಮಾಂಟೆ ಒಲಿವಿಯೆಟೊ ಮತ್ತು ಸೆಟ್‍ಜಿಯಾರ್ನೇಟ್ ಡೆಲ್ ಮಾಂಡೊ ಕ್ರಿಯೇಟೊ ಎಂಬ ಧಾರ್ಮಿಕ ಕವನ ಸಂಕಲನಗಳನ್ನೂ, ವಿಟಾ ಡಿ ಸ್ಯಾನ್ ಬೆನೆಡೆಟ್ಟೊದ ಕೆಲವು ಭಾಗಗಳನ್ನೂ ಸಂವಾದಗಳು ಎಂಬ ಗ್ರಂಥದ ಕೊನೆಯ ಭಾಗವನ್ನೂ ಬರೆದ. 1593ರಲ್ಲಿ ರೋಮಿನಲ್ಲಿರುವಾಗ ಲೆ ಲಾಗ್ರೈಮ್ ಡಿ ಜೇಸು ಕ್ರಿಸ್ತೊ ಮತ್ತು ಲೆ ಲಾಗ್ರೈಮ್ ಡಿ ಮೇರಿಯಾ ವರ್ಜಿನ್ ಎಂಬೆರಡು ಕೃತಿಗಳು ರಚಿತವಾದುವು.

ತನ್ನ ಕಡೆಯ ದಿನಗಳನ್ನು ಅನಾರೋಗ್ಯ ಅತೃಪ್ತಿಗಳಲ್ಲೇ ಕಳೆದ. ಈತನಿಗೆ ಸ್ನೇಹ, ಪ್ರೀತಿ, ಗೌರವ, ಸನ್ಮಾನ ಎಲ್ಲ ದೊರೆತವು. ಆದರೆ ಕವಿಗೆ ಬೇಕಾದ ಮನಶ್ಯಾಂತಿ ಮಾತ್ರ ದೊರೆಯದೇ ಹೋಯಿತು. 1594ರಲ್ಲಿ ಪೋಪ್ ಗುರುವಿನ ಸಮ್ಮುಖದಲ್ಲಿ ಕವಿಸಾಮ್ರಾಟ ಎಂಬ ಪ್ರಶಸ್ತಿಪ್ರದಾನ ಮಾಡುವ ಸನ್ಮಾನ ಸಮಾರಂಭಕ್ಕೆ ಟಾಸ್ಸೊನ ಮಿತ್ರರು ಏರ್ಪಾಟುಮಾಡಿದರು. ಸನ್ಮಾನಕ್ಕೆ ಕರೆ ಬಂದಾಗ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಟಾಸ್ಸೊ ತನ್ನನ್ನು ಸ್ಯಾನ್ ಓನೊಫ್ರಿಯೊ ಕಾನ್ವೆಂಟಿಗೆ ಕರೆದೊಯ್ಯಬೇಕೆಂದು ಅಪೇಕ್ಷಿಸಿದ. ಅಲ್ಲಿ ಸ್ವಲ್ಪ ಸುಧಾರಿಸಿಕೊಂಡು ಸನ್ಮಾನಕ್ಕೆ ಹೋಗಬೇಕೆಂಬುದು ಕವಿಯ ಆಶಯವಾಗಿತ್ತು. ಆದರೆ ಕೆಲವು ದಿನಗಳಲ್ಲೆ, 1595ರ ಏಪ್ರಿಲ್ 25ರಂದು, ಕವಿ ಕಾನ್ವೆಂಟಿನಲ್ಲಿ ನಿಧನನಾದ.

ಇಟಲಿಯ ಸಾಹಿತ್ಯದಲ್ಲಿ ಡಾಂಟೆ, ಪೆಟ್ರಾರ್ಕ್ ಅವರ ಪಂಕ್ತಿಯಲ್ಲಿ ಅಲ್ಲವಾದರೂ ಅವರಿಗೆ ದ್ವಿತೀಯ ಸ್ಥಾನದಲ್ಲಿ ಟಾಸ್ಸೊ ನಿಲ್ಲತಕ್ಕವ. ಈತನ ಅಮಿಂತಾ ಎಂಬ ನಾಟಕ ಇವತ್ತಿಗೂ ಜನಪ್ರಿಯವಾದ ಕೃತಿ. ಲಾ ಜೆರೂಸಲೆಮ್ಮೆ ಲಿಬೆರಾಟಾ ಎಂಬ ಮಹಾಕಾವ್ಯವಂತೂ ಟಾಸ್ಸೊನ ಮಹೋನ್ನತ ಕೃತಿ. ಇಟಲಿಯ ಸಾಹಿತ್ಯದಲ್ಲಿ ಅತ್ಯಂತ ಶ್ರೇಷ್ಠವಾದ ಕಾವ್ಯ.

ನೈತಿಕ ಕಾರಣಗಳಿಗಾಗಿ ಟಾಸ್ಸೋನ ಮಿತ್ರರು ಈ ಕಾವ್ಯವನ್ನು ಕಟುವಾಗಿ ಟೀಕಿಸಿದರು. ಅದಕ್ಕೆ ಕಾವ್ಯದ ಹೊಸತನವೂ ಒಂದು ಕಾರಣವಿರಬಹುದು. ಅಪಲೊಜಿಯ ಎಂಬ ಪುಸ್ತಕ ಬರೆದು ಟೀಕೆಗಳಿಗೆ ಉತ್ತರ ಕೊಟ್ಟು ಕಾವ್ಯಸಮರ್ಥನೆ ಮಾಡಿಕೊಂಡರೂ ಟಾಸ್ಸೊ ಕಾವ್ಯದ ಮುಂದಿನ ಭಾಗ ಲಾ ಜೆರೂಸಲೆಮ್ಮೆ ಕಾಂಕ್ವೆಸ್ಟಿಟಾದಲ್ಲಿ ಅನೇಕ ವೀರ ಹಾಗೂ ಶೃಂಗಾರ ಸನ್ನಿವೇಶ ಚಿತ್ರಣಗಳನ್ನೂ ವರ್ಣನೆಗಳನ್ನೂ ತೆಗೆದುಹಾಕಿದ. ಇದರಿಂದ ಇದು ಕೇವಲ ವಿದ್ವತ್ಪೂರ್ಣವಾದ ನೀರಸ ಕಾವ್ಯವಾಗಿ, ಲಿಬೆರಾಟಾ ಕಾವ್ಯದ ಮಟ್ಟಕ್ಕೆ ಬಾರದೆ ಹೋಯಿತು.

ಡಿಸ್‍ಕೋರ್ಸಿ ಡೆಲ್ ಆರ್ಟ್ ಪೊಯೆಟಿಕಾ (1594) ಕಾವ್ಯತತ್ತ್ವವನ್ನು ಕುರಿತ ವಿಮರ್ಶಾಗ್ರಂಥ. ಟಾಸ್ಸೊನ ಕಾವ್ಯದೃಷ್ಟಿಯನ್ನೂ ಅರಿಸ್ಟಾಟಲ್‍ನ ಕಾವ್ಯ ಮೀಮಾಂಸೆಯನ್ನು ಕುರಿತ ಅವನ ವಿಚಾರಗಳನ್ನೂ ಅಭಿಪ್ರಾಯಗಳನ್ನೂ ಈ ಗ್ರಂಥ ಶ್ರುತಪಡಿಸುತ್ತದೆ.

ಟಾಸ್ಸೊ ಗ್ಲೈ ಇಂಟ್ರಿಜಿ ಡ ಅಮೋರ್ ಎಂಬ ಒಂದು ಸುಖಾಂತ ನಾಟಕವನ್ನೂ ಬರೆದಿದ್ದಾನೆ.

16ನೆಯ ಶತಕದ ಐರೋಪ್ಯ ಸಂಸ್ಕøತಿಯ ಪ್ರಾತಿನಿಧಿಕ ಕವಿ ಟಾಸ್ಸೊ. 1600ರಷ್ಟು ಮೊದಲಿನಲ್ಲೆ ಈತನ ಜೆರೂಸಲೆಮ್ಮೆ ಲಿಬೆರಾಟಾ ಇಂಗ್ಲಿಷಿಗೆ ಭಾಷಾಂತರವಾಗುವಷ್ಟು ಅದರ ಖ್ಯಾತಿ, ಜನಪ್ರಿಯತೆ ಎಲ್ಲೆಡೆ ಹರಡಿತ್ತು. ಸರ್ ಎಡ್ವರ್ಡ್ ಫೇರ್‍ಫಾಕ್ಸ್ ಮೊದಲು ಇದನ್ನು ಭಾಷಾಂತರ ಮಾಡಿದ. 1830ರಲ್ಲಿ ಪ್ರಕಟವಾದ ಜೆ.ಎಚ್.ವಿಫೆನ್ ಎಂಬಾತ ಮಾಡಿದ ಅನುವಾದವೇ ಅತ್ಯುತ್ತಮವಾದುದೆಂದು ಪರಿಗಣಿತವಾಗಿದೆ.

ಟಾಸ್ಸೊನನ್ನೇ ರಮ್ಯಕಥೆಯ ನಾಯಕನನ್ನಾಗಿ ಮಾಡುವಷ್ಟು ಹಲವು ದಂತ ಕಥೆಗಳು ಹುಟ್ಟಿಕೊಂಡಿವೆ. ಅವನ ಪ್ರಣಯ ಪ್ರಕರಣಗಳನ್ನು ಕುರಿತ ಕತೆಗಳಂತೂ ವಿಪುಲಸಂಖ್ಯೆಯಲ್ಲಿ ಸೃಷ್ಟಿಯಾಗಿವೆ. ಎಷ್ಟೋ ವರ್ಷಗಳವರೆಗೂ ಕವಿಯ ಜೀವನವನ್ನು ಕುರಿತ ನಾಟಕಗಳೂ ಕಾದಂಬರಿಗಳೂ ರಚಿತವಾಗುತ್ತಲೆ ಇದ್ದವು. ರೆನಸಾನ್ಸ್ ನಾಗರಿಕತೆಯ ದುರಂತ ಪರಿಣಾಮಕ್ಕೆ ಈತನ ಬಾಳು ಒಂದು ಸಂಕೇತವಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: