ವಿಷಯಕ್ಕೆ ಹೋಗು

ಟಿಲಿಯೇಸೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಿಲಿಯೇಸೀ - ದ್ವಿದಳ ಸಸ್ಯಗಳ ಒಂದು ಕುಟುಂಬ. ಮಾಲ್‍ವೇಲೀಸ್ ಗಣಕ್ಕೆ ಸೇರಿದೆ. ಇದರಲ್ಲಿ 55 ಜಾತಿಗಳೂ ಸುಮಾರು 450 ಪ್ರಭೇದಗಳೂ ಇವೆ. ಇವುಗಳಲ್ಲಿ ಹೆಚ್ಚಿನವು ಉಷ್ಣವಲಯ ಪ್ರದೇಶಗಳಾದ ಆಗ್ನೇಯ ಏಷ್ಯ ಮತ್ತು ದಕ್ಷಿಣ ಅಮೆರಿಕಬ್ರಜಿಲಿನಲ್ಲಿ ಬೆಳೆಯುತ್ತವೆ. ಬಹುಪಾಲು ಗಿಡಗಳು ಮರಗಳು ಇಲ್ಲವೆ ಪೊದೆಸಸ್ಯಗಳು. ಕೆಲವು ಮಾತ್ರ ಮೂಲಿಕೆಗಳು. ಎಲೆಗಳು ಸರಳರೀತಿಯವು; ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ. ವೃಂತಪತ್ರಗಳಿವೆ. ಹೂಗೊಂಚಲು ಮಧ್ಯಾರಂಭಿ ಮಾದರಿಯದು. ಹೂಗಳು ಸಾಮಾನ್ಯವಾಗಿ ದ್ವಿಲಿಂಗಿಗಳು ಹಾಗೂ ಕ್ರಮಬದ್ಧವಾದುವು. ಪ್ರತಿ ಹೂವಿನಲ್ಲಿ 5 ಪುಷ್ಪಪತ್ರಗಳು, 5 ದಳಗಳು, ಅಸಂಖ್ಯ ಕೇಸರಗಳು, 2ರಿಂದ ಅನೇಕ ಕಾರ್ಪೆಲುಗಳು ಕೂಡಿ ಆಗಿರುವ ಉಚ್ಚಸ್ಥಾನದ ಅಂಡಾಶಯ ಇವೆ. ಕೆಲವು ಸಲ ಹೂವಿನಲ್ಲಿ ಉಪಪುಷ್ಪ ಪತ್ರವಿರುವುದೂ ಉಂಟು. ಪುಷ್ಪಪತ್ರಗಳು ಬಿಡಿಬಿಡಿಯಾಗಿರಬಹುದು ಇಲ್ಲವೆ ಒಂದರೊಡನೊಂದು ಕೂಡಿಕೊಂಡಿರಬಹುದು. ಕೆಲವು ಸಲ ದಳಗಳೇ ಇಲ್ಲದಿರುವುದೂ ಉಂಟು. ಕೇಸರಗಳು ಬಿಡಿಯಾಗಿರಬಹುದು. ಅಥವಾ ಹಲವಾರು ಗುಂಪುಗಳಾಗಿ ಕೂಡಿಕೊಂಡಿರಬಹುದು. ಪರಾಗಕೋಶದಲ್ಲಿ ಎರಡು ಕೋಣೆಗಳಿವೆ. ಅಂಡಾಶಯ ಸಂಯುಕ್ತ ಮಾದರಿಯದು. ಕಾರ್ಪೆಲುಗಳೆಷ್ಟಿವೆಯೊ ಅಷ್ಟೇ ಸಂಖ್ಯೆಯ ಕೋಣೆಗಳಿವೆ. ಒಂದೊಂದು ಕೋಣೆಯಲ್ಲೂ ಒಂದರಿಂದ ಅನೇಕ ಅಂಡಕಗಳುಂಟು. ಫಲ ಸಾಮಾನ್ಯವಾಗಿ ಸಂಪುಟ ಮಾದರಿಯದು ಇಲ್ಲವೆ ಹಲವಾರು ಏಕಬೀಜೀಯ ಭಾಗಗಳಾಗಿ ವಿಂಗಡಗೊಳ್ಳುವ ಸ್ಕೀeóÉೂಕಾರ್ಪ್ ಬಗೆಯದು. ಟಿಲಿಯೇಸೀ ಅನೇಕ ಉಪಯುಕ್ತ ಸಸ್ಯಗಳನ್ನು ಒಳಗೊಂಡಿದೆ. ಉದಾಹರಣೆಗಳು: 1 ಸಣಬು (ಕಾರ್ಕೋರಸ್ ಜಾತಿ)-ಇದರ ತೊಗಟೆಯಿಂದ ನಾರನ್ನು ತೆಗೆದು ಹುರಿ, ಚೀಲ, ಬಲೆ ಮುಂತಾದವುಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. 2 ಲೈಮ್ ಮರ (ಟಿಲಿಯ ಪ್ಲಾಟಿಫಿಲೋಸ್)-ಅಲಂಕಾರ ಸಸ್ಯ. ಉದ್ಯಾನಗಳಲ್ಲಿ ಬೆಳೆಸಲಾಗುತ್ತದೆ. 3 ಬಾಸ್‍ವುಡ್ (ಟಿಲಿಯ ಅಮೇರಿಕಾನ) ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ ಬೆಳೆಸುತ್ತಾರೆ. ಇದರ ಮರವನ್ನು ಉರುವಲಾಗಿ ಬಳಸುವುದುಂಟು. ಅಲ್ಲದೆ ಇದರ ಮಧುವಿನಿಂದ ಉತ್ಕøಷ್ಟವಾದ ಜೇನು ತಯಾರಾಗುವುದರಿಂದ ಜೇನುಸಾಕಣೆ ಕೇಂದ್ರಗಳಲ್ಲಿ ಬೆಳೆಸುವರು. 4 ಗ್ರೀವಿಯ ಡೆಂಟಿಕ್ಯುಲೇಟ ತಿನ್ನಲು ಯೋಗ್ಯವಾದ ಹಣ್ಣುಗಳನ್ನು ಬಿಡುತ್ತದೆ.ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: