ವಿಷಯಕ್ಕೆ ಹೋಗು

ಹಳೆ ತಿರುಮಕೂಡಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಟಿ.ನರಸೀಪುರ ಇಂದ ಪುನರ್ನಿರ್ದೇಶಿತ)

ಹಳೇ ತಿರುಮಕೂಡಲು ಮೈಸೂರಿನಿಂದ ತಿ.ನರಸೀಪುರಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಸಿಗುವುದೇ ಹಳೇ ತಿರುಮಕೂಡಲು, ಈ ಊರಿಗೆ ಸಂಸ್ಕೃತದಲ್ಲಿ ತ್ರಿಮಕೂಟ ಎಂದು ಹೆಸರು. ಇಲ್ಲಿ ಕಾವೇರಿ, ಕಪಿಲಾ ಹಾಗೂ ಗುಪ್ತಗಾಮಿನಿಯಾದ ಸ್ಫಟಿಕಸರೋವರಗಳ ತ್ರಿವೇಣೀ ಸಂಗಮವಿದೆ. ಆದ್ದರಿಂದ ತ್ರಿಮಕೂಟ ಅಥವಾ ತಿರುಮಕೂಡಲು ಎಂಬ ಹೆಸರು ಬಂದಿದೆ. ಊರಿಗೆ ಪ್ರವೇಶವಾಗುವಾಗ ಮೊದಲಿಗೆ ಬಲಭಾಗದಲ್ಲಿ ಶ್ರೀಗಣೇಶನ ದೇವಸ್ಥಾನವಿದೆ. ನಂತರ ಗ್ರಾಮದೇವತೆಯಾದ ಚೌಡೇಶ್ವರಿಯ ಗುಡಿಯಿದೆ. ಸ್ವಲ್ಪ ಮುಂದೆ ಹೋದರೆ ಎಡಭಾಗಕ್ಕೆ ಶ್ರೀಹನುಮಂತೇಶ್ವರ ದೇವಾಲಯ. ಆ ಗುಡಿಯನ್ನು ದಾಟಿ ಹೋದರೆ ಅಗಸ್ತ್ಯ ಋಷಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಶ್ರೀಅಗಸ್ತ್ಯೇಶ್ವರದೇವಾಲಯದ ಗೋಪುರ ಆಕರ್ಷಕವಾಗಿ ಕಣ್ಸೆಳೆಯುತ್ತದೆ. ಇದು ಬಹಳ ಪುರಾತನವಾದ ದೇವಾಲಯ. ಇಲ್ಲಿನ ಸ್ಥಳಪುರಾಣದಂತೆ ಅಗಸ್ತ್ಯ ಋಷಿಗಳು ಶ್ರೀರಾಮಚಂದ್ರದೇವರಿಂದ ಶಿವಲಿಂಗವನ್ನು ಪ್ರತಿಷ್ಠೆ ಮಾಡಿಸುವ ಸಲುವಾಗಿ ಕಾಶೀಕ್ಷೇತ್ರದಿಂದ ಶಿವಲಿಂಗವನ್ನು ತರುವಂತೆ ಹನುಮಂತದೇವರಿಗೆ ಕೇಳಿಕೊಳ್ಳುತ್ತಾರೆ. ಶಿವಲಿಂಗವನ್ನು ತರಲು ಹೋದ ಹನುಮಂತದೇವರು ಹಿಂದಿರುಗಿ ಬರಲು ತಡಮಾಡಿದಾಗ ಪ್ರತಿಷ್ಠಾಪನಾ ಮುಹೂರ್ತ ಮೀರಿ ಹೋಗುತ್ತದೆ ಎಂಬ ಆತಂಕದಿಂದ ಅಗಸ್ತ್ಯರು, ಒಂದು ಮರಳಿನ ಲಿಂಗವನ್ನು ರಚಿಸಿ, ಶ್ರೀರಾಮಚಂದ್ರನಿಂದ ಪ್ರಾಣಪ್ರತಿಷ್ಠಾಪನೆ ಮಾಡಿಸಿಬಿಡುತ್ತಾರೆ. ಆ ಹೊತ್ತಿಗೆ ಸರಿಯಾಗಿ ಕಾಶಿಯಿಂದ ಶಿವಲಿಂಗವನ್ನು ಹನುಮಂತ ದೇವರು ತರುತ್ತಾರೆ. ತಾವು ತರುವಷ್ಟರಲ್ಲಿ ಪ್ರತಿಷ್ಠಾಪನೆ ಆಗಿಹೋಗಿದ್ದು ಕಂಡು, ಕೋಪದಿಂದಲೋ ಎಂಬಂತೆ ಆ ಲಿಂಗವನ್ನು ಮುಷ್ಟಿಯಿಂದ ಗುದ್ದುತ್ತಾರಂತೆ. ಆಗ ಅದರ ನೆತ್ತಿಯಲ್ಲಿ ಒಂದು ತಗ್ಗು ಬೀಳುತ್ತದೆ. ಅಲ್ಲೇ ಗಂಗೆ ಉದ್ಭವಿಸುತ್ತಾಳೆ. ಹೀಗಾಗಿ ಹನುಮಂತದೇವರು ಶ್ರೀರಾಮನ ಇಚ್ಛೆಯರಿತೇ ಆ ರೀತಿ ನಡೆದುಕೊಂಡರು ಎನ್ನಬಹುದು. ಈಗಲೂ ಸಹ ಅಗಸ್ತ್ಯೇಶ್ವರ ಲಿಂಗದಲ್ಲಿ ಉದ್ಭವಿಸುವ ತೀರ್ಥವನ್ನೇ ಭಕ್ತಾದಿಗಳಿಗೆ ನೀಡುತ್ತಾರೆ. ಇದು ಇಲ್ಲಿನ ವಿಶೇಷಗಳಲ್ಲೊಂದು. ಆ ದೇವಾಲಯದಿಂದ ಎಡಗಡೆಗೆ ಮುಂದುವರೆದು ಹೋದರೆ ಸುಂದರವಾದ ಕಾವೇರೀ ನದಿತೀರದಲ್ಲಿನ ಮರಗಳು ಕಣ್ಣು ಸೆಳೆಯುತ್ತವೆ. ಇನ್ನೂ ಮುಂದೆ ಹೋದರೆ ಸ್ವತಃ ಬ್ರಹ್ಮದೇವರಿಂದ ಪ್ರತಿಷ್ಠಿತಗೊಂಡ ಅಶ್ವತ್ಥವೃಕ್ಷವಿದೆ. ಅದರ ಆವರಣದಲ್ಲೇ ಇನ್ನೊಂದು ಸುಂದರವಾದ ಗಣೇಶನ ಗುಡಿಯಿದೆ. ಮರದ ಸುತ್ತಲೂ ನೂರಾರು ನಾಗರಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದೂ ಸಹ ಬಹಳ ಪುರಾತನವಾದ ಸನ್ನಿಧಾನ. ಈ ಬ್ರಹ್ಮಾಶ್ವತ್ಥದ ಪಕ್ಕದಲ್ಲೇ ಶ್ರೀವ್ಯಾಸರಾಜಮಠದ ಪ್ರಖ್ಯಾತ ಪೀಠಾಧೀಶ್ವರರಾದ ಶೇಷಚಂದ್ರಿಕಾಚಾರ್ಯರೆಂದೇ ಪ್ರಸಿದ್ಧರಾದ ಶ್ರೀರಘುನಾಥತೀರ್ಥರ ವೃಂದಾವನವಿದೆ. ಶ್ರೀವ್ಯಾಸರಾಜರಿಂದ ಹತ್ತನೇಯವರಾಗಿ ಪೀಠಕ್ಕೆ ಬಂದ ಶ್ರೀಗಳು, ಶ್ರೀವ್ಯಾಸರಾಜರು ಅರ್ಧ ರಚಿಸಿದ ತಾತ್ಪರ್ಯಚಂದ್ರಿಕಾ ಗ್ರಂಥದ ಕಡೆಯ ಎರಡು ಅಧ್ಯಾಯಗಳನ್ನು ಅಂದರೆ ಶೇಷಭಾಗವನ್ನು ಪೂರ್ಣಗೊಳಿಸಿದ್ದರಿಂದಾಗಿ ಪೂಜ್ಯರಿಗೆ ಶೇಷಚಂದ್ರಿಕಾಚಾರ್ಯರೆಂದು ಬಿರುದು ಬಂದಿತು ಆ ಹೆಸರೇ ಶಾಶ್ವತವಾಗಿ ಉಳಿದುಕೊಂಡು ಬಂದಿದೆ. ಈ ಯತಿಗಳ ಮಹಿಮೆಗಳೂ ಅಪಾರವಾಗಿವೆ. ಕುಹಕಿಗಳ ಮಾತಿನಿಂದ ವೃಂದಾವನವನ್ನು ಸ್ಥಳಾಂತರ ಮಾಡುವ ಉದ್ದೇಶ ಹೊಂದಿದ್ದ ಹೈದರಾಲಿಯ ಪತ್ನಿಗೆ ಸ್ವಪ್ನದ ಮೂಲಕ ಸೂಚನೆ ನೀಡಿ, ಆ ಯೋಚನೆಯನ್ನು ಕೈಬಿಡಬೇಕಾಯಿತು. ತಮಿಳುನಾಡಿನ ಶ್ರೀರಂಗಂ ಶ್ರೀಕ್ಷೇತ್ರದಲ್ಲೇ ದೇವರ ಎದುರಿನ ಮಂಟಪದಲ್ಲೇ ಚಂದ್ರಿಕಾಗ್ರಂಥವನ್ನು ಪೂರ್ಣಗೊಳಿಸಿದ್ದಾರೆಂದು ಇವರ ಚರಿತ್ರೆ ಹೇಳುತ್ತದೆ.