ಝೆನೊಫನೀಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಝೆನೊಫನೀಸ್ - ಕ್ರಿ.ಪೂ. 6-5ನೆಯ ಶತಕ. ಪ್ರಸಿದ್ಧ ಗ್ರೀಕ್ ಕವಿ. ತತ್ತ್ವಜ್ಞಾನಿ. ಎಲೀಯ್ಯಾಟಿಕ್ ಪಂಥದ ಖ್ಯಾತ ಸ್ಥಾಪಕ.

ಬದುಕು ಮತ್ತು ತತ್ವಜ್ಞಾನ[ಬದಲಾಯಿಸಿ]

ಆಯೋನಿಯದ ಕೊಲೊಫನ್ ಗ್ರಾಮದಲ್ಲಿ ಜನಿಸಿದ. ಹುಟ್ಟೂರಿನಿಂದ ನಿರ್ವಾಸಿತನಾಗಿ ಸಿಸಿಲಿಯಲ್ಲಿ ಕೆಲಕಾಲ ನೆಲೆಸಿದರು. ಆಮೇಲೆ ದಕ್ಷಿಣ ಇಟಲಿಯ ಈಲೀಯದಲ್ಲಿ ಬಂದು ನಿಂತ. 67 ವರ್ಷಗಳ ಮುಂಚೆ 25 ವರ್ಷದವನಾಗಿದ್ದಾಗ ಲೋಕಸಂಚಾರವನ್ನು ಆರಂಭಿಸಿದುದಾಗಿ ತಾನೇ ತನ್ನ ಒಂದು ಕಾವ್ಯದಲ್ಲಿ ಹೇಳಿಕೊಂಡಿದ್ದಾನೆ. ಇದರಿಂದ ಈತ ಸಾಯುವಾಗ 92 ವರ್ಷಕ್ಕಿಂತ ಮೇಲ್ಪಟ್ಟು ವಯಸ್ಸಿನವನಾಗಿರಬೇಕೆಂದು ತಿಳಿಯಬಹುದು, ತನ್ನ ಸಂಚಾರವೇಳೆಯಲ್ಲಿ ಈತ ತನ್ನ ಕವಿತೆಗಳನ್ನು ಜನರ ಮುಂದೆ ಓದಿ ಹೇಳಿ ಅದರ ತತ್ತ್ವಗಳನ್ನು ವಿವರಿಸುತ್ತಿದ್ದ. ಈತನ ಶೋಕಪದ್ಯಗಳಲ್ಲಿ ಜನ್ಮಾಂತರ ವಾದದ ನಿಂದೆಯಿದ್ದರೂ ಕೆಲವು ಕಾವ್ಯಗಳಲ್ಲಿ ನಾಸ್ತಿಕವಾದದ ಧಿಕ್ಕಾರ ಕಂಡುಬರುತ್ತದೆ. ನಾಸ್ತಿಕವಾದದಿಂದ ರಾಜ್ಯಕ್ಕೂ ಜನತೆಗೊ ಹಿತವೂ ಆಗುವುದಿಲ್ಲವೆಂದು ಈತ ಸಾರಿದ್ದಾನೆ. ವಿಷಯಲೋಲುಪತೆಯನ್ನೂ ಸುಖಲಾಲಸೆಯನ್ನೂ ಉಳಿದು ನಿಯಮಬದ್ಧವಾಗಿ ಸಮಾಜ ಜೀವನದಲ್ಲಿ ಸುಖವನ್ನು ಅನುಭವಿಸಬೇಕೆಂದು ಇವನ ಬೋಧೆ. ಅಸಂಬದ್ಧವಾದ ಪುರಾಣಗಳ ಚರಿತ್ರಗಳನ್ನೂ ದೇವತಾವಾದವನ್ನೂ ಕೆಲವೆಡೆ ನಿರಾಕರಿಸಿದ್ದಾನೆ. ಏಕದೇವತಾವಾದವನ್ನು ಅಂಗೀಕರಿಸಿ ಪಾರ್ಮೆನೈಡೀಝ್ ನ ಏಕಚೇತನ ಬಹುದೇವತಾವಾದಕ್ಕೆ ಅಸ್ತಿಭಾರ ಹಾಕಿಕೊಟ್ಟಿದ್ದಾನೆ.

ವಸ್ತುವಿನ ದೃಷ್ಟಿಯಿಂದ ಈತನ ಇತರ ಕಾವ್ಯಗಳನ್ನು ಮೂರು ಬಗೆಯಾಗಿ ವಿಂಗಡಿಸಬಹುದು : 1. ದೇವತಾಪ್ರಕರಣ. 2. ಸೃಷ್ಟಿಪ್ರಕರಣ. 3. ಜ್ಞಾನಪ್ರಕರಣ. ದೇವತಾಪ್ರಕರಣದಲ್ಲಿ ದೇವನು ಒಬ್ಬನೇ ಎಂದೂ ಉಳಿದ ದೇವತೆಗಳು ಅವನ ಪರಿವಾರವೆಂದೊ ಸಾರಿದ್ದಾನೆ. ಆ ಪರದೈವ ಚಿದಾನಂದಸ್ವರೂಪನಾಗಿದ್ದು ಸಂಕಲ್ಪಮಾತ್ರದಿಂದ ಜಗತ್ತನ್ನು ನಡುಗಿಸಬಲ್ಲವನೊ ಸರ್ವತ್ರವ್ಯಾಪ್ತನೂ ಕೊಟಸ್ಠನೂ ಆಗಿದ್ದಾನೆ. ಇಂಥ ಅದ್ಭುತ ಶಕ್ತಿಯುಳ್ಳ ಪರಮಾತ್ಮನಿಗೆ ಮಾನವರಂತೆ ಅಲ್ಪಶಕ್ತಿ ಕಾಮಲೋಲುಪತೆ ಮೊದಲಾದ ಕ್ಷುದ್ರ ದೋಷಗಳನ್ನು ಅನ್ವಯಿಸುತ್ತಿರುವ ವಾದಿಗಳನ್ನು ನಿಂದಿಸಿದ್ದಾನೆ. ಸೃಷ್ಟಿಪ್ರಕರಣದಲ್ಲಿ ಪೃಥ್ವೀತತ್ತ್ವ ಜಲತತ್ತ್ವಗಳಿಂದ ಈ ಭೌತಪದಾರ್ಥಗಳು ನಿರ್ಮಿಸಲ್ಪಟ್ಟಿವೆ, ವಾಯುತತ್ತ್ವ ಇವೆರಡಕ್ಕಿಂತ ಸೂಕ್ಷ್ಮವಾಗಿದೆ. ಅವುಗಳ ಮೂಲಕಾರಣ ಅನಾದಿಯಾದ ಶಕ್ತಿಯಲ್ಲಿದೆ-ಇತ್ಯಾದಿ ವಿಚಾರಗಳಿವೆ. ದೇವತೆಗಳು ಅಲ್ಪಶಕ್ತಿಯುಳ್ಳ ಮಾನವನಿಗೆ ಅನಾಥವಾದ ಪರಮಾತ್ಮನ ಜ್ಞಾನವನ್ನು ಪೂರಾ ತಿಳಿಸಲಿಲ್ಲವಾಗಿ ಈ ಅನಾದಿ ತತ್ತ್ವವನ್ನು ಗ್ರಹಿಸಲು ಶಕ್ಯವಾಗುವುದಿಲ್ಲ ಎಂಬ ಮಾತು ಜ್ಞಾನಪ್ರಕರಣದ ತಾತ್ಪರ್ಯವಾಗಿದೆ. ಝೆನೊಫನೀಸ್ ಪರತತ್ತ್ವವಾದಿಯೂ ಅಲ್ಲ, ಭೌತವಾದಿಯೂ ಅಲ್ಲ. ಆತ ಕವಿಯೂ ತೀಕ್ಷ್ಣ ಪ್ರತಿಭಾವಂತನೂ ಆಗಿದ್ದ. ತನ್ನ ಕೃತಿಗಳಲ್ಲಿ ಆತ ಭಿನ್ನವಾದ ಜಗತ್ತಿನಲ್ಲಿ ಒಂದು ಅಚಿಂತ್ಯ ಶಕ್ತಿ ಇದೆ ; ಅದೇ ಪರಮಾತ್ಮ ಎಂದು ಹೇಳಿದ್ದಾನೆ. ಇದು ಝೆನೊಫನೀಸನನ್ನು ಕುರಿತು ತೀಯಫ್ರ್ಯಾಸ್ಟಸ್ ಹೇಳಿದ ಮಾತು.



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: