ವಿಷಯಕ್ಕೆ ಹೋಗು

ಜ್ವಾಲಾನಿಲರಂಧ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜ್ವಾಲಾನಿಲರಂಧ್ರ - ಜ್ವಾಲಾಮುಖಿವಲಯದಲ್ಲಿ (ಅದರಲ್ಲೂ ಸಾಧಾರಣವಾಗಿ ಲಾವಾದಲ್ಲಿ) ಇರುವ ಮತ್ತು ನೆಲದಡಿಯ ಅತ್ಯುಷ್ಣತೆಯ ಅನಿಲಗಳಿಗೂ ತೇವಗಳಿಗೂ ಹೊರಹೊಮ್ಮಲು ಬಾಯಿಯಂತಿರುವ ರಂಧ್ರ (ಪ್ಯೂಮ್‍ರೋಲ್).

ಸಿಸಿಲಿಯಲ್ಲಿನ ಜ್ವಾಲಾನಿಲರಂಧ್ರಗಳು


ಅತೀವ ಉಷ್ಣಮಯವಾದ ಭೂಗರ್ಭದ ಅಂತರಾಳದ (ಮ್ಯಾಗ್ಮಾವಲಯ. ಚಲನವಲನದಿಂದ ಭೂಮಿಯ ಮೇಲ್ಭಾಗದಲ್ಲಿ ಕೆಲವು ಘಟನೆಗಳಾಗುವುವು. ಅವುಗಳಲ್ಲಿ ಜ್ವಾಲಾಮುಖಿಗಳು ಮುಖ್ಯವಾದವು. ಇವು ನಿಜಕ್ಕೂ ಭೂಕವಚದ ಅಡಿಯಲ್ಲಿರುವ ಮ್ಯಾಗ್ಮಾವಲಯಕ್ಕೂ ಹೊರಭಾಗಕ್ಕೂ ಸಂಪರ್ಕವನ್ನು ಏರ್ಪಡಿಸುವ ಕೊಳವೆಗಳಂತಿವೆ. ಇವುಗಳ ಮೂಲಕ ಕೆಲವೊಮ್ಮೆ ಶಿಲಾಪ್ರವಾಹ (ಲಾವಾರಸ) ಕೆಲವೊಮ್ಮೆ ಬಗೆಬಗೆಯ ಅನಿಲಗಳು ಹೊರಬರುವುವು. ಕೊಳವೆಯ ರಂಧ್ರ ಮುಚ್ಚುತಡೆಯಾಗಿದ್ದರೆ ಒಳಗಿನ ಅನಿಲಗಳ ಒತ್ತಡದಿಂದ ಜ್ವಾಲಾಮುಖಿಯ ಸ್ಪೋಟನವಾಗುವುದು. ಶಿಲಾಪ್ರವಾಹಕ್ಕಿಂತ ಅನಿಲಗಳೇ ಜ್ವಾಲಾವುಖಿಯ ಸ್ಥಿರಲಕ್ಷಣವೆಂಬುದು ಖಚಿತವಾಗಿದೆ. ಜ್ವಾಲಾಮುಖಿಗಳಲ್ಲಿ ಕೆಲವು ಆಗಾಗ್ಗೆ ತಮ್ಮ ಚೇತನ ಸ್ವಭಾವವನ್ನು ವ್ಯಕ್ತಗೊಳಿಸಿ ಸಜೀವವಾಗಿದ್ದರೆ ಬೇರೆ ಕೆಲವು ದೀರ್ಘಕಾಲಾವಧಿಯಲ್ಲಿ ಒಮ್ಮೊಮ್ಮೆ ಮಾತ್ರ ಜಾಗೃತವಾಗುವ ಸುಪ್ತಜಾತಿಯವೂ ಇವೆ. ಹೀಗೆ ಜ್ವಾಲಾಮುಖಿಗಳು ಸುಪ್ತವಾದಾಗ ಅಲ್ಲಿಯ ಭೂಗರ್ಭದೊಳಗಿನ 700( ಅ. ಮಿಕ್ಕಿದ ಉಷ್ಣತೆ ಇರುವ ನೀರಾವಿ ಮತ್ತು ಅನಿಲಗಳು ಸುತ್ತಲಿನ ಶಿಲೆಗಳ ಬಿರುಕುಗಳಿಂದ ಹೊರನುಗ್ಗಲು ಯತ್ನಿಸುವುವು. ಈ ಬಗೆಯ ಬಿರುಕುಗಳೇ ಜ್ವಾಲಾನಿಲರಂಧ್ರಗಳು. ಇವುಗಳಿಂದ ಹೊರಹೊಮ್ಮುವ ಹೊಗೆಯಾಕಾರದ ಅನಿಲಗಳಲ್ಲಿ ನೀರಾವಿಯೇ (ಉಗಿ)_ 99% ರಷ್ಟಿದೆ ; ಉಳಿದ ಅನಿಲಗಳೆಂದರೆ ಇಂಗಾಲಾಮ್ಲ, ಹೈಡ್ರೋಕ್ಲೋರಿಕ್ ಆಮ್ಲ, ಹೈಡ್ರೋಜನ್ ಸಲ್ಫೈಡ್ ಮುಂತಾದವು. ಗಂಧಕಾನಿಲರಂಧ್ರ (ಸೊಲ್ಫಾಟರಸ್) ಎಂದು ಕರೆಯುವರು. ಕೆಲವು ರಂಧ್ರಗಳಿಂದ ಕಬ್ಬಿಣ, ತಾಮ್ರ ಸೀಸ ಮತ್ತು ಇತರ ಲೋಹಾಂಶಗಳಿರುವ ಅನಿಲಗಳೂ ಹೊರಚಿಮ್ಮುವುವು. ಮ್ಯಾಗ್ಮಾಜನ್ಮವಾದ ಈ ಅನಿಲಗಳು ಕ್ಲೋರಿನ್ ಮತ್ತು ಪ್ಲೊರಿನ್ನುಗಳೊಂದಿಗೆ ಮಿಶ್ರವಾಗಿ ಬೇಗನೆ ಆವಿಯಾಗುವ ರೂಪದಲ್ಲಿರುತ್ತವೆ. ಈ ಲೋಹಾಂಶಗಳು ಭೂಮಿಯ ಹೊರ ಭಾಗವನ್ನು ಸಮೀಪಿಸಿದಂತೆ ರಂಧ್ರಗಳು ಮುಖದ ಇಕ್ಕಡೆಗಳಲ್ಲಿ ಖನಿಜಗಳಾಗಿ ಸಂಗ್ರಹವಾಗುವುವು. ಕಬ್ಬಿಣದ ಅದುರಾಗಿರುವ ಹೆಮಟೈಟ್ ಈ ರೀತಿಯಲ್ಲಿ ಸಂಚಯನವಾಗುವ ಖನಿಜ. ವೆಸೂವಿಯಸ್ ಜ್ವಾಲಾಮುಖಿಯ ಒಂದು ಸ್ಫೋಟನಕಾಲದಲ್ಲಿ 3 ಅಡಿ ಅಗಲದ ಬಿರುಕಿನಲ್ಲಿ ಹೀಗೆ ಹೆಮಟೈಟ್ ಸಂಗ್ರಹವಾಯಿತು. ವೆಸೂವಿಯಸ್‍ನ ಜ್ವಾಲಾನಿಲರಂಧ್ರಗಳಿಂದ ಹೊರಚಿಮ್ಮಿದ ಆಗಾಗ ಹಲೆನಾ (ಸೀಸದ ಅದುರು) ನಿರ್ಮಾಣವಾಗುತ್ತದೆ. ಇದರಿಂದಾಗಿ ಪ್ರಪಂಚದ ಅದುರುಗಳ ನಿಕ್ಷೇಪಗಳೆಲ್ಲ ಮ್ಯಾಗ್ಮಾ ಮೂಲದವೆಂಬ ಭಾವನೆ ದೃಢಗೊಂಡಿದೆ.

ಅಲಾಸ್ಕಾದ ಕಟಮಾಯಿ ಜ್ವಾಲಾಮುಖಿ (1912ರಲ್ಲಿ ಸ್ಪೋಟಗೊಂಡುದು) ವಲಯದ ಕಣಿವೆಯಲ್ಲಿ ಇಂಥ ಅನೇಕ ಜ್ವಾಲಾನಿಲರಂಧ್ರಗಳಿವೆ. ಆದ್ದರಿಂದ ಆ ಕಣಿವೆಗೆ ಸಾವಿರ ಹೊಗೆಗಳ ಕಣಿವೆ ಎಂಬ ಹೆಸರು ಬಂದಿದೆ. ಇಟಲಿ ಮತ್ತು ಐಸ್‍ಲೆಂಡುಗಳಲ್ಲಿನ ಜ್ವಾಲಾನಿಲರಂಧ್ರಗಳಲ್ಲಿನ ಅತ್ಯುಷ್ಣವಾದ ನೀರಾವಿಯ ಶಕ್ತಿಯನ್ನು ವಿದ್ಯುದುತ್ಪಾದನೆಗಾಗಿ ಉಪಯೋಗಿಸಿಕೊಳ್ಳಲಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: