ಟಾರ್ಟ್ರಿಸಿಡೀ
ಟಾರ್ಟ್ರಿಸಿಡೀ-ಲೆಪಿಡಾಪ್ಟರ ಗಣಕ್ಕೆ ಸೇರಿದ ಒಂದು ಕುಟುಂಬ. ಎಲೆಗಳನ್ನು ತಿಂದು ಹಾಳುಮಾಡುವ ಪತಂಗಗಳನ್ನು ಒಳಗೊಂಡಿದೆ.
ಇವುಗಳ ಡಿಂಬಗಳು ಎಲೆಗಳನ್ನು ಸುತ್ತಿ ಕೊಳವೆಯಂತೆ ಮಾಡಿಕೊಂಡು ಒಳಗೆ ಹುದುಗಿ ಹಸಿರನ್ನು ತಿಂದು ಜೀವಿಸುತ್ತವೆ. ಇದರಿಂದ ಇವಕ್ಕೆ ಎಲೆಸುರುಳಿಸುತ್ತುವ ಹುಳುಗಳು (ಲೀಫ್ ರೋಲರ್ಸ್) ಎಂಬ ಹೆಸರು ಬಂದಿದೆ. ಬಹಳ ಸಣ್ಣಗಾತ್ರದ ಪತಂಗಗಳಿವು; ದೇಹದ ಬಣ್ಣ ಕಂದು ಇಲ್ಲವೆ ಬೂದು. ರೆಕ್ಕೆಗಳ ಮೇಲೆ ಗಾಢವರ್ಣದ ಚುಕ್ಕೆಗಳಿವೆ. ಮುಂಭಾಗದ ರೆಕ್ಕೆಗಳ ಅಂಚು ಚಚ್ಚೌಕವಾಗಿ ಕತ್ತರಿಸಿದಂತಿದೆ. ಎಲ್ಲ ಪತಂಗಗಳಂತೆಯೆ ಇವುಗಳ ಚಟುವಟಿಕೆಯೂ ಸಂಜೆ ಹೆಚ್ಚು. ಹಣ್ಣಿನ ಮರಗಳೂ, ಹಾಗೂ ಕಾಡು ಮರಗಳ ಎಲೆಗಳ ತಳದಲ್ಲಿ ಮೊಟ್ಟೆ ಇಡುತ್ತವೆ. ಮೊಟ್ಟೆಗಳು ಚಪ್ಪಟೆಯಾಗಿಯೂ ನುಣುಪಾಗಿಯೂ ಇವೆ; ಇವುಗಳ ಆಕಾರ ಅಂಡದಂತೆ. ಡಿಂಬಗಳು ಉದ್ದವಾಗಿವೆ; ಇವುಗಳ ಮೈಮೇಲೆ ಕೂದಲುಗಳುಂಟು. ಸಾಮಾನ್ಯವಾಗಿ ಎಲೆಗಳಲ್ಲೇ ಇವು ಕೋಶವಸ್ಥೆಯನ್ನು ಸೇರುವುವಾದರೂ ಕೆಲವು ಪ್ರಭೇದಗಳ ಡಿಂಬಗಳು ಬೇರು, ಕಾಂಡ, ಹೂವು ಅಥವಾ ಕಾಯಿಗಳನ್ನು ಕೊರೆದು ಒಳಗೆ ಸೇರಿಕೊಂಡು ಕೋಶಾವಸ್ಥೆಯನ್ನು ಕಳೆಯುವುದುಂಟು. ಈ ಕುಟುಂಬದ ಪತಂಗಗಳು ಕೆಲವೊಮ್ಮೆ ಅಗಾಧ ಸಂಖ್ಯೆಯಲ್ಲಿ ಮರಗಿಡಗಳನ್ನು ಹಾಳು ಮಾಡುವುದುಂಟು. ಉದಾಹರಣೆಗೆ ಹೊಮೋನ ಕಾಫಿಯೇರಿಯ ಎಂಬುದು ಕಾಫಿ ಎಲೆಗಳನ್ನು ತಿನ್ನುತ್ತದೆ. ಹೀಗೆಯೇ ಕೋರಿಸ್ಟೊನ್ಯೂರ ಫ್ಯೂಮಿಫೆರಾನ ಎಂಬುದು ಫರ್, ಸ್ಟ್ರೂಸ್ ಮತ್ತಿತರ ನಿತ್ಯಹಸಿರಿನ ಮರಗಳನ್ನು ತಿಂದು ನಾಶಪಡಿಸುವುದು.
ಚಿತ್ರಸಂಪುಟ[ಬದಲಾಯಿಸಿ]
Choristoneura fumiferana, larva
Pandemis limitata, larva