ಜಾಲಪ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಲಪ್ - ತೀಕ್ಷ್ಣ ವಿರೇಚನಕಾರಿಯಾದ ಒಂದು ಔಷಧ. ಗೆಣಸಿನ ಜಾತಿಗೆ ಸೇರಿದ ಎಕ್ಸೋನಿಯಮ್ (ಐಪೋಮಿಯ) ಪರ್ಗ ಎಂಬ ಹಂಬಿನ ಉತ್ಪನ್ನ.

ಬಳಕೆಯ ಇತಿಹಾಸ[ಬದಲಾಯಿಸಿ]

ಇದು ಯೂರೋಪಿನಲ್ಲಿ 1610ರಿಂದಲೇ ಬಳಕೆಗೆ ಬಂದಿತ್ತು. ಮೆಕ್ಸಿಕೋ ರಾಜ್ಯದ ಜಾಲಪ್ ಎಂಬ ಊರಿನ ನೆರೆ ಪ್ರಾಂತ್ಯದಿಂದ ಈ ಮೂಲಿಕೆಯನ್ನು ಮೊದಲು ಆಮದು ಮಾಡಿಕೊಂಡಿದ್ದರಿಂದ ಇದಕ್ಕೆ ಜಾಲಪ್ ಎಂದು ಹೆಸರಾಯಿತು. ಆದರೆ ಇದು ಜಾಲಪ್ ಬಳಿಯಲ್ಲಿಯೇ ಅಲ್ಲದೆ ಮೆಕ್ಸಿಕೋ ರಾಜ್ಯದಲ್ಲೆಲ್ಲ (ವಿಶೇಷವಾಗಿ ಅಲ್ಲಿಯ ಪರ್ವತಗಳ ಪೂರ್ವ ಇಳಿಜಾರು ಪ್ರದೇಶ, ವೆರಾಕ್ರುಸ್ ನಗರದ ನೆರೆಪ್ರಾಂತ್ಯ) ಬಹುವಾರ್ಷಿಕ ಹಂಬಾಗಿ ತಾನೇ ತಾನಾಗಿ ಬೆಳೆಯುತ್ತದೆ.

ಗೆಣಸಿನ ಹಂಬಿನಂತೆಯೇ ಇದೂ ನೆಲದಲ್ಲಿ ಗೆಡ್ಡೆ ಕಟ್ಟುತ್ತದೆ. ಗೆಡ್ಡೆ ಸುಮಾರು 2-3 ಸೆ.ಮೀ. ದಪ್ಪ ಅಂಡಾಕಾರ. ಗೆಡ್ಡೆಯನ್ನು ಸುಟ್ಟು, ಒಣಗಿಸಿದಾಗ ಅದು ಕರ್ರಗೆ ಸುರಿಟಿಕೊಳ್ಳುತ್ತದೆ. ಜೊತೆಗೆ ಅದಕ್ಕೆ ವಿಶಿಷ್ಟವಾದ ಹೊಗೆ ವಾಸನೆ ಇರುತ್ತದೆ. ಗೆಡ್ಡೆಯನ್ನು ತೆಳುಬಿಲ್ಲೆಗಳಾಗಿ ಕೊಯ್ದು ಬಿಸಿಲಿನಲ್ಲಿ ಒಣಗಿಸುವುದೂ ಉಂಟು. ಇದನ್ನು ಪುಡಿ ಮಾಡಿ ಸುಮಾರು 1 ಗ್ರಾಮಿನಷ್ಟು ತೆಗೆದುಕೊಂಡರೆ ಅದು ಸಣ್ಣ ಕರುಳನ್ನು ಉದ್ರೇಕಿಸಿ ಅದರ ಚಲನ ಹಾಗೂ ಸ್ರಾವವನ್ನು ಹೆಚ್ಚಿಸಿ 3-4ಗಂಟೆಗಳಲ್ಲಿ ಅತಿ ನೀರಾದ ಭೇಧಿ ಮಾಡಿಸುತ್ತದೆ. ಶೋಭೆ (ಡ್ರಾಪ್ಸಿ), ಬ್ರೈಟನ ರೋಗದಲ್ಲಿ ಉಂಟಾಗುವ ಯುರೀಮಿಯ ಮುಂತಾದ ರೋಗಸ್ಥಿತಿಗಳಲ್ಲಿ ದೇಹದಲ್ಲಿ ಅಧಿಕವಾಗಿ ಸಂಚಯವಾಗಿರುವ ನೀರನ್ನು ಇದರ ಉಪಯೋಗದಿಂದ ಶೀಘ್ರವಾಗಿ ವರ್ಜಿಸಬಹುದಾದ್ದರಿಂದ ಪಾಶ್ಚಾತ್ಯ ವೈದ್ಯರು ಜಾಲಪನ್ನು ಬಹುವಾಗಿ ಬಳಸಲು ಪ್ರಾರಂಭಿಸಿದರು.

ಕೃಷಿ[ಬದಲಾಯಿಸಿ]

ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಯೂರೋಪ್, ದಕ್ಷಿಣ ಅಮೆರಿಕ, ಜಮೈಕ, ಶ್ರೀಲಂಕಾ, ಭಾರತ ಮುಂತಾದ ಕಡೆ ಸಮುದ್ರ ಮಟ್ಟಕ್ಕಿಂತ 1500-1800 ಮೀಟರ್ ಎತ್ತರವಾಗಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ ಈ ಹಂಬನ್ನು ಕೃಷಿ ಮಾಡುವಂತಾಯಿತು. ನೀಲಗಿರಿಯಲ್ಲಿ ಹಂಬಿನ ತುಕ್ಕಡವನ್ನು ಹುಟ್ಟಿಹಾಕಿ, ಕೋಲಿನ ಹಂಬನ್ನು ಹಬ್ಬಿಸಿ 3 ವರ್ಷಗಳ ಅನಂತರ ಸುಮಾರು 8-9 ಪೌಂಡು ತೂಕದ ಗೊಂಚಲು ಗೆಡ್ಡೆಗಳ ಫಸಲನ್ನು ಪಡೆಯಲಾಗಿದೆ.

ವೈದ್ಯಕೀಯ ಬಳಕೆಯಲ್ಲಿ[ಬದಲಾಯಿಸಿ]

ಗೆಡ್ಡೆಯಲ್ಲಿರುವ ಒಂದು ರೀತಿಯ ರಾಳಪದಾರ್ಥ ವಿರೇಚನಕಾರಿ ಎಂದು ತಿಳಿದಿದೆ. ಈ ರಾಳದಿಂದ ಜಾಲವಿನ್ ಮತ್ತು ಕನ್‍ವಾಲ್‍ವ್ಯುಲಿನ್ ಎಂದು ಗ್ಲೂಕೋಸೈಡುಗಳನ್ನು ಪ್ರತ್ಯೇಕಿಸಲಾಗಿದೆ. ರಾಳಯುಕ್ತ ವಿರೇಚನಕಾರಿಗಳಲ್ಲೆಲ್ಲ (ಸ್ಕಾಮೋನಿ ಇತ್ಯಾದಿ) ಜಾಲಪ್ ಅತ್ಯಂತ ಸೌಮ್ಯಸ್ವಭಾವದ್ದಾದರೂ ವಾಕರಿಕೆ ವಮನ, ಹೊಟ್ಟೆ ನುಲಿಯುವುದು ಮುಂತಾದ ಹಿಂಸೆಗಳಾಗುವುದು ಅಪರೂಪವಲ್ಲ. ಉಗ್ರ ಉದ್ರೇಕದಿಂದ ಸಣ್ಣ ಕರುಳಿನಲ್ಲಿ ಹುಣ್ಣುಗಳೂ ಆಗಬಹುದು. ಆದ್ದರಿಂದ ಕ್ಷೇಮಕರವಾಗಿರುವ ವಿರೇಚಕಗಳು, ದೇಹದ ಜಲಾಂಶವನ್ನು ಕಡಿಮೆ ಮಾಡುವ ವಿಧಾನಗಳು ಹಾಗೂ ವಸ್ತುಗಳು ಇವುಗಳ ಜ್ಞಾನ ಹೆಚ್ಚಿದಂತೆ ಜಾಲಪಿನ ಬಳಕೆ ಕಡಿಮೆಯಾಗುತ್ತ ಈಚೆಗೆ ನಿಂತುಹೋಗಿದೆ. ಆಯುರ್ವೇದದಲ್ಲಿ ಜಾಲಪಿನ ಬಳಕೆ ಇಲ್ಲ. ಆದರೆ ಅದೇ ಜಾತಿಗೆ ಸೇರಿದ ತಿಗಡೆ ಬೇರು ವಿರೇಚನಕಾರಿಯಾಗಿ ಉಪಯೋಗದಲ್ಲಿದೆ.


Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಾಲಪ್&oldid=1065725" ಇಂದ ಪಡೆಯಲ್ಪಟ್ಟಿದೆ