ಜಾನ್ ಜಾರ್ಜ್ ಲ್ಯಾಮ್ಟನ್ ಡಹರ್ಯ್‌ಮ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
John George Lambton, 1st Earl of Durham by Thomas Phillips.jpg

ಜಾನ್ ಜಾರ್ಜ್ ಲ್ಯಾಮ್ಟನ್ ಡಹರ್ಯ್‌ಮ್ (1792-1840). ಇಂಗ್ಲಿಷ್ ರಾಜಕಾರಣಿ; ಡಹ್ರ್ಯಮ್‍ನ ಅರ್ಲ್.

ಬದುಕು[ಬದಲಾಯಿಸಿ]

1792ರ ಏಪ್ರಿಲ್ 12ರಂದು ಲಂಡನಿನಲ್ಲಿ ಜನಿಸಿದ. ಡಹ್ರ್ಯಮಿನ ಲ್ಯಾಮ್ಟನ್ ದುರ್ಗದ ವಿಲಿಯಮ್ ಹೆನ್ರಿ ಲ್ಯಾಮ್ಟನನ ಹಿರಿಯ ಮಗ. ಅವನಿಗೆ ಐದು ವರ್ಷ ತುಂಬುವದರೊಳಗಾಗಿ ತಂದೆಯ ಭಾರಿ ಸ್ವತ್ತಿಗೆ ಉತ್ತರಾಧಿಕಾರಿಯಾದ. 1805ರಲ್ಲಿ ಈಟನ್‍ಗೆ ಪ್ರಯಾಣಮಾಡಿ 1809ರಲ್ಲಿ ಸೈನಿಕನಾಗಿ ಹತ್ತನೆಯ ಡ್ರಾಗೂನ್ಸ್ ದಳದಲ್ಲಿ ಕಮಿಶನ್ಡ್ ಅಧಿಕಾರಿಯಾದ. ಪ್ರಾಪ್ತವಯಸ್ಸಿಗೆ ಬರುವ ಮುನ್ನವೇ ಲಾರ್ಡನೊಬ್ಬನ ಜಾರಜ ಪುತ್ರಿಯೊಂದಿಗೆ ಓಡಿಹೋಗಿ ಆಕೆಯನ್ನು ಮದುವೆಯಾದ (1812). ಮೂರು ವರ್ಷಗಳ ಅನಂತರ ಆಕೆ ಮೃತಳಾದಳು. ಮರುವರ್ಷ ಇನ್ನೊಬ್ಬ ಲಾರ್ಡನ ಪುತ್ರಿಯನ್ನು ವಿವಾಹವಾದ.

1813ರಲ್ಲಿ ಡಹ್ರ್ಯಮ್ ಕ್ಷೇತ್ರದಿಂದ ಕಾಮನ್ಸ್ ಸಭೆಗೆ ಹ್ವಿಗ್ ಪರವಾಗಿ ಚುನಾಯಿತನಾದ. ಡಹ್ರ್ಯಮ್ ಪಾರ್ಲಿಮೆಂಟಿನಲ್ಲಿ ಮೊದಲನೆಯ ಪ್ರಮುಖ ಭಾಷಣ ಮಾಡಿದ್ದು 1821ರಲ್ಲಿ. ಪಾರ್ಲಿಮೆಂಟ್ ಸುಧಾರಣೆಗಳನ್ನು ಕುರಿತು ಮಾಡಿದ ಭಾಷಣ ಅದು. 1830ರಲ್ಲಿ ಇವನಿಗೆ ಗ್ರೇಯ ಸಂಪುಟದಲ್ಲಿ ಲಾರ್ಡ್ ಪ್ರಿವಿ ಸೀಲ್ ಸ್ಥಾನ ಲಭ್ಯವಾಯಿತು. ಪಾರ್ಲಿಮೆಂಟಿನ ಸುಧಾರಣೆಗೆ ವಿಧೇಯಕವೊಂದನ್ನು ಈತ ರಚಿಸಿದ. ಅದು ಹಲವು ತೊಡಕುಗಳ ಅನಂತರ ಅನುಮೋದನೆ ಪಡೆಯಿತು.

1832ರಲ್ಲಿ ಕ್ಲಿಷ್ಟಕರವಾದ ರಾಜನೈತಿಕ ಸಂಧಾನಕ್ಕಾಗಿ ಇವನನ್ನು ರಷ್ಯಕ್ಕೆ ಕಳಿಸಲಾಯಿತು. ಸರ್ಕಾರದ ಐರಿಷ್ ನೀತಿಯ ಬಗ್ಗೆ ಭಿನ್ನಾಭಿಪ್ರಯದಿಂದಾಗಿ ಮರುವರ್ಷ ಇವನು ಅಧಿಕಾರಕ್ಕೆ ರಾಜೀನಾಮೆ ನೀಡಿದ. ಪ್ರಗತಿ ದೃಷ್ಟಿಯ ಬಿಚ್ಚು ಮಾತಿನ ಡಹ್ರ್ಯಮನಿಗೆ ಮೆಲ್‍ಬರ್ನನ ಸಂಪುಟದಲ್ಲಿ ಸ್ಥಾನದ ದೊರಕಲಿಲ್ಲವಾದರೂ ಅವನು ಜನಪ್ರಿಯನಾಗಿದ್ದ. ಡಹ್ರ್ಯಮ್ 1838ರಲ್ಲಿ ಕೆನಡದ ಗವರ್ನರ್ ಜನರಲ್ ಮತ್ತು ಹೈ ಕಮಿಷನರ್ ಆಗಿ ನೇಮಕಗೊಂಡ. ಆದರೆ ಇವನ ನೀತಿ ಬ್ರಿಟಿಷ್ ಸರ್ಕಾರಕ್ಕೆ ಹಿಡಿಸಲಿಲ್ಲ. ಕೆನಡದಲ್ಲಿ ದಂಗೆ ಎದ್ದಿದ್ದವರಿಗೆ ಕ್ಷಮಾದಾನ ನೀಡುವುದಕ್ಕೆ ಬ್ರಿಟನ್ ಒಪ್ಪಲಿಲ್ಲ. ಇವನು ರಾಜೀನಾಮೆ ನೀಡಿದ. ಆಗ ಇವನು ಬ್ರಿಟಿಷ್ ಉತ್ತರ ಅಮೆರಿಕದ ವಿದ್ಯಮಾನಗಳ ಬಗ್ಗೆ ನೀಡಿದ ವರದಿ ಡಹ್ರ್ಯಮ್ ವರದಿಯೆಂದು ಪ್ರಸಿದ್ಧವಾಗಿದೆ. ಬ್ರಿಟಿಷ್ ವಸಾಹತು ನೀತಿಯ ಮೇಲೆ ಪ್ರಭಾವ ಬೀರಿದ ಒಂದು ಪ್ರಸಿದ್ಧ ಪತ್ರ ಅದು. ಅನಂತರ ಇವನು ವೇಕ್‍ಫೀಲ್ಡಿನ ನ್ಯೂ ಜೀಲಂಡ್ ಕಂಪನಿಯ ಗವರ್ನರ್ ಆಗಿದ್ದ. ಡಹ್ರ್ಯಮ್ 1840ರ ಜುಲೈ 28ರಂದು ತೀರಿಕೊಂಡ. 1833ರಲ್ಲಿ ಇವನು ಡಹ್ರ್ಯಮ್‍ನ ಅರ್ಲ್ ಮತ್ತು ವಿಸ್ಕೌಂಟ್ ಲ್ಯಾಮ್ಟನ್ ಅಂತಸ್ತು ಪಡೆದಿದ್ದ.