ವಿಷಯಕ್ಕೆ ಹೋಗು

ಜಿಪಿಡಬ್ಲ್ಯುಎಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೂ ಸಾಮೀಪ್ಯ ಎಚ್ಚರಿಕೆ ವ್ಯವಸ್ಥೆ (Ground Proximity Warning System) ಎಂಬುದು ವಿಮಾನಗಳಲ್ಲಿ ಅಳವಡಿಸಲಾಗುವ, ವಿಮಾನದ ಚಾಲಕ ಸಿಬ್ಬಂದಿಯನ್ನು ವಿಮಾನದ ಅಪಾಯಕಾರಿ ಧೋರಣೆಯ (Attitude) ಪರಿಸ್ಥಿತಿಗಳಲ್ಲಿ ಎಚ್ಚರಿಸುವ ವ್ಯವಸ್ಥೆಯಾಗಿದೆ. ವಿಮಾನವು ನೆಲದಿಂದ ೫೦ರಿಂದ ೨೪೫೦ ಅಡಿಗಳ ರೇಡಿಯೊ ಎತ್ತರದಲ್ಲಿರುವಾಗ (Radio Altitude) ಹಲವು ನಿಶ್ಚಿತ ಪರಿಮಿತಿಗಳನ್ನು ಮೀರಿದರೆ ಕೂಡಲೇ ಈ ವ್ಯವಸ್ಥೆಯು ಚಾಲಕ ಸಿಬ್ಬಂದಿಯನ್ನು ಧ್ವನಿ ಹಾಗೂ ದೀಪಗಳ ಮೂಲಕ ಎಚ್ಚರಿಸಿ ಚಾಲಕರು ಆ ಪರಿಸ್ಥಿತಿಯನ್ನು ತಿದ್ದಲು ಸೂಚಿಸುತ್ತದೆ
ಈ ವ್ಯವಸ್ಥೆಯು ಎಚ್ಚರಿಕೆಗಳನ್ನು ಹೊರಡಿಸುವ ಪರಿಸ್ಥಿತಿಗಳನ್ನು ಐದು ವಿಧಗಳಲ್ಲಿ (Modes) ವಿಂಗಡಿಸಲಾಗಿದೆ:

  • ವಿಧ ೧ – ಮಿತಿಮೀರಿದ ಇಳಿತ ಗತಿ (Excessive Descent Rate)
  • ವಿಧ ೨ – ಮಿತಿಮೀರಿದ ನೆಲ ಸಾಮೀಪ್ಯ ಗತಿ (Excessive Terrain Closure Rate)
  • ವಿಧ ೩ – ಉಡ್ಡಯನದ ನಂತರ ಅಥವಾ ಪುನರ್ಸುತ್ತುಬರುವಿಕೆಯ ಸಮಯದಲ್ಲಿ ಎತ್ತರ ನಷ್ಟವಾಗುವಿಕೆ (Altitude Loss after Take-Off or Go Around)
  • ವಿಧ ೪ – ಅತಿ ವೇಗದ ಹಾರಾಟದ ವೇಳೆ ಅಥವಾ ಇಳಿಯುವ ಸ್ಥಿತಿಯಲ್ಲಿಲ್ಲದಾಗ ನೆಲದಿಂದ ಅಸುರಕ್ಷಿತ ಅಂತರ (Unsafe Terrain Clearance during High Speed Flight or While Not in the Landing Configuration)
  • ವಿಧ ೫ – ಇಳಿತಕೋನದ ಮಿತಿಗಿಂತ ಇಳಿತ ಕಡಿಮೆಯಾಗುವಿಕೆ (Below Glideslope Deviation Alert)

ಜಿಪಿಡಬ್ಲ್ಯುಎಸ್ ವ್ಯವಸ್ಥೆಯು ಕಾರ್ಯವೆಸಗುವುದಕ್ಕೆ ಬೇಕಾದ ಮಾಹಿತಿಗಳನ್ನು ವಿಮಾನದ ಅನೇಕ ಉಪಕರಣಗಳಿಂದ ಪಡೆದುಕೊಳ್ಳುವಂತೆ ಅಳವಡಿಸಲಾಗಿರುತ್ತದೆ. ಜಿಪಿಡಬ್ಲ್ಯುಎಸ್‌ಗೆ ಬರುವ ಮಾಹಿತಿಗಳೆಂದರೆ:

ಈ ಮಾಹಿತಿಗಳಲ್ಲಿ ಯಾವುದಾದರೂ ಜಿಪಿಡಬ್ಲ್ಯುಎಸ್ ವ್ಯವಸ್ಥೆಗೆ ಸಿಗದಿದ್ದಲ್ಲಿ ಆ ಮಾಹಿತಿಗೆ(ಗಳಿಗೆ) ಸಂಬಂಧಪಟ್ಟ ವಿಧದ ಎಚ್ಚರಿಕೆ ನಿಷ್ಕ್ರಿಯವಾಗುತ್ತದೆ. ೧ರಿಂದ ೪ ವಿಧಗಳ ಎಚ್ಚರಿಕೆಗಳು ಧ್ವನಿ ಎಚ್ಚರಿಕೆಯೊಂದಿಗೆ ಕೆಂಪು ದೀಪದ ”’ಮೇಲಕ್ಕೇರು”’ (PULL UP) ಎಚ್ಚರಿಕೆಯನ್ನೂ ಹೊಂದಿರುತ್ತವೆ.

ವಿಧಗಳ ವಿವರಣೆ[ಬದಲಾಯಿಸಿ]

ವಿಧ ೧ – ಮಿತಿಮೀರಿದ ಇಳಿತ ಗತಿ (Excessive Descent Rate)[ಬದಲಾಯಿಸಿ]

ಈ ಎಚ್ಚರಿಕೆಗೆ ಎರಡು ಗಡಿಗಳಿವೆ (ಮಿತಿ ಹಂತಗಳು). ಮೊದಲ ಗಡಿಗಿಂತಲೂ ಮೀರಿದ ಗತಿಯಿಂದ ವಿಮಾನವು ಕುಸಿಯುತ್ತಿದ್ದರೆ ”’ಸಿಂಕ್ ರೇಟ್”’ (ಕುಸಿತ ಗತಿ – SINK RATE) ಎಂಬ ಧ್ವನಿ ಎಚ್ಚರಿಕೆ ಪುನರುಚ್ಚಾರವಾಗುತ್ತಿರುತ್ತದೆ. ಎರಡನೇ ಗಡಿಗಿಂತಲೂ ಮೀರಿದ ಗತಿಯ ಕುಸಿತವಿದ್ದರೆ ”’ವೂಪ್ ವೂಪ್ ಪುಲ್ಲ್ ಅಪ್”’ (ಮೇಲಕ್ಕೆ ಎಳಿ- WOOP WOOP PULL UP) ಎಂಬ ಧ್ವನಿಯು ಪದೇ ಪದೇ ಎಚ್ಚರಿಸುತ್ತಿರುತ್ತದೆ. ಈ ಧ್ವನಿ ಎಚ್ಚರಿಕೆಯು ವಿಮಾನದ ಇಳಿತ ಗತಿಯು ಮಿತಿಯೊಳಗೆ ಬರುವ ತನಕ ಪುನರಾವರ್ತಗೊಳ್ಳುತ್ತಿರುತ್ತದೆ. ಈ ವಿಧದ ಎಚ್ಚರಿಕೆಗಳು ವಿಮಾನದ ಸ್ಥಿತಿಯಿಂದ (Configuration) ಸ್ವತಂತ್ರವಾಗಿರುತ್ತವೆ.


ವಿಧ ೨ – ಮಿತಿಮೀರಿದ ನೆಲ ಸಾಮೀಪ್ಯ ಗತಿ (Excessive Terrain Closure Rate)[ಬದಲಾಯಿಸಿ]

ಈ ವಿಧದಲ್ಲಿ ಜಿಪಿಡಬ್ಲ್ಯುಎಸ್ ವ್ಯವಸ್ಥೆಯು ಮ್ಯಾಕ್ ಸಂಖ್ಯೆಯಲ್ಲಿ ವಿಮಾನದ ವೇಗ (ಮ್ಯಾಕ್ ಸಂಖ್ಯೆ – ಧ್ವನಿಯ ವೇಗದೊಂದಿಗೆ ವಿಮಾನದ ವೇಗದ ಹೋಲಿಕೆ), ರೇಡಿಯೊ ಎತ್ತರ ಹಾಗೂ ಎತ್ತರ ಬದಲು ಗತಿ, ವಾಯುಭಾರ ಮಾಪಕದಿಂದ ವಿಮಾನದ ಎತ್ತರ ಮತ್ತು ವಿಮಾನದ ಸ್ಥಿತಿಗಳನ್ನು ಗಮನಿಸುತ್ತಿರುತ್ತದೆ. ಈ ವಿಧದಲ್ಲೂ ಎರಡು ಗಡಿಗಳಿವೆ. ನೆಲ ಸಾಮೀಪ್ಯ ಗತಿಯು ಮೊದಲ ಗಡಿಯನ್ನು ಮೀರಿದರೆ ”’ಟೆರ್ರೈನ್”’ ಎಂಬ ಧ್ವನಿ ಎಚ್ಚರಿಕೆಯು ಎರಡು ಬಾರಿ ಕೇಳಿ ಬಂದು ನಂತರ ”’ವೂಪ್ ವೂಪ್ ಪುಲ್ಲ್ ಅಪ್”’ ಎಂಬ ಎಚ್ಚರಿಕೆಯು ಪುನರಾವರ್ತಗೊಳ್ಳುತ್ತಿರುತ್ತದೆ. ಪುಲ್ಲ್ ಅಪ್ ಎಚ್ಚರಿಕೆಯ ಸ್ಥಿತಿಯಿಂದ ಹೊರಬಂದೊಡನೆ ”’ಟೆರ್ರೈನ್”’ ಎಂಬ ಎಚ್ಚರಿಕೆ ಪುನರಾವರ್ತಗೊಳ್ಳುತ್ತಿರುತ್ತದೆ. ವಿಮಾನವು ನೆಲಕ್ಕಿಳಿಯುವ ಸ್ಥಿತಿಯಲ್ಲಿದ್ದು (ಚಕ್ರಗಳು ಮತ್ತು ರೆಕ್ಕೆಸೆರಗು ಹೊರಗೆ ಚಾಚಿಕೊಂಡಿದ್ದು), ಎರಡು ಗಡಿಗಳನ್ನೂ ಮೀರಿದರೆ ಕೇವಲ ”’ಟೆರ್ರೈನ್”’ ಎಂಬ ಎಚ್ಚರಿಕೆಯು ಕೇಳಿಬರುತ್ತಿರುತ್ತದೆ.


ವಿಧ ೩ – ಉಡ್ಡಯನದ ನಂತರ ಅಥವಾ ಪುನರ್ಸುತ್ತುಬರುವಿಕೆಯ ಸಮಯದಲ್ಲಿ ಎತ್ತರ ನಷ್ಟವಾಗುವಿಕೆ (Altitude Loss after Take-Off or Go Around)[ಬದಲಾಯಿಸಿ]

ಪುನರ್ಸುತ್ತು ಬರುವಿಕೆಯೆಂದರೆ (Go Around) ವಿಮಾನವನ್ನು ಓಡುದಾರಿಯಲ್ಲಿ (Runway) ಇಳಿಸುವ ಸಮಯದಲ್ಲಿ ಎಲ್ಲವೂ ಸಮರ್ಪಕವಾಗಿರದಿದ್ದರೆ ವಿಮಾನವನ್ನು ಮತ್ತೆ ಮೇಲಕ್ಕೆ ಹಾರಿಸಿ ಪುನಃ ಸುತ್ತು ಬಂದು ಓಡುದಾರಿಯಲ್ಲಿ ಇಳಿಸುವ ಪ್ರಯತ್ನ.
ಮೊದಲ ಬಾರಿ (ಉಡ್ಡಯನ ಸಮಯ) ಅಥವಾ ಪುನರ್ಸುತ್ತು ಬರುವಿಕೆಯ ಸಮಯದಲ್ಲಿ ವಿಮಾನವು ಮೇಲಕ್ಕೇರುವಾಗ ಯಾವುದೇ ಕಾರಣಗಳಿಂದ ಎತ್ತರ ನಷ್ಟವಾಗುತ್ತಿದ್ದರೆ (ವಿಮಾನವು ಎತ್ತರಕ್ಕೇರಲಾರದೆ ಕುಸಿಯತೊಡಗಿದರೆ) ”’ಡೋಂಟ್ ಸಿಂಕ್”’ (ಕುಸಿಯಬೇಡ – DON’T SINK) ಎಂಬ ಎಚ್ಚರಿಕೆ ಈ ಪರಿಸ್ಥಿತಿ ಸರಿಹೋಗುವತನಕ ಕೇಳಿಬರುತ್ತಿರುತ್ತದೆ. ವಿಮಾನವು ಉದ್ದೇಶಪೂರ್ವಕವಾಗಿ ಕುಸಿಯುತ್ತಿರುವಾಗ (ನೆಲಕ್ಕಿಳಿಯಲು ಬರುತ್ತಿರುವಾಗ) ೨೦೦ ಅಡಿಗಳ ರೇಡಿಯೊ ಎತ್ತರಕ್ಕೆ ಇಳಿಯುವ ಮುನ್ನ ಈ ವಿಧದ ಎಚ್ಚರಿಕೆಯನ್ನು ಹೊರಡಿಸಲಾಗುವುದಿಲ್ಲ.


ವಿಧ ೪ – ಅತಿ ವೇಗದ ಹಾರಾಟದ ವೇಳೆ ಅಥವಾ ಇಳಿಯುವ ಸ್ಥಿತಿಯಲ್ಲಿಲ್ಲದಾಗ ನೆಲದಿಂದ ಅಸುರಕ್ಷಿತ ಅಂತರ (Unsafe Terrain Clearance during High Speed Flight or While Not in the Landing Configuration)[ಬದಲಾಯಿಸಿ]

ಎರಡು ಉಪವಿಧಗಳು

ವಿಧ ೪ಎ – ಚಕ್ರೋಪಕರಣವು ಕೆಳಚಾಚಿಲ್ಲದಿರುವ ಸ್ಥಿತಿಯಲ್ಲಿ ನೆಲದಿಂದ ಅಸುರಕ್ಷಿತವಾದ ಅಂತರ (Unsafe Terrain Clearance With Landing Gear Not Down)[ಬದಲಾಯಿಸಿ]

ವಿಮಾನದ ಉಡ್ಡಯನದ ನಂತರ ಒಂದು ನಿರ್ದಿಷ್ಟ ಎತ್ತರ ತಲುಪಿದೊಡನೆ ಚಕ್ರೋಪಕರಣವನ್ನು (ಚಕ್ರೋಪಕರಣ – ವಿಮಾನವು ಮೇಲಕ್ಕೇರುವಾಗ ಮತ್ತು ನೆಲಕ್ಕಿಳಿಯುವಾಗ ಓಡುದಾರಿಯಲ್ಲಿ ಓಡಲು ಉಪಯೋಗಿಸುವ ಗಾಲಿಗಳು ಹಾಗೂ ಅವುಗಳನ್ನು ವಿಮಾನಕ್ಕೆ ಅಳವಡಿಸಲಾಗುವ ವ್ಯವಸ್ಥೆ) ಒಳಗೆಳೆದುಕೊಳ್ಳಲಾಗುತ್ತದೆ ಹಾಗೂ ನೆಲಕ್ಕಿಳಿಯುವಾಗ ನಿರ್ದಿಷ್ಟ ಎತ್ತರದಲ್ಲಿ ಚಕ್ರೋಪಕರಣವನ್ನು ಹೊರಕ್ಕೆ ಕೆಳಚಾಚುವಂತೆ ಮಾಡಲಾಗುತ್ತದೆ.
ಈ ಉಪವಿಧವು ವಿಮಾನವು ೭೦೦ ರೇಡಿಯೊ ಎತ್ತರದ ಅಡಿಗಳಷ್ಟು ಮೇಲೇರಿದೊಡನೆ (ಚಕ್ರೋಪಕರಣವನ್ನು ಒಳಕ್ಕೆಳೆದುಕೊಂಡಿರುವ ಸ್ಥಿತಿಯಲ್ಲಿ) ಸಿದ್ಧವಾಗುತ್ತದೆ. ವಿಮಾನವು ೦.೩೫ ಮ್ಯಾಕ್‌ಗಿಂತ ನಿಧಾನವಾಗಿ ೭೦೦ ಅಡಿಗಳಿಗಿಂತ ಕೆಳಕ್ಕಿಳಿದರೆ ”’ಟೂ ಲೋ: ಗೇರ್”’ (ಅತಿ ಕಡಿಮೆ ಎತ್ತರ: ಚಕ್ರೋಪಕರಣ – TOO LOW: GEAR) ಎಂಬ ಎಚ್ಚರಿಕೆ ಕೇಳಿಬರುತ್ತಿರುತ್ತದೆ. ವಿಮಾನವು ೦.೩೫ ಮ್ಯಾಕ್‌ಗಿಂತ ವೇಗವಾಗಿ ೭೦೦ ಅಡಿಗಳಿಗಿಂತ ಕೆಳಕ್ಕಿಳಿದರೆ ”’ಟೂ ಲೋ: ಟೆರ್ರೈನ್”’ (ಅತಿ ಕಡಿಮೆ ಎತ್ತರ: ನೆಲ – TOO LOW: TERRAIN) ಎಂಬ ಎಚ್ಚರಿಕೆ ಕೇಳಿಬರುತ್ತದೆ ಹಾಗೂ ಎಚ್ಚರಿಕೆಯ ಗಡಿ ೧೦೦೦ ರೇಡಿಯೊ ಎತ್ತರದ ಅಡಿಗಳಿಗೆ ವಿಸ್ತರಿಸುತ್ತದೆ. ಈ ಪರಿಸ್ಥಿತಿಯು ಸರಿಹೋಗುವ ತನಕ ಎಚ್ಚರಿಕೆಯು ಕೇಳಿಸುತ್ತದೆ.

ವಿಧ ೪ಬಿ – ರೆಕ್ಕೆಸೆರಗು (ವಿಮಾನವು ನೆಲಕ್ಕಿಳಿಯುವ) ಸ್ಥಾನದಲ್ಲಿಲ್ಲದೆ ನೆಲದಿಂದ ಅಸುರಕ್ಷಿತ ಅಂತರ (Unsafe Terrain Clearance With The Flaps Not In Landing Position)[ಬದಲಾಯಿಸಿ]

ವಿಮಾನವು ಮೇಲೇರುವಾಗ (ಉಡ್ಡಯನ ಸಮಯದಲ್ಲಿ) ಮತ್ತು ನೆಲಕ್ಕಿಳಿಯುವಾಗ ರೆಕ್ಕೆಗಳ ವಿಸ್ತೀರ್ಣವನ್ನು ಹೆಚ್ಚಿಸಲು ರೆಕ್ಕೆಸೆರಗುಗಳನ್ನು ಉಪಯೋಗಿಸಲಾಗುತ್ತದೆ. ಇವುಗಳು ಹೊರಚಾಚಿದಾಗ ರೆಕ್ಕೆ ವಿಸ್ತೀರ್ಣವು ಹೆಚ್ಚುತ್ತದೆ ಮತ್ತು ಒಳಕ್ಕೆಳೆದುಕೊಂಡಾಗ ರೆಕ್ಕೆಯು ತನ್ನ ಮೂಲಸ್ಥಿತಿಯನ್ನು (ನೈಜ ವಿಸ್ತೀರ್ಣ) ಹೊಂದುತ್ತದೆ. ವಿಮಾನ ಮೇಲಕ್ಕೇರಲು ಹಾಗೂ ನೆಲಕ್ಕಿಳಿಯಲು ರೆಕ್ಕೆಸೆರಗುಗಳಿಗೆ ನಿರ್ದಿಷ್ಟ ಸ್ಥಾನಗಳಿರುತ್ತವೆ. ನೆಲಕ್ಕಿಳಿಯುವಾಗ ಎಲ್ಲಕ್ಕಿಂತ ಹೆಚ್ಚು ಹೊರಚಾಚಿಕೊಂಡಿರುತ್ತವೆ.
ಚಕ್ರೋಪಕರಣವು ಕೆಳಚಾಚಿದ್ದು ರೆಕ್ಕೆಸೆರಗುಗಳು ವಿಮಾನವು ನೆಲಕ್ಕಿಳಿಯುವ ಸ್ಥಾನದಲ್ಲಿಲ್ಲದಿದ್ದರೆ ಹಾಗೂ ವಿಮಾನವು ೦.೨೮ ಮ್ಯಾಕ್‌ಗಿಂತ ನಿಧಾನವಾಗಿದ್ದರೆ ಈ ಉಪವಿಧವು ”’ಟೂ ಲೋ: ಫ್ಲ್ಯಾಪ್ಸ್”’ (ಅತಿ ಕಡಿಮೆ ಎತ್ತರ: ರೆಕ್ಕೆಸೆರಗುಗಳು – TOO LOW: FLAPS) ಎಂಬ ಎಚ್ಚರಿಕೆಯನ್ನು ಕೊಡುತ್ತದೆ. ವಿಮಾನವು ಇದೇ ಸ್ಥಿತಿಯಲ್ಲಿ ೦.೨೮ ಮ್ಯಾಕ್‌ಗಿಂತ ವೇಗವಾಗಿದ್ದರೆ ”’ಟೂ ಲೋ: ಟೆರ್ರೈನ್”’ (ಅತಿ ಕಡಿಮೆ ಎತ್ತರ: ನೆಲ – TOO LOW: TERRAIN) ಎಂಬ ಎಚ್ಚರಿಕೆಯನ್ನು ಕೊಡುತ್ತದೆ. ”’ಟೂ ಲೊ: ಗೇರ್”’ ಎಚ್ಚರಿಕೆಗೆ (ವಿಧ ೪ಎ) ”’ಟೂ ಲೋ ಫ್ಲ್ಯಾಪ್ಸ್”’ ಎಚ್ಚರಿಕೆಗಿಂತ ಪ್ರಾಶಸ್ತ್ಯವಿರುತ್ತದೆ. ಈ ಪರಿಸ್ಥಿತಿಯು ಸರಿಹೋಗುವ ತನಕ ಎಚ್ಚರಿಕೆಯು ಕೇಳಿಸುತ್ತದೆ.


ವಿಧ ೫ – ಇಳಿತಕೋನದ ಮಿತಿಗಿಂತ ಇಳಿತ ಕಡಿಮೆಯಾಗುವಿಕೆ (Below Glideslope Deviation Alert)[ಬದಲಾಯಿಸಿ]

ವಾತಾವರಣವು ಅಶುಭ್ರವಾಗಿದ್ದು (ಉದಾ: ಮಳೆಗಾಲದಲ್ಲಿ) ಚಾಲಕರಿಗೆ ನಿಲ್ದಾಣ ಹಾಗೂ ಓಡುದಾರಿಯು ಗೋಚರವಾಗದಿದ್ದಲ್ಲಿ ವಿಮಾನವನ್ನು ನೆಲಕ್ಕಿಳಿಸಲು ಉಪಕರಣ ವ್ಯವಸ್ಥೆಯನ್ನು ಉಪಯೋಗಿಸಲಾಗುತ್ತದೆ. ಇದಕ್ಕೆ ”’ಐಎಲ್‌ಎಸ್ – ಇನ್‌ಸ್ಟ್ರುಮೆಂಟ್ ಲ್ಯಾಂಡಿಂಗ್ ಸಿಸ್ಟಂ”’ (ILS – Instrument Landing System) ಎಂದು ಕರೆಯುತ್ತಾರೆ. ಇದು ನೆಲದಲ್ಲಿ ಹಾಗೂ ವಿಮಾನದಲ್ಲಿ ಅಳವಡಿಸಿರುವ ಉಪಕರಣಗಳ ಪರಸ್ಪರ ಸಹಕಾರದಿಂದ ಕಾರ್ಯವೆಸಗುವ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ವಿಮಾನವು ಕೆಳಕ್ಕಿಳಿಯುವ ಕೋನವನ್ನು ಅಳೆದು ಚಾಲಕರಿಗೆ ತೋರಿಸುವ ಉಪವ್ಯವಸ್ಥೆ ”’ಗ್ಲೈಡ್ ಸ್ಲೋಪ್”’.
ವಿಮಾನದ ಇಳಿತ ಕೋನವು ಒಂದು ನಿರ್ದಿಷ್ಟ ಮಿತಿಗಿಂತ ವ್ಯತ್ಯಯವಾಗಿದ್ದರೆ ”’ಗ್ಲೈಡ್ ಸ್ಲೋಪ್”’ ಎಂಬ ಎಚ್ಚರಿಕೆ ಕೇಳಿಬರುತ್ತದೆ ಹಾಗೂ ‘’’ಬಿಲೋ ಗ್ಲೈಡ್ ಸ್ಲೋಪ್”’ ದೀಪಗಳು ಉರಿಯತೊಡಗುತ್ತವೆ. ಈ ವಿಧದಲ್ಲಿ ಮೃದು ಹಾಗೂ ಉಚ್ಛಸ್ವರದ ಎಚ್ಚರಿಕೆಗಳಿವೆ. ಇಳಿತಕೋನವು ಹೆಚ್ಚು ವ್ಯತ್ಯಯವಾದಂತೆ ಎಚ್ಚರಿಕೆಯು ಉಚ್ಛಸ್ವರದಲ್ಲಿ ಕೇಳಿಬರುತ್ತದೆ ಹಾಗೂ ಪುನರಾವರ್ತನೆಯ ಗತಿಯು ಹೆಚ್ಚುತ್ತಾ ಹೋಗುತ್ತದೆ.
೧ರಿಂದ ೪ ವಿಧಗಳ ಎಚ್ಚರಿಕೆಗಳಿಗೆ ವಿಧ ೫ರ ಎಚ್ಚರಿಕೆಗಿಂತ ಪ್ರಾಶಸ್ತ್ಯವಿದೆಯಾದರೂ ”’ಪುಲ್ಲ್ ಅಪ್”’ ಮತ್ತು ”’ಬಿಲೋ ಗ್ಲೈಡ್ ಸ್ಲೋಪ್”’ ದೀಪಗಳು ಜೊತೆಗೇ ಉರಿಯಬಹುದು.


ಹೊರಗಿನ ಕೊಂಡಿಗಳು[ಬದಲಾಯಿಸಿ]

GPWS Explained
GPWS Inventor Honoured Archived 2008-09-17 ವೇಬ್ಯಾಕ್ ಮೆಷಿನ್ ನಲ್ಲಿ.


Vedaprakasha ೧೪:೩೩, ೧ September ೨೦೦೭ (UTC)