ವಿಷಯಕ್ಕೆ ಹೋಗು

ಜೆನೆಟ್ (ಪ್ರಾಣಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೆನೆಟ್ - ಮ್ಯಾಮೇಲಿಯ ವರ್ಗ, ಕಾರ್ನಿವೊರ ಗಣ ಮತ್ತು ವೈವರಿಡೀ ಕುಟುಂಬಕ್ಕೆ ಸೇರಿದ ಚತುಷ್ಪಾದಿ. ಪುನುಗಿನ ಬೆಕ್ಕಿನ ಹತ್ತಿರ ಸಂಬಂಧಿ.

ದಕ್ಷಿಣ ಯೂರೋಪ್, ಉತ್ತರ ಆಫ್ರಿಕ, ಹಾಗೊ ನೈಋತ್ಯ ಏಷ್ಯದಲ್ಲಿ ವಾಸಿಸುವ ಭೊವಾಸಿ ಇದು. ಸಾಧಾರಣವಾಗಿ ನದಿಯ ದಡಗಳಲ್ಲಿ ಓಡಾಡುತ್ತಿರುತ್ತದೆ. ಗಾತ್ರ ಹಾಗೊ ಬಾಹ್ಯರೊಪದಲ್ಲಿ ಬೆಕ್ಕನ್ನು ಹೋಲುತ್ತದೆ. ಆದರೆ ಇದರ ಕಾಲುಗಳು ತೆಳು ಮತ್ತು ಉದ್ದವಾಗಿ ಇವೆ. ಕಾಲುಗಳಲ್ಲಿ ಬಲವಾದ ಚೂಪಾದ ಉಗುರುಗಳುಂಟು. ಮೂತಿ ಉದ್ದವಾಗಿದೆ. ದೇಹದ ಮೇಲೆ ಮೃದುವಾದ ಕೂದಲಿಂದ ಕೂಡಿದ ತುಪ್ಪಳ ಉಂಟು. ದೇಹದ ಬಣ್ಣ ಗಾಢ ಕಂದು. ಜೊತೆಗೆ ಕಪ್ಪು ಮಚ್ಚೆಗಳ ಸಾಲುಗಳೂ ಬೆನ್ನ ಮೇಲೆ ಕಪ್ಪು ಗೆರೆಯೂ ಇವೆ. ಬಾಲ ದೇಹಕ್ಕಿಂತ ಉದ್ದ ಬಾಲದ ಮೇಲೆ ಬಿಳಿ ಮತ್ತು ಕಪ್ಪು ಬಣ್ಣಗಳ ಪಟ್ಟೆಗಳಿವೆ. ಪುನುಗಿನ ಬೆಕ್ಕಿನಲ್ಲಿರುವಂತೆಯೇ ಇದರಲ್ಲೊ ಗುದದ್ವಾರದ ಬಳಿ ಸುಗಂಧದ್ರವವನ್ನು ಸ್ರವಿಸುವ ಗ್ರಂಥಿಗಳುಂಟು. ಆದರೆ ಸುಗಂಧದ ಮೊತ್ತ ಬಲು ಕಡಿಮೆ. ಜೆನೆಟ್ ಸಣ್ಣ ಸಣ್ಣ ಸಸ್ತನಿಗಳನ್ನು ಹಿಡಿದು ಭಕ್ಷಿಸುತ್ತದೆ. ಇದರ ಚಟುವಟಿಕೆಯೆಲ್ಲ ರಾತ್ರಿಯಲ್ಲಿ ಮಾತ್ರ. ಹಗಲಿನಲ್ಲಿ ಬಂಡೆಗಳ ಸಂದುಗಳಲ್ಲಿ, ಮರಗಳ ಡೊಗರುಗಳಲ್ಲಿ ಇಲ್ಲವೆ ದೊಡ್ಡ ರೆಂಬೆಗಳಲ್ಲಿ ಅಡಗಿದ್ದು ವಿಶ್ರಮಿಸುತ್ತದೆ. ಜೆನೆಟ್ ವರ್ಷಕ್ಕೆರಡು ಬಾರಿ ಮರಿ ಹಾಕುತ್ತದೆ. ಮರಿಗಳ ಸಂಖ್ಯೆ ಒಂದು ಸಲಕ್ಕೆ 2 ಇಲ್ಲವೆ 3.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: