ವಿಷಯಕ್ಕೆ ಹೋಗು

ಟೀರ್ಸೊ ದೇ ಮೊಲೀನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟೀರ್ಸೊ ದೇ ಮೊಲೀನಾ-೧೫೮೩-೨೬೪೮. ಸ್ಪೇನಿನ ನಾಟಕಕಾರ ಮತ್ತು ಕಾದಂಬರಿಕಾರ. ಈತನ ನಿಜನಾಮ ಫ್ರೆ ಗೇಬ್ರಿಯಲ್ ಟೆಲ್ಯೆತ್.

ಹುಟ್ಟಿದ್ದು ಮ್ಯಾಡ್ರಿಡ್‍ನಲ್ಲಿ. ಅಲ್ಕಲಾ ವಿಶ್ವವಿದ್ಯಾಲಯದಲ್ಲಿ ಓದು ಮುಗಿಸಿ ಮ್ಯಾಡ್ರಿಡ್‍ಗೆ ಬಂದು ನಾಟಕ ರಚನೆಯಲ್ಲಿ ತೊಡಗಿದ. ಈತ ಸುಮಾರು ೩೦೦ ಕ್ಕೂ ಹೆಚ್ಚು ನಾಟಕಗಳನ್ನು ಬರೆದಿದ್ದಾನೆಂದು ಹೇಳಲಾಗಿದೆ. ಸೋರಿಯಾದ ಕ್ರೈಸ್ತಮಠವೊಂದರಲ್ಲಿ ಈತ ಮಠಾಧಿಪತಿಯಾಗಿದ್ದು ಅಲ್ಲಿಯೇ ಕಾಲವಾದ.

ನಾಟಕಗಳು

[ಬದಲಾಯಿಸಿ]

ಈತನನ್ನು ಸ್ಪೇನಿನ ನಾಟಕಕಾರಲ್ಲಿ ಅತ್ಯಂತ ಪ್ರಭಾವಶಾಲಿ ಹಾಗೂ ಸತ್ತ್ವಶಾಲಿ ನಾಟಕಕಾರನೆಂದು ಪರಿಗಣಿಸಲಾಗಿದೆ. ಸ್ಪೇನಿನ ರಾಷ್ಟ್ರೀಯ ನಾಟಕಗಳ ಪ್ರವರ್ತಕನೆಂದು ಹೆಸರಾದ ಲೋಪೆ ದೇ ವೇಗಾ ಈತನ ಸ್ನೇಹಿತ. ಆತ ಹಾಕಿದ ದಾರಿಯಲ್ಲೇ ಈತ ನಡೆದು ನಾಟಕಗಳನ್ನು ರಚಿಸಿದ. ಈತನ ನಾಟಕಗಳಲ್ಲಿ ಎಲ್ ಬರ್ಲಾದರ್ ದೇ ಸೆವಿಲ್ಲಾ ಪ್ರಮುಖವಾದುದು. ಇದರಲ್ಲಿ ಸ್ಪೇನಿನ ಪೌರಾಣಿಕ ವ್ಯಕ್ಕಿ ಎನಿಸಿದ ಡಾನ್ ಹ್ವಾನ್ ಎಂಬುವವನ ವ್ಯಕ್ತಿಚಿತ್ರಣವಿದೆ. ಡಾನ್ ಹ್ವಾನನ ವ್ಯಕ್ತಿತ್ವವನ್ನು ಕುರಿತು ಬರೆದ ಮೊದಲ ನಾಟಕವಿದು. ಇದರ ಕಥಾನಾಯಕ ರಾಜಕುಮಾರಿ, ಮೀನುಗಾತಿ, ಸ್ನೇಹಿತನ ಹೆಂಡತಿ, ರೈತನ ಹುಡುಗಿ-ಹೀಗೆ ನಾಲ್ವರು ಕನ್ಯೆಯರನ್ನು ವಂಚಿಸಿ ಅವರ ಕನ್ಯೆತನವನ್ನು ಅಪಹರಿಸುತ್ತಾನೆ. ಸ್ತ್ರೀಶೀಲಭಂಗ, ನಿರ್ಭೀತ ಹಿಂಸಾಚಾರಗಳೇ ಈತನ ಜೀವಿತದ ಉದ್ದೇಶಗಳಾಗಿವೆ. ಒಮ್ಮೆ ತನ್ನ ಕೈಯಿಂದ ಕೊಲೆಯಾದವನ ಪ್ರತಿಮೆಯ ಬಳಿ ಬಂದಾಗ ಆ ಪ್ರತಿಮೆಯ ಶಿರಸ್ಸು ಚಲಿಸುವುದನ್ನು ಕಂಡು ಅದನ್ನು ಊಟಕ್ಕೆ ಕರೆಯುತ್ತಾನೆ. ಆ ರಾತ್ರಿ ಕೊಲೆಯಾದವನ ಪ್ರೇತ ಬಂದು ಔತಣದಲ್ಲಿ ಭಾಗವಹಿಸಿ ಡಾನ್ ಆಹ್ವಾನನನ್ನು ಮರುದಿನ ಊಟಕ್ಕೆ ಕರೆಯುತ್ತದೆ. ಈತ ಹೆದರದೆ ಹೋಗಿ ಔತಣ ಸ್ವೀಕರಿಸಿ ಪ್ರೇತದ ಕೈಗೆ ಕೈಕೊಟ್ಟು ಹಸ್ತಲಾಘವ ಮಾಡುತ್ತಾನೆ. ಅನಂತರ ಪ್ರೇತಗಳ ಕೈಗೆ ಸಿಲುಕಿ ಸಾಯುತ್ತಾನೆ.ಈ ಅಸಾಧಾರಣ ಹಾಗೂ ವೈಪರೀತ್ಯದ ಪಾತ್ರರಚನೆಯಲ್ಲಿ ಸ್ಟ್ಯಾನಿಷ್ ಸಮಾಜದ ವಿಷಯಲಂಪಟ ಶ್ರೀಮಂತ ತರುಣರ ವಿಡಂಬನೆಯನ್ನು ಕಾಣಬಹುದು. ಅತಿ ಸಾಹಸಕಾರ್ಯಗಳಲ್ಲಿ ತೊಡಗಿ ಅವನ್ನು ಗೆಲ್ಲುವುದೇ ಈ ಕಥಾನಾಯಕನ ಆಕಾಂಕ್ಷೆ. ಸ್ತ್ರೀಶೀಲಭಂಗ ಈತನಿಗೆ ಒಂದು ಸಾಹಸಕ್ಷೇತ್ರವಾಗಿದೆ. ಈ ಪಾತ್ರ ಚಿತ್ರಣ ತಾತ್ತ್ವಿಕರ ಹಾಗೂ ಮನೋವಿಶ್ಲೇಷಣಕಾರರ ದೃಷ್ಟಿಯಲ್ಲಿ ಮಹತ್ತ್ವ ಪೂರ್ಣವಾದುದಾಗಿದೆ. ಟೀರ್ಸೊ ದೇ ಮೋಲೀನಾನ ನಾಟಕದಿಂದ ಪ್ರಸಿದ್ಧನಾದ ಡಾನ್ ಹ್ವಾನ್ ಐತಿಹ್ಯವನ್ನು ಮುಂದೆ ಕಾಲ್ಡೆರಾನ್, ಜೊಸೆ ತೊರ್ರೀಲ್ಯ, ಮೋಲಿಯರ್, ಷಾಡ್ವೆಲ್, ಬೈರನ್, ಷಾ ಮುಂತಾದವರೆಲ್ಲ ಬಳಸಿಕೊಂಡಿರುವುದನ್ನು ಗಮನಿಸಬಹುದು. ಡೋನ್ ಗಿಲ್ ದೇ ಲಾಸ್ ಕಾಲ್ಜಾಸ್ ವರ್ದೇಸ್, ಎಲ್ ಸೆಲೋಸೊಪ್ರುದೆಂತೆ ಮೊದಲಾದವು ಈತನ ಪ್ರಸಿದ್ಧ ನಾಟಕಗಳು. ಡೋನ್ ಗಿಲ್ ದೇ ಲಾಸ್ ಕಾಲ್ಜಾಸ್ ವರ್ದೇಸ್ ನಾಟಕ ಒಬ್ಬ ಗಯ್ಯಾಳಿ ಹೆಂಗಸು ಪುರುಷವೇಷ ಧರಿಸಿ ನಂಬಿಕೆಗೆ ಅಪಾತ್ರನಾದ ತನ್ನ ಪ್ರೇಮಿಯೊಬ್ಬನನ್ನು ಅರಸಿ ಹೊರಟ ಚಿತ್ರಣವಾಗಿದೆ. ಈತ ಹಲವಾರು ಚಾರಿತ್ರಿಕ ನಾಟಕಗಳನ್ನು ರಚಿಸಿದ್ದಾನಲ್ಲದೆ ಹಾಸ್ಯ, ಕಟುವ್ಯಂಗ್ಯ ಬೆರಸಿ ಸಮಾಜದ ವಿವಿಧ ಮುಖಗಳನ್ನು ತನ್ನ ನಾಟಕಗಳಲ್ಲಿ ಪರಿಣಾಮಕಾರಿಯಾಗಿ ಪರಿಚಯಿಸಿದ್ದಾನೆ. ಈತ ನಾಟಕಗಳಲ್ಲದೆ ಅನೇಕ ಸಣ್ಣ ಕಾದಂಬರಿಗಳನ್ನೂ ಬರೆದಿದ್ದಾನೆ.



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: