ವಿಷಯಕ್ಕೆ ಹೋಗು

ಜ್ಯಾಕೊಬಿನರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜ್ಯಾಕೊಬಿನರು-ಫ್ರಾನ್ಸಿನ ಕ್ರಾಂತಿಯ ಕಾಲದಲ್ಲಿ (1789) ಅಸ್ತಿತ್ವಕ್ಕೆ ಬಂದ ಪ್ರಸಿದ್ಧ ರಾಜಕೀಯ ಸಂಘವೊಂದರ ಸದಸ್ಯರು.

ಪ್ರಾರಂಭದಲ್ಲಿ ಈ ಸಂಘ ಒಂದು ಸಡಿಲವಾದ ಸಂಘಟನೆಯಾಗಿತ್ತು. ಇದರ ಸದಸ್ಯರು ಇದನ್ನು ಸಂವಿಧಾನದ ಸ್ನೇಹಿತರ ಸಂಘವೆಂದು ಕರೆಯುತ್ತಿದ್ದರು. ಕ್ಲಬ್ ಬ್ರೆಟನ್ ಎಂದು ಪ್ರಸಿದ್ಧವಾಗಿತ್ತು. ವರ್ಸೇಲ್ಸಿನಲ್ಲಿ ಈ ಸಂಘ ಪ್ರಾರಂಭವಾದಾಗ ಬಹುಪಾಲು ಬ್ರಿಟ್ಯಾನಿ ಪ್ರಾಂತ್ಯದ ಡೆಪ್ಯೂಟಿಗಳೇ ಇದರ ಸದಸ್ಯರಾಗಿದ್ದರು. ರಾಷ್ಟ್ರೀಯ ಸಭೆಯ ಕೇಂದ್ರ ಪ್ಯಾರಿಸಿಗೆ ವರ್ಗವಾದಾಗ ಈ ಸಂಘವೂ ಅಲ್ಲಿಗೆ ಸ್ಥಳಾಂತರಗೊಂಡಿತು. ಪ್ಯಾರಿಸಿಗೆ ಬಂದಮೇಲೆ ಇತರ ಸಾಮಾನ್ಯ ಜನರೂ ಈ ಸಂಘದ ಸದಸ್ಯರಾದರು. ಪ್ಯಾರಿಸಿನಲ್ಲಿ ಹಳೆಯ ಜ್ಯಾಕೊಬಿನ್ ಕಾನ್ವೆಂಟ್ ಒಂದರಲ್ಲಿ ಈ ಸಂಘದ ಸದಸ್ಯರ ಸಭೆ ಸೇರುತ್ತಿದ್ದುದರಿಂದ ಇದರ ವಿರೋಧಿಗಳು ಈ ಸಂಘದ ಸದಸ್ಯರನ್ನು ಜ್ಯಾಕೊಬಿನರೆಂದು ಕರೆಯುತ್ತಿದ್ದರು. 1. ರಾಷ್ಟ್ರೀಯ ಸಭೆ ತೀರ್ಮಾನಿಸಬೇಕಾದ ಪ್ರಶ್ನೆಗಳನ್ನು ಮುಂಗಡವಾಗಿ ಚರ್ಚಿಸುವುದು. 2 ಫ್ರಾನ್ಸಿನ ಸಂವಿಧಾನದ ರಚನೆಗಾಗಿ ಮತ್ತು ಅದನ್ನು ಬಲಪಡಿಸುವುದಕ್ಕಾಗಿ ಕೆಲಸ ಮಾಡುವುದು ಮತ್ತು 3 ಇದೇ ರೀತಿ ಅಸ್ತಿತ್ವಕ್ಕೆ ಬಂದಿದ್ದ ಇತರ ರಾಜಕೀಯ ಸಂಘಗಳೊಡನೆ ವ್ಯವಹರಿಸುವುದು - ಇವು ಈ ಸಂಘದ ಮುಖ್ಯ ಉದ್ದೇಶಗಳಾಗಿದ್ದವು. ಈ ಸಂಘಕ್ಕೆ ಪ್ರತಿ ತಿಂಗಳೂ ಚುನಾಯಿಸಲ್ಪಡುವ ಒಬ್ಬ ಅಧ್ಯಕ್ಷ, ನಾಲ್ವರು ಕಾರ್ಯದರ್ಶಿಗಳು, ಒಬ್ಬ ಕೋಶಾಧಿಕಾರಿ, ಪತ್ರವ್ಯವಹಾರ ಮತ್ತು ಸಂಘದ ಇತರ ವಿಚಾರಗಳ ಆಡಳಿತವನ್ನು ನೋಡಿಕೊಳ್ಳಲು ಚುನಾಯಿತ ಸಮಿತಿಗಳು ಇದ್ದವು. ಈ ಸಂಘದ ಸದಸ್ಯರು ರಾಜಕೀಯದಲ್ಲಿ ಉಗ್ರಗಾಮಿಗಳಾಗಿದ್ದರು; ಸದಸ್ಯರಾಗಲು ಪಾವತಿ ಮಾಡಬೇಕಾಗಿದ್ದ ಚಂದಾ ಹಣ ಹೆಚ್ಚಾಗಿದ್ದುದರಿಂದ ಶ್ರೀಮಂತರೇ ಅದರ ಸದಸ್ಯರಾಗಿದ್ದರು. ಸಂಘದ ಪ್ರಾಂತೀಯ ಶಾಖೆಗಳಲ್ಲಿ ಪ್ರಜಾಪ್ರಭುತ್ವವಾದಿಗಳೂ ಮಧ್ಯಮ ವರ್ಗಕ್ಕೆ ಸೇರಿದವರೂ ಸದಸ್ಯರಾಗಿದ್ದರು.

ಬೆಳವಣಿಗೆ

[ಬದಲಾಯಿಸಿ]

ಫ್ರಾನ್ಸಿನ ಕ್ರಾಂತಿಯ ಮೊದಲನೆಯ ಸಂವಿಧಾನ ಜಾರಿಗೆ ಬಂದಾಗ ಶಾಸನ ಸಭೆ ಅಸ್ತಿತ್ವದಲ್ಲಿತ್ತು (1791ರ ಅಕ್ಟೋಬರ್ 1 ರಿಂದ 1792ರ ಸೆಪ್ಟೆಂಬರ್ 20). ಆಗ ಅನೇಕ ರಾಜಕೀಯ ಸಂಘಗಳು ಶಾಸನ ಸಭೆಯ ಪ್ರತಿಸ್ಪರ್ಧಿಗಳಾಗಿ ತಲೆ ಎತ್ತಿದ್ದವು. ಇವಗಳಲ್ಲಿ ಜ್ಯಾಕೊಬಿನರ ಸಂಘ ಬಹು ಮುಖ್ಯವಾದ್ದು. ಈ ಸಂಘ ಪದೇ ಪದೇ ಸಮಾವೇಶಗೊಂಡು ಶಾಸನಸಭೆಯ ಮುಂದಿದ್ದ ಪ್ರಶ್ನೆಗಳನ್ನು ಚರ್ಚಿಸುತ್ತಿತ್ತು. ಅಂದು ಸಂಘದಲ್ಲಿ ರೊಬೆಸ್ಟಿಯರ್ ಬಹಳ ಪ್ರಭಾವ ಹೊಂದಿದ್ದ ಸದಸ್ಯನಾಗಿದ್ದ. ಈತ ಉದಾರ ಪ್ರಜಾಪ್ರಭುತ್ವವಾದಿಯಾಗಿದ್ದರೂ ರಾಜಪ್ರಭುತ್ವವಾದಿಯೂ ಆಗಿದ್ದ. ಕ್ರಾಂತಿ ಮುಂದುವರಿದಂತೆ ಸಂಘದಲ್ಲಿಯ ಸಂಪ್ರದಾಯವಾದಿ ಸದಸ್ಯರನ್ನು ತೆಗೆದುಹಾಕಲಾಯಿತು. ಸಂಘ ತೀವ್ರಗಾಮಿಗಳ ಕೈಗೆ ಬಂತು. ಇದರ ಪ್ರಭಾವ ಫ್ರಾನ್ಸ್‍ನ್ನೆಲ್ಲ ಆವರಿಸಿತು. ಸಂಘದ ಶಾಖೆಗಳು ಎರಡು ಸಹಸ್ರಕ್ಕೂ ಹೆಚ್ಚಿನ ನಗರ ಮತ್ತು ಗ್ರ್ರಾಮಗಳಿದ್ದವು. ಕೇಂದ್ರ ಕಚೇರಿ ಆ ಶಾಖೆಗಳ ಮೇಲೆ ಸಂಪೂರ್ಣ ಹತೋಟಿ ಹೊಂದಿದ್ದು ಅವಕ್ಕೆ ಆಜ್ಞೆಗಳನ್ನು ನೀಡುತ್ತಿತ್ತು. ಜ್ಯಾಕೊಬಿನರು ತಮ್ಮ ಅಭಿಪ್ರಾಯಗಳನ್ನು ಕಾರ್ಯರೂಪಕ್ಕೆ ತರಲು ಫ್ರೆಂಚ್ ಸರ್ಕಾರದ ಮೇಲೆ ಬಲಪ್ರಯೋಗ ಮಾಡುವುದಕ್ಕೂ ತಯಾರಾಗಿದ್ದರು. ಅವರಿಗೆ ಕ್ರಾಂತಿಯಲ್ಲಿ ಪೂರ್ಣ ನಂಬಿಕೆ ಇತ್ತು.

ಪ್ರಾಬಲ್ಯ

[ಬದಲಾಯಿಸಿ]

ಆಸ್ಟ್ರಿಯ ಮತ್ತು ಪ್ರಷ್ಯ ದೇಶಗಳು ಫ್ರಾನ್ಸಿನ ರಾಜ 16ನೆಯ ಲೂಯಿಯ ಪರವಾಗಿ ಮತ್ತು ಕ್ರಾಂತಿಯ ವಿರುದ್ಧವಾಗಿ 1792 ರಲ್ಲಿ ಸೈನಿಕ ಕಾರ್ಯಾಚರಣೆ ಪ್ರಾರಂಭಿಸಿದಾಗ ಜ್ಯಾಕೊಬಿನರಿಗೆ ತಮ್ಮ ರಾಜನ ಮೇಲೆ ಸಂಶಯ ಬೆಳೆಯಿತು. ಆತ ಫ್ರಾನ್ಸಿನ ಶತ್ರುಗಳಿಗೆ ಫ್ರೆಂಚರ ಯುದ್ಧಕಾರ್ಯಾಚರಣೆಯ ವಿವರಗಳನ್ನು ನೀಡುತ್ತಿದ್ದನೆಂಬ ಶಂಕೆಯುಂಟಾಯಿತು. ಏತನ್ಮಧ್ಯೆ ಜ್ಯಾಕೊಬಿನರು ಪ್ಯಾರಿಸ್ ನಗರದ ಕಮ್ಯೂನಿನ ಹತೋಟಿ ಹೊಂದಿದರು. 1792ರ ಆಗಸ್ಟ್ 10ರಂದು ಪ್ಯಾರಿಸಿನ ದಂಗೆಯಲ್ಲಿ ಟ್ಯುಯಲರೀಸ್ ಅರಮನೆ ಸುಟ್ಟುಹೋಯಿತು. ಇದಕ್ಕೆ ಪ್ಯಾರಿಸಿನ ಕ್ರಾಂತಿಕಾರಿ ಕಮ್ಯೂನ್ ಕಾರಣವಾಗಿತ್ತು. ಜ್ಯಾಕೊಬಿನರು ಈ ದಂಗೆಯಲ್ಲಿ ನೇರವಾಗಿ ಭಾಗವಹಿಸಲಿಲ್ಲವಾದರೂ ಅದನ್ನು ಅನುಮೋದಿಸಿದರು. 16ನೆಯ ಲೂಯಿಯನ್ನು ಪದಚ್ಯುತಿಗೊಳಿಸುವುದು ಇವರ ಉದ್ದೇಶವಾಗಿತ್ತು. ಜ್ಯಾಕೊಬಿನರ ಹತೋಟಿಯಲ್ಲಿದ್ದ ಪ್ಯಾರಿಸ್ ಕಮ್ಯೂನು ರಾಜರಾಣಿಯರನ್ನು ಬಂಧನದಲ್ಲಿಟ್ಟಿತು. ಸಂಶಯಾಸ್ಪದರಾದ ಅನೇಕ ಮಂದಿ ದಸ್ತಗಿರಿಯಾಗಿ ಕೊಲೆಯಾದರು. ಇದು ಇತಿಹಾಸದಲ್ಲಿ ಸೆಪ್ಟೆಂಬರ್ ಕಗ್ಗೊಲೆ ಎಂದು ಹೆಸರಾಗಿದೆ. ಇದರಲ್ಲಿ ಜ್ಯಾಕೊಬಿನರ ಕೈವಾಡ ವಿಶೇಷವಾಗಿತ್ತು. 1792-1795 ರ ಅವಧಿಯಲ್ಲಿ ಫ್ರಾನ್ಸಿನ ಆಡಳಿತ ರಾಷ್ಟ್ರೀಯ ಸಭೆಯ ಹತೋಟಿಯಲ್ಲಿತ್ತು. ಈ ಸಭೆಯಲ್ಲಿ ಜ್ಯಾಕೊಬಿನರು ಮತ್ತು ಜಿರಾಂಡಿನರೇ ಹೆಚ್ಚಾಗಿದ್ದರು. ರಾಜತ್ವವನ್ನು ರದ್ದುಮಾಡಿದ ಮೇಲೆ ಜ್ಯಾಕೊಬಿನರು ಮತ್ತು ಜಿರಾಂಡಿನರ ಮಧ್ಯೆ ಹೋರಾಟ ಪ್ರಾರಂಭವಾಯಿತು. ಜಿರಾಂಡಿನರು ಪ್ಯಾರಿಸಿನ ದಬ್ಬಾಳಿಕೆಯನ್ನು ಸಹಿಸುತ್ತಿರಲಿಲ್ಲ. ಆದರೆ ಜ್ಯಾಕೊಬಿನರು ಪ್ಯಾರಿಸ್ಸಿನಲ್ಲಿ ಪ್ರಬಲರಾಗಿದ್ದರು. ಪ್ಯಾರಿಸ್ ನಗರವೇ ದೇಶವನ್ನಾಳಬೇಕೆಂಬುದು ಅವರ ಮನೋಭಾವವಾಗಿತ್ತು. ರಾಜತ್ವ ರದ್ದಾದಮೇಲೆ ಜ್ಯಾಕೊಬಿನರು 16ನೆಯ ಲೂಯಿಯನ್ನು ದೇಶದ್ರೋಹಕ್ಕಾಗಿ ವಿಚಾರಣೆ ನಡೆಸದೆ ಅವನ್ನು ಶಿಕ್ಷಿಸಬೇಕೆಂದು ಅಭಿಪ್ರಾಯಪಟ್ಟಿದ್ದರು. ಆದರೆ ಜಿರಾಂಡಿನರು ಇದಕ್ಕೆ ಒಪ್ಪಲಿಲ್ಲ. ಅನಂತರ ನೆಪಮಾತ್ರಕ್ಕೆ ವಿಚಾರಣೆ ನಡೆಸಿ ಆತ ದೇಶದ್ರೋಹಿ ಎಂಬ ಆಪಾದನೆಯನ್ನು ಸ್ಥಿರಗೊಳಿಸಲಾಯಿತು. ಜಿರಾಂಡಿನರು ಲೂಯಿಗೆ ಹಗುರಾದ ಶಿಕ್ಷೆ ನೀಡಬೇಕೆಂದು ವಾದಿಸಿದರು. ಆದರೆ ಜ್ಯಾಕೊಬಿನರು ಇದಕ್ಕೆ ಒಪ್ಪದೆ ಲೂಯಿಯ ಶಿರಚ್ಛೇದ ಮಾಡಿಸಿದರು (1793 ಜನವರಿ 21). ಇದಾದ ಅನಂತರ ಜ್ಯಾಕೊಬಿನರು ಬಲಪ್ರಯೋಗ ಮಾಡಿ ರಾಷ್ಟ್ರೀಯ ಸಭೆಯಿಂದ ಜಿರಾಂಡಿನರನ್ನು ಹೊರದೂಡಿದರು. ರಾಜತ್ವದದ್ದಾರ ಮೇಲೆ ರೋಬೆಸ್ಟಿಯರ್ ಸಾರ್ವಜನಿಕ ಸುರಕ್ಷತಾ ಸಮಿತಿಯ ಪ್ರಧಾನಿಯಾದ. ಅನಂತರದ ಭೀಕರಪರಿಸ್ಥಿತಿಗೆ ಜ್ಯಾಕೊಬಿನರು ಕಾರಣರು. ರೋಬೆಸ್ಟಿಯರ್ ಸುಮಾರು 4 ತಿಂಗಳುಗಳ ಕಾಲ ಪ್ರಭಾವಶಾಲಿಯಾಗಿದ್ದ. ಈ ಅವಧಿಯಲ್ಲಿ ಪ್ಯಾರಿಸಿನ ಕಮ್ಯೂನಿನ ಮುಖಂಡರಾದ ಏಬೇರ್ ಮುಂತಾದವರನ್ನು ಗಲ್ಲಿಗೇರಿಸಲಾಯಿತು. ಸಹಸ್ರಾರು ನಿರಪರಾಧಿಗಳು ಕೊಲೆಗೀಡಾದರು.

ಅಂತ್ಯ

[ಬದಲಾಯಿಸಿ]

ರೋಬೆಸ್ಟಿಯರನ ದಬ್ಬಾಳಿಕೆಯನ್ನು ಸಹಿಸದ ಪ್ರತಿಸ್ಪರ್ಧಿಗಳು ಪಿತೂರಿ ನಡೆಸಿ ಅವನ ಶಿರಚ್ಛೇದ ಮಾಡಿಸಿದರು (1794ರ ಜುಲೈ 28). ರೋಬೆಸ್ಟಿಯರನ ಪತನಾನಂತರ ಜ್ಯಾಕೊಬಿನರ ಸಂಘ ಕೊನೆಗೊಂಡಿತು.



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: