ಜೈವಿಕ ಯುದ್ಧ
ಸೈನ್ಯ ಸಿದ್ಧತೆಯಲ್ಲಿ ನಿರತರಾಗಿರುವ ತಜ್ಞರು ಶತ್ರುದಮನಕಾರ್ಯದಲ್ಲಿ ಹಾಗೂ ಶತ್ರುವಿನ ಧೈರ್ಯೋತ್ಸಾಹಗಳನ್ನು ಕುಂಠಿತಗೊಳಿಸುವುದಕ್ಕಾಗಿ ಹಲವು ಬಗೆಯ ಅಸ್ತ್ರಗಳನ್ನು ರೂಪಿಸಿಕೊಂಡು ಶತ್ರುವಿನ ಮೇಲೆ ದಾಳಿ ಮಾಡುತ್ತಾರೆ. ಇಂಥ ಅಸ್ತ್ರಗಳಲ್ಲಿ ಸಾಂಕ್ರಾಮಿಕ ರೋಗಕಾರಕಗಳಾದ ಜೀವಿಗಳೂ ಇವೆ. ಇದನ್ನು ಉಪಯೋಗಿಸಿಕೊಂಡು ಶತ್ರುಪರಿಸರವನ್ನು ಸೋಂಕುಕಾರಕವನ್ನಾಗಿ ಮಾಡಿ ಶತ್ರುವಿನ ಮೇಲೆ ಮೇಲುಗೈಯನ್ನು ಪಡೆಯುವುದೇ ಅಲ್ಲದೆ, ಯುದ್ಧದಲ್ಲಿ ಜಯಗಳಿಸುವುದೇ ಜೈವಿಕ ಸಮರ (ಬಯೊಲಾಜಿಕಲ್ ವಾರ್‍ಫೇರ್).
ಸಾಂಕ್ರಾಮಿಕ ರೋಗೋತ್ಪನ್ನ ಜೀವಿಗಳಾದ ವೈರಸ್, ಬ್ಯಾಕ್ಟೀರಿಯ, ಶಿಲೀಂಧ್ರಗಳೇ ಮೊದಲಾದ ಸೂಕ್ಷ್ಮ ಜೀವಾಣುಗಳನ್ನು ಉಪಯೋಗಿಸುವುದರಿಂದ ಇದನ್ನು ರೋಗಾಣು ಜೈವಿಕ ಸಮರ ಎಂದೂ ಕರೆಯಬಹುದು. ಈ ವಿಧಾನ ಒಂದು ದೃಷ್ಟಿಯಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿದ್ದರೂ ಮಾರಕ ಸ್ವರೂಪದ ರಾಸಾಯನಿಕ ಅಸ್ತ್ರಗಳನ್ನು ಉಪಯೋಗಿಸುವಷ್ಟು ಪ್ರಾಮುಖ್ಯವನ್ನು ಪಡೆದಿಲ್ಲ.
ಜೈವಿಕಾಸ್ತ್ರಗಳ ಅನುಕೂಲಗಳು
[ಬದಲಾಯಿಸಿ]ಜೈವಿಕಾಸ್ತ್ರಗಳಿಗೆ ಕೆಲವು ಬಗೆಯ ಅನುಕೂಲತೆಗಳಿವೆ. ಮೊದಲನೆಯದಾಗಿ, ಇವನ್ನು ಪ್ರಯೋಗಮಂದಿರಗಳಲ್ಲಿ ಸುಲಭವಾಗಿ, ಹೆಚ್ಚು ಖರ್ಚಿಲ್ಲದೆ, ಅತ್ಯಲ್ಪ ಕಾಲದಲ್ಲಿ ಉತ್ಪಾದಿಸಬಹುದು. ಎರಡನೆಯದಾಗಿ, ಇವನ್ನು ಮಾನವನ ದೇಹದಲ್ಲಿಯೋ ಯುದ್ಧಭೂಮಿಯಲ್ಲಿ ಉಪಯೋಗಿಸುವ ಆನೆ, ಕುದುರೆ, ಒಂಟೆ ಮೊದಲಾದ ಜಾನುವಾರಗಳ ದೇಹದಲ್ಲಿಯೊ ಸ್ವಯಂ ಉತ್ಪತ್ತಿ ಮಾಡಿ ಇವುಗಳ ಸಂಖ್ಯೆಯನ್ನು ಹೆಚ್ಚಿಸಬಹುದು ಮೂರನೆಯದಾಗಿ, ಇವನ್ನು ಅಥವಾ ರೋಗಗ್ರಸ್ತ ಜೀವಿಗಳನ್ನು ಶತ್ರುವಿನ ಪಾಳೆಯದಲ್ಲಿ ರಹಸ್ಯವಾಗಿ ಹಾಗೂ ವ್ಯಾಪಕವಾಗಿ ಹಾಕಬಹುದು. ಆದರೆ ಇವುಗಳ ಪರಿಹಾರಕ್ಕೂ ಪರಮಾಣು ಬಾಂಬು ಮೊದಲಾದ ಮಾರಕ ರೂಪದ ಸಮರಾಸ್ತ್ರಗಳು ಪರಿಣಾಮಕ್ಕೂ ಬಹು ಮುಖ್ಯ ವ್ಯತ್ಯಾಸಗಳಿವೆ. ಜೈವಿಕ ಯುದ್ಧದಲ್ಲಿ ನೇರವಾಗಿ ಮಾನವ ಮತ್ತು ಸುತ್ತಣ ಪರಿಸರದಲ್ಲಿರುವ ಪ್ರಾಣಿ ಮತ್ತು ಸಸ್ಯಗಳೇ ಅಲ್ಲದೆ, ಅವನ ಆಹಾರ ದಾಸ್ತಾನುಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತವೆಯೇ ವಿನಾ ರಸ್ತೆ, ಸೇತುವೆ, ಕಟ್ಟಡ, ಅಣೆಕಟ್ಟು ಮೊದಲಾದವುಗಳ ಮೇಲೆ ಯಾವ ಬಗೆಯ ಹಾನಿಯೂ ಉಂಟಾಗುವುದಿಲ್ಲ. ಈ ಕಾರಣದಿಂದಲೇ ಜೈವಿಕ ಯುದ್ಧವನ್ನು ನಾಶಕರವಲ್ಲದ ಸಮರ ಎಂದು ಕರೆಯುವುದೂ ಉಂಟು.
ಜೈವಿಕ ಯುದ್ಧಸ್ತ್ರಗಳ ಮತ್ತು ರಾಸಾಯನಿಕ ಮಾರಕಾಸ್ತ್ರಗಳ ಫಲಿತಾಂಶಗಳಲ್ಲಿ ಮತ್ತೊಂದು ವ್ಯತ್ಯಾಸ ಉಂಟು. ರಾಸಾಯನಿಕ ಅಸ್ತ್ರಗಳ ಪ್ರಭಾವ ಅವನ್ನು ಉಪಯೋಗಿಸಿದ ತತ್‍ಕ್ಷಣದಲ್ಲಿಯೇ ಪ್ರಕಟವಾದರೆ, ಜೈವಿಕಾಸ್ತ್ರದ ಪ್ರಭಾವ ನಿಧಾನವಾಗಿ ಹಾಗೂ ಗೋಪ್ಯವಾಗಿ ನಡೆಯುತ್ತದೆ. ಆದರೂ ಇದರ ಪ್ರಭಾವ ಶತ್ರುವಿನ ಬೆನ್ನೆಲುಬನ್ನೇ ಜರ್ಝರಿತಗೊಳಿಸುವಂತಿರುತ್ತದೆ. ಅಲ್ಲದೆ ಶತ್ರುಗಳು ಪಾಳೆಯದಲ್ಲಿರುವ ಪ್ರಮುಖ ಜೀವರಾಶಿಗಳು ಸಾಂಕ್ರಾಮಿಕ ರೋಗಗಳಿಗೆ ತುತ್ತಾದರೆ, ಈ ರೋಗಗಳು ಸ್ವಾಭಾವಿಕವಾಗಿ ತಲೆದೋರಿದರೆ ಅಥವಾ ಶತ್ರುಗಳ ಕೈವಾಡದಿಂದ ಉಂಟಾದುದೇ ಎಂಬುದನ್ನು ಕಂಡುಹಿಡಿಯುವುದು ಕಷ್ಟವಾಗುತ್ತದೆ. ಒಂದು ದೇಶ ಜೈವಿಕ ಯುದ್ಧದಲ್ಲಿ ನಿರತವಾಗಿದೆಯೆಂಬುದನ್ನು ಕಂಡುಹಿಡಿಯಬೇಕಾದರೆ ಅದಕ್ಕೆ ಲೇಖ್ಯ ಪ್ರಮಾಣ ಬೇಕಾಗುತ್ತದೆ. ವಸ್ತುಸಾಕ್ಷ್ಯ ಬೇಕಾಗುತ್ತದೆ. ಆದರೆ ಇಂಥ ಪುರಾವೆಗಳನ್ನು ಒದಗಿಸುವುದು ಆಗದ ಮಾತು.
ಜೈವಿಕ ಯುದ್ಧದ ಬಗೆಗಳು
[ಬದಲಾಯಿಸಿ]ಜೈವಿಕ ಯುದ್ಧದಲ್ಲಿ ಎರಡು ಪ್ರಮುಖ ಬಗೆಗಳುಂಟು. ಜೀವಿಗಳನ್ನು ಶತ್ರು ಪಾಳೆಯದಲ್ಲಿ ಉಪಯೋಗಿಸುವುದು ಒಂದು ಬಗೆ. ಇಲ್ಲಿ ರೋಗೋತ್ಪನ್ನ ಜೀವಿಗಳನ್ನು ಆಥವಾ ರೋಗಗ್ರಸ್ತ ಜೀವಿಗಳನ್ನು ಬಳಸಿ ಶತ್ರುವಿನ ಪರಿಸರದ ಜೀವಿಗಳಿಗೆ ಸೋಂಕನ್ನು ಅಂಟಿಸುವರು. ಇನ್ನೊಂದು ಬಗೆಯಲ್ಲಿ ಮಾರಕ ರೂಪದ ಜೀವಜನ್ಯ ರಾಸಾಯನಿಕ ವಸ್ತುಗಳನ್ನು ಉಪಯೋಗಿಸಲಾಗುತ್ತದೆ. ಕೆಲವು ಬಗೆಯ ಹಾರ್ಮೋನುಗಳನ್ನು ಉಪಯೋಗಿಸಿ ಸಸ್ಯಗಳನ್ನು ನಾಶಪಡಿಸುವುದು ಇದಕ್ಕೊಂದು ಉದಾಹರಣೆ.
ರೋಗಾಣುಗಳ ಅಗತ್ಯಗುಣಗಳು
[ಬದಲಾಯಿಸಿ]ಜೈವಿಕ ಯುದ್ಧದಲ್ಲಿ ಉಪಯೋಗಿಸುವ ರೋಗಾಣುಗಳಲ್ಲಿ ಸಾಂಕ್ರಾಮಿಕ ರೋಗಗಳನ್ನು ಹರಡುವ ಸಾಮರ್ಥ್ಯದ ಜೊತೆಗೆ ಇತರ ಗುಣವಿಶೇಷಗಳೂ ಪ್ರಧಾನವಾಗಿರಬೇಕು. ಕೇವಲ ಸ್ಪರ್ಶ, ಸೇವನೆ ಮತ್ತು ವಾಸನೆಗಳ ಮೂಲಕ ಶತ್ರು ಜೀವಿಗಳಿಗೆ ಸೋಂಕು ಹರಡುವ ಸಾಮರ್ಥ್ಯವನ್ನು ಇವು ಪಡೆದಿರಬೇಕು. ಮಳೆ, ಬಿಸಿಲು, ಶೀತ, ಉಷ್ಣ ಮೊದಲಾದ ನೈಸರ್ಗಿಕ ಪ್ರತಿಕೂಲಗಳನ್ನು ಸಹಿಸಿ ನಾಶವಾಗದೆ ಬದುಕುವಂತಿರಬೇಕು. ಶತ್ರುಪಾಳೆಯದಲ್ಲಿನ ಜೀವಿಗಳನ್ನು ಅನತಿಕಾಲದಲ್ಲಿಯೇ ಬಲಿ ತೆಗದುಕೊಳ್ಳುವಂತಿರಬೇಕು; ಇಲ್ಲದಿದ್ದರೆ ರೋಗಗ್ರಸ್ತವನ್ನಾಗಿ ಮಾಡಿ ದುರ್ಬಲಗೊಳಿಸುವಂತಿರಬೇಕು. ವಾಯು ಮತ್ತು ನೀರುಗಳ ಮೂಲಕ ಸುಲಭವಾಗಿ ಅತಿ ಶೀಘ್ರದಲ್ಲಿಯೇ ಹರಡುವಂತಿರಬೇಕು. ಯಾವುದಾದರೊಂದು ಬಗೆಯ ಸೋಂಕುಕಾರಕ ಜೀವಿಯನ್ನು ಒಂದು ಪ್ರದೇಶದಲ್ಲಿ ಹರಡುವ ಮೊದಲು ಆ ಪ್ರದೇಶದಲ್ಲಿ ಆ ರೋಗೋತ್ಪನ್ನ ಜೀವಿಗಳ ಉಪಟಳವಿಲ್ಲದಿರುವುದನ್ನು ಪೂರ್ವಭಾವಿಯಾಗಿಯೇ ತಿಳಿದುಕೊಂಡಿರಬೇಕು. ಏಕೆಂದರೆ ಉಪಯೋಗಿಸುವ ಸೋಂಕುಕಾರಕ ಜೀವಿಗಳು ಆ ಪ್ರದೇಶದಲ್ಲಿ ಮೊದಲೇ ಇದ್ದಿದ್ದರೆ ಅಲ್ಲಿನ ಜೀವಿಗಳು ರೋಗಾಣುಗಳ ವಿರುದ್ಧ ನಿರೋಧಸಾಮರ್ಥ್ಯವನ್ನು ಬೆಳೆಸಿಕೊಂಡಿರುತ್ತವೆ. ಅಂಥ ಸಂದರ್ಭದಲ್ಲಿ ರೋಗಕಾರಕ ಜೀವಿಗಳ ಸಾಂಕ್ರಾಮಿಕ ಪ್ರಭಾವ ಕಿಂಚಿತ್ತೂ ಕಂಡುಬರುವುದಿಲ್ಲ.
ಇತಿಹಾಸ
[ಬದಲಾಯಿಸಿ]ಈ ತೆರನ ಜೈವಿಕ ಹೋರಾಟ ಇತ್ತೀಚಿನ ಸಾಧನೆಯಲ್ಲ. ಯುದ್ಧಭೂಮಿಯಲ್ಲಿ ರೋಗಾಣುಗಳ ಪೀಡೆ ಇರುವುದು ಬಹುಕಾಲದಿಂದಲೂ ತಿಳಿದಿದೆ. ನೆಪೋಲಿಯನ್ನನ ಅಜೇಯವಾದ ಸೈನ್ಯ ಆಮಶಂಕೆಯ ರೋಗಾಣುಗಳಿಗೆ ತುತ್ತಾಗಿ ದುರ್ಬಲಗೊಂಡಿದ್ದುದರಿಂದಲೇ ಅದು ಮಾಸ್ಕೊ ನಗರವನ್ನು ಪ್ರವೇಶಿಸಲು ಅಸಮರ್ಥವಾಯಿತು. ಬೋಯರ್ ಯುದ್ಧದಲ್ಲಿ ವಿಷಮಶೀತಜ್ವರ (ಟೈಫಾಯಿಡ್) ಅಧಿಕ ಪ್ರಮಾಣದ ಸೈನಿಕರನ್ನು ಬಲಿ ತೆಗೆದುಕೊಂಡಿತು. ಅಮೆರಿಕದಲ್ಲಿ ನಡೆದ ಸ್ಟ್ಯಾನಿಷ್-ಅಮೆರಿಕನ್ ಯುದ್ಧದಲ್ಲಿ ರೋಗಾಣುಪೂರಿತ ಎತ್ತಿನ ಮಾಂಸ ಹಲವಾರು ಸೈನಿಕರ ಸಾವಿಗೆ ಕಾರಣವಾಯಿತು. ಒಂದನೆಯ ಮಹಾಯುದ್ಧದ ಕೊನೆಯ ವರ್ಷದಲ್ಲಿ ಇನ್‍ಫ್ಲುಯೆಂಜ ರೋಗಾಣು ಜೀವಿಗಳನ್ನು ರಣರಂಗದಲ್ಲಿ ಹರಡಿ ಅಸಂಖ್ಯಾತ ಯೋಧರನ್ನು ಹತ ಮಾಡಿದುದೇ ಅಲ್ಲದೇ ಪೌರರನ್ನೂ ಜರ್ಝರಗೊಳಿಸಿದುವು. ಎರಡನೆಯ ಮಹಾಯುದ್ಧದ ಪ್ರಾರಂಭದಲ್ಲಿಯೇ ದಕ್ಷಿಣ ಪೆಸಿಫಿಕ್ ದ್ವೀಪಗಳಲ್ಲಿ ಹೋರಾಡುತ್ತಿದ್ದ ಯೋಧರಲ್ಲಿ ಸ್ಕ್ರಟ್ ಥೈಲುಸ್ ಕಾಯಿಲೆ ತಲೆದೋರಿ ಅವರ ಧೈರ್ಯೋತ್ಸಾಹಗಳನ್ನು ಕುಂಠಿತಗೊಳಿಸಿತು. ಮೇಲೆ ಹೇಳಿದ ಉದಾಹರಣೆಗಳೆಲ್ಲವೂ ಆಕಸ್ಮಿಕವಾಗಿ ಪ್ರಕೃತಿಯಲ್ಲಿ ತಲೆದೋರಿದ ಜೀವಾಣುಗಳ ದಾಳಿಯ ಪರಿಣಾಮಗಳು.
ಆದರೆ ಉದ್ದೇಶಪೂರ್ವಕವಾಗಿಯೇ ರೋಗಾಣುಜೀವಿಗಳನ್ನು ಶತ್ರುಗಳ ಮೇಲೆ ಉಪಯೋಗಿಸಿರುವ ದಾಖಲೆಗಳೂ ಉಂಟು. ಯುದ್ಧಭೂಮಿಯಲ್ಲಿ ಬಿಲ್ಲುಬಾಣಗಳನ್ನು ಆಯುಧಗಳನ್ನಾಗಿ ಉಪಯೋಗಿಸುತ್ತಿದ್ದ ಕಾಲದಲ್ಲಿ, ಕಾಲರ, ಪ್ಲೇಗು ಮೊದಲಾದ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗಿ ಸತ್ತ ಜನರ ಕಳೇಬರಗಳನ್ನು ಮುತ್ತಿಗೆ ಹಾಕಿದ ಕೋಟೆಯೊಳಕ್ಕೆ ಹಾಕಿ ರೋಗಗಳ್ನು ಹಬ್ಬಿಸಿ ಶತ್ರುಗಳ ಬಲವನ್ನೇ ಕುಂಠಿಸಿದ ಉದಾಹರಣೆಗಳಿವೆ. ಅಲ್ಲದೆ ಕುಡಿಯುವ ನೀರಿನ ತಾಣಗಳಿಗೆ ರೋಗಾಣುಜೀವಿಗಳನ್ನು ಹಾಕಿ ಆ ನೀರನ್ನು ಸೋಂಕುಕಾರಕವನ್ನಾಗಿ ಮಾಡಿರುವ ನಿದರ್ಶನಗಳಿವೆ. ಅಮೆರಿಕದ ಇಂಡಿಯನರೊಡನೆ ಹೋರಾಡುತ್ತಿದ್ದ ಕಾಲದಲ್ಲಿ ಅವರ ಧೃತಿಯನ್ನು ಕುಂಠಿತಗೊಳಿಸಲು ಸಿಡುಬು ರೋಗದ ಸೋಂಕನ್ನು ಅಂಟಿಸಿದ ಕಂಬಳಿಗಳನ್ನು ಅವರಿಗೆ ಒದಗಿಸಿದ ಪ್ರಸಂಗಗಳೂ ಇವೆ. ಒಂದನೆಯ ಮಹಾಯುದ್ಧದಲ್ಲಿ ಜರ್ಮನರು ಉದ್ದೇಶಪೂರ್ವಕವಾಗಿಯೇ ರೋಗಾಣು ಜೀವಿಗಳನ್ನು ಹರಡಿ ಜಾನುವಾರುಗಳನ್ನು ರೋಗಗ್ರಸ್ತವನ್ನಾಗಿ ಮಾಡಿದ್ದರಂತೆ. ಎರಡನೆಯ ಮಹಾಯುದ್ಧದಲ್ಲಿ ಜಪಾನೀಯರು ಚೀನೀಯರ ಮೇಲೆ ಜೈವಿಕ ಸಮರದಲ್ಲಿ ನಿರತರಾಗಿದ್ದರೆಂಬ ಗುಲ್ಲು ಒಂದು ಕಾಲಕ್ಕೆ ಎದ್ದಿತ್ತು. 1952ರಲ್ಲಿ ನಡೆದ ಕೊರಿಯ ಯುದ್ಧದಲ್ಲೂ ಅಮೆರಿಕದ ಯೋಧರು ಉತ್ತರ ಕೊರಿಯದ ಮತ್ತು ಚೀನದ ಯೋಧರ ಮೇಲೆ ಜೈವಿಕ ಸಮರ ನಡೆಸಿದರೆಂಬ ದೂರು ವಿಶ್ವಸಂಸ್ಥೆ ಮುಂದೆಯೂ ಬಂದಿತ್ತು.
ಶತ್ರುಗಳನ್ನು ಅಧಿಕ ಸಂಖ್ಯೆಯಲ್ಲಿ ನಿಶ್ಚೇಷ್ಟಿತರನ್ನಾಗಿ ಮಾಡಬೇಕಾದರೆ ಅಥವಾ ಬಲಿ ತೆಗೆದುಕೊಳ್ಳಬೇಕಾದರೆ ಶತ್ರುಪಾಳೆಯಕ್ಕೆ ಕಾಲರ, ಪ್ಲೇಗು, ಸಿಡುಬು, ಟೈಫಸ್ ಮೊದಲಾದ ರೋಗಾಣುಜೀವಿಗಳನ್ನು ಹರಡಬೇಕು. ಶತ್ರುವಿನ ಪ್ರಾಣ ಹಾನಿಯಾಗುವುದರ ಬದಲು ಅವರನ್ನು ಬರಿಯ ರೋಗಗ್ರಸ್ತರನ್ನಾಗಿ ಮಾಡುವ ಉದ್ದೇಶವಿದ್ದರೆ ಶತ್ರು ಪ್ರದೇಶದಲ್ಲಿ ಟುಲರೀಮಿಯ, ಬ್ರುಸಿಲೇಸಿನ ಮೊದಲಾದ ಜೀವಾಣುಗಳನ್ನು ಬಿತ್ತಿ ಶತ್ರುಗಳಿಗೆ ಜ್ವರಪ್ರಾಪ್ತಿಯಾಗುವಂತೆ ಮಾಡಬಹುದು. ಈ ಎಲ್ಲ ರೋಗಾಣುಗಳು ವಾಯು ಅಥವಾ ನೀರಿನಲ್ಲಿದ್ದರೆ ಸಾಕು ಸ್ಪರ್ಶ, ಸೇವನೆ ಮತ್ತು ಉಸಿರಾಟಗಳ ಮೂಲಕ ಶತ್ರುವಿನ ದೇಹವನ್ನು ಪ್ರವೇಶಿಸಬಹುದು.
ಜಾನುವಾರಗಳ ಮೇಲೆ ಜೈವಿಕ ಸಮರ
[ಬದಲಾಯಿಸಿ]ಮಾನವರೇ ಅಲ್ಲದೆ, ಅವರಿಗೆ ಬೆಂಬಲವಾಗಿರುವ ಅಥವಾ ಸಹಾಯವಾಗಿರುವ ಜಾನುವಾರಗಳ ಮೇಲೆ ಜೈವಿಕ ಸಮರವನ್ನು ನಡೆಸಬಹುದು. ಉದಾಹರಣೆಗೆ ರೋಗಾಣುಜೀವಿಗಳಿಂದ ಹಂದಿಗಳಿಗೆ ಕಾಲರ ರೋಗವನ್ನು ಬಿತ್ತಬಹುದು; ಕೋಳಿಗಳಿಗೆ ಕೋಳಿರೋಗವನ್ನು ತಂದೊಡ್ಡಬಹುದು. ದನಕರುಗಳಿಗೆ ಕಾಲುಬಾಯಿ ಜ್ವರ ಬರುವಂತೆ ಮಾಡಬಹುದು. ಜಾನುವಾರಗಳ ಮೇಲೆ ನಡೆಸುವ ಜೈವಿಕ ಸಮರದಿಂದ ಪ್ರಾಣಿಜನ್ಯ ಆಹಾರದ ಪೂರೈಕೆ ಸ್ಥಗಿತಗೊಳ್ಳುವುದಲ್ಲದೆ ಅವುಗಳಿಂದ ಒದಗುವ ಉಣ್ಣೆ, ಚರ್ಮ ಮುಂತಾದವುಗಳ ಸರಬರಾಜಿಗೆ ಧಕ್ಕೆಯುಂಟಾಗುತ್ತದೆ. ಅಲ್ಲದೆ ಅಡ್ರಿನಲಿನ್ (ಯಕೃತ್ತಿನ ಕಷಾಯ) ಮತ್ತು ಇನ್ಸುಲಿನ್ (ಸಿಹಿಮೂತ್ರರೋಗಿಗಳಿಗೆ ಅಗತ್ಯವಾದ ರಾಸಾಯನಿಕ) ಮೊದಲಾದ ಔಷಧಗಳ ತಯಾರಿಕೆಗೂ ತಡೆಯುಂಟಾಗುತ್ತದೆ.
ಕೃಷಿ ಸಸ್ಯಗಳ ಜೈವಿಕ ಸಮರ
[ಬದಲಾಯಿಸಿ]ಮಾನವ ಮತ್ತು ಅವನಿಗೆ ನೇರವಾಗಿ ಸಂಬಂಧಿಸಿದ ಪ್ರಾಣಿಗಳೇ ಅಲ್ಲದೆ ಆಹಾರವನ್ನು ಒದಗಿಸುವ ಕೃಷಿ ಸಸ್ಯಗಳ ಮೇಲೂ ಜೈವಿಕ ಸಮರವನ್ನು ನಡೆಸಬಹುದು. ಹಲವು ಸಂದಂರ್ಭಗಳಲ್ಲಿ ಕೀಟಭಕ್ಷಿ ಹಾಗೂ ಸಸ್ಯಭಕ್ಷಿ ಜೀವಿಗಳನ್ನು ಹರಡಿ ಕೀಟ ಹಾಗೂ ಸಸ್ಯಗಳನ್ನು ವ್ಯಾಪಕವಾಗಿ ನಾಶಪಡಿಸಬಹುದು. ಹೀಗೆ ಮಾಡಿ ಪರಿಸರದ ಜೈವಿಕ ಸಮತೋಲವನ್ನೇ ಪರಿಣಾಮಕಾರಿಯಾಗಿ ಮಾರ್ಪಡಿಸಬಹುದು.
ಪರಿಣಾಮಗಳು
[ಬದಲಾಯಿಸಿ]ಜೈವಿಕ ಯುದ್ಧದಿಂದ ಯಾವ ಬಗೆಯ ಪರಿಣಾಮಗಳಾಗುತ್ತವೆ ಎಂಬುದನ್ನು ಶೋಧಿಸುವುದು ಕಷ್ಟ. ಈ ನಿಟ್ಟಿನಲ್ಲಿ ಹೆಚ್ಚು ಸಂಶೋಧನೆಗಳು ನಡೆದಿಲ್ಲ. ಅಲ್ಲದೆ ನಿಸರ್ಗದಲ್ಲಿ ರೋಗ ಹರಡುವ ಬಗ್ಗೆ ಕೂಡ ಹೆಚ್ಚಿನ ಮಾಹಿತಿ ದೊರೆತಿಲ್ಲ. ವಿಜ್ಞಾನಿಗಳಿಗೆ ಇದು ಅತ್ಯಂತ ಕ್ಲಿಷ್ಟ ಸಮಸ್ಯೆಯಾಗಿಯೇ ಉಳಿದಿದೆ. ಆದರೂ ಈ ದಿಸೆಯಲ್ಲಿ ಮಾನವಪ್ರಯತ್ನ ಮುಂದುವರಿದೇ ಇದೆ. ಮಿಕ್ಸೊಮ್ಯಾಟೋಸಿಸ್ ಎಂಬ ಕಾಯಿಲೆಯನ್ನು ಉಂಟುಮಾಡುವ ರೋಗಾಣು ಘಟಕಗಳನ್ನು ಉದ್ದೇಶ ಪೂರ್ವಕವಾಗಿಯೇ ಆಸ್ಟ್ರೇಲಿಯದ ಮೊಲಗಳ ಮೇಲೆ ವಿಜ್ಞಾನಿಗಳು ಪ್ರಯೋಗಿಸಿದರು (1950). ಬಹುಕಾಲ ಅದರ ಪ್ರಭಾವ ಲವಲೇಶವೂ ಪ್ರಕಟವಾಗದಿದ್ದರೂ ಪ್ರಯೋಗಿಸಿದ ಪ್ರದೇಶದಿಂದ 32 ಕಿಲೋಮೀಟರು ದೂರದಲ್ಲಿ ಈ ರೋಗ ತಟಕ್ಕನೆ ಕಾಣಿಸಿಕೊಂಡು ಆಸ್ಟ್ರೇಲಿಯ ಆದ್ಯಂತ ವ್ಯಾಪಕವಾಗಿ ಹರಡಿತು. ಈ ಹರಡುವಿಕೆಗೆ ಎರಡು ಬಗೆಯ ಸೊಳ್ಳೆಗಳು ಕಾರಣವೆಂದು ಕೊನೆಗೆ ತಿಳಿದು ಬಂತು.