ಟಾರ್ಪೀಡೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಾರ್ಪೀಡೊ - ನೌಕಾಯುದ್ಧದಲ್ಲಿ ಉಪಯೋಗಿಸುವ ಪ್ರಬಲ ಆಯುಧ. ಶತ್ರುವಿನ ಹಡಗಿಗೆ ಗುರಿಯಿಟ್ಟು ನೀರಿನೊಳಗಡೆಯಿಂದ ಪ್ರಯೋಗಿಸುವ, ಅದಕ್ಕೆ ತಗುಲಿದೊಡನೆ ಸಿಡಿಯುವ, ಚುಟ್ಟದ ಆಕಾರದ, ಸ್ವಯಂಚಾಲಿತ ಅಸ್ತ್ರ, ನಿರ್ದಿಷ್ಟ ಆಳದಲ್ಲಿ ತಂತಾನೇ ಮುಂದುವರಿಯುತ್ತ ಯುದ್ಧದ ಹಡಗುಗಳನ್ನೂ ಸರಕು ಹಡುಗುಗಳನ್ನೂ ಜಲಾಂತರ್ಗಾಮಿಗಳನ್ನೂ ನಾಶಮಾಡುತ್ತದೆ.

ಎರಡನೆಯ ಮಹಾಯುದ್ಧದಲ್ಲಿ ಟಾರ್ಪೀಡೊಗಳು 20,000 ಗಜಗಳವರೆಗೂ ವೇಗವಾಗಿ ಹೋಗಿ ಶತ್ರುನೌಕೆಗಳನ್ನು ಧ್ವಂಸಮಾಡಿದವು. ಟಾರ್ಪೀಡೊಗಳನ್ನು ಕರಾವಳಿಯಿಂದಲೂ ಸಮುದ್ರದ ಮೇಲಿನ ಹಡಗುಗಳಿಂದಲೂ ವಿಮಾನಗಳಿಂದಲೂ ಜಲಾಂತರ್ಗಾಮಿಗಳಿಂದಲೂ ಉಡಾಯಿಸಬಹುದು. ಟಾರ್ಪೀಡೊವು ನೀರಿನೊಳಗೆ ನಿರ್ದಿಷ್ಟ ಆಳದಲ್ಲಿ ಮತ್ತು ನಿರ್ದಿಷ್ಟ ದಿಶೆಯಲ್ಲಿ ಸಂಚರಿಸುವುದನ್ನು ನಿಯಂತ್ರಿಸಲು ಸಂಕೀರ್ಣ ಯಾಂತ್ರಿಕ ರಚನೆಗಳಿವೆ. ದಾರಿತಪ್ಪಿ ಹೋದರೆ ಭ್ರಮಣದರ್ಶಕ (ಜೈರೋಸ್ಕೋಪ್) ಎಂಬ ಸಾಧನ ಅದನ್ನು ಸರಿಪಡಿಸುತ್ತದೆ. ಹಡಗಿನಿಂದ ತಂತಿಯ ಮೂಲಕ ಕಳುಹಿಸುವ ವಿದ್ಯುತ್ ಪ್ರೇರಣೆಯೂ ಅದನ್ನು ಕ್ರಮಪಡಿಸುತ್ತದೆ. ಅದು ನಿಶ್ಚಿತ ಆಳದಲ್ಲಿ ಚಲಿಸುವುದನ್ನು ಲಂಬಕ ಮತ್ತು ತನುಪಟಗಳ (ಡಯಾಫ್ರಮ್) ಕೂಡಿಕೆ ಹತೋಟಿಯಲ್ಲಿಡುವುದು. ಇಂಧನದ ಪರಿಮಾಣದ ವ್ಯವಸ್ಥೆ ಅದರ ವೇಗವನ್ನು ಅಂಕೆಯಲ್ಲಿಡುತ್ತದೆ. ಧ್ವನಿಗತಿಶಾಸ್ತ್ರ ನಿಯಮದಿಂದ ಕೆಲಸ ಮಾಡುವ ಕಿವಿಗಳ (ಹೈಡ್ರೊಫೋನುಗಳು) ಮತ್ತು ಎಲೆಕ್ಟ್ರಾನಿಕ್ ಸಾಧನಗಳ ನೆರವಿನಿಂದ ಟಾರ್ಪೀಡೊ ದೂರದ ಶತ್ರುನೌಕೆಗಳ ಚಾಲಕದಂಡಗಳು ಮತ್ತು ಯಂತ್ರಗಳು ಮಾಡುವ ಶಬ್ದಗಳನ್ನು ಪತ್ತೆಹಚ್ಚಿ ಅವನ್ನು ಹಿಂಬಾಲಿಸುತ್ತ ಹಡಗನ್ನು ಸಮೀಪಿಸಿ ಸ್ಫೋಟನದಿಂದ ಅವನ್ನು ನಾಶಮಾಡುತ್ತದೆ. ಪ್ರಖ್ಯಾತ ಸ್ಕಾಟಿಷ್ ಎಂಜಿನಿಯರ್ ರಾಬರ್ಟ್ ವ್ಹೈಟ್‍ಹೆಡ್ 1866ರಲ್ಲಿ ಟಾರ್ಪೀಡೊವನ್ನು ಉಪಜ್ಞಿಸಿದ. ಅದಕ್ಕೆ ಮೊದಲು ಹಲವರು ತಳಮದ್ದು (ಮೈನ್) ಮುಂತಾದವನ್ನು ಟಾರ್ಪೀಡೊ ಎಂದು ಉಪಯೋಗಿಸಿದರು. ಸ್ವಂತ ಚಾಲನ ಸಾಮಥ್ರ್ಯವಿಲ್ಲದ ಅವು ಯಾವುವೂ ಟಾರ್ಪೀಡೊಗಳಾಗಿರಲಿಲ್ಲ. ವಾಸ್ತವಿಕ ಟಾರ್ಪೀಡೊವನ್ನು ಮೊತ್ತಮೊದಲು ಸ್ಥಾಪಿಸಿದವನು ವ್ಹೈಟ್‍ಹೆಡ್. ಇದಾದ ಬಳಿಕ ಅನೇಕ ಸುಧಾರಣೆಗಳಾಗಿ ಹಲವಾರು ನಮೂನೆ ಟಾರ್ಪೀಡೊಗಳು ರಚಿಸಲ್ಪಟ್ಟವು. ಆದರೆ ಅವುಗಳಿಗೆಲ್ಲ ವ್ಹೈಟ್‍ಹೆಡ್‍ನ ಕಲ್ಪನೆಯೇ ಆಧಾರ.

ಟಾರ್ಪೀಡೊಗಳ ಗಾತ್ರ, ಭಾರ, ಯಾಂತ್ರಿಕರಚನೆ ಮತ್ತು ಸಲಕರಣೆಗಳು ಭಿನ್ನಭಿನ್ನವಾಗಿ ಅವನ್ನು ಉಪಯೋಗಿಸುವ ಉದ್ದೇಶಕ್ಕೆ ಅನುಸಾರವಾಗಿರುತ್ತವೆ. ಕೆಲವು ಟಾರ್ಪೀಡೊಗಳು ಸರಕು ಹಡಗುಗಳ ದೊಡ್ಡ ಸಮುದಾಯವನ್ನು ರಕ್ಷಿಸುತ್ತಿರುವ ಯುದ್ಧನೌಕೆಗಳನ್ನು ಆಕ್ರಮಣಮಾಡಲು ತಕ್ಕಂತೆ ರಚಿತವಾಗಿರುತ್ತವೆ. ಇನ್ನು ಕೆಲವು ಸಮುದ್ರದ ಆಳದಲ್ಲಿರುವ ಜಲಾಂತರ್ಗಾಮಿಗಳನ್ನು ಬೇಟೆಗಾರನಂತೆ ಹುಡುಕಿಕೊಂಡು ಹೋಗಿ, ಬೆನ್ನಟ್ಟಿ, ಆಕ್ರಮಣ ಮಾಡಲು ತಕ್ಕಂತೆ ನಿರ್ಮಿತವಾಗಿವೆ. ಟಾರ್ಪೀಡೊದ ಸರಾಸರಿ ಉದ್ದ 21' ; ವ್ಯಾಸ 21" ; ತೂಕ ಸುಮಾರು 3000 ಪೌಂಡ್. ಹೆಚ್ಚು ವೇಗದ ಇಂಥ ಟಾರ್ಪೀಡೊ 11,000 ಗಜಗಳು ಧಾವಿಸಿ ಅತ್ಯಂತ ದೊಡ್ಡ ಹಡಗಿನಲ್ಲೂ ತೂತು ಕೊರೆದು ಮುಳುಗಿಸಬಲ್ಲುದು. ಕೆಲವು ಬ್ರಿಟಿಷ್ ಯುದ್ಧನೌಕೆಗಳು 23" ವ್ಯಾಸದ ಟಾರ್ಪೀಡೊವನ್ನು ಹೊಂದಿದ್ದವು. ಅವು ಹೆಚ್ಚು ಸ್ಫೋಟನ ಮಾಡಿದವು. ಜಪಾನಿಯರು 27' ಟಾರ್ಪಿಡೊವನ್ನು ನಿರ್ಮಿಸಿದರು. ಜರ್ಮನಿ, ಇಟಲಿ ಮತ್ತು ಜಪಾನ್ ಟಾರ್ಪೀಡೊ ಕದನದಲ್ಲಿ ಬಹು ಉತ್ಸಾಹಿಗಳಾಗಿದ್ದುವು. ಟಾರ್ಪಿಡೊ ತನ್ನ ಕಾರ್ಯದಲ್ಲಿ ವಿಫಲವಾದರೆ ಅದನ್ನು ಮುಳುಗಿಸಿ ಮುಂದುವರಿಯದಂತೆ ಸಜ್ಜುಗೊಳಿಸಬೇಕೆಂದು ಅಂತರರಾಷ್ಟ್ರೀಯ ಕಾಯಿದೆ ಇದೆ. ಆಧುನಿಕ ಟಾರ್ಪೀಡೊಗಳು ಹಬೆಯಿಂದ ಅಥವಾ ಬ್ಯಾಟರಿಯ ವಿದ್ಯುತ್ ಮೋಟರಿನಿಂದ ಓಡುತ್ತವೆ. ಹಬೆ ಟಾರ್ಪೀಡೊಗಳು 27ರಿಂದ 45 ನಾಟ್ ವೇಗದಲ್ಲಿ 4000ದಿಂದ 10.000 ಗಜಗಳ ದೂರ ಹೋಗುತ್ತವೆ. ವಿದ್ಯುತ್ ಟಾರ್ಪೀಡೊದ ವೇಗ ಸ್ವಲ್ಪ ಕಡಿಮೆ. ಹಬೆ ಟಾರ್ಪೀಡೊಗಳು ನೀರಿನಲ್ಲಿ ವಾಯುಗುಳ್ಳೆಗಳನ್ನು ಎಬ್ಬಿಸಿ ಶತ್ರುಗಳಿಗೆ ಸುಳುವನ್ನು ಕೊಡುತ್ತವೆ. ವಿದ್ಯುತ್ ಟಾರ್ಪೀಡೊದಲ್ಲಿ ಈ ಸಂಭವವಿಲ್ಲ. ಎರಡು ಅನಿಲಗಳು ರಾಸಾಯನಿಕವಾಗಿ ಸಂಯೋಗಿಸಿ ದ್ರವವಾಗಿ ನೀರಿನೊಳಕ್ಕೆ ಹೊರಟುಹೋಗಿ ವಾಯುಗುಳ್ಳೆಗಳಾಗದಂತೆ ಒಂದು ತಂತ್ರವನ್ನು ಶೋಧಿಸಲಾಗಿದೆ.

ಹಬೆ ಟಾರ್ಪೀಡೊದಲ್ಲಿ ನಾಲ್ಕು ಮುಖ್ಯ ವಿಭಾಗಗಳಿವೆ. ಮೂಗಿನಲ್ಲಿ ಧ್ವನಿಗತಿ ಶಾಸ್ತ್ರದ ಸಾಧನಗಳು, ಎಲೆಕ್ಟ್ರಾನಿಕ್ ಪರಿಸರಗಳೂ ಇವೆ; ಇವು ಜಲಾಂತರ್ಗಾಮಿಗಳನ್ನು ಬೇಟೆಯಾಡಿ ಹಿಡಿಯುತ್ತವೆ. ವಾರ್‍ಹೆಡ್ (ನೌಕಾಸ್ಫೋಟಕದ ಸಿಡಿತಲೆ) ಎಂಬುದು ಬಹು ಉಗ್ರ ಸ್ಫೋಟಕಗಳಿಂದ ತುಂಬಲ್ಪಟ್ಟ ಪಾತ್ರೆ. ಈ ಸ್ಫೋಟಕದ ತೂಕ 400 ರಿಂದ 800 ಪೌಂಡುಗಳಷ್ಟು . ಇದನ್ನು ಸ್ಫೋಟಿಸಲು ತಕ್ಕ ಯಂತ್ರರಚನೆ ಇದೆ. ಸಿಡಿತಲೆಯ ಪಕ್ಕದಲ್ಲಿ ಸಂಮರ್ದಿತ ವಾಯುವಿನಿಂದ ತುಂಬಿದ ಊದುಕೊಳವೆಯ ಆಕಾರದ ಒಂದು ಕುಪ್ಪೆ ಉಂಟು. ಇದು ಸಿಡಿತಲೆ ಕೀಲಿಗೆ ತಿರುಪುಮೊಳೆಗಳಿಂದ ಭದ್ರವಾಗಿ ಜಂಟಿಸಲ್ಪಟ್ಟಿದೆ. ಕುಪ್ಪೆಯ ಉದ್ದ ಟಾರ್ಪೀಡೊದ 1/3ರಷ್ಟು. ಸಂಮರ್ದಿತ ವಾಯುವಿನ ಅಮುಕಾಟವನ್ನು ತಡೆದುಕೊಳ್ಳುವಷ್ಟು ಬಲವಾಗಿರುವಂತೆ ಅದನ್ನು ಉಕ್ಕಿನಿಂದ ಮಾಡಲಾಗಿದೆ. ಕುಪ್ಪೆಯ ಆಚೆ ಇಂಧನ ಮತ್ತು ನೀರಿನ ತೊಟ್ಟಿಗಳು, ವಾಯುಕವಾಟಗಳು, ಚುಕ್ಕಾಣಿಗಳು, ಕೆಟ್ಟ ಅನಿಲಗಳನ್ನು ಹೊರದೂಡಲು ಕವಾಟಗಳು, ಚಾಲಕ ದಂಡಗಳನ್ನು (ಪ್ರೊಪೆಲ್ಲರ್ಸ್) ಮುಂದೂಡುವ ಸಲಕರಣೆಗಳು, ಟಾರ್ಪೀಡೋವನ್ನು ಮುಂದೂಡುವ ಮತ್ತು ನಿಯಂತ್ರಿಸುವ ವ್ಯವಸ್ಥೆಗಳು, ಬ್ಯಾಟರಿ ಮತ್ತು ವಿದ್ಯುತ್ ಮೋಟರ್ ಅಥವಾ ಎಂಜಿನ್ನುಗಳಿವೆ.

ಹೊಡೆತದ ತೀವ್ರತೆಯನ್ನು ಹೆಚ್ಚಿಸಲು ವೇಗವಾಗಿ ಓಡುವ ಚಿಕ್ಕ ದೋಣಿಗಳಲ್ಲಿ ಟಾರ್ಪೀಡೊಗಳನ್ನಿಟ್ಟು ಅವುಗಳಿಂದ ನಿಧಾನವಾಗಿ ಹೋಗುವ ದೊಡ್ಡ ಯುದ್ಧನಾವೆಗಳಿಗೆ ಹೊಡೆಯುತ್ತಿದ್ದರು. ಇವಕ್ಕೆ ಟಾರ್ಪೀಡೊ-ದೋಣಿಗಳೆಂದು ಹೆಸರು. ಇವುಗಳ ಪ್ರತೀಕಾರಕ್ಕಾಗಿ ನಾಶಕಾರಿ (ಡಿಸ್ಟ್ರಾಯರ್) ಎಂಬ ನೌಕೆಗಳನ್ನು ನಿರ್ಮಿಸಲಾಯಿತು. ಅಮೆರಿಕದಲ್ಲಿ ಟಾರ್ಪೀಡೊವನ್ನು ತಿರುಬಾನಿಯಿಂದ ಓಡಿಸುತ್ತಿದ್ದರು. ಆ ಟಾರ್ಪೀಡೊಗೆ ಬ್ಲಿಸ್-ಲೀವಿಟ್ ಎಂದು ಹೆಸರು. ಅದನ್ನು ಎರಡನೆಯ ಮಹಾಯುದ್ಧಕ್ಕೆ ಮೊದಲು ಬಹಳ ಉಪಯೋಗಿಸುತ್ತಿದ್ದರು.

ವಿಶೇಷ ಟಾರ್ಪೀಡೊಗಳು[ಬದಲಾಯಿಸಿ]

ಕೆಲವು ವಿಶೇಷ ಬಗೆಯ ಟಾರ್ಪೀಡೊಗಳಿವೆ. ಒಂದು ಬಗೆಯ ಟಾರ್ಪೀಡೊ ತನ್ನ ಗುರಿಯನ್ನು ತಂತಿಯ ಮೂಲಕ ಮುಟ್ಟುತ್ತದೆ. ತಂತಿಯಿಂದ ಸುತ್ತಿದ ಒಂದು ರಾಟೆಯನ್ನು ಅದಕ್ಕೆ ಸೇರಿಸಿದೆ. ಟಾರ್ಪೀಡೊ ಆ ತಂತಿಯನ್ನು ಸಡಿಲ ಮಾಡಿಕೊಳ್ಳುತ್ತ ಮುಂದೆ ಮುಂದೆ ಹೋಗುವುದು. ಅದರ ಮಾಲಿಕರು ತಂತಿಯ ಮೂಲಕ ಅದಕ್ಕೆ ಸಂಜ್ಞೆಗಳನ್ನು ಕಳುಹಿಸುತ್ತಾರೆ. ಕೊನೆಗೆ ಅದು ನಿಶ್ಚಿತ ಗುರಿಯನ್ನು ಮುಟ್ಟತ್ತದೆ. ಇನ್ನೊಂದು ವಿಶಿಷ್ಟ ಬಗೆಯ ಟಾರ್ಪೀಡೊವನ್ನು ಚೌಕಟ್ಟಿನಲ್ಲಿ ಕೂಡಿಸಿ ಅದನ್ನು ರಾಕೆಟ್ ಎಂಜಿನ್ನಿನಿಂದ ವಾಯುವಿನಲ್ಲಿ ಹಾರಿಸುತ್ತಾರೆ. ಚೌಕಟ್ಟು ಮತ್ತು ಟಾರ್ಪೀಡೊ ಎರಡೂ ನಿರ್ದಿಷ್ಟ ಸ್ಥಾನದ ಕಡೆ ಹಾರಿಹೋಗುತ್ತವೆ. ಅಲ್ಲಿ ಒಂದು ಯಂತ್ರರಚನೆ ಅವೆರಡನ್ನು ಬೇರ್ಪಡಿಸುತ್ತವೆ. ಟಾರ್ಪೀಡೊ ನೀರಿನೊಳಗೆ ಬಿದ್ದು ವೇಗದಿಂದ ನಿರ್ದಿಷ್ಟ ಗುರಿಯನ್ನು ಹಿಡಿಯುತ್ತದೆ. ನೀರಿನ ಮೇಲಿರುವ ಹಡಗಿನಿಂದ ಇಂಥ ರಾಕೆಟ್-ಟಾರ್ಪೀಡೊವನ್ನು ಹಾರಿಸಿ ಅದು ಅನೇಕ ಮೈಲುಗಳ ದೂರದಲ್ಲಿರುವ ಜಲಾಂತರ್ಗಾಮಿಯನ್ನು ಆಕ್ರಮಿಸುವಂತೆ ಮಾಡಬಹುದು. ಕೆಲವು ಟಾರ್ಪೀಡೊಗಳು ಬಿರಟೆಯನ್ನು ತೆಗೆಯುವ ತಿರುಪುಮೊಳೆಯ ಆಕಾರದಲ್ಲಿ ಸುತ್ತುತ್ತ ಹೋಗುತ್ತವೆ. ಅವುಗಳ ಸಿಡಿತದಿಂದ ಹಡಗುಗಳಿಗೆ ಆಗುವ ಹಾನಿ ಹೆಚ್ಚು ಇನ್ನು ಕೆಲವು ಟಾರ್ಪೀಡೊಗಳು ಹೇಗೆ ರಚಿಸಲ್ಪಟ್ಟಿವೆಯೆಂದರೆ ಅವು ಹಡಗಿನ ಸಮೀಪ ಹೋದಾಗ ಹಡಗಿನ ಶಬ್ದ ಅಥವಾ ಹಡಗಿನ ಕಾಂತಗುಣದ ಪರಿಣಾಮವಾಗಿ ಸ್ಫೋಟಿಸುತ್ತವೆ. ಜಪಾನಿಯರ ಒಂದು ಬಗೆ ಟಾರ್ಪೀಡೊದಲ್ಲಿ ಒಬ್ಬ ಚಾಲಕ (ಪೈಲಟ್) ಅದನ್ನು ಶತ್ರುನೌಕೆಯ ಬಳಿಗೆ ಒಯ್ಯುತ್ತಾನೆ. ಅದರ ಸ್ಫೋಟನ ಹಡಗನ್ನು ಸಿಡಿಸುವುದಲ್ಲದೆ ಅವನನ್ನೂ ಕೊಲ್ಲುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: