ಜೋಸೆಫ್ ಮ್ಯಾಲರ್ಡ್ ವಿಲಿಯಂ ಟರ್ನರ್
ಜೋಸೆಫ್ ಮ್ಯಾಲರ್ಡ್ ವಿಲಿಯಂ ಟರ್ನರ್ (1775-1851). ಇಂಗ್ಲೆಂಡಿನ ಪ್ರಸಿದ್ಧ ಜಲವರ್ಣಚಿತ್ರಕಲಾಕೋವಿದ. ಆ ಶತಮಾನದ ಅತ್ಯುಚ್ಚಮಟ್ಟದ ನಿಸರ್ಗಚಿತ್ರಕನೂ ಹೌದು.
ಬದುಕು, ಚಿತ್ರಕಲೆ, ಸಾಧನೆ
[ಬದಲಾಯಿಸಿ]ಹುಟ್ಟಿದ್ದು ಲಂಡನ್ನಿನಲ್ಲಿ. ತಂದೆ ವಿಲಿಯಂ ಟರ್ನರ್ ಒಬ್ಬ ಕ್ಷೌರಿಕ. ತಾಯಿ ಮೇರಿ ಮಾರ್ಷಲ್. ಚಿಕ್ಕಪ್ಪನ ಮನೆಯಲ್ಲಿದ್ದುಕೊಂಡು ಶಾಲಾ ಶಿಕ್ಷಣ ಪಡೆದ. 12 ವರ್ಷದ ಬಾಲಕನಾಗಿದ್ದಾಗಲೆ ಅನೇಕ ಚಿತ್ರಗಳನ್ನು ರಚಿಸಿದ್ದುಂಟು. 1789ರಲ್ಲಿ ರಾಯಲ್ ಅಕಾಡೆಮಿ ಶಾಲೆಗೆ ಸೇರಿದಾಗ ಇವನಿಗೆ ಇನ್ನೂ 15 ವರ್ಷ. ಅಲ್ಲಿದ್ದಾಗಲೆ ತನ್ನ ಜಲವರ್ಣದ ಚಿತ್ರ ಪ್ರದರ್ಶನವೊಂದನ್ನು ಪ್ರಪ್ರಥಮವಾಗಿ ಏರ್ಪಡಿಸಿದ್ದ. ಅಲ್ಲದೆ ಈತ ತಯಾರಿಸಿದ ಅನೇಕ ಚಿತ್ರಗಳನ್ನು ತಂದೆ ತನ್ನ ಆಯುಷ್ಕರ್ಮ ಶಾಲೆಯಲ್ಲಿ ಪ್ರದರ್ಶಿಸುತ್ತಿದ್ದು, ಅಲ್ಲಿಗೆ ಬಂದ ಗಿರಾಕಿಗಳಿಗೆ ಮಾರುತ್ತಿದ್ದ.
ಈತನಿಗೆ ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಪಾರಂಗತನಾಗಬೇಕೆಂಬ ಮಹತ್ವಾಕಾಂಕ್ಷೆಯಿತ್ತು. ರಜಾದಿನಗಳಲ್ಲಿ ಹಳ್ಳಿಗಾಡಿನಲ್ಲೆಲ್ಲ ತಿರುಗಾಡಿ ನಿಸರ್ಗಸೌಂದರ್ಯದಲ್ಲಿ ತನ್ಮಯನಾಗಿರುತ್ತಿದ್ದ. ಗರ್ತೀನ್ ಎಂಬ ಪ್ರಸಿದ್ಧ ಜಲವರ್ಣ ಚಿತ್ರಗಾರನನ್ನು ಭೇಟಿ ಮಾಡಿ ಚಿತ್ರಕಲೆಗೆ ಸಂಬಂಧಿಸಿದ ಅನೇಕ ವಿಚಾರಗಳನ್ನು ಚರ್ಚಿಸುತ್ತಿದ್ದ. ಇವರಿಬ್ಬರೂ ತಾಮಸ್ ಮನ್ರೊನ ಮನೆಯಲ್ಲಿ ಭೇಟಿಯಾಗುತ್ತಿದ್ದರು. ಮನ್ರೊ ಕಲಾವಿದರ ಬಗೆಗೆ ಬಹಳ ಉದಾರಮನೋಭಾವ ಉಳ್ಳವನು. ಅವರಿಗೆ ಆರ್ಥಿಕ ಹಾಗೂ ನೈತಿಕ ಬೆಂಬಲ ನೀಡಿ ಪ್ರೋತ್ಸಾಹಿಸುತ್ತಿದ್ದ.
ಟರ್ನರ್ ತನ್ನ ಚಿತ್ರಕಲಾಜೀವನದ ಪ್ರಾರಂಭದ ದಿನಗಳಲ್ಲಿ ಆಕ್ಸ್‍ಫರ್ಡ್, ಬ್ರಿಸ್ಟಲ್, ವೇಲ್ಸ್ ಮುಂತಾದ ಸ್ಥಳಗಳಿಗೆ ಭೇಟಿ ನೀಡಿ ಸ್ಥಾನೀಯ ನಿಸರ್ಗಚಿತ್ರಗಳನ್ನು ರಚಿಸಿದ್ದಾನೆ. ಈ ಚಿತ್ರಗಳ ಸಂಗ್ರಹವನ್ನು ಬ್ರಿಟಿಷ್ ಮ್ಯೂಸಿಯಮಿನಲ್ಲಿ ನೋಡಬಹುದಾಗಿದೆ. ಈತನ ಪ್ರಾರಂಭದ ಕೃತಿಗಳಲ್ಲಿ ಅನುಕರಣಶೀಲತೆ ಎದ್ದು ಕಾಣುತ್ತದೆ. ತಾಮಸ್ ಮಾಲ್ಟನ್, ಎಡ್ವರ್ಡ್‍ಡೇಸ್, ಪಾಲ್ ಸ್ಯಾಂಡ್ಬಿ, ಕಜನ್ಜ್ ಮುಂತಾದ ಪ್ರಸಿದ್ಧ ಕಲಾವಿದರಿಂದ ಬಹುವಾಗಿ ಆಕರ್ಷಿತನಾಗಿದ್ದ. ಈತನ ಕೃತಿಗಳಲ್ಲೂ ಮುಖ್ಯವಾಗಿ ನಿಸರ್ಗಚಿತ್ರಣದಲ್ಲಿ, ಕಾವ್ಯಮಯ ಸೌಂದರ್ಯ ಹಾಗೂ ರಂಜನೀಯಗುಣಗಳು ಕಾಣತೊಡಗಿದುವು. ಪ್ರಕೃತಿಯಲ್ಲಿರುವ ಸ್ವಯಂಪೂರ್ಣ ಸೌಂದರ್ಯದ ದರ್ಶನ ಪಡೆಯಲು ಅದರಲ್ಲಿ ತನ್ಮಯನಾಗಬೇಕಾಗುವುದೆಂಬುದನ್ನು ಈತ ಮನಗಂಡಿದ್ದ. ಸೂರ್ಯೋದಯ ಸೂರ್ಯಾಸ್ತಗಳ ಕಲ್ಪನಾವಿಲಾಸ, ಕಡಲತೀರದ ಸಹಜ ಸೌಂದರ್ಯ, ಪಾಳುಬಿದ್ದ ಕೋಟೆಕೊತ್ತಲ ಹಾಗೂ ಚರ್ಚುಗಳ ಭಗ್ನಸೌಂದರ್ಯ-ಇವು ಯಥಾವತ್ತಾಗಿ ಈತನ ಕೃತಿಗಳಲ್ಲಿ ಮೂಡಿಬರತೊಡಗಿದವು.
1766ರಲ್ಲಿ ಟರ್ನರ್ ರಾಯಲ್ ಅಕಾಡೆಮಿಯ ಸದಸ್ಯನಾಗಿದ್ದ. 1796ರಿಂದ ಅಲ್ಲಿ ಜಲವರ್ಣ ಹಾಗೂ ತೈಲವರ್ಣ ಚಿತ್ರಗಳನ್ನು ಪ್ರದರ್ಶಿಸಲಾರಂಭಿಸಿದ. ಇವುಗಳಲ್ಲಿ ಮೀನುಗಾರರು ಎಂಬ ಕೃತಿ ಗಮನಾರ್ಹವಾದದ್ದು. ಬೆಳದಿಂಗಳಿನ ದೃಶ್ಯ ಗುಣ ನೈಜವಾಗಿ ಮೂಡಿಬಂದ ಈ ಕೃತಿಯನ್ನು ಸಮಕಾಲೀನ ಕಲಾವಿಮರ್ಶಕರು ಮೆಚ್ಚಿಕೊಂಡರು. 1800ರ ಸುಮಾರಿಗೆ ಟರ್ನರ್ ಲಂಡನ್ನಿನಲ್ಲಿ ತನ್ನದೇ ಆದ ಸ್ಟುಡಿಯೋ ಆರಂಭಿಸಿದ. ರಾಯಲ್ ಆಕಾಡೆಮಿಯ ಪೂರ್ಣ ಸದಸ್ಯನಾದ (1802). ಅಲ್ಲಿಂದ ಸುಮಾರು ಅರ್ಧ ಶತಮಾನದವರೆಗೂ ಈ ಹುದ್ದೆಯಲ್ಲಿದ್ದು ನಿಷ್ಠೆಯಿಂದ ತನ್ನ ಕರ್ತವ್ಯ ಮಾಡಿದ. ಅನೇಕ ತರುಣ ಕಲಾವಿದರಿಗೆ ಪ್ರೋತ್ಸಾಹ ನೀಡಿದ. 1804ರಲ್ಲಿ ಸ್ವಂತ ಗ್ಯಾಲರಿಯೊಂದನ್ನು ಸ್ಥಾಪಿಸಿ ತನ್ನ ಕಲಾಕೃತಿಗಳನ್ನು ಪ್ರದರ್ಶಿಸತೊಡಗಿದ. 1808ರಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡ. ಈತನ ಕೀರ್ತಿ ಸುತ್ತಮುತ್ತೆಲ್ಲ ಹರಡಿತು. ಪ್ರಕೃತಿಯಲ್ಲಿ ಆಕಾಶ, ಮೋಡ, ಸಾಗರ ಮುಂತಾದವುಗಳು ಬದಲಾಗುತ್ತಿರುವ ಸ್ವರೂಪವನ್ನೂ ಆಗ ಉಂಟಾಗುವ ಪರಿಣಾಮವನ್ನೂ ತನ್ನ ಕುಂಚದಿಂದ ಸೆರೆಹಿಡಿದ. ಯೂಲಿಸೀಸ್û ಡಿರೈಡಿಂಗ್ ಪಾಲಫೀಮಸ್ ಎಂಬ ಕೃತಿಯನ್ನು ಇಲ್ಲಿ ಹೆಸರಿಸಬಹುದು. ಇದರಲ್ಲಿ ಓಡುತ್ತಿರುವ ಮೋಡ, ಸೂರ್ಯೋದಯ ಅಥವಾ ಸೂರ್ಯಾಸ್ತಸಮಯದಲ್ಲಿ ಕ್ಷಣಕ್ಷಣಕ್ಕೂ ಬದಲಾಗುವ ವರ್ಣ ವ್ಯತ್ಯಾಸ ಅತ್ಯಂತ ಸಮರ್ಥವಾಗಿ ಚಿತ್ರಿತವಾಗಿವೆ.
1802ರಲ್ಲಿ ಟರ್ನರ್ ಮೊದಲ ಬಾರಿಗೆ ಸಮುದ್ರಯಾನ ಮಾಡಿದ; ಯೂರೋಪಿನ ಅನೇಕ ದೇಶಗಳಲ್ಲಿ ತಿರುಗಾಡಿದ. ಆಗಿನ ಅನುಭವಗಳನ್ನೆಲ್ಲ ಕ್ಯಾಲೆಪೀರ್ ಎಂಬ ಕೃತಿಯಲ್ಲಿ ಸೆರೆಹಿಡಿದಿಟ್ಟ. ಪ್ಯಾರಿಸ್‍ನಲ್ಲಿ ಈ ಕಲಾವಿದ ಕೆಲಕಾಲ; ತಂಗಿದ್ದು ನೆಪೋಲಿಯನ್ ಇಟಲಿಯಿಂದ ತಂದಿಟ್ಟಿದ್ದ ವರ್ಣಚಿತ್ರಗಳನ್ನು ಅಧ್ಯಯನ ಮಾಡಿದ. ದಿ ಫೆಸ್ಟಿವಲ್ ಎಟ್ ಮಾಕೆನ್, ಡೆವಿಲ್ಸ್ ಬ್ರಿಜ್, ಫಾಲ್ಸ್ ಆಫ್ ರೈಕನ್‍ಬಾಕ್ ಮುಂತಾದ 400ಕ್ಕೂ ಹೆಚ್ಚು ಪ್ರಸಿದ್ಧ ಕೃತಿಗಳನ್ನು ರಚಿಸಿದ. ವೀನಸ್ ಎಂಡ್ ಅಡೊನಿಸ್ (ಸು.1803) ಮತ್ತು ದಿ ಹೋಯ್ ಫ್ಯಾಮಿಲಿ ಎಂಬ ಕೃತಿಗಳನ್ನು ಗಮನಿಸಿದಾಗ ಈತ ವೆನೀಷನ್ ಶೈಲಿಯಿಂದ ಎಷ್ಟರಮಟ್ಟಿಗೆ ಪ್ರಭಾವಿತನಾದನೆಂಬುದು ತಿಳಿದೀತು.
ಟರ್ನರನ ವೈಶಿಷ್ಟ್ಯವೆಂದರೆ ತಾನು ನೋಡಿ ಮೆಚ್ಚಿಕೊಂಡ ಎಲ್ಲ ಶೈಲಿಗಳನ್ನೂ ಕರಗತ ಮಾಡಿಕೊಂಡದ್ದು. ಕ್ಲೋಡ್ ಲೊರಾನನ ಶೈಲಿಯಲ್ಲಿ ರಚಿಸಿದ ಡಿಡೊಬಿಲ್ಡಿಂಗ್ ಕಾರ್ತೇಜ್, ವಿಲ್ಸನ್ನನ ಶೈಲಿಯ ಇನೀಯಸ್ ಎಂಡ್ ದಿ ಸಿಬಲ್ ಲೇಕ್ ಅವರ್ಸಸ್ (ಸು.1803), ಪುಸ್ಯಾನ್ ಶೈಲಿಯ ದಿ ಗಾರ್ಡನ್ ಆಫ್ ದಿ ಹೆಸ್ಪರೈಡೀಸ್ ಮುಂತಾದ ಪ್ರಸಿದ್ಧ ಕೃತಿಗಳನ್ನು ಇಲ್ಲಿ ಗಮನಿಸಬೇಕು. ಇಷ್ಟಾದರೂ ಕೆಚಸ್, ನೌಕಾಘಾತ ಮುಂತಾದ ಕೃತಿಗಳಲ್ಲಿ ಮೂಲ ಪ್ರತಿಭೆ, ವರ್ಣಸಂಯೋಜನಾಕೌಶಲ ಕಾಣದೆ ಇರಲಾರದು.
1810-1835ರಲ್ಲಿ ಟರ್ನರ್ ರಚಿಸಿದ ಚಿತ್ರಗಳಲ್ಲಿ ಕೋಟೆಕೊತ್ತಲಗಳೂ ಹಳ್ಳಿಯ ಅನೇಕ ದೃಶ್ಯಗಳೂ ಮುಖ್ಯ ವಸ್ತುಗಳಾಗಿವೆ. ಲಿನ್‍ಲಿತ್‍ಗೊ ಪ್ಯಾಲೆಸ್ (1810), ಸೊಮರ್ ಹಿಲ್ (1811) ಮುಂತಾದ ಉತ್ತಮ ಕೃತಿಗಳನ್ನು ಇಲ್ಲಿ ಗಮನಿಸಬಹುದು. ಇವಲ್ಲದೆ ಸಾಗರಜೀವನಕ್ಕೆ ಸಂಬಂಧಿಸಿದ ಅನೇಕ ಚಿತ್ರಗಳನ್ನೀತ ರಚಿಸಿದ; ದಿ ರೆಕ್ ಆಫ್ ಎ ಟ್ರಾನ್ಸ್‍ಪೋರ್ಟ್ ಷಿಪ್, ಸ್ಟಿಟ್‍ಹೆಡ್ ಮುಂತಾದ ಚಿತ್ರಗಳನ್ನಿಲ್ಲಿ ಉದಾಹರಿಸಬಹುದು. 1811ರಲ್ಲಿ ಡೆವನ್‍ಷೀರ್, ಕಾರ್ನ್‍ವಾಲ್, ಸಮರ್‍ಸಟ್, ಯಾರ್ಕ್‍ಷೀರ್ ಮುಂತಾದೆಡೆಗಳಲ್ಲಿ ಪ್ರಯಾಣ ಮಾಡಿ ಅನೇಕ ಜಲವರ್ಣ ಚಿತ್ರಗಳನ್ನು ತಯಾರಿಸಿದ. 1815ರಲ್ಲಿ ಕಾರ್ತೇಜಿಯನ್ ವಿಷಯವನ್ನಾಧರಿಸಿ ಚಿತ್ರಿಸಲಾರಂಭಿಸಿದ. ದಿ ಲೇಕ್ ಆಫ್ ಜಿನೀವ, ಕ್ರಾಸಿಂಗ್ ದಿ ಬ್ರೂಕ್, ರಿಚ್‍ಮಂಡ್ ಹಿಲ್, ಬರ್ತ್‍ಡೆ ಮುಂತಾದ ಅಮೋಘವಾದ ಕೃತಿಗಳನ್ನು ಇಲ್ಲಿ ಹೆಸರಿಸಬಹುದು. ರೋಮ್, ನೇಪಲ್ಸ್, ಫ್ಲಾರೆನ್ಸ್, ವೆನಿಸ್ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿದ; ಸುಮಾರು 1500 ಚಿತ್ರಗಳನ್ನು ರಚಿಸಿದ. ಈ ಚಿತ್ರಗಳಲ್ಲಿ ಈತ ಸಾಧಿಸಿದ ಕಲಾಪ್ರಾವೀಣ್ಯ, ವರ್ಣವಿನ್ಯಾಸ ಅತ್ಯುಚ್ಚಮಟ್ಟದ್ದು. ಜೀವಿತದ ಕೊನೆಗಾಲದಲ್ಲೂ ಪುನಃ ಯೂರೋಪಿಗೆ ಭೇಟಿ ನೀಡಿ ಅನೇಕ ಚಿತ್ರಗಳನ್ನು ರಚಿಸಿದ್ದುಂಟು. ಆದರೆ ಪ್ರಾರಂಭದ ಕೃತಿಗಳಲ್ಲಿ ಕಾಣುವ ನಿಖರತೆ, ಸೂಕ್ಷ್ಮವರ್ಣ ವಿನ್ಯಾಸ ಹಾಗೂ ಸ್ಪಷ್ಟತೆ ಈ ಕಾಲದಲ್ಲಿ ರಚಿಸಿದ ಕೃತಿಗಳಲ್ಲಿ ಕಂಡುಬರಲಾರದು. ಆದರೂ ಚಲನೆ, ಬೆಳಕು-ನೆಳಲಿನ ಅದ್ಭುತ ಪರಿಣಾಮಗಳು ಯಥಾವತ್ತಾಗಿ ಮೂಡಿವೆ. ವಾಸ್ತವವಾಗಿ ಟರ್ನರ್ ರಚಿಸಿದ ಚಿತ್ರಗಳಲ್ಲಿ ಪ್ರಕಾಶಕ್ಕೆ ವಿಶೇಷ ಸ್ಥಾನವಿದೆ; ನೀರು, ಬೆಂಕಿ ಮುಂತಾದವುಗಳಿಗೆ ಸಂಬಂಧಿಸಿದ ಚಿತ್ರಗಳೇ ಹೆಚ್ಚು. ತೆಮರೈರ್ ಸಮರನೌಕೆಯ ಅಂತಿಮ ಪ್ರವಾಸ ಎಂಬ ಕೃತಿಯಲ್ಲಿ ನೆಪೊಲಿಯನ್ನನ ಮೇಲೆ ವಿಜಯ ಸಾರಿದ ಜಯಘೋಷ ಅರ್ಥಪೂರ್ಣವಾಗಿದೆ.
ಟರ್ನರ್ ಕೆತ್ತನೆ ಕೆಲಸದಲ್ಲೂ ಪ್ರಾವಿಣ್ಯ ಗಳಿಸಿದ್ದ. ಇವುಗಳಲ್ಲೂ ಪ್ರಕೃತಿ ಚಿತ್ರದ ತಂತ್ರವನ್ನೇ ಬಳಸುತ್ತಿದ್ದ. ರಿವರ್ಸ್ ಆಫ್ ಇಂಗ್ಲೆಂಡ್, ದಿ ಸದರ್ನ್ ಕೋಸ್ಟ್, ಇಂಗ್ಲೆಂಡ್ ಅಂಡ್ ವೇಲ್ಸ್ ಮುಂತಾದ ಉತ್ತಮ ಕೃತಿಗಳನ್ನು ಉದಹರಿಸಬಹುದು. ಸರ್ ವಾಲ್ಟರ್ ಸ್ಕಾಟ್‍ನ ಪ್ರೊವಿನ್ಷಿಯಲ್ ಆ್ಯಂಟಿಕ್ವಿಟೀಸ್ ಮುಂತಾದ ಕೃತಿಗಳಿಗೆ ಈತ ಕೆತ್ತನೆ ಕೆಲಸ ಮಾಡಿದ. ಲಂಡನ್ನಿನ ಸೇಂಟ್ ಪಾಲ್ ಕತೀಡ್ರಲ್‍ನಲ್ಲಿ ಟರ್ನರನ ಸಮಾಧಿ ಇದೆ. ತಾನು ಗಳಿಸಿದ 1,40,000 ಪೌಂಡು ಹಣವನ್ನು ಬಡ ಕಲಾವಿದರಿಗೆ ಹಂಚಬೇಕೆಂದೂ ತನ್ನ ಚಿತ್ರಗಳನ್ನೆಲ್ಲ ದೇಶಕ್ಕೆ ಅರ್ಪಿಸಬೇಕೆಂದೂ ಈತ ಬರೆದಿಟ್ಟ ಮರಣಶಾಸನ ಹೇಳುತ್ತದೆ. ತನ್ನ ಚಿತ್ರಗಳನ್ನು ಪ್ರದರ್ಶಿಸಲು ಒಂದು ಪ್ರತ್ಯೇಕ ಗ್ಯಾಲರಿ ಕಟ್ಟಬೇಕೆಂದೂ ಟರ್ನರ್ ತಿಳಿಸಿದ್ದ. ಅಂತೆಯೆ 1908ರಲ್ಲಿ ಟೇಟ್ ಗ್ಯಾಲರಿಯನ್ನು ಕಟ್ಟಲಾಯಿತು. ಇಲ್ಲಿ ಈತನ 282 ತೈಲವರ್ಣದ ಕೃತಿಗಳನ್ನೂ ಬ್ರಿಟಿಷ್ ಮ್ಯೂಸಿಯಂನಲ್ಲಿ 19,751 ಜಲವರ್ಣದ ಕೃತಿಗಳನ್ನೂ ಪ್ರದರ್ಶಿಲಾಗಿದೆ. ಇವುಗಳನ್ನೆಲ್ಲ ಒಟ್ಟಾರೆ ಪರಿಶೀಲಿಸಿದಲ್ಲಿ ಅವು ಕಾವ್ಯಮಯವೆಂದೂ ಭಾವನಾಪ್ರಧಾನವೆಂದೂ ತಿಳಿಯುವುದರಲ್ಲದೆ, ಒಮ್ಮೊಮ್ಮೆ ಟರ್ನರನ ವರ್ಣವೈಖರಿ ನೈಜತೆಯನ್ನು ದಾಟಿ ಮುಂದೆ ಹೋಗುತ್ತದೆಂದು ಭಾಸವಾದೀತು. ನಿಸರ್ಗಚಿತ್ರಗಳ ಇತಿಹಾಸದಲ್ಲಿ ಅದ್ವಿತೀಯ ಸ್ಥಾನ ಗಳಿಸಿದ ಟರ್ನರ್ ತನ್ನ ಜೀವನವನ್ನೇ ಕಲೆಗಾಗಿ, ಕಲಾವಿದರ ಏಳಿಗೆಗಾಗಿ ಮುಡುಪಾಗಿಟ್ಟಿದ್ದ. ಈತನ ಕಲಾಪ್ರೌಢಿಮೆಯನ್ನು ಕುರಿತು ಜಾನ್ ರಸ್ಕಿನ್ ತನ್ನ ಗ್ರಂಥದಲ್ಲಿ ವಿಶೇಷವಾಗಿ ಬರೆದಿದ್ದಾನೆ.