ವಿಷಯಕ್ಕೆ ಹೋಗು

ಜಾರ್ಜಿ ಕಾನ್ಸ್ಟಾಂಟಿನೊವಿಚ್ ಝೂಕಾಫ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾರ್ಜಿ ಕಾನ್ಸ್ಟಾಂಟಿನೊವಿಚ್ ಝೂಕಾಫ್ - (1896-1974). ರಷ್ಯದ ಮಾರ್ಷಲ್ ಮತ್ತು ಚತುರ ರಾಜ್ಯಾಡಳಿತದಾರ,

ಬದುಕು

[ಬದಲಾಯಿಸಿ]

ಮಾಸ್ಕೋ ಬಳಿ ಒಬ್ಬ ರೈತನ ಮಗನಾಗಿ ಜನನ. ಒಂದನೆಯ ಮಹಾಯುದ್ಧದಲ್ಲಿ ಝಾರನ ಸೇನೆಗೆ ಸಾಮಾನ್ಯ ಸೈನಿಕನಾಗಿ ನಿರ್ಬಂಧದಿಂದ ಸೇರಿದ (1915). ಸಾರ್ಜೆಂಟ್ ಆಗಿ ಎರಡು ಸಾರಿ ಸೇಂಟ್ ಜಾರ್ಜ್ ಕ್ರಾಸ್ ಪದಕವನ್ನು ಗಳಿಸಿದ. ಕ್ರಾಂತಿಕಾರದ ಪಂಗಡದ ಕೆಂಪು ಸೈನ್ಯವನ್ನು ಸೇರಿ ರಷ್ಯದ ಅಂತರ್ಯುದ್ಧದಲ್ಲಿ ಅಶ್ವಸೈನ್ಯದ ಅಧಿಪತಿಯಾದದ್ದು 1918ರಲ್ಲಿ. ಈ ಯುದ್ಧ ಮುಗಿದ ಮೇಲೆ ಫ್ರನ್ಜ್ ಸೈನಿಕ ಅಕಾಡೆಮಿಯಲ್ಲಿ ಶಿಕ್ಷಣ ಪಡೆದು, ಅನಂತರ ಜರ್ಮನಿಯಲ್ಲಿ ಸಮರವಿಜ್ಞಾನದಲ್ಲಿ ತರಬೇತಾದ. ಮುಂದೆ ಕುದುರೆ ದಂಡಿನಲ್ಲಿ ರೆಜಿಮೆಂಟ್, ಡಿವಿಜನ್, ಕೋರ್‍ಗಳಲ್ಲಿ ಅಧಿಪತಿಯಾಗಿದ್ದೂ ಉಂಟು. ಮಂಗೋಲಿಯ-ಮಂಚೂರಿಯ ಗಡಿಯಲ್ಲಿ ನಡೆದ ಸೋವಿಯತ್-ಜಪಾನೀ ಹೋರಾಟದಲ್ಲಿ (1929) ಯುದ್ಧಾಯುಧ ಪ್ರಯೋಗದಲ್ಲಿ ಪ್ರವೀಣನೆಂದು ಈತನನ್ನು ಪರಿಗಣಿಸಲಾಯಿತು. ಸೋವಿಯೆತ್ ಸೇನೆಯನ್ನು ಪುನವ್ರ್ಯವಸ್ಥಾಪಿಸಿ ಆಮೂಲಾಗ್ರ ಸುಧಾರಣೆಗಳಿಂದ ಬಹಳ ಅಭಿವೃದ್ಧಿಗೊಳಿಸಿದೆ.

1939-40 ರಷ್ಯ-ಫಿನ್‍ಲೆಂಡ್ ಯುದ್ಧದಲ್ಲಿ ಝೂಕಾಫ್ ಸೈನಿಕಾಡಳಿತ ವರ್ಗದಲ್ಲಿ ಪ್ರಧಾನಾಧಿಕಾರಿಯಾಗಿ, ಬಹು ಚತುರ ಸೇನಾಧಿಪತಿಯೆಂದು ಪ್ರಖ್ಯಾತನಾಗಿ, ಜನರಲ್ ಆದ. ಚೀಫ್ ಆಫ್ ಸ್ಟಾಫ್, ವೈಸ್-ಕಮಿಸಾರ್ ಮತ್ತು ಪೋಲಿಬ್ಯೂರೋವಿನ ಸದಸ್ಯನಾದ, ಜರ್ಮನರು ರಷ್ಯವನ್ನು ಮುತ್ತಿದಾಗ ಜೂನ್ 1941ರಲ್ಲಿ ಸೋವಿಯೆತ್ ಹೈ ಕಮಾಂಡಿನ ಪ್ರತಿನಿಧಿಯಾಗಿ ಮಾಸ್ಕೋವಿನ ರಕ್ಷಣೆಗಾಗಿ ಕಾದಾಡಿ ಅನಂತರ ಲೆನಿನ್‍ಗ್ರಾಡ್‍ನ ರಕ್ಷಣೆಯನ್ನೂ ಈತ ನಿರ್ವಹಿಸಿದ್ದುಂಟು. 1941ರ ಅಕ್ಟೋಬರಿನಲ್ಲಿ ಮಾಸ್ಕೋ ಸೈನ್ಯದ ಅಧಿಪತಿಯಾಗಿ, ಮಾಸ್ಕೋವನ್ನು ಆಕ್ರಮಿಸಲು ಮುನ್ನುಗ್ಗುತ್ತಿದ್ದ ಜರ್ಮನ್ ಸೈನ್ಯವನ್ನು ತಡೆಗಟ್ಟಿ ಹಿಂದಟ್ಟಿದ. ಸ್ಟಾಲಿನ್‍ನ ಪ್ರಧಾನ ಕೇಂದ್ರ ಕಾರ್ಯಸ್ಥಾನದಲ್ಲಿ ಶ್ರೇಷ್ಠದರ್ಜೆಯ ಸದಸ್ಯನಾಗಿ ಯುದ್ಧದ ಪ್ರತಿಯೊಂದು ಮುಖ್ಯ ಯೋಜನೆಯಲ್ಲಿಯೂ ಈತ ವಹಿಸಿದ್ದ ಪಾತ್ರ ಪ್ರಮುಖವಾದದ್ದು. ಯುದ್ಧ ಇಲಾಖೆಯಲ್ಲಿ ಈತ ಕಾರ್ಯತಃ ಸರ್ವಾಧಿಕಾರಿಯಾಗಿದ್ದ. 1942ರಲ್ಲಿ ಸ್ಟಾಲಿನ್‍ಗ್ರಾಡನ್ನು ಜರ್ಮನ್ ದಾಳಿಯಿಂದ ಮುಕ್ತಗೊಳಿಸಿ, ಅನಂತರ ಲೆನಿನ್‍ಗ್ರಾಡನ್ನೂ ರಕ್ಷಿಸಿದ. ಅದಕ್ಕಾಗಿ ಇವನನ್ನು ಮಾರ್ಷಲ್ ದರ್ಜೆಗೆ ಏರಿಸಲಾಯಿತು. ಡೆಪ್ಯುಟೀ ಕಮಾಂಡರ್-ಇನ್-ಚೀಫ್ ಆಗಿ ಉಕ್ರೇನಿನಲ್ಲಿ ಯುದ್ಧಸನ್ನಾಹಗಳನ್ನು ನಿರ್ವಹಿಸಿದ. 1944-45ರಲ್ಲಿ ಸೇನಾಧಿಪತಿಯಾಗಿ ಬರ್ಲಿನ್ನನ್ನು ದಾಳಿ ಮಾಡಿದ ಬಳಿಕ ಅದು ವಶವಾಯಿತು. ಯುದ್ಧ ಮುಗಿದ ತರುವಾಯ ಜರ್ಮನಿಯಲ್ಲಿದ್ದ ಸೋವಿಯೆತ್ ಸೇನೆಗಳ ದಂಡನಾಯಕನಾಗಿ ನಿಂತು ಶರಣಾಗತ ವಿನಂತಿಯನ್ನು ಸ್ವೀಕರಿಸಿದ. ನಾಲ್ಕು ಮಿತ್ರರಾಷ್ಟ್ರಗಳ ನಿಯೋಜಿತ ಜರ್ಮನರ ಮಂಡಲಿಯಲ್ಲಿ ಈತನಿಗೆ ಸೋವಿಯೆತ್ ಒಕ್ಕೂಟದ ಪ್ರಾತಿನಿಧ್ಯ ಇತ್ತು.

1946ರಲ್ಲಿ ಝೂಕಾಫ್ ರಕ್ಷಣಾ ಶಾಖೆಯ ಡೆಪ್ಯುಟೀ ಸಚಿವ ಮತ್ತು ಭೂಸೇನೆಗಳ ಸರ್ವೋಚ್ಛ ಅಧಿಪತಿಯಾಗಿ ನೇಮಿಸಲ್ಪಟ್ಟು ಮಾಸ್ಕೋಗೆ ಹಿಂದಿರುಗಿದ. ಇವನ ಅಪಾರ ಯಶಸ್ಸು ಮತ್ತು ಪ್ರಜಾನುರಾಗಕ್ಕೆ ಹೆದರಿದ ಸ್ಟಾಲಿನ್ ಅಸೂಯೆಯಿಂದ ಇವನನ್ನು ಎಲ್ಲ ದೊಡ್ಡ ಹುದ್ದೆಗಳಿಂದಲೂ ನಿವೃತ್ತಿ ಮಾಡಿ ಸಣ್ಣ ಉದ್ಯೋಗಿಗಳಿಗೆ ಒಡೆಸ್ಸಾ, ಯೂರಲ್ ಪರ್ವತಗಳಿಗೆ ಕಳುಹಿಸಿದ. 1953ರಲ್ಲಿ ಸ್ಟಾಲಿನ್ ಸತ್ತ ಬಳಿಕ ಝೂಕಾಫ್‍ನನ್ನು ಪ್ರಥಮ ದರ್ಜೆಯ ಡೆಪ್ಯುಟಿ ಸಚಿವನನ್ನಾಗಿ ನೇಮಿಸಲಾಯಿತು. ಝೂಕಾಫ್ 1955ರಲ್ಲಿ ನಿಕಿತ ಕ್ರುಶ್ಚೇವ್‍ಗೆ ಅವನ ಪ್ರತಿಸ್ಪರ್ಧಿ ಮೋಲೆಂಕೋವ್‍ಗೆ ತಪ್ಪಿಸಿ ರಾಜಕೀಯ ಏಳ್ಗೆಗೆ ಸಹಾಯ ಮಾಡಿದ್ದರಿಂದ ಇವನನ್ನು ರಕ್ಷಣಾಮಂತ್ರಿಯನ್ನಾಗಿ ಮಾಡಲಾಯಿತು. ಇವನು ಗುಪ್ತ ಪೋಲಿಸ್ ಇಲಾಖೆಯ ಮುಖಂಡ ಬೆರಿಯಾನನ್ನು ಬಂಧಿಸಿ ತೊಲಗಿಸಿದ್ದರಿಂದ ಸೇನಾ ಇಲಾಖೆ ಪ್ರಾಬಲ್ಯಕ್ಕೆ ಬಂತು. 1957ರಲ್ಲಿ ಕ್ರುಶ್ಚೇವ್‍ನನ್ನು ಪ್ರತಿಭಟಿಸಿದ ಕೆಲವರನ್ನು ಝೂಕಾಫ್ ಕುಗ್ಗಿಸಿದ್ದರಿಂದ ಇವನಿಗೆ ಕಮ್ಯೂನಿಸ್ಟ್ ಕೇಂದ್ರ ಸಮಿತಿಯ ಪ್ರೆಸಿಡಿಯಮ್ ಮಂಡಲಿಯಲ್ಲಿ ಪೂರ್ಣ ಸದಸ್ಯತ್ವ ದೊರೆಯಿತು. ಓರ್ವ ಸೇನಾಧಿಕಾರಿ ಈ ಅತ್ಯುನ್ನತ ಪ್ರಾಧಾನ್ಯವನ್ನು ಪಡೆದದ್ದು ಇದೇ ಮೊದಲ ಸಾರಿ. ಸ್ವತಃ ಕ್ರುಶ್ಚೇವ್ ಕೂಡ ಝೂಕಾಫನ ಪ್ರಭಾವಕ್ಕೆ ಅಸೂಯೆಪಟ್ಟು ನಾಲ್ಕು ತಿಂಗಳುಗಳಲ್ಲಿ ಅವನನ್ನು ಎಲ್ಲ ಹುದ್ದೆಗಳಿಂದಲೂ ತೆಗೆದು ಹಾಕಿದ್ದುಂಟು. ಕ್ರುಶ್ಚೇವ್ 1964ರಲ್ಲಿ ಸ್ಥಾನಭ್ರಷ್ಟನಾದ ಬಳಿಕ ಝೂಕಾಫ್‍ಗೆ ಸಾರ್ವಜನಿಕ ಜೀವನಕ್ಕೆ ಹಿಂತಿರುಗಿ ಬರಲು ಅನುಮತಿ ದೊರೆಯಿತು. ಸೈನಿಕ ಸಮಾರಂಭಗಳಲ್ಲಿ ಇವನು ಹಾಜರಿರುತ್ತಿದ್ದ. ಅವನ ಕೆಲವು ಪ್ರೌಢ ಪ್ರಬಂಧಗಳು ಸರ್ಕಾರಿ ಮ್ಯಾಗಜಿûೀನುಗಳಲ್ಲಿ ಪ್ರಕಟವಾದವು. ಆರ್ಡರ್ ಆಫ್ ಮೆರಿಟ್ ಎಂಬ ಸರ್ವೋತ್ಕøಷ್ಟ ಪ್ರಶಸ್ತಿಯನ್ನು 1971ರಲ್ಲಿ ಇವನಿಗೆ ಆರನೇ ಸಾರಿ ನೀಡಲಾಯಿತು.