ಜೊವಾನ್ನಿ ಬಾಟ್ಟಿಸ್ಟ ಜಿರಾಲ್ಡಿ
ಜೊವಾನ್ನಿ ಬಾಟ್ಟಿಸ್ಟ ಜಿರಾಲ್ಡಿ (1504-1573) ಹದಿನಾರನೆಯ ಶತಮಾನದ ಇಟಲಿಯ ಉತ್ತಮ ಕಥೆಗಾರ. ಸಿಂತಿಯೋ ಎಂಬ ತನ್ನ ಮತ್ತೊಂದು ಹೆಸರಿನಿಂದ ಈತ ಎಲಿಜಬೆತ್ ಕಾಲದ ಇಂಗ್ಲಿಷ್ ಸಾಹಿತಿಗಳಿಗೆ ಬಹು ಪರಿಚಿತನಾಗಿದ್ದ.
ಬದುಕು, ಬರಹ
[ಬದಲಾಯಿಸಿ]1504ರಲ್ಲಿ ಫೆರಾರಾದಲ್ಲಿ ಹುಟ್ಟಿದ ಈತ 1532ರಿಂದ 1563ರವರೆಗೆ ಫೆರಾರ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿದ್ದ. 1528ರಲ್ಲಿ ನೋವೆಲ ಎಂಬ ರೀತಿಯ ಕಥೆಗಳನ್ನು ಬರೆಯಲುಪಕ್ರಮಿಸಿ ಅವನ್ನು ನೂರು ಕಥೆಗಳು ಎಂಬ ಹೆಸರಿನಲ್ಲಿ ಪ್ರಕಟಿಸಿದ. ರೋಮ್ ನಗರದಿಂದ ಮಾರ್ಸೇಲಿಗೆ ಯಾನ ಮಾಡುತ್ತಿದ್ದ ಪ್ರಯಾಣಿಕರ ಗುಂಪೊಂದು ಹಡಗಿನಲ್ಲಿ ತಮ್ಮ ಪರಸ್ಪರ ಮನೋರಂಜನೆಗಾಗಿ ಹೇಳಿಕೊಂಡಂತೆ ಕಲ್ಪಿಸಿದ ನೂರು ಕಥೆಗಳು ಇಲ್ಲಿವೆ.
ಷೇಕ್ಸ್‍ಪಿಯರ್ ನು ತನ್ನ ಒಥೆಲೊ ಮತ್ತು ಮೆಷರ್ ಫಾರ್ ಮೆಷರ್ ಎಂಬ ನಾಟಕಗಳಿಗಾಗಿ ಜಿರಾಲ್ಡಿಯ ಗ್ರಂಥದಿಂದ ವಸ್ತುವನ್ನು ಆರಿಸಿಕೊಂಡಿರುವುದನ್ನು ನೋಡಿದರೆ ಅಂದು ಜಿರಾಲ್ಡಿ ಎಂಥ ಸಾಹಿತಿಯಾಗಿದ್ದನೆಂಬುದು ತಿಳಿಯುತ್ತದೆ. ಚರ್ಚಿನ ಧಾರ್ಮಿಕ ಕಟ್ಟುಕಟ್ಟಳೆಗಳು ಸಾಹಿತಿಗಳನ್ನು ಪ್ರಬಲ ನಿರ್ಬಂಧಕ್ಕೆ ಗುರಿ ಮಾಡಿದ್ದ ಆಗಿನ ಕಾಲದಲ್ಲಿ ಧರ್ಮಗುರುಗಳ ಕೋಟಲೆ ಜಿರಾಲ್ಡಿಗೂ ತಪ್ಪಿರಲಿಲ್ಲ. ಆದ್ದರಿಂದ ಆತ ತನ್ನ ಕಥಾಸಂಗ್ರಹದ ಪೀಠಿಕೆಯಲ್ಲಿ ತನ್ನ ಧರ್ಮಶ್ರದ್ಧೆಯನ್ನು ಸಾರಿ ಚರ್ಚಿನ ನಿಷ್ಠುರತೆಯಿಂದ ಪಾರಾಗಬೇಕಾಯಿತು.
ಗ್ರೀಕ್ ನಾಟಕಕಾರ ಮತ್ತು ಸೆನೆಕನ ಮಾದರಿಯ ಗಂಭೀರ ನಾಟಕಗಳ ಪ್ರಭಾವವನ್ನು ಜಿರಾಲ್ಡಿಯ ಗಂಭೀರೋಲ್ಲಾಸ ಕಥೆಗಳಲ್ಲಿ (ಟ್ರಾಜಿಕಾಮಿಡಿಯ) ಕಾಣಬಹುದು.