ಜೀನ್ ಡ ಮ್ಯೂಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀನ್ ಡ ಮ್ಯೂಂಗ್ (೧೨೪೦-೧೩೦೫) ಮಧ್ಯಯುಗದ ಫ್ರೆಂಚ್ ಕವಿ. ಡ ಮ್ಯೂನ್ ಎಂದೂ ಇವನನ್ನು ಕರೆದಿದಾರೆ; ಪೂರ್ತಿ ಹೆಸರು ಲ್ವಾರ್ ನದೀ ತೀರದ ಮ್ಯೂಂಗ್ ಊರಿನ ಜೀನ್ ಜೋಪಿನೆಲ್ ಅಥವಾ ಕ್ಲೋಪಿನೆಲ್.

ಈತನ ಸಾಹಿತ್ಯ[ಬದಲಾಯಿಸಿ]

ಕೆಲವು ಗ್ರಂಥಗಳನ್ನು ಲ್ಯಾಟಿನ್ನಿನಿಂದ ಫ್ರೆಂಚಿಗೆ ಭಾಷಾಂತರ ಮಾಡಿದ; ವೆಜೆಟಿಯಸ್ ಎಂಬಾತ ಬರೆದ ಸೈನಿಕರನ್ನು ಕುರಿತು-ಎಂಬುದನ್ನು ವೀರವೃತ್ತಿಯ ಕಲೆ ಎಂಬುದಾಗಿ ಪ್ರಕಟಿಸಿದ; ಬೊಎತಿಯಸನ ತತ್ತ್ವಶಾಸ್ತ್ರದ ಸಂತೈಕೆ-ಎಂಬುದನ್ನು ಅದೇ ಹೆಸರಿನಿಂದ ದೊರೆ ಫಿಲಿಪ್ಪನಿಗೋಸ್ಕರ ತರ್ಜುಮೆ ಮಾಡಿದ ಅಬೆಲಾರ್ಡ್ ಮತ್ತು ಹೆಲಾಯ್ಸೆಗಳ ಜೀವನ ಮತ್ತು ಕಾಗದಪತ್ರಗಳು ಎಂಬುದನ್ನೂ ಫ್ರೆಂಚಿಗೆ ತಂದುಕೊಟ್ಟ. ಅವೇ ಅಲ್ಲದೆ ಜೀನ್ ಡ ಮ್ಯೂನನ ಉಯಿಲು, ಜೀನ್ ಡ ಮ್ಯೂನನ ಉಯಿಲಿಗೆ ಅನುಬಂಧ-ಎಂಬ ಎರಡು ಪದ್ಯಗಳನ್ನೂ ಬರೆದ. ಇವುಗಳಲ್ಲಿ ಯಾವುದೊಂದೂ ಇವನ ಹೆಸರನ್ನು ಉಳಿಸಿಲ್ಲ. ಇವನನ್ನು ಚಿರಸ್ಥಾಯಿಯಾಗಿ ಮಾಡಿರುವ ಕಥನಕಾವ್ಯ ರೊಮಾನ್ ಡ ಲ ರೋಸ್ (ಗುಲಾಬಿಯ ಅಚ್ಚರಿಕಥೆ) ಎಂಬುದು. ಗೀಯೋಮ್ ಡ ಲಾರೀಸ್ 4,000 ಪಂಕ್ತಿ ಬರೆದು ನಿಲ್ಲಿಸಿದ್ದನ್ನು 1275 ರಿಂದ 1280ರ ವರೆಗೆ ಶ್ರಮಿಸಿ 18,000 ಪಂಕ್ತಿಗಳನ್ನು ಹೊಸದಾಗಿ ಸೇರಿಸಿ ಪೂರ್ತಿ ಮಾಡಿದ ಲಾರಿಸ್ ಉಪಯೋಗಿಸಿದ ಎಂಟು ಉಚ್ಚಾರಾಂಶಗಳ ಪಂಕ್ತಿಯೇ ಡ ಮ್ಯೂಂಗಿಗೂ ಮಾಧ್ಯಮವಾಯಿತು. ಅಲ್ಲದೆ ಅವನು ಅನುಸರಿಸಿದ ಅನ್ಯಾರ್ಥ ರೀತಿಯನ್ನೂ ಇವನು ಬಿಡಲಿಲ್ಲ. ಕಥೆಯನ್ನೂ ಮುಂದುವರಿಸಿ ಕೊನೆಗೊಳಿಸಿದ. ಆದರೆ ಕಾವ್ಯೋದ್ದೇಶ ಧೋರಣೆ ವಿಷಯ ಸಂಪತ್ತು ವಿವರಗಳು ಎಲ್ಲದರಲ್ಲೂ ಲಾರಿಸ್ ಬೇರೆ, ಮ್ಯೂಂಗ್ ಬೇರೆ. ಆ ಕಾವ್ಯದ ಕಥೆ ಹೀಗಿದೆ: ಕವಿಗೆ ಒಂದು ಪವಿತ್ರ ಕನಸಾಗುತ್ತದೆ. ಮೈಗಳ್ಳತನ ಕೈಹಿಡಿದು ಅವನನ್ನು ಮರುಪುಷ್ಪಪಕ್ಷಿ ನಿಬಿಡವಾದ ಒಂದು ರಮ್ಯಾರಾಮಕ್ಕೆ ಕರೆದೊಯ್ಯುತ್ತದೆ. ಅಲ್ಲಿ ಅಡ್ಡಾಡುತ್ತಿದ್ದ ವ್ಯಕ್ತಿಗಳೆಂದರೆ ಆಹ್ಲಾದ, ನಲಿದಾಟ, ಮಧುರನೋಟ, ಐಶ್ವರ್ಯ, ಪರಮೌದಾರ್ಯ, ಮೇಲಾಗಿ ಪ್ರೇಮದೇವ. ಅಲ್ಲಿ ಇಲ್ಲಿ ಸುತ್ತುತ್ತಿರುವಾಗ ಕವಿಗೆ ಹಠಾತ್ತಾಗಿ ಅಂದಚಂದದ ಒಂದು ಗುಲಾಬಿ ಮೊಗ್ಗು ಗೋಚರಿಸುತ್ತದೆ. ಕೂಡಲೆ ಅವನಿಗೆ ಅದನ್ನು ಬಿಡಿಸಿ ಕೊಂಡು ಕೈವಶಮಾಡಿಕೊಳ್ಳುವ ತವಕ ಉಂಟಾಗುತ್ತದೆ. ಅರ್ಥಾತ್ ಪ್ರೇಮ ದೇವನ ಬಲಿಗೆ ಅವನು ಉರುಳಿಬೀಳುತ್ತಾನೆ ಪ್ರೇಮದೇವ ಅವನನ್ನು ಹತ್ತಿರ ಕುಳ್ಳಿರಿಸಿಕೊಂಡು ಶಿಷ್ಟಪ್ರಣಯ (ಕೋಟ್ರ್ಲಿ ಲವ್) ಎಂಬ ನಾಜೂಕು ಸಂಪ್ರದಾಯದ ಜಟಿಲ ತತ್ತ್ವಗಳನ್ನೂ ಕ್ಲಿಷ್ಟ ನಿಯಮಾವಳಿಯನ್ನೂ ಸ್ಪಷ್ಟವಾಗಿ ವಿವರಿಸಿ, ಕವಿ ತನ್ನ ಅಡಿಯಾಳಾಗಲು ಒಪ್ಪಿದರೆ, ಬಹಳ ಕಷ್ಟಗಳನ್ನು ಅನುಭವಿಸಿ ಆಮೇಲೆ ಅಷ್ಟೇ ಮೊತ್ತದ ಅಮೋದಗಳನ್ನೂ ಸವಿಯಬಹುದು-ಎಂದು ಹೇಳುತ್ತಾನೆ. ಒಲವಿನಿಂದ ಈಚೆಗೆ ಬರಲಾರದೆ ಕವಿ ಪ್ರೇಮದಾಸನಾಗಿ ಗುಲಾಬಿ ಮೊಗ್ಗನ್ನು ಕಿತ್ತುಕೊಳ್ಳುವ ಸಾಹಸಕಾರ್ಯದಲ್ಲಿ ಉದ್ಯುಕ್ತನಾಗುತ್ತಾನೆ. ವಿನಯ ಮುಂತಾದ ಒಳ್ಳೆಯ ವ್ಯಕ್ತಿಗಳಿಂದ ಅವನಿಗೆ ಉತ್ತೇಜನವೂ ಅಪಾಯ. ಪಿಸುಣು ಇತ್ಯಾದಿ ಧೂರ್ತರಿಂದ ಭಯ, ಭೀತಿಗಳೂ ಒದಗಿ ಅವನ ಪ್ರಯತ್ನಗಳು ವ್ಯರ್ಥವಾಗುತ್ತವೆ. ಬುದ್ಧಿವಿವೇಕ ಅವನಿಗೆ ವೃಥಾ ಶ್ರಮಪಡಬೇಡ ಎಂದು ಹಿತನುಡಿ ಆಡುತ್ತದೆ. ಏನೂ ತೋಚದೆ ಕನಸಿಗನಂತೆ ಕವಿ ಸುಮ್ಮನೆ ಇರುವಾಗ, ಮರುಕ ಮತ್ತು ಪ್ರೇಮದೇವಿ ಮುಂದೆ ಬಂದು, ಸಮಾಧಾನ ಹೇಳಿ, ಗುಲಾಬಿ ಮೊಗ್ಗಿಗೆ ಅವನು ಒಂದು ಬಾರಿ, ಮುತ್ತಿಡಲು ಅಪ್ಪಣೆ ಕೊಡುತ್ತಾರೆ. ಆದರೇನು? ಪಿಸುಣು ರಂಪ ಎಬ್ಬಿಸಿ ಕಿರುಚಿತ್ತಾಳೆ. ತತ್‍ಕ್ಷಣ ದಷ್ಟಪುಷ್ಟ ಕಾವಲುಗಾರರು ಓಡಿ ಬರುತ್ತಾರೆ. ಗುಲಾಬಿ ಮೊಗ್ಗಿನ ಸುತ್ತ ಕೋಟೆಗೋಡೆ ಏಳುತ್ತದೆ. ಮೊಗ್ಗನ್ನು ಕಾಪಾಡಿಕೊಳ್ಳಲು ಒಬ್ಬ ದಾದಿಯ ನೇಮಕವಾಗುತ್ತದೆ.

ಇಲ್ಲಿಗೆ ಡ ಲಾರೀಸನ ಕವನ ಕೊನೆಗೊಳ್ಳುತ್ತದೆ. ಕ್ರಿ.ಪೂ. 43ರಿಂದ ಕ್ರಿ.ಶ. 18ರ ವರೆಗೆ ಬದುಕಿದ ರೋಮನ್ ಕವಿ ಓವಿಡ್ಡನ ಶೈಲಿಯೇ ಲಾರೀಸನಿಗೆ ಮೇಲುಪಂಕ್ತಿ. ಲಾರೀಸ್ ಬರೆದದ್ದು ಉಚ್ಚವರ್ಗದವರಿಗೆ ಕಾವ್ಯಾಹ್ಲಾದ ಒದಗಿಸುವುದಕ್ಕಾಗಿ. ಆದ್ದರಿಂದ ಅವನ ಕವನ ರಮ್ಯವಾಗಿದೆ, ಲಲಿತವಾಗಿದೆ, ಹಿತವಾಗಿದೆ; ಚಿತ್ರಯೋಗ್ಯ ವರ್ಣನೆಗಳಿಂದ ಅಲಂಕೃತವಾಗಿದೆ.

ಡ ಮ್ಯೂಂಗನ ದೃಷ್ಟಿ ಮಧ್ಯಮವರ್ಗದ ಶ್ರದ್ಧಾವಂತ ಪಕ್ಷಪಾತೀಯ ದೃಷ್ಟಿ; ಕಾವ್ಯದ ಅನೇಕ ಕಡೆಗಳಲ್ಲಿ ಒರಟೊರಟು ವಾಸ್ತವತೆಯ ಹುರುಪುಳ್ಳ ನೋಟವನ್ನು ಕಣ್ಣಿದಿರು ತಂದು ನಿಲ್ಲಿಸುತ್ತಾನೆ. ಮಾರ್ದವ ಅವನಿಗೆ ಬೇಕಿಲ್ಲ; ಕಟುವಾದರೂ ಪರವಾಯಿಲ್ಲ ತಾನು ಕಂಡ ಸತ್ಯವನ್ನು ಸ್ಫುಟವಾಗಿ ವಿವರಿಸುವದೇ ಅವನಿಗೆ ಸಮ್ಮತ. ಮೂಲಕವಿಯ ಅನ್ಯಾರ್ಥವನ್ನು ಮುಂದುವರಿಸಿ ಪೂರೈಸಿ ಅವನ ಸಾಲವನ್ನು ತೀರಿಸಿದ್ದಾನೆ. ಕಥೆ ಹೀಗೆ ಮುಂಸಾಗುತ್ತದೆ. ಪ್ರೇಮಿಕವಿಯ ತೀವ್ರ ಬಯಕೆಯನ್ನು ಕೈಗೂಡಿಸಲು ನೆರವಿಗರು ಬರುತ್ತಾರೆ. ಯತಿಯ ಸೋಗಿನ ಕಪಟ ಕಾರ್ಯಾಸಕ್ತನಾಗಿ ತನ್ನ ಬೂಟಾಟಿಕೆಯಿಂದ ದಾದಿಯನ್ನು ಮರಳುಗೊಳಿಸಿ ತನ್ನವಳನ್ನಾಗಿ ಮಾಡಿಕೊಂಡು, ಪುಸುಣನ್ನು ಸೋಲಿಸಿ ಕೆಡವಿ ಕೋಟೆಯ ಮೇಲೆ ಲಗ್ಗೆ ಹತ್ತುವ ಕಾಲಾಳುಗಳಿಗೆ ಸಹಾಯ ಒದಗಿಸುತ್ತಾನೆ. ಪ್ರಕೃತಿಯೂ ಸಹಕರಿಸಿ ಪ್ರೇಮಿಯ ಪರವಾಗಿ ಪ್ರೇರಣೆಗಳನ್ನು ಒಡ್ಡುತ್ತಾಳೆ. ಜೊತೆಗೆ ಪ್ರೇಮದೇವಿ ತನ್ನ ಪ್ರಚಂಡ ಕೆಂಡಗಳನ್ನು ಎಸೆದು, ದುರ್ಗರಕ್ಷಕರ ಎದೆಯನ್ನು ತಲ್ಲಣಗೊಳಿಸುತ್ತಾಳೆ. ಅಪಾಯ, ಲಜ್ಜೆ, ಭೀತಿ ಎಂಬ ಶೂರರು ಹೋರಾಡಿ ಸೋತು ಪಲಾಯನ ಮಾಡುತ್ತಾರೆ. ಗುಲಾಬಿ ಪ್ರೇಮಿಯ ಕೈವಶವಾಗಿ, ಜಯನಿನಾದ ಹೊಮ್ಮುತ್ತದೆ.

ಇಷ್ಟೇ ಆಗಿದ್ದರೆ ಕಾವ್ಯಭಾಗ ಲಾರೀಸನ ಕೃತಿಯಂತೆ ಮಿತವಾಗಿಯೇ ಇರುತ್ತಿತ್ತು. ಡ ಮ್ಯೂಂಗ್ ಭಾರಿ ಪಾಂಡಿತ್ಯವುಳ್ಳವನಾದ್ದರಿಂದಲೂ ಬಾಳಿನ ಮತ್ತು ಸಮಾಜದ ಹಲವು ಮುಖಗಳ ಪರಿಚಯ ಉಳ್ಳವನಾಗಿದ್ದರಿಂದಲೂ ನಾನಾ ವಿಚಾರಗಳನ್ನು ಪ್ರತಿಪಾದಿಸಿದ್ದಾನೆ. ಅವನಲ್ಲಿ ಕಥನಾಪೇಕ್ಷೆ ಒಂದು ಪಾಲಾದರೆ ವಿಡಂಬನ ವ್ಯಾಮೋಹ ಮೂರು ಪಾಲು. ಹೀಗಾಗಿ ಗುಲಾಬಿ ಅಚ್ಚರಿಕಥೆಯ ಉತ್ತರಭಾಗ ಹತ್ತೆಂಟು ಅಪ್ರಸ್ತುತ ಪ್ರಸ್ತಾಪಗಳಿಂದ ತುಂಬಿಕೊಂಡಿದೆ. ಪ್ರಾಚೀನರಾದ ಪ್ಲೇಟೊ, ಅರಿಸ್ಟಾಟಲ್, ಲಿವಿ, ಸಿಸಿರೊ, ಸ್ಯಾಲಸ್ಟ್, ವರ್ಜಿಲ್, ಹಾರೆಸ್, ಲ್ಯೂಕನ್ ಮುಂತಾದವರಿಂದಲೂ ಅರ್ವಾಚೀನರಾದ ಬೊಎತಿಸಯಸ್, ರೋಜರ್ ಬೆಕನ್, ಸ್ಯಾಲಿಸ್ಬೆರಿಯ ಜಾನ್ ಅಬೆಲಾರ್ಡ್ ಮುಂತಾದವರಿಂದಲೂ ಗ್ರಂಥಭಾಗಗಳನ್ನು ಆಸಕ್ತಿಯಿಂದ ಉದ್ದರಿಸಿ ಅನುಕರಿಸಿ ತನ್ನ ವೈದುಷ್ಯಕ್ಕೂ ಧೈರ್ಯದ ಸ್ವಂತಿಕೆಗೂ ಕನ್ನಡಿ ಹಿಡಿದಿದ್ದಾನೆ. ಅಪ್ರಸ್ತುತ ವಿಷಯಸಮೂಹ ಮಧ್ಯಯುಗದ ಸಮಸ್ತ ಚಿಂತನೆಯನ್ನೂ ಆವರಿಸಿಕೊಂಡಿದೆ; ಹೆಂಗಸರ ಅವಹೇಳನ, ದಂಡಾಧಿಕಾರಿಗಳ ಖಂಡನೆ, ಭಿಕ್ಷಾಟನೆ ಮಾಡುವ ಯತಿಗಳನ್ನು ಕುರಿತು ಗೇಲಿ, ಉನ್ನತ ವಂಶಸ್ಥರ ಅಪಹಾಸ್ಯ-ಇವುಗಳೇ ಅಲ್ಲದೆ ಸಮಾಜಕಲ್ಪನೆಯ ಉದಯ, ಅರಸೊತ್ತಿಗೆಯ ಮೂಲ, ಆಸ್ತಿಪಾಸ್ತಿ, ಮದುವೆ ದಾರಿದ್ರ್ಯ ಮಂತ್ರಮಾಟ, ಭ್ರಾಂತಿ ಇತ್ಯಾದಿ ವಿಚಾರಗಳ ಮಂಥನ; ಕಲೆ ಮತ್ತು ಪ್ರಕೃತಿಯ ಜಿಜ್ಞಾಸೆ; ಭೌತವಿಜ್ಞಾನಗಳ ಪರೀಕ್ಷೆ-ಹೀಗೆ ಏನಿಲ್ಲ ಏನುಂಟು ಡ ಮ್ಯೂಂಗನ ಸರಳವಿಶ್ವಕೋಶದಲ್ಲಿ! ಪ್ರಕೃತಿ ಎದ್ದು ಬಂದು ತನ್ನ ನೇಮಕಗಳಿಗೆ ಎಲ್ಲರೂ ಎಲ್ಲವೂ ವಿಧೇಯವಾಗಿರತಕ್ಕದ್ದೆಂದು ಉಪದೇಶ ಸಾರುತ್ತಾಳೆ. ಪ್ರಕೃತಿಗೆ ವಿರೋಧವಾದದ್ದು ಯಾವುದೇ ಆಗಲಿ ಅದು ದೂಷ್ಯ; ಅದರಿಂದ ಕೇಡು, ಅದನ್ನು ತ್ಯಜಿಸಬೇಕು. ಈ ಸುಲಭ ಸೂತ್ರದಿಂದ ಸಮಾಜದ ಸಕಲ ಸಂಸ್ಥೆಗಳನ್ನೂ ಅಳೆದು, ಸರಿ ಯಾವುದು ತಪ್ಪು ಯಾವುದು ಎಂದು ನಿರ್ಧರಿಸಬಹುದು, ನಿರ್ಧರಿಸಬೇಕು, ನಿರ್ಧರಿಸಿದರೆ ಕ್ಷೇಮ. ಹಾಗೆಯೇ ಅದೇ ಸೂತ್ರ ನೈಜ ಪ್ರೇಮ, ನೈಜ ವಿತ್ತ, ನೈಜ ಕುಲೀನತೆಗಳನ್ನೂ ಕಂಡುಹಿಡಿದು ನಿಷ್ಕರ್ಷಿಸಬಲ್ಲದು. ಪ್ರಕೃತಿಯನ್ನು ನಂಬುವುದು ಲೇಸು ಇದೇ ಡ ಮ್ಯೂಂಗನ ದರ್ಶನದ ತಿರುಳು. ಇಂಥ ಹೇಳಿಕೆಗಳಿಂದ ಡ ಮ್ಯೂಂಗ್ ತನ್ನ ಕಾಲದ ಮಾಧ್ಯಮ ಮತ್ತು ಕೆಳಗಣ ವರ್ಗದವರ ಕಷ್ಟನಷ್ಟ ಆಶೆ ನಿರಾಶೆ ಅತೃಪ್ತಿ ತೃಪ್ತಿ ಏನಿದ್ದಿತೆಂದು ಕರಾರುವಕ್ಕಾಗಿ ವರದಿಗೈದಿದ್ದಾನೆ. ಉನ್ನತಸ್ಥಾನದವರ ಸ್ವಾರ್ಥ ನಿರ್ದಯೆ ದಬ್ಬಾಳಿಕೆಗಳನ್ನು ವ್ಯಂಗ್ಯವಾಗಿ ಅಲ್ಲಗಳೆದಿದ್ದಾನೆ. ಪ್ರಕೃತಿಗೆ ಅಧಿಕ ಮನ್ನಣೆ ಸಲ್ಲಿಸಿ, ಹೊಸಹುಟ್ಟಿನ ಅಭಿಮತಕ್ಕೆ ಪೂರ್ವಸೂಚನೆ ನುಡಿದಿದ್ದಾನೆ. ಆದ್ದರಿಂದ ಮಧ್ಯಯುಗದವರೆ ಅಲ್ಲದೆ ಮುಂದಣ ಯುಗದವರೂ ಅವನನ್ನು ಮುಕ್ತಕಂಠದಿಂದ ಹೊಗಳಿದರು. ಗುಲಾಬಿಯ ಅಚ್ಚರಿಕಥೆ ಹೆಚ್ಚು ಬಾರಿ ಅಚ್ಚಾಯಿತೊ ಎಷ್ಟು ಭಾಷೆಗಳಿಗೆ ತರ್ಜುಮೆಗೊಂಡಿತೊ ವರ್ಣೀಸಲಸಾಧ್ಯ. ಡ ಮ್ಯೂಂಗ್ ಪ್ರತಿಪಾದಿಸಿದ ವಿಷಯಗಳ ಮೇಲೆ ಹೆಚ್ಚಿನ ವಾದ ವಿವಾದ ಕಕ್ಷಿ ಪ್ರತಿಕಕ್ಷಿ ಏರ್ಪಟ್ಟವೆಂದಮೇಲೆ ಅವನ ಪ್ರಭಾವದ ಎತ್ತರವೂ ವ್ಯಾಪ್ತಿಯೂ ಎಷ್ಟಿತ್ತೆಂಬುದನ್ನು ಸುಲಭವಾಗಿ ಊಹಿಸಬಹುದು.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: